ಪುಟ್ಟ ಪುಟ್ಟ ಕುಡಿಕೆಗಳು, ವಿವಿಧ ಗಾತ್ರದ ಹಾಗೂ ಆಕಾರದ ಹೂಕುಂಡಗಳು, ಬೇರೆ ಬೇರೆ ವಿನ್ಯಾಸದ ಬಾನಿಗಳು, ಹಿಡಿದ ಕೈತುಂಬಾ ಬೆಳಕು ತುಂಬುವ ಹಣತೆಗಳು… ಹೀಗೆ ಮಣ್ಣಿನಲ್ಲಿ, ಪಳಗಿದ ಕೈಗಳಲ್ಲಿ ಅರಳಿದ ನೂರಾರು ಕಲಾಕೃತಿಗಳು. ಕಲೆಗೆ ಇಂತಹದ್ದೇ ಸ್ಥಳ, ಸ್ಥಾನವಾನ, ವ್ಯಕ್ತಿಗಳು ಎಂಬ ಹಂಗಿಲ್ಲ. ಪರಿಶ್ರಮ, ಆಸಕ್ತಿ ಇದ್ದರೆ ಸಾಕಷ್ಟೆ… ಆ ಕಲಾ ಸರಸ್ವತಿ ಒಲಿದು ಬಿಡುತ್ತಾಳೆ. ಇದನ್ನೆಲ್ಲಾ ನೋಡಲು ಮೈಸೂರಿನಿಂದ ಬಹಳ ದೂರ ಹೋಗಬೇಕಿಲ್ಲ. ‘ದೂರ’ಕ್ಕೆ ಹೋದರೆ ಸಾಕು! ಇದು ಮೈಸೂರು ತಾಲ್ಲೂಕು, ಜಯಪುರ ಹೋಬಳಿಯ ದೂರ ಗ್ರಾಮ. ಈ ಊರು ಹೆಸರಾಗಿರುವುದೇ ಕುಂಬಾರಿಕೆಗೆ. ಇಲ್ಲಿನ ಕುಂಬಾರ ಕುಲದವರು ಶತಮಾನಗಳಿಂದಲೂ ಕುಂಬಾರಿಕೆಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ. ಖುಷಿಯ ಸಂಗತಿ ಎಂದರೆ, ಈಗಿನ ಪೀಳಿಗೆಯವರು ಸಹ ಕುಂಬಾರಿಕೆಯತ್ತ ಆಸಕ್ತಿ ಹೊಂದಿದ್ದಾರೆ. ಮೈಸೂರಿನಲ್ಲಿ ಮಾರಾಟವಾಗುವ, ಬಳಕೆಯಾಗುವ ಬಹುತೇಕ ದೀಪಗಳು, ಹೂಕುಂಡಗಳು, ಬಾನಿಗಳು, ಮಡಿಕೆ ಹಾಗೂ ಕುಡಿಕೆಗಳು, ಬೃಹತ್ ಹೂಜಿಗಳೆಲ್ಲವೂ ಇಲ್ಲಿನ ಜನರ ಕಲೆ ಹಾಗೂ ಪರಿಶ್ರಮದ ಪ್ರತಿಫಲ.
ಗ್ರಾಮದೊಳಗೆ ಇವರುಗಳ ಮನೆಯ ಬಳಿಯೇ ಕುಂಬಾರಿಕೆ ಕೆಲಸಕ್ಕೆಂದೇ ದೊಡ್ಡದೊಂದು ಜಾಗ ಇದೆ. ದೊಡ್ಡದೊಂದು ಗುಡಿಸಿಲಿನಂತಿರುವ ಈ ಸ್ಥಳದಲ್ಲಿ ಮಣ್ಣು ಶೇಖರಿಸಿಡಲು, ಹತ್ತಾರು ಚಕ್ರಗಳನ್ನು ಒಟ್ಟಿಗೆ ಬಳಸುತ್ತಾ ಕೆಲಸ ಮಾಡಲು, ತಯಾರಾದ ಹಸಿ ಸಲಕರಣೆಗಳನ್ನು ಸಾಲಾಗಿ ಜೋಡಿಸಿ ಒಣಗಿಸಲು ವಿಶಾಲವಾದ ಸ್ಥಳ ಇದೆ. ಇದರ ಹೊರಗೆ, ಅಂದರೆ ಇಲ್ಲಿನ ಜನರ ಮನೆಗಳ ಆವರಣದಲ್ಲಿ ಪೂರ್ತಿ ತಯಾರಾದ ಹೂಕುಂಡ, ಮಡಿಕೆ, ಕುಡಿಕೆಗಳನ್ನು ಸಾಲಾಗಿ ಜೋಡಿಸಿಡಲಾಗುತ್ತದೆ. ಅವು ಬಿಸಿಲಿಗೆ ಒಣಗುತ್ತಾ ಪಕ್ವವಾಗುತ್ತವೆ. ಈ ಗ್ರಾಮದ ಬಳಿಯೇ ಇರುವ ಕೆರೆಯ ದಂಡೆಯಲ್ಲಿ ದಂಡಿಯಷ್ಟು ಜೇಡಿಮಣ್ಣು ಸಿಗುತ್ತದೆ. ಆ ಜೇಡಿಮಣ್ಣನ್ನು ಹೊತ್ತು ತಂದು ಇಲ್ಲಿ ರಾಶಿಗಟ್ಟಲೆ ಸುರಿದಿಡುತ್ತಾರೆ. ಅಂದಹಾಗೆ ಆ ಜೇಡಿಮಣ್ಣು ತೇವಾಂಶ ಕಳೆದುಕೊಳ್ಳದಂತೆ ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಇಲ್ಲವಾದಲ್ಲಿ ಅದು ಬೇಕಾದ ಆಕಾರ ಪಡೆಯುವುದಿಲ್ಲ. ಇದಕ್ಕಾಗಿ ಮಣ್ಣು ಒದ್ದೆಾಂಗಿಯೇ ಇರುವಂತೆ ನೋಡಿಕೊಳ್ಳುತ್ತಾರೆ ಇಲ್ಲಿನ ಕುಂಬಾರರು. ಕೆಲವೊಮ್ಮೆ ಮಳೆ ಹೆಚ್ಚಾಗಿ ಕೆರೆ ತುಂಬಿಕೊಂಡಾಗ ಮಾತ್ರ ಮಣ್ಣಿಗೆ ಸ್ವಲ್ಪ ಕಷ್ಟಪಡಬೇಕಾಗಿ ಬರಬಹುದು ಎಂಬುದನ್ನು ಬಿಟ್ಟರೆ ಎಲ್ಲ ಸಮಯದಲ್ಲಿಯೂ ಈ ಕೆಲಸ ನಡೆದೇ ಇರುತ್ತದೆ.
ಒಂದು ಗುಡ್ಡೆಯಿಂದ ದೊಡ್ಡ ಗಾತ್ರದ ಜೇಡಿಮಣ್ಣಿನ ಉಂಡೆ ತಂದು ಚಕ್ರದ ಬಳಿ ಹಾಕುತ್ತಾರೆ. ಆ ಮಣ್ಣನ್ನು ಚಕ್ರದ ಮಧ್ಯೆ ಹಾಕಿ ದೊಡ್ಡ ಕೋಲೊಂದನ್ನು ಹಿಡಿದು ಚಕ್ರವನ್ನು ಜೋರಾಗಿ ತಿರುಗಿಸಿ ಮಣ್ಣಿನ ಮುದ್ದೆಗೆ ಒಂದು ಆಕಾರ ಕೊಡುತ್ತಾರೆ. ಮಣ್ಣು ಅವರಿಗೆ ಬೇಕಾದ ಆಕಾರ ಪಡೆದೊಡನೆ ಸಣ್ಣದೊಂದು ನೂಲು ಬಳಸಿ ಮಡಿಕೆಯ ಬುಡವನ್ನು ಚಕ್ರದ ಮೇಲಿನ ಮಣ್ಣಿನಿಂದ ಸಲೀಸಾಗಿ ಬೇರ್ಪಡಿಸುತ್ತಾರೆ. ಇದರ ನಂತರ ಅದನ್ನು ತೆಗೆದು ಒಣಗಲು ಇಡುತ್ತಾರೆ. ಒಂದರ್ಧ ಗಂಟೆ ಒಣಗಿದ ಮೇಲೆ ಹೆಂಗಸರು ಆ ಹೂಕುಂಡಗಳಲ್ಲಿ ನೀರು ಹೋಗಲು ರಂಧ್ರ ಮಾಡಿ, ಬತ್ತಿ ಹಾಕಿ (ಹೂಕುಂಡದ ಸುತ್ತ ಹಿಡಿದುಕೊಳ್ಳಲು ಇರುವ ಕಿವಿಯಂತಹ ಭಾಗವನ್ನು ತಯಾರಿಸುವುದನ್ನು ಬತ್ತಿ ಹಾಕುವುದು ಎನ್ನುತ್ತಾರೆ), ಬೇಕಾದರೆ ವಿನ್ಯಾಸ ಮಾಡಿ ನಂತರ ಒಣಗಲು ಬಿಡುತ್ತಾರೆ. ಇಷ್ಟೆಲ್ಲಾ ಕೆಲಸ ನೋಡನೋಡುತ್ತಿದ್ದಂತೆ ಮುಗಿದುಹೋಗಿರುತ್ತದೆ. ನೋಡುವವರಿಗೆ ಕ್ಲಿಷ್ಟ ಎನಿಸಿದರೂ ದಿನವೂ ಅದೇ ಕೆಲಸದಲ್ಲಿ ನಿರತರಾಗಿರುವ ಇವರಿಗೆ ಇವೆಲ್ಲವೂ ಲೀಲಾಜಾಲ! ಅಲ್ಲಲ್ಲಿ ಕಾಣುವ ಜೇಡಿಮಣ್ಣಿನ ಗುಡ್ಡೆಗಳು, ಚಕ್ರಗಳು, ಸಾಲಾಗಿ ಜೋಡಿಸಿರುವ ಹಸಿ ಮಣ್ಣಿನ ಕಲಾಕೃತಿಗಳು, ಸೂರಿನಿಂದ ಇಣುಕಿ ಬಂದು ಮಡಕೆಯ ಮೇಲೆ ಬಿದ್ದು ನಗು ಚೆಲ್ಲುವ ಸೂರ್ಯನ ಕಿರಣಗಳು… ಹಾ! ಇವೆಲ್ಲವೂ ಕಣ್ಣಿಗೆ ಹಬ್ಬವೇ ಸರಿ.
‘ನಮ್ಗೆಲ್ಲಾ ಕೆಲ್ಸ ಯಾರೂ ಹೇಳ್ಕೊಡಕಿಲ್ಲ. ನಾವು ಚಿಕ್ ವಯ್ಸಿಂದ ನೋಡ್ತಾ ನೋಡ್ತಾ ಕಲ್ತ್‌ಬುಡ್ತೀವಿ. ಎಷ್ಟೇ ಆದ್ರೂ ಕುಲ್‌ಕಸ್ಬು ನೋಡಿ. ನಾವಂತೂ ಇಷ್ಟಪಟ್ಟು ಕೆಲ್ಸ ಮಾಡ ಜನ. ಮಣ್ಣನ್ನ ಮಟ್ಟ ಮಾಡ್ತಾ ಮಾಡ್ತಾ ಮಡ್ಕೆ ವಾಡ್ತೀವಿ. ಮಕ್ಳಿಗೆ ಇದೇ ಕೆಲ್ಸ ಮಾಡಿ ಅಂತ ನಾವು ಹೇಳಕ್ಕಾಯ್ಕಿಲ್ಲ. ಒಬ್ಬೊಬ್ರು ಈ ಕೆಲ್ಸ ಮಾಡ್ತರೆ, ಮಿಕ್ಕೋರೋ ಪೇಟೆಗೋಗ್ತಾತಾರೆ. ಏನೋ ಆಗ್ಲಿ ಬುಡಿ. ಒಟ್ಟು ಮಕ್ಳು ಸಂದಾಗಿರ್ಬೇಕು’ ಎನ್ನುತ್ತಾರೆ ಇಲ್ಲಿನ ಕುಂಬಾರರೊಬ್ಬರು.
ಈ ಕುಂಬಾರ ಕುಲದವರು ಆಗಿನ ಕಾಲದಲ್ಲಿ ಮೈಸೂರು ಅರಮನೆಗೆ ರಾಶಿಗಟ್ಟಲೆ ಹೂಕುಂಡಗಳು, ಮಡಕೆಗಳು, ಮೊಸರಿನ ಕುಡಿಕೆಗಳು, ಹಣತೆಗಳು, ಬಾನಿಗಳು, ಹೂಜಿಗಳನ್ನು ಕಳುಹಿಸುತ್ತಿದ್ದರಂತೆ. ಈಗಲೂ ಆರ್ಡರ್ ಇದ್ದಾಗ ಮಾತ್ರವಲ್ಲದೆ, ಬಹುತೇಕ ಎಲ್ಲ ಸಮಯಗಳಲ್ಲಿಯೂ ಕೆಲಸ ನಡೆದೇ ಇರುತ್ತದೆ. ಮೈಸೂರೇ ಇವರ ಪ್ರಮುಖ ವಾರುಕಟ್ಟೆ. ‘ನಾವೆಲ್ಲಾ ಮೈ ಬಗ್ಸಿ ಕೆಲ್ಸ ಮಾಡ ಜನ ಕಣೇಳಿ. ಈ ಐಕ್ಳಿಗೆ ಅದೆಲ್ಲಾಂತುದೆ. ಪೌಡ್ರು, ಸೆಂಟು ಆಕಳದು, ಪೋನ್ ಇಟ್ಕಂಡ್ ಕೂತ್ಕಳದು. ಅಟೇಯಾ ಇವ್ರ್ ಕೆಲ್ಸ. ಅಂಗೂ ಒಂದೊಂದ್ ಐಕ್ಳು ಕೆಲ್ಸ ಕಲ್ತವೆ. ಅದೇನಾದ್ರೂ ಇವ್ರೆಲ್ಲಾ ದಬಾಕದು ಅಷ್ಟ್ರಲ್ಲೇ ಬುಡಿ’ ಎನ್ನುತ್ತಾ ‘ನಿಮ್ಮ ಮಕ್ಕಳಿಗೆ ಕುಂಬಾರಿಕೆಯಲ್ಲಿ ಆಸಕ್ತಿ ಇದ್ಯಾ?’ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು. ಇಲ್ಲಿನ ಹಿರಿಯ ಕುಂಬಾರರೊಬ್ಬರು. ಇಲ್ಲಿನವರ ಕೆಲವು ಮಕ್ಕಳು ಕೆಲಸಕ್ಕೆ ಬೇರೆ ಹಳ್ಳಿಗಳಿಗೆ, ಮೈಸೂರು ನಗರಕ್ಕೆ ಹೋಗುತ್ತಾರೆ. ಇವರು ಇಷ್ಟಪಟ್ಟು ಇಲ್ಲೇ ಕೆಲಸ ಮಾಡುತ್ತಾರೆ. ಕುಂಬಾರಿಕೆಗೆ ಈಗಲೂ ಅಷ್ಟೇ ಬೆಲೆ, ಬೇಡಿಕೆ ಇರುವ ಕಾರಣ ಇವರ ಜೀವನ ಹೆಚ್ಚು ಸಮಸ್ಯೆಗಳಿಲ್ಲದೆ ನಡೆದಿದೆ.
ಮಡಕೆ ಮಾಡುವಾಗ ಇಂತಹದ್ದೇ ಮಣ್ಣನ್ನು ಬಳಸಬೇಕು. ಅದಕ್ಕೆ ಇಂತಿಷ್ಟೇ ನೀರು ಹಾಕಬೇಕು. ಅದನ್ನು ಒಂದೇ ಹದದಲ್ಲಿ ಕಲೆಸಬೇಕು, ನಿರ್ದಿಷ್ಟ ರೀತಿಯಲ್ಲಿ ಅದಕ್ಕೊಂದು ಆಕಾರ ನೀಡಬೇಕು ಎಂಬಿತ್ಯಾದಿ ನಿಯಮಗಳಿವೆ. ಒಮ್ಮೆ ಮಣ್ಣನ್ನು ತಂದು ಸಂಗ್ರಹಿಸಿಟ್ಟ ಮೇಲೆ, ಅದು ಆರದಂತೆ ನೋಡಿಕೊಳ್ಳಲು ನೀರನ್ನು ಹಾಕುತ್ತಲೇ ಇರಬೇಕು. ಆನಂತರ ಬೇಕಾದಾಗ ಮಣ್ಣನ್ನು ಬಳಸಬೇಕು. ಹಾಗೆ ಮಾಡಿದಾಗ ಮಾತ್ರ ಮಡಕೆ ಗಟ್ಟಿಯಾಗಿ, ಉತ್ತಮ ಆಕಾರದಲ್ಲಿ ತಯಾರಾಗಲು ಸಾಧ್ಯ. ಇವೆಲ್ಲವೂ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಕರಗತವಾಗಿರುವ ಕಲೆಗಳು. ಇವರೆಲ್ಲರೂ ಕೆಲಸ ಮಾಡುತ್ತಲೇ ಕೆಲಸ ಕಲಿಯುತ್ತಾರೆ. ಹಾಗೆ ತಮ್ಮ ಮಕ್ಕಳಿಗೂ ಆಸಕ್ತಿಯಿದ್ದರೆ ಇದನ್ನು ಹೇಳಿಕೊಡುತ್ತಾರೆ.
‘ಮೊಮ್ಮಗ್ಳು ಈಗ ಅಂಗನ್ವಾಡಿಗೆ ಓಯ್ತಾಳೆ. ಮುಂದ್ಲ್ ಸಲ್ದಿಂದ ಕಾನ್ವೆಂಟು. ನಮ್ ಕಾಲ್ದಲ್ಲಿ ಈ ಸ್ಕೂಲೆಲ್ಲಾ ನಮ್ಗೆ ಗೊತ್ತೇ ಇರ್ಲಿಲ್ಲ. ಚಿಕ್ ವಯ್ಸೆಲ್ಲಾ ಈ ಮಡ್ಕೆ ಕುಡ್ಕೇ ಮಾಡ್ಕಂಡು, ಮಣ್ಣಲ್ಲಿ ಆಟಾಡ್ಕಂಡು ಕಳ್ದೋಯ್ತು. ಈಗ ನೆನ್ಸ್‌ಕಂಡ್ರೆ ಓದ್ಬೇಕಿತ್ತು ಅನ್ಸ್‌ತದೆ. ಆದ್ರೂ ಆ ಕಾಲನೇ ಅಂಗಿತ್ತು ಬುಡಿ. ನಮ್ ಮಕ್ಳು, ಮೊಮ್ಮಕ್ಳು ಓದದೇ ನಮ್ಗೆ ಕುಷಿ. ನಾವು ಓದ್‌ದೇ ಇದ್ರೂ, ಈ ಕೆಲ್ಸ ಮಾತ್ರ ಯಾವೊತ್ತೂ ಕೈಬಿಡ್ಲಿಲ್ಲ. ಈಗ್ಲೂ ನಮ್ನೆಲ್ಲಾ ಸಂದಾಗೇ ನೋಡ್ಕತದೆ? ಎನ್ನುತ್ತಾ ತೊಡೆಯ ಮೇಲೆ ಕುಳಿತ ತಮ್ಮ ಮೊಮ್ಮಗಳು ಪವಿತ್ರಾಳನ್ನೊಮ್ಮೆ ನೋಡಿ ನಕ್ಕು ಮಾತು ಮುಗಿಸಿದರು ಇಲ್ಲಿನ ಎಲ್ಲರಿಗಿಂತ ಹಿರಿಯರಾದ ಚೌಡಮ್ಮ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…