ಮಧುಕರ ಮಳವಳ್ಳಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸುತ್ತ ಈಗ ಇರುವುದು ಒಂದೋ ಎರಡೋ ಸುಣ್ಣದ ಗೂಡುಗಳು ಮಾತ್ರ.
ನಮ್ಮ ಊರಿನ ಸುತ್ತು-ಮುತ್ತ ಇದ್ದ ಸುಣ್ಣದ ಗೂಡುಗಳು ಮೆಲ್ಲಗೆ ಮರೆಯಾಗುತ್ತಿವೆ. ಈಗ ತಿಂಗಳಿಗೆ ಎರಡು – ಮೂರು ದಿನಗಳು ಮಾತ್ರ ಅವುಗಳು ಹೊಗೆಯಾಡುತ್ತವೆ, ಮಳೆಗಾಲದಲಿ ಮೌನ, ಗೂಡಿನ ಮೇಲೆ ಒಂದು ತಗಡು ಮಾತ್ರ ಇರುತ್ತದೆ.
ಒಂದು ಕಾಲದಲ್ಲಿ ಸುಣ್ಣದ ಯಾವುದೇ ಮನೆ ಇರಲಿ ಬಿಳಿ ಬಣ್ಣದಿಂದ ಹೊಳೆಯುತ್ತಿತ್ತು. ಯಾವುದೇ ಕಾರ‍್ಯ ಅದರೂ, ಇಂದಿನ ದಿನಗಳಲ್ಲಿ ಕೋಣೆಯ ನಾಲ್ಕು ಗೋಡೆಗಳಿಗೆ ಒಂದೊಂದು ಬಣ್ಣ ಬಳಿಯುವುದು ರೂಢಿಯಾಗಿದೆ. ಮತ್ತೆ ಅದು ಕೂಡ ಒಂದು ವೃತ್ತಿಯಾಗಿದೆ. ಆದರೆ ಸುಮಾರು ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಹಳ್ಳಿ – ಅರೆಪಟ್ಟಣ – ಪಟ್ಟಣಗಳಲ್ಲಿ ಬಿಳಿ ಸುಣ್ಣದ್ದೇ ದರ್ಬಾರು ಇರುತ್ತಿತ್ತು.
ಇದೀಗ ಕಳೆದ ಸಂಕಾಂತ್ರಿಯ ಹಬ್ಬಕ್ಕೆ ಎರಡು ಮೂರು ದಿನಗಳು ಇರುವಾಗ ಆ ಗೂಡಿನ ಮುಂದೆ ರಾಶಿ ರಾಶಿ ಸುಣ್ಣದ ಕಲ್ಲುಗಳನ್ನು ಕಂಡೆ. ಮತ್ತೆ ಅವುಗಳನ್ನು ಸುಡುವ ವೇಳೆಗಾಗಿ ಕಾದೆ… ಗಮನಿಸುತ್ತಾ ಹಾಗೆ ಆ ರಾಶಿಗಳ ಮುಂದೆ ವ್ಯಕ್ತಿಯ ಕಂಡೆ. ಶಾಲೆ ಬಿಡುವ ವೇಳೆಗೆ ಸುಣ್ಣದ ಕಲ್ಲಿನ ಚೀಲ ಜೊತೆ ಬೆವೆತು ರಾಶಿಕಲ್ಲಿನ ಜೊತೆಗೆ ಪಕ್ಕದಲ್ಲಿ ಇದ್ದಲಿನ ರಾಶಿ ಎರಡನ್ನು ಮಿಶ್ರಣ ಮಾಡುವ ವೇಳೆಗೆ ಜೊತೆ ಸೇರಿಕೊಂಡೆ. ಪರಿಚಯ ಮಾಡಿಕೊಂಡು ತಮ್ಮ ಹೆಸರು ಎಂದು ಕೇಳಿದೆ. ‘ಶಿವಣ್ಣ ನಾಯಕ’ ಅಂತ ಉತ್ತರಿಸಿದವರು, ಸುಣ್ಣ ಬೇಕಾ ಸ್ವಾಮಿ. ನಾಳೆ ಬನ್ನಿ ಎನ್ನುತ್ತಾ ತಮ್ಮ ಕಾಯಕ ಮುಂದುವರಿಸಿದರು.
‘ಶಿವಣ್ಣ ಇದು ನಿಮ್ಮ ಕುಲಕಸುಬಾ’ ಅಂದೆ. ‘ಹೌದು ಸಾ, ನಮ್ಮಪ್ಪ ನಂಗೆ ಹತ್ತು ವರ್ಷ ಇರುವಾಗ ಇದರ ಪರಿಚಯ ಮಾಡಿಸಿದ್ದರು. ಈಗ ನನ್ನ ಬದುಕು ಇದರಲ್ಲೇ ನಡೆಯುತ್ತಾಯಿದೆ ಎಂದು ಸುಣ್ಣದ ಕಲ್ಲು ಮತ್ತು ಇದ್ದಿಲನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಲು ತೊಡಗಿದರು. ಈ ಕಲ್ಲುಗಳನ್ನು ಎಲ್ಲಿಂದಾ ತರುವಿರಿ ಎಂದು ಕೇಳಿದರೆ, ‘ಸಾ , ಇದನ್ನ ನೀರು ಹರಿಯುವ ಹೊಳೆ ಅಂದರೆ ಆಡ್ಡಾಳದಿಂದ ಅಲ್ಲಿ ದಿನ ಪೂರ್ತಿ ಕಲ್ಲುಗಳನ್ನು ಆಯ್ದುಕೊಂಡು ತರಬೇಕು. ತಂದು ಸಗಣಿ ಅಂದರೆ ತೊಪ್ಪೆಯ ಜೊತೆ ತೆಂಗಿನಗರಿ ಮೊದಲು ಹಾಕಿ ನಂತರ ಈ ಕಲಸಿದ ಕಲ್ಲುಗಳನ್ನು ಆ ಗೂಡಿಗೆ ಹಾಕಿ ಬೆಂಕಿ ಹಾಕಿ ರಾತ್ರಿ ಪೂರ್ತಿ ಬೆಂದ ವೇಳೆ ಬೆಳಗಿನ ಜಾವ ಬಂದು ಕೈ ಬೆಚ್ಚಗೆ ಇರುವಾಗ ಈ ಕೆಳಗಿರುವ ಒಲೆಯಿಂದ ಸುಣ್ಣವನ್ನು ತೆಗಿಬೇಕು. ಅಂದರೆ ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಬೆಂದಿರುವ ಕಲ್ಲು ಸುಣ್ಣದ ಕಲ್ಲಾಗಿರುತ್ತದೆ. ಈ ಎತ್ತರದ ಗೂಡಿನಲ್ಲಿ ೧,೫೦೦ ರೂ. ಬೆಲೆಯ ಸುಣ್ಣ ಸಿಗುತ್ತೆ. ಅದು ಹಬ್ಬ-ಹರಿದಿನಗಳಲ್ಲಿ ಮಾತ್ರ. ಇಲ್ಲ ಅಂದರೆ ನಮಗೆ ಅಡಕೆ, ಬಾಳೆ, ತೆಂಗಿನ ತೋಟದವರು ಆರ್ಡರ್ ಕೊಟ್ಟರೆ ನಾವು ಸುಣ್ಣ ಸುಡುತ್ತೀವಿ. ಅವರು ರೋಗ ಬಾರದೆ ಇರಲಿ ಮತ್ತೆ ಹೆಚ್ಚಿನ ಇಳುವರಿ ಕೊಡಲಿ ಅಂತ ಸುಣ್ಣನಾ ಬಳಸುತ್ತಾರೆ. ಹಿಂದೆ ಆಲೆ ಮನೆಯಲ್ಲಿ ಬೆಲ್ಲ ಇಳಿಸಲು ಸುಣ್ಣ ಕೇಳುತ್ತಾಯಿದ್ದರು. ಈಗ ಕೆಮಿಕಲ್ ಬಳಸುತ್ತಾರೆ. ನಮ್ಮನ್ನು ಮಾತೇ ಆಡಿಸಲ್ಲ. ಮೊದಲು ಹಬ್ಬ ಬಂದಾಗ ಮನೆಮಂದಿಗೆಲ್ಲಾ ಕೆಲಸ. ಕಲ್ಲು ತರಲು, ಸುಡಲು, ಮತ್ತೆ ವ್ಯಾಪಾರ ಮಾಡಲು, ನಾವು ಒಂದ್ ಹತ್ತು ಊರಿಗೆ ಸುಣ್ಣ ಕೊಡುತ್ತಾ ಇದ್ವಿ. ಸುಣ್ಣ ಸಿಗದೆ ಹೋದರೆ ಹೆಂಗಸರಿಂದ ಮೊರದಲ್ಲಿ ನಮ್ಮ ತಲೆಗೆ ಏಟು ಬೀಳ್‌ತಾ ಇದ್ದವು. ನಾವು ಕೂಡ ಎಲೆ – ಅಡಕೆಗೆ ಅಂತಾ ಸುಣ್ಣನಾ ಮಾಡ್ತಾ ಇದ್ದವು. ಈಗ ಎಲ್ಲಾ ಮಾಯಾ ಎನ್ನುತ್ತಾ ಗೂಡಿಗೆ ಬೆಂಕಿ ಹಾಕಿದರು.
ಸುಣ್ಣದ ಗೂಡಿನ ಪವಾಡ, ಸಿದ್ದಪಾಜ್ಜಿಯ ಕತೆಯಲ್ಲೂ ಬರುತ್ತೆ ಒಂದ್ ಸಾರಿ ನೀವು ಕೇಳಿ ಸಾ ಎನ್ನು ವಾಗ ಗೂಡಿನಿಂದ ಹೊಗೆಯೂ ಗಾಳಿಗೆ ಜೊತೆಗೂಡಿ ದಾಗ, ಸಾ ನಾಳೆ ಹೊತ್ತಾರೆನೆ ಬನ್ನಿ ಸುಣ್ಣದ ಕಲ್ಲು ಬೆಣ್ಣೆಯಾಗಿರುತ್ತದೆ ಎಂದು, ಇನ್ನು ಒಂದ್ ಚೀಲ ಕಲ್ಲ್ ಅದೇ ಹೋಗಿ ಬತ್ತೀನಿ. ನೀವು ನಾಳೆ ಹೊತ್ತಾರೆ ಬನ್ನಿಯೆಂದು ತನ್ನ ಹಳೆಯ ಟಿವಿಎಸ್‌ನಲ್ಲಿ ಕುದುರೆಯಂತೆ ಸವಾರಿ ಮಾಡುತ್ತಾ ಮಾಯವಾದರು.
ಮುಂಜಾನೆ ಐದು ಗಂಟೆ ಈ ಚಳಿಗಾಲದಲ್ಲೂ ಎದ್ದು ಹೊರಟೆ ಸುಣ್ಣದ ಕಲ್ಲೂ ಸುಣ್ಣವಾಗಿರುವುದನ್ನು ನೋಡಲು. ಮೆಲ್ಲಹಳ್ಳಿಯ ಶಿವಣ್ಣ ನಾಯಕರು ಅರ್ಧ ಗಂಟೆ ತಡವಾಗಿ ಬಂದರು. ಚಳಿಯಲ್ಲೂ ಗೂಡು ಬೆಚ್ಚಗೆ ಇತ್ತು. ಬಂದವಾ ಸಾ ಚಳಿ ಸಾ ಲೇಟ್ ಆಯಿತಾ ಎನ್ನುತ್ತಾ ಗೂಡ ಒಮ್ಮೆ ನೋಡಿ ಇವತ್ತು ಒಳ್ಳೆ ಸುಣ್ಣ ಸಾ ಎಂದು ಗೂಡಿನ ಕೆಳಗಿನ ಒಲೆಯಿಂದ ಸುಣ್ಣವನ್ನು ಆಚೆಗೆ ಎಳೆಯ ತೊಡಗಿದರು. ಬೂದಿಯನ್ನು ಬೇರೆ ಮಾಡುತ್ತಾ ಸುಣ್ಣವನ್ನು ಬೇರೆ ಮಾಡುತ್ತಾ ಮೂರು ದಿಕ್ಕಿನ ಒಲೆಗಳ ಮುಂದೆ ಸುಣ್ಣದ ರಾಶಿ ಕಂಡು ಖುಷಿಗೊಂಡರು. ಹಬ್ಬದ ವ್ಯಾಪಾರಕ್ಕಾ ಅಂದೆ ಇಲ್ಲ ಸಾ ನಂಗೆ ತೋಟದ ಆರ್ಡರ್ ಅದೇ ಅನ್ನುತ್ತಲೆ ಮೂರು ಚೀಲಗಳಿಗೆ ತುಂಬಿಕೊಂಡರು. ನಿಮಗೆ ಸರ್ಕಾರದಿಂದ ಸಹಾಯ ಏನಾದರೂ ಬರುತ್ತಾ ಅಂದೆ. ಎಲ್ಲಿ ಸಾ ಇರುವ ಈ ಒಂದ್ ಗೂಡನ್ನು ಇನ್ನು ಅಚ್ಚ್‌ಕಟ್ಟು ಮಾಡುವ ಅಂತ ಪಂಚಾಯಿತಿಯಲ್ಲಿ ಸಹಾಯ ಕೇಳಿದರೆ, ಹೊಲ ಯಾರ ಹೆಸರಲ್ಲಿ ಅದೇ… ಹಿಂಗೇ ನೂರೆಂಟು ಕ್ಯಾತೆ. ಸರ್ಕಾರದಿಂದ ಸಹಾಯ ಬಂದರೆ, ಅದು ಬೇಡ ಸಾಲ ಅಂತ ಕೊಡಲಿ ಮಳೆ, ಗಾಳಿ, ಬಿಸಿಲಿಗೆ ಈ ಗೂಡಿಗೆ ಒಂದ್ ನೆರಳು ಮಾಡುತ್ತೀನಿ. ಸಾ ಇನ್ನು ಎರಡು ಚೀಲ ಕಲ್ಲು ಹಾಕಿ ಬೆಂಕಿ ಹಾಕ್‌ಬೇಕು. ಹಬ್ಬದ ವ್ಯಾಪಾರಕ್ಕೆ ಸುಣ್ಣ ಬೇಕು. ನಿಮಗೆ ಗೊತ್ತಿರುವವರಿಗೆ ಹೇಳಿ ಸಾ. ನಮ್ಮ ಬದುಕು ಒಂದ್ ಚೂರು ಚಂದವಾಗಲಿ ಎನ್ನುತ್ತಾ ಹೊರಟರು.
ಸುಣ್ಣದ ಗೂಡಿನ ಬೂದಿ, ಗಾಳಿಗೆ ಹೊರ ಬಂದು ಘಮ್ ಎನ್ನುತ್ತಾಯಿತ್ತು
ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…
ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ)…
ಭಾರತದ ಶಿಕ್ಷಣ ನೀತಿ ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ, ಬಹುತೇಕ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬುದು ವಿಷಾದಕರ…
ಕೇಂದ್ರ ಸರ್ಕಾರದಲ್ಲಿ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ ೧೬ರಂದು…
ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ; ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ ಮೈಸೂರು: ರಾಜ್ಯ ಸರ್ಕಾರ…
ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…