ಹಾಡು ಪಾಡು

ಇರಾನ್ ಹೊಕ್ಕು ಬಂದ ಮೈಸೂರಿನ ವನಿತೆಯರು

ನಿರೂಪಣೆ: ರಶ್ಮಿ ಕೋಟಿ

ಇರಾನ್ ಪ್ರವಾಸಕ್ಕೆ ತಯಾರಾಗುತ್ತಿರುವಾಗ ನಮ್ಮ ಕೈಗೆ ಸಿಕ್ಕಿದ್ದು ಮೈಕೆಲ್‌ ಆಕ್ಸ್‌ವರ್ಥಿ ಅವರ ‘ಕ್ರಾಂತಿಕಾರಿ ಇರಾನ್’ ಪುಸ್ತಕ. ಆ ಪುಸ್ತಕದಲ್ಲಿ ಆಕ್ಸ್‌ವರ್ಥಿ ಹೇಳುವ ಇರಾನ್ ಒಂದು ದೇಶಕ್ಕಿಂತ ಹೆಚ್ಚಾಗಿ ಒಂದು ಖಂಡ, ರಾಷ್ಟ್ರಕ್ಕಿಂತ ಹೆಚ್ಚು ನಾಗರಿಕತೆ’ ಎಂಬ ಮಾತು ನಮ್ಮ ಇರಾನ್ ಪ್ರವಾಸವನ್ನು ಹೆಚ್ಚು ಕುತೂಹಲದಾಯಕವಾಗಿಸಿತ್ತು. ಇರಾನಿನ ಪ್ರವಾಸದ ನಂತರ, ಅಲ್ಲಿನ ಶ್ರೀಮಂತ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಪ್ರಭಾವಿತರಾದ ನಮಗೆಲ್ಲರಿಗೂ ಆಕ್ಸ್‌ವರ್ಥಿಯವರ ಮಾತು ಸರಿ ಎಂದು ನಿಸ್ಸಂದೇಹವಾಗಿ ಅನ್ನಿಸಿತು.

ಇರಾನ್ ವೈರುಧ್ಯಗಳ ನಾಡು. ಇದು ಇಸ್ಲಾಮಿಕ್ ಗಣರಾಜ್ಯವಾಗಿದ್ದು, ಶತಮಾನಗಳ ಹಳೆಯ ಸಂಪ್ರದಾಯಗಳು ಆಧುನಿಕ ಜಗತ್ತನ್ನು ಸಂಧಿಸುವ ಅನನ್ಯ ನೆಲೆವೀಡು. ಇರಾನ್ ದೇಶದ ವೀಸಾ ಪಡೆಯುವುದು ಕಷ್ಟವಲ್ಲದಿದ್ದರೂ, ಜನರು ಅವರ ಪಾಸ್‌ಪೋರ್ಟ್‌ನಲ್ಲಿ ಇರಾನ್‌ನ ಮುದ್ರೆ ಹಾಕಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಪಾಸ್‌ ಪೋರ್ಟ್‌ನಲ್ಲಿ ಇರಾನಿನ ಮುದ್ರೆಯಿದ್ದರೆ ಅಮೆರಿಕ ದೇಶಕ್ಕೆ ಹೋಗುವುದು ಕಷ್ಟವಾಗಬಹುದೆಂಬ ಕಾರಣದಿಂದ. ಇದು ಇರಾನ್ ಗೆ ಕೂಡ ಮನದಟ್ಟಾಗಿ, ತನ್ನ ಪ್ರವಾಸಿಗರಿಗೆ ಇ-ವೀಸಾ ಅಥವಾ ಪೇಪರ್ ವೀಸಾ ಸೌಕರ್ಯವನ್ನೂ ತೆರೆದಿಟ್ಟಿದೆ. ಆದರೂ ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಗಳು ಜನರನ್ನು ಇರಾನಿನತ್ತ ಹೋಗಲು ಹಿಂಜರಿಯುವಂತೆ ಮಾಡಿದ್ದರೂ, ನಾವು ಮೂವರೂ ಏಪ್ರಿಲ್ 10ರಂದು ಪ್ರಯಾಣಿಸಲು ತೀರ್ಮಾನಿಸಿದೆವು. ಇರಾನಿನ ಟೆಹರಾನ್, ಇಫಹಾನ್, ಶಿರಾಜ್, ಪರ್ಸೆಪೊಲಿಸ್‌ ಹಾಗೂ ಯಾಜ್ ನಗರಗಳನ್ನು ಅನ್ವೇಷಿಸಲು ಸಜ್ಜಾದೆವು.

ಇರಾನ್‌ನಲ್ಲಿ ಸುರಕ್ಷಿತವಾಗಿರಲು ಪ್ರವಾಸ ಮಾರ್ಗದರ್ಶಿಯ ಅಗತ್ಯವಿಲ್ಲ. ಅನೇಕ ಏಕಾಂಗಿ ಪ್ರಯಾಣಿಕರು ಸ್ವತಂತ್ರವಾಗಿ ಇರಾನಿಗೆ ಭೇಟಿ ನೀಡುತ್ತಾರೆ. ಇರಾನಿಯನ್ನರು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಜಗತ್ತಿನ ಎಲ್ಲ ಪ್ರವಾಸಿಗರನ್ನೂ ಸ್ವಾಗತಿಸುತ್ತಾರೆ. ಅದರಲ್ಲೂ ಭಾರತೀಯರನ್ನು ಕಂಡರೆ ಅವರಿಗೆ ವಿಶೇಷ ಪ್ರೀತಿ, ಆದರೂ ನಾವು ಸ್ಥಳೀಯ ಪ್ರವಾಸ ಮಾರ್ಗದರ್ಶಿಗಾಗಿ ಟ್ಯಾಪ್ ಪರ್ಷಿಯಾ (ಟ್ರಾವೆಲ್ ಅಕ್ರಾಸ್ ಪರ್ಷಿಯಾ) ಎಂಬ ಹೆಣ್ಣು ಮಕ್ಕಳೇ ನಡೆಸುವ ಲೋಕಲ್‌ ಟ್ರಾವೆಲ್ ಕಂಪೆನಿಯನ್ನು ಆಯ್ಕೆ ಮಾಡಿಕೊಂಡೆವು. ಇರಾನಿಯನ್ನರು ಇಂಗ್ಲಿಷನ್ನು ವಿರಳವಾಗಿ ಮಾತನಾಡುತ್ತಾರೆ. ಹಾಗಾಗಿ ಸ್ಥಳೀಯರಾದರೂ ಇಂಗ್ಲಿಷ್ ಮಾತನಾಡಲು ಬರುವ ಗೈಡನ್ನೇ ಆಯ್ಕೆ ಮಾಡಿಕೊಂಡೆವು. ಇರಾನ್ ರಾಜಧಾನಿ ಟೆಹರಾನ್‌ನ ಇಮಾಮ್ ಕೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ನಮ್ಮನ್ನು ಬರಮಾಡಿಕೊಳ್ಳಲು ಗಾಡಿಯೊಂದಿಗೆ ಡ್ರೈವರ್ ಕಾಯುತ್ತಿದ್ದ. ಆತ ನಮ್ಮನ್ನು ಈಗಾಗಲೇ ನಾವು ನಿಗದಿ ಮಾಡಿಕೊಂಡಿದ್ದ ಹೋಟೆಲ್‌ಗೆ ಕರೆದೊಯ್ದ.

ನಾವು ಬುಕ್ಕಿಂಗ್ ಮಾಡಿಕೊಂಡಿದ್ದ ಹೋಟೆಲ್ ಆಕರ್ಷಕವಾದ ಹಳೆಯ ಬಂಗಲೆಯಾಗಿತ್ತು. ಇರಾನ್ ತುಂಬಾ ಒಣ ಪ್ರದೇಶವಾದ್ದರಿಂದ ವಾತಾವರಣವನ್ನು ತಂಪಾಗಿರಿಸಿಕೊಳ್ಳಲು ಅವರು ತೊರೆಗಳ ನೀರನ್ನು ಸಂಗ್ರಹಿಸುವ ಮತ್ತು ಮರುಬಳಕೆ ಮಾಡುವ ವಿಧಾನ ಅದ್ಭುತವಾಗಿದೆ. ಮನೆಗಳನ್ನು ತಂಪಾಗಿಸುವ ಸಲುವಾಗಿ ಮನೆಯ ಚಾವಣಿಗಳಲ್ಲಿ ನೀರಿನ ಸಣ್ಣ ಕಾಲುವೆಗಳನ್ನು ಮಾಡಿರುತ್ತಾರೆ. ನಾವು ತಂಗಿದ್ದ ಹೋಟೆಲ್ ಕೂಡ ನೀರಿನ ಸಣ್ಣ ಕಾಲುವೆಗಳನ್ನು ಒಳಗೊಂಡಿದ್ದರಿಂದ ಅಲ್ಲಿ ತಂಗಿದ್ದ ನಮಗೆಲ್ಲ ಹಿತವಾದ ಅನುಭವ ನೀಡಿತ್ತು. ಇರಾನ್ ಅಷ್ಟೊಂದು ಸುಂದರ, ವೈವಿಧ್ಯಮಯ ಭೂದೃಶ್ಯವನ್ನು ಹೊಂದಿರುತ್ತ ದೆಂದು ನಾವು ನಿರೀಕ್ಷಿಸಿರಲಿಲ್ಲ. ಶುಷ್ಕ, ಮರುಭೂಮಿಯಂತಹ ದೃಶ್ಯಾವಳಿ ಗಳನ್ನು ಊಹಿಸಿದ್ದೆವು. ಬದಲಾಗಿ ಸೊಂಪಾದ ಬಯಲು ಪ್ರದೇಶಗಳು, ಹಿಮಚ್ಚಾದಿತ ಪರ್ವತಗಳು, ಮರುಭೂಮಿ ನಗರಗಳು ಹಾಗೂ ಆಧುನಿಕ ಸೈಲೈನ್‌ಗಳು ನಮ್ಮನ್ನು ಬೆರಗಾಗಿಸಿದವು. ಟೆಹರಾನ್ ಪುರಾತನ ನಗರವಾಗಿದ್ದರೂ ಯುರೋಪಿಯನ್ ಶೈಲಿಯಲ್ಲಿ ಅಭಿವೃದ್ಧಿಯಾಗಿದೆ. ಅಗಲವಾದ ರಸ್ತೆಗಳು, ಎರಡೂ ಬದಿಗಳಲ್ಲಿ ಫುಟ್‌ ಪಾತ್‌ಗಳು, ಸಾಲು ಮರಗಳು, ವಸಂತ ಋತುವಾಗಿದ್ದ ಕಾರಣ ಅವೆಲ್ಲವೂ ಹೂವುಗಳಿಂದ ತುಂಬಿಕೊಂಡಿದ್ದು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ಅದನ್ನು ಆಸ್ವಾದಿಸುವುದಕ್ಕಾಗಿಯೇ ನಾವು ನಡೆದುಕೊಂಡು ಹಲವಾರು ಸ್ಥಳೀಯ ಜಾಗಗಳನ್ನು ವೀಕ್ಷಿಸಿದೆವು.

ನಾವು ಇರಾನ್‌ ಗೆ ಭೇಟಿ ನೀಡಲು ನಿರ್ಧರಿಸಿದಾಗ ನಮ್ಮನ್ನು ಕಾಡಿದ ಪ್ರಶ್ನೆಯೆಂದರೆ, ಅಲ್ಲಿ ಏನು ಧರಿಸಬೇಕೆಂಬುದು. ಇರಾನಿಯನ್ನರು ಸಾಮಾನ್ಯವಾಗಿ ಕೆಲವು ಇತರ ಮುಸ್ಲಿಂ ರಾಷ್ಟ್ರಗಳಂತೆ ಕಟ್ಟುನಿಟ್ಟಾದ ಹಿಜಾಬ್ ನಿಯಮಗಳನ್ನು ಅನುಸರಿಸುವುದಿಲ್ಲ. ಇರಾನ್‌ನಲ್ಲಿ ಮಹಿಳೆಯರು ಇಸ್ಲಾಮಿಕ್ ಪದ್ಧತಿಯಲ್ಲಿ ವಸ್ತ್ರವನ್ನು ಧರಿಸಿದರೂ ಅದು ಕಡ್ಡಾಯವೇನಲ್ಲ. ಸ್ಕಾರ್ಫ್ ಅಥವಾ ಟ್ಯೂನಿಕ್ಸ್ ಅನ್ನು ತಲೆಗೆ ಸುತ್ತಿಕೊಂಡರೆ ಸಾಕು.

ಪ್ರಪಂಚದಾದ್ಯಂತ ಇರಾನಿನ ಬಗ್ಗೆ ಒಂದು ತಪ್ಪು ಗ್ರಹಿಕೆಯಿದೆ. ಹೆಣ್ಣು ಮಕ್ಕಳಿಗೆ ಇರಾನಿನಲ್ಲಿ ಸ್ವಾತಂತ್ಯವಿಲ್ಲ ಎಂದೆಲ್ಲಾ ಬಿಂಬಿಸಲಾಗಿದೆ. ಆದರೆ, ಇದು ನಿಜವಲ್ಲ ಎಂಬುದನ್ನು ಆ ನೆಲದಲ್ಲಿ ಕಾಲಿಟ್ಟ ಕ್ಷಣವೇ ನಮಗೆ ಅರಿವಾಯಿತು. ನಾವು ಕಂಡು, ಕೇಳಿದ ಪ್ರಕಾರ ಇಲ್ಲಿನ ಹೆಚ್ಚಿನ ಮಹಿಳೆಯರು ಸಾಕಷ್ಟು ಸ್ವತಂತ್ರರು ಮಾತ್ರವಲ್ಲ, ಅವರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ ಹಾಗೂ ಗಟ್ಟಿ ಧ್ವನಿ ಕೂಡ ಇದೆ. ಇರಾನ್-ಇರಾಕ್ ಯುದ್ಧದಲ್ಲಿ ಭಾಗವಹಿಸಿ ಗಂಡು ಮಕ್ಕಳು ಜೀವ ಕಳೆದುಕೊಂಡ ಕಾರಣ, ಎಲ್ಲೆಡೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಕಂಡುಬರುತ್ತಿದ್ದರು. ಕೆಲಸದ ಜಾಗದಲ್ಲಿ, ಟ್ಯಾಕ್ಸಿಗಳನ್ನು ಓಡಿಸುವವರೂ ಹೆಚ್ಚಾಗಿ ಹೆಣ್ಣು ಮಕ್ಕಳೇ ಆಗಿದ್ದರು. ಯಾರೂ ಕೂಡ ಮುಖವನ್ನು ಬುರ್ಖಾದಿಂದ ಮುಚ್ಚಿಕೊಂಡಿರಲಿಲ್ಲ. ಹೆಚ್ಚಾಗಿ ಎಲ್ಲರೂ ತಮ್ಮ ತಲೆಯ ಮೇಲೆ ಒಂದು ಸ್ಟಾರ್ಫ್ ಅನ್ನು ಸುತ್ತಿಕೊಂಡಿದ್ದರು. ತಮ್ಮ ತಲೆಯನ್ನು ವಸ್ತ್ರದಿಂದ ಸುತ್ತಿಕೊಂಡಿರದ ಮಹಿಳೆಯರೂ ಹಲವರಿದ್ದರು. ನಾವು ಆಶ್ಚರ್ಯಚಕಿತರಾಗಿ ನಮ್ಮ ಗೈಡ್ ಅನ್ನು ಕೇಳಿದಾಗ, ಕಳೆದ ವರ್ಷ ಮಾಸ ಅಮೀನಿ ಎಂಬ ಹೆಣ್ಣು ಮಗಳು ತನ್ನ ತಲೆಯನ್ನು ವಸ್ತ್ರದಿಂದ ಮುಚ್ಚಿಕೊಂಡಿರದ ಕಾರಣ ಆಕೆಯನ್ನು ಬಂಧಿಸಲಾಗಿ, ಆಕೆ ಜೈಲಿನಲ್ಲೇ ಕೊನೆಯುಸಿರೆಳೆದಿದ್ದುದು ಪ್ರಪಂಚದಾದ್ಯಂತ ಸುದ್ದಿಯಾಗಿತ್ತು ಇದಕ್ಕೆ ಪ್ರತಿಯಾಗಿ ತಮ್ಮತಲೆಯನ್ನು ವಸ್ತ್ರದಿಂದ ಸುತ್ತಿಕೊಳ್ಳದೇ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆಂದು ನಮಗೆ ತಿಳಿಸಿದರು. ನಮಗೆಲ್ಲರಿಗೂ ಪುಸ್ತಕದ ಗೀಳು ಇರುವುದನ್ನು ಅರಿತ ನಮ್ಮ ಗೈಡ್ ನಮ್ಮನ್ನು ಬೆಟ್ಟದ ತುದಿಯಲ್ಲಿರುವ ಬುಕ್ ಗಾರ್ಡನ್‌ಗೆ ಕರೆದೊಯ್ದಿದ್ದರು. ಅದು ಪುಸ್ತಕದ ಅಂಗಡಿಯಂತಿರಲಿಲ್ಲ; ಜಾತ್ರೆಯಂತಿತ್ತು. ಅಲ್ಲಿ ಪರ್ಷಿಯನ್ ಭಾಷೆಯ ಪುಸ್ತಕಗ ಳೊಂದಿಗೆ ಇಂಗ್ಲಿಷ್ ಸಾಹಿತ್ಯಕ್ಕೂ ಒಂದು ವಿಭಾಗವಿತ್ತು. ತತ್ವಜ್ಞಾನಿ ಫೆಡರಿಕ್ ನೀಷೆ, 20ನೆಯ ಶತಮಾನ ಕಂಡ ಬಹಳ ಪ್ರಭಾವಿ ಬರಹಗಾರ ಫ್ಯಾನ್ಸ್ ಕಾಷ್ಮಾ ಕಮ್ಯುನಿಸಮ್ ಪಿತಾಮಹ ಕಾರ್ಲ್ ಮಾರ್ಕ್ಸ್ ಒಳಗೊಂಡಂತೆ ಅನೇಕ ಆಧುನಿಕ ಬರಹಗಾರರ ಪುಸ್ತಕಗಳು ಮತ್ತು ಬಹಳಷ್ಟು ಆಸಕ್ತಿದಾಯಕ ಮಕ್ಕಳ ಪುಸ್ತಕಗಳೂ ಕಂಡುಬಂದವು.

ನಮ್ಮ ಗಮನವನ್ನು ಸೆಳೆದ ಕುತೂಹಲದ ವಿಷಯವೆಂದರೆ, ಸಣ್ಣ ಸಣ್ಣ ಬೇಕರಿಗಳು ಪ್ರತಿ ರಸ್ತೆಗಳಲ್ಲಿಯೂ ಕಂಡುಬಂದುದು. ಪರ್ಷಿಯನ್ ಪಾಕ ಪದ್ಧತಿಯು ಆಕರ್ಷಕವಾಗಿದ್ದು, ಇರಾನಿನಲ್ಲಿ ತರಹೇವಾರಿಯ ಬ್ರೆಡ್‌ಗಳು ಲಭ್ಯವಿದೆ. ಟಾಪ್ಸನ್, ಬಾರ್ಬರಿ ನಾನ್, ಸಂದೋಗ್, ಲಾವಾಶ್ ಎಂದು ಕರೆಯುವ ಹಲವಾರು ತರಹದ ಬ್ರೆಡ್‌ಗಳನ್ನು ಸೇವಿಸುತ್ತಾರೆ. ಆದರೆ ಮನೆಯಲ್ಲಿ ಯಾರೂ ತಯಾರಿಸುವುದಿಲ್ಲ. ಮುಂಜಾನೆ ಜನರು ತಮ್ಮ ಮನೆಗಳಿಗೆ ಬೇಕಾಗುವ ಬ್ರೆಡ್‌ಗಳನ್ನು ಬೇಕರಿಗಳಿಂದ ಕೊಂಡೊಯ್ಯುತ್ತಾರೆ. ಈ ಬ್ರೆಡ್‌ಗಳನ್ನೆಲ್ಲ ಗೋಧಿಯಿಂದ ತಯಾರು ಮಾಡುತ್ತಾರೆ. ಅವರು ಸಾಕಷ್ಟು ತರಕಾರಿಗಳನ್ನು ಮತ್ತು ಬೇಳೆಕಾಳುಗಳನ್ನು ತಮ್ಮ ಆಹಾರದಲ್ಲಿ ಉಪಯೋಗಿ ಸುತ್ತಾರೆ. ಹಾಗಾಗಿ ಸಸ್ಯಾಹಾರಿಗಳಿಗೆ ಅಲ್ಲಿ ಬದುಕುವುದು ಕಷ್ಟವೇನಲ್ಲ.

ಇರಾನಿನ ಸಾಮಾಜಿಕ ಜೀವನದಲ್ಲಿ ಚಹಾವು ನಿರ್ಣಾಯಕ ಭಾಗವಾಗಿದೆ ಮತ್ತು ಅತಿಥಿ ಸತ್ಕಾರದ ಸಂಕೇತವಾಗಿ ನೀಡಲಾಗುತ್ತದೆ. ಹಲವು ಸ್ಥಳಗಳಲ್ಲಿ ನಾವು ಪಾನೀಯ ಅಥವಾ ಚಹಾವನ್ನು ಆರ್ಡರ್ ಮಾಡಿದಾಗ ನಮ್ಮಿಂದ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಇದು ಎಲ್ಲ ಪ್ರವಾಸಿಗರೊಂದಿಗೆ ಇರಾನಿನ ಜನರ ಸಾಮಾನ್ಯ ನಡವಳಿಕೆಯಾಗಿದೆ. ತಮ್ಮ ದೇಶಕ್ಕೆ ಬರುವ ಅತಿಥಿಗಳ ಸತ್ಕಾರದಲ್ಲಿ ಇರಾನಿನ ಜನರಿಗೆ ಸಾಟಿಯೇ ಇಲ್ಲ.

ಪ್ರವಾಸದ ಒಂದು ದಿನ ಆಗ ತಾನೇ ಬೆಳಗಿನ ಉಪಾಹಾರ ಮುಗಿಸಿ ಅಂದಿನ ತಾಣಗಳ ವೀಕ್ಷಣೆಗೆ ತಯಾರಾಗುವ ಸಮಯದಲ್ಲಿ ರವಿ ಜೋಶಿ ತಮ್ಮ ಮೂಲಗಳಿಂದ ತಿಳಿದು ಬಂದ ಮಾಹಿತಿಯನ್ನು ತಮ್ಮ ಪತ್ನಿ ಮೀನಾ ಅವರೊಂದಿಗೆ ಹಂಚಿಕೊಂಡರು. ಅವರು ಸಂಪುಟ ಸಚಿವಾಲಯದ ನಿವೃತ್ತ ಜಂಟಿ ಕಾರ್ಯದರ್ಶಿಯಾಗಿದ್ದ ಕಾರಣ ವಿದೇಶಾಂಗ ಇಲಾಖೆ ಭಾರತೀಯರಿಗೆ ರವಾನಿಸಿದ್ದ ಎಚ್ಚರಿಕೆಯ ಸಂದೇಶವನ್ನು ನಮಗೆ ಕಳಿಸಿ, ಅದನ್ನು ಓದಿ ನಿರ್ಧರಿಸುವಂತೆ ತಿಳಿಸಿದರು. ಇರಾನ್ ಪ್ರವಾಸ ಕೈಗೊಳ್ಳುವ ಮೊದಲೇ ಅಲ್ಲಿನ ಪರಿಸ್ಥಿತಿಯ ಅರಿವು ನಮಗೆಲ್ಲರಿಗೂ ಇತ್ತು.

ಏಪ್ರಿಲ್ 1ರಂದು ಡಮಾಸ್ಟಸ್‌ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಕಮಾಂಡರ್‌ಗಳು ಸೇರಿದಂತೆ 7 ಮಂದಿ ಕಾವಲು ಅಧಿಕಾರಿಗಳು ಮೃತಪಟ್ಟಿದ್ದರು. ಇಸ್ರೇಲ್‌ನ ದಾಳಿಗೆ ಇರಾನ್, ಪ್ರತೀಕಾರದ ಶಪಥ ಮಾಡಿತ್ತು. ಈ ಹಿನ್ನೆಲೆಯಲ್ಲೇ ಇರಾನ್ ಹಾಗೂ ಇಸ್ರೇಲ್ ಪ್ರವಾಸಕ್ಕೆ ತೆರಳದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಎಚ್ಚರಿಕೆಯನ್ನು ರವಾನಿಸಿತು. ಇದು ನಮ್ಮ ಉತ್ಸಾಹವನ್ನೇ ಕುಗ್ಗಿಸಿತು.

ಇರಾನಿನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತಾಗಿ ನಮ್ಮ ಗೈಡ್ ಅನ್ನು ಕೇಳಿದಾಗ, ಆಕೆ ನಾವು ಇದಕ್ಕೆಲ್ಲಾ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ರತೀ ವರ್ಷ ಇದು ನಡೆಯುತ್ತಲೇ ಇರುತ್ತದೆ. ಸ್ವಲ್ಪ ಮಟ್ಟಿಗೆ ಎಲ್ಲರಿಗೂ ಭಯವಾಗುತ್ತದೆ. ಆದರೆ ಜೀವನ ಅದರ ಪಾಡಿಗೆ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು. ನಮಗೆಲ್ಲಾ ಅದು ಅತಿ ದೊಡ್ಡ ಜೀವನ ಪಾಠವಾಯಿತು. ಮಾಧ್ಯಮಗಳು ಇರಾನಿನ ದಬ್ಬಾಳಿಕೆ ಹಾಗೂ ನಿರ್ಬಂಧಗಳ ಬಗ್ಗೆ ಚಿತ್ರಿಸುತ್ತವೆ. ಆದರೆ, ನಮಗೆ ಇರಾನ್‌ನಲ್ಲಿ ಪ್ರಾಚೀನ ಬಜಾರ್‌ಗಳ ಮೂಲಕ ಅಲೆದಾಡುತ್ತಿರಲಿ ಅಥವಾ ಸ್ಥಳೀಯರು ನಡೆಸುವ ಹೋಟೆಲುಗಳಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಿರಲಿ, ನಾವು ಸುರಕ್ಷಿತವಾಗಿದ್ದೇವೆ ಎಂದು ಭಾಸವಾಯಿತು. ಇಲ್ಲಿನ ಪೊಲೀಸರು ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇರಾನಿನ ಸುರಕ್ಷತಾ ಕ್ರಮಗಳ ಜೊತೆಗೆ, ಅದರ ಸ್ವಾಗತಾರ್ಹ ವಾತಾವರಣವು ಯಾವುದೇ ಭಯವಿಲ್ಲದೆ, ದೇಶದ ಸಂಸ್ಕೃತಿ ಯನ್ನು ಸಂಪೂರ್ಣವಾಗಿ ಆನಂದಿಸಲು ಅನುವು ಮಾಡಿಕೊಟ್ಟಿತು. ಅವರ ಆತಿಥ್ಯ, ಔದಾರ್ಯ ನಾವು ಭೇಟಿ ನೀಡಿರುವ ಯಾವ ದೇಶಕ್ಕೂ ಸಾಟಿಯಿಲ್ಲ.
rashmikoti@andolana.in

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

4 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

5 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

5 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

6 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

6 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

6 hours ago