ಅಭ್ಯುದಯ
ಕನಕಗಿರಿ ಜೈನರ ತೀರ್ಥಕ್ಷೇತ್ರ. ಒಮ್ಮೆ ಪುರಾಣಕ್ಕೆ, ಒಮ್ಮೆ ಐತಿಹ್ಯಕ್ಕೆ, ಒಮ್ಮೆ ಚರಿತ್ರೆಗೆ ಸ್ಪಂದಿಸುವ ಪ್ರವಾಸಿಗ ತಾಣ. ಕನಕಗಿರಿಗೆ ಕನಕಾದ್ರಿ, ಮಲೆಯೂರು ಎಂಬ ಹೆಸರುಗಳೂ ಇವೆ. ನಾವು ಮಲೆಯೂರನ್ನು, ಅಂದರೆ ಆ ಸಣ್ಣ ಗುಡ್ಡದ ತಳವನ್ನು ಸಮೀಪಿಸಿದ ವೇಳೆ ಸುಮಾರು ಸಂಜೆಯ ಐದು ಗಂಟೆಯಾಗಿದ್ದಿರಬಹುದು. ಅಲ್ಲಿನ ವಸತಿಗೃಹದ ಮೇಲ್ವಿಚಾರಕರೆಂದು ತೋರುತ್ತದೆ, ಬಂದದ್ದು ತಡವಾಯಿತೆಂದು, ಸಂಜೆ ನಾಲ್ಕರ ನಂತರ ಕನಕಗಿರಿ ಬೆಟ್ಟದ ಮೇಲೇರುವುದಕ್ಕೆ ಅವಕಾಶವಿಲ್ಲವೆಂದರು. ಅದು ಕಾಡಿನ ಸೆರಗೂ ಆಗಿರುವುದರಿಂದ ಚಿರತೆಗಳಿರುವ ಸಾಧ್ಯತೆಯನ್ನು ಎಚ್ಚರಿಕೆಯಂತೆ ತಿಳಿಸಿ ನಮ್ಮ ಮುಂದೆ ಸರಿದುಹೋದರು. ಬೈಕಿನಿಂದಿಳಿದು ಹೆಲ್ಮೆಟ್ ಕಳಚುತ್ತಿದ್ದಂತೆಯೇ ಪ್ರಶ್ನಾರ್ಥಕ ಚಿಹ್ನೆ ಇಬ್ಬರ ಮುಖದಲ್ಲೂ ಮೂಡಿತ್ತು.
ಈ ನಡುವೆ ಅಷ್ಟು ಕಡಿದಾಗಿಲ್ಲದ ಬೆಟ್ಟದ ಮೈಯನ್ನು ದಾಪುಗಾಲಿನಲ್ಲಿ ಏರುತ್ತಿದ್ದ ತರುಣರ ಗುಂಪೊಂದು ಕಣ್ಣಿಗೆದುರಾಯಿತು. ನಮಗಿಷ್ಟು ಸಾಕಿತ್ತು, ಬೆಟ್ಟವೇರುವ ಹುಮ್ಮಸ್ಸು ಬರಲು. ನಮ್ಮನ್ನು ಬೆದರಿಸಿದವರು ಅಲ್ಲೆಲ್ಲೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡು ಬೆಟ್ಟವನ್ನು ಹತ್ತಿಯೇ ಹತ್ತಿದೆವು. ಅದು ಅಷ್ಟು ಪ್ರಯಾಸದ ಕೆಲಸವಾಗಿರಲಿಲ್ಲ. ದೀರ್ಘವಾಗಿ ಉಸಿರಾಡುತ್ತ ‘ಚಿರತೆ ಬಂದರೆ ಎಲ್ಲಿ ಓಡುವುದು?!’ ಎಂದು ಹೇಳಿ ನಗೆಯಾಡುವುದರ ಹಿಂದೆ ತಮಾಷೆಯ ಜೊತೆಗೆ ಪರಸ್ಪರ ಭೀತಿಯನ್ನು ಹಂಚಿಕೊಳ್ಳುವ ಪ್ರಯತ್ನವೂ ನಡೆದಿತ್ತು.
ಬೆಟ್ಟದ ತುದಿಯ ಪಾರ್ಶ್ವನಾಥ ಬಸದಿಯ ಮುಖ್ಯದ್ವಾರ ಮುಚ್ಚಿದ್ದರೂ ಒಳಗೆ ತೆರಳುವ ಮತ್ತೊಂದು ದಾರಿಯನ್ನು ಧನರಾಜ್ ಅನ್ವೇಷಿಸಿದ್ದ. ಕೊನೆಯ ತೀರ್ಥಂಕರನಾದ ಮಹಾವೀರನ ಸಮವಸರಣದ ವಿಹಾರ ಈ ಬೆಟ್ಟಕ್ಕೂ ಬಂದಿತ್ತಂತೆ. ಅಷ್ಟು ಹಿಂದಕ್ಕೆ ಇಲ್ಲಿನ ಚರಿತ್ರೆ ವಿಸ್ತರಿಸಿಕೊಳ್ಳುವುದನ್ನು ಗಮನಿಸಬಹುದು. ಜಿನನೂ ಆದ ತೀರ್ಥಂಕರ ತನ್ನಲ್ಲಿರುವ ಜ್ಞಾನವನ್ನು ಸಾಮಾನ್ಯರಿಗೆ ತಿಳಿಹೇಳುವ ವ್ಯವಸ್ಥೆಯೇ ಸಮವಸರಣ. ಈ ಸಮವಸರಣವನ್ನು ಕುರಿತು ಚಿಂತಿಸುವಾಗ ಒಂದು ಬೃಹತ್ತಾದ ಮಂಟಪವನ್ನು ಕಲ್ಪಿಸಿಕೊಳ್ಳಬಹುದು. ಈ ವಿಶಾಲ ಮಂಟಪ ದೇಶದಿಂದ ದೇಶಕ್ಕೆ ಸಂಚರಿಸುತ್ತಿತ್ತು ಎಂಬುದನ್ನು ಮರೆಯಬಾರದು. ತಮ್ಮ ದೈನಿಕದ ಆಗುಹೋಗುಗಳಲ್ಲಿ ದೇವರ ಹಸ್ತಕ್ಷೇಪವಿಲ್ಲವೆನ್ನುವ ಜೈನರು ತಮ್ಮ ಬಸದಿಗಳನ್ನು ಈ ಸಮವಸರಣದ ಸಂಕೇತಗಳು ಎಂದು ಭಾವಿಸುತ್ತಾರೆ. ಮಾನಸ್ತಂಬ ಮುಂತಾದ ಜೈನ ಶಿಲ್ಪಕಲೆಯ ಮೂಲ ದೊರೆಯುವುದು ಸಮವಸರಣದ ರಚನೆಯಲ್ಲಿ.
ಬಸದಿಯಿಂದ ಹೊರಗೆ ಬಂದಾಗ ಜೈನ ಯತಿಯಾಗಿದ್ದ ಪೂಜ್ಯಪಾದ ಆಚಾರ್ಯನ ಸಮಾಧಿ ಕಾಣಿಸಿಕೊಂಡಿತು. ಈ ಗಿರಿ ಆ ತಪಸ್ವಿಯ ತಪೋಭೂಮಿ ಕೂಡ ಆಗಿದ್ದಿತಂತೆ. ಈ ಎಲ್ಲಾ ಅಂಶಗಳು ತಿಳಿದು ಬಂದಿರುವುದು ಮುಖ್ಯವಾಗಿ ಕನಕಗಿರಿಯವನೇ ಆಗಿದ್ದ ದೇವಚಂದ್ರ ಕವಿಯ ಮೂಲಕ. ಹತ್ತೊಂಬತ್ತನೇ ಶತಮಾನದಲ್ಲಿ ಜೀವಿಸಿದ್ದ ಈತ ಜೈನ ಶ್ರದ್ಧಾವಂತ. ಕನಕಗಿರಿಯ ಸ್ಥಳ ಪುರಾಣವನ್ನೂ ‘ಪೂಜ್ಯಪಾದ ಚರಿತೆ’ಯನ್ನೂ ರಚಿಸಿದ್ದ ಕಾಲದಲ್ಲಿ ‘ಸೀಮೆ ಪೈಮಾಸಿಯಂ’ ಮಾಡಲು ಬಂದ ‘ಮೆಕೆಂಜಿ ಸರದಾರ’ ಈತನನ್ನು ಸಂಧಿಸುತ್ತಾನೆ. ಇತಿಹಾಸ, ಸ್ಥಳ ಪುರಾಣಗಳ ಬಗೆಗೆ ವಿಪರೀತ ಉತ್ಸಾಹಿಯಾಗಿದ್ದ ಸ್ಕಾಟ್ ಲ್ಯಾಂಡಿನ ಈ ಅಧಿಕಾರಿ ಕವಿ ದೇವಚಂದ್ರನಿಂದ ಕನಕಗಿರಿಯ ಕುರಿತು ಕೇಳಿ, ತಿಳಿದುಕೊಂಡು ತಣಿಯದೆ – ಆ ಕುರಿತಾಗಿ ಗ್ರಂಥವನ್ನು ರಚಿಸು ಎಂದು ಸ್ನೇಹದ ಆಗ್ರಹವನ್ನು ಮುಂದಿಡುತ್ತಾನೆ. ಇದಕ್ಕೆ ಒಡಂಬಟ್ಟು ೧೮೦೪ರಲ್ಲಿ ‘ರಾಜಾವಳಿ ಕಥಾಸಾರ’ ಎನ್ನುವ ಕೃತಿಯನ್ನು ದೇವಚಂದ್ರ ರಚಿಸುತ್ತಾನೆ. ಜೈನಧರ್ಮಕ್ಕೆ ನಿಷ್ಠವಾಗಿರುವ ಈ ಕೃತಿಯ ಕಥನಕಲೆ ಅಚ್ಚರಿ ಹುಟ್ಟಿಸುತ್ತದೆ. ಪುರಾಣ ಐತಿಹ್ಯಗಳ ಕಲಸು ಮೇಲೋಗರವೆನಿಸುವ ಈ ಗ್ರಂಥ ಅನೇಕ ಚಾರಿತ್ರಿಕ ಸೂಕ್ಷ್ಮಗಳನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಚಾರಿತ್ರಿಕವಾಗಿ ಅನೇಕ ಅಸಮಂಜಸ ಸಂಗತಿಗಳನ್ನು ಇದು ಒಳಗೊಂಡಿದ್ದರೂ ಕನ್ನಡದಲ್ಲಿ ಇಂತಹ ಮತ್ತೊಂದು ಕೃತಿ ಇಲ್ಲ. ಅನೇಕ ಜನಪದ ಕಥನಗಳ ಕಡೆಗೂ ಕವಿಯ ಒಲವು ಹರಿದಿದೆ.
ಚಾಮುಂಡೇಶ್ವರಿ ಇಲ್ಲಿ ಚಾಮುಂಡಿ ಎಂದು ಕರೆಯಲ್ಪಡುತ್ತಾಳೆ. ಮಹಿಷಾಸುರ ಒಂದು ವನ ಮಹಿಷನೇ ಹೊರತು ರಾಕ್ಷಸನಲ್ಲ ಎಂಬುದು ಆತನ ನಿಲುವು. ದೇವಚಂದ್ರ ಹುಟ್ಟುಹಾಕಿದ ರಾಜಾವಳಿ ಕಥೆಗೂ ದೇವಚಂದ್ರನನ್ನು ಬೆಳೆಸಿದ ಕನಕಗಿರಿಗೂ ಅನೇಕ ಸಾಮ್ಯತೆಗಳಿವೆ. ಈ ಸ್ಥಳವನ್ನು ನೆನೆಯುವಾಗ ಮಹಾವೀರ, ಪೂಜ್ಯಪಾದ, ನಾಗಾರ್ಜುನ, ಪಾಣಿನಿ, ಬಿಟ್ಟಿದೇವ, ದೇವ ಚಂದ್ರ… ಹೀಗೆ ಅನೇಕರ ಹೆಸರುಗಳು ಸಾಲುಗಟ್ಟಿ ನಿಲ್ಲುತ್ತವೆ. ಕನಕಗಿರಿ ಎಂದೊಡನೆ ನನ್ನ ಸ್ಮೃತಿಪಟಲದಲ್ಲಿ ಅನೇಕ ಬೆರಗಿನ ಗೆರೆಗಳು ಮಿಂಚಿ ಮರೆಯಾಗುತ್ತವೆ ಎಂದಾಗ, ನಮಗಿಂತ ಮೊದಲು ಬಂದ ಆ ಗುಂಪಿನವರು ಬೆಟ್ಟವನ್ನು ಇಳಿದು ಅದೆಷ್ಟೋ ಹೊತ್ತಾಗಿರ ಬೇಕು ಎಂದು ಧನರಾಜ್ ಎಚ್ಚರಿಸಿದ. ಹೊತ್ತು ಮೀರಿತ್ತು.
ಚಿರತೆ ಇನ್ನು ನಮ್ಮನ್ನು ಬಾಧಿಸುವಂತಿರಲಿಲ್ಲ. ದಟ್ಟೈಸುವ ಮೋಡ, ಮೇಲೆ ಹೋಗಬೇಡಿರೆಂದ ಮೇಲ್ವಿಚಾರಕರು ಎಲ್ಲಿ ಬಂದುಬಿಡುತ್ತಾರೋ ಎನ್ನುವ ಭಯ, ಬೈಕೇರುವುದಕ್ಕೆ ಆತುರಪಡಿಸಿತು
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…