• ಶೇಷಾದ್ರಿ ಗಂಜೂರು
ಅಮೆರಿಕದ ಫ್ಲಾರಿಡಾ ರಾಜ್ಯದ ಸಣ್ಣ ಊರೊಂದರ ಹೈಸ್ಕೂಲಿನಲ್ಲಿ, 21 ವರ್ಷಗಳ ಹಿಂದೆ, ಇಬ್ಬರು ಬಾಲಕಿಯರು ಹೊಡೆದಾಡಲು ಪ್ರಾರಂಭಿಸುತ್ತಾರೆ. ಒಬ್ಬಳು ಇನ್ನೊಬ್ಬಳನ್ನು ವೇಶ್ಯ ಎಂದು ಕರೆಯುತ್ತಾಳೆ. ಜಗಳ ಬಿಡಿಸುವ ಶಿಕ್ಷಕರು ಆ ಹುಡುಗಿಯರ ಸ್ಕೂಲ್ ಬ್ಯಾಗ್ ತಪಾಸಣೆ ಮಾಡಿದಾಗ ಒಬ್ಬಳ ಬ್ಯಾಗಿನಲ್ಲಿ ಸುಮಾರು 300 ಡಾಲರುಗಳು ದೊರೆಯುತ್ತವೆ. ಅಷ್ಟೊಂದು ಹಣ ಎಲ್ಲಿಂದ ಬಂದಿತೆಂಬ ಪ್ರಶ್ನೆಗೆ ಆ ಹುಡುಗಿ ಅದು ಜೆಫ್ರಿ ಎಪ್‌ಸ್ಟೀನ್ ಎಂಬ ಮಹಾ ಶ್ರೀಮಂತನಿಗೆ ‘ಸ್ಪೆಷಲ್ ಮಸಾಜ್’ ನೀಡಿದ್ದರಿಂದ ಬಂದಿತೆನ್ನುತ್ತಾಳೆ. ಅಪ್ರಾಪ್ತ ವಯಸ್ಸಿನ ಆ ಬಾಲಕಿಯ ಪೋಷಕರು ಜೆಫ್ರಿ ಎಪ್ ಸ್ಟೀನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಪೊಲೀಸ್ ವಿಚಾರಣೆ ಪ್ರಾರಂಭವಾಗುತ್ತದೆ. ಆ ವಿಚಾರಣೆ ಸಾಗಿದಂತೆ, ಎಪ್ ಸ್ಟೀನ್ ಇನ್ನೂ ಹಲವಾರು ಮಂದಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಲೈಂಗಿಕ ಶೋಷಣೆಗೆ ಗುರಿಮಾಡಿರುವುದು ಹೊರಬರುತ್ತದೆ. ಫ್ಲಾರಿಡಾ ರಾಜ್ಯದ ಸ್ಥಳೀಯ ಪ್ರಾಸಿಕ್ಯೂಟರ್‌ಗಳು ಎಪ್‌ಸ್ಟೀನ್ ವಿರುದ್ಧ ಚಾರ್ಜ್ ಷೀಟ್ ಸಿದ್ಧಪಡಿಸಲು ಆರಂಭಿಸುತ್ತಾರೆ. ಆದರೆ, ಅಷ್ಟರಲ್ಲಿ, ಆಶ್ಚರ್ಯಕರವಾಗಿ, ಅಮೆರಿಕದ ಕೇಂದ್ರ ಸರ್ಕಾರದ ಪ್ರಾಸಿಕ್ಯೂಟರ್ ಆಗಿದ್ದ ಅಲೆಕ್ಸ್ ಅಕೋಸ್ಟಾ ಈ ವಿಚಾರಣೆಯಲ್ಲಿ ಆಸಕ್ತಿ ತೋರುತ್ತಾರೆ. ಸಾಮಾನ್ಯವಾಗಿ, ಅಮೆರಿಕದಲ್ಲಿ ಕೇಂದ್ರ ಸರ್ಕಾರ ಹಾಕುವ ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿಗಳಿಗೆ ಹೆಚ್ಚಿನ ಮತ್ತು ಕಠಿಣವಾದ ಶಿಕ್ಷೆ ವಿಧಿಸಲಾಗುತ್ತದಾದರೂ ಈ ಕೇಸಿನಲ್ಲಿ ಅಕೋಸ್ಟಾ ಮೂಗುತೂರಿಸಿದ ನಂತರ, ಎಪ್‌ಸ್ಟೀನ್ ವಿರುದ್ಧದ ಹಲವಾರು ಬಾಲಕಿಯರ ಸರಣಿ ಲೈಂಗಿಕ ಶೋಷಣೆಯ ಕೇಸ್ ಕೇವಲ ಒಬ್ಬ ಬಾಲಕಿಯನ್ನು ವೇಶ್ಯಾವೃತ್ತಿಗೆ ಆಹ್ವಾನಿಸಿದ ಆರೋಪವಾಗಿ ಬದಲಾಗುತ್ತದೆ! ತನ್ನ ಮೇಲಿನ ಆರೋಪವನ್ನು ಒಪ್ಪಿಕೊಳ್ಳುವ ಎಪ್‌ಸ್ಟೀನ್, ಜೀವಾವಧಿ ಕಠಿಣ ಜೈಲು ಶಿಕ್ಷೆಯ ಬದಲು, ಕೇವಲ 13 ತಿಂಗಳ ಸರಳ – ಅದೂ ರಾತ್ರಿ ಮತ್ತು ವಾರಾಂತ್ಯದಲ್ಲಿ ಮಾತ್ರ ಜೈಲಿನಲ್ಲಿ ಇರುವಂತಹ – ಶಿಕ್ಷೆಗೆ ಗುರಿಯಾಗುತ್ತಾನೆ. ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ ಅವನ ಹೆಸರು ದಾಖಲಾಗುತ್ತದೆ.
ಮೂಲತಃ ಜೆಫ್ರಿ ಎಪ್‌ಸ್ಟೀನ್ ನ್ಯೂಯಾರ್ಕ್ ನಗರದ ಅತ್ಯಂತ ಸಿರಿವಂತ ಗಣ್ಯರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಅತಿ ಪ್ರತಿಷ್ಠಿತ ಪೈವೇಟ್ ಸ್ಕೂಲ್ ಒಂದರಲ್ಲಿ ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕನಾಗಿದ್ದವನು. ಆ ಮೂಲಕ ಸಿರಿವಂತ ಉದ್ಯಮಿಗಳ ಸಂಪರ್ಕ, ಸಖ್ಯ ಬೆಳೆಸಿಕೊಳ್ಳುವ ಅವನು, ಕೆಲವೇ ವರ್ಷಗಳಲ್ಲಿ ಆ ಸಿರಿವಂತರ ಖಾಸಗಿ ಹಣಕಾಸು ನಿರ್ವಹಣಾಕಾರವಾಗಿ ಬೆಳೆದು ತಾನೂ ಅವರ ಸಾಲಿಗೆ ಸೇರುತ್ತಾನೆ. ಆ ಮೂಲಕ ಅಮೆರಿಕ ಮತ್ತು ಜಗತ್ತಿನ ಗಣ್ಯಾತಿಗಣ್ಯರ – ಡೊನಾಲ್ಡ್ ಟ್ರಂಪ್, ಬಿಲ್ ಕ್ಲಿಂಟನ್, ಬಿಲ್ ಗೇಟ್ಸ್, ಎಲಾನ್ ಮಸ್ಕಿ, ಬ್ರಿಟನ್ನಿನ ರಾಜಕುವರ ಆಂಡ್ಯೂ ಸೇರಿದಂತೆ ವಿವಿಧ ದೇಶಗಳ ರಾಜಕೀಯ ನಾಯಕರು, ರಾಯಭಾರಿಗಳು, ಸಿರಿವಂತ ಉದ್ಯಮಿಗಳು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮುಖ್ಯಸ್ಥರು, ಹೆಸರಾಂತ ಹಾಲಿವುಡ್ ನಿರ್ಮಾಪಕರು-ನಿರ್ದೇಶಕರು, ಅಪ್ರತಿಮ ವಿಜ್ಞಾನಿಗಳು ಹೀಗೆ. . . ಬಹಳಷ್ಟು ಪ್ರತಿಷ್ಠಿತರಿಗೆ ಆಪ್ತನಾಗುತ್ತಾನೆ. ತನ್ನ ಸಿರಿವಂತಿಕೆಯೊಂದಿಗೆ ಈ ಆಪ್ತತೆಯನ್ನೇ ತನ್ನ ಆಸ್ತಿಯಾಗಿಸಿಕೊಳ್ಳುವ ಅವನು, ಅಂತಹ ಗಣ್ಯರ ತುರ್ತು/ಖಾಸಗಿ ಅಗತ್ಯಗಳನ್ನು ಪೂರೈಸುವ ವ್ಯಕ್ತಿಯಾಗಿ ತನ್ನನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಈ ಗಣ್ಯರ ಇಂತಹ ಹಲವಾರು “ ಅಗತ್ಯಗಳು, ಕಾನೂನಿನ ಪ್ರಕಾರ ಅಕ್ರಮವಾದದ್ದೇನಲ್ಲ; ಉದಾಹರಣೆಗೆ ಹೆಸರಾಂತ ನಿರ್ದೇಶಕ ನಟನ ಮಗಳಿಗೆ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೀಟ್ ಕೊಡಿಸುವುದು, ಬ್ಯಾಂಕ್ ಅಧ್ಯಕ್ಷನ ಮಗನೊಬ್ಬನಿಗೆ ಸಿನೆಮಾದಲ್ಲಿ ಅವಕಾಶ ದೊರಕಿಸುವುದು ಇತ್ಯಾದಿ. ಆದರೆ, ಈ ಎಪ್‌ಸ್ಟೀನ್ ಕಥನದ ಕೇಂದ್ರ ಬಿಂದು ಅಪ್ರಾಪ್ತ ಬಾಲಕಿಯರ ಮತ್ತು ತರುಣಿಯರ ಲೈಂಗಿಕ ಶೋಷಣೆ. ತನ್ನ ಹಣ ಬಲ ಮತ್ತು ಪ್ರಭಾವಳಿಯನ್ನು ಬಳಸಿಕೊಂಡು ಡಜನ್‌ಗಟ್ಟಲೆ ಹೆಣ್ಣುಮಕ್ಕಳ ಮೇಲೆ ದಶಕಗಳ ಕಾಲ ಶೋಷಣೆ ನಡೆಸುವ ಅವನು, ತನ್ನ ಜೈಲು ಶಿಕ್ಷೆಯ ನಂತರವೂ ಅದನ್ನು ನಿರ್ಭಯವಾಗಿ ಮುಂದುವರಿಸುತ್ತಾನೆ. ಆದರೆ, ಅವನ ಜಾಗತಿಕ ಕಾಮಜಾಲಗಳ ಮಾರ್ಜಾಲ ಜೆಫ್ರಿ ಎಪ್‌ಸ್ಟೀನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗಣ್ಯರು ಅವನಿಂದ ದೂರ ಸರಿಯು ವುದಿಲ್ಲ, ಬದಲಿಗೆ ಕೆಲವರಂತೂ ತಮಾಷೆಯ ವಿಷಯದಂತೆ ತೇಲಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಶೋಷಣೆಗೆ ಗುರಿಯಾದ ಹಲವಾರು ಹೆಣ್ಣುಮಕ್ಕಳು ಹೇಳುವಂತೆ, ಎಪ್‌ಸ್ಟೀನ್ ಒಬ್ಬನೇ ಅವರ ಮೇಲೆ ಶೋಷಣೆ ನಡೆಸಲಿಲ್ಲ, ಅವನ ಹಲವಾರು ಮಿತ್ರರೂ ಅದರಲ್ಲಿ ಭಾಗಿಗಳಾಗಿದ್ದಾರೆ.
ದಶಕದ ಹಿಂದೆಯೇ ಫ್ಲಾರಿಡಾ ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಶೋಷಣೆಗಾಗಿ ಸಿಕ್ಕಿಬಿದ್ದಿದ್ದರೂ ನಿರ್ಭಯವಾಗಿ ತನ್ನ ಪೈಶಾಚಿಕತೆಯನ್ನು ಮುಂದುವರಿಸಿದ್ದ ಎಪ್‌ಸ್ಟೀನ್ ಗೆ ಕಷ್ಟಗಳು ಶುರುವಾಗಿದ್ದು 2016ರಲ್ಲಿ ಟ್ರಂಪ್ ಅಮೆರಿಕದ ಅಧ್ಯಕ್ಷನಾಗಿ ಚುನಾಯಿತರಾದ ನಂತರವೇ. 2017ರಲ್ಲಿ, ಅಧ್ಯಕ್ಷ ಟ್ರಂಪ್, ಅಲೆಕ್ಸ್ ಅಕೋಸ್ಟಾರವರನ್ನು ತನ್ನ ಮಂತ್ರಿ ಮಂಡಲದಲ್ಲಿ ನೇಮಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಫ್ಲಾರಿಡಾ ರಾಜ್ಯದ ಮಯಾಮಿ ಹೆರಾಲ್ಡ್ ದಿನಪತ್ರಿಕೆಯ ತನಿಖಾ ವರದಿಗಾರ್ತಿ ಜೂಲಿ ಬ್ರೌನ್ ತಳಮಟ್ಟದ ತನಿಖೆ ನಡೆಸಿ ಎಪ್‌ಸ್ಟೀನ್‌ನ ಅಸಲಿಯತ್ತು ಮತ್ತು ಅಕೋಸ್ಟಾ ಅವನಿಗೆ ಕೊಡಿಸಿದ್ದ “ಸ್ವೀಟ್ ಹಾರ್ಟ್ ಡೀಲ್” ಅನ್ನು ಬಯಲಿಗೆಳೆಯುತ್ತಾರೆ. ಜೂಲಿ ಬ್ರೌನ್ ಬರೆದ ವರದಿಗಳು ಸಂಚಲನ ಸೃಷ್ಟಿಸಿ, ದೂರದ ನ್ಯೂಯಾರ್ಕಿನಲ್ಲೂ ಪೊಲೀಸ್ ಮತ್ತು ಪತ್ರಿಕಾ ತನಿಖೆಗಳು ಪ್ರಾರಂಭವಾಗುತ್ತವೆ. ಎಪ್‌ಸ್ಟೀನ್ ನ್ಯೂಯಾರ್ಕಿನಲ್ಲಿ ನಡೆಸಿದ್ದ-ನಡೆಸುತ್ತಿದ್ದ ಶೋಷಣೆಗಳೂ ಹೊರ ಬರಲಾರಂಭಿಸುತ್ತವೆ. ಎಪ್‌ಸ್ಟೀನ್ ವಿರುದ್ಧ ಅಮೆರಿಕದಲ್ಲಿ ಜನಾಭಿಪ್ರಾಯ ಹೆಚ್ಚಾದಂತೆ, 2019ರ ಜುಲೈನಲ್ಲಿ ಟ್ರಂಪ್ ಸರ್ಕಾರ ಅವನನ್ನು ಬಂಧಿಸುತ್ತದೆ. ಆದರೆ, ಆಗಸ್ಟ್ ಎರಡನೆಯ ವಾರದಲ್ಲಿ, ಅವನ ವಿರುದ್ಧದ ಕೋರ್ಟ್ ವಿಚಾರಣೆ ಪ್ರಾರಂಭಕ್ಕೆ ಮುನ್ನವೇ, ಅವನು ತನ್ನ ಜೈಲು ಕೋಣೆಯಲ್ಲಿ – ಜೈಲು ಅಧಿಕಾರಿಗಳು ಹೇಳುವಂತೆ – ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನ ವಿರುದ್ಧದ ವಿಚಾರಣೆ ನಿಲ್ಲುತ್ತವೆ. ಪೊಲೀಸರು ಸಂಗ್ರಹಿಸಿದ್ದ ಎಪ್‌ಸ್ಟೀನ್ ಫೈಲ್ಸ್’ (ಹತ್ತಾರು ಲಕ್ಷ ಇ-ಮೇಲ್‌ಗಳು, ಫೋಟೋಗಳು, ವಿಡಿಯೋಗಳು) ಮೂಲೆಗುಂಪಾಗುತ್ತವೆ.
ಆದರೆ, ಎಪ್‌ಸ್ಟೀನ್ ಸತ್ತ ನಂತರವೂ, ಅವನ ವಿರುದ್ಧದ ಜನಾಭಿಪ್ರಾಯದ ದನಿಗಳು ಸ್ತಬ್ಧವಾಗುವುದಿಲ್ಲ. ಲೈಂಗಿಕ ಶೋಷಣೆಯಲ್ಲಿ ಎಪ್‌ಸ್ಟೀನ್ ಜೊತೆಗೂಡಿದ್ದ ಸಹಚಾರಿಗಳನ್ನೂ ಬಯಲಿಗೆಳೆದು ಶಿಕ್ಷಿಸಬೇಕೆಂಬ ಬೇಡಿಕೆ-ಆಕ್ರೋಶ ಮುಂದುವರಿಯುತ್ತದೆ. ಎಪ್‌ಸ್ಟೀನ್‌ನ ಆಪ್ತಗೆಳತಿ-ಸಹಾಯಕಿಯೆನಿಸಿದ್ದ ಗಿಲೇನ್ ಮ್ಯಾಕ್ಸ್‌ವೆಲ್‌ಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ 20 ವರ್ಷದ ಜೈಲು ವಾಸದ ಶಿಕ್ಷೆ ನೀಡಲಾಗುತ್ತದಾದರೂ, ಎಪ್‌ಸ್ಟೀನ್‌ನ ಮಿತ್ರ ವೃಂದದಲ್ಲಿದ್ದ ಗಣ್ಯರ ಹೆಸರುಗಳು ಬಯಲಿಗೆ ಬರುವುದಿಲ್ಲ. ಅಷ್ಟರಲ್ಲಿ, ಟ್ರಂಪ್ ಚುನಾವಣೆಯಲ್ಲಿ ಸೋತು ಜೋ ಬೈಡೆನ್ ಅಧ್ಯಕ್ಷರಾಗಿರುತ್ತಾರೆ. ಮತ್ತೆ ಚುನಾವಣೆಗೆ ನಿಲ್ಲುವ ಟ್ರಂಪ್, “ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆಯನ್ನು ಚುನಾವಣಾ ವಿಚಾರವಾಗಿಸಿ ತಾನು ಅಧ್ಯಕ್ಷನಾದ ತತ್‌ಕ್ಷಣವೇ ಎಲ್ಲವನ್ನೂ ಮುಕ್ತವಾಗಿ ಬಿಡುಗಡೆ ಮಾಡಿ ಎಪ್‌ಸ್ಟೀನ್ ಮಿತ್ರ ವೃಂದವನ್ನು ಬಯಲಿಗೆಳೆಯುವ ಆಶ್ವಾಸನೆ ನೀಡುತ್ತಾರಾದರೂ, ಗೆದ್ದ ನಂತರ ಬಣ್ಣ ಬದಲಿಸಿ “ಎಪ್‌ಸ್ಟೀನ್ ಫೈಲ್ಸ್ ಬರೀ ಪೊಳ್ಳು, ಅದರಲ್ಲಿ ಏನೂ ಹುರುಳಿಲ್ಲ” ಎನ್ನುತ್ತಾರೆ. ಆದರೆ, ಜನಾಭಿಪ್ರಾಯಕ್ಕೆ ಬಾಗುವ ಅಮೆರಿಕದ ಸಂಸತ್ತು, ಎಲ್ಲವನ್ನೂ–ಸಂತ್ರಸ್ತೆಯರ ಹೆಸರು, ವಿವರಗಳನ್ನು ಅಳಿಸಿ – ಪೂರ್ಣವಾಗಿ ಬಿಡುಗಡೆ ಮಾಡುವಂತೆ ಟ್ರಂಪ್ ಸರ್ಕಾರಕ್ಕೆ ಆದೇಶ ನೀಡುತ್ತದೆ. ಕಳೆದ ಕೆಲ ವಾರಗಳಲ್ಲಿ ಟ್ರಂಪ್ ಸರ್ಕಾರ ಲಕ್ಷಾಂತರ ಫೈಲುಗಳನ್ನು ಬಿಡುಗಡೆ ಮಾಡಿದೆಯಾದರೂ, ಪತ್ರಿಕಾ ವರದಿಗಳು ಹೇಳುವಂತೆ ಇನ್ನೂ ಹಲವು ಲಕ್ಷ ಫೈಲುಗಳನ್ನು ಬಿಡುಗಡೆ ಮಾಡಿಲ್ಲ. ಜೊತೆಗೇ, ಈಗಾಗಲೇ ಬಿಡುಗಡೆ ಮಾಡಿರುವ ಫೈಲುಗಳಲ್ಲೂ, ಎಷ್ಟೋ ಜಾಗಗಳಲ್ಲಿ ಎಪ್‌ಸ್ಟೀನ್ ಮಿತ್ರವೃಂದದಲ್ಲಿದ್ದವರ ಹೆಸರು-ವಿವರಗಳನ್ನೂ ಅಳಿಸಿ ಹಾಕಲಾಗಿದೆ. ಇದೆಲ್ಲಾ, ವಿಶ್ವಾದ್ಯಂತ ಆರೋಪ-ಪ್ರತ್ಯಾರೋಪಗಳು, ಕಾನ್ಸಿರಸಿ ಥಿಯರಿಗಳು, ಸೋಷಿಯಲ್ ಮೀಡಿಯಾಗಳಲ್ಲಿ ಮೀಮ್ ಗಳು, ಫೇಕ್ ವಿಡಿಯೋಗಳು ಇತ್ಯಾದಿಗಳಿಗೆ ಕಾರಣವಾಗಿವೆ.
ಈ ಹಗರಣವನ್ನು ಭಾರತೀಯ ಓದುಗರಾದ ನಾವು ಹೇಗೆ ಗ್ರಹಿಸಬೇಕು? ಹೌದು, ಈಗಾಗಲೇ ಬಿಡುಗಡೆಯಾಗಿರುವ ಫೈಲುಗಳ ಪ್ರಕಾರ ಭಾರತದ ಮತ್ತು ಭಾರತೀಯ ಮೂಲದ ಹಲವು ಗಣ್ಯರು ಎಪ್‌ಸ್ಟೀನ್‌ನೊಂದಿಗೆ ಸಂಪರ್ಕದಲ್ಲಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಉದಾಹರಣೆಗೆ ಅನಿಲ್ ಅಂಬಾನಿ, ಹಿಂದೆ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ (ಮತ್ತು ಈಗ ಕೇಂದ್ರ ಸಚಿವರಾಗಿರುವ) ಹರ್ದೀಪ್‌ಸಿಂಗ್ ಪುರಿ, ಹೊಸ ಪೀಳಿಗೆಯ ‘ಗುರು’ ಎಂದೇ ಖ್ಯಾತನಾಮರಾಗಿರುವ ದೀಪಕ್ ಚೋಪ್ರಾ ಮುಂತಾದವರು ಅವರು ಕಳುಹಿಸಿರುವ ಕೆಲ ಇ-ಮೇಲ್‌ಗಳು ಅಸಭ್ಯವೆನ್ನಿಸಬಹುದಾದರೂ, ಇಲ್ಲಿಯವರೆಗೆ ಕಾನೂನಿನ ಪ್ರಕಾರ ಅಕ್ರಮವಾಗಿಲ್ಲ. ಇವಲ್ಲದೆ, ಎಪ್‌ಸ್ಟೀನ್ ತನ್ನ ಬರಹಗಳಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸುತ್ತಾನೆ. ಆದರೆ ಇಂತಹ ಬರಹಗಳಿಗೆ ನಾವು ಅಷ್ಟಾಗಿ ಬೆಲೆ ನೀಡಬೇಕಿಲ್ಲ. ಖ್ಯಾತನಾಮರೊಂದಿಗೆ ತನ್ನ ಹೆಸರನ್ನು ತಾಳೆಹಾಕುವುದು ಅವನ ಹಳೆಯ ಚಾಳಿ ಎನ್ನುವುದನ್ನು ನಾವು ಮರೆಯಬಾರದು.
ಮೊದಲನೆಯದಾಗಿ, ಎಪ್‌ಸ್ಟೀನ್ ಹಗರಣವನ್ನು ನಾವು ನಮ್ಮ ರಾಜಕೀಯ ಗುರಿಗಳಿಗೆ ತಕ್ಕಂತೆ ಬಳಸುವುದು ಅಥವಾ ಕೇವಲ ಗಣ್ಯರ ಖಾಸಗಿ ಬದುಕಿನ ಲೈಂಗಿಕ ಗಾಸಿಪ್ಪಿನಂತೆ ನೋಡುವುದನ್ನು ಮೀರಬೇಕಿದೆ. 250 ವರ್ಷಗಳಿಂದ ಗಣತಂತ್ರವಾಗಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಬೇರೂರಿವ ಅಮೆರಿಕದಲ್ಲೂ, ಗಣ್ಯರ ಪ್ರಭಾವ ಮತ್ತು ರಾಜಕೀಯ ಲೆಕ್ಕಾಚಾರಗಳು ಇಡೀ ವ್ಯವಸ್ಥೆಯನ್ನು ಹೇಗೆ ಬಗ್ಗಿಸಬಲ್ಲದು ಎಂಬುದನ್ನು ನಾವು ಗಮನಿಸಬೇಕು. ನಮ್ಮ ದೇಶದಲ್ಲೂ ನಾವಿಂತಹದನ್ನು ಕಂಡೇ ಇದ್ದೇವೆ.
ಎರಡನೆಯದು, ತನಿಖಾ ಪತ್ರಿಕೋದ್ಯಮದ ಮಹತ್ವ ಎರಡು ದಶಕಗಳ ಹಿಂದೆಯೇ ಮುಚ್ಚಿ ಹಾಕಿದ್ದ ಎಪ್‌ಸ್ಟೀನ್ ಪ್ರಕರಣ ಪುನಃ ಜೀವಂತವಾದದ್ದು ಜೂಲಿ ಬ್ರೌನ್, ಮಯಾಮಿ ಹೆರಾಲ್ಡ್ ಮುಂತಾದವರ ಪ್ರಯತ್ನಗಳ ಫಲದಿಂದಲೇ ಎನ್ನುವುದನ್ನು ನಾವು ಮರೆಯಬಾರದು. ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣಹಾಕಲು ಪ್ರತಿನಿತ್ಯ ಪ್ರಯತ್ನಿಸುವ ಆಡಳಿತ ಯಂತ್ರ, ಉದ್ಯಮಿಗಳ – ರಾಜಕೀಯ ನಾಯಕರ ಮೆಗಾಫೋನ್ ಆಗುತ್ತಿರುವ ಟಿ. ವಿ. ಚಾನೆಲ್ ಗಳು, ಸಾಮಾಜಿಕ ಮಾಧ್ಯಮದ ಹೆಸರಲ್ಲಿ ಹೆಚ್ಚುತ್ತಿರುವ ಫೇಕ್ ನ್ಯೂಸ್ ಇತ್ಯಾದಿಗಳಿಂದ ಜರ್ಝರಿತವಾಗುತ್ತಿರುವ ನ್ಯೂಸ್ ಪೇಪರುಗಳ ಇಂದಿನ ಯುಗದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ನಾವು ಜತನದಿಂದ ಕಾಪಾಡಿಕೊಳ್ಳಬೇಕಿದೆ.
ಮೂರನೆಯದು, ಜಾಗತಿಕ ಗಣ್ಯರ ಜಾಲಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಪಾಠ. ಎಪ್‌ಸ್ಟೀನ್ ವಿಶ್ವವಿದ್ಯಾಲಯಗಳ ಜೊತೆಗೆ, ವಿಜ್ಞಾನಿಗಳ ಜೊತೆಗೆ ಸಂಪರ್ಕ ಬೆಳೆಸುವಾಗ ದಾನ-ದತ್ತಿಗಳ ಮಾರ್ಗವನ್ನು ಬಳಸುತ್ತಾನೆ. ಅವನು ನೀಡುವ ಸಹಾಯ ಅವರನ್ನು ಅವನ ಋಣಿಗಳಾಗಿಸುತ್ತವೆ. ಇಂದು ಭಾರತೀಯ ಸಂಸ್ಥೆಗಳೂ ಜಾಗತಿಕ ಸಂಘ ಸಂಸ್ಥೆಗಳಿಂದ ಧನ ಸಹಾಯ, ದೇಣಿಗೆ ಪಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಆ ಸಂಸ್ಥೆಗಳ ಬಗ್ಗೆ ಪರಿಶೀಲನೆ ಮತ್ತು ಪಾರದರ್ಶಿಕತೆ ಅತ್ಯಗತ್ಯ.
seshadri.ganjur@gmail. com
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಕಸ್ಟಡಿಗೆ ವಹಿಸಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿಯ ಜಾತ್ರಾ…
ನಂಜನಗೂಡು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಕಳೆದ ತಡರಾತ್ರಿ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್…
ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು. ಆದರೆ ಹೈಕಮಾಂಡ್‌ಗೆ ನಾವು ನೋಟಿಸ್ ಕೊಡಲು…
ಬೆಂಗಳೂರು: ರಾಜ್ಯದಲ್ಲಿ ಚಳಿಯ ಅಬ್ಬರ, ಶೀತ ಸಂಪೂರ್ಣ ಕಡಿಮೆಯಾಗಿದ್ದು, ಒಣ ಹವೆಯ ಜೊತೆಗೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಶಿವರಾತ್ರಿ…
ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಬಸರಾಳು ಸಮೀಪದ ಕಾರೆಕಟ್ಟೆ ಬಳಿ ಕೀರ್ತಿ…