kirthi byndoor article on rajalakshmi n rao
ಕನ್ನಡ ಕಥಾಲೋಕದ ಒಂದು ಕಾಲದ ದಂತಕತೆ ರಾಜಲಕ್ಷ್ಮಿ ಎನ್.ರಾವ್ ಕಳೆದ ಆರೇಳು ದಶಕಗಳ ಕಾಲ ನಿಗೂಡವಾಗಿ ಉಳಿದು ಇದೀಗ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕನ್ನಡ ಸಾಹಿತ್ಯ ಲೋಕದ ಇತ್ತೀಚಿನ ಅಚ್ಚರಿ.
ಹದಿನೈದು ದಿನಗಳ ಹಿಂದೆ ಮೈಸೂರು ಸಾಹಿತ್ಯ ಸಂಭ್ರಮದ ಕೊನೆ ದಿನದ ಕಾರ್ಯಕ್ರಮ ನಡೆಯುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಹನಿಯುತ್ತಿದೆಯೋ ಇಲ್ಲವೋ ಎಂಬಂತಿದ್ದ ವಾತಾವರಣ. ರಾಜಲಕ್ಷ್ಮಿ ಅವರ ಕಥಾಲೋಕದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಜನರೆಲ್ಲ ಕಾದುಕುಳಿತಿದ್ದರು. ಬಿಳಿಸೀರೆಯುಟ್ಟು, ಮೆಲ್ಲನೆ ಹೆಜ್ಜೆ ಇಡುತ್ತಾ ವೇದಿಕೆ ಏರಿದ ರಾಜಲಕ್ಷ್ಮಿ ಅವರ ಮುಖದಲ್ಲಿ ಮಂದಹಸಿತ, ಸಂತೃಪ್ತ ಭಾವ. ರಾಜಲಕ್ಷ್ಮಿ ಅವರು ಇಪ್ಪತ್ತೆರಡು ವರ್ಷದವರಾಗಿದ್ದಾಗ ಬರೆದ ‘ಸಂಗಮ’ ಕಥಾ ಸಂಕಲನದ ಜೊತೆಗೆ ಇವರದೇ ಕೆಲ ಬಿಡಿ ಕಥೆಗಳು ಮರುಲೋಕಾರ್ಪಣೆಗೆ ಸಿದ್ಧವಾಗಿದ್ದವು. ಎಷ್ಟು ಚಂದದ ತರುಣಿಯಾಗಿದ್ದರೆಂದು ಕಾಣುವುಕ್ಕಾದರೂ ಪುಸ್ತಕದ ಮುಖಪುಟದಲ್ಲಿರುವ ರಾಜಲಕ್ಷ್ಮಿ ಅವರ ಭಾವಚಿತ್ರವನ್ನೊಮ್ಮೆ ನೋಡಬೇಕು ನೀವು!
ಕನ್ನಡದ ಕಣ್ವ, ನವೋದಯದ ಆಚಾರ್ಯ ಪುರುಷ ಅಂತೆಲ್ಲ ನಾವು ಕೊಂಡಾಡುವ ಬಿ.ಎಂ.ಶ್ರೀಕಂಠಯ್ಯ ಅವರ ಪ್ರೀತಿಯ ಮೊಮ್ಮಗಳೇ ಈ ರಾಜಕ್ಕಿ. ಹಾಂ, ‘ರಾಜಕ್ಕಿ’ ಬೇರಾರೂ ಅಲ್ಲ, ಇದೇ ರಾಜಲಕ್ಷ್ಮಿ ಅವರು. ಮನೆಯಲ್ಲಿ ಮಗುವಿನ ಹುಟ್ಟಿಗಾಗಿ ಕಾತರಿಸಿ ಕಾಯುತ್ತಿದ್ದ ಮನೆಮಂದಿಗೆ ರಾಜಕ್ಕಿ ಜೀವದುಸಿರೆ ಆಗಿದ್ದಳು. ಮನೆಯ ತಾರಸಿಯನ್ನೇರಿ ತಾತನ ಕಂಕುಳಲ್ಲಿ ಕೂತ ಮೊಮ್ಮಗಳಿಗೆ ಕಂಡಿದ್ದು, ಅನಂತ ಆಗಸ. ‘ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ’ ಎಂದ ಶ್ರೀಕಂಠಯ್ಯ ಅವರು ಮೊಮ್ಮಗಳ ಪಾಲಿಗೆ ಅಪ್ಪಟ ತಾತನೇ ಆಗಿದ್ದರು. ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’, ಇಂಗ್ಲಿಷ್ ಈ ಗೀತೆಯನ್ನು ಮೊಮ್ಮಗಳಿಗೆ ಕಲಿಸುತ್ತಿರುವಾಗ, ಕನ್ನಡ ಸಾಹಿತ್ಯದಲ್ಲಿ ನವೋದಯದ ಕಿರಣ ಪಸರಿಸುತ್ತಿತ್ತು. ಅತ್ತ ತಾತ ಹೇಳುತ್ತಿದ್ದ ಕಥೆಗಳು, ಅವರ ಜೊತೆಗೆ ಓಡಾಡುತ್ತಲೇ ರಾಜಕ್ಕಿಯ ಬದುಕು ಸಾಹಿತ್ಯದತ್ತ ಕೈಚಾಚುತ್ತಿತ್ತು.
ಎಷ್ಟರ ಮಟ್ಟಿಗೆಂದರೆ, ದೂಳು ತುಂಬಿದ ರಸ್ತೆಯಲ್ಲೂ ಕನ್ನಡದ ಜಾಗೃತಿ ಎನ್ನುತ್ತಾ ತಾತನೊಂದಿಗೆ, ಕನ್ನಡದ ಅಭಿಮಾನಿಗಳೊಂದಿಗೆ ಸುತ್ತಾಡಿದ ನೆನಪೆಲ್ಲವೂ ರಾಜಲಕ್ಷ್ಮಿ ಅವರ ಸ್ಮೃತಿಪಟಲದಲ್ಲಿ ಆಗಾಗ ಪ್ರವೇಶ ಪಡೆಯುತ್ತವೆ. ಆಗಿನ ರಸ್ತೆಗಳಲ್ಲಿ ಸಣ್ಣ ಬಸ್ಸು ಹೋದರೂ ಸಾಕು, ನ್ಯೂಕ್ಲಿಯರ್ ಬಾಂಬು ಸಿಡಿದಂಥ ಅನುಭವ. ಅತ್ತ ಕನ್ನಡವನ್ನು ಕಟ್ಟುವುದಕ್ಕೆ ಶ್ರೀ ಅವರು ಕಟಿಬದ್ಧರಾಗಿದ್ದರೆ, ಇತ್ತ ಮೊಮ್ಮಗಳು ತಾತನ ಕೈ ಹಿಡಿದು ಊರೂರು ಸಾಗುತ್ತಿದ್ದಳು.
ಒಂದು ಸಲವಂತೂ ಮೈಸೂರಿನ ಅರಮನೆಗೆ ಹೋಗಿದ್ದಾಗ ಬೆಳ್ಳಿ ಬೇಸನ್ನುಗಳಲ್ಲಿ ತುಂಬಿಸಿಟ್ಟಿದ್ದ ಪನ್ನೀರು ಇವರ ಕಣ್ಣಿಗೆ ಬಿತ್ತು. ಕಂಡ ಕಣ್ಣಾದರೂ ಸುಮ್ಮನಿದ್ದೀತು, ಆದರೆ ಮನಸ್ಸು? ತಂದ ಕರವಸ್ತ್ರವನ್ನು ಅದ್ದಿ ಅದ್ದಿ, ಮನೆಗೆ ಕೊಂಡೊಯ್ದಿದ್ದರು. ಇನ್ನೊಮ್ಮೆ, ಸುಂಡೂರು ಅರಮನೆಯಲ್ಲಿ ಬೇಟೆಗೆ ಬಲಿಯಾದ ಹುಲಿ, ಸಿಂಹವನ್ನೆಲ್ಲ ಗಾಜಿನ ಪೆಟ್ಟಿಗೆಯಲ್ಲಿ ಇರಿಸಿದ್ದರು. ಜೀವಂತವೆಂದು ತಿಳಿದ ರಾಜಲಕ್ಷ್ಮಿ ಅವರು ಭಯಗೊಂಡು, ಕಿಟಾರೆಂದು ಕೂಗಿದ ಸದ್ದಿಗೆ ಸುತ್ತಲಿನವರೆಲ್ಲ ನಕ್ಕಿದ್ದರಂತೆ! ಹೀಗೆ ತಾತನೊಂದಿಗೆ ರಾಜಕ್ಕಿ ಕಳೆದದ್ದು ಬರೋಬ್ಬರಿ ಹನ್ನೊಂದು ವರ್ಷಗಳು.
ಪೂನಾ, ಸಿಕಂದರಾಬಾದ್, ಜಬ್ಬಲ್‌ಪುರ ಅಂತೂ ಕರ್ನಾಟಕದ ಗಡಿಯಾಚೆಗೆ ಬೆಳೆದ ರಾಜಲಕ್ಷ್ಮಿ ಅವರು ಶಾಲಾ ಪರಿಸರದಲ್ಲಿ ಕೂತು, ಕಲಿತದ್ದು ಲೋಯರ್ ಸೆಕೆಂಡರಿವರೆಗೆ ಮಾತ್ರ. ಶಾಲಾ ಅವಧಿಯಲ್ಲೂ ರಾಜಲಕ್ಷ್ಮಿ ಅವರು ನಾಯಕಿಯೇ ಸರಿ. ಸಹಪಾಠಿಗಳನ್ನೆಲ್ಲ ಕೂರಿಸುವ ಕೆಲಸ, ಹಾಡು, ನೃತ್ಯಗಳಿಗೆಲ್ಲ ನಿರ್ದೇಶನದ ಜವಾಬ್ದಾರಿಯನ್ನೆಲ್ಲ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಬಳಿಕ, ಖಾಸಗಿ ಓದಿನಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಭಾಷಾ ಪರಿಸರದ ಭಿನ್ನತೆಯ ನಡುವಲ್ಲೂ ರಾಜಲಕ್ಷ್ಮಿ ಅವರಿಗೆ ಶಾಲೆ ಬೇಕೆನಿಸಲಿಲ್ಲ. ಓದು, ಪುಸ್ತಕ, ತಿರುಗಾಟಗಳ ವಿಸ್ತೃತ ಜಗತ್ತು ‘ಕೈಹಿಡಿದು ನಡೆಸುತ್ತಿತ್ತು’. ಅಂದಹಾಗೆ, ಪದವಿ ಓದಿನಲ್ಲಿ ನಾಗ್ಪುರದಲ್ಲಿದ್ದರು. ಇತಿಹಾಸ, ತತ್ವಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯ ವಿಷಯದಲ್ಲಿ ಪದವಿ ಪಡೆದಿದ್ದ ರಾಜಲಕ್ಷ್ಮಿ ಅವರಿಗೆ, ತತ್ವಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯ ವಿಷಯಗಳು ವಿಶೇಷವೆನಿಸಿತ್ತು. ಮನಸ್ಸಿನ ಸೆಳೆತಕ್ಕೆ ಇಂಗ್ಲಿಷ್ ಸಾಹಿತ್ಯ ವಿಷಯವನ್ನೇ ಸ್ನಾತಕೋತ್ತರ ಪದವಿಗೆಂದು ಆಯ್ದುಕೊಂಡರು.
ತಾರುಣ್ಯದ ಘಳಿಗೆಯಲ್ಲಾಗಲೇ ಸಾಹಿತ್ಯ ಬದುಕನ್ನು ಪೂರ್ತಿಯಾಗಿ ಆವರಿಸಿತ್ತು. ನವ್ಯ ಕಾಲದ ಹೊತ್ತಿಗೆ ಬರವಣಿಗೆ ಆರಂಭಿಸಿದ್ದ ರಾಜಲಕ್ಷ್ಮಿ ಅವರಿಗೆ ಗೋಪಾಲಕೃಷ್ಣ ಅಡಿಗರು ಸಾಹಿತ್ಯಕ ಗುರುವಾಗಿದ್ದರು. ಸಾಮಾನ್ಯರಿಗಿಂತ ಕಲೆಗಾರ ಹೇಗೆ ಭಿನ್ನ ಎಂಬುದನ್ನು ಕಲಿಸಿಕೊಟ್ಟ ಅಡಿಗರ ಕವಿತೆಗಳಿಂದ, ಶರ್ಮಾ ಅವರ ಕಥೆಗಳಿಂದ ಪ್ರಭಾವಿತರಾಗಿದ್ದರು. ಸುತ್ತಲ ಜೀವನ, ಸಮಸ್ಯೆಗಳನ್ನು ಸಾಹಿತ್ಯದ ಮೂಲಕ ಪರಿಚಯಿಸುವುದು ಎಷ್ಟು ಮುಖ್ಯವಾಗಿತ್ತೋ, ರಾಜಲಕ್ಷ್ಮಿ ಅವರ ಪಾಲಿಗೆ ಅನುಭವಕ್ಕೂ ಅಷ್ಟೇ ಪ್ರಾಶಸ್ತ್ಯವಿತ್ತು. ನೋಟ್ ಪುಸ್ತಕದ ತುಂಬ ನುಡಿಗಳು, ಪಾತ್ರಗಳನ್ನು ಬರೆದಿಡುತ್ತಿದ್ದರು. ಮುಗ್ಧ ಲೋಕಜೀವಿಯಾಗಿದ್ದ ರಾಜಲಕ್ಷ್ಮಿ ಅವರು ಶರ್ಮಾರ ಒತ್ತಾಯದಿಂದ ‘ಕಲ್ಯಾಣಿ’ ಕಥೆ ಬರೆದರು. ಕೆಲ ಪತ್ರಿಕೆಗಳಿಗೂ ಕಥೆ ಬರೆದು ಕಳಿಸುತ್ತಿದ್ದರು. ಆವೇದನೆ, ಕೆಂಪು, ಕಪ್ಪು, ಬಿಳುಪು ಎಂಬ ಕಥೆಗಳ ಜೊತೆಗೆ ‘ದಿ ರೈನ್’ ಎಂಬ ಕಥೆಯನ್ನೂ ಬರೆದಿದ್ದರು.
ರಾಜಲಕ್ಷ್ಮಿ ಅವರ ಸಾಹಿತ್ಯ ಯಾನ ಸಾಗುತ್ತಲೇ ಇತ್ತು. ಕಥೆ ಬರೆಯುವುದು, ಪ್ರಕಟ ಮಾಡುವುದು ಮಾತ್ರವಲ್ಲ, ಆಕಾಶವಾಣಿಯ ‘ಯುವವಾಣಿ’ ಕಾರ್ಯಕ್ರಮಗಳಲ್ಲಿ ಕಥಾವಾಚನ ಮಾಡಿದ್ದರು. ತಾತ ಶ್ರೀಕಂಠಯ್ಯ ಅವರಂತೆಯೇ ರಾಜಲಕ್ಷ್ಮಿ ಅವರು ಸರಳ ಶೈಲಿಯನ್ನು ಅನುಸರಿಸಿದ್ದರು. ಬರವಣಿಗೆಯನ್ನು ಓದಿದ ಕನ್ನಡದ ವಿಮರ್ಶಕರು ‘ಬರಹದಲ್ಲಿ ಪಕ್ವತೆ ಸಾಲದು. ಅನುಭವವೂ ಇಲ್ಲ’ ಎಂದು ಘಂಟಾಘೋಷವಾಗಿ ಸಾರಿದ್ದೇನೋ ಹೌದು. ಬರೆಯುತ್ತಿದ್ದ ತರುಣಿಯೊಬ್ಬಳ ಸಾಹಿತ್ಯವೆಂಬ ಕನಸಿನ ಲೋಕಕ್ಕೆ ಅದೆಷ್ಟು ಘಾಸಿಯಾಗಿರಬೇಡ! ಕನ್ನಡದ ವಿಮರ್ಶಾ ವಲಯ ಪ್ರಸಿದ್ಧ ಬರಹಗಾರ್ತಿಯೊಬ್ಬರನ್ನು ಕಳೆದುಕೊಂಡಿತೆಂದು ಅಬ್ದುಲ್ ರಶೀದ್ ಅವರು ಅದೇ ಸಾಹಿತ್ಯ ಸಂಭ್ರಮದ ವೇದಿಕೆಯಲ್ಲಿ ಹೇಳುತ್ತಿದ್ದರೆ, ರಾಜಲಕ್ಷ್ಮಿ ಅವರ ಮುಖದಲ್ಲಿ ಮಾತ್ರ ಶಾಂತ ರಸ ಸ್ಥಾಯಿಯಾಗಿತ್ತು.
ರಾಜಲಕ್ಷ್ಮಿ ಅವರು ಸಾಂಸಾರಿಕ ಜಂಜಡಗಳನ್ನು ಮೀರುವುದಕ್ಕಾಗಿ ಸನ್ಯಾಸತ್ವ ಸ್ವೀಕರಿಸುವುದು ಅನಿವಾರ್ಯವಾಯಿತು. ಆ ಹೊತ್ತಿಗಾಗಲೇ ಅನೇಕ ಊರುಗಳನ್ನು ಸುತ್ತಾಡಿದ್ದ ಇವರಿಗೆ ಏಕಾಂಗಿಯಾಗಿ ಹೊರಡುವುದು ಹೊಸತಾಗಿರಲಿಲ್ಲ. ಮಚಲೀಪಟ್ಟಣದ ಶಂಕರಮಠದಲ್ಲಿ ವಿದ್ಯಾಶಂಕರ ಭಾರತಿ ಸ್ವಾಮಿ ಅವರು ಇನ್ಛಾರ್ಮಲ್ ಸನ್ಯಾಸ ನೀಡಿ, ‘ಮೈತ್ರೇಯಿ’ ಎಂದು ಹೆಸರಿಟ್ಟರು. ರಾಜಲಕ್ಷ್ಮಿ ಅವರು ಬಿಳಿಸೀರೆ ಉಡುವುದಕ್ಕೆ ಆರಂಭಿಸಿದ್ದು ಆಗಿಂದಲೇ. ಇದಕ್ಕೆ ನಿರ್ಗುಣೋಪಾಸನೆ ಎಂದೂ ಕರೆಯುತ್ತಾರೆ. ತಾಯಿ ತೀರಿಹೋದ ನಂತರ ಉತ್ತರದೆಡೆಗೆ ಪ್ರಯಾಣ ಬೆಳೆಸಿದರು. ಮುಕುಂದಲಾಲ್ ಪಾಠಾಕ್ ಎಂಬುವವರಿಂದಾಗಿ ಗಾಯತ್ರೀ ಉಪಾಸನೆ, ಆರ್ಯ ಸಮಾಜದ ಪದ್ಧತಿಗಳ ಕಡೆ ವಿಶೇಷ ಗಮನ ಹರಿಯಿತು. ಸಿದ್ಧಿ, ಕರ್ಮಯೋಗದತ್ತವೂ ಆಸಕ್ತಿ ಬೆಳೆಯಿತು.
ಇಷ್ಟೆಲ್ಲ ಆಧ್ಯಾತ್ಮ ತುಡಿತದ ಜೊತೆಗೆ ರಾಜಲಕ್ಷ್ಮಿ ಅವರ ಬದುಕಿನಲ್ಲಿ ಸಾಹಿತ್ಯ ಒಂದು ಅಧ್ಯಾಯದಂತೆ ಸರಿದುಹೋಯಿತು. ಮೈಸೂರು ಸಾಹಿತ್ಯ ಸಂಭ್ರಮದ ಅದೇ ವೇದಿಕೆಯಲ್ಲಿ ಬರಹ ಎಂಬುದು ಬಿಡುಗಡೆಯ ದಾರಿ ಅಂತೆಲ್ಲ ಬಿಸಿಬಿಸಿ ಚರ್ಚೆಗಳಾಗುತ್ತಿರುವಾಗ ಯಃಕಶ್ಚಿತ್ ಮಾನವರಾದ ನಮ್ಮ ಪಾಲಿಗೆ ಇವರ ಬದುಕು ವಿಸ್ಮಯವೆನಿಸುತ್ತಿತ್ತು. ‘ನಾನು’ ಎನ್ನುವ ಭಾರವನ್ನು ಹೋಗಿಸಿಕೊಳ್ಳಲು ರಾಜಲಕ್ಷ್ಮಿ ಅವರು ನಿರಂತರ ಪ್ರಯತ್ನಿಸುತ್ತಾ, ವ್ಯಕ್ತಿತ್ವದ ಅಭಿವ್ಯಕ್ತಿಗಳನ್ನೆಲ್ಲ ಒಂದೊಂದಾಗಿ ಕಳಚಿಟ್ಟರು. ಆದರೆ ಬರಹದ ರಂಗು ಬದುಕನ್ನೇ ತುಂಬಿರುವಾಗ ಅಷ್ಟು ಸುಲಭವಾಗಿ ಮಾಸುವುದಿಲ್ಲವಲ್ಲಾ! ಬದುಕನ್ನೇ ಸಾಹಿತ್ಯಕ್ಕೆ ಅರ್ಪಿಸಿಕೊಂಡವರಿಗೆ ಈ ವಿದಾಯ ವಿಷಾದ ಹೇಗೆನಿಸಿರಬಹುದು? ಕುತೂಹಲ ಸಹಜವೇ. ‘ನಾನು’ ಎಂಬುದರ ಹಿಂದೆ ಇನ್ನೇನಾದರೂ ಇದೆಯಾ ಎಂಬ ಹುಡುಕಾಟ, ನನ್ನತನವನ್ನು ಮೀರುವ ದಾರಿ ಶೋಧನೆಗೆ ರಾಜಲಕ್ಷ್ಮಿ ಅವರ ಮನಸ್ಸು ಸಿದ್ಧವಾಗಿತ್ತು. ಬರೆದಿಟ್ಟಿದ್ದ ನೋಟ್ ಪುಸ್ತಕದ ಹಾಳೆಗಳನ್ನೆಲ್ಲ ಹರಿದಿದ್ದಾಯಿತು. ನೆನಪುಗಳು ಇನ್ನಿಲ್ಲದಂತೆ ಕಾಡತೊಡಗಿತು. ಆಗಿದ್ದಿಷ್ಟು, ರಾಜಲಕ್ಷ್ಮಿ ಅವರ ಬದುಕು ಮಹತ್ತರ ತ್ಯಾಗವನ್ನೇ ಮಾಡಿತು!
ಕಳೆದೆರಡು ದಶಕಗಳಿಂದ ಮೈಸೂರಿಗೆ ಸಮೀಪವಿರುವ ಆಶ್ರಮವೊಂದರಲ್ಲಿ ರಾಜಲಕ್ಷ್ಮಿ ಅವರು ಸನ್ಯಾಸಿನಿಯಂತೆ ಜೀವಿಸುತ್ತಿದ್ದಾರೆ. ಹಕ್ಕಿಗಳ ಹಾರಾಟ, ಹೂವಿನ ಅರಳು ಇವರ ಪಾಲಿಗೆ ಇಂದಿಗೂ ಬೆರಗು. ಜಗದ ಸುದ್ದಿಗಳನ್ನು ದೊಡ್ಡದೊಂದು ರೇಡಿಯೋ ಇವರ ಕಿವಿಗಳಿಗೆ ಮುಟ್ಟಿಸುತ್ತಲೇ ಇರುತ್ತದೆ.
ಕೀರ್ತಿ ಬೈಂದೂರು
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…