ಹಾಡು ಪಾಡು

ಪ್ರೊಫೆಸರ್ ಬೋರಲಿಂಗಯ್ಯನವರ ಸೈಕಲ್ಲು ಪ್ರೇಮ

• ಕೀರ್ತಿ ಬೈಂದೂರು
ಅಧ್ಯಾಪನ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು, ಮೈಸೂರಿನಲ್ಲಿ ನೆಲೆಸಿ ಹಲವು ದಶಕಗಳೇ ಕಳೆದರೂ ಹಳ್ಳಿ ಬದುಕಿನ ಸಹಜವಾದ ಮುಗ್ಧತೆ ಸಮಾಜವಾದಿ ಎನ್. ಬೋರಲಿಂಗಯ್ಯನವರದು, ಸಮಾಜವನ್ನು ಆಶಾಭಾವದಿಂದ ಕಾಣುವ ಅಪರೂಪದ ಹಿರಿಯ ಜೀವ, ಸಾಹಿತ್ಯ – ಸಾಹಸ, ಬದುಕು – ಯಾನ ಎಲ್ಲದರೊಂದಿಗೆ ಸರಳ ಜೀವನಕ್ರಮವನ್ನೇ ರೂಢಿಸಿಕೊಂಡಿದ್ದರೂ ಬದುಕನ್ನು ಅಪ್ಪಟವಾಗಿ ಪ್ರೀತಿಸುವ ಇವರು ಈ ಕಾಲದ ಸಾಕ್ಷಿಪ್ರಜ್ಞೆ.

ಬೋರಲಿಂಗಯ್ಯ ಅವರು ಚಿಕ್ಕವರಿರುವಾಗ ತಮ್ಮ ಓದನ್ನು ಪ್ರಾರಂಭಿಸಿದ್ದು, ಕೂಲಿಮಠದಲ್ಲಿ. ಕೂಲಿಮಠಗಳಲ್ಲಿ ಹೇಗೆಂದರೆ ಊರಿನ ಮುಖ್ಯಸ್ಥರೆಲ್ಲ ಸೇರಿ ಓದಿದ ಒಬ್ಬನನ್ನು ಶಿಕ್ಷಕನಾಗಿ ನೇಮಿಸುತ್ತಾರೆ. ಊರಿನ ಹುಡುಗರೆಲ್ಲ ಅವರ ಬಳಿಗೆ ಹೋಗಿ, ಓದನ್ನು ಆರಂಭಿಸಬೇಕು. ಪ್ರತೀ ತಿಂಗಳು ಒಂದೊಂದು ಮನೆಯವರು ಆ ಶಿಕ್ಷಕನಿಗೆ ಒಂದು ರೂಪಾಯಿಯನ್ನು ಸಂಬಳವಾಗಿ ನೀಡಬೇಕೆಂಬುದು ಒಡಂಬಡಿಕೆ. ಇವರ ಊರಿಗೆ ಮಾಚನಾಯಕನಹಳ್ಳಿಯಿಂದ ಬಂದ ಮೂಡ್ಲುಗಿರಿಯಪ್ಪ ಎಂಬವರು ಶಿಕ್ಷಕರಾಗಿದ್ದರು. ಸಾಹಿತ್ಯದ ಆಸಕ್ತಿಗಳನ್ನು ಚಿಗುರೊಡೆಸಿದ್ದು ಇವರೇ ಎಂದು ಬೋರಲಿಂಗಯ್ಯ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಪದವಿಯ ಹಂತದ ಆರಂಭದಲ್ಲಿ ಓದಿದ ಕೃತಿಯೇ ಕುವೆಂಪು ಅವರ ‘ಕಾನೂರು ಹೆಗ್ಗಡತಿ’. ಆ ಪುಸ್ತಕ ಇವರನ್ನೆಷ್ಟು ಆವರಿಸಿತೆಂದರೆ ‘ಶ್ರೀರಾಮಾಯಣ ದರ್ಶನಂ’ ಕೃತಿಯನ್ನು ಓದಿಸಿತು. ಕುವೆಂಪು ಮತ್ತು ಕಾರಂತರ ಸಾಹಿತ್ಯವನ್ನು ಓದಿದ್ದ ಬೋರಲಿಂಗಯ್ಯ ಅವರಿಗೆ ಅನಿಸಿದ್ದು, ಆಧ್ಯಾತ್ಮದ ಕಡೆಗೆ ಕುವೆಂಪು ಒಲವು ಬೀರಿದ್ದರೆ, ಕಾರಂತರ ಚಿತ್ತ ಜೀವನದ ಕಡೆಗೇ ಇತ್ತು. ಆದರೆ, ಕುವೆಂಪು ಅವರು ಇವರಿಗೆ ಹೆಚ್ಚಾಗಿ ಆತ್ಮೀಯರಾದರು. ಆತ್ಮೀಯತೆಯ ಕಾರಣವೇ ಕಾವ್ಯ. ಚಿಕ್ಕಂದಿನಿಂದಲೂ ಕಾವ್ಯವನ್ನು ಇಷ್ಟಪಡುತ್ತಿದ್ದ ಬೋರಲಿಂಗಯ್ಯ ಅವರಿಗೆ ಕುವೆಂಪು ಹತ್ತಿರವಾದದ್ದು, ಈ ಕಾವ್ಯಭಾಷೆಯಿಂದ. ಕುವೆಂಪು ಎಂದರೆ ಇವರ ಪಾಲಿಗೆ ನಿಜದ ದೇವರು. ಪ್ರೇಮ, ಕರುಣೆ, ದಯೆ ತುಂಬಿಕೊಂಡವರನ್ನು ದೇವರೆನ್ನದೆ ಇನ್ನೇನು ಹೇಳಲು ಸಾಧ್ಯ?

ಕುವೆಂಪು ಅವರನ್ನು ನೆನಪಿಸಿಕೊಳ್ಳುವಾಗ ಬೋರಲಿಂಗಯ್ಯನವರ ಕಣ್ಣುಗಳು ತುಂಬಿಕೊಳ್ಳುತ್ತವೆ. ಕುವೆಂಪು ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಟಿ. ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ ಮುಂತಾದವರೆಲ್ಲ ಸೇರಿ ಚಾಮುಂಡಿ ಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದರು. ಚಪ್ಪಲಿ ತೆಗೆದು ಪಕ್ಕಕ್ಕಿಟ್ಟ ಟಿ.ಎಸ್. ವೆಂಕಣ್ಣಯ್ಯ ಅವರು ‘ಪುಟ್ಟಪ್ಪ, ನೀನ್ ಬರೋಲ್ವೆ?” ಎಂದರು.

ಅದಕ್ಕೆ ಕುವೆಂಪು
ಅವರು ಕಣ್ಣ ಸನ್ನೆಯಲ್ಲೇ “ನೀವೆಲ್ಲ ಹೋಗಿ ಬನ್ನಿ, ನಾನಿಲ್ಲೇ ಇದ್ದು ಚಪ್ಪಲಿ ಕಾಯ್ತಿನಿ’ ಎಂದ ಘಟನೆ ಮತ್ತು ಹೇಮಾವತಿ ಅವರು ತೀರಿದ ಸಂದರ್ಭದಲ್ಲಿ ಹೆಂಡತಿಯ ಪಾದಗಳಿಗೆ ಕುವೆಂಪು ಅವರು ನಮಸ್ಕರಿಸಿದ ಘಟನೆಗಳೊಂದಿಗೆ ಕುವೆಂಪು ಒಡನಾಟದ ಪರಿಯನ್ನು ನೆನಪುಮಾಡಿಕೊಳ್ಳುತ್ತಾರೆ.

ಸಾಹಿತ್ಯವನ್ನು ಪ್ರೀತಿಸಿದಷ್ಟೇ ಬೋರಲಿಂಗಯ್ಯ ಅವರು ಕೃಷಿಯನ್ನೂ ಪ್ರೀತಿಸುತ್ತಾರೆ. ಹಿಂದೆ ಮನೆಯಲ್ಲೇ ಕೃಷಿ ಮಾಡಿಕೊಂಡು, ಹಸುಗಳನ್ನು ಸಾಕುತ್ತಿದ್ದರು. ಇದು ಎಷ್ಟರ ಮಟ್ಟಿಗಿತ್ತೆಂದರೆ, ಬೋರಲಿಂಗಯ್ಯ ಅವರ ಮನೆ ಹುಡುಕಲು ಇಲ್ಲದ ತಾಪತ್ರಯ ಪಟ್ಟು, ಆಚೀಚೆ ಮನೆಯವರಲ್ಲಿ ಕೇಳಿದರೆ, “ಓಹ್, ಹಸು ಸಾಕಿದವ್ರ ಮನೆಯಾ?’ ಎನ್ನುವುದೇ ಪ್ರಸಿದ್ಧಿಯಾಯಿತು. ಈಗದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣಕ್ಕಾಗಿ ನಿಲ್ಲಿಸಿದ್ದಾರೆಯೇ ಹೊರತು, ಮತ್ತೆ ಆರಂಭಿಸುವ ತುಡಿತವಂತೂ ಇದ್ದೇ ಇದೆ. ಸ್ವಲ್ಪ ಸ್ವಲ್ಪ ಜಾಗ ಸಿಕ್ಕರೂ ಸಾಕು, ಅದರಲ್ಲಿ ಸಣ್ಣ ತೋಟ ಮಾಡಿ, ಒಬ್ಬ ಮನುಷ್ಯ ತನಗೆಷ್ಟು ಆಹಾರ ಬೇಕೋ ಅದನ್ನು ತಾನೇ ಬೆಳೆದುಕೊಳ್ಳಬಹುದು ಎನ್ನುತ್ತಾರೆ.

ವಯಸ್ಸು ಎಂಬತ್ತೈದು ದಾಟಿದರೂ ಸೈಕಲ್ ಸವಾರಿ ಮಾಡುವುದೆಂದರೆ ಇವರಿಗೆ ಇಷ್ಟದ ಕಾರ್ಯ. ಇವತ್ತಿನವರೆಗೂ ಯಾವುದೇ ಫೋನ್ ಅನ್ನು ಉಪಯೋಗಿಸಿಯೇ ಇಲ್ಲ ಎಂದರೆ ನೀವು ನಂಬಲೇಬೇಕು! ಸೈಕಲ್‌ ನಿಂದಲೇ ಲಕ್ಷಾಂತರ ರೂಪಾಯಿಗಳನ್ನು ಉಳಿಸಿರುವ ಜೊತೆಗೆ ಆರೋಗ್ಯವೂ ಸುಧಾರಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇವರ ಬದುಕಿನಲ್ಲಿ ಸೈಕಲ್ ಕೇವಲ ವಸ್ತುವಲ್ಲ; ಅವಿಭಾಜ್ಯ ಅಂಗ
ಹನ್ನೆರೆಡು ವರ್ಷವಿರುವಾಗ ವಾನಂಬಾಡಿ ಸೈಕಲ್ ಕಲಿತಿದ್ದು ಮಾತ್ರವಲ್ಲ, ಹದಿನೇಳನೇ ವರ್ಷಕ್ಕೆ ತುರುವೇಕೆರೆಯಿಂದ ಸಂತೆಬಾಚಳ್ಳಿಯ ತನಕ ಅಂದರೆ ಸುಮಾರು 50ರಿಂದ 60 ಕಿ.ಮೀ.ವರೆಗೆ ಸೈಕಲ್ ತುಳಿದಾಟವೂ ಆಯಿತು.

ಮನೆಯಲ್ಲಿ ಇತರೆ ವಾಹನಗಳಿದ್ದರೂ ಸೈಕಲ್ ಎಂದರೆ ಇವರಿಗೆ ಅಚ್ಚುಮೆಚ್ಚು, ಕಾಲಿನ ತುಳಿತದ ವೇಗದಲ್ಲಿ ಖುಷಿ ಹೆಚ್ಚು ಜೊತೆಗೆ ಬ್ರೇಕ್ ಅಥವಾ ಕಾಲಲ್ಲೇ ಆರಾಮಾಗಿ ನಿಲ್ಲಿಸಬಹುದಾದ ವ್ಯವಸ್ಥೆ ಇರುವುದು ಸೈಕಲ್‌ನಲ್ಲಿ ಮಾತ್ರ ಒಮ್ಮೆ ಹೆಂಡತಿಯನ್ನೂ ಕೂರಿಸಿಕೊಂಡು ಹೋಗಿದ್ದರ ನೆನಪನ್ನು ಅವರು ಸಂಭ್ರಮಿಸುತ್ತಾರೆ. ಬಲ ಕಣ್ಣು ಮಂಜಾಗಿ ಕಾಣಿಸುತ್ತಿದ್ದರೂ ಯೋಚಿಸದೆ, ಇವತ್ತಿಗೂ ಬೆಳಿಗ್ಗೆ ಆರು ಗಂಟೆಯ
ಹೊತ್ತಿಗೆ ತಮ್ಮ ದಾರಿದೀಪ ಸಂಸ್ಥೆಯೆಡೆಗೆ ಸೈಕಲ್ ಸವಾರಿ ಮಾಡುತ್ತಾರೆ. ಒಂದು ಗಂಟೆ ಅಲ್ಲೇ ಇದ್ದು, ತೋಟದ ಕೆಲಸ ನಿರ್ವಹಿಸಿ, 7 ಗಂಟೆಯ ಹೊತ್ತಿಗೆ ಮನೆಗೆ ಮರಳುವುದು ರೂಢಿಸಿಕೊಂಡ ದಿನಚರಿ.
ಬೋರಲಿಂಗಯ್ಯ ಅವರ ವಿಶೇಷತೆ ಇರುವುದೇ ಅವರ ಜೀವನಶೈಲಿಯಲ್ಲಿ.

ಆರೋಗ್ಯದ ಗುಟ್ಟು ಕೇಳಿದರೂ ಅದನ್ನೇ ಹೇಳುತ್ತಾರೆ. ಬೆಳಿಗ್ಗೆ 100 ಗ್ರಾಂನಷ್ಟು ಕೊಚ್ಚಲಕ್ಕಿ ಅನ್ನ ಮಧ್ಯಾಹ್ನರಾಗಿ ಮುದ್ದೆ ಸಂಜೆಯ ಹೊತ್ತಿಗೆ ಚಪಾತಿ, ಇವರ ಆಹಾರ ಪದ್ಧತಿಯಿದು. ಕಾಫಿ, ಟೀ ಸೇವನೆಯ ಯಾವ ರೂಢಿಯನ್ನೂ ಮಾಡಿಕೊಂಡಿಲ್ಲ. ನೀರಿನ ಬಳಕೆಯಲ್ಲೂ ಕಟ್ಟುನಿಟ್ಟಾದ ಪಾಲನೆ, ದಿನಕ್ಕೆ ಮೂರು ಲೀಟರ್‌ನಷ್ಟು ಬಿಸಿ ನೀರನ್ನು ಕುಡಿದರೆ, ಸ್ನಾನಕ್ಕೆ ಕೇವಲ ಒಂದೂವರೆ ಲೀಟರ್ ಮಾತ್ರ ಉಪಯೋಗಿಸುತ್ತಾರೆ.

ಸೊಪ್ಪಿನ ರಸವನ್ನು ದೇಹಕ್ಕೆ ಲೇಪಿಸಿ, ಒದ್ದೆ ಬಟ್ಟೆಯ ಸಹಾಯದಿಂದ ಒರೆಸಿಟ್ಟುಕೊಂಡರೆ ಯಾವುದೇ ಚರ್ಮ ಕಾಯಿಲೆಯೂ ಬರುವುದಿಲ್ಲ ಎಂದು ತಮ್ಮ ಬದುಕನ್ನೇ ಆಧರಿಸಿ ಹೇಳುತ್ತಾರೆ. ನಾವೇ ತುಳಿಯಬಲ್ಲ ಸೈಕಲ್ ಮತ್ತು ಹೊಲಿಗೆ ಯಂತ್ರದಲ್ಲಿ ಇವರು ಗಾಂಧಿಯ ಆಧ್ಯಾತ್ಮವನ್ನು ಕಾಣುತ್ತಾರೆ. ಸೈಕಲನ್ನು ಜೀವದ ಗೆಳೆಯ/ ಗೆಳತಿಯಾಗಿಸಿಕೊಳ್ಳಿ ಎಂಬುದೇ ಅವರು ಯುವಕರಿಗೆ
ನೀಡುವ ಸಂದೇಶ.

ಬದುಕಿನಲ್ಲಿ ಪಡೆಯಬಹುದಾದದ್ದೆಲ್ಲವನ್ನೂ ಪಡೆದಿದ್ದೇನೆ ಎಂಬುದರಲ್ಲಿ ಇವರಿಗೆ ಬದುಕಿನ ಬಗೆಗೆ ಸಂತೃಪ್ತಿಯ ಭಾವವಿದೆ. ಜಗತ್ತಿನಲ್ಲಿ ಪರಮಸುಖಿಗಳು ಎಂದು 10 ಜನರನ್ನು ಗುರುತಿಸಿದರೆ, ನಾನೂ ಒಬ್ಬ. 5 ಜನರಾದರೂ, ಅಷ್ಟೇ ಯಾಕೆ ಒಬ್ಬನೇ ಅಂತಿದ್ದರೆ ‘ಆ ಪರಮಸುಖಿ ನಾನೇ’ ಎನ್ನುವ ಮಾತೇ ಇವರ ಸಂತೃಪ್ತ ಬದುಕಿನ ಸೂತ್ರ
ಬೋರಲಿಂಗಯ್ಯ ಅವರ ಜೀವನದಲ್ಲಿ ಬಾಳಸಂಗಾತಿ ಸರಸ್ವತಿಯವರ ಪಾತ್ರ ಬಹಳ ಹಿರಿದು. ಇವರಂತೆಯೇ ಅವರೂ ಕೂಡ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ವರು. ಮದುವೆಯಾದ ಮೇಲೆ, ಇವರ ತತ್ತಗಳಿಗೆ ಹೊಂದಿಕೊಂಡು ಬದುಕು ಸಾಗಿಸುವುದಕ್ಕೆ 10 ವರ್ಷಗಳು ಬೇಕಾದರೂ ಸರಳತೆಯೊಂದಿಗೆ ಸಹಬಾಳ್ವೆಯೂ ಮುಖ್ಯ ಎಂಬುದು ಸರಸ್ವತಿ ಅವರ ಮಾತು, ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಆಗುತ್ತಿರುವುದನ್ನು ಕಂಡ ಬೋರಲಿಂಗಯ್ಯ ಅವರು ‘ಯಾರಿಗೆಲ್ಲ ಊಟಕ್ಕೆ ಸಮಸ್ಯೆ ಆಗ್ತಿದ್ಯೋ ಅವೆಲ್ಲ ನಮ್ಮನೆಗೆ ಬನ್ನಿ’ ಎಂದು ತರಗತಿಯಲ್ಲಿ ನೇರವಾದ ಹೇಳಿಕೆಯನ್ನೇನೊ ನೀಡಿದರು. ಮನೆಗೆ ಬರುವ ಅಷ್ಟೂ ವಿದ್ಯಾರ್ಥಿಗಳ ಊಟದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದು ಮಾತ್ರ ಸಂಗಾತಿ ಸರಸ್ವತಿ ಅವರು. keerthisba2018@gmail.com

andolana

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago