ಡಾ.ಮೊಗಳ್ಳಿ ಗಣೇಶ್

ಆ ಗಣಿ ಜಿಲ್ಲೆ ಸಿಕ್ಕಾಪಟ್ಟೆ ಲಂಗುಲಗಾಮಿಲ್ಲದೆ ಬೆಳೆಯುತ್ತಿತ್ತು. ಕಬ್ಬಿಣದ ಅದಿರು ತುಂಬಿಕೊಂಡು ಹಗಲಿರುಳು ಗೂಡ್ಸ್ ಗಾಡಿಗಳು ಬಿಡುವಿಲ್ಲದಂತೆ ಹರಿದಾಡುತ್ತಿದ್ದವು. ಇಡೀ ನಗರವೇ ಗಣಿಯ ದೂಳಿನಿಂದ ತುಂಬಿತ್ತು. ಕಬ್ಬಿಣದ ಅದಿರಿನ ಪದರ ಪದರಿನ ಬೆಟ್ಟಗುಡ್ಡಗಳ ಬಗೆದು ಚಿಲ್ಲರೆ ಕಾಸಿಗೆ ಮಾರಿಕೊಳ್ಳುವುದು ಅವ್ಯಾಹತವಾಗಿ ನಡೆದೇ ಇತ್ತು. ಲಕ್ಷಾಂತರ ಬಡವರಿಗೆ ಗಣಿ ಉದ್ಯಮದಿಂದ ಉದ್ಯೋಗ ಸಿಕ್ಕಿದೆ ಎಂದು ಹೇಳುತ್ತಿದ್ದರು. ಆದರೂ ಬೀದಿಗಳಲ್ಲಿ ನಿರ್ಗತಿಕರು ಲೆಕ್ಕವಿಲ್ಲದಂತೆ ಅಲೆಯುವುದು ಮಾತ್ರ ತಪ್ಪಿಲ್ಲ. ನಗರದ ಎಲ್ಲೆಲ್ಲೂ ವೈನ್‌ಶಾಪ್‌ಗಳು, ಬಾರ್ ಅಂಡ್ ರೆಸ್ಟೋರೆಂಟುಗಳು ಗಿರಾಕಿಗಳಿಗಾಗಿ ಹದ್ದಿನಂತೆ ಕಾದಿರುತ್ತವೆ. ಬೆಳ್ಳಂ ಬೆಳಿಗ್ಗೆಯೇ ಗಣಿ ಲಾರಿಗಳ ಡ್ರೈವರ್‌ಗಳು ವೈನ್‌ಶಾಪ್ ಬಾಗಿಲ ಕಾಯುತ್ತ ಚಡಪಡಿಸುತ್ತಿರುತ್ತಾರೆ. ಅಂತಹ ಕಡಿದಾದ ಬೆಟ್ಟಗುಡ್ಡಗಳ ತಿರುವು ಮುರುವಿನ ರಸ್ತೆಗಳಲ್ಲಿ ಅದಿರು ತುಂಬಿದ ಲಾರಿಗಳ ಅದಾವ ಮಾಯದಲ್ಲಿ ಡ್ರೈವ್ ಮಾಡುವರೊ ಅವರ ಚಾಣಾಕ್ಷತೆಯೆ ಗೊತ್ತಾಗದು. ದ್ವಿಚಕ್ರ ವಾಹನಗಳ ಪುಂಡರು ವರ್ರೋ ಎಂದು ಬೈಕ್ ನುಗ್ಗಿಸಿಕೊಂಡು ಹಾರಿ ಹೋಗುತ್ತಿರುತ್ತಾರೆ. ಅವಸರದ ಯಾವ ಒಳ್ಳೆಯ ಕೆಲಸವೂ ಅವರಿಗೆ ಇರುವುದಿಲ್ಲ. ಪಾನ್‌ಪರಾಗ್ ಉಗುಳುತ್ತ ಪಾನ ಮತ್ತರಾಗಿ ಕೀಚಕ ಕೆಂಗಣ್ಣುಗಳಲ್ಲಿ ಬೇಟೆಗೆ ಹೊರಟಂತೆ ಕಾಣುವರು.

ಗಣಿ ಉದ್ಯಮ ಬೊಬ್ಬಿರಿದಂತೆಲ್ಲ ಸಂಬಂಧಗಳೆಲ್ಲ ಏನೇನೊ ಆಗಿಬಿಟ್ಟಿವೆ. ನಗರ ಕಿಕ್ಕಿರಿದಿದೆ. ಸದಾ ಉದ್ವಿಗ್ನವಾಗಿ ಅಪರಾಧಗಳು ಕುಣಿಯುತ್ತಿವೆ. ಬೇಡ ಬೇಡ ಎಂದರೂ ಪುಟ್ಟ ಮಕ್ಕಳನ್ನೇ ದೇವದಾಸಿಯರನ್ನಾಗಿಸಿ ಅವರ ತಂದೆ ತಾಯಂದಿರು ಕುಡಿತದ ವ್ಯಸನಿಳಾಗಿ ವೇಷಹಾಕಿ ಬೇಡುತ್ತಾರೆ. ಏನೇನೊ ಡ್ರಗ್ಸ್ ಅವರಲ್ಲಿ ಧಾರಾಳ ಸಿಗುತ್ತದೆ. ಹಳೇ ಕಾಲದ ಭಟ್ಟಿ ಸಾರಾಯಿಯೊ ಎಂಡವೊ ಬೇಕಾಗಿಲ್ಲ. ಯಾರನ್ನೂ ಹಳಿಯುವಂತಿಲ್ಲ. ಬೆಟ್ಟಗುಡ್ಡಗಳ ಹೊಟ್ಟೆಯ ಬಗೆದು ಕೆನ್ನೀರು ರಕ್ತದಂತೆ ಹರಿಯುತ್ತಲೇ ಇದೆ. ಹೇಳೋರಿಲ್ಲ ಕೇಳೋರಿಲ್ಲ. ಹಣದ ದುರ್ವಾಸನೆ ಅಲ್ಲೆಲ್ಲ ಅಡರಿ ಜನ ಅದನ್ನೇ ಪರಿಮಳ ಎಂದು ಉಸಿರಾಡುತ್ತಿದ್ದಾರೆ.

ಗಣಿ ಲಾರಿಗಳು ಸಾಲು ಸಾಲಾಗಿ ದೂಳೆಬ್ಬಿಸಿಕೊಂಡು ಮುನ್ನುಗ್ಗಿದ್ದವು. ಅಪಘಾತಗಳು ಲೆಕ್ಕವಿಲ್ಲದಂತೆ ಆಗುತ್ತಿದ್ದವು. ಆತ ತುರ್ತಾಗಿ ಹೋಗಬೇಕಿತ್ತು. ರೈಲ್ವೆ ಗೇಟನ್ನು ಬೇಗ ದಾಟಿಬಿಡಬೇಕು ಎಂದು ವಾಹನಗಳು ನುಗ್ಗುತ್ತಿದ್ದವು. ಹೋಗಿ ಹೋಗಿ ಎಂದು ಆ ಮದ್ಯ ವಯಸ್ಕ ರಸ್ತೆ ಬದಿಯ ಮರದ ಸನಿಹ ಟೂ ವೀಲರ್ ನಿಲ್ಲಿಸಿ ಹೆಲ್ಮೆಟ್ ತೆಗೆಯದೆ ಕೈಕಟ್ಟಿ ಬೇಸರದಿಂದ ನಿಂತಿದ್ದ. ಭಾಗಶಃ ಅವನು ಉತ್ತರ ಭಾರತದಿಂದ ಗಣಿ ಕೂಲಿಗೆ ಬಂದು ಅರೆ ಬರೆ ಕನ್ನಡ ಕಲಿತಿದ್ದ. ಗೇಟಿನ ಆಚೀಚೆ ಎಲ್ಲೆಲ್ಲಿ ಖಾಲಿ ಜಾಗ ಇದೆಯೊ ಅಲ್ಲೆಲ್ಲ ಪೆಟ್ಟಿಗೆ ಅಂಗಡಿಗಳನ್ನು ಸ್ಥಾಪಿಸಿಕೊಂಡಿದ್ದರು. ಅವು ಹೆಸರಿಗೆ ಮಾತ್ರ ಪೆಟ್ಟಿಗೆ ಅಂಗಡಿ; ಡ್ರಗ್ಸ್ ವ್ಯಾಪಾರವನ್ನೂ ಅವು ಮಾಡುತ್ತವೆ. ನೋಡಲು ಅಯ್ಯೋ ಪಾಪ ಎಂಬಂತಿರುವ ಆ ಜನ ಅಂದುಕೊಂಡಂತಿಲ್ಲ. ಬೃಹತ್ ಜಾಗತಿಕ ವ್ಯಾಪಾರಿ ಜಾಲ ಈಗ ಅಂತಹ ದರಿದ್ರ ಜನರನ್ನೇ ತಮ್ಮ ಟಾರ್ಗೆಟ್ ಮಾಡಿಕೊಂಡಿದೆ. ಆ ರೈಲು ಹಳಿಯ ಗೇಟು ಒಂದು ಕಾಲಕ್ಕೆ ಯಾವತ್ತೂ ಒಪನ್ನಾಗಿಯೇ ಇತ್ತು. ಎತ್ತಿನ ಬಂಡಿಗಳೊ ಸೈಕಲ್ ರಿಕ್ಷಾಗಳೊ ಸದ್ದು ಮಾಡುತ್ತಿದ್ದವು. ಈಗ ಅವುಗಳ ಅಡ್ರೆಸೇ ಇಲ್ಲ. ಆ ಗಣಿ ರೈಲುಗಳೊ ಒಂದೊಂದೂ ಒಂದೊಂದು ಕಿಲೋಮೀಟರು ದೂರದಷ್ಟಿವೆ. ತುಂಬಿದ ಆ ಅದಿರನ್ನೆಲ್ಲ ಗೋವಾದ ಕಡೆ ಹರಿಸಿ ಅಲ್ಲಿ ಸಮುದ್ರದ ಹಡಗುಗಳಿಗೆ ರವಾನಿಸಿ ಪ್ರಪಂಚದ ಯಾವುದಾವುದೊ ದೇಶಗಳಿಗೆ ಮಾರಲಾಗುತ್ತದೆ. ಜಾಗತಿಕ ಉದ್ಯಮವೇ ನಮ್ಮೂರಿನ ಬೀದಿಗಳಿಗೆ ಬಂದಿದೆ ಎಂದು ಬೀಗುವ ಜನ ಸಾಕಷ್ಟು ಇದ್ದಾರೆ. ನಗರದ ತುಂಬ ಮಾಂಸದ ಅಂಗಡಿಗಳು, ಗಿರವಿ ಅಂಗಡಿಗಳು, ಔಷಧ ಶಾಪ್‌ಗಳು ಲೆಕ್ಕವಿಲ್ಲದಂತೆ ಹಬ್ಬಿವೆ. ಪಿಂಜರಾಪೋಲು ವೈದ್ಯರು ಹಗಲಿರುಳೂ ರೋಗಿಗಳಿಗೆ ರೋಗದಂತೆ ಅಂಟಿಕೊಂಡಿದ್ದಾರೆ. ಯಾರೊ ಅಭಿವೃದ್ಧಿ ಚಿಂತಕರೊಬ್ಬರು ಲೆಕ್ಕಹಾಕಿ ಈ ನಗರದಲ್ಲಿ ಹನ್ನೆರಡು ಸಾವಿರಕ್ಕೂ ಅಧಿಕವಾಗಿ ಹಣ ಎಣಿಸುವ ಯಂತ್ರಗಳಿವೆ ಎಂದು ಮೆಚ್ಚಿದ್ದರು. ಸಾಲ ನೀಡುವ ಬ್ಯಾಂಕುಗಳಿಗೆ ಅಲ್ಲಿ ಹಬ್ಬವೊ ಹಬ್ಬ.

ಅದಿರು ತುಂಬಿದ್ದ ಎರಡು ಸಾಲಿನ ಬೃಹತ್ ರೈಲುಗಳು ಏನೊ ವ್ಯತ್ಯಾಸವಾಗಿ ನಿಂತುಬಿಟ್ಟಿದ್ದವು. ಇನ್ನೂ ಮೇಲ್ಸೇತುವೆ ಬಂದಿರಲಿಲ್ಲ. ರಿಂಗ್‌ರೋಡಿನ ವ್ಯವಹಾರ ಕುದುರಿರಲಿಲ್ಲ. ಅವತ್ತು ವಿಪರೀತ ಟ್ರಾಪಿಕ್ ಆಗಿತ್ತು. ಅದೇ ರೈಲು ಗೇಟಲ್ಲಿ ಸದಾ ಚಾಕರಿಗೆ ಹೋಗಿ ಬರುತ್ತಿದ್ದ ಆ ಸಭ್ಯ ವಯಸ್ಕ ದುಡಿದು ಸಾಕಾಗಿದ್ದವನು ನೂರೆಂಟು ತರಲೆ ತಾಪತ್ರಯಗಳಲ್ಲಿ ಸಿಲುಕಿ ರಸ್ತೆಯ ಬದಿಯಲ್ಲಿ ಅನ್ಯ ಮನಸ್ಕನಾಗಿದ್ದ. ಸುತ್ತಮುತ್ತ ತರಾವರಿ ವಾಹನಗಳು ಕಿಕ್ಕಿರಿದು ಒಂದಕ್ಕೊಂದು ಅಂಟಿಕೊಂಡಿದ್ದವು. ವಿಪರೀತ ಸದ್ದು. ಹೊಗೆ. ದೂಳಿನ ಗಾಳಿ. ಕೆಂಡದ ಬಿಸಿಲು. ಅದೆಲ್ಲ ನಿತ್ಯ ಮಾಮೂಲು ಎಂದು ರೈಲು ಹಳಿಯ ಸುತ್ತಮುತ್ತ ಮುತ್ತಿಕೊಂಡಿದ್ದ ಆ ಜನ ಜಂಗುಳಿಯ ಅಮಲಲ್ಲಿದ್ದರು. ಅಲ್ಲೇ ಒಂದು ಆಂಜನೇಯ ದೇಗುಲವಿತ್ತು. ಒಬ್ಬ ರೌಡಿ ಭಿಕ್ಷುಕ ರಸ್ತೆಯಲ್ಲಿದ್ದ ಬೇವಿನ ಮರಕ್ಕೆ ಅರಿಶಿಣ ಕುಂಕುಮ ಚೆಲ್ಲಿ ನೂರಾರು ದಾರ ಸುತ್ತಿ ಸೀರೆ ಉಡಿಸಿ ಪೂಜೆ ಮಾಡಿ ಹಾದಿಹೋಕರು ಅಲ್ಲಿ ಕೈ ಮುಗಿದು ಹೋಗುವಂತೆ ಭಕ್ತ ಗಿರಾಕಿಗಳನ್ನು ಸೃಷ್ಟಿಸಿಕೊಂಡಿದ್ದ. ಅದಕ್ಕೂ ಅಲ್ಲಿ ಪೈಪೋಟಿ, ಇನ್ನೊಬ್ಬ ಶನಿ ಮಹಾತ್ಮನ ಕಾಗೆಯ ತಳ್ಳು ಗಾಡಿಯ ತಂದು ನಿಲ್ಲಿಸಿ ಆಕ್ಸಿಡೆಂಟ್ ತಡೆವ ದೇವರು ಎಂದು ಕಾಣಿಕೆ ವಸೂಲಿ ಮಾಡುತ್ತಿದ್ದ. ಎಲ್ಲ ಗಣಿ ಮಹಿಮೆ. ಅವನಾವನೊ ಒಬ್ಬ ಸಂಸಾರದ ಮರಿ ಮಕ್ಕಳಿಗೆಲ್ಲ ವಾನರ ಕಾಸ್ಟ್ಯೂಮ್ ಹಾಕಿ ಭಿಕ್ಷೆಗೆ ತಟ್ಟೆಕೊಟ್ಟು ದಪ್ಪ ಬಾರುಗೋಲಿನಿಂದ ಡಮಾರ್ ಎಂದ ಸದ್ದು ಮಾಡಿ ಕೇಕೆ ಹಾಕಿ ಕುಡಿದು ಚಿತ್ತಾದ ದಪ್ಪಕಣ್ಣುಗಳ ತಿರುವುತ್ತಿದ್ದ.

ಇಕ್ಕಟ್ಟಲ್ಲಿ ಸಿಲುಕಿದ್ದ ಆ ಸಭ್ಯ ಎತ್ತಲೊ ನೋಡುತ್ತಿದ್ದ. ಏನೊ ಸಿಗ್ನಲ್ ಟ್ರಬಲ್ ಆಗಿತ್ತು.ಭಿಕ್ಷುಕರು ಕೈ ನೀಡುತಿದ್ದರು. ಹೋಗಯ್ಯಾ ಎಂದ. ಭಿಕ್ಷುಕನೂ ಕುಡುಕನಾಗಿದ್ದ. ಕ್ಯಾಕರಿಸಿ ಎಂಜಲು ಉಗಿದು ಹೋದ. ಹಿಂದೆಯೇ ಇದ್ದವನು ಹಾರ‍್ನ್ ಮಾಡಿ… ಎಲ್ಲಿಗೇ… ಎಂದ. ಸಭ್ಯ ಮಾತಾಡಲಿಲ್ಲ. ಗಣಿ ದೂಳಿನ ಜಾಕೆಟ್ ಧರಿಸಿದ್ದ. ಹೊಟ್ಟೆ ಬಿರಿಯುತ್ತಿತ್ತು. ಮಾತಾಡೊ… ಎಷ್ಟು ಸಲ ಕೇಳಬೇಕೂ… ಬಾಯಿ ಬಿಡೊ… ಯಾರೊ ನೀನೂ… ಎಲ್ಲಿಂದ ಬಂದಿದ್ದೀಯೋ. ಮಾತಾಡಿಸಿದ್ರೆ ಮಾತಾಡ್ಬೇಕು ಎಂಬ ಸೌಜನ್ಯವೆ ನಿನಗಿಲ್ಲವಲ್ಲೊ… ಎಷ್ಟೋ ದುರಹಂಕಾರ ಎಂದು ಗುರಾಯಿಸಿದ. ಲೇ ನಿನ್ನನ್ನೆ ಕಣೊ ಮಿಂಡ್ರೀ ಮಾತಾಡೊ ಎಂದಿದ್ದೂ… ಮಾತಾಡಲ್ಲವಾ… ಬಾಯಿ ಇಲ್ಲವಾ… ಬಾಯಿ ಬಿಡಿಸಲೇ ಎಂದು ಸಭ್ಯನ ಭುಜ ಅಲುಗಾಡಿಸಿದ. ಹೇ ಹೋಗಪ್ಪಾ ಎಂದು ನಿರ್ಲಕ್ಷಿಸಿದ. ಹೇ; ನಾನ್ಯಾರು ಅಂತಾಗೊತ್ತಿಲ್ಲವಾ ನಿನಗೇ, ಗಣಿ ಧಣಿಗಳೇ ನನ್ನ ಕಂಡು ಬಾರಪ್ಪಾ ಎಂದು ಗೌರವ ಕೊಟ್ಟು ಮಾತಾಡಿಸ್ತಾರೆ… ನಿನ್ಯಾವನೊ ನನ್ನ ಲವಡಾ… ಬಾಯಿಬಿಡ್ಲೇ ಮಿಂಡ್ರೀ ಎಂದು ತಳ್ಳಿದ. ಭಾಗಶಃ ಯಾರೂ ಅವನನ್ನು ಅಷ್ಟೊಂದು ನಿರ್ಲಕ್ಷಿಸಿರಲಿಲ್ಲವೇನೊ. ಅಕ್ಕಪಕ್ಕದವರು ಸುಮ್ಮನೆ ನೋಡುತ್ತಿದ್ದರು. ರೀ ಸ್ವಾಮೀ… ನಾನ್ಯಾರೊ; ನೀವ್ಯಾರೊ ನಮದೇ ನೂರೆಂಟು ತೂತು… ಹೋಗ್ರೀ… ಎಂದ. ಹಾಗಾದ್ರೆ ನಿನ್ನ ತೂತುಗಳಿಗೆ ನಂದನ್ನ ಹಾಕಬೇಕೇನೊ ಎಂದು ಕೆಕ್ಕರಿಸಿದ. ಸಭ್ಯನಿಗೆ ಸಿಟ್ಟು ನೆತ್ತಿಗೇರಿತು. ಸುತ್ತ ಮುತ್ತ ನೋಡಿದ. ಜನ ಮಜಾ ತೆಗೆದು ಕೊಳ್ಳುತ್ತಿದ್ದರು. ರಸ್ತೆ ಬದಿಯಲ್ಲೆ ಎಳನೀರು ಮಾರುತ್ತಿದ್ದವನ ಮಚ್ಚು ಬಿಸಿಲಿಗೆ ಹೊಳೆಯುತಿತ್ತು.

ರಸ್ತೆ ಪಕ್ಕದಲ್ಲೆ ಯಾವನೊ ಎಗ್ ಪ್ರೈಡ್‌ರೈಸ್ ಮಾರುತ್ತಿದ್ದ. ಘಾಟು ಹೊಗೆ ವಾಸನೆ ಬಡಿಯುತ್ತಿತ್ತು. ಅವನ ತಳ್ಳುಗಾಡಿಯ ಬಳಿ ಜನ ನೊಣಗಳಂತೆ ಮುತ್ತಿಕೊಂಡಿದ್ದರು. ಚರಂಡಿ ಅಲ್ಲೇ ಇತ್ತು. ಆಕ್ಸಿಡೆಂಟಾಗಿ ಸತ್ತಿದ್ದ ನಾಯಿಯ ಶವ ಅಲ್ಲೇ ಒಂದೆಡೆ ಊದಿಕೊಂಡು ಬಿದ್ದಿತ್ತು. ಎಲ್ಲಮ್ಮ ಮೈಮೇಲೆ ಬಂದಳೆಂದು ಮಧ್ಯ ವಯಸ್ಸಿನ ಹೆಂಗಸೊಬ್ಬಳು ತೂರಾಡಿಕೊಂಡು ಕುಣಿದು ಬೇಡುತ್ತಿದ್ದಳು. ಮಂಗಳಮುಖಿಯರೂ ಸೇರಿಕೊಂಡಿದ್ದರು. ಅಲ್ಲೇ ಯಾರೊ ಹೇಸಿಗೆ ಮಾಡಿದ್ದರು. ದಡಿಯ ಅದನ್ನೆ ತುಳಿದುಕೊಂಡು ಬಂದು; ಲೇ ನೀನು ಮೈಸೂರಿನ ಕಡೆಯವನೇನೊ… ಗೊತ್ತು ಕಣಲೇ ಮಿಂಡ್ರೀ ನೀವು ಎಂತಹವರೆಂದೂ; ನಾನು ವಿಜಯನಗರ ಸಾಮ್ರಾಜ್ಯದ ಹುಲಿ ಕಣಲೇ ಎಂದು ಮತ್ತೊಮ್ಮೆ ತಳ್ಳಿ ಸಭ್ಯನ ಸ್ಕೂಟರಿನ ಕೀಯನ್ನು ಕಿತ್ತುಕೊಂಡು…ಪಕ್ಕ ಈ ಕಡೆ ಬಾರಲೇ; ನಿನ್ನ ಬಾಯಿ ಬಿಡಿಸೋದು ಹೇಗೆ ಎಂಬುದು ನನಗೆ ಗೊತ್ತಿದೇಲೇ ಮಿಂಡ್ರಿ ಎಂದು ಕೆಕ್ಕರಿಸಿದ. ಪ್ಲೀಸ್… ಕೀ ಕೊಡ್ರೀ… ನಾನು ಅಪರಿಚಿತರ ಜೊತೆ ಮಾತಡಲ್ಲಾ ಎಂದು ಬೇಡಿದ. ಇದು ನಿರುಪದ್ರವಿ ಬಡಿದರೆ ಬಡಿಸಿಕೊಳ್ಳುತ್ತದೆ ಎನಿಸಿತು. ದೊಂಬಿಯಲ್ಲಿ ಏನಾಯಿತು ಎಂದು ಗೊತ್ತಾಗದು ಎಂದು ಆ ದುಷ್ಟ ಆ ಸಭ್ಯನ ಹಿಡಿದೆಳೆದು ಬೀಳಿಸಿದ. ರೈಲು ಗೇಟು ತೆರೆಯಿತು. ತಾ ಮುಂದು ನಾ ಮುಂದು ಎಂಬಂತೆ ಸವಾರರು ನುಗ್ಗಿದರು. ಅಲ್ಲಿದ್ದ ಒಬ್ಬ ಭಿಕ್ಷುಕ ಹಲವು ಸಲ ಆ ದುಷ್ಟನ ಅಂತಹ ವರ್ತನೆಗಳನ್ನು ಕಂಡಿದ್ದವನು ಮಧ್ಯೆ ಹೋಗಿ ತಡೆದ. ಅಷ್ಟರಲ್ಲಿ ದುಷ್ಟ ಚಾಕು ತೆಗೆದು… ಮಾತಾಡೊ ಮಗನೇ ಎಂದು ಚುಚ್ಚಿದ್ದ. ಸಭ್ಯ ತಪ್ಪಿಸಿಕೊಂಡಿದ್ದ. ಆ ದುಷ್ಟ ಗಣಿ ನಗರದ ಕುಖ್ಯಾತ ರೌಡಿ ಎಂದೆನಿಸಿಕೊಳ್ಳಲು ಅಮಾಯಕರ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸುತ್ತಿದ್ದ. ಕೆಳಕ್ಕೆ ಕೆಡವಿ ಗುದ್ದುತ್ತಿದ್ದ ದಾಂಡಿಗನ ಭಿಕ್ಷುಕ ಬಂದು ತಡೆದ. ಎಳನೀರು ಮಾರುತ್ತಿದ್ದವನು, ಹೇ ಬಿಡ್ರೊ ಮಾರಾಯ್ರಾ ಎಂದು ಅದರಿಸುತ್ತಿದ್ದ. ಲೇ ತಿರ‍್ಕೇ… ನನ್ನ ಮುಟ್ಟಿ ಎಳೆಯುವೆಯಾ ಎಂದು ದುಷ್ಟ ಭಿಕ್ಷುಕನ ಕೆನ್ನೆಗೆ ಬಾರಿಸಿದ. ಸಭ್ಯನ ತೋಳ ಸಂದಿಯಿಂದ ರಕ್ತ ಒಸರುತ್ತಿತ್ತು. ಭಿಕ್ಷುಕನಿಗೆ ಸಿಟ್ಟಾಯಿತು. ಗೇಟು ತೆರೆದ ಮೇಲೆ ಅಲ್ಲಿನ ಜನರ ರೀತಿ ತಂತಾನೆ ಸ್ತಬ್ಧವಾಗುತ್ತದೆ. ಅವರ ಕಿತ್ತಾಟ ಮನರಂಜನೆಯಂತೆ ಕಾಣುತ್ತಿತ್ತು. ನಿತ್ಯ ನರಕದ ಜಂಜಡದಲ್ಲಿ ಎಲ್ಲವೂ ಅಲ್ಲಿ ಕೃತಕವಾಗಿತ್ತು. ಸಭ್ಯ ಎದ್ದು ನಿಂತು ಪಲಾಯನ ಮಾಡಲು ಗಾಡಿಯ ಎತ್ತಿ ನಿಲ್ಲಿಸಿದ. ಕೀ ದುಷ್ಟನ ಜೇಬಲ್ಲಿತ್ತು. ಅಣ್ಣಾ; ನಿನ್ನ ದಮ್ಮಯ್ಯ ಕೀ ಕೊಡಣ್ಣಾ ಎಂದ. ಕಾಲಿಂದ ಒದ್ದ. ತೊಡೆ ಸಂದಿಗೆ ಏಟಾಗಿ ತೊಪ್ಪೆಂದು ಸಭ್ಯ ಕೆಳಗೆ ಬಿದ್ದ. ವ್ಯಗ್ರನಾದ ಭಿಕ್ಷುಕ ದಾಂಡಿಗನ ಎತ್ತಿ ಗೇಟಿನತ್ತ ಎಸೆದ. ಕಂಬಿಗೆ ತಲೆ ಬಡಿದು ರಕ್ತ ಚಿಮ್ಮಿತು. ದೇವಸ್ಥಾನದ ಭಕ್ತಾದಿಗಳು ಕ್ಷುಲ್ಲಕ ಕಿತ್ತಾಟ ಎಂದು ಭಕ್ತಿಯ ಪರಾಕಾಷ್ಠೆಯಲ್ಲಿ ತೇಲುವಂತೆ ಗಂಟೆ ಜಾಗಟೆ ನಗಾರಿಗಳ ಸದ್ದಿನಲ್ಲಿ ವಾಲಾಡುತ್ತ ಗಣಿ ಉದ್ಯಮದಲ್ಲಿ ಯಶಸ್ಸು ಲಭಿಸಲಿ ಎಂದು ಹರಕೆ ಕಟ್ಟಿಕೊಳ್ಳುತ್ತಿದ್ದರು. ಆ ವಿಶ್ವವಿಖ್ಯಾತ ಹಂಪಿಯ ಬೆಟ್ಟಸಾಲುಗಳಲ್ಲಿ ಅಪಾರ ಚಿನ್ನದ ಅದಿರು ತುಂಬಿದೆ ಎಂದು ಭೂಗರ್ಭ ತಜ್ಞರು ವರದಿ ನೀಡಿದ್ದು; ಕೇಂದ್ರ ಸರ್ಕಾರ ಆ ವಿಜಯನಗರ ಸಾಮ್ರಾಜ್ಯವನ್ನು ಮರು ಸ್ಥಾಪಿಸುತ್ತೇವೆ ಎಂದ ಕೂಡಲೆ ಬೃಹತ್ ಬಿಲ್ಡರ್‌ಗಳು ರಿಯಲ್ ಎಸ್ಟೇಟ್ ದಂಧೆಕೋರರೆಲ್ಲ ಈಗಲ್ಲಿ ಬಂದು ನೆರೆದಿದ್ದಾರೆ. ಅತ್ತ; ಆ ಜಿಂದಾಲ್ -ಕ್ಟರಿ ಆ ಸೀಮೆಯ ಬಡ ರೈತರೆಲ್ಲರ ಕೃಷಿ ಜಮೀನನ್ನು ರಾತ್ರೊರಾತ್ರಿ ಸರ್ಕಾರದ ಒಪ್ಪಂದದಲ್ಲಿ ನುಂಗಿಬಿಟ್ಟಿದೆ. ಇನ್ನು ಆ ದಲಿತರೊ ಎಲ್ಲಿ ಹೋದರೊ ಏನೊ… ಅವರಿಗೆ ಅವರದೇ ಚಿಂತೆ.

ಹೀಗೆ ಬಿಗಡಾಯಿಸಿದ ನಗರದಲ್ಲಿ ಆ ದಾಂಡಿಗ ಭಿಕ್ಷುಕನಿಗೂ ಚಾಕುವಿನಿಂದ ತಿವಿದಿದ್ದ. ರಪರಪನೆ ಭಿಕ್ಷುಕ ಆ ದುಷ್ಟನ ಎತ್ತಿ ಬಿಸಾಡಲು ಅವನ ಸೊಂಟವೇ ಮುರಿದಂತಾಯಿತು. ಸಭ್ಯ ಎದ್ದು ಬಂದು ಅವನ ಜೇಬಿಗೆ ಕೈ ಹಾಕಿ ಕೀ ಕಿತ್ತುಕೊಂಡು ಬಂದು ಗಾಡಿ ಕಿಕ್ ಮಾಡಿದ. ಉರುಳಿದ್ದರಿಂದ ಪೆಟ್ರೋಲ್ ಸುರಿದು ಹೋಗಿತ್ತು. ಭಿಕ್ಷುಕ ನೋಡಿದ. ಗಾಡಿಯ ಪಕ್ಕ ತಂದು ನಿಲ್ಲಿಸಿ ಕಂಕುಳಿಗೆ ಬಟ್ಟೆ ಕಟ್ಟಲು ಆ ತನಕ ಅಲ್ಲೇ ಎಲ್ಲವನ್ನೂ ನೋಡುತ್ತಿದ್ದ ಮೈ ಮಾರುವವಳಿಗೆ ಹೇಳಿದ. ಅವಳು ಅವನ ಬಾಡಿಗೆ ಸಂಗಾತಿ. ಹೆಂಡತಿ ಎಂದು ಸುಮ್ಮನೆ ಹೇಳಿಕೊಂಡಿದ್ದಳು. ಅಂತಹ ಬರ್ಬರ ಗಣಿನಾಡಿನಲ್ಲಿ ಒಬ್ಬ ಭಿಕ್ಷುಕ ಗಂಡಸಾದರೂ ಜೊತೆಗಿದ್ದರೆ ಏನೊ ಒಂದು ರಕ್ಷಣೆ. ಬಟ್ಟೆ ಕಟ್ಟಿದಳು. ಅಷ್ಟರಲ್ಲಿ ಮತ್ತೆ ರೈಲು ಹಳಿಯ ಗೇಟಿನ ಕಂಬಿ ಕೆಳಗಿಳಿದು ಅಡ್ಡಗಟ್ಟಿತು. ಸಾಲು ಸಾಲು ವಾಹನಗಳು ಬಂದು ನೆರೆದವು. ಆ ದಾಂಡಿಗ ತೂರಾಡುತ್ತ ಬಂದು ಆ ಸಭ್ಯ ಎಲ್ಲಿ ಹೋದ ಎಂದು ತಡಕಾಡುತ್ತಿದ್ದ. ಟ್ರಾಫಿಕ್ ಪೇದೆ ಇದು ತನಗೆ ಸಂಬಂಽಸಿದ್ದಲ್ಲ ಎಂದು ಅತ್ತ ಹೋಗಿ ನಿಂತಿದ್ದ. ಭಿಕ್ಷುಕನ ಬೆನ್ನಿಗೆ ದಾಂಡಿಗ ಚಾಕು ಚುಚ್ಚಿ ಅಬ್ಬರಿಸಿದ. ವಿಕಾರವಾಗಿ ಇಬ್ಬರೂ ಕಿರುಚಿಕೊಂಡರು. ಎಳನೀರು ಮಾರುತ್ತಿದ್ದವನು ಮಚ್ಚು ಹಿಡಿದು ಬೀಸಿಯೇ ಬಿಟ್ಟ. ಕ್ಷಣ ಮಾತ್ರದಲ್ಲಿ ದಾಂಡಿಗ ತಪ್ಪಿಸಿಕೊಂಡಿದ್ದ. ನಿತ್ಯದ ಅಂತಹ ರಗಳೆಗಳ ಕಂಡು ಎಳನೀರಿನವ ರೋಸಿ ಹೋಗಿದ್ದ.

ಪರಿಸ್ಥಿತಿ ಕೈ ಮೀರಿತ್ತು. ಭಿಕ್ಷುಕ ನಿಜವಾದ ನಿರ್ಗತಿಕನಾಗಿರಲಿಲ್ಲ. ಭಿಕ್ಷೆಯನ್ನೇ ಆತ ಪಾರ್ಟ್ ಟೈಂ ವೃತ್ತಿಯಾಗಿಸಿಕೊಂಡಿದ್ದ. ಹಿಂದೆ ಅವನು ಯಾವುದೊ ಟ್ರೇಡ್ ಯೂನಿಯನ್ನಿನಲ್ಲಿ ಕೆಲಸ ಮಾಡಿ ಅಲ್ಲಿಂದ ಬೇಸತ್ತು ಕೊನೆಗೆ ಆ ರೈಲು ಹಳಿಯ ಬಳಿ ಭಿಕ್ಷುಕನಾಗಿದ್ದ ಅಷ್ಟೇ. ಬಿದ್ದಿದ್ದ ದಾಂಡಿಗನ ತಲೆ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾಗಿದ್ದ. ಯಾವಳೊ ಒಬ್ಬಳು ಅಲ್ಲೇ ಇದ್ದ ಸ್ಲಮ್ಮಿನವಳು ಕಂಕುಳಲ್ಲಿ ಯಾರದೊ ಕೂಸನ್ನು ಸಿಕ್ಕಿಸಿಕೊಂಡು ಬೇಡುವವಳು ತಡೆದು ದಾಂಡಿಗನ ಬಾಯಿಗೆ ನೀರು ಬಿಟ್ಟು ಉಳಿಸಿದ್ದಳು. ಸಭ್ಯ ಅಲ್ಲೇ ನಿಂತಿದ್ದ. ಹೋಗಪ್ಪಾ ಮಾರಾಯಾ… ಅವನು ಮಾತಾಡಿಸಿದ್ದಾಗ ಬಾಯಿಬಿಟ್ಟು ಮಾತಾಡಿಸಿ ನಗಾಡಿದ್ದರೆ ಏನು ನಿಮ್ಮಪ್ಪನ ಸಾಮ್ರಾಜ್ಯ ಮುಳುಗಿ ಹೋಗುತಿತ್ತೇ… ಹೋಗು ಹೋಗು. ಪೊಲೀಸರು ಬಂದರೆ ನಿನ್ನನ್ನೂ ಎತ್ತಿಕೊಂಡು ಹೋಗಿ ಬೆಂಡೆತ್ತಿಬಿಡುತ್ತಾರೆ ಎಂದು ಸಭ್ಯನ ಎಳನೀರಿನವನು ಅತ್ತ ಕಳಿಸಿಬಿಟ್ಟ. ಬದುಕಿತೇ ಬಡಜೀವ ಎಂದು ಆತ ಈ ಗಣಿನಾಡಿನ ಸಹವಾಸವೇ ಬೇಡ ಎಂದು ಕಣ್ಮರೆ ಆದ. ಭಿಕ್ಷುಕನೂ ಮಾಯವಾದ. ಮತ್ತೆ ಗೇಟು ತೆರೆಯಿತು. ಹರಿದಾಡುವ ರೈಲುಗಳು, ವಾಹನಗಳು ತಮಗೇನೂ ಗೊತ್ತಿಲ್ಲ ಎಂಬಂತೆ ಸಾಗುತ್ತಿದ್ದವು. ದಾಂಡಿಗನ ತಲೆಗೆ ಬಲವಾಗಿ ಪೆಟ್ಟಾಗಿ ರಕ್ತ ಸೋರುತ್ತಿತ್ತು. ನರಳುತ್ತ ತೇಲುಗಣ್ಣು ಮಾಡುತ್ತಿದ್ದ. ಸತ್ತು ಹೋಗುವನು ಅನಿಸಿತು. ಯಾವುದೋ ತರಲೆ ಎಂದುಕೊಂಡಿದ್ದ ಆ ರೈಲು ಗೇಟಿನ ಅಽಕಾರಿ ಬಂದು ನೋಡಿದ. ಇದು ತನ್ನ ತಲೆಗೆ ಬರಬಾರದು ಎನಿಸಿತು. ಯಾವುದೊ ಒಂದು ಆಂಬ್ಯುಲೆನ್ಸ್ ಬಂತು. ಅದನ್ನು ನಿಲ್ಲಿಸಿ ಅದರಲ್ಲಿ ದಾಂಡಿಗನ ಮಲಗಿಸಿ ಜೊತೆಗೆ ರೈಲು ಹಳಿಯ ನೌಕರನೊಬ್ಬನ ಕೂರಿಸಿ ಆಸ್ಪತ್ರೆಯತ್ತ ಕಳಿಸಿಬಿಟ್ಟರು. ಏನಾಯ್ತು ಎಂದರು. ಗಾಡಿಯಲ್ಲಿ ವೇಗವಾಗಿ ಬಂದು ಅಡ್ಡ ಕಂಬಿಗೆ ಬಡಿದು ಬಿದ್ದ. ಯಾರೊ ಗೊತ್ತಿಲ್ಲ… ಕಾಪಾಡಿ ಎಂದು ಸರ್ಕಾರಿ ಆಸ್ಪತ್ರೆಯ ಒಂದು ಮೂಲೆಗೆ ಹಾಕಿ ಹೋದರು. ವೈದ್ಯರು ಪರಿಶೀಲಿಸಿ ಔಷಽ ನೀಡಿದರು. ಮೂರು ದಿನಗಳು ಆದ ಮೇಲೆ ಎಚ್ಚರಗೊಂಡಿದ್ದ. ಅಕಸ್ಮಾತ್ ಬದುಕಿದ್ದ. ಆದರೆ ನೆನಪಿನ ಸಂಕೇತಗಳು ಮಬ್ಬಾಗಿದ್ದವು. ನೀನಿನ್ನು ಹೋಗಬಹುದು ಎಂದರು. ನಿಶ್ಪಾಪಿಯಂತೆ ಆಸ್ಪತ್ರೆಯಿಂದ ಹೊರ ಬಂದು ಹೊರಗೆ ಜಾತ್ರೆಯಂತೆ ನೆರೆದಿದ್ದ ರೋಗಿಗಳ ಕಂಡು ತಬ್ಬಿಬ್ಬಾದ. ಭಾಗಶಃ ಅವರೆಲ್ಲ ಗಣಿ ಕಾರ್ಮಿಕರಾಗಿದ್ದರು. ಅವರೆಲ್ಲ ಗಣಿಯ ಸೋಟಗಳಿಗೆ ಈಡಾಗಿ ಗಾಯಗೊಂಡಂತೆ ಕಾಣುತ್ತಿದ್ದರು. ನಗರದ ಮೇಲೆ ಗಣಿಧಣಿಗಳ ವಿದೇಶಿ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದವು.

ದಾಂಡಿಗ ಈಗ ಅಮಾಯಕನಾಗಿ ಎಲ್ಲಿಗೆ ಹೋಗಲಿ ಎಂದು ಕಲ್ಲು ಬೆಂಚಿನಲ್ಲಿ ಕೂತು ಕಣ್ಣು ಬಿಡುತ್ತಿದ್ದ. ಗಣಿ ನಿಲ್ದಾಣದ ರೈಲುಗಳ ಕೂಗು ಇಡೀ ನಗರವನ್ನೇ ನುಂಗುವಂತೆ ಸದ್ದು ಮಾಡುತ್ತಿತ್ತು. ರೈಲು ಹಳಿಯ ಗೇಟುಗಳು ಏರಿ ಇಳಿದು ಆಟ ಆಡುತ್ತಿದ್ದವು. ಅದೇ ರಗಳೆಗಳು ಜೂಜಾಡುತ್ತಿದ್ದವು. ಕ್ಷುದ್ರತೆಗಳಿಗೆ ತರ್ಕವೇ ಇರುವುದಿಲ್ಲ. ಅಂತಹ ಗಣಿ ಉದ್ಯಮ ಮಾತ್ರ ಎಲ್ಲವನೂ … ಆ ಹಗಲಿರುಳು ಬೆಟ್ಟಗಳ ಹೊಟ್ಟೆಯ ಬಗೆವ ಬೃಹತ್ ಯಂತ್ರಗಳೆಲ್ಲೊ… ಸಿಡಿಮದ್ದುಗಳ ಆ ಸೋಟ ಎಲ್ಲೊ… ಎಲ್ಲವೂ ಒಂದರೊಳಗೊಂದು ಬೆರೆತು ಆ ಗಣಿಯ ವಿಸ್ತಾರವು ಎಲ್ಲೆಲ್ಲಿಗೊ ಚಾಚಿಕೊಳ್ಳುತ್ತಿತ್ತು. ಕೇಂದ್ರ ಮತ್ತು ರಾಜ್ಯ ರಾಜಕಾರಣಿಗಳು ಪಕ್ಷಭೇದ ಮರೆತು ಖನಿಜ ಸಂಪತ್ತಿನ ಲೂಟಿಗಾಗಿ ವಿಶ್ವದ ಟೆಂಡರ್ ಕರೆದು ಉದ್ದಾರದ ಮಹಾ ಚುನಾವಣಾ ಕನಸುಗಳ ಬಿತ್ತುತ್ತಿದ್ದರು. ಒಂದು ಕಾಲದ ಆ ವಿಜಯನಗರ ಸಾಮ್ರಾಜ್ಯದ ಸಮಾಧಿಯ ಮೇಲಿಂದ ಜನರಿಂದ ಈಗಲ್ಲಿ ಹೊಸ ಕಾಲ ಸರ್ವಾಽಕಾರಿ ತರಾವರಿ ವೇಷಗಳಿಂದ ಕುಣಿಯುತ್ತಿತ್ತು. ಜನ ಗಣ ಮನ ನಲಿಯುತ್ತಲೊ, ನಲುಗುತ್ತಲೊ ರೈಲು ದಾರಿಗಳ ಆಚೆ ಈಚೆ ಕಾಯುತ್ತಿತ್ತು

ಆಂದೋಲನ ಡೆಸ್ಕ್

Recent Posts

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

6 seconds ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

1 hour ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

2 hours ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

3 hours ago