ಹಾಡು ಪಾಡು

ಮೇಲುಕೋಟೆಯ ಹೊಸ ಜೀವನ ದಾರಿ

ಶಿಕ್ಷಣವನ್ನು ಹೊಸ ಬೆಳಕಿನಲ್ಲಿ ನೋಡುವ ವಿಶಿಷ್ಟ ಪ್ರಯತ್ನ ಇದು

ವೇದ ಭದ್ರಾವತಿ

ಅದೊಂದು ತಿಳಿಬೆಳಗು – ಗೆಳತಿಯರೊಂದಿಗೆ ‘ಹೊಸ ಜೀವನ ದಾರಿ’ಗೆ ಬಂದಾಗ ಅದು ಚಟುವಟಿಕೆಗಳ ತಾಣವಾಗಿತ್ತು. ಒಂದೆಡೆ ಎತ್ತು ಗಾಣ ಸುತ್ತುತ್ತಿದ್ದರೆ, ಇತ್ತ ಕಡೆ ವಿಶಾಲದೊಂದು ಕೋಣೆಯಲ್ಲಿ ಚರಕ ನೂಲುವ ಸದ್ದು. ಹೊರಗೆ ಅಂಗಳದಲ್ಲಿ ಬಣ್ಣ ಅದ್ದಿಕೊಂಡು ಬಿಸಿಲಿಗೆ ಮೈ ಒಡ್ಡಿದ ಬಟ್ಟೆಗಳು ಮತ್ತು ಇವೆಲ್ಲವನ್ನೂ ತದೇಕವಾಗಿ ನಿರ್ವಹಿಸುತ್ತಾ, ಅತ್ತಿಂದಿತ್ತ ಅಡ್ಡಾಡುತ್ತಿರುವ ಒಂದಷ್ಟು ಹರಯದ ಹುಡುಗರು!

ಹಳ್ಳಿಯ ಬೆಳಗೆಂದರೆ ಸಹಜವಾಗಿ ಕಾಣಸಿಗುವ ಇಂಥ ದೃಶ್ಯಗಳು ಮೇಲುಕೋಟೆಯ ‘ಹೊಸ ಜೀವನ ದಾರಿ’ ಎಂಬ ಸ್ಥಳದಲ್ಲಿ ಬೇರೆ ಅರ್ಥ ಪಡೆದುಕೊಂಡಿರುವುದಕ್ಕೆ ಕಾರಣ ಆ ಹುಡುಗರು! ನಾಲ್ಕು ಗೋಡೆಗಳ ಮಧ್ಯೆ ಪುಸ್ತಕದ ಪಾಠ ಕಲಿಯಲು ಸೋತು ಹತಾಶರಾಗಿದ್ದವರು. ಮಂಡ್ಯ, ಮಂಗಳೂರು… ಹೀಗೆ ಹತ್ತಾರು ಕಡೆಯಿಂದ ಇಲ್ಲಿಗೆ ಬಂದವರು. ಈಗವರು ಮಾಡುತ್ತಿರುವ ಕೆಲಸ ಕೂಲಿಗಾಗಿ ಅಲ್ಲ – ಕಲಿಕೆಗಾಗಿ! ಎಣ್ಣೆ ತೆಗೆಯುತ್ತ, ರಾಟೆ ತಿರುಗಿಸುತ್ತ, ಸುತ್ತಲ ಗಿಡಗಂಟಿ – ಪಶು ಪಕ್ಷಿಗಳೊಂದಿಗೆ ಹರಟುತ್ತ ಅವರು ಕಲಿಯುತ್ತಿರುವ ಹೊಸ ಪಾಠದ ಹೆಸರು ಜೀವನ ಪಾಠ! ಕಲಿಸುತ್ತಿರುವ ಶಾಲೆ ಜೀವನ ಶಾಲೆ!

‘ಜೀವನ ಶಾಲೆ’ ಶಿಕ್ಷಣವನ್ನು ಹೊಸ ಬೆಳಕಿನಲ್ಲಿ ನೋಡುವ ವಿಶಿಷ್ಟ ಪ್ರಯತ್ನ. ಏಕೆಂದರೆ ಪ್ರತಿಯೊಂದು ಕೆಲಸವೂ ಜ್ಞಾನವನ್ನೇ ಆಧರಿಸಿದೆ. ಮನೆಯಲ್ಲಿ ಅಡುಗೆ ಮಾಡಲು ಬೇಕಿರುವ ಜ್ಞಾನ, ರೈತನಿಗೆ ಇರುವ ಮಣ್ಣು, ಬೆಳೆ, ಋತುಮಾನಗಳ ತಿಳಿವು, ನೇಕಾರನಿಗೆ ಗೊತ್ತಿರುವ ದಾರದ ಹದ, ಎಳೆಗಳನ್ನು ಜೋಡಿಸುವ ವಿಧ ಎಲ್ಲವೂ ಜ್ಞಾನವೇ. ಆದರೆ ಸಾಕ್ಷರರಲ್ಲದ ಇವರ ಜ್ಞಾನಕ್ಕೆ ಪ್ರಮಾಣ ಪತ್ರ ನೀಡುವವರಾರು? ಆಧುನಿಕ ಶಿಕ್ಷಣ ವ್ಯವಸ್ಥೆಯ ಇಂಥ ಕೊರತೆಗಳನ್ನು ಮೀರಬೇಕಾಗಿದೆ. ನಿತ್ಯ ೪ ಗಂಟೆಗಳ ಶ್ರಮದಾನ, ಸಂವಹನಕ್ಕಾಗಿ ಭಾಷೆಗಳ ಕಲಿಕೆ, ಆಟೋಟಗಳು, ಜೊತೆಗೆ ಜೀವ ವಿಕಾಸ ಕುರಿತ ಪಾಠಗಳು, ಭಾನುವಾರ ಸಂಜೆ ಪ್ರಕೃತಿ ಅಧ್ಯಯನಕ್ಕೆ ಮೀಸಲಾದ ಸಾಕ್ಷ್ಯಚಿತ್ರಗಳ ವೀಕ್ಷಣೆ ಮತ್ತು ಚರ್ಚೆ ಹೀಗೆ ಸರ್ವಾಂಗೀಣ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ.

ಇದರೊಂದಿಗೆ ಮಕ್ಕಳ ದುಡಿತಕ್ಕೆ ಅನುಗುಣವಾಗಿ ಅವರಿಗೆ ಸ್ಟೈಪೆಂಡ್ ನೀಡುವುದು, ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮುಂತಾಗಿ ಸುಸ್ಥಿರ ಹಾಗೂ ಪೂರಕ ವಾತಾವರಣ ಕಲ್ಪಿಸಲಾಗಿದೆ. ಜೀವನ ಶಾಲೆಯ ವಿನ್ಯಾಸದಲ್ಲಿ ಮತ್ತೊಂದು ಮಹತ್ವದ ಘಟ್ಟ ಪಾದಯಾತ್ರೆ. ಅದೊಂದು ನಿಧಾನ ಕ್ರಿಯೆ. ಒಂದು ನಿರ್ದಿಷ್ಟ ಪ್ರದೇಶದ ಭೌಗೋಳಿಕ ರಚನೆ, ಅಲ್ಲಿನ ಜನರ ಜೀವನ ಶೈಲಿ, ಅವರ ಸವಾಲುಗಳು, ನಂಬಿಕೆಗಳು, ಅದಕ್ಕನುಗುಣವಾಗಿ ರೂಪುಗೊಂಡ ಆಚರಣೆಗಳು, ವಿಶಿಷ್ಟತೆಗಳು, ಲಿಂಗ ತಾರತಮ್ಯ, ಸಾಮಾಜಿಕ ರಚನೆ ಇವೆಲ್ಲವನ್ನೂ ತಿಳಿಯಲು ಪಾದಯಾತ್ರೆ ಅವಕಾಶ ನೀಡುತ್ತದೆ. “ಇಲ್ಲಿ ಎಲ್ಲವನ್ನೂ ಕಲಿಯುವುದು ಅನುಭವದ ಮೂಲಕ. ಶ್ರಮದ ಕೆಲಸ, ಶರೀರ ಮತ್ತು ಮನಸ್ಸು ಎರಡನ್ನೂ ಗಟ್ಟಿಯಾಗಿಸುತ್ತದೆ.

ನಮಗೆ ಇಷ್ಟವಾದ ಕೆಲಸದಲ್ಲಿ ತೊಡಗಿದಾಗ ಯಾವುದೇ ಒತ್ತಡವಿರುವುದಿಲ್ಲ. ಇಂಥ ಸ್ವಾತಂತ್ರ್ಯ ನಮ್ಮ ಬಗ್ಗೆ ನಾವೇ ಹೆಮ್ಮೆ ಪಡುವಂತೆ ಮಾಡುತ್ತದೆ” ಎನ್ನುತ್ತಾರೆ ಸುಮನಸ್ ಕೌಲಗಿ (ಸುಮನಸ್ ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ಸಸ್ಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ‘ಸ್ವರಾಜ್ಯ ಪರಿಕಲ್ಪನೆ’ ವಿಷಯದಲ್ಲಿ ಪಿಎಚ್.ಡಿ. ಪಡೆದಿದ್ದಾರೆ).

“ಹೊರಾವರಣದಲ್ಲಿ ದುಡಿಯುವಾಗ ಸುತ್ತಮುತ್ತಲ ಆಗುಹೋಗುಗಳ ಬಗ್ಗೆ ಗಮನ ಹೊರಳುತ್ತದೆ. ಪರಿಸರದ ಚಟುವಟಿಕೆಗಳಿಗೆ ಕಣ್ಣು ಕಿವಿಗಳಾಗಿ, ಅಲ್ಲಿನ ನಿರಂತರ ವಿಸ್ಮಯಗಳಲ್ಲಿ ಬೆರೆತು ಹೋಗುವುದೊಂದು ಅನನ್ಯ ಅನುಭವ. ಇದರಿಂದ ಸಹಜವಾಗಿ ಪ್ರಕೃತಿ ಪ್ರೇಮ ಬೆಳೆಯುತ್ತದೆ. ಮನುಷ್ಯ ಮತ್ತು ಪ್ರಕೃತಿಯ ನಡುವೆ ಅಷ್ಟೇ ಅಲ್ಲ, ಕಳೆದು ಹೋಗುತ್ತಿರುವ ಮಾನವ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವುದನ್ನೂ ಪ್ರಕೃತಿ ಕಲಿಸುತ್ತದೆ. ನಾವು ಪ್ರೀತಿಸುವುದನ್ನು ಸಂರಕ್ಷಿಸಬೇಕಾದುದು ತಾನಾಗಿ ಹೊರುವ ಜವಾಬ್ದಾರಿಯಾಗುತ್ತದೆ” ಎಂಬುದೂ ಸುಮನಸ್ ಅವರ ಅಭಿಪ್ರಾಯ. “ಪಾದಯಾತ್ರೆಯಿಂದ ಕಲಿಯುತ್ತಿರುವುದು ಅಪಾರ! ನಾವು ಊಹಿಸುವ ಜಗತ್ತು ಇಲ್ಲಿ ಕಾಣುವುದಿಲ್ಲ. ಮನುಷ್ಯ ಏನೆಲ್ಲ ಕಳೆದುಕೊಳ್ಳುತ್ತಿದ್ದಾನೆ ಅನ್ನುವುದು ಪಾದಯಾತ್ರೆಯಲ್ಲಿ ಗೊತ್ತಾಗುತ್ತದೆ. ಹಳ್ಳಿಹಳ್ಳಿಗಳಲ್ಲಿ ಮಾತುಕತೆ, ಅಲ್ಲಿನ ಜೀವ ವೈವಿಧ್ಯ, ಅಸ್ತಿತ್ವಕ್ಕಾಗಿ ಕಾದಾಡುವ ಮಾನವ ಪ್ರಾಣಿಗಳ ಹೋರಾಟ, ರಾಜಕೀಯ ಸ್ಥಿತಿಗತಿ ಇವೆಲ್ಲದರ ಪರಿಚಯವಾಗುತ್ತದೆ” ಎನ್ನುವ ಅವರ ಮಾತನ್ನು ನಾವೆಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕಿದೆ.

ಹೀಗೆ ಜೀವನ ಶಾಲೆಯ ಕಲಿಕೆ ಮಕ್ಕಳನ್ನು ಪ್ರಭಾವಿಸುತ್ತಿದ್ದರೂ ಎಲ್ಲವೂ ಇನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ ಸವಾಲುಗಳೂ ಸಾಕಷ್ಟಿವೆ. ಆಧುನಿಕ, ಶ್ರಮರಹಿತ ಮತ್ತು ಆರಾಮ ಜೀವನಕ್ಕೆ ಒಗ್ಗಿಹೋಗಿರುವ ಮನಸ್ಸುಗಳನ್ನು ಹೊಸ ಸ್ಥಿತಿಗೆ ಹೊಂದಿಸುವುದು ಅಸಾಧ್ಯವೇ ಅನ್ನಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಮಕ್ಕಳು ಈ ವ್ಯವಸ್ಥೆಗೆ ಹೊಂದಿಕೊಂಡು ಗಟ್ಟಿಯಾಗಿ ನೆಲೆಯಾಗುತ್ತಿರುವುದು ಸಮಾಧಾನ ನೀಡಿದೆ. ಪ್ರಸ್ತುತ ಪ್ರತಿ ತಂಡಕ್ಕೆ ನಾಲ್ಕು ವರ್ಷಗಳನ್ನು ನಿಗದಿಪಡಿಸಿದ್ದು, ಆ ನಂತರ ಅವರೆಲ್ಲರೂ ಮೌಲಿಕ ಮತ್ತು ಸಮಾಜಮುಖಿ ಬದುಕು ಕಟ್ಟಿಕೊಳ್ಳುತ್ತಾರೆ ಎನ್ನುವ ಭರವಸೆಯಲ್ಲಿ ಜೀವನಶಾಲೆಯ ಪ್ರಯೋಗ ಮುಂದುವರಿದಿದೆ

ಆಂದೋಲನ ಡೆಸ್ಕ್

Recent Posts

ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಈಗ ನೀಟ್ ಕಡ್ಡಾಯ: ಡಾ. ಶರಣ ಪ್ರಕಾಶ ಪಾಟೀಲ

ಬೆಂಗಳೂರು : ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಪ್ರವೇಶವು ಈಗ ನೀಟ್ ವ್ಯಾಪ್ತಿಗೆ ಬರಲಿದೆ. ಇದು ಪ್ರಮಾಣೀಕೃತ ವೈದ್ಯಕೀಯ ಶಿಕ್ಷಣದತ್ತ ರಾಷ್ಟ್ರೀಯ ನಡೆಗೆ…

27 mins ago

ಭೂ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ

ಪಿರಿಯಾಪಟ್ಟಣ: ಕಳೆದ ಮೂರು ವರ್ಷಗಳಿಂದ ತಾಲೂಕು ಆಡಳಿತದ ಮುಂಭಾಗ ತಾಲ್ಲೂಕಿನ ಭೂ ಸಮಸ್ಯೆ ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ…

1 hour ago

ಎಲ್ಲಾ ಜಾತಿ, ಧರ್ಮದ ಬಡವರಿಗೆ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ : ಸಿ.ಎಂ

ಚಾಮರಾಜನಗರ : ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ.…

2 hours ago

Pahalgam attack | ಪಾಕ್‌ ಪತ್ರಕರ್ತನ ಪ್ರಶ್ನೆಗೆ ಉತ್ತರ ನಿರಾಕರಿಸಿದ ಯುಎಸ್‌ ಅಧಿಕಾರಿ

ವಾಷಿಂಗ್ಟನ್ : ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರಾದ ಟ್ಯಾಮಿ ಬ್ರೂಸ್ ಅವರು, ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ…

2 hours ago

ಕಾವೇರಿ ಆರತಿಗೆ ಸಮಿತಿ ರಚನೆ ; ಡಿಸಿಎಂ ಡಿ.ಕೆ ಶಿವಕುಮಾರ್‌

ಮಂಡ್ಯ : ಗಂಗಾರತಿ ರೀತಿ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ…

3 hours ago

ರಸ್ತೆಯಲ್ಲಿ ಪಾಕ್‌ ಧ್ವಜ ; ಬಜರಂಗದಳ ಕಾರ್ಯಕರ್ತರು ಪೊಲೀಸ್‌ ವಶಕ್ಕೆ

ಕಲಬುರಗಿ : ನಗರದ ಜಗತ್ ವೃತ್ತದಲ್ಲಿ ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಜರಂಗದಳದ ಕಾರ್ಯಕರ್ತರು…

3 hours ago