ಜೆರುಸೆಲೆಂ ಅನ್ನು ನಾನು ನೋಡಿದ್ದು ಪ್ರವಾಸಿಯಾಗಿಯಲ್ಲ. ಮನುಷ್ಯ ನಾಗರಿಕತೆಯ ಮೊದಲ ಘಟ್ಟಗಳಲ್ಲಿ ಮೂಡಿದ ಚರಿತ್ರೆಯ ತುಣುಕನ್ನು ಅರ್ಥಮಾಡಿಕೊಳ್ಳುವ ಕುತುಹಲಿಯಾಗಿಯೂ ಅಲ್ಲ. ಅಥವಾ ಯಹೂದಿಗಳ ಹಿಡಿತದಲ್ಲೇ ಇರುವ ಆಧುನಿಕ ವಾಧ್ಯಮಗಳು ಕಥಿಸುವ ಮಹಾ ಶಕ್ತಿಶಾಲಿ ರಾಷ್ಟ್ರವೊಂದರ ವೀಕ್ಷಕನಾಗಿಯೂ ಅಲ್ಲ. ನನ್ನ ಹೆಂಡತಿ ಎರಡು ವರ್ಷ ಹೀಬ್ರೂ ಯೂನಿವರ್ಸಿಟಿಯಲ್ಲಿ ಪೋಸ್ಟ್ ಡಾಕ್ಟರೇಟ್ ಮಾಡುತ್ತಿದ್ದ ಕಾರಣ ಎರಡು ಮೂರು ಬಾರಿ ಜೆರುಸೆಲೆಂನಲ್ಲಿ ಸುವಾರು ಮೂವತ್ತು ನಲವತ್ತು ದಿನಗಳ ಕಾಲ ಇದ್ದೆ. ನಿರ್ದಿಷ್ಟ ಉದ್ದೇಶವಿಲ್ಲದೇ ಊರೊಂದನ್ನು ಅದರ ಸಂಜೆ, ಹಗಲು, ರಾತ್ರಿಗಳಲ್ಲಿ ಸ್ಥಳೀಕನಂತೆಯೇ ನೋಡುವಾಗ ಆ ಸ್ಥಳಕ್ಕಿರುವ ಜಾಗತಿಕ ಮಹತ್ವವಾಗಲೀ, ರಾಜಕೀಯ ಸಿಕ್ಕುಗಳಾಗಲೀ, ಧಾರ್ಮಿಕ ಕೋಲಾಹಲವಾಗಲೀ ನಮ್ಮ ನೋಟವನ್ನು ಅಷ್ಟಾಗಿ ಪ್ರಭಾವಿಸುವುದಿಲ್ಲ ಅನಿಸುತ್ತದೆ. ಕ್ರಿಸ್ತ ಸಶರೀರ ಸ್ವರ್ಗಕ್ಕೆ ಹೋದನೆಂದು ನಂಬಲಾಗುವ ಜಾಗದಿಂದ ಹೆಜ್ಜೆಗಳನತಿ ದೂರದಲ್ಲಿಯೇ ಇಸ್ಲಾಮಿನ ಚರಿತ್ರೆಯಲ್ಲಿಯೂ ಮುಖ್ಯವಾದ ಪೂಜ್ಯ ಸ್ಥಳಗಳಿವೆ. ಕ್ರಿಶ್ಚಿಯಾನಿಟಿಯ ಅನೇಕ ಕವಲು ಪರಂಪರೆಗಳ ಪೈಕಿ ಒಂದಾದ ರಷ್ಯನ್ ಆರ್ಥಡಾಕ್ಸ್ ಚರ್ಚ್ ಆಫ್ ಮೇರಿ ವ್ಯಾಗ್ಡಲೀನ್ ಇರುವ ಮೌಂಟ್ ಆಫ್ ಆಲೀವ್‌ನಿಂದ ಕಿಲೋಮೀಟರಿನ ಅಳತೆಯಲ್ಲಿಯೇ- ಚಂದದ ಗೇ ಪಬ್ ಒಂದು ಸಂಜೆಯ ಮೇಲೆ ತೆರೆದುಕೊಳ್ಳುತ್ತದೆ. ಅಲ್ಲಿ ಧರ್ಮಾತೀತವಾಗಿ ಯಹೂದಿಗಳೂ, ಪ್ಯಾಲೆಸ್ತೇನಿಯನ್ನರೂ, ಕ್ರಿಶ್ಚಿಯನ್ನರೂ ಒಟ್ಟಾಗಿ ನೆರೆಯುತ್ತಾರೆ. ಕೈಯುಲ್ಲಿ ಆಟೋಮೇಟೆಡ್ ಮಷಿನ್‌ಗನ್‌ಗಳನ್ನು ಹಿಡಿದ ಹುಡುಗ-ಹುಡುಗಿಯರ ಮಧ್ಯೆ, ಸೊಂಟಕ್ಕೆ ಜನಿವಾರದಂಥ ದಾರಗಳನ್ನು ನೇತುಬಿಟ್ಟುಕೊಂಡ ಅಲ್ಟ್ರಾ ಆರ್ಥಡಾಕ್ಸ್ ಯಹೂದಿಗಳೂ, ಹದಿನೇಳು-ಹದಿನೆಂಟಕ್ಕೆ ಕಾಲಿಟ್ಟ ಕೂಡಲೇ ತಮ್ಮ ಪ್ರಾಮಿಸ್ಡ್ ಲ್ಯಾಂಡ್ ಗೆ ಬಂದು ಎರಡು ಮೂರು ವರ್ಷ ಕಳೆಯುವ ಅಮೇರಿಕನ್ ತರುಣ, ತರುಣಿಯರೂ, ಯುರೋಪಿನ ಅನೇಕ ದೇಶಗಳಿಂದ ಬಂದ ಬಿಳಿಯ ಜ್ಯೂಗಳ ಜೊತೆಗೇ, ಇಥಿಯೋಪಿಯಾದ ಕರಿಯ ಜ್ಯೂಗಳ ರೆಸ್ಟೋರೆಂಟ್ ಗಳೂ ಸೇರಿ, ನಿತ್ಯ ಜೀವಿಸುವಾಗ, ಜೆರುಸೆಲೆಂ – ಮೂರು ಸಾವಿರ ವರ್ಷಕ್ಕೂ ಹೆಚ್ಚು ಕಾಲ ಧಾರ್ಮಿಕವಾಗಿ ಕುದಿಯುತ್ತಿರುವ ಒಂದು ಸ್ಥಳವೆನ್ನಿಸದೇ, ಯಾವುದೇ ದೇಶದ ಕಾಸ್ಮೊಪಾಲಿಟನ್ ನಗರವೊಂದರ ತುಣುಕಿನಂತೆ ವಾತ್ರವೇ ಕಾಣುತ್ತದೆ.
ಆದರೆ, ನಾವು ಹೊರಗಿನವರಿಗೆ ಕಾಣುವ ಈ ಮೇಲ್ಪದರವನ್ನು ಸರಿಸಿ ಸ್ಥಳೀಯ ಪ್ಯಾಲೇಸ್ಥೀನಿಯನ್ನರ ನೋಟವನ್ನು, ನಿತ್ಯವನ್ನು ಕಾಣಿಸಿದ ಒಂದು ಘಟನೆಗೆ ನಾವಿಬ್ಬರೂ ಒಮ್ಮೆ ಸಾಕ್ಷಿಯಾಗಬೇಕಾಯಿತು. ಆವತ್ತು ಮೂರು ನಾಲ್ಕು ನಿಮಿಷಗಳ ಕಾಲ ಅನುಭವಿಸಿದ ಆಳವಾದ ಭುಂದ ನೆನಪನ್ನು ದಾಖಲಿಸುವುದು ಈ ಪುಟ್ಟ ಟಿಪ್ಪಣಿಯ ಉದ್ದೇಶ. ಮತ್ತು ಆ ಭಯ ಮತ್ತು ಅಭದ್ರತೆಗಳು ಅಲ್ಲಿನ ಜನರ ದಿನನಿತ್ಯದ ಸ್ಥಿತಿ ಎಂಬುದನ್ನು ಕಾಣಿಸುವುದೂ ಕೂಡ.
ಪತ್ರಕರ್ತ ಎನ್.ಎ.ಎಂ ಇಸ್ಮಾಯಿಲ್ – ತಮ್ಮ ಮಗಳಿಗೆ ಹೆಸರಿಟ್ಟಿದ್ದು ಇರಾಕಿನ ಪ್ರಸಿದ್ಧ ಅನುಭವಿ ಕವಯಿತ್ರಿ ರಾಬಿಯ ಅಲ್ ಬಸ್ರಿಯ ನೆನಪಿನಲ್ಲಿ. ಜೆರುಸೆಲೆಂ ನ ಮೌಂಟ್ ಆಫ್ ಆಲೀವ್‌ನ ಮೇಲೆ, ಕ್ರಿಸ್ತನ ಸಶರೀರ ಸ್ವರ್ಗಾರೋಹಣದ ಪ್ರದೇಶದಿಂದ ಹೆಜ್ಜೆಯಳತೆಯಲ್ಲಿಯೇ ರಾಬಿಯಾಳ ಸವಾಧಿ ಇದೆ. ಅದನ್ನು ನೋಡಿಕೊಂಡು ಬರುವಂತೆ ಇಸ್ಮಾಯಿಲ್ ಹೇಳಿದ್ದರಿಂದ ನಾವಿಬ್ಬರೂ – ಜೆರುಸೆಲೆಂನ ಮುಸ್ಲಿಂ ಬಾಹುಳ್ಯದ ಪ್ರದೇಶದಿಂದ ಬಸ್ಸೊಂದರಲ್ಲಿ ಹೊರಟು – ರಾಬಿಯಾಳ ಸಮಾಧಿ ಇದ್ದ ಜಾಗವನ್ನು ತಲುಪಿದೆವು. ಧರ್ಮ ಮತ್ತು ರಾಜಕೀಯಗಳ ಮೇಲಾಟದಲ್ಲಿ ಸಹಜವಾಗಿ ಕವಿಗಳನ್ನು ಮರೆತ ಜಗತ್ತಿನ ಜನಕ್ಕೆ – ಅವಳ ಸಮಾಧಿ ಎಲ್ಲಿದೆ ಎಂದೇ ಗೊತ್ತಿರಲಿಲ್ಲ. ಅಲ್ಲಿಯೇ ಜ್ಯೂಸು ಬಾಟಲಿಗಳನ್ನು ಮಾರುತ್ತಿದ್ದ ಅಂಗಡಿಯವನು 20 ಯೂರೋ ಲಂಚ ತೆಗೆದುಕೊಂಡು ನಮಗೆ ರಾಬಿಯಾಳ ಸಮಾಧಿಯಿದ್ದ ಜಾಗದ ಬೀಗ ತೆಗೆದು ದರ್ಶನಕ್ಕೆ ಅನುವು ವಾಡಿಕೊಟ್ಟ. ಗುಹೆಯಂಥ ರಚನೆಯ ಒಳಗೆ ಇರುವ ರಾಬಿಯಾ ಅಲ್ ಬಸ್ರಿಯ ಟೋಂಬ್ ಅನ್ನು ದರ್ಶಿಸಿಕೊಂಡು – ಹೊರಗೆ ಬಂದು, ಆಲೀವ್ ಬೆಟ್ಟಗಳ ಮೇಲಿಂದ ಕಾಣುವ Al-Aqsa ಮಸೀದಿಯನ್ನು ನೊಡಲೆಂದು ವ್ಯೂ ಪಾಯಿಂಟ್ ಗೆ ಬಂದು ನಿಂತರೆ, ಬೆಟ್ಟದ ಬುಜಗಳ ಮೇಲೆ ಸಾಲಾಗಿ ಮಲಗಿದ ನೂರಾರು ಗೋರಿಗಳು ಕಾಣುತ್ತವೆ. ಅನೇಕ ವರ್ಷಗಳಲ್ಲಿ ದೇಶ, ಧರ್ಮಕ್ಕಾಗಿ ಮಡಿದ ಈ ಮನುಷ್ಯರ ಅವಶೇಷಗಳು ಕ್ರಿಸ್ತನ ಸ್ವರ್ಗಾರೋಹಣದ ಜಾಗ ಹಾಗೂ ಮುಸ್ಲಿಮರಿಗೆ ಪವಿತ್ರವಾದ ಅಲ್ – ಅಕ್ಸಾ ಮಸೀದಿಗಳ ಮಧ್ಯದ ಜಾಗದಲ್ಲಿ, ಚಪ್ಪಡಿಕಲ್ಲುಗಳ ಒಳಗೆ ಪವಿತ್ರ ಭೂಮಿಯಲ್ಲಿ ಹರಡಿಹೋಗಿವೆ. ಈ ಚಿತ್ರಣವನ್ನು ಒಂದು ಪ್ರತೀಕವಾಗಿ ಅರ್ಥಮಾಡಿಕೊಳ್ಳಲೂ ಅನುವು ವಾಡಿಕೊಡದಂತೆ ಇಸ್ರೇಲಿನ ಚರಿತ್ರೆಯ ಪ್ರತಿ ದಿನವೂ ಸಾವುಗಳು – ಹುತಾತ್ಮರನ್ನು ಹುಟ್ಟುಹಾಕುತ್ತ ಈ ಪ್ರಕ್ರಿಯೆಯೂ ಜೀವಂತವಾಗಿರುವಂತೆ ನೋಡಿಕೊಂಡಿದೆ.
ಆಲೀವ್ ಬೆಟ್ಟವನ್ನು ಇಳಿದು ನಾವು ಜೆರುಸೆಲೆಂ ನ ಕೆಂದ್ರದಲ್ಲಿರುವ ಓಲ್ಡ್ ಸಿಟಿಯ ಬಳಿ ಬರುವ ವೇಳೆಗೆ ಉದ್ರಿಕ್ತವಾಗಿದ್ದ ಗುಂಪೊಂದು ಕಂಡುಬಂತು. ಹತ್ತಿಪ್ಪತ್ತು ಜನ ಪ್ಯಾಲೇಸ್ತೇನಿನ ಹುಡುಗರು ಒಂದು ದಿಕ್ಕಿನ ಕಡೆಗೆ ಚಪ್ಪಲಿ, ಬೂಟುಗಳನ್ನು ತೂರುತ್ತ ಕೂಗಾಡುತ್ತಿರುವಾಗ ನಮಗೆ ಪರಿಸ್ಥಿತಿಯ ಬಗ್ಗೆ ಏನೂ ಅರ್ಥವಾಗಲಿಲ್ಲ. ಆಗ, ಇವರು ಬೂಟುಗಳನ್ನು ತೂರುತ್ತಿದ್ದ ದಿಕ್ಕಿನಿಂದ ಎಂಟು ಅಡಿ ಎತ್ತರದ ಕುದುರೆಗಳ ಮೇಲೆ ಇಸ್ರೇಲೀ ಮೌಂಟೆಡ್ ಹಾರ್ಸ್ ಪೋಲೀಸರು ಸೊಂಟ, ಕಾಲುಗಳಲ್ಲಿ ಪಿಸ್ತೂಲುಗಳನ್ನು ಧರಿಸಿ, ಕೈಯುಲ್ಲಿ ಅಟೋಮೇಟೆಡ್ ಆದ ಬಂದೂಕುಗಳನ್ನು ಹಿಡಿದು ನಾಯಿಮರಿಗಳನ್ನು ಓಡಿಸುವ ಹಾಗೆ ಈ ಪ್ರತಿಭಟನಾಕಾರರನ್ನು ಚದುರಿಸುತ್ತಿದ್ದರು. ಗಲ್ಲಿಗಳ ಒಳಗೆ ಕೂಗುತ್ತ ಓಡಿ ತಪ್ಪಿಸಿಕೊಳ್ಳುವ ಈ ಯವಕರ ಗುಂಪು, ಪೋಲೀಸರ ಮೇಲೆ ಚಪ್ಪಲಿಗಳನ್ನು ಎಸೆಯುತ್ತ ಪ್ರತಿಭಟಿಸುತ್ತಿದ್ದರು. ಈ ಬಗೆಯ ಜೆರುಸೆಲೆಂ ಅನ್ನು ಮೊದಲ ಬಾರಿಗೆ ಕಂಡ ನಾವಿಬ್ಬರೂ ಅಲ್ಲಿಯೇ ಇದ್ದ ಚಪ್ಪಲಿ ಅಂಗಡಿಯ ಒಳಗೆ ಅಡಗಿಕೊಳ್ಳಲು ಹೋಗಿ, ಅಂಗಡಿಯಾತನನ್ನು ಇದರ ಹಿನ್ನೆಲೆ ಕೇಳಿದೆವು. ಹುಟ್ಟಿದ ದಿನದಿಂದಲೂ ಈ ಬಗೆಯ ತಿಕ್ಕಾಟ, ಅಭದ್ರತೆಗಳ ನಡುವೆಯೇ ಬದುಕಿದ ಪ್ಯಾಲೇಸ್ತೇನಿನ ಅಂಗಡಿಯಾತ – ಇದು ಪ್ರತಿದಿನದ ಪ್ಯಾಲೆಸ್ತೇನ್ ಎಂದು ಹೇಳಿ, ನಮ್ಮ ಮುಖದ ಬಣ್ಣ ನೋಡಿ ನಿಮಗೇನೂ ಇದರಿಂದ ತೊಂದರೆಯಿಲ್ಲ, ಆದರೆ ಅದಷ್ಟೂ ಬೇಗ ಇಲ್ಲಿಂದ ತೆರಳಿ ಎಂದ. ಇದು ಪ್ರತಿದಿನದ ಪ್ಯಾಲೆಸ್ತೇನ್. ಜೆರುಸೆಲೆಂ ವಾಸ್ತವದಲ್ಲಿ ಇರಡು ಭಾಗಗಳಾಗಿ ಒಡೆದುಹೋಗಿದೆ. ಜಯನಗರ-ಜೆ.ಪಿ. ನಗರಗಳನ್ನು ನೆನಪಿಸುವ ಯಹೂದಿಗಳ ಜೆರುಸೆಲೆಂ ಮತ್ತು ಕಲಾಸಿಪಾಳ್ಯದ ಕೊಚ್ಚೆಯ ಮಧ್ಯೆ ಬದುಕುವ ಮುಸ್ಲಿಮರ ಜೆರುಸೆಲೆಂ ಎರಡೂ ಗೆರೆ ಕೊರೆದಂತೆ ವಿಭಜನೆಯಾಗಿ ಹೋಗಿದೆ. ಈ ಗಲಾಟೆ-ಪ್ರತಿಭಟನೆ ನಡೆದ ಹಿಂದಿನ ದಿನ ಆಗಿನ ಅಮೇರಿಕಾದ ಅಧ್ಯಕ್ಷ ಟ್ರಂಪ್ ಬೆತ್ಲೆಹೆಮ್ ಗೆ ಭೇಟಿಕೊಟ್ಟು ಜೆರುಸೆಲೆಂ ಅನ್ನು – ಟೆಲ್ ಅವೀವ್ ಬದಲಿಗೆ – ಇಸ್ರೇಲಿನ ರಾಜಧಾನಿಾಂಗಿಸುವ ವಾಗ್ಧಾನವಿತ್ತಿದ್ದರಿಂದ ಸಹಜವಾಗಿಯೇ ಪ್ಯಾಲೆಸ್ತೇನಿಯನ್ನರಿಗೆ ಸಿಟ್ಟು ಬಂದಿತ್ತು. ಅದರ ವಿರುದ್ಧವೇ ಈ ಜನರು ರಸ್ತೆಗಳಲ್ಲಿ ಪ್ರತಿಭಟಿಸುತ್ತ ಇದ್ದದ್ದು. ಈ ಬಡಜನರು- ಲಕ್ಷಗಟ್ಟಲೇ ಮೌಲ್ಯದ ಆಯುಧಗಳನ್ನು ಧರಿಸಿದ, ಒಂಟೆಯೆತ್ತರದ ಕುದುರೆಗಳ ಮೇಲೆ ಕೂತು ಹಚಾ ಎಂದು ಜನರನ್ನು ಚದುರಿಸುವ ಪೋಲೀಸರ ವಿರುದ್ಧ ಹರಿದ ಚಪ್ಪಲಿಗಳನ್ನು ಎಸೆಯುತ್ತ ಪ್ರತಿಭಟಿಸುತ್ತಿದ್ದ ರೀತಿಯನ್ನು ನೋಡುವಾಗ ಒಂದು ಬಗೆಯ ಸರ್ರಿಯಲ್ ಆದ ಶೂನ್ಯ ಆವರಿಸುತ್ತದೆ. ವಾಸ್ತವದಲ್ಲಿ ಧಾರ್ಮಿಕ ರಿಯಲ್ ಎಸ್ಟೇಟ್ ಆದ ಇಸ್ರೇಲಿನಲ್ಲಿ ಪ್ರತಿ ದೇಶಕ್ಕೂ, ಪ್ರತಿ ಸಮುದಾಯಕ್ಕೂ ಸೇರಿದ ಸಾವಿರ ಚರ್ಚುಗಳು, ಅಸಂಖ್ಯ ಸಂಪ್ರದಾಯಗಳನ್ನು ಪ್ರತಿನಿಧಿಸುವ ಶತಮಾನಗಳ ಹಿಂದಿನ ಕಟ್ಟಡಗಳು, ದೇವದೂತರುಗಳು ಸ್ವರ್ಗಕ್ಕೆ ಹೋದ ಜಾಗಗಳು, ಪ್ರವಾದಿಗಳ ನೆನಪುಗಳು, ಆಧುನಿಕ ಇತಿಹಾಸ ಕೊರೆದ ಗಡಿಗಳು – ಈ ಎಲ್ಲದರ ಮಧ್ಯೆ ಪ್ರತಿನಿತ್ಯವೂ ಅಸ್ಥಿತ್ವವಾದೀ ಚಿಂತೆಗಳಲ್ಲೇ ಏಳುವ ಮಲಗುವ ಜನಸಮೂಹ.
ಇಸ್ರೇಲ್ ತನ್ನಷ್ಟಕ್ಕೆ ತಾನೇ ಒಂದು ರೂಪಕ. ಒಂದು ಜೀವಂತ ರೂಪಕ. ಮನುಷ್ಯ ಕುಲದ ಸಾಧನೆ ಮತ್ತು ಕ್ಷುದ್ರತೆಯನ್ನು ಒಟ್ಟಾಗಿ ಮತ್ತು ದಟ್ಟವಾಗಿ ಕಾಣಿಸಬಲ್ಲ ನಿತ್ಯದ ರೂಪಕ. ನಾನು ಒಮ್ಮೆ ಅಲ್ಲಿಯ ಕಾಫೀ ಶಾಪಿನಲ್ಲಿ ಕುಳಿತಿದ್ದಾಗ ಅಲ್ಲಿಯೇ ಗನ್ ಹಿಡಿದು ಕುಳಿತಿದ್ದ ಒಬ್ಬ ವಿದ್ಯಾರ್ಥಿಯ ಬಳಿ “ಅದು ಏ.ಕೆ.47 ಗನ್ ಆ?” ಎಂದು ಕೇಳಿದೆ. “ಅಲ್ಲ. ಇದು ಬೇರೆ. ಅಮೇರಿಕನ್ ಮೇಡ್. ಅಕಸ್ಮಾತ್ ಯಾರ ಕೈಲಾದರೂ ಏ.ಕೆ.47 ನೋಡಿದರೆ, ಆತ ಪ್ಯಾಲೆಸ್ತೇನ್ ನವನಾಗಿರುತ್ತಾನೆ, ಎಚ್ಚರ” ಎಂದ. ಜೆರುಸೆಲೆಂ ನ ಫುಟ್ ಪಾತ್ ಗಳ ಮೇಲೆ ಇರುವ ಪಿಯಾನೋಗಳನ್ನು ನುಡಿಸುತ್ತ ಕೂತ ಈ ಗನ್ ಧಾರಿ ಯುವಕರನ್ನು ಒಂದು ಪ್ರತೀಕವನ್ನಾಗಿ ನೋಡಬೇಕು ಅನ್ನಿಸುತ್ತದೆ. ಆದರೆ, ನೋಟಗಳು ಕುದ್ದು ಪ್ರತೀಕವಾಗಲೂ ಬಿಡದಷ್ಟು ಪ್ರತಿನಿತ್ಯವೂ ನೆತ್ತರು ಮತ್ತು ಸಂಗೀತಗಳ ನಡುವೆ ಇರುವ ಈ ಭೂಪ್ರದೇಶದಲ್ಲಿ, ಮುಖ ನೋಡಿ ಗುರುತು ಹಿಡಿಯುವಷ್ಟೇ ಸಹಜವಾಗಿ ಕೈಯುಲ್ಲಿರುವ ಬಂದೂಕುಗಳೂ ಮನುಷ್ಯನ ಪರಿಚಯ ಹೇಳುವ ರಿವಾಜೂ ಒಂದಿರುವುದು ಈಗ ಅಲ್ಲಿ ಘಟಿಸುತ್ತಿರುವ ದುರಂತವನ್ನು ಅರ್ಥವಾಡಿಕೊಳ್ಳಲು ಇರುವ ಒಂದು ದಾರಿ.
(ಪ್ಯಾಪಿಲಾನ್ ಎಂಬ ಹೆಸರಿನಿಂದ ಬರೆಯುವ ಲೇಖಕರು ಕನ್ನಡದ ಪ್ರತಿಭಾವಂತ ಭಾಷಾ ತಜ್ಞರು)
ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…
ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…
ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…
ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…
ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ಶುಕ್ರವಾರ ಗ್ರಾಮ್‌ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ…