ಎಪ್ಪತ್ತೆಂಟರ ಪುಟ್ಟಣ್ಣಯ್ಯ ಅವರು ಹಾಡುಗಳನ್ನು ಬರೆದಿಟ್ಟುಕೊಳ್ಳದೆ, ಅವುಗಳನ್ನೆಲ್ಲ ಹೃದಯಗತ, ಕಂಠಸ್ಥವಾಗಿಸಿಕೊಂಡಿದ್ದಾರೆ. ಒಂದೊಂದು ಹಾಡನ್ನು ಶಿಷ್ಯರ ಬಳಿ ಹೇಳುವಾಗ, ಅಷ್ಟೇ ನಿಷ್ಠೆಯನ್ನು ಅಪೇಕ್ಷಿಸುತ್ತಾರೆ
ಪುಟ್ಟರಾಜು ಯಡಹಳ್ಳಿ
ಮೈಸೂರು ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಅಂದು ಸಂಗೀತದ ನಾದ ಬಿಡದೇ ಕೇಳುತ್ತಿತ್ತು. ಹೊಸ ನಾಟಕದ ತಯಾರಿಯಿರಬಹುದಾ? ಇಲ್ಲಾ, ನಾಟಕದ
ಪ್ರದರ್ಶನಗೊಳ್ಳುತ್ತಿರಬಹುದಾ ಎಂಬ ಅಚ್ಚರಿಯೊಂದಿಗೆ ಬಾಗಿಲ ಸರಿಸಿ ಒಳ ಹೊಕ್ಕರೆ, ಕೆಲ ದಶಕಗಳ ಹಿಂದೆ ಕಾಲ ಸರಿದಂತಹ ಅನುಭವ. ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ ಅವರು ತರುಣರಿಗೆಲ್ಲ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ತನ್ನೆದುರು ನೇರ ಸಾಲಿನಲ್ಲಿ ಕೂರಿಸಿ, ಲೆಗ್ ಹಾರ್ಮೋನಿಯಂ ನುಡಿಸುತ್ತಾ, ಅಭ್ಯಾಸ ಸಾಗುತ್ತಿತ್ತು.
ಒಳ ನಡೆದು, ಎಲ್ಲವನ್ನೂ ಬೆರಗುಗಣ್ಣಿನಿಂದ ಕಾಣುತ್ತಾ ಕೂತೆ. ‘ಶ್ರೀರಮಣಿ ಪ್ರಿಯ ರಮಣ ನಾರಾಯಣ ನಾಗಶಯನ…’ ಎನ್ನುತ್ತಾ ಶಿಷ್ಯ ಸುಪ್ರೀತ್ ನಗು ತುಂಬಿ ಹಾಡುತ್ತಿದ್ದರೆ, ಪುಟ್ಟಣ್ಣಯ್ಯ ಅವರು ಹೇಳತೀರದ ಸಂಭ್ರಮದಲ್ಲಿ ನುಡಿಸುತ್ತಿದ್ದರು. ಇವರ ಎರಡೂ ಕೈಗಳ ಬೆರಳುಗಳು ಲೆಗ್ ಹಾರ್ಮೋನಿಯಂ ತಂತಿಗಳನ್ನು ಸ್ಪರ್ಶಿಸಿ, ಹೊರಡಿಸಿದ ನಾದ ಕಿವಿಗೆ ಇಂಪಾಗಿ ಆನಂದವನ್ನು ನೀಡುತ್ತಿತ್ತು.
ಅದು ಬರೀ ಸಂಗೀತ ತರಗತಿಯಾಗಿರಲಿಲ್ಲ. ಒಂದು ಕಾಲದಲ್ಲಿ ರಂಗಭೂಮಿಯನ್ನು ಆವರಿಸಿದ್ದ ಗುಬ್ಬಿ ಕಂಪೆನಿ ಆಡಿ ಹಾಡಿದ್ದ, ಕಂಪೆನಿ ನಾಟಕಗಳ ಹಾಡುಗಳನ್ನು ಶಿಷ್ಯರಿಗೆ ಬಹುಪ್ರೀತಿಯಿಂದ ಕಲಿಸುತ್ತಿದ್ದರು. ಕಲಿಸುತ್ತಿದ್ದರು ಎಂದರೆ ಗಮನಿಸಬೇಕು, ಇದು ಇತರ ಕಲಾ ತರಗತಿಗಳಂತಲ್ಲ ಎಂದು, ತಮಗೆ ತಿಳಿದಿರುವ ರಂಗ ಸಂಗೀತ ಪರಂಪರೆಯನ್ನು ಯಾವುದೇ ಹಣ ವ್ಯವಹಾರದ ಹಂಗಿಲ್ಲದೆ ತಮ್ಮ ಮುದ್ಧರಂಗಪ್ಪ, ಡಾ.ರಾಜ್‌ಕುಮಾರ್ ಹಾಗೂ ಪುಟ್ಟಸ್ವಾಮಯ್ಯ ಅವರ ಶಿಷ್ಯರಿಗೆ ದಾಟಿಸುವುದು. ಪುಟ್ಟಣ್ಣಯ್ಯ ಅವರು ಸಂಗೀತವನ್ನು ಕಲಿಯುವಾಗ ಅವರ ಗುರುಗಳು ಸಂಗೀತ ಪರಂಪರೆಯ ಕೊಂಡಿ ಕಳಚಬಾರದೆಂದು ಗುರುಕಾಣಿಕೆ ಕೇಳದೇ, ಇವರ ಸಂಗೀತಾಭ್ಯಾಸಕ್ಕೆ ನೆರವಾಗಿದ್ದರು. ಅದೇ ಗುರು ತತ್ವವನ್ನು ಪಾಲಿಸುತ್ತಾ ಬಂದಿರುವ ಪುಟ್ಟಣ್ಣಯ್ಯ ಅವರು ರಂಗಸಂಗೀತವನ್ನು ಆಸಕ್ತಿ, ಶ್ರದ್ಧೆಯಿಂದ ಅಭ್ಯಾಸ ಮಾಡುತ್ತೇನೆಂದವರಿಗೆ ಉತ್ಸಾಹದಲ್ಲಿ ಕಲಿಸುತ್ತಿದ್ದಾರೆ.
ಹೀಗೆ ಕಲಿಸುವ ಜೊತೆಯಲ್ಲಿ ಹಾಡಿನ ಹಿನ್ನೆಲೆಯನ್ನು ಶಿಷ್ಯರಿಗೆ ಹೇಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ‘ಮೋಹನ ಮುರಳಿ ಸುರವರ ವಂದಿತ’ ಎಂಬ ಮೋಹನ ರಾಗದಲ್ಲಿ ಹಾಡೊಂದನ್ನು ಹೇಳಿಕೊಡುವಾಗ ತಮ್ಮ ಶಿಷ್ಯಯರಾದ ಸುರಭಿ ಮತ್ತು ಭ್ರಮರ ಇಬ್ಬರಿಗೂ ಮುಸುರಿ ಕೃಷ್ಣಮೂರ್ತಿ ಅವರು ಆ ಹಾಡನ್ನು ಹಾಡುತ್ತಿದ್ದ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದರು. ಅವರು ಹಾಡುತ್ತಿದ್ದ ಸಂಗತಿಗಳು, ತಾಳಗಳನ್ನು ಎತ್ತಿಕೊಳ್ಳುತ್ತಿದ್ದ ನೈಪುಣ್ಯತೆಯನ್ನು ಪುಟ್ಟಣ್ಣಯ್ಯ ಅವರು ವಿದ್ಯಾರ್ಥಿಗಳಿಗೆ ಹಾಡಿ ತೋರಿಸುತ್ತಾ, ಸನ್ನಿವೇಶವನ್ನು ಪುನರ್ ಕಟ್ಟುತ್ತಿದ್ದರು.
ಪುಟ್ಟಣ್ಣಯ್ಯ ಅವರು ಚಿಕ್ಕಂದಿನಿಂದಲೂ ಸಂಗೀತದ ಒಡನಾಟದಲ್ಲೇ ಬೆಳೆದವರು. ಇವರ ತಂದೆ ಅವರು ಗುಬ್ಬಿ ಕಂಪೆನಿಯಲ್ಲಿ ರಾಜಾ ಮುದ್ದರಂಗಪ್ಪ ಪಾತ್ರವನ್ನು ಮಾಡುತ್ತಿದ್ದ ಮುದ್ದಣ ಅಲಿಯಾಸ್ ಮುದ್ದರಂಗಪ್ಪ, ಡಾ.ರಾಜ್ ಕುಮಾರ್ ಹಾಗೂ ಪುಟ್ಟಸ್ವಾಮಯ್ಯ ಅವರ ಸಮಕಾಲೀನರಾಗಿದ್ದರು. ಸಹಜವಾಗಿಯೇ ಪುಟ್ಟಪ್ಪ ಅವರಲ್ಲಿದ್ದ ಕಲಾಸಕ್ತಿಯನ್ನು ಗಮನಿಸಿ, ಗುಬ್ಬಿ ಕಂಪೆನಿ ಬಾಚಿತಬ್ಬಿತು. ಎಂಟನೇ ತರಗತಿಯನ್ನು ಕಲಿತಿದ್ದ ಇವರಿಗೂ ಕಂಪೆನಿ ಸೇರಬೇಕೆಂಬ ತುಡಿತ ಹೆಚ್ಚಿತು. ಪುಟ್ಟಪ್ಪ ಅವರಿಗೆ ಪುಟ್ಟಣ್ಣಯ್ಯ ಎಂಬ ಹೆಸರಿಟ್ಟಿದ್ದು, ಗುಬ್ಬಿ ಕಂಪೆನಿ. ಕಲಾಗೂಡಿನೊಳಗೆ ಈ ಹಾಡುಹಕ್ಕಿಯ ರೆಕ್ಕೆ ಬಲಿಯುತ್ತಿತ್ತು. 1965ರ ಕಾಲದಲ್ಲಿ ಕಂಪೆನಿಯ ನಾಟಕದ ಮೇಷ್ಟಾದರು. ಆ ಹೊತ್ತಿಗಾಗಲೇ ಪೌರಾಣಿಕ ನಾಟಕಗಳ ವೈಭವ ನಿಧಾನಕ್ಕೆ ಅಳಿದು, ಕಂಪೆನಿ ಸಾಮಾಜಿಕ ನಾಟಕಗಳನ್ನು ಮಾಡಲು ಶುರುವಿಟ್ಟ ಕಾಲವದು. ಅಂತೂ 1973-74ರ ಹೊತ್ತಿಗೆ ಕಂಪೆನಿಯ ಚಟುವಟಿಕೆಗಳೆಲ್ಲ ನಿಂತ ಮೇಲೆ ಬದುಕಿನ ಹಾದಿಯನ್ನು ಕಂಡುಕೊಳ್ಳುವುದು ಪುಟ್ಟಣ್ಣಯ್ಯ ಅವರಿಗೆ ಅನಿವಾರ್ಯವಾಯಿತು. ಸೀನಿಯರ್ ಪರೀಕ್ಷೆಯಲ್ಲಿ ಅದಾಗಲೇ ಉತ್ತೀರ್ಣರಾಗಿದ್ದ ಕಾರಣ, ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡಲು ಶುರುವಿಟ್ಟರು.
ನಾಟಕದ ಮೇಷ್ಟಿಗೆ ಊರಿನಲ್ಲಿ ದೊರಕುತ್ತಿದ್ದ ಸಕಲ ಗೌರವಗಳ ಬಗ್ಗೆ ಪುಟ್ಟಣ್ಣಯ್ಯ ಅವರು ನೆನೆವ ಬಗೆಯೇ ಭಿನ್ನ. ನಾಟಕ ಕಲಿಸುವುದಕ್ಕೆಂದು ಹೊರಟರೆ, ಊರು ಶೃಂಗಾರಗೊಳ್ಳುತ್ತಿತ್ತು. ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು ಎನ್ನುವಾಗೆಲ್ಲ ಪುಟ್ಟಣ್ಣಯ್ಯ ಅವರ ಮುಖದಲ್ಲಿ ನಗುವಿನ ಸಂಭ್ರಮ. ಈಗಿನ ಕಾಲದಲ್ಲಿ ನಾಟಕದ ಮೇಷ್ಟು ಇಷ್ಟು ಗೌರವವನ್ನು ಅಪೇಕ್ಷಿಸುವುದಕ್ಕೂ ಸಾಧ್ಯವಿಲ್ಲ ಬಿಡಿ ಎನ್ನುತ್ತಾರೆ.
ಇವರು ರಂಗಸಂಗೀತವನ್ನು ಅಭ್ಯಾಸ ಮಾಡಿಸುವುದನ್ನು ನೋಡುತ್ತಿದ್ದರೆ ಬೆರಗೆನಿಸುತ್ತದೆ. ಎಪ್ಪತ್ತೆಂಟರ ಪುಟ್ಟಣ್ಣಯ್ಯ ಅವರು ಹಾಡುಗಳನ್ನು ಬರೆದಿಟ್ಟುಕೊಳ್ಳದೆ, ಅವುಗಳನ್ನೆಲ್ಲ ಹೃದಯಗತ, ಕಂಠಸ್ಥವಾಗಿಸಿಕೊಂಡಿದ್ದಾರೆ. ಒಂದೊಂದು ಹಾಡನ್ನು ಶಿಷ್ಯರ ಬಳಿ ಹೇಳುವಾಗ, ಅಷ್ಟೇ ನಿಷ್ಠೆಯನ್ನು ಅಪೇಕ್ಷಿಸುತ್ತಾರೆ. ಸಂಗತಿ, ಶ್ರುತಿ ತಪ್ಪುತ್ತಿದ್ದರೆ ಸುತರಾಂ ಒಪ್ಪದೇ ಕಡ್ಡಿ ತುಂಡರಿಸಿದಂತೆ ಹೇಳುತ್ತಿದ್ದರು. ‘ನಾವೆಲ್ಲ ಕಲಿಯುವಾಗ ಗುರುಗಳ ಸೇವೆ ಮಾಡ್ತಿದ್ವಿ, ಈ ಮಕ್ಕು ಹಾಗೆಲ್ಲ ಮಾಡೋದು ಬೇಡ, ಸಂಗೀತವನ್ನು ಪ್ರೀತಿಸಿದ್ರೆ ಸಾಕು’ ಎನ್ನುವಲ್ಲಿ ಸಂಗೀತದ ಆರಾಧನಾ ಭಾವ ಕಾಣುತ್ತದೆ.
ಕಲಿಯ ಬಂದ ನಾಲ್ಕು ಜನ ಶಿಷ್ಯರೂ ಸಂಗೀತದ ಹಿನ್ನೆಲೆಯುಳ್ಳವರೇ. ಸುರಭಿ, ಭ್ರಮರ, ವಿಜಯ ನರಸಿಂಹನ್ ಹಾಗೂ ಸುಪ್ರೀತ್ ಅವರ ರಂಗಪ್ರೀತಿಯ ಬಗ್ಗೆ ಹೇಳಲೇಬೇಕು. ಶಾಸ್ತ್ರೀಯ ಸಂಗೀತಕ್ಕೂ ಈ ರಂಗಸಂಗೀತಕ್ಕೂ ಬಹು ಭಿನ್ನತೆ ಅಂತೇನಿಲ್ಲ. ಅವರೆಲ್ಲ ಹೇಳುವಂತೆ ಪುಟ್ಟಣ್ಣಯ್ಯ ಮೇಷ್ಟು ಕಲಿಸುವ ರಂಗಸಂಗೀತಕ್ಕೆ ಶಾಸ್ತ್ರೀಯ ಹಿನ್ನೆಲೆ ಇದೆ. ಅದರೊಂದಿಗೆ ಏರು ಶ್ರುತಿಯಲ್ಲಿರುತ್ತದೆ. ಸಂಗೀತ ಕಚೇರಿಯನ್ನು ನೀಡುವಾಗ ಕೆಳ ಕೃತಿಯಲ್ಲಿ ಹಾಡಬಹುದು. ಆದರೆ, ರಂಗಸಂಗೀತವನ್ನು ಅಭ್ಯಾಸ ಮಾಡುವಾಗ ಹಾರ್ಮೋನಿಯಂ ನಾದವನ್ನೂ ಮೀರಿ ಹಾಡಬೇಕಾಗಿರುತ್ತದೆ. ‘ಆಗಿನ ಕಾಲದ ರಂಗಗೀತೆಗಳು ರಚನೆಯಾಗು ತಿದ್ದದ್ದೇ ಮನೋರಂಜನೆಯ ದೃಷ್ಟಿಯಿಂದ ಅನಿಸುತ್ತದೆ. ಏರು ಕೃತಿಯಲ್ಲಿ ಹಾಡಿದರಷ್ಟೇ ರಂಗಸಂಗೀತವನ್ನು ನಾವೂ ಅನುಭವಿಸಿ, ಪ್ರೇಕ್ಷಕರನ್ನೂ ರಂಜಿಸಬಹುದು’ ಎಂಬುದು ಅವರ ಶಿಷ್ಯ ಬಳಗದ ಅಭಿಪ್ರಾಯ.
ಒಟ್ಟಿನಲ್ಲಿ ಒಂದಷ್ಟು ಉತ್ಸಾಹಿ ತರುಣರ ಬಳಗ ಕಂಪೆನಿ ನಾಟಕದ ಗೀತೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆಂಬುದೇ ಮುಂದಿಗೆ ಭರವಸೆ. ಕೋಲು ಹಿಡಿದು ಸರಿ ತಪ್ಪುಗಳನ್ನು ತಿದ್ದುತ್ತಿದ್ದ ಮೇಷ್ಟ್ರ ಛಾಯೆ ಪುಟ್ಟಣ್ಣಯ್ಯ ಅವರಲ್ಲಿ ಇಂದಿಗೂ ಕಾಣಬಹುದು. ತಬಲವನ್ನು ವಿದ್ವಾನ್ ಜಯರಾಮ್ ಅವರು ನುಡಿಸುತ್ತಿದ್ದರೆ, ಬಾಂಗೋಸ್ ಮತ್ತು ಕಾಂಗೋ ಡ್ರಂನಲ್ಲಿ ವಿದ್ವಾನ್ ಗಿರೀಶ್ ಅವರು ಸಹಕರಿಸಿದ್ದರು. ತೊಂಬತ್ತೆರಡರ ಡಿ.ರಾಮು ಅವರು ಕ್ಲಾರಿಯೋನೆಟ್ ನುಡಿಸುತ್ತಾ, ತಮ್ಮ ಅನುಭವಗಳನ್ನು ಹೇಳುವಾಗೆಲ್ಲ ಈ ಎಳೆಯರು ಕೌತುಕದಲ್ಲಿ ಕೇಳುತ್ತಿರುವ ದೃಶ್ಯ ಕಾವ್ಯದಂತೆ ಕಣ್ಣಿಗೆ ಕಟ್ಟುತ್ತಿದೆ.
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ,…
ಮೈಸೂರು: ನಾಲ್ಕು ದಶಕಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿದ್ದ ನಗರದ ಸರಸ್ವತಿ ಚಿತ್ರಮಂದಿರ ನೆನಪಿನಂಗಳಕ್ಕೆ ಸರಿಯುತ್ತಿದೆ. ಪ್ರೇಕ್ಷಕರ ಕೊರತೆಯಿಂದ ಕೋವಿಡ್…
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಅನೇಕ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.…
ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು…
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ…
ಮುಂಬೈ: ಇನ್ನು 10 ದಿನದೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಹತ್ಯೆ ಮಾಡುವುದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ…