ಹಳ್ಳಿಗಳಲ್ಲಿ ವಾಸ ಮಾಡೋರಿಗೆ, ಅದರಲ್ಲೂ ರೈತರಿಗೆ ಹೆಣ್ ಸಿಕ್ತಾ ಇಲ್ಲ. ಇದು ಈಗ ಒಂದು “ರಾಷ್ಟ್ರೀಯ ಸಮಸ್ಯೆ”. ಒಂದೊಂದ್ ಊರಲ್ಲೂ ಇಪ್ಪತ್ತರಿಂದ ಐವತ್ತರ ತನಕ ವಯಸ್ಸಿಗೆ ಬಂದ ಮದುವೆಯಾಗದ ಹುಡುಗರಿದ್ದಾರೆ. ಕೆಲವು ಕಡೆ ಸಂಘ ಮಾಡ್ಕೊಂಡಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ. ಆತ್ಮಹತ್ಯೆಗಳು ಕೂಡ ನಡೆದಿವೆ. ಕೋಟಿ ಕೋಟಿ ಬೆಲೆಯ ದೊಡ್ಡ ಆಸ್ತಿವಂತರಾದರೂ, ಬಡವರ ಮನೆಯ ಹೆಣ್ಮಕ್ಕಳಾದರೂ ಪರ್ವಾಗಿಲ್ಲ. ಎಲ್ಲ ಖರ್ಚೂ ನಮ್ದೇ ಆಗಲಿ ಅಂದರೂ ಹೆಣ್ಣುಗಳೂ, ಅವರ ಹೆತ್ತವರೂ ಕಡೆಗಣ್ಣಿಂದ ಇವರ ಕಡೆ ನೋಡಲೂ ತಯಾರಿಲ್ಲ. ಈ ಹಿಂದೆ ನಾನು- ಛೇ ಹೀಗಾಗಬಾರದು. ಇದೇ ಮುಂದುವರಿದರೆ ನಾಳೆ ಹಳ್ಳಿಗಳು ಖಾಲಿಯೇ ಆಗಿಬಿಡ್ತಾವಲ್ಲ, ಯಾಕೆ ನಮ್ಮ ಹೆಣ್ಮಕ್ಕಳಿಗೆ ನಗರದ ಕನಸು? ಎಲ್ಲ ಹಾಳು ಟಿವಿ, ಮೊಬೈಲಿನ ಪ್ರಭಾವ ಅಂತೇನೇನೋ ವಾದಿಸುವವರ ಜೊತೆ ಹೂಂಗುಟ್ಟುತ್ತಿದ್ದೆ. ಆದರೆ ಇದಕ್ಕೆ ಇನ್ನೊಂದು ಹೊಸ ಕಾರಣ ಈಚೆಗೆ ಹೊಳೆಯುತ್ತಿದೆ. ಅದೇ ಕರ್ಮ ರಿಟರ್ನ್ಸ್… ಅದೇನಂತಾ ಕರ್ಮ ಹೇಳ್ತೀನ್ ಕೇಳಿ.
ನಾನು ಚಿಕ್ಕವಳಿದ್ದಾಗ, ಅಂದ್ರೆ ಬುಡುಬುಡುಬುಡು ಅನ್ನೋ ಬೈಕುಗಳು ಹಳ್ಳಿಗಳಲ್ಲಿ ಅಲ್ಲೊಂದು ಇಲ್ಲೊಂದು ಓಡಾಡುತ್ತಿದ್ದ ಕಾಲದಲ್ಲಿ ಅಂಥ ಒಂದು ಬೈಕಿನಲ್ಲೋ, ಬಸ್ಸಿನಲ್ಲೋ ಒಬ್ಬ ಮದುವೆಗೆ ತಯಾರಾದ ವರನೂ, ಜೊತೆಗೆ ಅವನ ಅಪ್ಪನೋ, ಮಾವನೋ, ಸಂಬಂಧಿಯೋ ಬಂದಿಳಿಯೋರು. ಸುಮ್ಮನೆ ಯಾರೋ ಆ ಊರಲ್ಲೊಂದ್ ಹೆಣ್ಣಿದೆ ಅಂದ ರೆಫರೆನ್ಸಿನಿಂದಲೋ, ಯಾರೋ ಸಂಬಂಧಿಕರು ಎಲ್ಲೋ ಸಿಕ್ಕು, “ಬನ್ನಿ ನಮ್ಮೂರ್ ಕಡೆ ಸಿಕ್ತವೆ ಹೆಣ್ಣು” ಅಂದದ್ದರ ಆಧಾರದಿಂದಲೋ ಅಥವಾ ಯಾವ ರೆಫರೆನ್ಸೂ ಇಲ್ಲದೆಯೂ ಬಂದುಬಿಡುತ್ತಿದ್ದರು.
ಊರು ಅಂದ ಮೇಲೆ ಒಂದು ಕಟ್ಟೆಯೋ, ಮಠದ ಜಗಲಿಯೋ ಇದ್ದೇ ಇರ್ತದಲ್ಲಾ, ಅದಿದ್ದ ಮೇಲೆ ನಾಕು ಜೀವಗಳು ಅಲ್ಲಿ ಅಂಡೂರಿರಲೇಬೇಕಲ್ಲ? ಇವರು ಬಂದಿಳಿಯುತ್ತಲೇ “ಯಾವೂರವರ ಯಜಮಾನರು?” ಬಂದ ಯಜಮಾನರನ್ನು ಅಲ್ಲಿ ಕುಂತ ಯಜಮಾನರು ಕೇಳುವುದು. “ನಮ್ದು ಪಡುವಲ ಸೀಮೆ ಅನ್ನಿ”. “ಏನೀ ಕಡೆ ಬಂದ್ಬುಟ್ಟಿದ್ದರಿ? ಅದೇನ್ ಸಮಾಚಾರ ಯೋಳಿ”. “ಏನೂ ಇಲ್ಲ, ನಿಮ್ಮ ದಿಕ್ಕಲಿ ಯಾವಾರ ಹೆಣ್ಣೈಕ್ಳಿದ್ದವ ಅಂತ ನೋಡಂವು ಅಂತ್ ಬಂದ”.
“ಯಾರಿಗೆ ಹೆಣ್ಣು?”, “ಇದೋ ಇಲ್ಲವನಲ್ಲ, ಇವನಿಗೇ ಅನ್ನಿ” – ಅಲ್ಲಿಗೆ ಬಂದ ಯಜಮಾನರ ಉದ್ದೇಶ ಕುಂತ ಯಜಮಾನರಿಗೆ ಸ್ಪಷ್ಟವಾಗುತ್ತಿತ್ತು. ಮುಂದಿನ ಮಾತುಕತೆ ಮಾಮೂಲಿ ಧಾಟಿಯಲ್ಲಿ ಸಾಗುತ್ತಿತ್ತು. “ಹುಡುಗನ ಕಸುಬೇನು?” (ಸಾಮಾನ್ಯವಾಗಿ ಆಗ ಅದು ಕೃಷಿಯೇ ಆಗಿರುತ್ತಿತ್ತು) ಎಷ್ಟೆಕರೆ ಜಮೀನು, ನೀರಾವರಿ ಎಷ್ಟು, ಖುಷ್ಕಿ ಎಷ್ಟು? ಜೊತೆಲುಟ್ಟಿದೋರೆಷ್ಟ್ ಜನ? ಹೀಗೆ ಕುಟುಂಬದ ಸವಿವರಗಳನ್ನೆಲ್ಲ ಅವರು ಕೇಳಿ, ಇವರು ಹೇಳಿ ತಿಳಕೊಂಡ ಮೇಲೆ, ಕುಂತವರು, ಈ ವರನಿಗೆ ನಮ್ಮೂರಲ್ಲಿ ಯಾವ್ಯಾವ ಹೆಣ್ಣುಗಳಿವೆ ಎಂದು ಚರ್ಚಿಸುತ್ತಿದ್ದರು- “ಆ ಹೆಣ್ಣು ಆಗಲ್ಲ, ಹೋದೊರ್ಷ ತಾನೇ ನೀರಾಕಂಡದ” ಅಂದರೆ, ಮತ್ತೊಬ್ಬ “ವಯಸು ಸರಿಯಾಗದ ಕಣ್ ಸುಮ್ನಿರು ಮಾರಾಯ. ನನ್ ಮದ್ವೆಲಿ ಆ ಹೆಣ್‌ಗೆ ಒಂದೊರ್ಷ. ನನ್ ಮದ್ವೆಯಾಗ್ ೧೮ ವರ್ಷ ಆಯ್ತು ಲೆಕ್ಕ ಆಕೋ” ಅನ್ನುತ್ತಿದ್ದ. “ಮಾಲಿಂಗನ ಹೆಣ್ಣೂ ಆಗಬಹುದು ಈ ವರ್ಷ ಮಾಡಿನೋ ಇಲ್ವೋ ಕಾಣೆ” ಅಂತೊಬ್ಬ ರಾಗವೆಳೆದರೆ, “ನೋಡದ್ ನೋಡ್ಲಿ ಬುಡು, ಮಾಡಿರೋ ಬುಟ್ಟರೋ ಆಮ್ಯಾಲ” ಅನ್ನುತ್ತಿದ್ದ ಮತ್ತೊಬ್ಬ. “ಸುಮ್ಮನ್ ನಮ್ಮೂರ್ಲಿರಾವ್ನೆಲ್ಲ ನೋಡ್ಕಂಡೋಗಿ. ಋಣ ಇದ್ದದ್ಯಾವ್ದೋ ಒಂದ್ಯಾಯ್ತದ” ಅನ್ನುತ್ತಿದ್ದ ಇನ್ನೊಬ್ಬ ಭೂಪ. ಅಂತೂ ತಮ್ಮೂರಿನಲ್ಲಿ ಇರಬಹುದಾದ, ಬಂದ ವರನಿಗೆ ಮ್ಯಾಚಾಗಬಹುದಾದ “ಊರ ಹೆಣ್ಣುಗಳ ಪಟ್ಟಿ” ಸಿದ್ಧ ಮಾಡುತ್ತಿದ್ದರು. ಮತ್ತು ಆ ಹೆಣ್ಣುಗಳ ಮನೆಗಳಿಗೆ ಹೋಗಿ, ಇಂಥಾ ಊರವರು ಹೆಣ್ ನೋಡಕ್ ಬತ್ತಾವರೆ ಅಂತ ಸುದ್ದಿ ಮುಟ್ಟಿಸಿ, ಮನೇಲಿ ಗಂಡಸರಿಲ್ಲ ಅಂತಲೋ, ಮತ್ತೇನೋ ಪ್ರತಿಕ್ರಿಯೆ ಕೇಳಿಕೊಂಡು ಬರುತ್ತಿದ್ದರು. ಅಸಲಿಗೆ ಅದು ಹುಡುಗಿ ಸೀರೆ ಗೀರೆ ಉಟ್ಟು ರೆಡಿಯಾಗಲಿಕ್ಕೆ ಮುಟ್ಟಿಸುವ ಸುದ್ದಿಯಾಗಿರುತ್ತಿತ್ತು. ಸದರಿ ಊರಿನಲ್ಲಿ ಪಟ್ಟಿಯಾದ ಹೆಣ್ಣುಗಳ ನೋಡಿಕೊಂಡು ಬಂದು, ನೋಡಿದ್ದರಲ್ಲಿ ಯಾವುದು “ಆಗಬಹುದು” ಅನಿಸಿತೋ, ಅದರ ಶಾರ್ಟ್ಲಿಸ್ಟು ಹೇಳಿ, ಮಠದಲ್ಲೋ, ಯಾರದಾದರೂ ನೆಂಟರಿಷ್ಟರ ಮನೆಯಲ್ಲೋ ಉಂಡು, ಇಲ್ಲಿ ಕುಂತವರ ರೆಫರೆನ್ಸಿನೊಂದಿಗೆ ಮುಂದಿನ ಊರಿಗೆ ಹೆಣ್ಣುಗಳ ನೋಡಲು ಹೋಗುತ್ತಿದ್ದರು. ಹೀಗೇ ನಾಕಾರು ಊರು ಸುತ್ತಿ, ಹತ್ತಾರು ಹೆಣ್ಣುಗಳ ನೋಡಿ ಊರಿಗೆ ವಾಪಸಾಗುತ್ತಿದ್ದರು.
ಇದೇನು ಹೆಣ್ಣು ನೋಡೋ ಆಟವೋ, ದನ ನೋಡೋ ಥರವೋ ಅಂತ ದಯವಿಟ್ಟು ಕನ್ಪೀಜ್ ಮಾಡಿಕೊಳ್ಳಬಾರದು ತಾವು. ಹೆಣ್ಣು ನೋಡೋ ಥರವೇ ಇದು. ಯಾವುದೋ ಹುಡುಗನಿಗೆ ಯಾವುದೋಹುಡುಗಿಯನ್ನು “ಆಗಬೋದು” ಅಂತ ಯಾರೋ ಎಲ್ಲೋ ಕುಂತು ಡಿಸೈಡ್ ಮಾಡಿಬಿಡುತ್ತಿದ್ದರು.
ಈ ನೋಡಾಟದ ಇನ್ನೊಂದು ಪೀಕಲಾಟದ ಕತೆ ಎಂದರೆ, ಗಂಡೋ, ಅವನ ಕಡೆಯೋರೋ ಬಂದು ಒಂದೇ ಊರಲ್ಲಿ ನಾಕಾರು ಹೆಣ್ಣುಗಳ ನೋಡಿ ಹೋಗ್ತಿದ್ದರಲ್ಲಾ, ಅದರಲ್ಲಿ ಎಷ್ಟೋ ಸಲ ಪ್ರಾಣ ಸ್ನೇಹಿತೆಯರೂ,ಸಂಬಂಧದಲ್ಲಿ ಅಕ್ಕತಂಗೇರಾಗಬೇಕಾದೋರೂ ಇರ‍್ತಿದ್ದರು. ಅಷ್ಟರಲ್ಲಿ ಯಾರೋ ಒಬ್ಬರಿಗೆ ಅವನು ಒಪ್ಪಿರುತ್ತಿದ್ದ. ಪಾಪ ಆ ಹೆಣ್ಣುಮ್ಕಳ ಕನಸು, ತಳಮಳ, ನಿರಾಸೆ, ಮುಜುಗರ ಯಾರ್ ಕೇಳ್ತಿದ್ದೋರು? ನೆಟ್ಟಗಿನ್ನೂ ಐದನೇ ಕ್ಲಾಸು ಮುಗಿಯುವಂಗಿಲ್ಲ, ಶುರೂ ಆಗಲೇ ಮದುವೆ ಮಾತು.ಮನೆಕೆಲಸ ಕಲಿಯೋದೇ ಮಹತ್ಸಾಧನೆ. ಮದುವೆಯೇ ಬದುಕಿನ ಪರಮೋದ್ದೇಶ! ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅನ್ನೋದನ್ನ ಅಕ್ಷರಶಃ ಪಾಲಿಸಿಬಿಡುತ್ತಿದ್ದರು. ಇನ್ನು ವರದಕ್ಷಿಣೆ! ಅಯ್ಯೋ ಅದೆಷ್ಟು ಹಿಂಸೆ ಮಾಡಿದ್ದರು ಗಂಡಿನ ಕಡೆಯವರು. ನಾಚಿಕೆ ಇಲ್ಲದವರು. ಛತ್ರದ ಶೋಕಿ ಇನ್ನೂ ಬಂದಿರಲಿಲ್ಲ ಆಗ. ಊರಲ್ಲೆ ಮದುವೆಗಳಾಗುತ್ತಿದ್ದವು. ಹಿಂದಿನ ದಿನ ಗಂಡಿನ ಮೆರವಣಿಗೆ ಮಾಡಿ, ಊರೆಲ್ಲ ಅವನ ನೋಡೋದೇನು, ಮೆರೆಸೋದೇನು, ಆಗೆಲ್ಲ ಒಂದು ಹೀರೋಹೋಂಡಾ ಬೈಕನ್ನು ಕೊಡಲೇಬೇಕಿತ್ತು. ಊರಲ್ಲೆ ನಡೆಯುತ್ತಿದ್ದ ಮದುವೆ ರಿಸೆಪ್ಶನ್ನುಗಳಲ್ಲಿ ಅದನ್ನು ಅಲಂಕರಿಸಿ ಸ್ಟೇಜಿನ ಪಕ್ಕ ನಿಲ್ಲಿಸಿರುತ್ತಿದ್ದರು. ಆಹಾ, ಎಂಥಾ ಸಾಧನೆ.
ಇದು ನಾನು ಸಣ್ಣವಳಿದ್ದಾಗ ನೋಡಿದ್ದು. ಮೂವತ್ ವರ್ಷಗಳ ಹಿಂದಿನ ಚಿತ್ರ. ಅದಕೂ ಸ್ವಲ್ಪ ಹಿಂದೆ ಹೋದರಂತೂ ಓಹೋಹೋ? ಕೇಳುವಂತೆಯೇ ಇಲ್ಲ. ನಲವತ್ತು ವರ್ಷದೋನಿಗೆ ಹದಿಮೂರರವಳನ್ನು ಮದುವೆ ಮಾಡಿದ್ದಾರೆ. ಮೈನೆರೆದು ಹದಿನಾರು ದಿನಕ್ಕೆ ಪ್ರಸ್ಥ ಮಾಡಿದ್ದಾರೆ. ಪುಟ್ಟ ಪುಟ್ಟ ಹೆಣ್ಮಕ್ಕಳ ಕೈಗೆ ಪುಟ್ಟ ಕೂಸುಗಳನ್ನು ಕೊಟ್ಟಿದ್ದಾರೆ. ಅತ್ತೆ, ಗಂಡ, ತುಂಬು ಕುಟುಂಬದ ಹೊಡೆತ ಬಡಿತಗಳಿಗೂ ಬೆನ್ನು ಒಡ್ಡಿದ್ದಾರೆ. ಯಾವ ಸೌಲಭ್ಯಗಳೂ ಇರದಿದ್ದಾಗ ಸೌದೆ ಒಲೆಯ ಎದುರು ಕೂತು ಮನೆಯಲ್ಲಿಯೂ, ಹೊಲದಲ್ಲಿಯೂ ದುಡಿದು ದುಡಿದು ಸತ್ತಿದ್ದಾರೆ ಹಳ್ಳಿಯ ಹೆಣ್ಮಕ್ಕಳು. ಗಂಡ ಸತ್ತಾಗ ಬಳೆ ಒಡೆವ, ಕುಂಕುಮ ಅಳಿಸುವ ಅತಿಕೆಟ್ಟ ಆಚರಣೆಗಳನ್ನು ಅನುಭವಿಸಿದ್ದಾರೆ. ಆ ಕಾಲದಲ್ಲಿ ಬಡತನವಿತ್ತು. ಆಗ ಇಡೀ ದೇಶದ ಆರ್ಥಿಕ ಸ್ಥಿತಿಯೇ ಹಾಗಿತ್ತು ಸರಿ. ಆದರೆ ಗಂಜಿ ಕುಡಿದರೂ ಗೌರವ ಬೇಕಲ್ಲ? ಅದನ್ನು ಕೊಟ್ಟಿರಾ? ನಮ್ಮೂರಲ್ಲಿ “ಇಂಥವನ ಹೆಂಡತಿ” ಅನ್ನೋದೇ ಅವರ ಹೆಸರು, ಐಡೆಂಟಿಟಿ. ಕೂಗುವಾಗಲೂ “ಏ ಸಿದ್ದಪ್ಪನ ಹೆಂಡ್ತಿ. ನಿಂಗಪ್ಪನ ಹೆಂಡತಿ” ಅಂತಲೇ. ಈ ಹಿಂದೆ ಹಳ್ಳಿಯ, ಬಡವರ, ರೈತರ ಮನೆಯ ಹೆಣ್ಮಕ್ಕಳನ್ನು ಗಂಡುಗಳು ನಡೆಸಿಕೊಂಡ ರೀತಿ ಇದೆಯಲ್ಲಾ? ಅದು ಒಂದಿಷ್ಟರಲ್ಲಿ ಹೇಳಿ ಮುಗಿಸುವಂತಹದಲ್ಲ. ಮನೆಮನೆಯಲ್ಲೂ ಬೃಹತ್ ಕಾದಂಬರಿಯಾಗುವಂತಹದು ಅದು. ಅಲ್ಲಲ್ಲಿ ಯಾರೋ ಕೆಲವರು ಮಾತ್ರ ಅಷ್ಟಿಷ್ಟು ನೆಮ್ಮದಿಯಿಂದಿದ್ದದ್ದು ಬಿಟ್ಟರೆ, ಬಹುತೇಕ ಹಳ್ಳಿಯ ಹೆಣ್ಮಕ್ಕಳು ನೊಂದವರೇ. ಬಂದಿಗಳೇ. ಆಗಿನವರ ಬದುಕು ಒಂದಿಷ್ಟು ಹಿತವಾಗಿದ್ದರೆ, ಸಹ್ಯವಾಗಿದ್ದರೆ, ಸ್ವಲ್ಪವಾದರೂ ಸ್ವಾತಂತ್ರ್ಯ ಸಿಕ್ಕಿದ್ದರೆ, ಇಲ್ಲಿಂದ ಹೊರಗೆ ಚಿಮ್ಮಿ ಹೋಗಿಬಿಡಬೇಕು ಅನ್ನುವ ಒತ್ತಡ ಹೊಸತಲೆಮಾರಿನ ಹೆಣ್ಮಕ್ಕಳಿಗೆ ಇಷ್ಟು ತೀವ್ರವಾಗಿ ಇರುತ್ತಿರಲಿಲ್ಲ.
ಈಗ ಕಾಲ ಬದಲಾಗಿದೆ. ವಿದ್ಯೆ, ಒಂದು ಐಡೆಂಟಿಟಿ ಅವರಿಗೂ ಸಿಕ್ಕಿದೆ. ಊರ ನೂರುಮಾತಗಳು ಸಾಕಾಗಿದೆ. ಆಡಿಕೊಳ್ಳುವ ನಾಲಗೆಗಳಿಂದ ಬಿಡುಗಡೆ ಬೇಕಿದೆ. ಆಯ್ಕೆಗಳು ಬೇಕಿವೆ. ತಲೆಮಾರುಗಳಿಂದ ಇದ್ದ ಅದೃಶ್ಯ ಬಂಧನದ ಬಾಗಿಲು ಅವರಿಗೆ ಈಗಷ್ಟೆ ತೆರೆದಿದೆ. ಒತ್ತಿಟ್ಟ ಸ್ಪ್ರಿಂಗು ಚಿಮ್ಮುವಂಥ, ಕಟ್ಟಿದ್ದ ನೀರಿಗೆ ಬಾಗಿಲು ತೆರೆದರೆ ಧುಮುಗುಟ್ಟುತ್ತಾ ಚಿಮ್ಮಿ ಹರಿವಂಥ ಸ್ಥಿತಿ ಈಗ ಹಳ್ಳಿಯ ಹೆಣ್ಮಕ್ಕಳದು. ಈಗ ನೀವು ಅವರನ್ನು ಹಳ್ಳಿಯಲ್ಲಿ ಕಟ್ಟಿಹಾಕಲಾರಿರಿ. ಮೊನ್ನೆ ಹಿಂದಲ ಬೀದಿಯ ಮಹೇಶನ ಮನೆಯಲ್ಲಿ ಐವತ್ತು ಜನಕ್ಕೆ ಊಟ. ಹುಡುಗಿ ಮನೆಯವರು ಗಂಡಿನ ಮನೆ ನೋಡಲು ಬಂದಿದ್ದರು.
ಇಬ್ಬರೇ ಗಂಡುಮಕ್ಕಳು. ಮಾರಿದರೆ ಸುಮಾರು ಇಪ್ಪತ್ತು ಕೋಟಿ ಬೆಲೆಯ ಆಸ್ತಿ. ಕಷ್ಟಪಟ್ಟು ದುಡಿಯುತ್ತಾರೆ. ತೆಂಗು, ಮಾವು, ಕಬ್ಬು, ತರಕಾರಿ ಲಕ್ಷಲಕ್ಷ ಸಂಪಾದನೆಯುಂಟು, ದೊಡ್ಡ ಮನೆಯುಂಟು. ಡಿಗ್ರಿ ಸರ‍್ಟಿಫಿಕೇಟು, ಸಂಬಳದ ಕೆಲಸ ಬಿಟ್ಟು ಎಲ್ಲವೂ ಉಂಟು. ಹೆಣ್ಣಿನ ಮನೆಯೋರು ಉಂಡೂ ತಿಂದೂ ತೋಟಕ್ಕೆ ಹೋಗಿ ಬರೋಬ್ಬರಿ ೭೦ ಎಳನೀರು ಕುಡಿದು ಹೋದರು. ಹೇಳಿಕಳಿಸಿದ್ದರು – “ನಾವ್ ಹುಡುಗಿ ಕೊಡಲ್ಲ, ನಮ್ಮೆಣ್ಣು ಸಿಟಿಲಿ ಕೆಲಸದಲ್ಲಿರವನ್ನೇ ಆಯ್ತೀನಿ ಅಂತದೆ”.
ನಾಕೆಕರೆ ಜಮೀನದೆ. ನಾಕ್ ಜನ ಗಂಡ್‌ಮಕ್ಕಳು ಅಂದರೆ, ನಾಕು ಭಾಗವಾದ ಮೇಲೆ ಒಂದೆಕರೇಲಿ ಹೇಗಿವರ ಬದುಕು? ಅಂತಲೂ ಯೋಚಿಸದೇ, ಮೈನೆರೆದ ಹೆಣ್ಣುಗಳ ಮನೆಯಿಂದ, ಊರಿಂದ ಖಾಲಿ ಮಾಡಿಸುವುದೊಂದು ಕಾಯಕ ಅಂತ ನಂಬಿದ್ದ ದಿನಗಳು ಬದಲಾಗಿವೆ. ಈಗಲೂ ಹೆಣ್ಣು ನೋಡಲು ಬೈಕುಗಳೂ, ಕಾರುಗಳೂ ಸುತ್ತುತ್ತಲೇ ಇವೆ. “ನಿಮ್ಮೂರಲ್ಯಾವ್ದಾರ ಹೆಣ್ಣಿದ್ದುದಾ? ಬಡವರಾದ್ರೂ ಪರ‍್ವಾಗಿಲ್ಲ. ನಾವೇ ಮದ್ವೆ ಮಾಡ್ಕತ್ತೀವಿ. ನಿಮ್ಮೂರಲ್ಯಾವ್ದಾದ್ರೂ ಹೆಣ್ಣಿದ್ದುದಾ? ಅಂತ ಬರುವ ಕೃಷಿಕ ಗಂಡುಗಳಿಗೆ ಎಲ್ಲ ಊರಲ್ಲೂ ಕೈಗಳು ತಾರಮ್ಮಯ್ಯ ಆಡಿಸುತ್ತವೆ.
ಯಾವ್ದೋ ಗಂಡಿಗೆ ಯಾವ್ದೋ ಹೆಣ್ಣು ಮ್ಯಾಚು ಮಾಡಿ, “ಆಗಬೋದು” ಅಂದುಬಿಡ್ತಿದ್ದ ಜಗಲಿ ಯಜಮಾನರೀಗ ಹಾಗೆಲ್ಲ ಸಲೀಸಾಗಿ ಹೆಣ್ಮಕ್ಕಳ ಬದುಕು ಡಿಸೈಡ್ ಮಾಡುವುದು ಬಲುಕಷ್ಟ. ಅವರ ಕೈಯಲ್ಲೀಗ ಊರಲ್ಲಿ ಮದುವೆಯಾಗದೆ ಉಳಿದುಹೋಗುತ್ತಿರುವ ಗಂಡುಗಳದೇ ದೊಡ್ಡ ಲಿಸ್ಟು. ಈಗಿನ ಹಳ್ಳಿಯ ಹುಡುಗರು ಆಗಿನವರಂತಲ್ಲದಿರಬಹುದು. ಮೆರೆಸಬಹುದು ರಾಣಿಯಂತೆ ಹೆಂಡತಿಯ. ಕೊಡಬಹುದು ಸಕಲ ಸೌಲಭ್ಯಗಳನೂ ಕುಂತಲ್ಲೆ. ಆದರೆ… ಆನೆಗಳು ತಮ್ಮ ನೆನಪನ್ನು ತಲೆಮಾರಿಗೆ ದಾಟಿಸಿ ಹೋಗುವಂತೆ ನೊಂದ ಆಗಿನ ಹೆಣ್ಮಕ್ಕಳ ಸಂಕಟದ ನಿಟ್ಟುಸಿರು ಇನ್ನೂ ಇದೆ ಹಳ್ಳಿ ಹಳ್ಳಿಗಳ ಗಾಳಿಯಲ್ಲಿ. ಅದು ತಿಳಿಯಾಗುವವರೆಗೂ, ಅವರಾಗೇ ನಗರದ ಬದುಕು ಉಸಿರುಗಟ್ಟಿ ಮರಳುವವರೆಗೂ, ತಾವಾಗೇಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳುವವರೆಗೂ ಸುಮ್ಮನಿರಲೇಬೇಕಾಗುತ್ತದೆ. ಬೇರೆ ದಾರಿಯೇ ಇಲ್ಲ. ಇದು ಒಂತರಾ ಕರ್ಮ ರಿಟರ್ನ್ಸ್!
“ಹಳ್ಳಿಗಳ ಹೆಣ್ಮಕ್ಳು ನಗರದ ಬದುಕು ಉಸಿರುಗಟ್ಟಿ ಮರಳುವವರೆಗೂ ಹಳ್ಳಿ ಹೈದರು ಸುಮ್ಮನಿರಲೇ ಬೇಕಾಗುತ್ತದೆ. ಬೇರೆ ದಾರಿಯೇ ಇಲ್ಲ. ಇದು ಒಂಥರಾ ಕರ್ಮ ರಿಟರ್ನ್ಸ್!”
– ಕುಸುಮಾ ಆಯರಹಳ್ಳಿ
ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…
ನವದೆಹಲಿ: ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ-ಯುರೋಪ್ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…
ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…
ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…
ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…