ಮೀನಾ ಗೋಪಾಲಕೃಷ್ಣ
krishnanukg@gmail.com
ಈ ತಿಂಗಳ ಐದನೆಯ ತಾರೀಖು ಮುಂಜಾವ ನಮ್ಮ ಪ್ರೀತಿಯ ಪ್ರಿನ್ಸಿ ಇಲ್ಲ ಎಂದು ಗೊತ್ತಾದಾಗ ನಮ್ಮೆಲ್ಲರ ದುಃಖದ ಕಟ್ಟೆ ಒಡೆದಿತ್ತು. ‘ಇನ್ನು ನಿಮ್ಮ ಪ್ರಿನ್ಸಿ ಇರುವುದು ಕೆಲವೇ ಗಂಟೆಗಳು ಮಾತ್ರ’ ಎಂದು ವೈದ್ಯರು ಹೇಳಿದಾಗ ಬೆಂಗಳೂರಿನಲ್ಲಿದ್ದ ಮಗಳು ಓಡಿ ಬಂದಿದ್ದಳು. ಅವಳ ಬರುವಿಕೆಗಾಗಿಯೇ ಕಾದಿದ್ದವಳಂತೆ ಪ್ರಿನ್ಸಿ ಮಗಳ ಮಡಿಲಲ್ಲಿ ಪ್ರಾಣಬಿಟ್ಟಳು.
ಪ್ರಿನ್ಸಿ ನಮ್ಮ ಮನೆಗೆ ಬಂದಾಗ ಇನ್ನೂ ನಾಲ್ಕು ತಿಂಗಳ ಕೂಸು. ಮಗಳ ಒತ್ತಾಯ ತಡೆಯಲಾಗದೆ ಪರಿಚಯದವರಿಂದ ತರಿಸಿಕೊಂಡಿದ್ದೆವು. ತಂದುಕೊಟ್ಟವರು, ‘ಅದಕ್ಕೊಂದು ಹೆಸರಿಟ್ಟು ಮೂರು ಬಾರಿ ಕಿವಿಯಲ್ಲಿ ಹೇಳಿ’ ಎಂದಾಗ ಮೂರು ಬಾರಿ ಅದರ ಕಿವಿಯಲ್ಲಿ ಪ್ರಿನ್ಸಿ ಎಂದು ಉಸುರಿದ್ದೆ. ಅದು ನನಗೆ ಆಗ ತೋಚಿದ ಹೆಸರು. ಆ ಹೆಸರಿಡಲು ಬೇರೆ ಯಾವ ಕಾರಣವೂ ಇರಲಿಲ್ಲ. ಆದರೆ ಆಕೆ ತನಗಿಟ್ಟ ಹೆಸರಿನ ಹಾಗೆ ರಾಜಕುಮಾರಿಯೇ ಆಗಿದ್ದಳು.
ಹಾಗೆ ನೋಡಿದರೆ ನನಗೆ ನಾಯಿಮರಿ ಮನೆಗೆ ತರುವುದು ಸ್ವಲ್ಪವೂ ಸ್ವಲ್ಪವೂ ಇಷ್ಟವಿರಲಿಲ್ಲ. ನಾವು ತೋರಿಸೋ ಇಷ್ಟೇ ಇಷ್ಟು ಪ್ರೀತಿಗೆ ಬದಲಾಗಿ ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಮತ್ತು ನಿಯತ್ತು ತೋರಿಸುವ ಇವುಗಳು ಅಲ್ಪಾಯುಷಿಗಳಾಗಿರುವುದರಿಂದ ಬದುಕಿರುವ ನಮ್ಮನ್ನು ದುಃಖದಲ್ಲಿ ಮುಳುಗಿಸಿ ಹೋಗುತ್ತವೆ ಅನ್ನುವುದೇ ಇದಕ್ಕೆ ಕಾರಣವಾಗಿತ್ತು.
ಮಾತು ಬಾರದ ಮೂಕ ಜೀವಿಗಳನ್ನು ಸಾಕುವ ಅರ್ಹತೆ ನಮಗೆ ಬರಬೇಕಾದರೆ ಅವುಗಳು ಮಾತಿಲ್ಲದೆ ಹೊರಹಾಕುವ ಭಾವನೆಗಳನ್ನ ಅರ್ಥ ಮಾಡಿಕೊಳ್ಳುವ ಶಕ್ತಿ ನಮಗಿರಬೇಕು. ಪಕ್ಕದವರ ಮನೆಯಲ್ಲಿ ನಾಯಿಯೊಂದನ್ನು ತಂದಿದ್ದಾರೆ ನಮ್ಮ ಮನೆಯಲ್ಲಿ ಒಂದು ಇರಲಿ ಎಂಬ ಪ್ರತಿಷ್ಠೆಗೋ ನಾಯಿ ಮರಿ ಹಾಕಿದರೆ ಮಾರಿ ಹಣ ಸಂಪಾದಿಸಬಹುದು ಅನ್ನುವ ದುರಾಸೆಗೊ ಸಾಕಿದರೆ ಅದಕ್ಕಿಂತ ದೊಡ್ಡ ಕ್ರೌರ್ಯ ಬೇರೆ ಇಲ್ಲ.
ಹೆತ್ತು ಹೊತ್ತು ಸಾಕಿ ಸಲಹಿದ ಮಕ್ಕಳೇ ನಾವು ಬೈದದ್ದುಒಂದು ಸಣ್ಣ ಬೈಗುಳವಾದರೂ, ಕೊಟ್ಟದ್ದು ಒಂದು ಪುಟ್ಟ ಪೆಟ್ಟಾದರೂ ವರ್ಷಗಟ್ಟಲೆ ನೆನಪಿನಲ್ಲಿಟ್ಟುಕೊಂಡು ಲೆಕ್ಕ ಚುಕ್ತಾ ಮಾಡುತ್ತಾರೆ. ನಾವು ಕೊಟ್ಟ ಅಷ್ಟೂ ಪ್ರೀತಿಯನ್ನು ಮರೆತೇಬಿಟ್ಟಿರುತ್ತಾರೆ. ಆದರೆ ನೀಯತ್ತಿನ ಈ ಮೂಕ ಜೀವಿಗಳು ಅನ್ನ ನೀಡಿದ ಮನೆಯ ಪ್ರೀತಿಯ ತುತ್ತಿನ ಲೆಕ್ಕ ಮಾತ್ರ ಇಟ್ಟುಕೊಳ್ಳುತ್ತವೆ. ಸಿಕ್ಕ ಪೆಟ್ಟುಗಳನ್ನು ಸದಾ ಮನಸ್ಸಿನೊಳಗೇ ಇಟ್ಟುಕೊಂಡು ಕ್ಷಮಿಸುತ್ತವೆ. ಪ್ರೀತಿಸುವ ಹೃದಯಗಳಿಗಾಗಿ ಸಾವನ್ನು ಬೇಕಾದರೂ ಹೊಕ್ಕು ಬರುವ ಮನಸ್ಥಿತಿ ಅವುಗಳದು. ಹತ್ತಿರದವರು ಒಂದಿಷ್ಟು ದೂರ ಹೋಗುವರು ಎನ್ನುವ ಸಣ್ಣ ಸುಳಿವು ಸಿಕ್ಕರೂ ಮರುಗುತ್ತವೆ. ಮಾತಿಲ್ಲದ ಅವುಗಳ ಕಣ್ಣಲ್ಲಿ ಕಾಣುವ ನೋವು ನಿರಾಸೆ, ಸಂತಸಗಳನ್ನು ಅರಿಯುವ ಮನಸ್ಸು ನಮ್ಮಲ್ಲಿದ್ದರೆ ಸಾಕು. ಬೇಕಾದರೆ ಜಗತ್ತನ್ನೇ ಗೆದ್ದು ತಂದು ನಿಮ್ಮ ಮುಂದೆ ಇಡುವೆ ಎನ್ನುವ ಅವರ ಮಾತುಗಳನ್ನು ನಾವು ಆಲಿಸಲು ಸಾಧ್ಯವಾಗುತ್ತದೆ.
ಹೀಗೆ ನಮ್ಮ ಮನೆಯ ಉಸಿರಿನ ಹಾಗೆ ಇದ್ದ ಪ್ರಿನ್ಸಿಯ ಹೊಟ್ಟೆಯಲ್ಲಿ ಕ್ಯಾನ್ಸರ್ ಗೆಡ್ಡೆಯೊಂದು ಬೆಳೆಯುತ್ತಿದೆ ಎಂದು ತಿಳಿದಾಗ ಇದನ್ನು ಆಕೆಗೆ ಹೇಗೆ ತಿಳಿಸುವುದು ಎಂದು ಗೊತ್ತಾಗದೆ ನಾವು ಮೂಕರಾದೆವು. ಆದರೆ ತನಗೆ ಇದು ಗೊತ್ತು ಎಂಬಂತೆ ಪ್ರಿನ್ಸಿ ಸಾವಿನ ಜೊತೆ ಒಂದುವರೆ ವರ್ಷಗಳ ಕಾಲ ಸದ್ದಿಲ್ಲದೆ ಹೋರಾಡಿದಳು. ನಮಗೆ ಒಂದಿನಿತೂ ತ್ರಾಸು ಕೊಡದೆ ಮೌನವಾಗಿ ಸಾವಿನೊಡನೆ ಸೆಣಸುತ್ತಾ ತನ್ನ ಉಸಿರಾಟ ನಿಲ್ಲಿಸಿದಳು. ಇಷ್ಟು ಶಾಂತಿಯುತವಾಗಿ ನಮ್ಮನ್ನು ಬಿಟ್ಟುಹೋದ ಪ್ರಿನ್ಸಿಗೆ ಅಷ್ಟೇ ಗೌರವಪೂರ್ಣ ವಿದಾಯ ಹೇಳುವುದು ಹೇಗೆ ಮತ್ತು ಎಲ್ಲಿ ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದು ಉಮೇಶ್ ಅವರ ಬೌ ಬೌ ರೆಸಾರ್ಟ್. ಉಮೇಶ್ ಎನ್ನುವ ಈ ಶ್ವಾನಪ್ರಿಯ ಮನೆಯಲ್ಲಿ ಮನುಷ್ಯರಿಗಿಂತಾ ಪ್ರೀತಿ ವಿಶ್ವಾಸದಿಂದ ಇದ್ದು ಸಾವನ್ನಪ್ಪುವ ಶ್ವಾನಗಳಿಗೂ ಗೌರವಯುತವಾದ ವಿದಾಯ ಹೇಳಲೇಬೇಕು ಅನ್ನುವ ನಿಟ್ಟಿನಲ್ಲಿ ಹೆಚ್ ಡಿ ಕೋಟೆ ಹೋಗುವ ಮಾರ್ಗದಲ್ಲಿ ಸಿಗುವ ಉದ್ಬೂರಿನಲ್ಲಿ ಒಂದಿಷ್ಟು ಜಮೀನನ್ನು ಗುತ್ತಿಗೆಗೆ ಪಡೆದು ಶ್ವಾನಗಳ ಅಂತ್ಯಸಂಸ್ಕಾರಕ್ಕೆ ಸೌಕರ್ಯ ಒದಗಿಸಿದ್ದಾರೆ. ಸ್ನೇಹಿತರೊಬ್ಬರು ಅವರ ಮನೆಯ ನಾಯಿ ಸಾವನ್ನಪ್ಪಿದ್ದಾಗ ಮನೆಯ ಬಳಿ ಜಾಗವಿಲ್ಲದೆ ಸಂಸ್ಕಾರ ಮಾಡುವುದೆಲ್ಲಿ ಎಂದು ದಿಕ್ಕು ತೋಚದೆ ಹಲವು ಗಂಟೆಗಳ ಕಾಲ ಮೃತಶರೀರವನ್ನು ಇಟ್ಟುಕೊಂಡಿದ್ದನ್ನು ನೋಡಿದ ಉಮೇಶ್ ಅವರು ಈ ಶ್ವಾನ ಚಿರಧಾಮ ಸ್ಥಾಪಿಸುವ ನಿರ್ಧಾರಕ್ಕೆ ಬಂದರಂತೆ. ಅಲ್ಲಿಗೆ ಬರುವ ಮೃತದೇಹಗಳನ್ನು ಗುಂಡಿತೋಡಿ ಮಣ್ಣಿನೊಳಗೆ ಇಳಿಸಿ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರದ ನಂತರ ಗುಂಡಿ ಮುಚ್ಚಿ ಅದರ ಮೇಲೊಂದು ಗಿಡ ನೆಡುವ ಪದ್ದತಿ ಇಟ್ಟುಕೊಂಡಿದ್ದಾರೆ.
ನಮ್ಮ ಪ್ರಿನ್ಸಿಯ ದೇಹ ಅಲ್ಲಿ ಮಣ್ಣಿನೊಳಗೆ ಇಳಿದಾಗ ಉಮೇಶ್ ಅವರು ಅಲ್ಲಿ ಮೂಕಪ್ರಾಣಿಗಳಿಗೆ ತೋರುವ ಗೌರವ ನೋಡಿ ಕಣ್ಣು ತುಂಬಿಬಂತು. ಬದುಕಿರುವಾಗ ನಮ್ಮ ಜೊತೆ ಸದಾ ನೆರಳಿನಂತೆ ಇದ್ದ ಆಕೆ ತೀರಿಹೋದ ಬಳಿಕ ಗಿಡವೊಂದರ ನೆರಳಿನಡಿ ನಿದ್ರಿಸಲಿದ್ದಾಳೆ ಎಂದು ಯೋಚಿಸಿ ಮನಸ್ಸೂ ತುಂಬಿ ಬಂತು. ನಮ್ಮ ಪ್ರೀತಿಯ ಪ್ರಿನ್ಸಿಗೆ ಮಾತ್ರವಲ್ಲ. ಇವಳ ಹಾಗೆಯೇ ಸಾಕಿದವರನ್ನು ದುಃಖಕ್ಕೆ ದೂಡಿಹೋಗುವ ಮೈಸೂರು ಸುತ್ತಮುತ್ತಲಿನ ಸಾಕು ನಾಯಿಗಳಿಗೂ ಇದೇ ನೆರಳು ಸಿಗುತ್ತವೆ ಎಂದು ಅರಿವಾದಾಗ ಖುಷಿಯೂ ಆಯಿತು. ಉಮೇಶ್ ಅವರ ಈ ಸೇವೆ ಸಾಕು ನಾಯಿಗಳಿಗೆ ಮಾತ್ರ ಸೀಮಿತವಲ್ಲ. ಮನೆಯ ಬಳಿ ಬೀದಿ ನಾಯಿಗಳನ್ನು ಸಾಕಿದವರು ಅದು ಸಾವನ್ನಪ್ಪಿದಾಗ ತಿಳಿಸಿದರೆ ಇವರೇ ತಮ್ಮ ವಾಹನದಲ್ಲಿ ಆ ನಾಯಿಯನ್ನು ತಂದು ಅಂತ್ಯಸಂಸ್ಕಾರವನ್ನು ಮಾಡುತ್ತಾರೆ. ಉಮೇಶ್ ಅವರ ಕಾರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ರಸ್ತೆಯಲ್ಲಿ ಅಪಘಾತಕ್ಕೀಡಾಗಿಯೋ, ರೋಗ ರುಜಿನಗಳಿಂದಲೋ ಸಾವನ್ನಪ್ಪುವ ಬೀದಿನಾಯಿಗಳನ್ನು ಕೊಳೆಯಲು ಬಿಡದೆ ಇವರು ಅಲ್ಲೇ ಹತ್ತಿರದಲ್ಲೇ ಗುಂಡಿ ತೋಡಿ ಅಂತಿಮ ಸಂಸ್ಕಾರವನ್ನು ಮಾಡುತ್ತಾರೆ. ಇದರಿಂದ ಕೊಳೆತ ಪ್ರಾಣಿಯ ದೇಹದಿಂದ ಹರಡುವ ಖಾಯಿಲೆಗಳಿಂದ ಇತರೆ ಪ್ರಾಣಿಗಳು, ಮನುಷ್ಯರಿಗೂ ರಕ್ಷಣೆ ಸಿಕ್ಕಂತಾಗುತ್ತಿದೆ.
ಉಮೇಶ್ ಅವರು ಇದುವರೆಗೆ ಮುನ್ನೂರಷ್ಟು ಅನಾಥ ನಾಯಿಗಳ ಅಂತ್ಯಸಂಸ್ಕಾರ ಮಾಡಿದ್ದಾರೆ. ಯಾರೇ ಕರೆ ಮಾಡಿ ಇಂತಹ ಜಾಗದಲ್ಲಿ ನಾಯಿಯೊಂದರ ಅನಾಥ ಶವವಿದೆ ಅಂದರೆ ತಕ್ಷಣವೇ ಹಾರೆ ಗುದ್ದಲಿಯೊಂದಿಗೆ ಉಮೇಶ್ ಅಲ್ಲಿ ಹಾಜರಾಗುತ್ತಾರೆ. ಹತ್ತಿರದಲ್ಲೆ ಒಂದು ಕಡೆ ಗುಂಡಿತೋಡಿ ಅದರ ಅಂತಿಮ ಸಂಸ್ಕಾರವನ್ನೂ ಮಾಡಿ ಮುಗಿಸುತ್ತಾರೆ. ಇದಕ್ಕಾಗಿ ಅವರು ಯಾರನ್ನೂ ಕಾಯುವುದಿಲ್ಲ. ಕೆಲವೊಮ್ಮೆ ಒಬ್ಬರೇ ಹೋಗಿ ಸಂಸ್ಕಾರ ಮಾಡುವುದೂ ಇದೆ. ಖಾಯಿಲೆಗೆ ತುತ್ತಾಗಿರುವ ಬೀದಿನಾಯಿಗಳಿಗೆ ಗುರುತಿನ ಕಾಲರ್ ಹಾಕಿ ಚಿಕಿತ್ಸೆ ನೀಡುತ್ತಾರೆ. ಇವರ ಈ ಸೇವೆ ಮೈಸೂರು ಮಾತ್ರವಲ್ಲ ಸೇವಾ ಕಾರ್ಯಕರ್ತರ ಮೂಲಕ ದೇಶದೆಲ್ಲೆಡೆ ವಿಸ್ತರಿಸಿದೆ. ಈಗಾಗಲೇ ೬೩೧೦ ಕ್ಕೂ ಹೆಚ್ಚು ಗುರುತಿನ ಕಾಲರ್ ಗಳನ್ನು ಒದಗಿಸಲಾಗಿದೆ. ಈ ಕಾಲರ್ ಗಳನ್ನು ಹಾಕಲು ಮುಖ್ಯ ಕಾರಣ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳ ಹೆಡ್ ಲೈಟ್ ಈ ಕಾಲರಿಗೆ ಪ್ರತಿಫಲಿಸಿ ರಸ್ತೆ ದಾಟುವ ನಾಯಿಗಳು ವಾಹನ ಚಾಲಕರಿಗೆ ಕಾಣಿಸಲಿ ಎಂದು. ಇದರಿಂದ ವಾಹನಗಳಿಗೆ ಸಿಕ್ಕು ನಾಯಿಗಳು ಸಾಯುವುದನ್ನು ತಪ್ಪಿಸಬಹುದು. ಅದೂ ಅಲ್ಲದೆ ಒಂದೆ ಕಡೆ ನಿಲ್ಲದ ಬೀದಿ ನಾಯಿಗಳು ಕಜ್ಜಿ, ಗಾಯಗಳಿಂದ ನರಳುತ್ತಿದ್ದರೆ ಅವುಗಳಿಗೆ ಕಾಲರ್ ಹಾಕುವುದರಿಂದ ಅಂತಹ ನಾಯಿಗಳನ್ನು ಕಾಲರ್ ಮೂಲಕ ಗುರುತಿಸಿ ನಿರಂತರ ಚಿಕಿತ್ಸೆ ನೀಡಿ ಅದು ಮೊದಲಿನ ಆರೋಗ್ಯವಂತ ಸ್ಥಿತಿಗೆ ಬರುವವರೆಗೂ ಔಷಧ ಆಹಾರವನ್ನು ನೀಡಲು ಸಹಾಯವಾಗುತ್ತದೆ.
ಸದ್ಯ ತೀರಿಹೋದ ಶ್ವಾನಗಳ ಆಶ್ರಯದಾತರಾಗಿರುವ ಉಮೇಶ್, ಮೈಸೂರಿನ ಜನ ವಯಸ್ಸಾದ ನಂತರ ಬೀದಿಪಾಲಾಗುವ ಅನಾಥ ಹಸುಗಳು ಮತ್ತು ಕತ್ತೆ ಕುದುರೆಗಳಿಗಾಗಿ ಇದೇ ರೀತಿಯ ಆಶ್ರಯ ತಾಣಗಳನ್ನು ನೋಡುವಂತಾಗಬೇಕು ಎಂದು ಆಸೆ ಪಡುತ್ತಾರೆ. ಸಾಕು ನಾಯಿಗಳ ಕಡೆ ತೋರಿಸಿದ ಅನುಪಮ ವಾತ್ಸಲ್ಯಕ್ಕಾಗಿ ೨೦೧೮ ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಉಮೇಶ್ ದಾಖಲಾದರು. ನಂತರ ಇವರು ತಮ್ಮದೇ ದಾಖಲೆಯನ್ನು ೨೦೨೧ ರಲ್ಲಿ ಮುರಿದು ಮತ್ತೊಮ್ಮೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದರು. ಅದೂ ಅಲ್ಲದೆ ಪರದೇಶಗಳಿಗೆ, ದೂರದ ಊರುಗಳಿಗೆ ತೆರಳುವವರ ಅನುಕೂಲಕ್ಕಾಗಿ ಸಾಕುನಾಯಿಗಳ ವಸತಿ ವ್ಯವಸ್ತೆಯನ್ನೂ ಮಾಡಿದ್ದಾರೆ. ಈ ಯೋಚನೆ ಅವರಿಗೆ ಬರಲು ಕಾರಣವೂ ಇದೆ. ಒಂದಿಷ್ಟು ದಿನಕ್ಕಾಗಿ ಪರ ಊರಿಗೆ ಹೋಗಬೇಕಾಗಿ ಬಂದ ಉಮೇಶ್ ಅವರಿಗೆ ತಮ್ಮ ಸಾಕುನಾಯಿಗಳನ್ನು ಎಲ್ಲಿ ಬಿಡುವುದು ಎನ್ನುವ ಯೋಚನೆ ಬಂತು. ಸ್ವಚ್ಛತೆ ಇಲ್ಲದೆ, ಸರಿಯಾಗಿ ಆಹಾರವನ್ನೂ ಕೊಡದೆ ಮಲಗಲು ಸರಿಯಾದ ವ್ಯವಸ್ಥೆಯೂ ಇಲ್ಲದ ಕನಿಷ್ಠ ಕಾಳಜಿಯನ್ನೂ ತೋರದೆ ಕೇವಲ ಹಣ ಪೀಕಲಿಕ್ಕಾಗಿ ನಡೆಸುತ್ತಿರುವ ಬೋರ್ಡಿಂಗ್ ಗಳನ್ನು ಕಂಡು ಬೇಸತ್ತ ಇವರು ನಾಯಿಗಳಿಗೆ ಆರೋಗ್ಯಪೂರ್ಣವಾದ, ಸ್ವತಂತ್ರವಾಗಿ ವಿಹರಿಸುತ್ತಾ ಸಂತೋಷದಿಂದ ಕಾಲಕಳೆಯುವಂತಹ ತಮ್ಮದೇ ಆದ ಬೋರ್ಡಿಂಗ್ ಮಾಡಬೇಕು, ಅಲ್ಲಿಗೆ ಬರುವ ನಾಯಿಗಳೂ, ಅದನ್ನು ಅಲ್ಲಿ ಬಿಟ್ಟುಹೋದ ಒಡೆಯನೂ ನೆಮ್ಮದಿಯಿಂದ ಕೊಡುವಂತಹ ತಾಣವಾಗಬೇಕೆಂದು ತೀರ್ಮಾನಿಸಿ ಬೌ ಬೌ ರೆಸಾರ್ಟ್ ನ್ನು ೨೦೧೫ ರಲ್ಲಿ ಆರಂಭಿಸಿದರು.
ಇಲ್ಲಿ ನಾಯಿಗಳಿಗೆ ಇಷ್ಟವಾದ ಆಹಾರ ಕೊಡುವುದಲ್ಲದೆ ಪ್ರತ್ಯೇಕವಾದ ರೂಮ್ ಹಾಸಿಗೆ ಮಂಚದ ವ್ಯವಸ್ಥೆಯೂ ಇದೆ. ಆಟವಾಡಲು ಮೈದಾನ, ಈಜುಕೊಳ, ವೈದ್ಯರಿಂದ ಆಗಾಗ ತಪಾಸಣೆ ಎಲ್ಲ ಸೌಕರ್ಯಗಳೂ ಇವೆ. ಅಲ್ಲದೆ ಇಲ್ಲಿ ಬಿಟ್ಟುಹೋದ ನಾಯಿಗಳ ಒಡೆಯನಿಗೆ ಅವುಗಳ ಎಲ್ಲ ವಿವರಗಳನ್ನು ಪ್ರತಿ ಅರ್ಧಗಂಟೆಗೊಮ್ಮೆ ಮೊಬೈಲ್ ನಲ್ಲಿ ಕಳಿಸಲಾಗುತ್ತದೆ. ಇಲ್ಲಿಗೆ ಬರುವ ನಾಯಿಗಳಿಗೆ ಇಂತಿಷ್ಟೇ ದಿನ ಎಂದು ಗೊತ್ತುಪಡಿಸಿಲ್ಲ. ಹಲವಾರು ವರ್ಷಗಳಿಂದ ಇಲ್ಲಿಯೇ ಇರುವ ನಾಯಿಗಳನ್ನೂ ನೋಡಬಹುದು. ವಿದೇಶದಲ್ಲಿರುವ ಅದರ ಒಡೆಯರು ತಿಂಗಳಿಗೊಮ್ಮೆ ಅದರ ಖರ್ಚಿಗಾಗಿ ಹಣವನ್ನು ಕಳಿಸುತ್ತಾರೆ. ನಾಯಿಗಳನ್ನು ಕರೆತರಲು ಹಾಗೂ ಬಿಡಲು ದೊಡ್ಡ ವಾಹನದ ವ್ಯವಸ್ಥೆಯೂ ಇದೆ. ತೂಕ ಹೆಚ್ಚಾದ ನಾಯಿಗಳ ತೂಕ ಕಡಿಮೆ ಮಾಡಲು ಈಜು ಕೊಳದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಇಲ್ಲಿ ವಯಸ್ಸಾದ ಮತ್ತು ಖಾಯಿಲೆಯಿಂದ ನರಳುತ್ತಿರುವ ಹೆತ್ತವರನ್ನು ವೃದ್ಧಾಶ್ರಮಗಳಲ್ಲಿ ಬಿಡುವ ಹಾಗೆ ಸಾಕಿದ ವಯಸ್ಸಾದ ನಾಯಿಗಳನ್ನೂ ಕೆಲವರು ಇವರ ಬೋರ್ಡಿಂಗ್ ನಲ್ಲಿ ಬಿಟ್ಟುಹೋಗುವವರಿದ್ದಾರೆ.
ಶ್ವಾನಪ್ರಿಯರಿಗೆ ಉಮೇಶ್ ಹೇಳುವುದು ಇಷ್ಟೇ: ನಿಮ್ಮ ನಿಮ್ಮ ಮನೆಯ ಬಳಿ ಇರುವ ಬೀದಿನಾಯಿಗಳಿಗೆ ಆಹಾರ ಕೊಟ್ಟು ಸಲಹಿ ಅವು ನಿಮ್ಮ ಮನೆ ಮತ್ತು ಸುತ್ತಮುತ್ತಲ ಪ್ರದೇಶವನ್ನು ಕಾಯುತ್ತವೆ. ನೀವು ಅವುಗಳನ್ನು ಮನೆಯಲ್ಲೇ ಇಟ್ಟು ಸಾಕಬೇಕೆಂದಿಲ್ಲ ಒಂದಿಷ್ಟು ಪ್ರೀತಿಯಿಂದ ಊಟ ಕೊಟ್ಟರೂ ಸಾಕು. ಜಾತಿ ನಾಯಿ ಸಾಕುವ ಪ್ರತಿಯೊಬ್ಬರೂ ಒಂದು ಬೀದಿ ನಾಯಿಯನ್ನೂ ಸಾಕಿ ಅದಕ್ಕೆ ಆಶ್ರಯ ನೀಡಿ ಎನ್ನುತ್ತಾರೆ. ಅದೂ ಅಲ್ಲದೆ ಮನೆಯಿಂದ ಕಾಣೆಯಾದ ನಾಯಿಗಳನ್ನು ಹುಡುಕಿಕೊಡುವ ಇವರು ಸಹಾಯವನ್ನು ಮಾಡುವ ವೇದಿಕೆಯನ್ನು ನಿರ್ಮಿಸಿದ್ದಾರೆ. ಕಾಣೆಯಾದ ನಾಯಿಯ ಫೋಟೋವನ್ನು ಮನೆಯ ವಿಳಾಸವನ್ನು ೯೯೮೬೨೮೪೪೬೮ ಈ ನಂಬರಿಗೆ ಕಳಿಸಿಕೊಟ್ಟರೆ ಮೊಬೈಲ್ ಮೂಲಕ ಎಲ್ಲೆಡೆ ಪ್ರಚಾರವನ್ನು ಕೊಟ್ಟು ಹುಡುಕಿಕೊಡುವ ಪ್ರಯತ್ನ ಮಾಡುತ್ತಾರೆ.
ನೀವೇನಾದರೂ ಮೈಸೂರು ಮತ್ತು ಹೆಗ್ಗಡದೇವನಕೋಟೆ ನಡುವೆ ಇರುವ ಉಮೇಶ್ ಅವರ ಬೌಬೌ ಬೋರ್ಡಿಂಗ್ ಕಾಣಲು ಹೋದರೆ ನಾಯಿಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ಕಾಣಬಹುದು. ಸಾಕು ನಾಯಿಗಳನ್ನು ಗೂಡಿನಲ್ಲಿಟ್ಟು ಸಾಕುವುದು ಮತ್ತು ಹಣಕ್ಕಾಗಿ ಮರಿಗಳನ್ನು ಮಾರುವುದನ್ನು ಇವರು ವಿರೋಧಿಸುತ್ತಾರೆ. ಹಣವನ್ನು ಪಡೆದರೂ ಲಾಭಕ್ಕಾಗಿ ಉದ್ಯಮದ ದೃಷ್ಟಿಕೋನದಲ್ಲಿ ಮಾಡದೆ ಸೇವಾ ಮನೋಭಾವದಿಂದ ಮಾಡುತ್ತಿರುವ ಇವರ ಕಾರ್ಯ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಆಹಾರಕ್ಕಾಗಿ, ಉದ್ಯಮವಾಗಿ ನಾಯಿ ಪಶು, ಪಕ್ಷಿ ಇತರ ಪ್ರಾಣಿಗಳ ಮೇಲೆ ಆಗುವ ಶೋಷಣೆ ಮನಕಲಕುವಂತಹುದು. ಮನುಷ್ಯ ತನ್ನ ಸುಖ, ಸಂತೋಷ, ಮನರಂಜನೆಗೆ ಪ್ರಕೃತಿಯನ್ನು ಜೀವಸಂಕುಲವನ್ನು ಬಲಿಕೊಡುತ್ತಿರುವುದು ಒಂದು ದುರಂತವೇ ಹೌದು. ಬೆರಳೆಣಿಕೆಯಷ್ಟು ಜನ ಮಾತ್ರ ಪ್ರಾಣಿ ಪಕ್ಷಿಗಳ ಮನದ ಮಾತುಗಳಿಗೆ ಕಿವಿಯಾಗಿ, ಭಾವನೆಗಳಿಗೆ ಸ್ಪಂದಿಸುತ್ತಾರೆ. ಮಕ್ಕಳು ಹಠಮಾಡಿದರೆಂದೋ, ಮನೆಕಾಯಲಿಕ್ಕೆಂದೋ ನಾಯಿಗಳನ್ನು ತಂದು ಗೂಡಿನಲ್ಲಿ ಸದಾ ಕಟ್ಟಿಹಾಕುವ ಬದಲು ನಮ್ಮ ಜೊತೆಗೇ ಅವುಗಳನ್ನು ಬದುಕಲು ಬಿಡಿ. ಅವುಗಳೊಂದಿಗೆ ಪ್ರೀತಿಯ ಮಾತನಾಡಿ. ನೋವು ಸಂಕಟಗಳನ್ನು ಹಂಚಿಕೊಳ್ಳಿ.ಖಂಡಿತಾ ಮನುಷ್ಯರಿಗಿಂತಾ ಹೆಚ್ಚು ಸ್ಪಂದಿಸುವ ಗುಣ ಅವುಗಳಿಗಿವೆ ಎನ್ನುತ್ತಾರೆ ಉಮೇಶ್. ಬಾರದ ಲೋಕಕ್ಕೆ ಒಡೆಯ ಹೋದ ವಿಷಯ ತಿಳಿಯದ ಅವನ ಮುದ್ದಿನ ನಾಯಿ ಹಚಿಕು ಅವನಿಗಾಗಿ ರೈಲುನಿಲ್ದಾಣದಲ್ಲಿ ಕಾದು ಕಾದು ಅಲ್ಲೇ ಪ್ರಾಣ ಬಿಟ್ಟ ಸಿನೆಮಾದ ಕತೆ ನಿಮಗೆ ತಿಳಿದಿರಬಹುದು. ಹಾಗೆಯೇ ೧೯೨೯-೩೦ ರಲ್ಲಿ ಡಿಪ್ತೀರಿಯಾ ಖಾಯಿಲೆ ಇಡೀ ಜಗತ್ತನ್ನೇ ನಡುಗಿಸಿದ್ದ ಸಮಯ. ಅಮೇರಿಕಾದ ಅಲಸ್ಕಾದ ಒಂದು ಪುಟ್ಟ ಹಳ್ಳಿ ಹಿಮಪಾತದಿಂದ ಹೊರಜಗತ್ತಿನ ಸಂಪರ್ಕ ಕಳೆದುಕೊಂಡ ಸಂದರ್ಭದಲ್ಲಿ ಹಿಮಪ್ರದೇಶದಲ್ಲಿ ಕಂಡುಬರುವ ಹಸ್ಕಿ ಜಾತಿಯ ನಾಯಿ ತನ್ನ ಬಳಗವನ್ನು ಕರೆದುಕೊಂಡು ದೂರ ಪ್ರಯಾಣವನ್ನು ಮಾಡಿ ತನ್ನ ಊರಿನ ಜನರಿಗೆ ಲಸಿಕೆ ತಂದು ನೀಡಿದ ಸಿನೆಮಾದ ಕತೆ ಇನ್ನೂ ಜನಮನದಲ್ಲಿ ಹಸಿರಾಗೇ ಇದೆ. ಶ್ವಾನಗಳು ಅನ್ನಕೊಟ್ಟ ಒಡೆಯನಿಗಾಗಿ ಹೋರಾಡಿ ಮಡಿದ, ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವಾಗ ಹುತಾತ್ಮವಾದ ಅನೇಕ ಉದಾಹರಣೆಗಳೂ ಇವೆ. ಅಲ್ಪಕಾಲ ಬಾಳಿದರೂ ನಾವು ನೀಡಿದ ಕಿಂಚಿತ್ ಪ್ರೀತಿಗೆ ನಮ್ಮ ಜೀವನಕಾಲ ಪೂರ್ತಿ ನೆನೆಸಿಕೊಳ್ಳುವಷ್ಟು ಸ್ನೇಹವನ್ನು ಧಾರೆಯೆರುವ ಗುಣ ಅವುಗಳಿಗೆ ಇದೆ.
ಈ ಸಾಲುಗಳನ್ನು ಬರೆಯುವಾಗ ನನ್ನ ಕಣ್ಣುಗಳು ತುಂಬಿಕೊಳ್ಳುತ್ತಿವೆ. ಹೆಜ್ಜೆ ಹೆಜ್ಜೆಗೂ, ಕ್ಷಣ ಕ್ಷಣವೂ ನೆನೆಯುವಂತೆ ನೆನಪಿನ ಬುತ್ತಿ ಬಿಚ್ಚಿಟ್ಟು ಹೋದ ನನ್ನ ಮುದ್ದಿನ ಪ್ರಿನ್ಸಿಗೆ ಇದು ನನ್ನ ಅಕ್ಷರ ಶ್ರದ್ಧಾಂಜಲಿ. ತಮ್ಮ ಮುದ್ದಿನ ನಾಯಿಗೆ ಗೌರವಪೂರ್ಣ ವಿದಾಯ ಹೇಳುವವರು, ರಸ್ತೆ, ಕಾಲೋನಿಯಲ್ಲಿ ಅನಾಥ ಶವವಾಗಿ ಬಿದ್ದ ನಾಯಿಯನ್ನು ನೋಡಿ ಅದಕ್ಕೊಂದು ಸಂಸ್ಕಾರ ಮಾಡಬೇಕು ಎಂದು ಬಯಸುವವರು, ಪರ ಊರಿಗೆ ಹೋಗಬೇಕಾದ ಸನ್ನಿವೇಶದಲ್ಲಿ ತಾತ್ಕಾಲಿಕವಾಗಿ ನಾಯಿಗಳನ್ನು ನೋಡಿಕೊಳ್ಳಲು ಸುರಕ್ಷಿತ ಸ್ಥಳ ಬೇಕೆನ್ನುವರು ಉಮೇಶ್ ಅವರ ದೂರವಾಣಿ ಸಂಖ್ಯೆ 9986284468 ಇದಕ್ಕೆ ಕರೆ ಮಾಡಿದರೂಸಾಕು. ಮುಂದಿನ ಕಾರ್ಯಗಳನ್ನುಉಮೇಶ್ ಅವರೇ ನಿಭಾಯಿಸಿ ನಡೆಸಿಕೊಡುತ್ತಾರೆ. ನಮ್ಮ ಪ್ರಿನ್ಸಿಗೆ ಸಂಸ್ಕಾರದ ಗೌರವ ಕರುಣಿಸಿದ ಉಮೇಶ್ ಅವರಿಗೆ ಗೌರವಪೂರ್ವಕ ನಮನಗಳು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…