ಹಾಡು ಪಾಡು

ವಿಲಾಯತಿ ನೆಲದಲ್ಲಿ ವಿನಾಯಿತಿಯ ಸಂಕ್ರಾಂತಿ

ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್

ಸಂಕ್ರಾಂತಿ, ಈ ವಿಲಾಯತಿ ನೆಲದಲ್ಲಿ ವಿನಾಯಿತಿ ಯಾಕಾಯಿತು ಎಂದು ಮೊದಲೇ ಹೇಳಿಬಿಡುವೆ. ಶಾಲೆ, ಆಫೀಸು, ಕಾಲೇಜುಗಳಿಗೆ ಬೆಳಿಗ್ಗೆ ಎದ್ದೋಡುವ ಮೊದಲು ಹಬ್ಬವನ್ನು ಹದವಾಗಿ ಆಚರಿಸಿ ಹೋಗುತ್ತೇವಲ್ಲ, ಹಾಗಾಗಿ ವಿಸ್ತಾರವಾದ ಹಬ್ಬದಾಚರಣೆಗೆ ತುಸು ವಿನಾಯಿತಿ ಅಂದೆ ಅಷ್ಟೇ.

ಕಳೆದ ಐದಾರು ವರ್ಷಗಳಲ್ಲಿ ನಾನು ಕೆಲಸ ಮಾಡುವ ಲಂಡನ್ನಿನ ಆಫೀಸು ಬಹಳಷ್ಟು ಬದಲಾಗಿದೆ. ನನ್ನೆದುರು ಕುಳಿತುಕೊಳ್ಳುವ ಇಲೆಕ್ಟ್ರಿಕಲ್ ಇಂಜಿನಿಯರ್ ಗೋವಾದವಳು. ಅವಳ ಪಕ್ಕದ ಜಾಗದಲ್ಲಿ ಕೂಡ್ರುವ ಮೆಕ್ಯಾನಿಕಲ್ ಇಂಜಿನಿಯರ್ ನೇಪಾಳದ ಬೂತ್ವಾಲದವನು.

ನ್ಯೂಝೀಲೆಂಡಿನ ಜೆರ್ರಿ, ಸಿಂಗಪೂರದ ದಹ್ಯಾನಿ, ಪೋರ್ಚುಗಲ್ ದೇಶದ ಪೆಡ್ರೋ ಇವರೆಲ್ಲರೂ ನಮ್ಮಲ್ಲಿ ಕೆಲಸ ಮಾಡುವವರೇ. ಹಾಗಾಗಿ ನಮ್ಮ ಕಚೇರಿಯೆಂದರೆ ಬಹುನಾಡು ಬಹುವೇಷ ಬಹುಭಾಷೆಯ ಸಮಾಗಮ. ಇಂತಿಪ್ಪ ಪರಿಸರದಲ್ಲಿ ನಮ್ಮೆಲ್ಲರ ಸಮ-ಪಾಕ ಸರಿದೂಗಿಸಲು ಇಂಗ್ಲಿಷರೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಏಷಿಯಾ ಖಂಡದ ಜನರು, ಅದರಲ್ಲೂ ಭಾರತೀಯರು ವರ್ಷಕ್ಕೆ ಇಪ್ಪತ್ತಾರು ಹಬ್ಬಗಳನ್ನು ಅದ್ಧೂರಿಯಾಗಿ ಮಾಡುವುದನ್ನೂ, ಆ ಹಬ್ಬಗಳಲ್ಲಿ ಬಗೆ ಬಗೆಯ ತಿಂಡಿ ತೀರ್ಥವನ್ನು ಪದ್ಧತಿಯ ಪ್ರಕಾರ ಮೆಲ್ಲುವುದನ್ನೂ ಇವರು ಅರಿತಿದ್ದಾರೆ. ಹಾಗಾಗಿಯೇ ‘ಈ ತಿಂಗಳು ಯಾವ್ಯಾವ ಹಬ್ಬಗಳಿವೆ? ನೆರವೇರಿಸುವ ಪೂಜೆಗಳೇನು? ಪೂಜೆಗಾಗಿ ಮಾಡುವ ತಿಂಡಿಗಳ ಹೆಸರೇನು?’ ಎಂದು ಪ್ರತಿ ತಿಂಗಳೂ ಕೇಳುವ ಪರಿಪಾಠವಿಟ್ಟುಕೊಂಡಿದ್ದಾರೆ. ಹೊಸ ಬಗೆಯ ತಿಂಡಿಯನ್ನು ತಪ್ಪದೇ ಆಫೀಸಿಗೆ ತರಬಾರದೇ ಎಂದು ನಯವಾಗಿ ಬೇಡಿಕೆಯಿಡುತ್ತಾರೆ. ವೀಕೆಂಡಿನಲ್ಲಿ ಯಾವುದಾದರೂ ಹಬ್ಬ ಹರಿದಿನ ಮುಗಿದೇ ಹೋದರೆ, ನಾನು ಸೋದರಮಾವನ ಮಗಳ ಮದುವೆ ಸಂಭ್ರಮ ತಪ್ಪಿ ಹೋದುದಕ್ಕೆ ಎಷ್ಟು ದುಃಖಪಟ್ಟೆನೋ ಅಷ್ಟೇ ದುಃಖವನ್ನು ಇವರೂ ಅನುಭವಿಸುತ್ತಾರೆ. ‘ಹಬ್ಬವನ್ನು ಶನಿವಾರ ಭಾನುವಾರ ಯಾಕೆ ಆಚರಿಸಿಬಿಟ್ಟೆ’ ಎಂದು ಗೋಳೇಗುಡುತ್ತಾರೆ. ಬಗ್ಗೋಣ ಪಂಚಾಂಗ, ಸೌರಮಾನ – ತಿರುಕುಳ ಪಂಚಾಂಗಗಳ ಬಗ್ಗೆ ನನಗೆಗೊತ್ತಿದ್ದ ವಿಷಯಗಳಿಗೆ ಇನ್ನಷ್ಟು ಕಾಲು ಬಾಲ ಸೇರಿಸಿ ವೀಕೆಂಡಿನಲ್ಲಿ ಹಬ್ಬ ಒಂದು ತಿಂಡಿ ತಪ್ಪಿದ ಬಗ್ಗೆ ಇವರ ದುಃಖವನ್ನು ಮರೆಸಲು ಪ್ರಯತ್ನಿಸುತ್ತೇನೆ.

ಪರಿಸ್ಥಿತಿ ಹೀಗೆಲ್ಲ ಇರುವಾಗ, ಸಂಕ್ರಾಂತಿ ಎನ್ನುವುದು ವರ್ಷಾವಧಿ ಹಬ್ಬಗಳ ಯಾದಿಯಲ್ಲಿ ಮೊದಲಿಗೆ ಬರುವ ಹಬ್ಬವಾದ್ದರಿಂದ ವಿನಾಯಿತಿ-ರಿಯಾಯಿತಿಯ ನಡುವೆಯೇ ಹಬ್ಬದಡುಗೆ ಮಾಡಿಯೇ ಮಾಡಿದ್ದೆ. ಖಾರದ ಹುಗ್ಗಿ ಹಾಗೂ ಸಿಹಿ ಹುಗ್ಗಿಗೆ ಸಾಕಾಗುವಷ್ಟು ಹೆಸರುಬೇಳೆ-ಅಕ್ಕಿಯನ್ನು ಒಮ್ಮೆಲೇ ಹುರಿದು, ಪುಡಿ ಬೆಲ್ಲವನ್ನು ಪಾಕಗೊಳಿಸಿ ಅದಕ್ಕಷ್ಟು ಎಳ್ಳು ಹುರಿದು ಹಾಕಿದಾಗ ಸಿಹಿ ಹುಗ್ಗಿ ತಯಾರಾಯಿತು. ಖಾರದ ಹುಗ್ಗಿ ತಯಾರಿಗೂ ತುಂಬ ಸಮಯ ಬೇಕಾಗಲಿಲ್ಲ. ಕೊಬ್ಬರಿ, ಎಳ್ಳು, ಬೆಲ್ಲ ಹಾಗೂ ಶೇಂಗಾ ಪುಡಿಯ ಮಿಶ್ರಣದಿಂದ ತಯಾರಿಸಿದ ಸಂಕ್ರಾಂತಿ ಸ್ಪೆಷಲ್ ಉಂಡೆ ತುಸು ಏರುಪಾಕವಾಯಿತು ನಿಜ. ಜಾಸ್ತಿ ತಲೆ ಕೆಡಿಸಿಕೊಳ್ಳದೇ ‘ಕ್ಯಾರಮಲೈಸ್ಡ್ ಕೊಕೊನಟ್ ಬಾಲ್ಸ್’ ಎಂದು ಮನಸ್ಸಿನಲ್ಲೇ ಹೆಸರನ್ನು ಉರು ಹೊಡೆದುಕೊಂಡೆ. ಹೊಸ ಹೆಸರಿನ ಖದರಿಗೇ ಅಡುಗೆ ಹದ ತಪ್ಪಿದ ಬೇಸರ ಮಾಯವಾಯಿತು.

ಬೆಳಬೆಳಿಗ್ಗೆ ಎರಡೆರಡು ಬಗೆಯ ಪೊಂಗಲುಗಳನ್ನು ನೋಡಿದ ಮಕ್ಕಳು ‘ಹ್ಯಾಪೀ ಸಂಕ್ರಾಂತಿಯ ಇವತ್ತು?’ ಎಂದು ಕೇಳಲಾಗಿ ‘ಹ್ಮ್, ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಅಮ್ಮನನ್ನು ಹ್ಯಾಪೀ ಆಗಿಡುವ ಸಂಕ್ರಾಂತಿ’ ಎಂದು ಅವುಗಳ ತಲೆ ಮೊಟಕಿದೆ. ಮಾಡಿದ ತಿನಿಸುಗಳನ್ನು ಬಾಕ್ಸಿನಲ್ಲಿ ಕಟ್ಟಿಕೊಂಡೆ. ನಮ್ಮಾಫೀಸಿನ ಮಹಾಜನಗಳು ಮಧ್ಯಾಹ್ನ ಲಂಚ್ -ಅವರಿನವರೆಗೆ ಕಾಯುವ ವ್ಯವಧಾನ ತೋರಲಿಲ್ಲ.

ಹತ್ತೂವರೆಯ ಚಹಾದ ವೇಳೆಗೆ ‘ಕ್ಯಾರಮಲೈಸ್ಡ್ ಕೊಕೊನಟ್ ಬಾಲ್ಸ್’ ಮುಗಿದೇ ಹೋದವು. ನಂತರ ಮೈಕ್ರೋವೇವಿನಲ್ಲಿ ಬಿಸಿ ಮಾಡಿಟ್ಟ ಸಿಹಿ ಹಾಗೂ ಖಾರದ ಹುಗ್ಗಿಯೂ ಖಾಲಿಯಾಗಲು ಜಾಸ್ತಿ ಸಮಯ ತೆಗೆದುಕೊಳ್ಳಲಿಲ್ಲ. ಬಹುಶಃ ಈ ಹುಗ್ಗಿಯನ್ನು ಹೇಗೆ ಮಾಡುವುದು ಎಂಬುದನ್ನು ವಿಷದವಾಗಿ ಹೇಳಲು ನಾನು ತೆಗೆದುಕೊಂಡ ಸಮಯವೇ ಹೆಚ್ಚಿರಬಹುದು. ಮನೆಗೆ ಹೋಗಿ ಮಾಡಿಯೇಬಿಟ್ಟಾರು ಎಂಬಷ್ಟು ಆಸ್ಥೆಯಿಂದ ನಾನು ಹೇಳುವ ರೆಸಿಪಿಗಳನ್ನು ಕೇಳುವ ಈ ಸದ್ಗ್ತ್ಯೃಹಸ್ಥ ಗೃಹಿಣಿಯರೆಲ್ಲ ಮುಂದಿನ ವರ್ಷ ಮತ್ತೆ ಆಫೀಸಿಗೆ ಬರಲಿರುವ ಹುಗ್ಗಿ – ಕಾಯುಂಡೆಗಾಗಿ ಕಾಯುವವರೇ ಹೊರತಾಗಿ ಮಾಡುವವರಂತೂ ಅಲ್ಲ ಎಂಬ ಸತ್ಯವನ್ನು ಇತ್ತೀಚೆಗೆ ಅರಿತಿದ್ದೇನೆ

” ತಿಂಗಳೆರಡು ಕಳೆದು ಬರುವ ಯುಗಾದಿಗೆ ಯಾವೆಲ್ಲ ತಿಂಡಿ ಮಾಡಿ ಹಬ್ಬದ ಮಜಕೂರನ್ನು  ಇವರಿಗೆ ವಿವರಿಸಲಿ ಎಂದು ಆಲೋಚಿಸುತ್ತಿದ್ದೇನೆ!”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನತಂತ್ರಕೆ ಮಾರಕ!

ಜನತಂತ್ರಕೆ ಮಾರಕ! ದೊರಕಬೇಕು ಪ್ರತಿಪ್ರಜೆಗೂ ಘನತೆಯ ಬದುಕು ಸಮಾನ ಅವಕಾಶ ಅದುವೇ ಜನತಂತ್ರದ ಚೆಲುವು! ಕಡಿಮೆಯಾಗಲೇಬೇಕು ಬಡವ-ಬಲ್ಲಿದನ ಅಂತರ ಜನತಂತ್ರಕೆ…

1 hour ago

ಓದುಗರ ಪತ್ರ: ದೇವಸ್ಥಾನ ಅಭಿವೃದ್ಧಿಪಡಿಸಿ

ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದ್ದು, ಸೂಕ್ತ ನಿರ್ವಹಣೆಯಿಲ್ಲದೇ ದೇವಾಲಯದ ಸುತ್ತಲೂ ಗಿಡ ಗಂಟಿಗಳು…

1 hour ago

ಓದುಗರ ಪತ್ರ: ಮೌಲ್ಯಯುತ ರಾಜಕಾರಣಿ ಭೀಮಣ್ಣ ಖಂಡ್ರೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಹಿರಿಯ ರಾಜಕೀಯ ಮುತ್ಸದ್ದಿ, ಭೀಮಣ್ಣ ಖಂಡ್ರೆಯವರ…

1 hour ago

ಓದುಗರ ಪತ್ರ: ಕುಕ್ಕರಹಳ್ಳಿ ಕೆರೆಯ ಬಳಿ ವಿದ್ಯುತ್ ದೀಪ ಬೆಳಗಲಿ

ಮೈಸೂರು ವಿಶ್ವವಿದ್ಯಾನಿಲಯದ ಒಡೆತನದಲ್ಲಿರುವ ಕುಕ್ಕರಹಳ್ಳಿ ಕೆರೆ ಪರಿಸರದಲ್ಲಿ ವಾಯುವಿಹಾರ ಮಾಡುವುದಕ್ಕೆ ಪ್ರತಿದಿನ ನೂರಾರು ಜನರು ಬರುತ್ತಾರೆ. ಕೆಲವು ವಿಶೇಷ ದಿನಗಳಲ್ಲಿ…

1 hour ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಯುಡಿಎಫ್, ಎಲ್ ಡಿಎಫ್ ಜತೆ ಬಿಜೆಪಿ ಓಡಲಿದೆಯೇ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಇದು ಧರ್ಮರಾಜಕಾರಣದ ಕಾಲ. ಧರ್ಮ ಮತ್ತು ರಾಜಕಾರಣ ಬೇರೆ ಬೇರೆ. ಇವೆರಡು ಪ್ರತ್ಯೇಕವಾಗಿರಬೇಕು ಎನ್ನುವುದು…

1 hour ago

ಮಡಿಕೇರಿ ನಗರದಲ್ಲಿಲ್ಲ ಸುಸಜ್ಜಿತ ಫುಟ್‌ಪಾತ್‌ ವ್ಯವಸ್ಥೆ

ವಾಹನಗಳು, ಪಾದಚಾರಿಗಳು ಒಂದೇ ಪಥದಲ್ಲಿ ಓಡಾಡುವ ಪರಿಸ್ಥಿತಿ; ಅಗಲೀಕರಣಕ್ಕೆ ಜಾಗದ್ದೇ  ಸಮಸ್ಯೆ ಮಡಿಕೇರಿ: ಮಡಿಕೇರಿ ನಗರದಲ್ಲಿ ಪಾರ್ಕಿಂಗ್ ಸ್ಥಳವಿಲ್ಲದೇ ನಲುಗುತ್ತಿರುವ…

1 hour ago