ಹಾಡು ಪಾಡು

ಹಾಡಿನ ಸುರಭಿ ಮತ್ತು ಕಾಡಿನ ಸಂತೋಷ

• ಸಿರಿ ಮೈಸೂರು

ಸಂತೋಷ್ ವನ್ಯಜೀವಿ ಸಂರಕ್ಷಕ (ವೈಲ್ಡ್‌ ಲೈಫ್ ಆಕ್ಟಿವಿಸ್). ಪ್ರಾಣಿಗಳ ರಕ್ಷಣೆಗಾಗಿ ಸಾಕಷ್ಟು ಸಂಸ್ಥೆಗಳೊಂದಿಗೆ ಹಾಗೂ ಸ್ವತಂತ್ರವಾಗಿ ಕೆಲಸ ಮಾಡುತ್ತಾ ಬಂದಿರುವ ಇವರು ಖ್ಯಾತ ಉರಗತಜ್ಞರೂ ಹೌದು. ಇನ್ನು ಸುರಭಿ ವೃತ್ತಿಯಲ್ಲಿ ಇಂಗ್ಲಿಷ್‌ ಟೀಚರ್. ಪ್ರವೃತ್ತಿಯಲ್ಲಿ ಸಂಗೀತಗಾರ್ತಿ, ಮನಮುಟ್ಟುವ ರಂಗಗೀತೆಗಳನ್ನು ಹಾಡುವಲ್ಲಿ ಎತ್ತಿದ ಕೈ. ಪ್ರಕೃತಿ- ಸಂಗೀತಗಳೆರಡೂ ಒಂದಕ್ಕೊಂದು ಮಿಳಿತವಾಗಿರುವಂತೆ ಇಬ್ಬರ ಜೀವನ ಇಂಪಾಗಿದೆ, ತಂಪಾಗಿದೆ.

ಸಂತೋಷ್ ಮೂಲತಃ ಬಳ್ಳಾರಿಯವರು. ಚಿಕ್ಕ ವಯಸ್ಸಿನಿಂದಲೂ ಪ್ರಾಣಿ-ಪಕ್ಷಿಗಳೆಂದರೆ ಅಪಾರ ಕರುಣೆ, ಪ್ರೀತಿ ಹೊಂದಿದ್ದವರು. ‘ಚಿಕ್ಕ ವಯಸ್ಸಿನಲ್ಲಿ ಒಂದು ಅಪರೂಪದ ಹಕ್ಕಿಯನ್ನು ನೋಡಿದರೆ ದಿನವಿಡೀ ಖುಷಿಯಿಂದಿರುತ್ತಿದ್ದೆ. ಒಂದು ಅಳಿಲು ಸಹ ನನ್ನ ಮನಸ್ಸನ್ನು ಆನಂದಮಯವಾಗಿ ಮಾಡಿಬಿಡುತ್ತಿತ್ತು. ಬೆಕ್ಕುಗಳೆಂದರೆ ನನಗೆ ಅಚ್ಚುಮೆಚ್ಚು. ಆಗಿನಿಂದಲೂ ನನಗೆ ಪ್ರಾಣಿಗಳೆಂದರೆ ವಿಶೇಷ ಕರುಣೆ-ಪ್ರೀತಿ, ಐಟಿಐ ಮಾಡಿದ ನಂತರ ಕೆಲಕಾಲ ಕೆಲಸ ಮಾಡಿ ಆನಂತರ ಬೆಂಗಳೂರಿನಲ್ಲಿ ನನ್ನ ವನ್ಯಜೀವಿ ಸಂರಕ್ಷಣೆ ವೃತ್ತಿ ಆರಂಭಿಸಿದೆ. ಅಂದಿನಿಂದ ಎಂದೂ ಮತ್ತೆ ಹಿಂದಿರುಗಿ ನೋಡಿಲ್ಲ. ಅಪ್ಪ-ಅಮ್ಮ ಬಳ್ಳಾರಿಯ ಮನೆಯಲ್ಲೇ ಇದ್ದಾರೆ. ನಾನೊಬ್ಬನೇ ಮಗ ಮೈಸೂರಿನಲ್ಲಿದ್ದೇನೆ.

ಅಪ್ಪನ ಸಹಕಾರ ಇಲ್ಲದೆ ಇದೇನೂ ಸಾಧ್ಯವಾಗುತ್ತಿರಲಿಲ್ಲ’ ಎನ್ನುತ್ತಾ ತಮ್ಮ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಸಂತೋಷ್.

ಸಂತೋಷ್ ಬೆಂಗಳೂರಿಗೆ ಬಂದ ನಂತರ ಸಾಕಷ್ಟು ಎನ್‌ಜಿಒಗಳ ಜೊತೆಗೆ (ಸ್ವಸಹಾಯ ಸಂಸ್ಥೆಗಳು) ಕೆಲಸ ಮಾಡಿದರು. ಅವರ ವನ್ಯಜೀವಿ ಸಂರಕ್ಷಣಾ ಕೆಲಸಗಳಿ ಗೆಲ್ಲಾ ಇದೇ ಬುನಾದಿ, ಕಾಡುಪ್ರಾಣಿಗಳ ರಕ್ಷಣೆ, ಶುಶೂಷೆ, ಪುನರ್ವಸತಿ ಸೇರಿದಂತೆ ಅವುಗಳ ಸಂರಕ್ಷಣೆಗೆ ಬೇಕಾದ ಎಲ್ಲವನ್ನೂ ಮಾಡುವುದು ಇವರ ಗುರಿ. ಈ ನಿಟ್ಟಿನಲ್ಲಿ ದೇಶದಾದ್ಯಂತ ವಿವಿಧ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ್ದಾರೆ, ಅರಿವು ಮೂಡಿಸಿದ್ದಾರೆ. ವಿಶೇಷವಾಗಿ ಉರಗಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ರಕ್ಷಣೆಗೆ ಸಹ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಸಂತೋಷ್‌ಗೆ ಸಾವಯವ ಕೃಷಿ ಸಹ ಸಂತೋಷ ನೀಡುವ ಕೆಲಸ!

ಪ್ರೀತಿ ಸಸಿ ಅಂಕುರವಾಗಿದ್ದು ಹೀಗೆ : ಸುರಭಿ ಮೂಲತಃ ಮಹಾರಾಷ್ಟ್ರದವರಾದರೂ ಮೈಸೂರಿನಲ್ಲಿ ಬೆಳೆದವರು. ಖ್ಯಾತ ಸಿರಿಧಾನ್ಯ ತಜ್ಞರಾದ ಡಾ.ಖಾದರ್ ಅವರೊಂದಿಗೆ ಸುರಭಿ ಅವರ ತಂದೆ ಕೆಲಸ ಮಾಡುತ್ತಿದ್ದರು. ಅದೇ ಸ್ಥಳದಲ್ಲಿ ಸಂತೋಷ್ ಸಹ ಕೆಲಸ ಮಾಡುತ್ತಿದ್ದರು. ಆಗಲೇ ಆದದ್ದು ಇಬ್ಬರ ನಡುವಿನ ಪ್ರೇಮಾಂಕುರ, ಉತ್ತರ ಧ್ರುವದಿಂ, ದಕ್ಷಿಣ ಧ್ರುವಕೂ ಎಂಬಂತೆ ಇಬ್ಬರೂ ವಿರುದ್ಧ ದಿಕ್ಕಿನಿಂದ ಎದುರುಬದುರು ಬಂದು ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರು. ಈಗ ಇವರ ಪ್ರೀತಿಗೆ ಎಂಟು ವರ್ಷಗಳ ಹರೆಯ, ದಾಂಪತ್ಯಕ್ಕೆ ಎರಡು ವರ್ಷಗಳ ಹರೆಯ.

ಬಾಲ್ಯದಿಂದ ಸಂಗೀತ ತರಗತಿಗೆ ಹೋಗಿ ಆಸಕ್ತಿಯಿಂದ ರಾಗ, ತಾಳ, ಆಲಾಪಗಳನ್ನು ಕಲಿತಿದ್ದ ಸುರಭಿಗೆ ರಂಗಭೂಮಿಯು ಅಪ್ಯಾಯಮಾನವಾ ದುದು. ರಂಗಗೀತೆಗಳನ್ನು ಹಾಡುತ್ತಾ ಬದುಕಿನ ಲಯ ಕಂಡುಕೊಂಡಿರುವ ಈಕೆ ವೃತ್ತಿಯಲ್ಲಿ ಇಂಗ್ಲಿಷ್ ಟೀಚರ್, ಇದೆಲ್ಲದರ ಜೊತೆಗೆ ಪರಿಸರ, ಪ್ರಾಣಿ ಸಂರಕ್ಷಣೆ, ಉರಗಶಾಸ್ತ್ರಗಳೆಲ್ಲದರಲ್ಲಿಯೂ ತಾನೇನೂ ಮುಂದಿರುವ ಚತುರೆ. ಕಮ್ಮಿಯಿಲ್ಲ ಎಂಬಂತೆ

ಇಬ್ಬರದ್ದೂ ಒಂದಕ್ಕೊಂದು ಸಂಬಂಧವಿಲ್ಲದ ವೃತ್ತಿ, ಆಸಕ್ತಿ. ಆದರೆ ಇಬ್ಬರೂ ಒಟ್ಟಾದಾಗಿನಿಂದಲೂ ಹಾಲೊಳಗೆ ಬೆರೆಯುವ ಜೇನಿನಂತೆ ಇಬ್ಬರ ಆಸಕ್ತಿಗಳೂ ಒಂದಕ್ಕೊಂದು ಮಿಳಿತಗೊಂಡಿವೆ. ಸುರಭಿ ಸಹ ಸಂತೋಷ್ ಜೊತೆ ವನ್ಯಜೀವಿ ಸಂರಕ್ಷಣೆ ಅರಿವು ಕಾರ್ಯ ಕ್ರಮಗಳು, ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಹಾವು ಹಿಡಿಯುವ ಸಂದರ್ಭಗಳಲ್ಲಿ ಸಹ ಸಮಯವಿದ್ದರೆ ಸಂತೋಷ್ ಜೊತೆಗೆ ಹೋಗುತ್ತಾರೆ. ತಾವೂ ವನ್ಯಜೀವಿಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ. ‘ನನಗೆ ಮುಂಚೆಯೆಲ್ಲಾ ಹಾಡು, ಸಂಗೀತದ ಗಂಧಗಾಳಿಯೂ ಇರಲಿಲ್ಲ. ಸುರಭಿ ನನ್ನ ಜೀವನಕ್ಕೆ ಬಂದ ಮೇಲೆ ಪ್ರೇಮ ರಾಗದ ಆಲಾಪ ಶುರುವಾದದ್ದು. ಅವಳೊಂದಿಗೆ ರಂಗಭೂಮಿಯ ಚಟುವಟಿಕೆಗಳಿಗೆ ಹೋದಾಗಲೆಲ್ಲಾ ರಂಗಗೀತೆಗಳನ್ನು ಕೇಳಿ ಖುಷಿಯಾಗುತ್ತಿತ್ತು. ಕೇಳುತ್ತಾ ಕೇಳುತ್ತಾ ನಾನೂ ಹಾಡಲು ಆರಂಭಿಸಿದೆ. ಈಗ ಮನೆಯಲ್ಲಿ ಕೆಲಸ ಮಾಡುವಾಗ, ಗಾಡಿ ಓಡಿಸುವಾಗ, ಸುಮ್ಮನಿರುವಾಗ… ಎಲ್ಲ ಸಮಯದಲ್ಲೂ ಅದಾಗದೇ ಹಾಡು ಆರಂಭವಾಗಿ ಬಿಡುತ್ತದೆ ಎಂದು ನಗುತ್ತಾ ತಮ್ಮ ಸಂಗೀತಾಸಕ್ತಿ ಆರಂಭವಾದ ಬಗ್ಗೆ ಹೇಳುತ್ತಾರೆ ಸಂತೋಷ್. ಅಂದಹಾಗೆ ಇವರಿಬ್ಬರನ್ನೂ ಒಟ್ಟಿಗೆ ತಂದದ್ದು

ಸಾವಯವ ಕೃಷಿಯ ಬಗೆಗಿನ ಆಸಕ್ತಿ ಮತ್ತು ಭೂಮಿ ಮೇಲಿನ ಮಮತೆ, ಪ್ರೀತಿ. ‘ನನ್ನ ಮನೆಯಲ್ಲಿ ನಾನೊಬ್ಬಳೇ ಸಂಗೀತ ಕಲಿತವಳು’ ಎನ್ನುತ್ತಾ ತನ್ನ ಆಸಕ್ತಿದಾಯಕ ಕಲೆಯ ವೈಶಿಷ್ಟ್ಯವನ್ನು ತೆರೆದಿಡುವ ಸುರಭಿ ಹಾಗೂ ಸಂತೋಷ್‌ ನಡುವೆ ಮತ್ತೊಂದು ಸಾಮ್ಯತೆ ಇದೆ. ಅದೇನೆಂದರೆ ಸಂತೋಷ್ ಸಹ ತಮ್ಮ ಕುಟುಂಬದ ಮೊದಲ ವನ್ಯಜೀವಿ ತಜ್ಞ, ತಂತಮ್ಮ ಹಿನ್ನೆಲೆ, ಕುಟುಂಬಗಳ ಚೌಕಟ್ಟುಗಳನ್ನು ಮೀರಿ ತಮ್ಮ ಆಸಕ್ತಿಯ ಹೊಸದೇನನೋ ಮಾಡಬೇಕು ಎಂದುಕೊಂಡ ಈ ಇಬ್ಬರೂ ಈಗ ಬಾಳ ಪಯಣದಲ್ಲಿ ಜೊತೆಯಾಗಿ ನಡೆಯುತ್ತಿದ್ದಾರೆ. ಸಂತೋಷ್ ಮತ್ತು ಅವರ ಜೊತೆ ಸಂತೋಷವಾಗಿ ಉರಗ ರಕ್ಷಣೆ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸುರಭಿ ಇಬ್ಬರದ್ದೂ ಒಂದೇ ಗುರಿ. ನಮ್ಮ ಭೂಮಿಯ ಮೇಲೆ ನಮ್ಮಷ್ಟೇ ಹಕ್ಕು ಪ್ರಾಣಿಗಳಿಗೂ ಇದೆ, ಆ ಹಕ್ಕನ್ನು ಅನುಭವಿಸುವ ಅವಕಾಶ ಅವುಗಳಿಗೆ ಸಿಗಬೇಕು ಎಂಬುದು ಈ ಅಪರೂಪದ ಜೋಡಿಯ ಮಾತು.

‘ನನಗೆ ಚಿಕ್ಕ ವಯಸ್ಸಿನಿಂದಲೂ ಮೈಸೂರೆಂದರೆ ಬಹಳ ಪ್ರೀತಿ, ಮೈಸೂರಿನ ಹುಡುಗಿ ಸಿಕ್ಕಿದ್ದು ನನ್ನ ಅದೃಷ್ಟ. ಈಗ ಮೈಸೂರಿನಲ್ಲೇ ನೆಲೆಯಾಗಿರುವುದು ಖುಷಿಯ ಸಂಗತಿ’ ಎನ್ನುತ್ತಾ ತಮ್ಮ ಮೈಸೂರಿನ ಪ್ರೀತಿ ಬಿಚ್ಚಿಡುತ್ತಾರೆ ಸಂತೋಷ್. ಒಂದೇ ಹಿನ್ನೆಲೆ, ದೃಷ್ಟಿಕೋನ, ಆಸಕ್ತಿ ಇರುವವರಿಗಿಂತ ಇವೆಲ್ಲವೂ ಭಿನ್ನವಾಗಿರುವ ಜೋಡಿಗಳೇ ಹೆಚ್ಚು. ಭಿನ್ನಾಭಿಪ್ರಾಯ ಇದ್ದಾಗ ಕುಳಿತು, ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆಗಷ್ಟೇ ಬದುಕು ಸಿಹಿ-ಕಹಿಯ ಹದವಾದ ಮಿಶ್ರಣವಾಗಿರುತ್ತದೆ. ಗೌರವ, ಸಂವಹನ ಇದ್ದರೆ ದಾಂಪತ್ಯ ಜೀವನ ಸಲೀಸು’ ಎನ್ನುತ್ತಾ ಸುಖ ಜೀವನದ ಗುಟ್ಟು ರಟ್ಟು ಮಾಡುತ್ತಾರೆ ಸುರಭಿ.

lokesh

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

5 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

33 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago