ಬಿ.ಎಸ್.ವಿನಯ್
ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ ‘ಯಾವ್ ಕಾರ್ಯಕ್ರಮ ಸಾ?’ ತಿರುಗಿ ಪ್ರಶ್ನಿಸಿದರು. ‘ಸಂವಿಧಾನ ದಿನಾಚರಣೆ’ ಎಂದು ಉತ್ತರಿಸಿದೆ. ‘ಸಮ್ಮಿದಾನ ಏನೇಳಿದು?!.. ಕಾನೂನು ಎಲ್ಲ್ರೂಗೂ ಒಂದೇ.. ಎಲ್ಲರೂ ಸಮ.. ಮೇಲಿಲ್ಲ .. ಕೀಳಿಲ್ಲ.. ಅಂತ ತಾನೇ ?!’ ಎಂದರು.
‘ಹೌದು’ ಎಂದು ತಲೆ ಆಡಿಸಿದೆ. ‘ಇದ್ನ ನಮ್ಮೂರಲ್ಲಿ ನೂರಾರ್ ವರ್ಷದ ಯಿಂದೆನೇ ಏಳ್ಬುಟ್ಟೋರೆ’ ಅಂದರು. ಕೈ ಹಿಡಿದು ಬಳೆಮಂಟಪದ ಸ್ವಲ್ಪ ಎಡಕ್ಕೆ ಕರೆದುಕೊಂಡು ಹೋದರು. ಒಂದು ಚಿಕ್ಕ ಕಲ್ಲಿನ ಮಂಟಪ. ಮೂರು ದಿಕ್ಕುಗಳಲ್ಲಿ ಗೋಡೆಗಳಿಂದ ಆವೃತ್ತವಾಗಿದೆ. ಉತ್ತರ ದಿಕ್ಕಿನಲ್ಲಿ ಸಂಪೂರ್ಣ ತೆರೆದುಕೊಂಡಿದೆ. ಮಂಟಪದ ಮೇಲೆ ಕುಳಿತಿರುವ ಭಂಗಿಯಲ್ಲಿ ನಂದಿಯ ದೊಡ್ಡ ವಿಗ್ರಹ ವಿವಿಧ ಬಣ್ಣಗಳಿಂದ ಅಲಂಕೃತಗೊಂಡು ಸುಂದರವಾಗಿದೆ. ಮಂಟಪದ ಒಳಗೆ ಒಂದು ಬೃಹತ್ ಶಿಲಾಶಾಸನವಿದೆ. ಶಾಸನದ ಎರಡೂ ಕಡೆಗಳಲ್ಲಿ ಸುಂದರ ಕೆತ್ತನೆಗಳಿಂದ ಕೂಡಿದ ಪಟ್ಟಿಗಳಿವೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರು.
ನಡುವೆ ವೃಷಭಾರೂಢ ಶಿವನ ಉಬ್ಬು ಶಿಲ್ಪ. ಮೇಲ್ಭಾಗದಲ್ಲಿ ಗೋಪುರದಂತಹ ಕೆತ್ತನೆಯೂ ತುದಿಯಲ್ಲಿ ಮೂರು ಕಳಸಗಳೂ ಇದ್ದು ಮನೋಹರವಾಗಿದೆ. ಅದರ ಪಕ್ಕದಲ್ಲೇ ಗೋಡೆಗೆ ಒರಗಿಸಿದಂತೆ ಪಶ್ಚಿಮಾಭಿಮುಖವಾಗಿರುವ ಶಿಲಾಶಾಸನ. ಸಾಧಾರಣ ಚೌಕಟ್ಟು ಹಾಗೂ ಸಿಂಹ ಮುಖದ ಅಲಂಕಾರ ಇರುವ ಶಾಸನ ಅತ್ಯಂತ ಸರಳವಾಗಿದ್ದು ಚಿಕ್ಕದಾಗಿದೆ. ‘ನೋಡಿ, ಇದೇ ನಮ್ಮೂರಿನ ಆ ಕಾಲದ ಸಮ್ಮಿಧಾನ’ ಎಂದರು. ‘ಶಾಸನ ತೋರಿಸಿ ಸಂವಿಧಾನ ಅಂತೀರಲ್ಲ’ ಕೇಳಿದೆ. ‘ಆ ಸ್ಟೋರಿ ಕೇಳಿದರೆ ನೀವು ಏನಂತೀರೋ’ ಎಂದವರು ಹೇಳತೊಡಗಿದರು
‘ಸುಮಾರು ವರ್ಸಗಳ ಇಂದೆ ರಾಜರ ಕಾಲದಲ್ಲಿ ಇದು ದೊಡ್ಡ ಊರು. ಆ ಕಾಲ್ದಲ್ಲಿ ಇಂತಿಂತ ಜಾತಿಗೆಇಂತಿಂತ ಕೆಲಸ ಅಂತ ಮಾಡಿಕೊಂಡಿದ್ದರು. ಕಾಲು ಗುರು, ಮೇಲುಕಟ್ಟು ಅಂತ ಎರಡು ಸೇವೆ ಇರ್ತಿತ್ತು. ಮದುವೆ ಟೈಮಲ್ಲಿ ಇರ್ತಾ ಇದ್ದ ಕೆಲಸ. ಅಂದರೆ ಮದುವೆಯಾಗುವ ಗಂಡಿಗೆ ಮದುವೆ ಟೇಮಲ್ಲಿ ಕಾಲಿನ ಉಗುರುಗಳನ್ನ ತೆಗೆದು ನೀಟ್ ಮಾಡೋದು… ಮೇಲ್ಕಟ್ಟು ಅಂದ್ರೆ ಮದುವೆ ಮೆರವಣಿಗೆಬಂದಾಗ ಗಂಡಿನ ಮೇಲೆ ಚಪ್ಪರ ಇಡಿಯುವುದು. ಈ ಎರಡು ಕೆಲಸನ ಒಂದೊಂದು ಜಾತಿಯವರು ಮಾಡ್ತಾ ಇದ್ರು.
ಒಂದು ದಿನ ‘ಬನ್ನಿ, ನಮ್ ಮದುವೆಗೂ ಈ ಕೆಲಸ ಮಾಡಿಕೊಡಿ’ ಅಂತ ಕರ್ದಾಗ ಆ ಕೆಲಸ ಮಾಡ್ತಾ ಇದ್ದವರು ‘ಇಲ್ಲ ಆಗಲ್ಲ’ ಅಂದ್ಬಿಟ್ರು. ‘ಯಾಕ‘ ಅಂತ ಕೇಳ್ದಾಗ ‘ನಿಮ್ಗೆ ಈ ಹಕ್ಕಿಲ್ಲ’ ಅಂದ್ಬಿಟ್ರು.
ಇವರು ಉಂಟು ಅಂತ… ಅವರು ಇಲ್ಲ ಅಂತ. ಮಾತುಗ್ ಮಾತು; ಸೇರಿಗ್ ಸವ್ವಾ ಸೇರು. ಹತ್ತುದ್ ಜಗಳ ಹರಿನಿಲ್ಲ. ಆಗ ಇದನ್ನ ಹೆಂಗೆ ಪೈಯ್ಸಲ್ ಮಾಡದು ಅಂತ ಎಲ್ರೂ ಯೋಚನೆ ಮಾಡುದ್ರು. ಅಂದಿನ ದಿನಗಳಲ್ಲಿ ದಿವ್ಯ ಅಂತ ಒಂದು ಸಿಸ್ಟಮ್ ಇತ್ತು. ಚಾಮರಾಜನಗರದ ಹತ್ರ ಹರದನಳ್ಳಿ ಅನ್ನೋ ಊರಲ್ಲಿ ದಿವ್ಯಲಿಂಗೇಶ್ವರ ಅಂತ ಒಂದು ದೇವರಿದೆ. ಇಂತಾ ನ್ಯಾಯಗಳಿಗೆ ಆ ದೇವರು ಭಾಳ ಪೇಮಸ್ಸು. ಈ ತರವಾದ ವಿವಾದ ಮಾಡ್ಕೊಂಡವರು ಆ ದೇವಸ್ಥಾನಕ್ಕೆ ಹೋಗಿ ದಿವ್ಯಲಿಂಗೇಶ್ವರನ ಮುಂದೆ ನಿಂತ್ಕಂಡು ಕಾದಿರೋ ತುಪ್ಪದಲ್ಲಿ ಕೈ ಅದ್ದಿ ಹೇಳಬೇಕಾದ್ದೆಲ್ಲ ಹೇಳಿ, ನಾ ಹೇಳಿದ್ದು ಸತ್ಯ ಅಂತ ಸಾರ್ಬೇಕು. ಆ ಥರ್ವಾಗಿ ಕಾದಿರೋ ಬಿಸಿ ಬಿಸಿ ತುಪ್ಪದಲ್ಲಿ ಕೈ ಅದ್ದಿ ಹೇಳ್ಬಿಟ್ರೆ ಅವ್ರ್ ಮಾತೇ ಸತ್ಯ! ಅವರೆಳಿದ್ದೇ ಸರಿ ಅಂತ ಎದುರು ಪಾರ್ಟಿಯವರು ಒಪ್ಕೋಬೇಕು. ಇದ್ನ ದಿವ್ಯ ಅಂತ ಕರೀತಾರೆ.
ಹರದನಹಳ್ಳಿ ದೇವಸ್ಥಾನದಲ್ಲಿ ಈ ನ್ಯಾಯ ಅಂದ್ರೆ ದಿವ್ಯ ನಡಿತಾ ಇದ್ದಿದ್ರಿಂದ ಅಲ್ಲಿನ ದೇವರಿಗೆ ದಿವ್ಯಲಿಂಗೇಶ್ವರ ಅಂತಲೇ ಹೆಸರಾಗಿತ್ತು. ಕಾಲುಗುರು, ಮೇಲ್ಕಟ್ಟು ವಿಷಯಕ್ಕೆ ಜಗಳ ಹತ್ಕೊಂಡಾಗ ಆ ಕೆಲಸ ಮಾಡಿ ಬನ್ನಿ ಅಂತ ಕರೆದವರು ಹರದನಹಳ್ಳಿಗೆ ಹೋದರು. ಅಲ್ಲಿ ದಿವ್ಯಲಿಂಗೇ ಶ್ವರನ ಮುಂದೆ ನಿಂತುಕೊಂಡು ಕಾದ ತುಪ್ಪದಲ್ಲಿ ಕೈಯ್ಯದ್ದಿ ನಾವು ಹೇಳೋದು ಸತ್ಯ; ನಾವೂ ಕಾಲು ಗುರು ಮೇಲ್ಕಟ್ಟೆಗೆ ಹಕ್ಕುದಾರ್ರು ಅಂತ ಸಾರುದ್ರು. ಇನ್ನೇನ್ ಮಾಡಕ್ಕಾದದು…?! ಆಗ ಅವರ ಮಾತ್ನ ಎಲ್ಲಾರೂ ಒಪ್ಕಂಡ್ರು. ನಾಳ ದಿನ ಪುನಾ ಈ ತರ ಕೇಸ್ ಬರಬಾರದು ಅಂತ ಹೇಳಿ ಇದ್ನ ಕಲ್ಲಲ್ಲಿ ಕೆತ್ತಿ ಸೂರ್ಯ ಚಂದ್ರ ಇರೋವರ್ಗು ಇದು ನಡಿಬೇಕು ಅಂತೇಳಿ ಸಾಸ್ನ ಬರ್ಸಿ ನಿಲ್ಲಿಸುದ್ರು. ಅದೇ ಈ ಸಾಸನ’ ಇಷ್ಟು ಹೇಳಿದ ಹಿರಿಯರು ‘ಈಗ ಯೋಳಿ… ಕಾಯ್ದೆ ಕಾನೂನು ಎಲ್ಲರಿಗೂ ಒಂದೇ. ಇದೇ ತಾನೇ ಸಮ್ಮಿಧಾನ’ ಎಂದು ಮುಗುಳ್ನಕ್ಕರು. ನಾನೂ ನಕ್ಕು ‘ಚೆನ್ನಾಗಿದೆ ಸ್ಟೋರಿ‘ ಎಂದು ಹೇಳಿ ಮನೆಗೆ ಬಂದೆ.
ಎಫಿಗ್ರಾಫಿಯಾ ಕರ್ನಾಟಕ ತೆರೆದು ನೋಡಿದರೆ, ನಾವು ನೋಡಿದ್ದು ಯಳಂದೂರಿನ ಎರಡನೇ ಕ್ರಮ ಸಂಖ್ಯೆಯ ಶಾಸನ. ೧೭ನೇ ಶತಮಾನದ ರಾಮರಾಜ ನಾಯಕರ ಕಾಲದ ಶಾಸನ ಅದು. ಹಿರಿಯರು ಹೇಳಿದ ಮಾತುಗಳೆಲ್ಲ ಅಕ್ಷರಶಃ ನಿಜವಾಗಿದ್ದು ಅದನ್ನು ಶಾಸನದಲ್ಲಿ ಕಂಡರಿಸಿದ್ದರು. ಅನ್ಸಮಾನ, ಚಾಮ, ಹೊನ್ನ, ಧೂಮ, ಚಂಡ ಎಂಬವರು ಅಂದಿನ ಆ ಘಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಗಳಾಗಿದ್ದರು. ನಿಘಂಟು ತೆಗೆದು ನೋಡಿದರೆ ದಿವ್ಯ ಎಂಬ ಪದಕ್ಕೆ ‘ಪಣ-ಪರೀಕ್ಷೆ’ ಇತ್ಯಾದಿ ಅರ್ಥವೂ ಇದೆ. ಇದನ್ನೆಲ್ಲ ಓದುತ್ತಿದ್ದಂತೆ ಆ ಘಟನೆಗಳೆಲ್ಲ ಕಣ್ಮುಂದೆ ನಡೆದಂತಾಯಿತು. ಆ ಹಿರಿಯರು ಹೇಳಿದ್ದು ಬರೀ ಕಥೆಯಲ್ಲ ಅಲ್ಲ ಇತಿಹಾಸ ಎಂದು ಅರಿವಾಯಿತು.
” ಯಳಂದೂರಿನ ಬಳೆಮಂಟಪದ ಎಡಕ್ಕೆ ಇರುವ ರಾಮರಾಜನಾಯಕರ ಕಾಲದ ಪುರಾತನ ಶಾಸನದ ಕುರಿತು”
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…