ಹಾಡು ಪಾಡು

ಚದುರಂಗರ ಮಗ ಹೇಳಿದ ನವರಾತ್ರಿಯ ಕಥೆಗಳು

ಆ ಕಾಲದ ದಸರಾ ವೈಭವಕ್ಕೂ ಈಗಿನ ದಸರೆಗೂ ಅಜಗಜಾಂತರ.ನಾನು ಪುಟ್ಟ ಹುಡುಗನಾಗಿದ್ದಾಗ ಅಂದರೆ 13-14ವಯಸ್ಸಿನವನಾಗಿದ್ದಾಗ ಕಂಡ ದಸರಾದ ಅನುಭವ ಅವರ್ಣನೀಯ. ಆ ಅದ್ಭುತ ದಿನಗಳನ್ನು ಕಂಡವನಿಗೆ ಈಗ ಎಷ್ಟೇ ವೈಭವದಿಂದ ಆಚರಿಸಿದರೂ ಅದು ತುಸು ಸಪ್ಪೆ ಎನಿಸುತ್ತದೆ. ಆ ರಾಜಸಭೆ, ಆ ವೈಭವ, ಅಂದಿನ ಪೂಜಾ ಕೈಂಕರ್ಯಗಳು, ಅಂದು ನಾನು ನೋಡಿದ ಅರಮನೆ ಈಗಲೂ ಅತ್ಯದ್ಭುತ. ಆಗ ನಾನು ಹದಿನಾಲ್ಕು ವರ್ಷದ ಪೋರ. ತಂದೆಯವರು ಅರಮನೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರೂ ಅದೆಲ್ಲದರಿಂದ ದೂರ ಉಳಿದವರು. ಜನಸೇವೆಯೇ ಜನಾರ್ದನ ಸೇವೆ ಎಂದು ಕಾಲ ಕಳೆದವರು. ನನ್ನ ತಾಯಿ ಸಾಧಾರಣ ಜಮೀನುದಾರಿಕೆಯ ಹಿನ್ನೆಲೆಯವರು. ಅವರ ಮಗನಾಗಿ ಅರಮನೆಯ ವೈಭವವನ್ನು ನನ್ನ ಪುಟ್ಟ ಕಂಗಳಲ್ಲಿ ಎಷ್ಟು ತುಂಬಿ ಕೊಳ್ಳಬಹುದೋ ಅಷ್ಟೊಂದು ನೆನಪುಗಳನ್ನು ಈ ದಸರೆಯ ದಿನಗಳಲ್ಲಿ ತುಂಬಿಕೊಂಡವನು ನಾನು. ರಾಜ ಸಭೆ, ಪೂಜಾ ವಿಧಿಗಳು, ಮಹಾರಾಜರ ಗಾಂಭೀರ್ಯದ ನಡೆ ಎಲ್ಲವನ್ನೂ ಬಹು ಹತ್ತಿರದಿಂದ ವೀಕ್ಷಿಸಿದವನು. ಇಲ್ಲಿ ಹೇಳುತ್ತಿರುವ ಪ್ರಸಂಗಗಳು 1960ರ ಸುಮಾರಲ್ಲಿ ನಾನು ಕಂಡ ದಸರೆಯ ಕೆಲವು ಅನುಭವಗಳು. ಪುಟ್ಟ ಮಗುವಾಗಿ ಅಂಬಾವಿಲಾಸ ಅರಮನೆಯನ್ನು ಹೊಕ್ಕ ನನಗೆ ನಾಲ್ಕು ದಿಕ್ಕಿನಲ್ಲಿಯೂ ಬರೀ ಅಚ್ಚರಿಯೇ ಕಾಣುತ್ತಿತ್ತು. ಅಪ್ಪ ಅಮ್ಮನ ಹಿಂದೆ ಅವಿತು ಎಲ್ಲವನ್ನೂ ಗಮನಿಸುವ ಸೊಗಸು, ಮಹಾರಾಜರು ಠೀವಿಯಲ್ಲಿ ನಡೆದು ಬಂದು ಸಿಂಹಾಸನವನ್ನು ಪ್ರದಕ್ಷಿಣೆ ಮಾಡಿ ಒಂಬತ್ತು ಮೆಟ್ಟಿಲೇರಿ, ಸಭೆಗೆ, ಅಶ್ವಾರೋಹಿ ದಳಕ್ಕೆ ಹಾಗೂ ಸಭಿಕರಿಗೆ ವಂದಿಸಿ ಚಕ್ಕಳಮಡಿಕೆ ಹಾಕಿ ಕೂತು ದರಬಾರು ನಡೆಸುತ್ತಿದ್ದ ರೀತಿ ಎಲ್ಲವೂ ಬಿಡಿಬಿಡಿ ಚಿತ್ರಗಳಿಗೆ ಜೀವ ತುಂಬಿದಂತೆ ಈಗಲೂ ನೆನಪಾಗುತ್ತವೆ.

ಖಾಸಗಿ ದರ್ಬಾರಿಗೆ ಕಾಲಿಡುವ ಮೊದಲೇ ಎಷ್ಟೋ ವಿಧವಾದ ಪೂಜೆಗಳು ಜರುಗುತ್ತಿದ್ದವು. ಹಲವು ತೀರ್ಥಕ್ಷೇತ್ರಗಳಿಂದ ತಂದ ಪವಿತ್ರ ತೀರ್ಥವನ್ನು ಮಹಾರಾಜರಿಗೆ ಪ್ರೋಕ್ಷಿಸಿ, ವಿವಿಧ ಪೂಜಾ ಕೈಂಕರ್ಯಗಳನ್ನೆಲ್ಲ ಮುಗಿಸಿ ನಂತರ ದರಬಾರಿಗೆ ಕಾಲಿಡುತ್ತಿದ್ದರು. ಮಹಾರಾಜರು ಆಸ್ಥಾನಕ್ಕೆ ನಡೆದು ಬರುತ್ತಿದ್ದರೆ ಎಲ್ಲೆಲ್ಲೂ ಮೌನ! ಯಾರೂ ತುಟಿ ಎರಡು ಮಾಡುತ್ತಿರಲಿಲ್ಲ. ಸಭೆಯಲ್ಲಿ ರಾಜ ಪ್ರಮುಖರು, ಯುರೋಪಿನ ಅಧಿಕಾರಿಗಳು, ಬ್ರಿಟಿಷ್ ಅಧಿಕಾರಿಗಳು ಹಾಗೂ ಸಾಮಾನ್ಯ ಜನರು ಎಲ್ಲರೂ ಇರುತ್ತಿದ್ದರು. ಅವರು ನಡೆದು ಬಂದು ಸಿಂಹಾಸನ ಪ್ರದಕ್ಷಿಣೆ ಮಾಡಿ ಒಂಬತ್ತು ಮೆಟ್ಟಿಲುಗಳನ್ನು ಏರಿ, ಸಭೆಗೆ ವಂದಿಸಿ ಕೂರುವವರೆಗೂ ಸದ್ದಡಗಿದಂತೆ ಸಭೆ ಅವರಿಗೆ ಗೌರವ ಅರ್ಪಿಸುತ್ತಿತ್ತು. ತದ ನಂತರದಲ್ಲಿ ಎಲ್ಲರೂ ಜೈಕಾರ ಹಾಕುತ್ತಿದ್ದರು. ಅದು ಈಗಲೂ ನನ್ನ ಕಿವಿಗಳಲ್ಲಿದೆ. ನಂತರ ನಡೆಯುತ್ತಿದ್ದ ಚಾಮುಂಡಿ ಅಮ್ಮನವರ ಪೂಜೆ ಒಂದು ಅಲೌಕಿಕ ಅನುಭವ. ಮಹಾರಾಣಿ ತ್ರಿಪುರ ಸುಂದರಿ ಅಮ್ಮಣ್ಣಿಯವರು ಪಾದಪೂಜೆಯಲ್ಲಿ ಮಹಾರಾಜರ ಪಾದಗಳಿಗೆ ಇಂದಿನಂತೆ ಹೂವು ಇತ್ಯಾದಿಗಳ ಬದಲಾಗಿ ಮುತ್ತು ರತ್ನ ವಜ್ರ ವೈಢೂರ್ಯಗಳಿಂದ ಪಾದಸೇವೆಗೈದ ರೋಮಾಂಚಕಾರಿ ಗಳಿಗೆಗಳನ್ನು ಕಣ್ಣಾರೆ ಕಂಡವನು ನಾನು. ನವರಾತ್ರಿಯ ಒಂಬತ್ತೂ ದಿನಗಳಲ್ಲಿ ಚಾಮುಂಡೇಶ್ವರಿಗೆ ಹಲವು ವಿಧವಾದ ಸೇವೆಗಳು ನೆರವೇರುವುದು ನನಗೆ ಆಶ್ಚರ್ಯ! ಯಾಕೆಂದರೆ ನಾನು ಮತ್ತೆಲ್ಲೂ ಅಂತಹ ಪೂಜೆಯನ್ನು ನೋಡಿಲ್ಲ. ಎಷ್ಟೋ ವರುಷಗಳ ಹಿಂದೆ ರಾಜಾಳ್ವಿಕೆಯು ಕೊನೆಗೊಂಡ ಮೇಲೂ ಮೈಸೂರಿನಲ್ಲಿ ದಸರೆಯು ನಡೆಯುತ್ತಲೇ ಇದೆ ಹಾಗೂ ನನ್ನೊಳಗೆ ಈ ಚಿತ್ರಗಳು ಇಂದಿಗೂ ಭದ್ರವಾಗಿ ಬಣ್ಣ ಮಾಸದಂತೆ ಉಳಿದುಕೊಂಡಿದೆ.

ನನ್ನ ತಂದೆಯವರ ಅಣ್ಣನಾದ ಬಸವರಾಜೇ ಅರಸುರವರು ನಾಲ್ವಡಿ ಕೃಷ್ಣರಾಜ ಒಡೆಯರ ಅಕ್ಕನ ಮಗಳಾದ ಯುವರಾಣಿ ಲೀಲಾವತಿ ದೇವಿಯವರನ್ನು ವಿವಾಹವಾಗಿದ್ದರು. ಹಾಗಾಗಿ ರಾಜ ಕುಟುಂಬದ ಸಂಬಂಧ ನಮ್ಮೊಂದಿಗೆ ಗಟ್ಟಿಯಾಗಿ ಬೆಸೆದಿತ್ತು. ಜಯಲಕ್ಷ್ತ್ರ್ಮಿ ವಿಲಾಸ ಅರಮನೆ ಇವರದ್ದಾಗಿತ್ತು. ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರು ಆಗಾಗ ದೊಡ್ಡಪ್ಪನವರ ಮನೆಗೆ ಬರುತ್ತಿದ್ದರು. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ದೊಡ್ಡಪ್ಪನವರ ದತ್ತು ಮಗನಿಗೆ ಜಯ ಚಾಮರಾಜೇಂದ್ರ ಒಡೆಯರ್‌ರವರ ಪ್ರೀತಿಯ ಪುತ್ರಿ ಗಾಯತ್ರಿ ದೇವಿಯವರೊಟ್ಟಿಗೆ ವಿವಾಹವಾಗಿತ್ತು. ಹಾಗಾಗಿ ಈ ಎರಡನೆಯ ತಲೆಮಾರಿನ ಸಂಬಂಧವೂ ಸೇರಿ ದೊಡ್ಡಪ್ಪನವರ ಕುಟುಂಬದ ಜೊತೆ ಮಹಾರಾಜರ ಬಾಂಧವ್ಯ ಬಹುವಾಗಿ ಬೆಸೆದಿತ್ತು. ದಸರೆಯ ಸಮಯದಲ್ಲಿ ನಡೆಯುತ್ತಿದ್ದ ರಾಜ ದರ್ಬಾರಿನಲ್ಲಿ ನಮ್ಮ ದೊಡ್ಡಪ್ಪನವರನ್ನು ಮಹಾರಾಜರು ತಮ್ಮ ಪಕ್ಕದಲ್ಲಿ ಒಂದು ಬೆಳ್ಳಿ ಭದ್ರಾಸನದ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಅದು ಮನೆಯ ಅಳಿುಂನಿಗೆ ಸಲ್ಲಬಹುದಾದ ಗೌರವದ ಪ್ರತೀಕವಾಗಿತ್ತು. ಹಾಗೆ ನಾನು ನನ್ನ ದೊಡ್ಡಪ್ಪನವರನ್ನು ಮಹಾರಾಜರ ಜೊತೆ ನೋಡಿದ ನೆನಪು ಈಗಲೂ ಭದ್ರವಾಗಿದೆ. ಮಹಾರಾಣಿ ಲೀಲಾವತಿ ದೇವಿಯವರು ಪೂಜೆಗೆ ಸಜ್ಜಾಗಿ ಜುಯಲಕ್ಷ್ಮೀ ವಿಲಾಸ ಅರಮನೆಯ ಮೆಟ್ಟಿಲುಗಳನ್ನು ಇಳಿದು ಬರುವಾಗ ಸಾಕ್ಷಾತ್ ಗೌರಿಯಂತೆ ಕಂಡದ್ದನ್ನು ಬೆರಗುಗಣ್ಣುಗಳಿಂದ ನೋಡಿದ್ದೇನೆ. ಆಕೆ ದಿವಾನ್ ಕಾಂತ ರಾಜೇ ಅರಸರ ಏಕ ಮಾತ್ರ ಪುತ್ರಿ. ನಾಲ್ವಡಿಯವರ ಪ್ರೀತಿಪಾತ್ರ ಸೊಸೆ. ಸುಮಾರು 60ರಿಂದ70 ವರ್ಷಗಳು ಕಳೆದರೂ ಆ ನೆನಪು ಮಾಸಿಲ್ಲ, ಆ ಬಾಂಧವ್ಯ ಹಳಸಿಲ್ಲ. ಸಲ್ಲಬೇಕಾದವರಿಗೆ ಸಲ್ಲಿಸುವ ಗೌರವ ಸಮರ್ಪಣೆಯೇ ಅರಮನೆಯ ಹಿರಿತನ.

ಮಹಾರಾಜರ ಜೊತೆ ಕುಟುಂಬ ಸದಸ್ಯರ ಜೊತೆ ಕೂತು ಊಟ ಮಾಡುವುದು ತುಂಬಾ ಖುಷಿ ತರುತ್ತಿತ್ತು. ಹರವಿದ್ದ ದೊಡ್ಡ ಬಾಳೆಲೆಗಳ ಮೇಲೆ ಬೆಳ್ಳಿಯ ಹರಿವಾಣಗಳನ್ನು ಇಡಲಾಗುತ್ತಿತ್ತು. ಅದರಲ್ಲಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಬಡಿಸಲಾಗುತ್ತಿತ್ತು. ಪುಟ್ಟ ಪುಟ್ಟ ಬಟ್ಟಲುಗಳಲ್ಲಿ ನೋಡಿಯೇ ದಣಿಯುವಷ್ಟು ವಿಧವಿಧ ಬಗೆಯ ಖಾದ್ಯಗಳು! ತಟ್ಟೆಯ ಅಳತೆಯೇ ನಮ್ಮ ಕೈ ಎಟುಕಲಾರದಷ್ಟು ದೊಡ್ಡದು. ನನ್ನ ಮುಂದಿರುವ ಹಾಗೂ ಎಟುಕುವಷ್ಟು ತಿಂಡಿಗಳನ್ನು ಮಾತ್ರವೇ ತಿನ್ನಲಾಗುತ್ತಿತ್ತು. ನನ್ನ ಕೈ ಕೂಡ ಎಟುಕುತ್ತಿರಲಿಲ್ಲ. ಎಷ್ಟು ಸಿಗುತ್ತಿತ್ತೊ ಅಷ್ಟು ಮಾತ್ರ ತಿನ್ನಲಾಗುತ್ತಿತ್ತು. ತಮಾಷೆ ಎಂದರೆ ಅಷ್ಟಕ್ಕೇ ನನ್ನ ಹೊಟ್ಟೆ ತುಂಬಿಯೇ ಹೋಗುತ್ತಿತ್ತು ಮತ್ತು ಒಟ್ಟಿಗೆ ಕೂತು ಉಣ್ಣುವ ಖುಷಿಯಲ್ಲಿ ಎಲ್ಲವೂ ಮರೆತೇ ಹೋಗುತ್ತಿತ್ತು. ಅರಮನೆ ಎಂದರೆ ಅದೆಷ್ಟೋ ಕೊಠಡಿಗಳ ಅಪರಿಮಿತ ವೈಭವದ ಆಗರ. ಅರಮನೆಯ ಬಗೆಗಿನ ನನ್ನ ಅಚ್ಚರಿಗಳಲ್ಲಿ ಮತ್ತೊಂದು ರಾಜ ಮನೆತನಸ್ಥರು ಸಂಬಂಧಗಳನ್ನು ಕಟ್ಟಿಕೊಂಡು ನಡೆಸುವ ರೀತಿ. ರಕ್ತ ಸಂಬಂಧಿಗಳನ್ನೂ ದೂರದ ಸಂಬಂಧಿಗಳನ್ನೂ ಬಾಂಧವ್ಯದ ನೂಲಿನಲ್ಲಿ ಕಟ್ಟಿ ಹಿಡಿದು ಕುಟುಂಬವನ್ನು ಒಂದು ಪುಟ್ಟ ಗುಂಪಾಗಿ ನಡೆಸುವುದು. ಹಬ್ಬ ಹುಣ್ಣಿಮೆ ಎಂದರೆ, ಶುಭ ಕಾರ್ಯಗಳೆಂದರೆ ಯಾರನ್ನೂ ಮರೆಯದೆ ಆಹ್ವಾನಿಸುವುದು ಹಾಗೂ ಒಳಗೊಳ್ಳುವುದು. ಹಾಗೇ ಬಿಟ್ಟು ಬಿಟ್ಟಿದ್ದಲ್ಲಿ ಎಂದೋ ಕೊನೆಗೊಂಡು ಹೋಗಬಹುದಿದ್ದ ಬಾಂಧವ್ಯವು ಇಂದಿಗೂ ಮಾಸದೇ ಉಳಿದುಕೊಂಡು ಬಂದಿದೆ ಎಂದರೆ ಅದು ಅರಮನೆಯ ಒಳಗೊಳ್ಳುವಿಕೆಯ ಪ್ರಭಾವ. ರಾಜಕೀಯ ಪ್ರೇರಿತವಾದ ಆಚರಣೆಗಳಲ್ಲಿ ನನಗೆ ಆಸಕ್ತಿ ಇಲ್ಲ. ಅಂದಿನ ದಸರೆಯ ಜೀವಂತಿಕೆ ಇಂದು ಉಳಿದಿಲ್ಲ. ಅದೊಂದು ಜರುಗಲೇಬೇಕಾದ ಕೈಂಕರ್ಯ ಎಂದು ಜರುಗಬಾರದು. ಅರಮನೆಯ ಈಗಿನ ಆಚರಣೆಗಳು ಆಂತರಿಕವಾಗಿ ಎಷ್ಟು ಬದಲಾವಣೆ ಹೊಂದಿವೆ! ಬಾಹ್ಯದಲ್ಲಿ ಸಲ್ಲುವ ಗೌರವ ಹಾಗೇ ಇದೆ ಎಂದೆನಿಸಬಹುದು. ಅರಮನೆಯ ಹಬ್ಬವೆಂದರೆ ಕೌಟುಂಬಿಕ ಸಂಭ್ರಮದ ನೆಲೆಯೂ ಆಗಿತ್ತು. ಈಗ ಅದು ಕೇವಲ ನೆಪಮಾತ್ರದ ಆಚರಣೆಗಷ್ಟೇ ಸೀಮಿತವಾಗಿಬಿಟ್ಟಿದೆ. ಸಾಧಾರಣ ಕುಟುಂಬವೊಂದರಿಂದ ಬಂದ ನನ್ನ ತಾಯಿಯವರಾದ ದೊಡ್ಡಮ್ಮಣ್ಣಿಯವರನ್ನು ರಾಜ ಕುಟುಂಬವು ಒಳಗೊಂಡ ರೀತಿಯನ್ನು ನಾನು ಇಂದಿಗೂ ಬಹುವಾಗಿ ಮೆಚ್ಚುತ್ತೇನೆ. ನನ್ನ ತಾಯಿ ಕೂಡ ಬಹಳ ಗಟ್ಟಿಗಿತ್ತಿ. ಎಲ್ಲವನ್ನೂ ತಣ್ಣಗೆ ನಿಭಾಯಿಸುವುದರಲ್ಲಿ ಆಕೆ ಎತ್ತಿದ ಕೈ. ನಾನು ಮೊದಮೊದಲು ಅರಮನೆಯನ್ನು ಕಂಡದ್ದು ಅವರ ಕಣ್ಣುಗಳ ಮುಖಾಂತರ.

ಅಪ್ಪ ಚದುರಂಗರು ಹಾಗೂ ಅರಮನೆ ದಸರಾ : ಮೈಸೂರು ಅರಮನೆಗೂ ಹಾಗೂ ಚದುರಂಗರಿಗೂ ನಿಕಟವಾದ ಸಂಬಂಧ ಸುವಾರು ನೂರು ವರ್ಷ ಹಳೆಯದು ಮತ್ತು ಗಾಢವಾದದ್ದು. ನನ್ನ ತಂದೆಯ ಅಣ್ಣ ಬಸವರಾಜರ ಮದುವೆಯಿಂದ ಈ ಸಂಬಂಧ ಶುರುವಾಯಿತು. ರಾಜಕುವಾರಿ ಲೀಲಾವತಿ ದೇವಿಯವರನ್ನು ವಿವಾಹವಾಗಿದ್ದು 1926ರ ಇಸವಿಯಲ್ಲಿ. ಆ ಕಾಲಕ್ಕೆ ರಾಯಲ್ ಸ್ಕೂಲಿನಲ್ಲಿ ಚದುರಂಗರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ರವರ ಸಹಪಾಠಿಗಳಾಗಿದ್ದರು. 1960ನೇ ಇಸವಿಯಿಂದಲೂ ಅರಮನೆಯಲ್ಲಿ ಜರುಗುವ ದಸರಾ ಮಹೋತ್ಸವಕ್ಕೆ ನಮಗೆ ಖಾಸಗಿ ಆಹ್ವಾನ ಪತ್ರಿಕೆ ಬರುತ್ತಿತ್ತು. ಈ ಆಹ್ವಾನ ಪತ್ರಿಕೆಗೆ ನಾನೇ ಸಹಿ ಹಾಕುತ್ತಿದ್ದೆ. ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಯರು ಹಾಗೂ ಅವರ ಕುಟುಂಬದೊಟ್ಟಿಗೆ ಬಾಲ್ಯದಲ್ಲಿ ಬೆಳೆದ ನನ್ನ ತಂದೆಯವರಿಗೆ ಯಾಕೋ ಆಹ್ವಾನ ಪತ್ರಿಕೆ ಬಂದ ಮೇಲೂ ಒಂದೊಮ್ಮೆ ಅರಮನೆಗೆ ಹೋಗಲು ಮನಸ್ಸು ಬಾರದೇ ತಟಸ್ಥರಾಗಿಬಿಟ್ಟರು. ಇವರು ಏಕೆ ಹೀಗೆ ತಟಸ್ಥವಾದರು ಎಂದು ಗಾಢವಾಗಿ ಯೋಚಿಸುವಾಗ ನನಗೆ ಹೊಳೆದ ಉತ್ತರವೆಂದರೆ ಚದುರಂಗರಿಗೆ ಅರಮನೆಯ ಸಂಪ್ರದಾಯ, ಅಲ್ಲಿನ ರೀತಿ ರಿವಾಜು ಮನಸ್ಸಿಗೆ ಒಗ್ಗುತ್ತಿರಲಿಲ್ಲ. ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಅವರದು. ತಾವು ಬಾಳಿದಷ್ಟು ದಿನ ತಮ್ಮ ಸ್ವತಂತ್ರ ಆಲೋಚನೆಗಳಿಗೆ ತಕ್ಕ ಜೀವನ ಸಾಗಿಸಿದವರು. ಅರಮನೆಯ ಬದುಕನ್ನು ಸಾಕಷ್ಟು ಗೌರವ ಮರ್ಯಾದೆಗಳಿಂದ ಕಂಡಿದ್ದರು. ಆದರೂ ಅವರೊಳಗಿದ್ದ ಸ್ವಾಭಿಮಾನ ಉದಾರವಾದಿತ್ವ ಹಾಗೂ ಜಾತ್ಯತೀತ ತತ್ವ ಹಾಗೂ ಚಿಂತನೆಗಳು ಅರಮನೆಯ ಒಳಗೆ ಬಂದಿಯಾದಂತಿರುವ ಬದುಕನ್ನು ಖಚಿತವಾಗಿ ನಿರಾಕರಿಸಿತ್ತು. ಅವರು ಎಂದೂ ಜನ ಸಾವಾನ್ಯರಿಗೆ ಮಿಡಿದವರು. ಹಾಗಾಗಿ ಚದುರಂಗರು ಹಾಗೂ ಅವರ ಕುಟುಂಬ ಅರಮನೆಯ ಆಡಂಬರಗಳಿಂದ ದೂರ ಉಳಿದುಬಿಟ್ಟರು. ದಸರಾದಂತಹ ಸಮಯದಲ್ಲಿ ಚದುರಂಗರ ವರ್ತನೆ ಆಗ ನನಗೆ ವಿಚಿತ್ರವೆನಿಸಿದರೂ ತದನಂತರದಲ್ಲಿ ಅದರ ಸೂಕ್ಷ್ಮತೆಗಳು ಅರ್ಥವಾಗತೊಡಗಿದವು.

ಸೊಸೆ ಕೇಳಿದ ದಸರಾ ಕತೆಗಳು : ಅಷ್ಟರಲ್ಲಿ ವಿಕ್ರಮ್ ರಾಜೇ ಅರಸರ ಪತ್ನಿ ವಿಜಯಲಕ್ಷ್ಮೀಯವರು ಮತ್ತೊಂದಷ್ಟು ನೆನಪಿನ ಜಾತ್ರೆಯನ್ನು ಕಣ್ಣ ಮುಂದೆ ಹರಡಿ ಕಟ್ಟಿಕೊಟ್ಟರು. ವಿಕ್ರಮ್ ರವರು ಯಾವುದನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಟ್ಟರೋ ಅದು ಚದುರಂಗರ ಬಾಲ್ಯದ ಅರಮನೆುಂ ನೆನಪುಗಳಿಗೆ ಬಹು ಹತ್ತಿರವಾಗಿದೆ. ಮಗುವಾಗಿದ್ದಾಗ ಜಯಚಾಮರಾಜೇಂದ್ರ ಒಡೆಯರ ಮುಂದೆ ಕೂತು ಊಟ ಮಾಡುವಾಗ ಚದುರಂಗರಿಗೂ ಮತ್ತೆ ತಮ್ಮ ಬಾಲ್ಯದಲ್ಲಿ ನಾಲ್ವಡಿಯವರ ಮುಂದೆ ಕೂತು ಊಟ ,ಆಡುವಾಗ ವಿಕ್ರಮ್ ರವರಿಗೂ ಒಂದೇ ರೀತಿಯ ಅನುಭವ! ಅಲುಗಾಡದೆ ಸುಮ್ಮನೆ ಕೂತು ಉಣ್ಣಬೇಕಾದ ಮಗುವಿಗೆ ತಟ್ಟೆಯಲ್ಲಿ ಹಿಡಿದಷ್ಟು ಭಕ್ಷ್ಯಗಳು ಕೈಯ್ಯೋಳಗೆ ಹಿಡಿಸಲಾರದೆ ಆಸೆಪಟ್ಟಿದ್ದನ್ನು ಬಿಟ್ಟು ದಕ್ಕಿದಷ್ಟನ್ನು ಮಾತ್ರ ತಿನ್ನಬೇಕಾಗುತಿತ್ತು. ಚದುರಂಗರು ಸಹ ಬೆಳ್ಳಿಯ ಹರಿವಾಣದ ಭಕ್ಷ್ಯಗಳನ್ನು ನೋಡಿಯೇ ಹೊಟ್ಟೆ ತುಂಬಿಸಿಕೊಂಡಿದ್ದರಂತೆ. ಬಗೆಬಗೆಯ ಸಿಹಿ ತಿಂಡಿಗಳಂತೂ ಮನ ಮೋಹಕವಾಗಿರುತ್ತಿತ್ತಂತೆ. ಆದರೆ ಪುಟ್ಟ ಮಗುವಿಗೆ ಕೈಗೆ ದಕ್ಕಿದ್ದೇ ಭಾಗ್ಯ. ಈ ನೆನಪನ್ನು ಆಗಾಗ ಅವರು ತಮ್ಮ ಸೊಸೆಯೊಂದಿಗೆ ಹಂಚಿಕೊಳ್ಳುತ್ತಿದ್ದರಂತೆ. ಅವರ ಮತ್ತೊಂದು ಹಿತವಾದ ನೆನಪೆಂದರೆ ನಾಲ್ವಡಿ ಅವರ ತಾಯಿ ಅವರೊಟ್ಟಿಗೆ ವಾತನಾಡುವುದನ್ನು ನೋಡುವ ಸಂಭ್ರಮ. ಆಕೆ ಮಾತನಾಡುತ್ತಿದ್ದುದು ಎಷ್ಟು ಸೂಕ್ಷತ್ಮವಾಗಿರುತ್ತಿತ್ತೆಂದರೆ ಪಕ್ಕದಲ್ಲಿ ಇನ್ನೊಬ್ಬರು ನಿಂತಿದ್ದರೂ ಅವರ ಮಾತು ಮಗನಿಗಷ್ಟೇ ಕೇಳುತ್ತಿತ್ತು. ಮಾತಷ್ಟೇ ಅಲ್ಲ, ಓಡಾಡುವಾಗಲೂ ಆಕೆ ಎಂದೂ ದಡಬಡನೆ ಸದ್ದು ಮಾಡಿಕೊಂಡು ಓಡಾಡಿದವರಲ್ಲ. ರಾಜಮಾತೆ ಎಂಬ ಘನತೆಗೆ ಎಂದೂ ತಮ್ಮಿಂದ ಯಾವುದೇ ಅಪಚಾರವಾಗದಂತೆ ನಡೆದುಕೊಂಡವರು. ಇವೆರಡನ್ನು ದಸರೆಯಲ್ಲಿ ತಾನು ಎಂದೂ ಮರೆಯಲಾರೆನೆಂದು ಚದುರಂಗರು ಆಗಾಗ ಹೇಳುತ್ತಿದ್ದರಂತೆ.

(ನಿರೂಪಣೆ : ಮಧುರಾಣಿ ಎಚ್ ಎಸ್)

 

lokesh

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago