ಹಾಡು ಪಾಡು

ಇನ್ನು ಆರು ದಿನಗಳಲ್ಲಿ ಪುಸ್ತಕಗಳ ಸಂತೆ

• ವೀರಕಪುತ್ರ ಶ್ರೀನಿವಾಸ

ನಮ್ಮೂರ ಹೆಸರು ವೀರಕಪುತ್ರ! ಕೋಲಾರ ಜಿಲ್ಲೆಯ, ಮಾಲೂರು ತಾಲ್ಲೂಕಿನ ಗ್ರಾಮವದು. ನಮ್ಮದು ಮಾತ್ರವಲ್ಲ ಇಡೀ ಊರಿನದು ಬುಡ್ಡಿದೀಪದ ಬದುಕು. ನನ್ನ ಬಾಲ್ಯಕ್ಕಂತೂ ಕರೆಂಟ್ ಭಾಗ್ಯವಿರಲಿಲ್ಲ. ಊರಿನ ಎಡಬಲದಲ್ಲಿ ದೊಡ್ಡಬೆಟ್ಟ-ಚಿಕ್ಕಬೆಟ್ಟ ಎಂಬೆರಡು ಬೆಟ್ಟಗಳು. ನಾಲ್ಕು ದಿಕ್ಕುಗಳಿಗೂ ಸಂಪರ್ಕ ಸಾಧಿಸಿದ್ದಂತಹ ಕಿರಿದಾದ ಮಣ್ಣಿನ ರಸ್ತೆಗಳು, ಸಂಜೆಯಾದರೆ ದೂಳೆಬ್ಬಿಸುತ್ತಾ ಬರುವ ಕೆಂಪು ಬಸ್ಸು, ಅದನ್ನು ನೋಡಲು ದಿನವಿಡೀ ಕಾದು ಕುಳಿತ ನಾವುಗಳು. ಅದು ಬಿಟ್ಟರೆ ಹೊರ ಜಗತ್ತಿಗೂ ನಮಗೂ ಸಂಬಂಧವೇ ಇಲ್ಲ. ಟಿವಿ, ಪತ್ರಿಕೆಗಳಂತೂ ದೂರದ ಮಾತು. ಈ ಊರಿನಾಚೆಗೊಂದು ಪ್ರಪಂಚವಿದೆ ಎಂಬ ಸಂಗತಿಯೇ ಅರಿವಿಲ್ಲದೆ ಬದುಕುತ್ತಿದ್ದ ನನ್ನ ಜನ. ಅಂತಹವರ ಮಧ್ಯೆ ನಾನು ಮತ್ತು ನನ್ನ ವಯಸ್ಸಿನ ಕೆಲವು ಹುಡುಗರ ಮಾತ್ರ ಊರಿನಾಚೆಗಿನ ಜಗತ್ತನ್ನು ನೋಡುತ್ತಿದ್ದೆವು. ಊರಿನವರಿಗೆ ಗೊತ್ತಿಲ್ಲದ ಸಂಗತಿಗಳು ನಮಗೆ ಗೊತ್ತಿರುವಂತೆ ಅನಿಸುತ್ತಿತ್ತು. ಅದಕ್ಕೆ ಕಾರಣ ನಾವು ಓದುತ್ತಿದ್ದ ಪುಸ್ತಕಗಳು. ಬಾಲ್ಯದಲ್ಲಿಯೇ ಕೆಂಪಯ್ಯ, ನಾಗರಾಜ್ ಶಾಸ್ತ್ರಿ, ಮತ್ತು ತಾಜ್ ಪಾಷ ಎಂಬ ಮೇಷ್ಟ್ರುಗಳು ನಮಗೆಲ್ಲಾ ಬಾಲಮಂಗಳ, ಚಂದಮಾಮ ತರಹದ ಬೇರೆ ಬೇರೆ ಕಥೆ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಆ ಪುಸ್ತಕಗಳೇ ನಮ್ಮ ಬಾಲ್ಯದ ಬಹುದೊಡ್ಡ ಆಕರ್ಷಣೆ, ಮನರಂಜನೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದವು. ಬೇರೆ ಯಾವುದೇ ಮನರಂಜನೆ ಇಲ್ಲದ ಕಾಲಕ್ಕೆ ಪುಸ್ತಕಗಳೇ ಸರ್ವವೂ ಆಗಿ ಕೈ ಹಿಡಿದವು. ಆಗ ಎದೆಗೆ ಬಿದ್ದ ಓದು ನನ್ನನ್ನು ಜೀವನದಲ್ಲಿ ಸೋಲಲು ಬಿಡಲೇ ಇಲ್ಲ. ಎಂಟನೇ ತರಗತಿಯಲ್ಲಿ ರಾಮಾಯಣದ ಪರೀಕ್ಷೆ ಬರೆದು ಎಂಬತ್ತೂರು ಅಂಕಗಳೊಂದಿಗೆ ಶಾಲೆಗೆ ಮೊದಲಿಗನಾದ ಹೆಮ್ಮೆ, ಪ್ರೌಢಶಾಲೆಯ ಪುಟ್ಟ ಲೈಬ್ರರಿಯಲ್ಲಿದ್ದ ಅಷ್ಟೂ ಪುಸ್ತಕಗಳನ್ನು ಓದಿದ ಏಕಮಾತ್ರ ವಿದ್ಯಾರ್ಥಿ ಎಂಬ ಹೆಗ್ಗಳಿಕೆ, ನಮ್ಮೂರಿನ ಇತಿಹಾಸದಲ್ಲಿಯೇ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ದ್ವಿತೀಯನೆಂಬ ಅಚ್ಚರಿಗಳನ್ನು ನೀಡಿದ್ದು ಅದೇ ಪುಸ್ತಕಗಳು.

ಅಂತಹ ನಾನು ಜೀವನದ ಪರೀಕ್ಷೆಯಲ್ಲಿ ಫೇಲಾಗಿ ಬರಿಗೈಲಿ ಬೆಂಗಳೂರಿಗೆ ಬಂದಮೇಲೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾನೇ ಕಷ್ಟವಾಗಿತ್ತು. ಆತ್ಮೀಯರಿರಲಿ, ಪರಿಚಯದವರೂ ಇಲ್ಲದ ಬೆಂಗಳೂರಲ್ಲಿ ಬಡತವನ್ನು ಗೆಲ್ಲುವ ಹಠ ನನ್ನದಾಗಿತ್ತು. ಇಲ್ಲೂ ಅನೇಕ ಸವಾಲುಗಳು, ಜೀವನ್ಮರಣದ ಸಂಗತಿಗಳು ಎದುರಾದವು. ಅಂತಹ ಸಂದರ್ಭದಲ್ಲೂ ನನ್ನ ಕೈ ಹಿಡಿದು ನಡೆಸುತ್ತಿದ್ದದ್ದು ಪುಸ್ತಕಗಳು ಮಾತ್ರ. ಎಂತಹುದ್ದೇ ಒತ್ತಡದಲ್ಲೂ ಮೈಮರೆತು ಓದಬಲ್ಲವನಾಗಿದ್ದೆ. ಪುಸ್ತಕ ಹಿಡಿದು ಕೂತುಬಿಟ್ಟರೆ ಅದು ಮುಗಿಯದ ಹೊರತು ಮೇಲೆ ಏಳದಷ್ಟು ಶ್ರದ್ಧೆಯ ಓದು ನನ್ನದಾಗಿರುತಿತ್ತು.

ಬೆಂಗಳೂರು ಅದ್ಯಾವಾಗ ನನ್ನನ್ನು ಅದರ ಮಾಯೆಯಲ್ಲಿ ಸಿಲುಕಿಸಿಕೊಂಡಿತೋ ಅರಿಯೇ; ನೋಡು ನೋಡುತ್ತಲೇ ಉದ್ಯಮ ಕಟ್ಟುವ ಉತ್ಸಾಹದಲ್ಲಿ ಓದಿಗೆ ದೂರವಾಗಿಬಿಟ್ಟಿದ್ದೆ. ಹುಚ್ಚಿಗೆ ಬಿದ್ದು ಓದುತ್ತಿದ್ದವನು ಪುಸ್ತಕ ಹಿಡಿದೊಡನೆ ಮಲಗುವ ಹಂತ ತಲುಪಿಬಿಟ್ಟಿದ್ದೆ. ಸುಮಾರು ಏಳೆಂಟು ವರ್ಷಗಳ ಕಾಲ ಪತ್ರಿಕೆ ಓದುವುದನ್ನು ಬಿಟ್ಟರೆ ಮತ್ಯಾವ ಓದಿಗೂ ಒಡ್ಡಿಕೊಳ್ಳಲಿಲ್ಲ. ಅಂತಹ ಸಂದರ್ಭದಲ್ಲಿಯೇ ಕೊರೊನಾ ಬಂದಿದ್ದು! ಒಬ್ಬರು ಇಬ್ಬರಲ್ಲ ಇಡೀ ದೇಶದ ಜನರೇ ಮನೆಗಳಲ್ಲಿ ಬಂಧಿಯಾಗಿಬಿಟ್ಟರು. ಆಗ ವಿಧಿಯಿಲ್ಲದೆ ಮತ್ತೆ ಪುಸ್ತಕಗಳು ನನ್ನ ಕೈಗೆ ಬಂದವು. ದಿನಕ್ಕೊಂದು ಪುಸ್ತಕ ಓದುವುದು ಖಾಯಂ ಆಗಿಬಿಟ್ಟಿತು. ಓದಿದ ನಂತರ ಸಂಬಂಧಪಟ್ಟ ಲೇಖಕರ ಫೋನ್ ನಂಬರ್ ಹುಡುಕಿ ಅವರಿಗೊಂದು ಸಂದೇಶ ಕಳುಹಿಸುವುದು, ನನ್ನ ಅಭಿಪ್ರಾಯಗಳನ್ನು ದಾಖಲಿಸುವುದು ಆರಂಭವಾಯಿತು. ಆಗಲೇ ಪುಸ್ತಕಗಳ ಮಾರುಕಟ್ಟೆಯ ಆಳ, ಅಗಲ ನನಗೆ ಅರ್ಥವಾಗಿದ್ದು. ಹಿರಿಯರ ಸಾಹಿತಿಗಳನೇಕರ ಕೃತಿಗಳೂ ಸಾವಿರಕ್ಕಿಂತ ಹೆಚ್ಚು ಮುದ್ರಣವಾಗುತ್ತಿಲ್ಲವೆಂಬ ಸಂಗತಿ ನನ್ನಲ್ಲಿ ಗಾಬರಿ ತಂದಿತ್ತು. ಏಳು ಕೋಟಿ ಕನ್ನಡಿಗರ ನಾಡಲ್ಲಿ ಲೇಖಕನೊಬ್ಬನಿಗೆ ಸಾವಿರ ಓದುಗರೂ ಇಲ್ಲವೆಂದರೆ ಹೇಗೆ? ಎಂಬ ಪ್ರಶ್ನೆಯನ್ನು ಹಿಡಿದು ಚರ್ಚಿಸಿದಾಗಲೇ ಪುಸ್ತಕಲೋಕ ಅನುಭವಿಸುತ್ತಿರುವ ಸವಾಲುಗಳ ಪರಿಚಯವಾಗಿದ್ದು, ಆಗ ಹುಟ್ಟಿದ್ದೇ ಈ ವೀರಲೋಕ ಸಂಸ್ಥೆ.

ಕನ್ನಡ ಪುಸ್ತಕ ಓದುವವರು ಆ ಕಾಲದಿಂದ ಈ ಕಾಲದವರೆಗೂ ಅಲ್ಪಸಂಖ್ಯಾತರೇ! ಆದರೆ ಅವರನ್ನು ಬಹುಸಂಖ್ಯಾತರನ್ನಾಗಿಸುವ ಕೆಲಸ ಮಾತ್ರ ಈ ಪುಸ್ತಕಲೋಕದಲ್ಲಿ ಪರಿಣಾಮಕಾರಿಯಾಗಿ ನಡೆದೇ ಇಲ್ಲ. ಮೊನ್ನೆ ಐವತ್ತು ವರ್ಷಗಳ ಹಿಂದಿನ ಪತ್ರಿಕೆಯೊಂದರಲ್ಲಿ ನಾನೊಂದು ಲೇಖನ ಓದಿದೆ. ಅದರಲ್ಲಿ ‘ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ’ ಎಂಬ ಸಾರವಿದ್ದಂತಹ ಲೇಖನವಿತ್ತು! ಆದರೆ ಐವತ್ತು ವರ್ಷಗಳ ನಂತರವೂ ಕನ್ನಡ ಇನ್ನೂ ಉಳಿದಿದೆ. ಐವತ್ತು ವರ್ಷಗಳ ಹಿಂದೆ ಇದ್ದ ಒಂದೋ ಎರಡೋ ಪತ್ರಿಕೆಗಳ ಜಾಗದಲ್ಲಿ ಈಗ ಹತ್ತು ಪತ್ರಿಕೆಗಳಿವೆ. ಆಗ ವರ್ಷಕ್ಕೆ ಐನೂರು ಕೃತಿಗಳು ಪ್ರಕಟವಾಗುತ್ತಿದ್ದರೆ ಈಗ ಎಂಟು ಸಾವಿರ ಕೃತಿಗಳು ಪ್ರಕಟವಾಗುತ್ತಿವೆ. ಮತ್ತು ಈಗಲೂ ‘ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ’ ಎಂಬ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಅಂದರೆ ಕನ್ನಡ ಓದುವವರಿಲ್ಲ ಎಂಬ ಮಾತು ಅರೆಸತ್ಯ. ನಾವು ಕನ್ನಡದ ಓದುಗರನ್ನು ತಲುಪಲು, ಓದುಗ ವರ್ಗವನ್ನು ಹಿಗ್ಗಿಸಲು ಪ್ರಯತ್ನಿಸುತ್ತಿಲ್ಲವೆಂಬುದು ಪೂರ್ತಿ ಸತ್ಯ.

ಈ ಹಿನ್ನೆಲೆಯಲ್ಲಿ ವೀರಲೋಕವು ನಿರಂತರವಾಗಿ ಕನ್ನಡ ಪುಸ್ತಕಲೋಕವನ್ನು ಪುಸ್ತಕೋದ್ಯಮವನ್ನಾಗಿಸಬೇಕೆಂದು ಶ್ರಮಿಸುತ್ತಿದೆ. ಆ ಮೂಲಕ ಪುಸ್ತಕ ಲೋಕದಲ್ಲಿ ಹೊಸ ಉತ್ಸಾಹ ತುಂಬಿ, ರಾಜ್ಯದಾದ್ಯಂತ ಇರುವ ಪ್ರತಿಯೊಬ್ಬ ಓದುಗನನ್ನೂ ತಲುಪುವಂತಹ ಕೆಲಸ ಮಾಡುತ್ತಿದೆ. ಅದೇ ಕ್ರಮದಲ್ಲಿ ಮೆಡಿಕಲ್ ಸ್ಟೋರ್, ಹೋಟೆಲ್, ಪ್ರಾವಿಷನ್ ಸ್ಟೋರಿನಲ್ಲಿಯೂ ಕನ್ನಡ ಪುಸ್ತಕಗಳನ್ನು ಸಿಗುವಂತೆ ಮಾಡಿದ್ದೇವೆ. ಕನ್ನಡ ಪುಸ್ತಕಗಳಿಗಾಗಿ ಕಾಲ್ ಸೆಂಟರ್ ತೆರೆದಿದ್ದೇವೆ. ತೆರೆಯಮೇಲಿನ ಹೀರೋಗಳಿಗಿಂತ ಸಾಹಿತ್ಯಲೋಕದವರು ನಿಜವಾದ ಜನಪರ ಧ್ವನಿಗಳು ಎಂಬುದನ್ನು ಅರಿತು ಅವರನ್ನು ಹೀರೋಗಳಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದೇವೆ. ಯುವಜನರು ಅರ್ಥವಿಲ್ಲದ ಆಚರಣೆಯ ಮೂಲಕ ಹೊಸವರ್ಷ ಆಹ್ವಾನಿಸುವುದನ್ನು ಬಿಟ್ಟು ಪುಸ್ತಕಗಳ ಕಡೆ ಮುಖಮಾಡಲಿ ಎಂದು ಭಾವಿಸಿ ಡಿಸೆಂಬರ್ 31ರ ಮಧ್ಯರಾತ್ರಿ ಪುಸ್ತಕರಾತ್ರಿ ಎಂಬ ಯೋಜನೆಯನ್ನು ಎರಡು ವರ್ಷಗಳಿಂದ ಆರಂಭಿಸಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ದೇಸಿಜಗಲಿ ಎಂಬ ಯೋಜನೆ ಮೂಲಕ ಕಥಾ ಕಮ್ಮಟಗಳನ್ನು ಆಯೋಜಿಸಿ ಗ್ರಾಮೀಣ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ. ಕವನಗಳಿಗೆ ಕಾಲವಲ್ಲ ಎಂಬ ಕಾಲದಲ್ಲಿ ಕಾವ್ಯಕ್ರಮ ಎಂಬ ಕಾರ್ಯಕ್ರಮದ ಮೂಲಕ ಕಾವ್ಯಪರಂಪರೆಗೆ ಮತ್ತೆ ಉತ್ಸಾಹ ತುಂಬಿದ್ದೇವೆ.

ನಾಡಿನ ಪ್ರತಿಷ್ಠಿತ ಪತ್ರಿಕೆಗಳ ಜೊತೆಗೂಡಿ ಅತಿ ಹೆಚ್ಚು ಬಹುಮಾನ ನೀಡುವ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ. ಸ್ವಿಗ್ಗಿ, ಜೊಮ್ಯಾಟೋದ ಡೆಲಿವರಿ ಬಾಯ್ ರೀತಿಯಲ್ಲಿಯೇ ಗಂಟೆಯೊಂದರಲ್ಲಿಯೇ ಪುಸ್ತಕಗಳನ್ನು ಓದುಗರ ಮನೆಗೆ ತಲುಪಿಸುವ ಬುಕ್‌ ಬಾಯ್ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಉತ್ತರ ಕರ್ನಾಟಕದವರನ್ನು ರಾಜಧಾನಿ ಜೊತೆ ಬೆಸೆಯುವುದಕ್ಕಾಗಿ ಉತ್ತರಪರ್ವ ಎಂಬ ಮಹತ್ತರ ಯೋಜನೆಯನ್ನು ಆರಂಭಿಸಿದ್ದೇವೆ. ಈ ಎಲ್ಲವುಗಳ ಸಾಹಿತ್ಯಲೋಕದಲ್ಲಿ ಹೊಸತನ ತರಬೇಕೆಂಬ ಪ್ರಯತ್ನಗಳಷ್ಟೇ.

ಆ ಎಲ್ಲವುಗಳ ಮುಂದುವರಿಕೆಯಾಗಿ ಇದೀಗ ಪುಸ್ತಕ ಸಂತೆ ಎಂಬ ಬಹುದೊಡ್ಡ ಯೋಜನೆ ಮೂಲಕ ಕನ್ನಡ ಪುಸ್ತಕೋದ್ಯಮಕ್ಕೆ ಕಸುವು ತುಂಬುವ ಪ್ರಯತ್ನ ಮಾಡುತ್ತಿದ್ದೇವೆ. ಸಾಹಿತ್ಯಲೋಕ ಪ್ರಕಾಶಿಸುವ ಮುನ್ನ ಪ್ರಕಾಶಕ ಪ್ರಕಾಶಿಸಬೇಕು. ದೊಡ್ಡದೊಡ್ಡ ಪ್ರಕಾಶಕರಿಗೆ ಇದರ ಅಗತ್ಯವಿಲ್ಲದೇ ಇರಬಹುದು. ನಮ್ಮ ಉದ್ದೇಶವನ್ನು ಅರಿತಿರುವ ಪತ್ರಿಕೆಗಳು, ಹಿರಿಯ ಪ್ರಕಾಶಕರು ಈಗಾಗಲೇ ನಮ್ಮ ಕೈಜೋಡಿಸಿದ್ದಾರೆ. ಸಪ್ನ, ಅಂಕಿತ, ನವಕರ್ನಾಟಕದಂತಹ ಹಿರಿಯ ಪ್ರಕಾಶಕರಂತೂ “ವ್ಯಾಪಾರವಾಗದಿದ್ದರೂ ಪರವಾಗಿಲ್ಲ, ಕನ್ನಡ ಪುಸ್ತಕಗಳು ಜನರಿಗೆ ಕಾಣುವಂತೆ ಮಾಡುತ್ತಿರುವ ಈ ಪ್ರಯತ್ನದ ಜೊತೆಗೆ ನಾವಿದ್ದೇವೆ” ಎಂದು ತಿಳಿಸಿದಾಗ ನಮ್ಮ ಉದ್ದೇಶದಲ್ಲಿ ಲೋಪವಿಲ್ಲವೆಂಬುದು ತಿಳಿಯಿತು. ಹಿರಿಯರು ಇಷ್ಟು ಕಾಳಜಿಯನ್ನು ಉದ್ಯಮದ ಬಗ್ಗೆ ಹೊಂದಿದ್ದಾರೆಂದರೆ ಕಿರಿಯರಿಗೆ ಅಸಾಧ್ಯಗಳನ್ನು ಸಾಧಿಸುವುದು ಕಷ್ಟವಾಗಲಾರದು.
(ಲೇಖಕರು ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಮಿಂಚಿನ ಸಂಚಾರವನ್ನು ಮೂಡಿಸುತ್ತಿರುವ ‘ವೀರಲೋಕ ಪ್ರಕಾಶನ’ದ ರೂವಾರಿ)
vmsrinivasa@gmail.com

andolanait

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

36 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

48 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

59 mins ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

1 hour ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago