ನನ್ನ ಬಾಲ್ಯದ ಕಾಲದಲ್ಲಿ ಮೊಣಕೈಗೆ ಹೆಚ್ಎಂಟಿ ವಾಚ್ ಕಟ್ಟಿಕೊಂಡು, ಕಂಕುಳ ಮಧ್ಯದಲ್ಲಿ ರೇಡಿಯೋ ಇಟ್ಟುಕೊಂಡು ಅಟ್ಲಾಸ್ ಸೈಕಲನ್ನು ಏರಿಕೊಂಡು ಬರುತ್ತಿದ್ದಾನೆಂದರೆ; ಆತ ಯಾರೋ ಸ್ಥಿತಿವಂತರ ಮನೆಯ ಅಳಿಯನಾಗಿರಲೇಬೇಕು. ಆತನಿಗೆ ಊರಿನಲ್ಲಿ ಸಿಗುತ್ತಿದ್ದ ಮರಯಾದೆಯೇ ಬೇರೆ. ವಾರ್ತೆ ಕೇಳಲು ಜನ ಅವನ ಸುತ್ತುವರೆದಿರುತ್ತಿದ್ದರು,ಸುಖಾ ಸುಮ್ಮನೆ,ಟೈಮ್ ಎಷ್ಟು ಈಗ? ಎಂದು ಕೇಳಿ ಆನಂದ ಪಡುತಿದ್ದರು. ಹಾಗೆ ಅವನನ್ನು ಕೇಳಿದಾಗಲೆಲ್ಲ ಅವನ ಗತ್ತು ಗಮತ್ತನ್ನ ನೋಡಬೇಕು! ಉಬ್ಬಿಹೋಗಿ ನುಗ್ಗೆಮರ ಹತ್ತಿಬಿಡುತಿದ್ದ ಅಳಿದೇವರು. ಇಂತಹ ಅಳಿದೇವರು ನಮ್ಮ ಮನೆಯ ಬೀದಿಯಲ್ಲೂ ಇದ್ದ. ಸರಿಯಾಗಿ ಬೆಳಿಗ್ಗೆ ಸಂಡಾಸಿಗೆ ಹೋಗುವ ಟೈಮಿಗೆ ತನ್ನ ವಾಚಿನ ಕಿವಿ ಹಿಂಡುತಿದ್ದ. ಅವನು ಊರಿಗೆ ಬಂದಾಗಲೆಲ್ಲ ವಾಚಿನ ಕಿವಿ ತಿರುಗಿಸುವುದನ್ನು ಕಂಡ ನನಗೆ ಆ ವಸ್ತುವಿನ ಮೇಲೆ ವಿಪರೀತ ಕುತೂಹಲ. ಒಮ್ಮೆಾಂದರೂ ಅವನಂತೆಯೇ ಆ ವಾಚಿನ ಕಿವಿ ಹಿಂಡಬೇಕೆಂಬ ಆಸೆ. ಒಂದು ಬೆಳಿಗ್ಗೆ ಕೈ ಇಳಿಬಿಟ್ಟುಕೊಂಡು ಬೇಲಿ ಒರಗಿಕೊಂಡು ವಾತನಾಡುತ್ತಿದ್ದ ಆ ಅಳಿದೇವರ ಪಕ್ಕಕ್ಕೆ ಹೋಗಿ, ಆ ವಾಚಿನ ಕಿವಿ ತಿರುಗಿಸತೊಡಗಿದೆ. ಅಚಾನಕ್ಕಾಗಿ ಅವನ ಮುದ್ದಿನ ವಾಚು ಮುಟ್ಟಿದುದ್ದಕ್ಕೋ ಏನೋ ಕೋಪದಿಂದ ನನ್ನ ಕೆನ್ನೆಗೆ ಬಾರಿಸಿಬಿಟ್ಟ. ಆವತ್ತು ಅವನು ಯಾಕೆ ಹಾಗೆ ಕೆನ್ನೆಗೆ ಬಾರಿಸಿದ ಎಂದು ಇವತ್ತಿಗೂ ನನಗೆ ತಿಳಿಯಲಿಲ್ಲ. ಬಹುಶಃ ಅವನ ಹೆಂಡತಿ ಇದು ನಮ್ಮಪ್ಪ ತೆಗೆದುಕೊಟ್ಟ ವಾಚು. ಯಾರ ಬಳಿಯಾದರೂ ಮುಟ್ಟಿಸೀರಿ ಜೋಕೆ ಎಂದು ವಾರ್ನ್ ವಾಡಿರಬೇಕು.
ಕೆಲವರಿಗೆ ಒಂದು ವಿಚಿತ್ರ ಕಾಯಿಲೆ ಇರುತ್ತದೆ. ಚಿಕ್ಕಂದಿನಲ್ಲಿ ನನಗೂ ಇಂತಹದ್ದೇ ಒಂದು ಕಾಯಿಲೆ ಇತ್ತು. ಮನೆಗೆ ಟೇಪ್ ರೆಕಾರ್ಡರ್ ತಂದರೆ, ಕುತೂಹಲಕ್ಕೆ ಬಿಚ್ಚಿನೋಡಿ ಹಾಳು ವಾಡಿಬಿಡುವುದು, ಕ್ಯಾಸೆಟ್ಟಿನ ಟೇಪುಗಳನ್ನ ಕತ್ತರಿಸಿ ಜೊಂಪು ಜೊಂಪೇ ನೇತಾಡಿಸುವುದು, ಅಪ್ಪನ ಇಂಕು ಪೆನ್ನುಗಳ ಮುಳ್ಳನ್ನು ಮುರಿದುಬಿಡುವುದು ಹೀಗೆ.ಹೀಗೆ ಅದ್ವಾನ ಮಾಡಿಮಾಡಿ ಪರಮ ಕಿತಾಪತಿ ಹುಡುಗನಾಗಿದ್ದೆ. ಅದಾಗ ತಾನೆ ಮದುವೆಯಾಗಿದ್ದ ಚಿಕ್ಕಪ್ಪ, ಹೊಸ ಎಚ್ಎಂಟಿ ವಾಚ್ ವರದಕ್ಷಿಣೆಯಾಗಿ ಕಟ್ಟಿಕೊಂಡು ಬಂದಿದ್ದ. ನನ್ನ ಗಮನವೆಲ್ಲ ಆ ವಾಚಿನ ಮೇಲೆಯೇ ಇತ್ತು. ಕೈಗೆ ಸಿಕ್ಕಿದ ದಿನ ಅದರ ಕಥೆ ಮುಗಿಸಿಬಿಡಬೇಕೆಂದು ತೀರ್ಮಾನಿಸಿದ್ದೆ. ಒಂದು ದಿನ ಮರೆತು ಟೇಬಲ್ ಮೇಲೆ ಬಿಟ್ಟು ಹೋಗಿದ್ದ ಚಿಕ್ಕಪ್ಪ. ಮುದ್ದಾಗಿದ್ದ ಆ ವಾಚನ್ನ ಎಗರಿಸಿ, ಯಾರು ಕಾಣದ ಜಾಗದಲ್ಲಿ ಕುಳಿತುಕೊಂಡು ಒಳಗೆ ಏನಿರಬಹುದೆಂದು ಕುತೂಹಲಕ್ಕೆ ಬಿಚ್ಚಿನೋಡಲು ಪ್ರಯತ್ನಿಸಿದೆ. ಆಗಲಿಲ. ಅದನ್ನು ನೋಡದೆ ಹಾಗೇ ಇಟ್ಟುಬಿಡಲು ಮನಸಾಗಲಿಲ್ಲ. ಕಲ್ಲಿನ ಮೇಲಿಟ್ಟು ಜಜ್ಜಿದೆ. ಒಂದೇ ಹೊಡೆತಕ್ಕೆ ಗ್ಲಾಸು, ಕ್ಯಾಪು ಬಿಚ್ಚಿಕೊಂಡು ಅದರೊಳಗಿಂದ ಸಣ್ಣ ಸಣ್ಣ ವ್ಹೀಲುಗಳು, ಸ್ಪ್ರಿಂಗ್‌ಗಳು ಹೊರಬಂದವು. ಆಟ ಆಡುವುದಕ್ಕೆ ಆಗುತ್ತೆ ಎಂದು ವೀಲ್, ಸ್ಪ್ರಿಂಗ್‌ಗಳನ್ನು ಜೇಬಿಗೆ ಹಾಕಿಕೊಂಡು, ಡಯಲು, ಕೇಸ್‌ಗಳನ್ನು ಎಸೆದು ಬಂದಿದ್ದೆ. ವಾಚು ಎಲ್ಲೋ ಬಿದ್ದು ಹೋಗಿದೆ ಎಂದೇ ಚಿಕ್ಕಪ್ಪ ಭಾವಿಸಿದ್ದ. ಒಂದುದಿನ ಸ್ಪ್ರಿಂಗ್ ಜೊತೆ ನಾನು ಆಟವಾಡುವುದನ್ನು ನೋಡಿ ರೂಮಿಗೆ ಹಾಕಿಕೊಂಡು ಸರಿಯಾಗಿ ರುಬ್ಬಿದ ಮೇಲೇ ನಾನು ಒಪ್ಪಿಕೊಂಡೆ.
ನಾನು ಮಠದಲ್ಲಿ ಓದುವ ಕಾಲಕ್ಕೆ ಪ್ರಾರ್ಥನೆ, ಊಟ, ಶಾಲೆ, ಎಂದು ಟೈಮು ನೋಡಿಕೊಳ್ಳುವುದಕ್ಕೆ ಒಂದು ಗಡಿಯಾರ ಬೇಕಾಗಿತ್ತು. ಆಗಲೂ ಸ್ಥಿತಿವಂತರ ಮನೆುಂ ಮಕ್ಕಳೇ ಹೈಸ್ಕೂಲು ಓದುವಾಗ ವಾಚು ಕಟ್ಟಿಕೊಳ್ಳುತ್ತಿದ್ದರು. ಇವರ ಮುಂದೆ, ನಾನೂ ವಾಚು ಕಟ್ಟಿಕೊಂಡು ಓಡಾಡಬೇಕು ಎನ್ನುತ್ತಾ ಅಪ್ಪನಿಗೆ ದುಂಬಾಲು ಬಿದ್ದೆ. ಏನೆ ಬೇಕಾದರೂ ಪತ್ರ ಬರೆಯುವ ಕಾಲ. ಎಂಟಾಣೆಯ ಪೋಸ್ಟ್ ಕಾರ್ಡಿನಲ್ಲಿ ವಾಚ್ ಇಲ್ಲದೆ ನನಗೆ ಸಮಯ ಹೊಂದಿಸಿಕೊಳ್ಳುವುದಕ್ಕೆ ತೊಂದರೆಯಾಗಿ ಸರಿಯಾದ ಟೈಮಿಗೆ ಕ್ಲಾಸಿಗೆ ಹೋಗುವುದಕ್ಕಾಗದೆ, ಊಟಕ್ಕೂ ಸರಿಯಾದ ಟೈಮಿಗೆ ಹೋಗದೆ ತೊಂದರೆ ಅನುಭವಿಸುತ್ತಿದ್ದೇನೆ. ಇನ್ನೂ ಒಂದು ವಾರದೊಳಗೆ ವಾಚ್ ಕೊಡಿಸದಿದ್ದರೆ, ಪಕ್ಕದಲ್ಲಿರುವ ಅರ್ಕಾವತಿ ಹೊಳೆಗೆ ಹಾರುತ್ತೇನೆಂದು ಎಮರ್ಜೆನ್ಸಿ ಪತ್ರ ಬರೆದು ಪೋಸ್ಟ್ ಡಬ್ಬಿಗೆ ಹಾಕಿದ್ದೆ. ಈ ಹಿಂದೆ ನೂರು ಇನ್ನೂರು ಬೇಕಾದಾಗಲೆಲ್ಲ ಪತ್ರದಲ್ಲಿ, ಹಣ ಕಳಿಸದಿದ್ದರೆ ವಿಷ ಕುಡಿದು ಸಾುುಂತ್ತೇನೆ, ನೇಣು ಹಾಕಿಕೊಳ್ಳುತ್ತೇನೆ ಎಂದೆಲ್ಲ ಬರೆದಿದ್ದರೂ ಅಪ್ಪ ಅದಕೆ ಸೊಪ್ಪು ಹಾಕದೆ ಇಪ್ಪತ್ತೋ ಐವತ್ತೋ ಮನಿಆರ್ಡರ್ ಮಾಡಿ, ಸದ್ಯಕ್ಕೆ ಸಾಯುವುದರಿಂದ ಬಚಾವ್ ವಾಡುತ್ತಿದ್ದ. ಈ ಸಲದ್ದು ತುಂಬಾ ಸಿಂಪಲ್ ವ್ಯಾಟರ್.
ವಾಚಿಗೆಲ್ಲ ಅಷ್ಟು ತಲೆಕೆಡಿಸಿಕೊಳ್ಳಲಾರ ಎಂದು ಅನುಮಾನದಿಂದಲೇ ಇದ್ದೆ. ಈ ಕಾರ್ಡಿನ ವಿಷಯ ಮರೆತೇ ಹೋಗಿದ್ದ ಸಮುಂದಲ್ಲಿ ಪೋಸ್ಟ್ ಮ್ಯಾನ್ ನನಗೆ ಒಂದು ಪಾರ್ಸೆಲ್ ತಂದು ಕೊಟ್ಟ. ಅತ್ಯಂತ ಖುಷಿಯಿಂದ ಬಿಚ್ಚಿ ನೋಡಿದರೆ, ಜಾತ್ರೆಯಲ್ಲಿ ಕಟ್ಟಿಕೊಳ್ಳುವ ಮಿಣಕ ಮಿಣಕ ವಾಚೊಂದನ್ನು ಅಪ್ಪ ಪಾರ್ಸೆಲ್ ವಾಡಿದ್ದ. ಮುಳ್ಳಿನ ಗಡಿಯಾರ ಕಟ್ಟಿಕೊಂಡವರ ನಡುವೆ ಈ ಜಾತ್ರೆಯ ಮಿಣಕ ಮಿಣಕ ವಾಚು ಕಟ್ಟಿಕೊಂಡರೆ ಸ್ಟೇಟಸ್ಸು ಕಮ್ಮಿ ಆಗುತ್ತಿತ್ತು . ಈಗ ಮತ್ತೊಂದು ರಣ ಭಯಂಕರ ಪತ್ರ ಬರೆದೆ. ಮುಳ್ಳಿನ ವಾಚು ತೆಗೆದುಕೊಡದಿದ್ದರೆ ಊರಿಗೆ ನಾನು ಬರುವುದಿಲ್ಲ, ಬದಲಾಗಿ ನನ್ನ ಹೆಣ ಬರುತ್ತದೆ ಎಂದು. ಆ ಕಡೆಯಿಂದ ಪಾರ್ಸಲ್ ಬರಲಿಲ್ಲ. ಪತ್ರ ಬಂತು. ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದರೆ ಮುಳ್ಳಿನ ಎಚ್ಎಂಟಿ ವಾಚ್ ಅನ್ನು ಖಂಡಿತ ಕೊಡಿಸುತ್ತೇನೆ. ಈಗ ಮರ್ಯಾದೆಯಿಂದ ಓದಿನ ಕಡೆ ಗಮನ ಕೊಡಬೇಕೆಂದೂ ಮತ್ತೊಮ್ಮೆ ಇಂತಹ ಬೆದರಿಕೆ ಪತ್ರ ಬರೆದರೆ ಮಠಕ್ಕೆ ಬಂದು, ಬುದ್ಧಿಯವರಿಂದ ಅವರ ಪಾದುಕೆಗಳಲ್ಲಿ ಹೊಡೆಸುತ್ತೇನೆಂದೂ ಪತ್ರ ಬರೆದಿದ್ದರು ಅಪ್ಪ. ಅಂತೂ ಬಿಡು ಅತ್ಲಾಗೆ ಎಸ್ ಎಸ್ ಎಲ್ ಸಿ ಪಾಸ್ ಮಾಡುವ ಎಂದು ನಾನು ಒಲ್ಲದ ಮನಸಿನಿಂದ ಈ ಒಪ್ಪಂದಕ್ಕೆ ಸಹಿ ಹಾಕಿದ್ದೆ.
ಯಾವ ಪುಣ್ಯಾತ್ಮ ಬೆಳಿಗ್ಗೆ ಬೆಳಿಗ್ಗೆ ಹೆಂಡತಿ ಜೊತೆ ಜಗಳ ವಾಡಿಕೊಂಡು ಬಂದು ನನ್ನ ಗಣಿತ ಪೇಪರನ್ನು ವ್ಯಾಲ್ಯೂವೇಷನ್ ವಾಡಿದನೋ ಕಾಣೆ. ಸರಿಯಾಗಿ ಇಪ್ಪತ್ತ್ತ್ಯೈದು ಮಾರ್ಕು ಕೊಟ್ಟು, ಕುಯ್ದು ಮಲಗಿಸಿದ್ದ. ಎಚ್ ಎಮ್ ಟಿ ವಾಚಿರಲಿ, ಸದ್ಯ ಫೇಲಾದುದಕ್ಕೆ ಅಪ್ಪ, ಒಂದೇ ಸಲ ಅನಾಮತ್ತಾಗಿ ಎತ್ತಿ, ಆಡೋ ಕುರಿಯೋ ಮೇಯಿಸುವುದಕ್ಕೆ ಹಾಕದಿದ್ದುದೇ ನನ್ನ ಪುಣ್ಯ. ಆನಂತರ ಸಪ್ಲಿಮೆಂಟರಿ ಬರೆದಿದ್ದೆ. ಯಾರೋ ಕರುಣಾಮಯಿ ಪೇಪರ್ ತಿದ್ದುವವ ಸರಿಯಾಗಿ ಮುವತ್ತೈದು ಮಾರ್ಕು ಕೊಟ್ಟು, ಪರೀಕ್ಷಾ ಸಾಗರವನ್ನು ಈಜಿ ದಡ ಸೇರುವಂತೆ ಮಾಡಿದ್ದ. ಹೊಸ ವಾಚಿಗೆ ಬದಲಾಗಿ ಅಪ್ಪ, ತಾನು ಕಟ್ಟಿಕೊಳ್ಳುತ್ತಿದ್ದ ಸೆಲ್ ಹಾಕುವ ವಾಚು ಕೊಟ್ಟಿದ್ದರು. ನಾನು ಹೆಚ್ಚು ಕಡಿಮೆ ಕೀ ಕೊಡುವ ಎಚ್ಎಂಟಿ ವಾಚನ್ನು ಮರೆತೇ ಬಿಟ್ಟಿದ್ದೆ. ಯಾವುದೋ ಕೆಲಸಕ್ಕೆ ಮೈಸೂರಿನ ಗಾಂಧಿ ಸರ್ಕಲ್‌ನ ಮಕ್ಕಾಜಿ ಕಾಂಪ್ಲೆಕ್ಸ್‌ಗೆ ಹೋಗಿದ್ದೆ. ಅಲ್ಲೊಂದು ಹಳೆ ವಾಚ್ ರಿಪೇರಿ ಅಂಗಡಿಯಲ್ಲಿ ತಲೆ ಬಗ್ಗಿಸಿಕೊಂಡು ಜಗತ್ತಿನ ಪರಿವೇ ಇಲ್ಲದೆ ಧ್ಯಾನಸ್ಥ ಸ್ಥಿತಿಯಲ್ಲಿ ವಾಚು ರೆಪೇರಿ ವಾಡುತಿದ್ದ ವ್ಯಕ್ತಿಯನ್ನು ಯಾಕೋ ಮಾತನಾಡಿಸಬೇಕೆನಿಸಿತು. ನಿಮ್ಮ ಹತ್ರ ಹಳೆ ಹೆಚ್‌ಎಮ್‌ಟಿ ವಾಚ್ ಇದೆಯಾ ಕೀ ಕೊಡೋದು ಎಂದೆ. ತಲೆಎತ್ತಿ ನೋಡಿದ ವ್ಯಕ್ತಿ ಮಾಮೂಲಿ ಎಂಬಂತೆ ಹೂ ಇದೆ ಎಂದ. ನನಗೆ ನಂಬೋಕೆ ಆಗಲಿಲ್ಲ . ಎಲ್ಲೋ ತರ್ಲೆ ಹೊಡಿತಿದ್ದಾನೆ, ಎನ್ನಿಸಿ ತೋರಿಸಿ ನೋಡುವ, ಎಂದೆ. ಹತ್ತೆ ನಿಮಿಷದಲ್ಲಿ ಯಾವುದೋ ಹಳೆಯ ಡಬ್ಬ ತೆಗೆದು ನಡೆಯದೆ ಇದ್ದ ವಾಚೊಂದನ್ನು ಹೆಕ್ಕಿ ,ಬಿಚ್ಚಿ ಎಂತದೋ ಆಯಿಲ್ ಹಾಕಿ, ಕೀ ಕೊಟ್ಟು ನಡೆಯುವಂತೆ ಮಾಡಿ, ತಗೊಳ್ಳಿ ಎಂದು ಕೊಟ್ಟ. ಕೀ ಕೊಡುವ ಎಚ್ಎಂಟಿ ವಾಚ್ ಬಹುದಿನದ ಮರೀಚಿಕೆ, ಸುಲಭವಾಗಿ ನನ್ನ ಕೈಗೆ ಸಿಕ್ಕಿಕೊಂಡಿತು. ಮದುವೆಯಲ್ಲಿ ಕೊಡಿಸಿದ ನಾಲ್ಕು ಸಾವಿರದ ವಾಚು ಕಟ್ಟಿದಾಗಲೂ ನನಗೆ ಏನೂ ಅನ್ನಿಸಿರಲಿಲ್ಲ.ಇದು ಮಾತ್ರ ಅಪ್ಯಾಯಮಾನ ಎನ್ನಿಸಿತು. ಮತ್ತೆ ಮತ್ತೆ ನೋಡಿಕೊಂಡೆ. ಸೆಕೆಂಡಿನ ಮುಳ್ಳು ಟಿಕ್ ಟಿಕ್ ಎಂದು ನೆಗೆಯದೆ, ತಣ್ಣಗೆ ನಿಧಾನಕ್ಕೆ , ಗಂಭೀರವಾಗಿ, ಎತ್ತು ಮೇಟಿಯ ಸುತ್ತ ತಿರುಗಣಿ ತಿರುಗಿದಂತೆ ತಿರುಗುತ್ತಿತ್ತು.
ಈ ಎಚ್ಎಂಟಿ ಎಂಬ ಕೀ ಕೊಡುವ ಗೊಂಬೆಯಂತಿದ್ದ ಚೆಲುವೆ ಮೇಲೆ ನನಗೆ ಇನ್ನಿಲ್ಲದಂತೆ ವಿಪರೀತ ಪ್ರೀತಿಯಾಗಿ ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಅವಳನ್ನು ಹುಡುಕುತ್ತಾ ತಿರುಗಿದೆ. ಕೈ ಇಲ್ಲದ, ಕಾಲಿಲ್ಲದ, ಕೊನೆಗೆ ಹೃದಯವೇ ಇಲ್ಲದೆ ಭಗ್ನಗೊಂಡ, ಜೀವನ ಸಾಕು ಎಂದು ಜೀವನವನ್ನೇ ಮುಗಿಸಿದ್ದ ಹಳೆಯ ಹೆಚ್‌ಎಂಟಿ ವಾಚುಗಳು ಸಿಗುತ್ತಾ ಹೋದವು. ಬೇರೆಬೇರೆ ಹೆಸರಿನ, ಬೇರೆಬೇರೆ ಆಕಾರ, ಗಾತ್ರದ ವೈವಿಧ್ಯಮಯ ವಾಚುಗಳನ್ನು ಹುಡುಕಿ ಸಂಗ್ರಹಿಸುತ್ತ ಹೋದೆ. ಬಹುತೇಕ ಹೆಚ್ಎಂಟಿ ಎಲ್ಲಾ ಹಳೆಯ ದೇಹಗಳು ಸಿಗುತ್ತಾ ಹೋದವು. ಅದಾಗಲೇ ಬಹಳಷ್ಟು ಮಂದಿ, ಯೂನಿಯನ್ ಮಾಡಿಕೊಂಡು ಹಳೆಯ ಹೆಚ್ಎಂಟಿ ದೇಹಗಳಿಗೆ ಜೀವ ಕೊಡುವ ಕಾಯಕದಲ್ಲಿ ನಿರತರಾಗಿದ್ದರು. ಮೈಸೂರಿನ ಅಗ್ರಹಾರದ ಸಾವಿರ ಗಡಿಯಾರದ ಸರದಾರನೆಂದೇ ಖ್ಯಾತಿಯಾಗಿದ್ದ ಸಯ್ಯದ್ ಹಫೀಜ್ ನನಗೆ ಸಿಕ್ಕಮೇಲೆ ವಾಚಿಗಾಗಿ ಅಲೆಯುವುದನ್ನು ನಿಲ್ಲಿಸಿದೆ. ಜಗತ್ತಿನ ಅಷ್ಟೂ ಕಂಪನಿಗಳ ಗಡಿಯಾರಗಳನ್ನು ಇಟ್ಟಿದ್ದ ಹಫೀಜ್ ನನಗೆ ಹುಡುಕಿಕೊಟ್ಟ ವಾಚುಗಳ ಸಂಖ್ಯೆ ಆರುನೂರಕ್ಕೂ ಹೆಚ್ಚು. ಈ ಎಚ್ಎಂಟಿ ಯ ಸಹವಾಸದಿಂದಾಗಿ ಮೂರು ವರ್ಷ ಓದುವುದನ್ನು ಬರೆಯುವುದನ್ನು ಬಿಟ್ಟುಬಿಟ್ಟಿದ್ದೆ. ನನ್ನ ರೂಮು ಗುಜರಿ ಅಂಗಡಿಯಂತಾಗಿ ಅದನ್ನು ಕ್ಲೀನ್ ವಾಡಲು ಬಂದ ಹೆಂಡತಿ, ಎಲ್ಲಾ ಆಚೆ ಬಿಸಾಕ್ತಿನಿ ನೋಡಿ ಈಗ ಎನ್ನುತ್ತಾ ಬಯ್ಯುತ್ತಿದ್ದಳು. ನಿನ್ನ ಬಿಟ್ಟರೂ ಬಿಟ್ಟೇನು, ಈ ವಾಚುಗಳನ್ನು ಬಿಡುವುದಿಲ್ಲವೆಂದು ಅವಳನ್ನು ಪ್ರೀತಿಯಿಂದ ಗದರಿ ಕಳಿಸುತ್ತಿದ್ದೆ. ಈ ವಾಚುಗಳ ರಿಪೇರಿ ಹುಚ್ಚು ಎಷ್ಟರಮಟ್ಟಿಗೆ ನನ್ನ ಆವರಿಸಿತ್ತೆಂದರೆ, ನಿದ್ದೆಮಾಡದೆ ಎರಡು, ಮೂರು ದಿನ ನಿರಂತರವಾಗಿ ವಾಚು ರಿಪೇರಿ ವಾಡಿಕೊಂಡೇ ಕೂತುಬಿಡುವಷ್ಟು .
ಮೊನ್ನೆ ಹೀಗೆ ಕನ್ನಡದ ಕಥೆಗಾರರೊಬ್ಬರ ಜೊತೆ ಲೋಕಾಭಿರಾಮವಾಗಿ ವಾತನಾಡುತ್ತಿದ್ದಾಗ ಹಳೇ ಕಾಲದ ಗಡಿಯಾರಗಳ ವಿಷಯ ಬಂತು. ಹದಿನೇಳು ವರ್ಷಗಳ ಹಿಂದೆ, ಕಾಲವಾಪನ ಶಾಸ್ತ್ರದ ಕುರಿತಂತೆ ಪ್ರಕಾಂಡವಾಗಿ ತಿಳಿದುಕೊಂಡಿದ್ದ ಸುಬ್ರಹ್ಮಣ್ಯ ಚಂದ್ರಶೇಖರ ಅಯ್ಯರ್ ಅವರ ಕುರಿತು ಲೇಖನ ವಾಡಿದ್ದುದ್ದನ್ನು ನೆನೆಸಿಕೊಂಡರು. ಭೇಟಿ ವಾಡೋಣವ ಸರ್ ಎಂದೆ. ಕಥೆಗಾರರು ಆ ಹಳೆಯ ಫೋನ್ ನಂಬರ್ ಇದೆಯೋ ಬದಲಾಗಿದೆಯೋ ಎನ್ನುವ ಅನುವಾನದಿಂದಲೇ ಫೋನಾಯಿಸಿದರು. ಮೈಸೂರಲ್ಲೇ ಇದ್ದೀನಿ ಬನ್ನಿ ಎಂದರು ಕಾಲವಾಪನ ಶಾಸ್ತ್ರಜ್ಞರು. ತೊಂಬತ್ತು ವರ್ಷದ ಆ ವ್ಯಕ್ತಿ, ಕಾಲಪುರುಷನ ಜೊತೆ ಆಡಿಆಡಿ ಹೈರಾಣಾಗಿ ಹೋಗಿದ್ದರು. ಮೈಸೂರಿಗೆ ಮೊಟ್ಟಮೊದಲು ಗಡಿಯಾರದ ಅಂಗಡಿ ಇಟ್ಟಿದ್ದು ಅವರ ಕುಟುಂಬ. ಅರಮನೆಯ ಗಡಿಯಾರಗಳನ್ನು ಅಧಿಕೃತವಾಗಿ ರಿಪೇರಿ ವಾಡಿಕೊಡುತ್ತಿದ್ದ ಕುಟುಂಬ ಅದು. ರಾಣಿಯ ವಾಚು ರಿಪೇರಿ ಮಾಡಿಕೊಟ್ಟು ಅವಳ ಕೃಪೆಗೂ ಪಾತ್ರವಾಗಿತ್ತು ಆ ಹಿರಿಜೀವ. ಚಿಕ್ಕ ಮಗುವಿನಂತೆ ನಮ್ಮನ್ನು ಬರಮಾಡಿಕೊಂಡ ಆ ಹಿರಿಜೀವ, ಕಾಲ ಗರ್ಭದಲ್ಲಿ ಹೂತುಹೋಗಿದ್ದ ತಮ್ಮ ಕುಟುಂಬದ ಇತಿಹಾಸ ಹೇಳಲು, ನೂರೈವತ್ತು ವರ್ಷಗಳ ಹಳೆಯ ಕೆಲವೇ ಕೆಲವು ಮುರುಕಲು ಪ್ಯಾಕೆಟು ವಾಚ್‌ಗಳನ್ನು ಇಟ್ಟುಕೊಂಡು, ಮನೆಗೆ ಬಂದವರಿಗೆ ಸಾಕ್ಷಿಯಂತೆ ತೋರಿಸುತ್ತಾ ಇದ್ದರು. ಅವರು ಬರೆದ ಸಾವಿರಗಟ್ಟಲೇ ಕಾಲಶಾಸ್ತ್ರದ ಲೇಖನಗಳನ್ನು ತೋರಿಸುತ್ತಾ ಹೋದರು. ಕಾಲನ ಹೊಡೆತಕ್ಕೆ ಸಿಕ್ಕೂ ಆ ಜೀವದಲ್ಲಿದ್ದ ಜೀವನೋತ್ಸಾಹವನ್ನು ನೋಡಿ ವಿಸ್ಮಯಗೊಂಡೆವು.
ಹಾಸನ/ಸಕಲೇಶಪುರ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಾಫಿ ಬೆಳೆಗಾರರಿಗೆ ಪರಿಹಾರಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಹಾಸನ…
ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…