ಕಾಡುಗಳಿಗೆ ಪ್ರವಾಸ ಕೈಗೊಳ್ಳುವುದು, ಅಲ್ಲಿನ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವುದು, ಕಾಡಿನ ಸುತ್ತ ಹೆಣೆದುಕೊಂಡಿರುವ ಜನರ ಬದುಕು, ಕಾಡುಪ್ರಾಣಿಗಳೊಂದಿಗಿನ ಅವರ ಸಹಬಾಳ್ವೆ, ಸಂಘರ್ಷಗಳ ಜತಗೆ ದೇಶದ ವೈವಿಧ್ಯಮಯ ಕಾಡುಗಳ ಬಗ್ಗೆ ತಿಳಿಯುವ ಕುತೂಹಲ. ಈ ಕುತೂಹಲವೇ ನನ್ನಲ್ಲಿನ ಕಾಡುಗಳಲ್ಲಿ ಪ್ರವಾಸ ಕೈಗೊಳ್ಳುವ ಹವ್ಯಾಸಕ್ಕೆ ಕಾರಣವಾಗಿತ್ತು.
ಅಂತಹ ಕಾಡುಗಳಲ್ಲಿ ಪ್ರಿಯವಾದ ಕಾಡು ಎಂದರೆ ಅದು ಉಮ್ರೇಡ್, ಉಮ್ರೇಡ್ ಕರಾಂಡ್ಲ ಸಂರಕ್ಷಿತ ಅರಣ್ಯ ಪ್ರದೇಶ. ಇದು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿದೆ. ಕಾಡಿನ ವೈಶಿಷ್ಟ್ಯವೇ ವಿಭಿನ್ನವಾಗಿದ್ದರೆ, ಇಲ್ಲಿನ ಜನರ ಬದುಕು, ಹಂತಕರ (ಕಳ್ಳಬೇಟೆ) ದಬ್ಬಾಳಿಕೆಯ ನಡುವೆಯೂ ಬದುಕುಳಿದ ಪ್ರಾಣಿಗಳದ್ದು ಒಂದೊಂದು ವಿಶೇಷ ಕಥಾವಸ್ತು.
ಬಹಳಷ್ಟು ವನ್ಯಜೀವಿ ಪ್ರಿಯರಿಗೆ ಈ ಉಮ್ರೇಡ್ ಕರೆಂಡ್ಲ ಕಾಡು ಅಪರಿಚಿತ. ಯಾಕೆಂದರೆ ಪ್ರಸ್ತುತ ಇಲ್ಲಿ ನೆಲೆ ಕಂಡಿರುವ ಪ್ರಾಣಿಗಳ ಸಂಖ್ಯೆ ತೀರಾ ಕಡಿಮೆ. ಮಹಾರಾಷ್ಟ್ರದ ಪ್ರಮುಖ ಅರಣ್ಯ ಸಂಪತ್ತಾಗಿರುವ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಿಂದ ಸುಮಾರು 80-100 ಕಿ.ಮೀ. ದೂರದಲ್ಲಿ ಈ ಉಮ್ರೇಡ್ ಕರೆಂಡ್ಲಾ ಕಾಡು ‘ಇಂದಿರಾ ಸಾಗರ್’ ಎಂಬ ಬೃಹತ್ ಅಣೆಕಟ್ಟಿನ ಹಿನ್ನೀರಿನಲ್ಲಿ ಹರಡಿದೆ. ಹತ್ತಿರಹತ್ತಿರ ಇನ್ನೂರು ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ 2012ರ ವರೆಗೂ ಕತ್ತಲಿನಂತೆ ಆವರಿಸಿದ್ದ ಕಳ್ಳಬೇಟೆಯಿಂದಾಗಿ ಇಲ್ಲಿನ ಅಪಾರ ವನ್ಯಸಂಪತ್ತು ನಾಶವಾಗಿ ಕಾಡು ಬರಿದಾಗಿತ್ತು. ಅರಣ್ಯ ಇಲಾಖೆಯ ಒಂದಿಷ್ಟು ಸುಧಾರಣೆಯ ಕ್ರಮದಿಂದಾಗಿ ಇಂದು ಅಲ್ಲಲ್ಲಿ ಒಂದಿಷ್ಟು ಜೀವಿಗಳನ್ನು ಕಾಣಬಹುದಾಗಿದೆ. ಹುಲಿಗಳು ದಶಕದಿಂದೀಚೆಗೆ ನೆಲೆ ಕಂಡಿವೆ ಎಂಬುದು ಸಂತಸದ ವಿಚಾರ. ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾಗಬೇಕು ಎಂಬ ಬೇಡಿಕೆಯೂ ಅಲ್ಲಿ ಆಗಾಗ್ಗೆ ಕೇಳಿಬರುವುದುಂಟು.
ನಾನು ಉಮ್ರೇಡ್ ಕಾಡಿನ ಪ್ರವಾಸದಲ್ಲಿದ್ದಾಗ ಅಲ್ಲಿನ ಬಹಳಷ್ಟು ವಿಚಾರಗಳು ನನ್ನ ಗಮನ ಸೆಳೆದವು. ಅವುಗಳ ಕುರಿತು ಒಂದಿಷ್ಟು ಮಾಹಿತಿ ಕಲೆ ಹಾಕುವ ಆಸಕ್ತಿ ಮೂಡಿಸಿದವು. ಅದರಲ್ಲಿ ಅಲ್ಲಿನ ಜನರಿಗೆ ಕಲ್ಪಿಸಿರುವ ಪುನರ್ವಸತಿ ಒಂದಾದರೆ, ‘ಸೂರ್ಯ’ ಎಂಬ ಗಂಡು ಹುಲಿಯು ಬದುಕಿಗಾಗಿ ನಡೆಸಿದ ಹೋರಾಟ, ಸವೆಸಿದ ಮಾರ್ಗ ಬಲು ರೋಚಕವೆನ್ನಬಹುದಾಗಿದೆ.
ಉಮ್ರೇಡ್-ಕರೆಂಡ್ಲಾ ಅರಣ್ಯ ಪ್ರದೇಶದೊಳಗೆ 1992ಕ್ಕೂ ಮೊದಲು ಸುಮಾರು 104ಕ್ಕೂ ಅಧಿಕ ಹಳ್ಳಿಗಳಲ್ಲಿ ಸುವಾರು 4,000ದಷ್ಟು ಜನರು ವಾಸಿಸುತ್ತಿದ್ದರು. ಆದರೆ 1992ರ ಆಸುಪಾಸಿನಲ್ಲಿ ಇಲ್ಲಿನ ‘ವೈನಗಂಗಾ’ ನದಿಗೆ ಬೃಹತ್ ‘ಇಂದಿರಾ ಸಾಗರ್’ ಅಣೆಕಟ್ಟೆುಂನ್ನು ನಿರ್ಮಿಸಿದ ಪರಿಣಾಮ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿ ಅಲ್ಲಿದ್ದ ಜನರಿಗೆ ಕಾಡಿನ ಅಂಚಿನಲ್ಲಿಯೇ ಸಕಲ ಮೂಲಸೌಕರ್ಯಗಳೊಂದಿಗೆ ಯಶಸ್ವಿಯಾಗಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಕಾಡಿನ ಉಮ್ರೇಡ್, ಕರೆಂಡ್ಲಾ ಮತ್ತು ಪೌನಿ ಎಂಬ ಮೂರು ಭಾಗಗಳಲ್ಲಿ 2012-13ರಿಂದ ಸಫಾರಿಯನ್ನು ಆರಂಭಿಸಿ ಇಲ್ಲಿನ ಜನರಿಗೆ ಉದ್ಯೋಗಾವಕಾಶವನ್ನು ನೀಡಲಾಗಿದೆ. ಕಾಡಿನ ವಾಚರ್, ಹೊರ ಗುತ್ತಿಗೆ ನೌಕರರ ಹುದ್ದೆ, ಸಫಾರಿ ಚಾಲಕ ಮತ್ತು ಗೈಡ್ ಹುದ್ದೆಗಳನ್ನು ಇಲ್ಲಿನ ಸ್ಥಳೀಯರಿಗೆ ನೀಡಲಾಗಿದೆ. ಅಲ್ಲದೆ ಈ ಗ್ರಾಮಗಳ ಮಕ್ಕಳಿಗೆ ಕೌಶಲಾಧಾರಿತ ಕಸುಬು ಮತ್ತು ವಿದ್ಯಾಭ್ಯಾಸಕ್ಕೆ ಅರಣ್ಯ ಇಲಾಖೆಯು ನೆರವಾಗಿ ನಿಂತಿರುವುದು ಮತ್ತೊಂದು ವಿಶೇಷ.
ಉತ್ತರ ಮತ್ತು ಮಧ್ಯಭಾರತದ ಕಾಡುಗಳಲ್ಲಿ ಸಫಾರಿಯಲ್ಲಿ ಕಾಣ ಸಿಗುವ ಹುಲಿಗಳಿಗೆ ಹೆಸರಿಡುವುದೇ ಒಂದು ವಿಶೇಷ. ಹುಲಿ ಸಫಾರಿಯಿಂದ ಬದುಕು ಕಟ್ಟಿಕೊಂಡ ಅಲ್ಲಿನ ಚಾಲಕರು ಮತ್ತು ಗೈಡ್‌ಗಳು ಹುಲಿಗಳನ್ನು ತಮ್ಮ ಕುಟುಂಬದವರಂತೆ, ತಮಗೆ ಅನ್ನ ನೀಡುವ ದೇವರು ಎನ್ನುವಂತೆ ಭಾವಿಸುವುದು, ಅವುಗಳಿಗೆ ಹೆಸರಿಡುವುದು ವಾಡಿಕೆ.
ಉಮ್ರೇಡ್‌ನಲ್ಲಿಯೂ ಹುಲಿಗಳಿಗೆ ಹೆಸರಿಟ್ಟಿದ್ದಾರೆ. ಆರಂಭದ ದಿನಗಳಲ್ಲಿ ಇಲ್ಲಿ ಕಾಣಿಸಿದ ಎರಡು ಹುಲಿಗಳಿಗೆ ‘ಬಿಟ್ಟು-ಶ್ರೀನಿವಾಸ್’ (ಉಮ್ರೇಡ್‌ನಲ್ಲಿ ಮೊದಲ ಬಾರಿ ಹುಲಿ ನೋಡಿದ ಅಧಿಕಾರಿಗಳ ಹೆಸರನ್ನು ಹುಲಿಗೆ ಇಡಲಾಗಿತ್ತು) ಎಂಬ ಹೆಸರನ್ನು ಇಟ್ಟಿದ್ದರು. ಬಳಿಕ ಹೆಣ್ಣು ಹುಲಿಯೊಂದಕ್ಕೆ ‘ಚಾಂದಿನಿ’ ಹಾಗೂ ದೇಶದ ಭಾರೀ ಗಾತ್ರದ ವ್ಯಾಘ್ರಗಳಲ್ಲಿ ಒಂದಾಗಿದ್ದ ಗಂಡು ಹುಲಿಯೊಂದಕ್ಕೆ ‘ಜೈ’ ಎಂದು ಹೆಸರಿಡಲಾಗಿತ್ತು. ಅವು ಈಗ ಇತಿಹಾಸದ ಪುಟ ಸೇರಿವೆ. ಪ್ರಸ್ತುತ ಈಗ ಉಮ್ರೇಡ್‌ನ ಆಕರ್ಷಣೆ ‘ಫೇರಿ’ ಎಂಬ ಹೆಣ್ಣು ಹುಲಿ ಮತ್ತು ಅದರ ಮರಿಗಳು ಹಾಗೂ ‘ಸೂರ್ಯ’ ಎಂಬ ಹ್ಯಾಂಡ್‌ಸಮ್ ಮೇಲ್.
ಸಾಕಷ್ಟು ಹುಲಿಗಳ ಛಾಯಾಚಿತ್ರ ಸೆರೆ ಹಿಡಿದಿರುವ ನನಗೆ ಉಮ್ರೇಡ್‌ನಲ್ಲಿನ ‘ಸೂರ್ಯ’ ಬಹಳ ವಿಶೇಷವಾಗಿ ಕಂಡ ಹುಲಿ. ಆತನ ಹೊಳೆಯುವ ಕಣ್ಣುಗಳು, ಮುಂಜಾನೆಯ ಮಂಜಿನ ಮರೆಯಿಂದ ಹೊರಬಂದ ಆತನ ನಡಿಗೆಯ ಆಕರ್ಷಣೆಯೋ? ಅಥವಾ ಆ ಸೂರ್ಯ ಎಂಬ ಹುಲಿ ತನ್ನ ಉಳಿವಿಗಾಗಿ ಹೋರಾಡಿದ ರೀತಿಯೋ ಏನೋ ಸೂರ್ಯ ಇಂದಿಗೂ ಕಣ್ಣಿನಲ್ಲಿ ಕಟ್ಟಿದ ಹಾಗೇಯೇ ಇದ್ದಾನೆ.
ವಿಶೇಷವೆಂದರೆ ಸೂರ್ಯ ಉಮ್ರೇಡ್‌ನಲ್ಲಿ ಹುಟ್ಟಿ ಬೆಳೆದ ಹುಲಿಯಲ್ಲ. ಆತ ನೆಲೆಗಾಗಿ ನೂರಾರು ಕಿ.ಮೀ. ನಡೆದು, ಊರು, ನಗರ, ಕೈಗಾರಿಕಾ ಪ್ರದೇಶ, ಗಣಿಗಾರಿಕೆಯ ಕ್ವಾರಿಗಳನ್ನು ದಾಟಿ ಈ ಕಾಡಿಗೆ ಬಂದು ನೆಲೆ ನಿಂತ ಹುಲಿ.
ಸಾಮಾನ್ಯ ಜೀವಿಗಳಲ್ಲಿ ವಲಸೆ ಎಂಬುದು ಅವಿಭಾಜ್ಯ ಅಂಗವಿದ್ದಂತೆ. ಅದರಲ್ಲಿಯೂ ಹಕ್ಕಿಗಳ ವಲಸೆ ಮನುಷ್ಯನ್ನು ಇಂದಿಗೂ ಬೆರಗು ಮೂಡಿಸಿರುವುದಂತೂ ನಿಜ. ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ಸ್ಥಳಕ್ಕೆ ಯಾವುದೇ ಗೊಂದಲಗಳಿಲ್ಲದೆ ಆಗಮಿಸುವ ಅವುಗಳ ಬದುಕು ಅಚ್ಚರಿ ಮೂಡಿಸಿದೆ. ಕಾಲಕ್ಕನುಸಾರವಾಗಿ ಅವು, ದೇಶ- ವಿದೇಶಗಳನ್ನು ದಾಟಿ, ಖಂಡ ಖಂಡಗಳನ್ನು ದಾಟಿ ತಾವು ಅಂದುಕೊಂಡ ಸ್ಥಳಕ್ಕೆ ಆಗಮಿಸಿ ಸಂತಾನೋತ್ಪತ್ತಿ ಇರಬಹುದು ಅಥವಾ ಆಹಾರವನ್ನು ಪೂರೈಸಿಕೊಂಡು ಸ್ವಸ್ಥಾನಕ್ಕೆ ಮರಳುತ್ತವೆ.
ಪ್ರಾಣಿಗಳಲ್ಲಿಯೂ ಈ ವಲಸೆ ಇದೆ. ನೆಲೆಗಾಗಿ ಹುಲಿಗಳೂ ನೂರಾರು ಕಿ.ಮೀ. ಅಲೆದ ಉದಾಹರಣೆಗಳು ನಮ್ಮಲ್ಲಿವೆ. ಸಾಮಾನ್ಯ 2 ವರ್ಷಗಳ ಕಾಲ ತಾಯಿಯ ಆರೈಕೆಯಲ್ಲಿ ಬೆಳೆದ ಹುಲಿಗಳು ತಾಯಿಯಿಂದ ಬೇರ್ಪಟ್ಟು ಕಾಡಿನ ಮತ್ತೊಂದು ಮೂಲೆಯಲ್ಲೋ ಅಥವಾ ಸಂಪರ್ಕವಿರುವ ಮತ್ತೊಂದು ಕಾಡಿನಲ್ಲೋ ನೆಲ ಕಂಡುಕೊಳ್ಳುತ್ತವೆ. ಹೀಗೆ ನೆಲೆ ಕಂಡುಕೊಂಡ ಉದಾಹರಣೆಗಳು ಸಾಕಷ್ಟಿವೆ. ಕೆಲ ವರ್ಷಗಳ ಹಿಂದಷ್ಟೇ ನಾಗರಹೊಳೆ ಕಬಿನಿ ಭಾಗದ ಹುಲಿಯೊಂದು ಬಂಡೀಪುರ ಮೂಲೆಹೊಳೆ ಸಮೀಪ ಕಾಣಿಸಿಕೊಂಡಿತ್ತು. ಬಂಡೀಪುರದ ಹುಲಿಯೊಂದು ಚಿಕ್ಕಮಗಳೂರಿನ ಭದ್ರಾ ಕಾಡಿಗೂ ಪ್ರಾಯಾಣಿಸಿದ ಉದಾಹರಣೆಯೂ ನಮ್ಮಲ್ಲಿದೆ. ಹಾಗೇ ಪ್ರಯಾಣಿಸಿದ ಹುಲಿಗಳ ಪೈಕಿ ಸೂರ್ಯ ಕೂಡ ಒಂದು. ಆದರೆ ಆತ ಪ್ರಯಾಣಿಸಿದ ಮಾರ್ಗ ಇವುಗಳಿಂತ ವಿಭಿನ್ನ.
ಮಾಹಿತಿಗಳ ಪ್ರಕಾರ ಸೂರ್ಯ ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ ಪ್ರಸಿದ್ಧ ‘ಮಾಯಾ’ ಎಂಬ ಹೆಣ್ಣು ಹುಲಿಯ ಮರಿ. 2019ರ ವೇಳೆಗೆ ತಾಯಿಯಿಂದ ಬೇರ್ಪಟ್ಟ ಸೂರ್ಯ ನೆಲೆಗಾಗಿ ಅಲೆಯುತ್ತ ಗ್ರಾಮಗಳು, ಹೊಲ, ಕೇರಿಗಳು, ನಗರಗಳು, ಗಣಿಗಾರಿಕೆಯ ಕ್ವಾರಿಗಳನ್ನೂ ದಾಟಿ ನೂರಾರು ಕಿ.ಮೀ. ಪ್ರಯಾಣಿಸಿ ಉಮ್ರೇಡ್ ತಲುಪಿ ನೆಲೆ ಕಂಡುಕೊಂಡಿದ್ದಾನೆ. ನಾನು 2022ರಲ್ಲಿ ನೋಡಿದಾಗ ಸೂರ್ಯನಿಗೆ ಅಂದಾಜು 5-6 ವರ್ಷ. ಎತ್ತರವಾದ ಹುಲಿ, ಹೊಳೆವ ಬಿಳಿ ಕಣ್ಣಿಗಳು, ಮುಖದಲ್ಲಿ ಒಂದು ಸಣ್ಣ ಗಾಯವೂ ಇಲ್ಲದ ಸ್ಛುರದ್ರೂಪಿ ಹುಲಿ. ನೋಡಿದ ಕೂಡಲೇ ಅಬ್ಬಬ್ಬಾ..! ಎನ್ನುವಂತಹ ಮೈಕಟ್ಟು.
ಇಲ್ಲಿನ ಗೈಡ್‌ಗಳ ಮಾಹಿತಿ ಪ್ರಕಾರ ಸೂರ್ಯ ಉಮ್ರೇಡ್‌ಗೆ ಬಂದಾಗ ಅಲ್ಲಿ ಮತ್ತೈದು ವಲಸೆ ಗಂಡು ಹುಲಿಗಳು ಬಂದಿದ್ದವಂತೆ. ಅವುಗಳ ಪೈಕಿ ಸೂರ್ಯ ಸಣ್ಣವ. ವಯಸ್ಸಿನಲ್ಲಿಯೂ ಅಂದಿಗೆ ಗಾತ್ರದಲ್ಲಿಯೂ. 2019ರ ಅಂತ್ಯದಲ್ಲಿ ಸೂರ್ಯ ಉಮ್ರೇಡ್ ಸಫಾರಿಯ ವೇಳೆ ಕಾಣಿಸಿಕೊಳ್ಳಲು ಆರಂಭಿಸಿದ. ಈ ಹುಲಿಗಳನ್ನು ನೋಡಿದ್ದ ಸಫಾರಿ ಗೈಡ್‌ಗಳಿಗೆ ಇವುಗಳ ಮಧ್ಯೆ ಸೂರ್ಯ ಕಾದಾಡಿ ಬದುಕುಳಿಯುವುದು ಕಷ್ಟ ಎಂಬುದು ಖಚಿತವಾಗಿತ್ತು. ಆದರೆ ಆ ಭೀತಿ ಹುಸಿಯಾಗಿ, ಇಂದಿಗೂ ಸೂರ್ಯ ಉಮ್ರೇಡ್‌ನಲ್ಲಿ ರಾಜನಂತೆ ಬದುಕುತ್ತಿದ್ದಾನೆ.
ಉಮ್ರೇಡ್ ಮತ್ತು ಕರೆಂಡ್ಲ ಕಾಡಿನಲ್ಲಿ ತನ್ನ ಸರಹದ್ದನ್ನು ವಿಸ್ತರಿಸಿಕೊಂಡು ಬದುಕುಳಿದಿದೆ. ಸೂರ್ಯ ಬಂದ ಸಂದರ್ಭದಲ್ಲಿಯೇ ಇಲ್ಲಿದ್ದ ಉಳಿದ 5 ಗಂಡು ಹುಲಿಗಳ ಪೈಕಿ ಎರಡು ಕಳ್ಳಬೇಟೆಗಾರರಿಗೆ ಬಲಿಯಾದರೆ, ಉಳಿದ ಮೂರು ಏನಾದವೋ ಎಂಬ ಮಾಹಿತಿ ಇಲ್ಲ. ಇವುಗಳ ಮಧ್ಯೆ ಸಣ್ಣವನಾಗಿದ್ದ ಸೂರ್ಯ ಕಾದಾಟವೇ ಇಲ್ಲದೆ ನೆಲೆಯನ್ನು ಪಡೆದುಕೊಂಡು ಇಲ್ಲೇ ನೆಲೆಸಲು ಆರಂಭಿಸಿದ. ವಿಶಾಲವಾದ ಕಾಡಿನಲ್ಲಿ ಈಗ ಸೂರ್ಯನೇ ರಾಜ, ಸಫಾರಿಗೆ ಅಪರೂಪದ ಅತಿಥಿ. ಇಂತಹ ಅದ್ಭುತ ಹುಲಿ ನಮಗೆ ಸಿಕ್ಕಿದ್ದಂತೂ ನಮ್ಮ ಅದೃಷ್ಟವೇ ಸರಿ. ಅಂದು ಕಾಡಿನಲ್ಲಿ ನಾವು ಸೂರ್ಯನೊಂದಿಗೆ ಕಳೆದ ಬರೋಬ್ಬರಿ ಎರಡೂವರೆ ತಾಸು ಪದೇ ಪದೇ ನಮ್ಮನ್ನು ಕಾಡುತ್ತದೆ. ಮತ್ತೊಮ್ಮೆ ಸೂರ್ಯನನ್ನು ನೋಡುವ ತವಕ ಹೆಚ್ಚಿಸುತ್ತದೆ. ಮತ್ತೊಮ್ಮೆ ಉಮ್ರೇಡ್ ಪ್ರವಾಸದ ಲೆಕ್ಕಾಚಾರದಲ್ಲಿ ತೊಡಗುವಂತೆ ಮಾಡಿದೆ.
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…
• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…
ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…
• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…