ನಾನೇಕೆ ಆ ಕನಸನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದೆ, ಕರಗ ಹೊತ್ತಿದ್ದವನು ಯಾರು, ಯಾವುದು ಆ ಕಣ್ಣು, ನನ್ನ ಮನಸ್ಸೇಕೆ ಹೆದರುತ್ತಿದೆ?

• ಶಶಿ ತರೀಕೆರೆ
ಪ್ರತಿ ಬೀದಿ ಸಜ್ಜಾಗಿದೆ. ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಚೆಲ್ಲಿ, ಆರತಿ ತಟ್ಟೆ ಹಿಡಿದು ನಿಂತು, ಇನ್ನೂ ಕೆಲವು ಕಡೆ ಬಣ್ಣದ ರಂಗೋಲಿಯ ಬಿಡಿಸಿ, ರಂಗುರಂಗಾದ ವಿದ್ಯುತ್ ದೀಪಗಳಿಂದ ಅಲಂಕರಿಸಿ, ತಮಟೆ ವಾದನದ ತಂಡದೊಂದಿಗೆ ನೆರೆದ ಒಂದಷ್ಟು ಜನರು, ಅದರ ಹಿಂದೆ ಕತ್ತಿ ಹಿಡಿದ ವೀರ ಕುಮಾರರ ದಂಡು, ಘಂಟೆ ಪೂಜಾರಿ, ಗಣಾಚಾರಿಗಳ ಗುಂಪು, ಅದರ ಹಿಂದೆ ಇನ್ನಷ್ಟು ಹಲಗೆ ತಮಟೆ ವಾದ್ಯಗಳು ಕಿಕ್ಕಿರಿಯುತ್ತಿವೆ. ಏನೋ ಸುವಾಸಿತ ದಟ್ಟ ಕಂಪು ನುಗ್ಗಿ ಬರುತ್ತಿದೆ. ಕರಗ ಹೊತ್ತ ಮುಖ ನನಗೆ ಕಾಣಿಸುತ್ತಿಲ್ಲ. ಗೆಜ್ಜೆ ಸದ್ದು ಮಾತ್ರ ಮೊಳಗುತ್ತಿದೆ. ಇನ್ನೇನು ದೇವಾಲಯವನ್ನು ಪ್ರದಕ್ಷಿಣೆ ಮಾಡಿ ನರ್ತಿಸಿತು ಮಲ್ಲಿಗೆ ಹೂವಿನಾಕೃತಿಯ ಕರಗ. ಜನವೋ ಜನ. ನರ್ತಿಸುತ್ತಾ ಕರಗ ಊರೆಲ್ಲಾ ಸಂಚರಿಸುತ್ತಿದೆ. ಆಗಿನಿಂದ ಕಾದಿದ್ದ ಜನರು ತಮ್ಮ ಮನೆಗಳ ಮುಂದೆ ಕರಗ ಬರುತ್ತಿದ್ದಂತೆ “ಗೋವಿಂದ, ಗೋವಿಂದ” ಎಂದು ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸುತ್ತಿದ್ದಾರೆ. ನಾನು ಈ ಬಾರಿ ಯಾರು ಕರಗ ಹೊತ್ತಿದ್ದಾರೆ ಎಂಬ ಕುತೂಹಲದಿಂದ ನೋಡುತ್ತಿದ್ದೇನೆ. ನನಗೆ ಕಳಶ ಬಿಟ್ಟು ಏನೂ ಕಾಣಿಸುತ್ತಿಲ್ಲ. ಮಲ್ಲಿಗೆ ಮಾಲೆ, ಜಡೆ ಕುಚ್ಚು ಅದೆಷ್ಟು ಮನಸೂರೆಗೊಳ್ಳುವಷ್ಟು ಅಂದವಾಗಿ ಮುಡಿಸಿದ್ದಾರೆ, ದಿಟ್ಟಿಸಿ ನೋಡಿದಷ್ಟು ಅಸ್ಪಷ್ಟವಾಗುತ್ತಿದೆ. ಮುಖ ಮುಚ್ಚುವಂತೆ ತಲೆಯ ಮೇಲೆ ಕರಗ ಹೊತ್ತ ಪೂಜಾರಿಯ ಕಣ್ಣು ಕಂಡಿತು. ಮತ್ತದು ಮರೆಯಾಯಿತು. ನನಗೇಕೋ ತೀರಾ ಆಪ್ತರಾದವರು ಯಾರೋ ಈ ಸಲ ಕರಗ ಹೊತ್ತಿದ್ದಾರೆ ಅನಿಸಿತು. ಆದರೆ ಈ ಸಲ ಕರಗ ಹೊತ್ತವನು ಕಂಕಣ, ಮಂಗಳ ಸೂತ್ರ, ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಂಡು ಎಂದಿಗಿಂತ ಸಾಕ್ಷಾತ್ ಆದಿಶಕ್ತಿಯ ಹಾಗೆ ಕಾಣಿಸುತ್ತಿದ್ದಾನೆ, ಹಳದಿ ಸೀರೆಯಂತೂ ಮೈಗೆ ಅಂಟು ಹಾಕಿದಂತಿದೆ. ಅರಿಶಿನದಲ್ಲಿ ಅದ್ದು ತೆಗೆದಂತಿದೆ ಕೈಕಾಲುಗಳು.

ಹೋದ ಸಲ ತಲೆಯ ಮೇಲೆ ಹೊತ್ತಿರುವ ಕರಗ ಕೊಂಚ ಅಲುಗಾಡಿದಂತಾಗಿತ್ತಂತೆ, ಕಂಡವರು ಹೇಳಿದ್ದರು, ಕಳಶ ಅಪ್ಪಿತಪ್ಪಿಯೂ ಕೆಳಗೆ ಬೀಳಬಾರದಂತೆ..! ಆದರೆ ಈ ಬಾರಿಯ ಕಳಶ ಕೊಂಚವೂ ಮಿಸುಕುತ್ತಿಲ್ಲ. ಕರಗ ಹೊರುವುದು ಸಾಮಾನ್ಯವಲ್ಲ, ವೀರ ಕುಮಾರರು ಎಲ್ಲಾ ಬಗೆಯಲ್ಲಿ ಶುದ್ಧವಾಗಿರಬೇಕು, ಚೈತ್ರ ಶುದ್ಧ ಹುಣ್ಣಿಮೆಗೆ ಒಂಬತ್ತು ದಿನ ಇರುವಾಗಲೇ ಸಿದ್ಧತೆಗಳು ಶುರುವಾಗುತ್ತವೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಸೂರ್ಯ ಉದಯಿಸುವ ಮುನ್ನ ಕರಗ ದೇವಸ್ಥಾನದ ಗರ್ಭಗುಡಿಗೆ ತಿರುಗಿ ಬರಬೇಕು ಎಂಬ ನಿಯಮ. “ಧಿಕ್ ತಿ, ಧಿಕ್ ತಿ” ಎಂದು ಖಡ್ಗ ಹಿಡಿದು ಹೆಜ್ಜೆ ಹಾಕುತ್ತಾ ಅಲಗು ಸೇವೆ, ಪೊಂಗಲು ಸೇವೆ, ಗಾವು ಸೇವೆ, ಪಲ್ಲಕ್ಕಿ ಉತ್ಸವ ಎಲ್ಲಾ ಚಕಚಕನೆ ನಡೆಯುತ್ತಿವೆ. ನಾನು ಕರಗ ಹೊತ್ತ ಪೂಜಾರಿಯ ಮುಖವನ್ನೊಮ್ಮೆ ನೋಡಲು ಯತ್ನಿಸಿದೆ. ಸರ್ವಾಲಂಕಾರ ಭೂಷಿತನಾಗಿದ್ದವನ ಬಳೆ ತೊಟ್ಟ ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ, ನೋಡಿದೆ… ಬೆಚ್ಚಿಬಿದ್ದೆ..! ಎದ್ದು ಕೂತೆ. ಎಂಥ ಕನಸು ಅಬ್ಬಾ… ಮಗ ಎಷ್ಟು ಹೊತ್ತಿಗೆ ಬರುವನು, ಸಮಯ ನೋಡಿದೆ. ಇನ್ನೂ ಮಧ್ಯಾಹ್ನ ಒಂದು ಗಂಟೆ.

ಮಂಚದಿಂದ ಎದ್ದು ಬಂದು ಒಂದು ಗ್ಲಾಸು ತಣ್ಣಗಿನ ನೀರು ಗಟಗಟನೆ ಕುಡಿದು ಈಗಷ್ಟೇ ಬಂದು ಸೋಫಾದ ಮೇಲೆ ಮೈ ಚೆಲ್ಲಿದ್ದೇನೆ. ಭುಜದ ಮೇಲೆ ಎರಡು ನೊಗಗಳನ್ನು ಹೊತ್ತು ಸಾಗಿಸಿ ಮತ್ತೀಗ ಇಳಿಸಿದಂತಹ ಏನೋ ನೆಮ್ಮದಿ ನನ್ನೊಳಗೆ ಹೊಕ್ಕುತ್ತಿದೆ. ಇದು ಇನ್ನೆಷ್ಟು ಹೊತ್ತು, ಥಂಡಿಯಂತಹ ಮಗ ಬರುವವರೆಗೂ ಮಾತ್ರ ನಿಜಕ್ಕೂ ಅವನೊಂದು ಥಂಡಿಯ ಹಾಗೆ ಅವನು ಹೊರಗೆ ಹೋದಾಗ ಮೈಮನ ಆವರಿಸುವ ಬೆಚ್ಚಗಿನ ಗಾಳಿ ಅವನು ಬಂದೊಡನೆ ಮಾಯ. ಆಗ ನನಗೆ ಏನೋ ಭಯ. ‘ಅಮ್ಮ’ ಎಂದು ನನ್ನ ತಬ್ಬಿಕೊಂಡಾಗ ನಾನು ಕಳೆದೇ ಹೋಗುತ್ತೇನೆ. ಇನ್ನೂ ಈಗೀಗ ತೊದಲು ಮಾತು, ನಂತರ ಮಾತು, ಆಮೇಲೆ ಪ್ರಶ್ನೆಗಳು, ನಂತರ ಅನುಮಾನ, ತಿರಸ್ಕಾರ, ದ್ವೇಷ ಒಂದೊಂದೇ ಶುರುವಾಗುತ್ತದೆ.

ಮಗ ಪ್ರಶ್ನೆ ಕೇಳುವುದನ್ನು ಕಲಿಯುವ ಮುನ್ನ ನಾನು ಉತ್ತರಿಸುವುದನ್ನು ಕಲಿಯಬೇಕು. ಇಲ್ಲವೇ ಇದೆಲ್ಲಾ ಇನ್ನೇನು ಶುರುವಾಗುವ ಮುನ್ನವೇ ನಾನು ಓಡಿಹೋಗಬೇಕು, ಎಲ್ಲಿಗೆ ಅಂತಲೂ ಗೊತ್ತಿಲ್ಲ. ಒಟ್ಟಿನಲ್ಲಿ ಕಾಣೆಯಾಗಬೇಕು. ಇಲ್ಲದಿದ್ದರೆ ಉಸಿರಾಡುವುದು ಕಷ್ಟ ಗೆಳತಿ ರತ್ನ ಹೇಳುತ್ತಾಳೆ “ನೀನಂದುಕೊಂಡ ಹಾಗೆ ಏನೂ ಆಗಲ್ಲ, ಅಕಸ್ಥಾತು ಆತು ಅನ್ನೋ ನಗರದ ಹಾಸ್ಟೆಲ್ಲಿಗೆ ಸೇರ್ಸಿ ಕೈ ತೊಳ್ಳೋ’ ಅಂತ. ಮಕ್ಕಳ ಒಂಟಿತನ, ಅವರ ಹಸಿವು, ಕಣ್ಣಿನ ದಿಟ್ಟತನಗಳೆಲ್ಲಾ ಅವಳಿಗೆ ನಾಟುವುದೇ ಇಲ್ಲ, ಗಂಡುಮಕ್ಕಳ ಸೂಕ್ಷ್ಮವನ್ನು ಅವಳು ಕಂಡಿಲ್ಲ, ಮೊದಲೇ ಅನುಮಾನದ ಪ್ರೇತಗಳಿವು, ಸುಣ್ಣದ ಹಾಗೆ ಇರ್ತಾವೆ, ಮೆಲ್ಲಗೆ ಗೋಡೆಯನ್ನೆ ನುಂಗಿಬಿಡ್ತಾವೆ, ಹಾಸ್ಟೆಲ್ಲಿಗೆ ಸೇರಿಸಿ ಕೈ ತೋಳೋ ಅಂತಾಳೆ, ಮತ್ತೆ ಮುಂದಿನ ಭವಿಷ್ಯದ ಬಗ್ಗೆ ಅವಳು ಯೋಚಿಸಿಲ್ಲ ಅಥವಾ ನಾನು ಯೋಚಿಸಿಲ್ಲವೋ..! ಅಪ್ಪ ಎಲ್ಲಿ ಎಂದು ಕೇಳಿದರೆ ಏನು ಹೇಳುವುದು, ಫಾರಿನ್ನಿಗೆ ಹೋಗಿದ್ದಾನೆ ಎಂದು ಹೇಳಲಿಕ್ಕೆ ಆಗೋದಿಲ್ಲ, ಸತ್ತ ಎಂದು ಹೇಳುವುದಕ್ಕೂ ಆಗುವುದಿಲ್ಲ, ಯಾಕೆ ಸತ್ತ ಎಂದರೆ ಏನು ಹೇಳಲಿ, ನಡಿ ಸಮಾಧಿ ತೋರಿಸು ಎಂದರೆ ಯಾವ ಮಣ್ಣು ಬಗೆಯಲಿ..! ಯಾಕೆಂದರೆ ಹೊತ್ತಲ್ಲದ ಹೊತ್ತಲ್ಲಿ ಲಕ್ಷ್ಮಣ ಬಂದು “ಮಗ ಮಗಾ” ಎಂದು ಎರಡು ಬಾರಿ ಮುದ್ದಿಸಿ ಹೋಗುತ್ತಾನೆ, ಮಗ ನೋಡಿದರೆ ಇವನ ಬಳಿ ಹೋದರೆ ಏನೋ ಕಡಿದಂತಾಗಿ ರಚ್ಚೆ ಹಿಡಿಯುತ್ತಾನೆ, ಇವನು ರೇಗಿ ನನಗೆ ಹೊಡೆಯುತ್ತಾನೆ, “ನೀನು ಇವನಿಗೆ ನಿಮ್ಮಪ್ಪ ಬಂದಿದ್ದಾನೆ ಹೋಗು ಅಂತಾ ಯಾಕೆ ಹೇಳೋಲ್ಲ’ ಎಂದು ನನ್ನ ಮೇಲೆ ಮುನಿಸಿಕೊಳ್ಳುತ್ತಾನೆ. “ನನ್ನೆಲ್ಲಾ ದಾಖಲೆಗಳಲ್ಲಿ ಕುಟ್ಟಿಯ ಹೆಸರಿದೆ. ಇವನು ಏನಾಗಬೇಕು ಎಂದರೆ, ಇವನು ನನ್ನ ಎರಡನೆ ಅಪ್ಪ ಆದರೆ ಇವನು ಯಾಕೆ ಎಲ್ಲರ ಅಪ್ಪಂದಿರ ಹಾಗೆ ಮನೆಯಲ್ಲಿ ಇರುವುದಿಲ್ಲ, ನಿನಗ್ಯಾಕೆ ಹೊಡೆಯುತ್ತಾನೆ, ಕದ್ದು ಮುಚ್ಚಿ ಓಡಾಡುತ್ತಾನೆ ಯಾಕೆ” ಎಂದು ಸವಾಲು ಕೇಳಿದರೆ ಹಣೆ ಚಚ್ಚಿಕೊಂಡು ಸಾಯಬೇಕಷ್ಟೇ.

ಮಗನನ್ನು ಕಾನ್ವೆಂಟಿಗೆ ಸೇರಿಸುವಾಗಲೇ ಎಷ್ಟು ಅವಮಾನವಾಗಿ ಹೋಯಿತು ನನಗೆ, ಎಲ್ಲರೂ ನೀವು ಹೂವಿನ ಕರಗ ಹೊತ್ತಿದ್ದ ಕುಟ್ಟಿ ಅವರ ಹೆಂಡತಿನಾ, ಅವರ ಮಗನಾ ಇವನು ಎಂದು ಬಹಳ ಕಾಳಜಿ ಮಾಡಿದ್ದರು. ಅವರಿಗೆ ಏನು ಗೊತ್ತಿದೆ..! ಕುಟ್ಟಿ ತೀರಿ ಹೋದಾಗ ನಾನು ಬಸುರಿ, ನಂತರ ನಡೆದದ್ದು ಏನೂ, ಇವರು ಯಾರು ಊಹಿಸಲಾರರು. ಲಕ್ಷ್ಮಣ ಅಪ್ಪನ ಕಾಲಮ್ಮಿನಲ್ಲಿ ತನ್ನೆಸರು ಸೇರಿಸಲು ಒಪ್ಪದೇ ಇದ್ದಾಗ, ರತ್ನ ತಾನೇ ಕುಟ್ಟಿ ಹೆಸರು ಸೇರಿಸಲು ಸೂಚಿಸಿದ್ದು, ಅಪ್ಪನ ಕಾಲಮ್ಮನ್ನು ಹಾಗೆ ಖಾಲಿ ಬಿಡಲು ಸಮಾಜಕ್ಕೆ ಯಾವ ಸಮಸ್ಯೆ ಎಂದೆಲ್ಲಾ ಎನಿಸುತ್ತೆ.

ಹಿತ್ತಲಿನ ತಂತಿಯ ಮೇಲೆ ಒಣಗಲು ಹಾಕಿದ ಬಟ್ಟೆಗಳನ್ನು ಒಂದೊಂದೇ ಆಯ್ದುಕೊಳ್ಳುವಾಗ ಯಾಕೀಗೆ ಚಿಟಿಕೆ ಬಾರಿಸುವುದರೊಳಗೆ ಎಲ್ಲವೂ ಬದಲಾಗಿ ಹೋಯಿತು ಎಂದು ಯೋಚಿಸುತ್ತೇನೆ. ಮದುವೆ ವ್ಯವಸ್ಥಿತವಾಗಿ ನಡೆದರೂ ಮೊದಲ ರಾತ್ರಿ ಎಂಬುದು ಪಿತೂರಿ. ಯಾವುದು ನೈಸರ್ಗಿಕ, ಇನ್ಯಾವುದು ಅನೈಸರ್ಗಿಕ ಎಲ್ಲವೂ ತಿಳಿಯದೇ ಹೋಗಿತ್ತು. “ದಾಂಪತ್ಯವೆಂಬ ಮಡಿಕೆಗೆ ಮೊದಲ ರಾತ್ರಿಯೇ ದೊಣ್ಣೆ’ ಎಂಬುದು ಗೊತ್ತಾಗಲಿಲ್ಲ. ರತ್ನಳಿಗೆ ನಾನೊಬ್ಬಳು ಆತುರಗೇಡಿ, ಗಡಿ ದಾಟಿದವಳು ಎಂದಷ್ಟೇ ಗೊತ್ತು. ನಾನು ಈಗ ಅವಳಿಗೆ ಏನೇ ಬಿಡಿಸಿ ಹೇಳಿದರೂ ಎಲ್ಲವೂ ನಿರರ್ಥಕ. ಎಲ್ಲವೂ ಮುಗಿದು ಹೋಗಿದೆ. ಯಾರಿಗೆ ಹೇಳುವುದು.

ಕುಟ್ಟಿಯನ್ನು ಮೊದಲು ನೋಡಿದಾಗ ಅವನ ನಾರು ಮೈಯಲ್ಲಿ ಮೂಡಿದ ನಳನಳಿಸುವ ನರಗಳು ಹೊಳೆಯುತ್ತಿದ್ದವು. ಗರಡಿ ಮನೆಯಲ್ಲಿ ಗುದ್ದಾಡಿ ಸಿದ್ಧಿಸಿಕೊಂಡ ಗಟ್ಟಿ ದೇಹದವನು. ಬೈತಲೆ ತೆಗೆದು ತುರುಬು ಕಟ್ಟಿಕೊಂಡು ಬೆಕ್ಕಿನ ಹಾಗೆ ಕೂತಿದ್ದ ಕುರ್ಚಿಯಲ್ಲಿ, ಅವನ ಮನೆಯೊಳಗೆ ಆರು ಜನ ಗಂಡಸರು, ಇಬ್ಬರು ಹೆಂಗಸರು. ನಾನು ಹೋದಾಗ ಆ ಮನೆಗೆ ನಾಲ್ಕನೆಯವಳು. ಗೆಳತಿ ರತ್ನ ಆ ಮನೆಯಲ್ಲಿ ಕೆಲಸಕ್ಕಿದ್ದವಳು. ಅಂದರೆ ಆ ಮನೆಯ ಎರಡನೆ ಹೆಂಗಸು. ಮೊದಲನೇ ಹೆಂಗಸು ಕುಟ್ಟಿಯ ತಾಯಿ. ಬಲು ಘಾಟಿ, ಮೂರು ಹೊತ್ತು ಮಡಿ ಮಡಿ ಎಂದು ಚೀರುತ್ತಿದ್ದಳು. ಇನ್ನೊಬ್ಬಳು ಹೆಂಗಸಿದ್ದಳು ಅವಳ ಫೋಟೋ ಗೋಡೆಯ ಮೇಲೆ ನೇತು ಹಾಕಿ ಮರೆತುಬಿಟ್ಟಿದ್ದರು. ಮದುವೆಗೂ ಮುನ್ನ ಕುಟ್ಟಿ ಎರಡು ಬಾರಿ ಕರಗ ಹೊತ್ತಿ ಕುಣಿಯುವ ಫೋಟೋಗಳನ್ನು ತೋರಿಸಿದ. ಮೊಣಕಾಲೂರಿ ಎರಡು ಕೈಚಾಚಿ ನರ್ತಿಸುತ್ತಿರುವ ಫೋಟೋ ಕಂಡು ಹುಬ್ಬು ಹಾರಿಸಿದೆ. ಎಂಥ ಸೂಕ್ಷ್ಮನೂ ಚಾಕಚಕ್ಯತೆ ಉಳ್ಳವನು ಎಂದು ಹೆಮ್ಮೆಪಟ್ಟುಕೊಂಡೆ. ಪ್ರತಿ ದಿನ ಮನೆಗೆ ಸಾಕಷ್ಟು ಜನ ಕುಟ್ಟಿಯನ್ನು ನೋಡಲು ದೂರದ ಊರುಗಳಿಂದ ಬರುತ್ತಿದ್ದರು. ನಿಂಬೆ ಹಣ್ಣು ಮಂತ್ರಿಸಿಕೊಳ್ಳಲು, ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಲು ಹೀಗೆ ತುಂಬಾ ದಂಡು ಸೇರುತ್ತಿತ್ತು. ಭಾಳ ಅದೃಷ್ಟ ಮಾಡಿದೀಯಾ ತಾಯಿ ನೀನು, ದೇವರಂತ ಗಂಡ ಅಲ್ಲ, ದೇವರೇ ಸಿಕ್ಕಿದ್ದಾನೆ ನಿಂಗೆ” ಎಂದು ಹೇಳಿ ಹೋಗುತ್ತಿದ್ದರು.

ಎಲ್ಲರಿಗಿಂತ ಕೊಂಚ ಭಿನ್ನ ಹಾವಭಾವದಲ್ಲಿ ನಡೆಯುತ್ತಿದ್ದ ಮಾತುಕತೆಗೆ ನಾಚುತ್ತಿದ್ದವನನ್ನು ಕಂಡು ಒಮ್ಮೊಮ್ಮೆ “ರೇಷ್ಮೆ ಬಟ್ಟೆಯಂತೆ ಎಷ್ಟು ಮೃದುವಾಗಿದ್ದಾನೆ ಇವನು” ಎಂದುಕೊಳ್ಳುತ್ತಿದ್ದೆ. ಡಿಗ್ರಿ ಪಾಸು ಮಾಡಿಕೊಂಡಿದ್ದ ಕುಟ್ಟಿಯ ಒಳಗೆ ಕಂಡು ಕಾಣದ ಒಬ್ಬಳು ಹೆಣ್ಣಿದ್ದಳು ಎಂದು ನನ್ನ ಅರಿವಿಗೆ ಬರುತ್ತಾ ಹೋಯಿತು. ಅವಳು ನನ್ನ ಕಣ್ಣಿಗೆ ಮಾತ್ರ ಕಾಣಿಸುತ್ತಿದ್ದಳೋ, ಅದು ರಾತ್ರಿ ಹೊತ್ತಿಗೆ ಮಾತ್ರ ಅಗೋಚರವಾಗಿ ಪ್ರತ್ಯಕ್ಷವಾಗಿ ಬಿಡುತ್ತಿದ್ದಳೋ, ತನಗೆ ಬೇಕಾದ ಕ್ಷಣ ಅವತರಿಸುತ್ತಿದ್ದಳೋ ಗೊತ್ತಿಲ್ಲ. ಮುಟ್ಟಲು ಹೋದರೆ ಇವನು ಕಂಬಳಿಹುಳದಂತೆ ನಾಚಿಕೊಂಡು ಮುದುರಿ ಮಲಗುತ್ತಿದ್ದನ್ನು ನೋಡಿ ನಗು ಬರುತ್ತಿತ್ತು. ಮೊದಲು ನಾನು ಸುಮ್ಮನಿರುವುದನ್ನು ಕಂಡು ಉಸ್ಸಪ್ಪಾ ಎಂದು ನಗುತ್ತಾ ಬೆನ್ನು ತಿರುಗಿಸಿಕೊಂಡು ಮಲಗುತ್ತಿದ್ದ. ನನಗೆ ವಿಪರೀತ ಹಿಂಸೆಯಾಗಿ ಅಳುತ್ತಾ ದಿಂಬನು ಒದ್ದೆಯಾಗಿಸುತ್ತಿದೆ. ನಾನು ಧುಮ್ಮಿಕ್ಕಿ ಅಳುವುದನ್ನು ಕೇಳಿಸಿಕೊಂಡರೂ ಇತ್ತ ತಲೆ ಹಾಕಿ ನೋಡದೆ ಮಲಗಿದವನು ನಿಜಕ್ಕೂ ಮನುಷ್ಯನಾ, ಇವನೊಳಗೆ
ಅರಿಷಡ್ವರ್ಗಗಳು ಕೆಲಸ ಮಾಡುತ್ತಿವೆಯಾ, ಸ್ಪರ್ಶ ಸುಖ ಎಂಬುದೇ ಗೊತ್ತಿಲ್ಲಾ ಈತನಿಗೆ, ನನ್ನ ಮೈಯ ಕಿಚ್ಚು ಇವನನ್ನು ಸುಡುತ್ತಿಲ್ಲವೇ, ಕಾಲ ಬೆರಳಿಗೆ ಇನ್ನೊಂದು ಕಾಲ ಬೆರಳಿನ ಬೆಸುಗೆ ಬೇಕು ಭಾವ ಸಮುದ್ರ ಉಕ್ಕಿ ಹರಿಯುತ್ತಿತ್ತು.

ಅನ್ನಿಸೋದಿಲ್ಲಾ ಎಂದೆಲ್ಲಾ ನನ್ನೊಳಗೆ ಬೆಳಿಗ್ಗೆ ಎದ್ದು ರಾತ್ರಿ ಏನೂ ನಡೆದೇ ಇಲ್ಲಾ ಎಂಬಂತೆ ಕನ್ನಡಿಯ ಎದುರು ನಿಂತು ಅರಿಶಿನದ ಕೊಂಬು ತಿಕ್ಕಿ ಕೆನ್ನೆಗೆ ಹಚ್ಚಿಕೊಳ್ಳುವಾಗ ಅವನ ಗೋಮಾಳೆಯಲ್ಲಿ ಬರುವ ಆಳದ ಆಲಾಪ, ತೋರು ಬೆರಳಿನಲ್ಲಿ ಚಕ್ಕನೆ ದುಂಡನೆಯ ಸಿಂಧೂರ ಇಡುವಾಗ ದೊಡ್ಡದಾಗಿ ನಗುವ ಆ ಹೆಣ್ಣು ನಾನು ಕಂಡೊಡನೆ ಮರೆಯಾಗುತ್ತಿದ್ದಳು. ಒಮ್ಮೊಮ್ಮೆ ಸ್ನಾನಕ್ಕೆ ಹೋದಾಗ ಚಿಲಕ ಹಾಕಿಕೊಂಡು ಎಷ್ಟು ಬಾಗಿಲು ಬಡಿದರೂ ತೆಗೆಯದೇ ಸತಾಯಿಸುತ್ತಿದ್ದ. ಇವನ ತಾಯಿ ಉಗ್ರ ರೂಪ ತಾಳುತ್ತಾ “ಬಚ್ಚಲಿಗೆ ಹೋಗಿ ಗಂಡನ ಬೆನ್ನು ತಿಕ್ಕಲ್ಪಲ್ಲ ನೀನೆಂಥ ಹೆಂಗಸು” ಎಂದು ಮೂತಿಗೆ ತಿವಿಯುತ್ತಿದ್ದಳು. ಆಗೆಲ್ಲಾ ರತ್ನಳೇ ಬಂದು ನನಗೆ ಸಮಾಧಾನ ಮಾಡುತ್ತಾ “ಎಲ್ಲಾ ಸರಿಯಾಗುತ್ತೆ, ಅಣ್ಣನಿಗೆ ಸ್ವಲ್ಪ ನಾಚಿಕೆ ಜಾಸ್ತಿ’ ಎಂದು ಹೇಳಿ ನನ್ನ ಸಂತೈಸುತ್ತಿದ್ದಳು. ಒಮ್ಮೆ ನಾನು ಧೈರ್ಯ ಮಾಡಿ ನಮ್ಮ ನಡುವೆ ಏನಾಗಬೇಕಿತ್ತೋ ಅದು ಆಗಿಲ್ಲ ಇನ್ನೂ, ನಾನು ಎಷ್ಟೇ ಒತ್ತಾಯ ಮಾಡಿದ್ರು ಹತ್ತಿರ ಬರಲ್ಲ ಅಂತಾರೆ ರತ್ನ, ಏನಾದರೊಂದು ನೆವ ಹೇಳಿ ತಪ್ಪಿಸಿಕೊಳ್ತಾರೆ, ಅವರ ಬಾಚಣಿಗೆ, ಬಟ್ಟೆ ನಾನು ಮುಟ್ಟಬಾರದಂತೆ” ಎಂದೆಲ್ಲಾ ಅತ್ತು ಹಗುರಾದೆ. “ಅಯ್ಯೋ ಶಿವಾ, ಇದಕ್ಕೆಲ್ಲಾ ಅಳೋದಾ, ಸಮಾಧಾನ ಮಾಡ್ಕೊಬೇಕು ನೀನು” ಎಂದಳು. ನನಗೆ ರೇಗಿ ಹೋಯಿತು “ಏನ್ ಹಿಂಗಂತೀಯಾ ತಾಯಿ ನೀನು, ನಾನೂ ಹೆಣ್ಣಲ್ವಾ, ನನಗೆ ಬಯಕೆಗಳಿರಲ್ವಾ, ನನಗೆ ಸಮಾಧಾನ ಹೇಳೀರಲ್ಲ ನೀವುಗಳು, ಯಾಕೆ ಅವರ ಹತ್ರ ಹೋಗಿ ನನ್ನ ಬಯಕೆಗಳೇನು, ಆಸೆಗಳೇನು, ಕೇಳು ಎಂದು ಯಾಕೆ ಹೇಳೋದಿಲ್ಲ’ ಎಂದು ಜೋರಾಗಿ ಕೂಗಿದೆ. ಎಲ್ಲಿದ್ದಳೋ ಧುತ್ತನೆ ಬಂದು ಕೆನ್ನೆಗೆರಡು ಏಟು ಹೊಡೆದಳು ಕುಟ್ಟಿಯ ತಾಯಿ. ನನಗೆ ತಲೆ ತಿರುಗಿ ದೊಪ್ಪನೆ ಬಿದ್ದೆ. ರತ್ನಾ ಕಿಟಾರನೆ ಕಿರುಚಿಕೊಂಡು ಓಡಿ ಹೋಗಿದ್ದಳು. ಮನೆಯಲ್ಲಿ ದೊಡ್ಡ ರಂಪ. ಊರಿನಿಂದ ಅಪ್ಪ ಅಮ್ಮ ಬಂದು ಇವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹೋಗುವ ತನಕ ಬಿಡಲಿಲ್ಲ. ಇಷ್ಟಾದರೂ ನನ್ನದೇ ತಪ್ಪೆಂದು ಎಲ್ಲರೂ ‘ಕೊಂಡಾಡಿದರೇ ಹೊರತು ಆಸಾಮಿ ಎರಡು ಮಾತಿಲ್ಲದೆ ಸುಮ್ಮನೆ ತನ್ನ ಪಾಡಿಗೆ ಗರಡಿಗೆ ಹೋಗಿ ತಾಲೀಮು ಮಾಡಿಕೊಂಡು ಬಂದು ಮುಂದಿನ ಸಲದ ಕರಗ ಹೊರುವ ತಯಾರಿಯಲ್ಲಿಯೇ ತಲ್ಲೀನನಾದ.

“ಇವನಿಗೆ ಇಷ್ಟ ಬಂದಾಗ ನಿನ್ನತ್ರ ಬರ್ತಾನೆ ಅವನಿಷ್ಟ, ನೀನು ಕೇಳಂಗಿಲ್ಲ, ಇಷ್ಟ ಇದ್ರೆ ಸಂಸಾರ ಮಾಡು, ಇಲ್ಲ ನಿನ್ನ ಹಡಪ ಎತ್ತು” ಎಂದು ಮಾತಾಗಿತ್ತು. ಅದರಂತೆ ಒಂದೇ ಕೋಣೆಯಲ್ಲಿ ಇಬ್ಬರು ಹೋಗುವುದು ಕೂಡ ತಪ್ಪಿ ಹೋಯಿತು. ಕುಟ್ಟಿ ಒಮ್ಮೊಮ್ಮೆ ಮಗುವಿನಂತೆ ಕಾಣುತ್ತಿದ್ದ, ಒಮ್ಮೊಮ್ಮೆ ಒಂಟಿ ರಾತ್ರಿಯಲ್ಲಿ ಜೀರುಂಡೆಯೊಂದು ಪದಗಳಿಲ್ಲದೆ ಹಾಡಿದಂತೆ ಕಾಣುತ್ತಿದ್ದ. ಒಮ್ಮೆಯೂ ಊಟ ಮಾಡಿದ್ಯಾ, ಏನಾದರೂ ತರಲಾ ತಿನ್ನಲು ಎಂದು ಅಪ್ಪಿತಪ್ಪಿಯೂ ಕೇಳದೇ ತನ್ನ ಪ್ರೈವಸಿಗಾಗಿ ಹೋರಾಟ ಮಾಡುವನಂತೆಯೂ ಕಾಣುತ್ತಿದ್ದ. ಇವನು ಪಕ್ಕ ಮಲಗಿದಾಗ ಹೊಳೆಯುವ ಅವನೆರಡು ಮೀನಿನಂತಹ ಕಣ್ಣಗಳನ್ನು, ಮೈಯೆಲ್ಲ ತುಂಬಿ ಹರಿಯುವ ಅದೇನೋ ನಶೆಯಂತಹ ಘಮದ ಅಮಲು, ಗಾಢವಾಗಿ ನಿದ್ರಿಸಿದಾಗ ಅವನ ಕೈಬೆರಳನ್ನು ಸವರುವ ಅವಕಾಶದಿಂದ ವಂಚಿತನಾದನೆಲ್ಲಾ ಎಂದು ಬಿಕ್ಕಿಸಿ ಅಳುತ್ತಾ ಅಡುಗೆ ಕೋಣೆಯಲ್ಲಿ ಹೋಗಿ ಮಲಗುತ್ತಿದ್ದೆ. ಸರಿರಾತ್ರಿ ಅಡುಗೆ ಕೋಣೆಗೆ ಹಗುರ ಹೆಜ್ಜೆಗಳನ್ನಿಟ್ಟು ಬೆಳ್ಳನೆಯ ಬೆಕ್ಕೊಂದು ಬಂದು ಪಾತ್ರೆಯ ಸ್ಟ್ಯಾಂಡು ಅಲುಗಿಸಿ ಓಡಿ ಹೋಗುತ್ತಿತ್ತು. ನನಗೆ ಒಮ್ಮೆಲೇ ಭಯದಿಂದ ಎಚ್ಚರವಾಗಿ ಮತ್ತೆ ಅಳಲು ಶುರುವಿಡುತ್ತಿದ್ದೆ. ದಿನವೂ ಇದನ್ನೇ ಮಾಡುತ್ತಾ ಆರು ತಿಂಗಳು ಕಳೆದವು. ಬೆಕ್ಕು ದೊಡ್ಡದಾಯಿತು.

ಎಂಥ ನತದೃಷ್ಟ ಹೆಣ್ಣು ನಾನು ಎರಡು ಸಲ ಆತ್ಮಹತ್ಯೆಯ ಯತ್ನಗಳು ಕೈಕೊಟ್ಟು ಸೋತು ಕೂತೆ. ಅದೇನಾದರೂ ಕೈಗೂಡಿದ್ದರೆ ಮಗ ‘ಋಣ’ ಇರುತ್ತಿರಲಿಲ್ಲ. ನಾನು ಆಗ ಸರ್ವ ದಿಕ್ಕಿನಿಂದಲೂ ಮುಕ್ತಳು. ‘ಋಣ’ ಆಹ್ ಎಂಥ ಹೆಸರಿಟ್ಟು ಮರೆಯಾಗಿ ಹೋದ ಕುಟ್ಟಿ ಎರಡು ಸಲ ಕುಡಿದಿದ್ದು ಅದೇ ಬಣ್ಣದ ಟಾಯ್ಲೆಟ್ಟು ತಿಕ್ಕುವ ಫಿನಾಯಿಲ್, ಇಡೀ ಜಗತ್ತನೇ ಆಪೋಶನ ತೆಗೆದುಕೊಂಡಂತೆ ಒಂದೇ ಸಮನೆ ಗಟಗಟನೆ ಏರಿಸಿಬಿಟ್ಟಿದ್ದೆ, ಯಾಕೆಂದರೆ ಅಷ್ಟು ಒಂಟಿಯಾಗಿ ಹೋದೆ ಎನಿಸುತ್ತಿತ್ತು. ಆಸ್ಪತ್ರೆಯಲ್ಲಿರುವಾಗ ಕರಗ ಜೋರಾಗಿ ನಡೆಯಿತು ಎಂದು ಕೇಳಟ್ಟೆ. ಅಪ್ಪ ಅಮ್ಮ ನನ್ನನ್ನು ಮರೆತೇ ಬಿಟ್ಟಿದ್ದರು. ಒಬ್ಬಳೇ ಬದುಕುವ ದರ್ದು ಬಂತಲ್ಲ ಎಂದು ಉಮ್ಮಳಿಸಿ ದುಃಖಿಸಿದೆ. ಡಿನ್ಹಾರ್ಜಾಗಿ ಮನೆಗೆ ಬಂದಾಗ ಊರು ತುಂಬಾ ಕರಗ ಹೊತ್ತಿ ಕುಣಿದ ಕುಟ್ಟಿಯ ಕಾಲುಗಳು ಊದಿಕೊಂಡಿದ್ದನ್ನು ನೋಡಿ ಅಳುವೆ ಬಂದರೂ ನಾನು ಯಾಕಾಗಿ ಅಳಬೇಕು, ಈತ ಯಾರು, ನಾನು ಸಾಯಲು ಹೊರಟಾಗ ಯಾಕೆ ಹೀಗೆ ಮಾಡಿದೆ ಅಂತಾ ಕೇಳದೇ ‘ಇವಳು ನನಗೆ ಬೇಡ’ ಎಂದು ಮುಖ ತಿರುವಿ ಹೊರಟು ಹೋದನಲ್ಲಾ, ಕುಟ್ಟಿಯ ತಂದೆ ಸ್ವಲ್ಪ ಕರುಣಾಳು “ಇವಳು ಇನ್ನಷ್ಟು ಒಂಟಿತನ, ಅಭದ್ರತೆ ಅನುಭವಿಸಿ ಖಿನ್ನಳಾಗಿ ಸಾಯಲಿ” ಎಂದು ವಾಪಸ್ ಮನೆಗೆ ಕಳಿಸದೆ ತಿರುಗಿ ಕರೆದುಕೊಂಡುಬಿಟ್ಟ.

ಅದಾದ ಮೇಲೆ ಏನೆಲ್ಲಾ ನಡೆಯಿತು ಎಂಬುದು ನಶಿಸಿ ಹೋದಂತಿದೆ. ಯಾರಾದರೂ ಬಂದು ಹೀಗಾಯಿತು ಎಂದಾಗ ಮಾತ್ರ ಮೆಲುಕು ಹಾಕುತ್ತೇನೆ ಅಷ್ಟೇ. ಆದರೆ ಸುಮಾರು ದಿನಗಳ ಮೇಲೆ ಮನೆಯಲ್ಲಿ ಆಸ್ತಿ ವಿಚಾರಕ್ಕೆ ಜಗಳ ನಡೆಯಿತು. ಆಗೆಲ್ಲಾ ನಾನು ಮತ್ತು ತಡರಾತ್ರಿ ಮನೆಗೆ ಹೊಕ್ಕುವ ಬೆಕ್ಕು ಒಂದೇ ಮನೆಯಲ್ಲಿ ಬದುಕುತ್ತಿರುವ ಸಹಜೀವಿಗಳು ಎಂದು ಅರ್ಥವಾಗುತ್ತಿತ್ತು. ಮೆಲ್ಲಗೆ ಕುಟ್ಟಿ “ಇನ್ಮುಂದೆ ಕರಗ ಹೊರುವುದಿಲ್ಲ’ ಎಂದಿದ್ದು ಮಾತ್ರ ನನಗೆ ಪರಮ ಅಚ್ಚರಿಯಾಯಿತು. ಅವನ ದೊಡ್ಡಪ್ಪನ ಮಗ ಕರಗ ಹೊರುವ ಇಂಗಿತ ವ್ಯಕ್ತಪಡಿಸಿದಾಗ ಎಲ್ಲರಿಗಿಂತ ಕುಟ್ಟಿ ಹೆಚ್ಚು ಖುಷಿಯನ್ನು ಒಳಗೊಳಗೆ ಅನುಭವಿಸುವುದನ್ನು ಕಂಡೆ. ಆ ದಿನ ಗಂಡ ಹೆಂಡತಿಯನ್ನು ಅಧಿಕೃತವಾಗಿ ಮನೆಯಿಂದ ದಬ್ಬಲಾಯಿತು. ಅದೇ ಮೊದಲು ತಾನಾಗಿ ತಾನು ಕುಟ್ಟಿ ನನ್ನ ಕೈ ಹಿಡಿದುಕೊಂಡು ಮನೆಯಿಂದ ಹೊರಗೆ ಬಂದಿದ್ದು ನೋಡಿ ಸಿಡಿಲು ಹೊಟ್ಟೆಯೊಳಗೆ ಹೊಕ್ಕಂತಾಗಿತ್ತು. ಅಂತೂ ಧೈರ್ಯ ಮಾಡಿದ ಗಂಡ ಎಂದು ಹಿರಿಹಿರಿ ಹಿಗ್ಗಿದೆ.

ಕೆಲವೊಮ್ಮೆ ಧೈರ್ಯ ಯಾಕಾಗಿ ಹುಟ್ಟುತ್ತಿದೆ ಎಂದು ಬೇಗ ನಿರ್ಧಾರ ಮಾಡಬಾರದು. ಅದು ಯಾಕಾದರೂ ಆಗಿರಬಹುದೆಂದು ನಾವು ಬೇರೊಂದು ಊರಲ್ಲಿ ಮನೆ ಮಾಡಿದ ಮರುದಿನ ತಿಳಿದು ನನಗೆ ಅಳುವೂ ಬರದೆ ಒದ್ದಾಡಿ ಹೋದೆ. ಕುಟ್ಟಿ ತನ್ನ ಸಂಗಾತಿಯನ್ನು ಪರಿಚಯಿಸಿ ಇವನು ನನ್ನ ಗೆಳೆಯ ಗಂಗಾಧರ, ಇನ್ಮುಂದೆ ಇಲ್ಲೇ ಇರುತ್ತಾನೆ” ಎಂದು ಹೇಳಿದಾಗ ತಲೆಗೆ ಬಾಣ ಹೊಕ್ಕಿತು. ಸುಧಾರಿಸಿಕೊಳ್ಳಲು ತುಂಬಾ ದಿನ ತೆಗೆದುಕೊಂಡೆ. ನಿಧಾನಕ್ಕೆ ವಾಸ್ತವದ ಒಂದೊಂದೇ ಮುಳ್ಳು ಅಂಗಾಲಿನಿಂದ ಬಿಡಿಸಿಕೊಂಡು ಕಲ್ಪನೆಯ ಜೋಕಾಲಿಯಲ್ಲಿ ಜೀಕಲು ಮನಸ್ಸು ಹಾತೊರೆಯುತ್ತಿತ್ತು. ಎಲ್ಲಿಗೆ ಹೋದರೆ ಸುಲಭದ ಸಾವು ಬರಬಹುದು ಎಂದು ಯೋಚಿಸಲೂ ಆಗದೆ ಮತ್ತೆ ಮತ್ತೆ ಟಾಯ್ಲೆಟ್ಟಿನ ಫಿನಾಯಿಲು ನನ್ನ ಕರೆದರೂ ಅದರ ಒಗರು ವಾಸನೆಗೆ ಹೊಟ್ಟೆ ತೊಳಿಸಿದಂತಾಗಿ ಸುಮ್ಮನಾಗುತ್ತಿದ್ದೆ. ಇವರಿಬ್ಬರು ಒಂದೇ ಕೋಣೆಗೆ ಹೋಗಿ ಚಿಲಕ ಹಾಕಿಕೊಳ್ಳುವ ಸದ್ದು ಎದೆಗೆ ಇರಿಯುತ್ತಿತ್ತು. ಕುಟ್ಟಿ ಎಂದಿಗಿಂತ ಗಂಗಾಧರನ ತೋಳಲ್ಲಿ ಮಲಗಿಕೊಂಡು ಕಿಲಕಿಲನೆ ನಗುವುದು, ಲಲ್ಲೆ ಹೊಡೆಯುತ್ತಾ ಟಿವಿ ನೋಡುವುದೆಲ್ಲಾ ಕಂಡು ಸದ್ಯ ಈತನಾದರೂ ಸಂತಸದಿಂದ ಇದ್ದಾನಲ್ಲ ಎಂದು ಕಣ್ಣೀರು ಒರೆಸಿಕೊಳ್ಳುತ್ತಿದ್ದೆ.

“ನಿನಗೊಬ್ಬ ಸಂಗಾತಿಯನ್ನು ಹುಡುಕಿ ತರ್ತೇನೆ ಭಯ ಪಡಬೇಡ’ ಎಂದು ಕುಟ್ಟಿ ಹೇಳಿದಾಗ ನನ್ನ ಆತ್ಮ ಜೋರಾಗಿ ನಕ್ಕು “ಎಲಾ ಅಪೂರ್ವವಾದ ಹೆಣ್ಣೆ, ಎಂಥದೇ ನಿನ್ನ ಬದುಕು” ಎಂದು ಹಂಗಿಸಿದ್ದು ನೋಡಿ ‘ಬೇಡ’ ಎಂದರೂ, ಸ್ವಲ್ಪ ದಿನಗಳ ಬಳಿಕ ನಾನು ‘ಸರಿ’ ಎಂದಿದ್ದು ಯಾತಕ್ಕಾಗಿ, ನನಗೆ ಯಾರು ಆಸರೆ ಕೊಡಲಿಲ್ಲವೇ, ಕೊಡುತ್ತಿರಲಿಲ್ಲವೇ, ನನ್ನ ತಂದೆ ತಾಯಿ ಬಾಳ್ವೆ ಮಾಡದೇ ನಾನು ವಾಪಸ್ ಬಂದಿದ್ದು ನೋಡಿ ಹರುಷಗೊಳ್ಳುತ್ತಿರಲಿಲ್ಲವೇ..? ಯಾಕೆ ಬದುಕು, ಬೇಡ – ಬೇಕುಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿರುತ್ತದೆ. ಮೂರನೆಯ ಆಯ್ಕೆಯ ನಿರ್ಧಾರ ಮಾಡುವುದಿಲ್ಲ, ದೇಹದ ಬಾಧೆ ತೀರಿಸಿಕೊಳ್ಳುವುದು ಎಂದರೆ ಕಿವಿಯ ನೋವಿಗೆ ತೆರುವ ಡ್ರಾಪ್ಪಿನಂತೆಯೇ, ಎರಡು ದಿನಗಳು ಬಳಸಿ ಉಳಿದದ್ದು ಮತ್ತೆ ಕಿವಿ ನೋವು ಬಂದಾಗ ಬೇಕಾಗಬಹುದೆಂದು ಜೋಪಾನವಾಗಿಡುವ ವಸ್ತುವಿನ ಹಾಗೆಯೆ..? ಏನೂ ತಿಳಿಯಲಿಲ್ಲ. ಒಂದು ಇಳಿ ಸಂಜೆ ಇವರಿಬ್ಬರೂ ಸೇರಿ ಲಕ್ಷ್ಮಣ ಎಂಬ ಗಂಡಸನ್ನು ಮನೆಗೆ ಕರೆತಂದರು. ನನ್ನ ಮನಸ್ಸು ಒಪ್ಪಲಿಲ್ಲ. ವಾಪಸ್ ಕಳಿಸಿದೆ. ಏನು ಹುಡುಗಾಟವೇ, ಅವನೇನು ನನ್ನ ಮದುವೆಯಾಗುವನೇ..? ಇಲ್ಲ ಒಂದು ರಾತ್ರಿಗೆ, ಅಯ್ಯೋ ಬೇಡ, ನೀವಿಬ್ಬರು ಸುಖವಾಗಿರಿ ಎಂದು ಹೊರಡಲು ಸಿದ್ಧವಾದೆ. “ನಾನು ಸರ್ಜರಿ ಮಾಡಿಸಿಕೊಳ್ಳಲು ಬಾಂಬೆಗೆ ಹೋಗ್ತಿನಿ, ನಂತರ ಬೇರೆ ಮನೆ ಮಾಡ್ಕೊತಿವಿ” ಎಂದ ಕುಟ್ಟಿ, ಅದಕ್ಕೆ ಏನ್ಮಾಡಬೇಕು ನಾನು” ಎಂದು ಕೂಗಿದೆ. ಏನೂ ಉತ್ತರವಿರಲಿಲ್ಲ.

“ಅವನ ಮನಸ್ಸನ್ನು ಒಪ್ಪಿಸಿ ನೀನು ಬೇಕಾದರೆ ಮದುವೆಯಾಗು, ಎಲ್ಲಾ ನಿಮ್ಮ ಅನುಕೂಲ” ಎಂದು ಇವರಿಬ್ಬರು ಸೇರಿ ಮನಸ್ಸನ್ನು ಫಿನಾಯಿಲ್ ಹಾಕಿ ಗಸಗಸ ತಿಕ್ಕುತ್ತಿದ್ದರು. “ಅವನು ಒಲ್ಲೆ” ಎಂದರೆ ಅದಕ್ಕೆ ಇವರ ಬಳಿ ಉತ್ತರವಿರಲಿಲ್ಲ. ಹಗ್ಗಜಗ್ಗಾಟ ಒಂದು ವಾರ ಮುಂದುವರಿಯಿತು. ಯಾವುದು ಅಕ್ರಮವೋ, ಇನ್ಯಾವುದೋ ಸಕ್ರಮವೋ, ನೈತಿಕತೆಯ ಹಗ್ಗಕೆ ಕೊರಳು ಒಡ್ಡುವುದೋ, ಸಮಾಜ ಕೇಳುವ ಬೂಸಾ ಸವಾಲುಗಳಿಗೆ ಸಮಜಾಯಿಷಿ ಕೊಡಲು ಸಿದ್ಧವಾಗುವುದೋ, ದೇಹದ ತೀಟೆಗೆ ತೇಪೆ ಹಚ್ಚುವುದೋ, ಏನೊಂದು ಅರ್ಥವಾಗುತ್ತಿರಲಿಲ್ಲ. ಏನು ನಿರ್ಧಾರ ಮಾಡಿದೆ ಎಂದು ಇವರಿಬ್ಬರು ದಿನಕ್ಕೆ ಹತ್ತಾರು ಬೈಟಕ್ ನಡೆಸಿ ನನ್ನನ್ನು ಉದ್ದೀಪನಗೊಳಿಸುತ್ತಿದ್ದರು. ಕೊನೆಗೆ ಲಕ್ಷ್ಮಣ ನನ್ನ ದೇಹವನ್ನು ಹಲೋ ಎಂದ ಮೊದಲಿಗನಾಗಿದ್ದ. ಆದರೆ ಅವನಿಗೆ ಆಗಲೇ ಮದುವೆಯಾಗಿತ್ತು. ಅವನನ್ನು ಮದುವೆಗೆ ಒಪ್ಪಿಸಲು ಇವರಿಬ್ಬರು ಒದ್ದಾಡಿದ್ದು ನನ್ನ ಆತ್ಮ“ಎಲಾ ಅಪೂರ್ವವಾದ ಹೆಣ್ಣೆ ಎಂಥ ಬದುಕೇ ನಿಂದು” ಎಂದು ಹಂಗಿಸಿತು.ನನಗೆ ಗೊತ್ತಿಲ್ಲದೆ ನನಗೆ ಮೂರು ತಿಂಗಳಾಗಿ ಹೋಗಿತ್ತು. ಬಾಯಿಗೆ ಸಕ್ಕರೆ ಹಾಕಿ ಮಗ ಹುಟ್ಟಿದರೆ ‘ಋಣ’ ಎಂದು ಹೆಸರಿಡು ನನ್ನ ನೆನಪಿಗೆ, ಹೆಣ್ಣು ಹುಟ್ಟಿದರೆ ಕುಸುಮ ಎಂಬ ನಿನ್ನ ಹೆಸರಿನಂತೆ ಯಾವುದಾದರೂ ಹೂವಿನ ಹೆಸರಿಡು” ಎಂದಿದ್ದ ಕುಟ್ಟ. ಮಗುವಿನ ಗ್ರೂಪ್ ಸ್ಯಾನು ಮಾಡಿಸುವ ಅಷ್ಟೊತ್ತಿಗೆ ಗಂಗಾಧರ ಮತ್ತು ಕುಟ್ಟಿ ಬಾಂಬೆಗೆ ಹೊರಟು ನಿಂತರು. ಲಕ್ಷ್ಮಣ ವಾರಕೊಮ್ಮೆ ಬಂದು ಹೋಗುತ್ತಿದ್ದ. ಖರ್ಚಿಗೆ ಒಂದಷ್ಟು ಹಣವನ್ನೂ ಇಡುತ್ತಿದ್ದ. ಕೊನೆಯ ಬಾರಿ ನೋಡುವಂತೆ “ಸರ್ಜರಿಯ ನಂತರ ಏನಂತ ಹೆಸರಿಟ್ಟುಕೊಡ್ತೀಯಾ” ಎಂದು ಕೇಳಿದ್ದೆ ಕುಟ್ಟಿಗೆ ಅದಕ್ಕವನು “ಅಮ್ಮು ಕುಟ್ಟಿ” ಎಂದಿದ್ದ. ಆ ಹೆಸರು ಇಟ್ಟುಕೊಳ್ಳುವ ಮೊದಲೇ ಸರ್ಜರಿ ಫಲಿಸದೇ ತೀವ್ರ ರಕ್ತಸ್ರಾವವಾಗಿ ಸತ್ತು ಹೋದ ಸುದ್ದಿ ತಂದ ಗಂಗಾಧರ “ನಾನು ಸತ್ತರೆ ನನ್ನ ದೇಹವನ್ನು ಊರಿಗೆ ಒಯ್ಯಬೇಡ” ಎಂದಿದ್ದನಂತೆ.

ನಾನು ಮತ್ತೆ ಕುಸುಮಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ ಎಂದು ಕೊನೆಯದಾಗಿ ಹೇಳಿ ಕಣ್ಮುಚ್ಚಿದನಂತೆ. ಕುಟ್ಟಿಯ ಮನೆಯವರು ಅವನ ದೇಹಕ್ಕಾಗಿ ಹರಸಾಹಸಪಟ್ಟರು ಎಂಬುದೆಲ್ಲಾ ಒಂದು ವಾರ್ತೆಯಂತೆ ಕಿವಿ ತುಂಬುತ್ತಿದ್ದವಷ್ಟೇ. ಅವನು ಸತ್ತ ಕಾರಣ ಯಾರಿಗೂ ಗೊತ್ತಾಗದೆ ಗೋಪ್ಯವಾಗಿ ಉಳಿಯಿತು.

ನಾನೇಕೆ ಆ ಕನಸನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದೆ, ಕರಗ ಹೊತ್ತಿದ್ದವನು ಯಾರು, ಯಾವುದು ಆ ಕಣ್ಣು, ನನ್ನ ಮನಸ್ಸೇಕೆ ಹೆದರುತ್ತಿದೆ, ಆ ಕಣ್ಣು ಮಗ ಋಣನದೇ ಎಂದು ಒಪ್ಪಿಕೊಳ್ಳಲು ಯಾಕೆ ಅಂಜುತ್ತಿದೆ. ಕುಟ್ಟಿ ಮತ್ತೆ ಹುಟ್ಟಿ ಬಂದಿದ್ದಾನೆಯೇ..!

“ಅಮಾ.., ಅಮ್ಮಾ” ಎಂದು ಅಗೋ ಬಂದ ಮಗ, ಯಾಕೆ ಇವನು ಮೊಣಕಾಲೂರಿ ಪಾಟಿಚೀಲವನ್ನು ಕರಗದಂತೆ ಹೊತ್ತಿಕೊಂಡು ಕೈಕಾಲು ಸಡಿಲಗೊಳಿಸಿ, ಮೀನಿನಂತೆ ಈಜುವಂತೆ, ““ಗೋವಿಂದಾ, ಗೋವಿಂದಾ” ಎಂದು ಗರಗರ ನರ್ತಿಸುತ್ತಿದ್ದಾನೆ, ನಿಲ್ಲಿಸೋ ಮಗನೇ ಋಣ..!
shashitarikere1990@gmail.com

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

5 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

6 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

6 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

6 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

7 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

7 hours ago