ಹಾಡು ಪಾಡು

ದಸರಾದ ಬಹಿರಂಗ ಶುದ್ಧಿ ಬದಲು ಅಂತರಂಗದ ಶುದ್ಧಿ ಯಾವಾಗ?

ಸಿರಿ ಮೈಸೂರು

‘ಈ ಬಾರಿ ದಸರಾಗೆ ಆಹ್ವಾನಿಸಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವವರಿಗೆ ಸೀಟ್ ನಂಬರ್ ಸಹಿತ ವಿಐಪಿ ಪಾಸ್ ನೀಡಲಾಗಿತ್ತಂತೆ, ಅವರ ಮನೆಗಳಿಗೆಲ್ಲಾ ಒಳ್ಳೊಳ್ಳೆ ಸಿಹಿ ತಿನಿಸು, ಸುಗಂಧದ್ರವ್ಯಗಳನ್ನು ಹೊಂದಿದ ಪಿಆರ್ ಪ್ಯಾಕೇಜ್ ಕಳಿಸಲಾಗಿತ್ತಂತೆ ’, ದಸರಾ ಬಗ್ಗೆ ಹೊಗಳಿ ರೀಲ್ಸ್ ಮಾಡುವ ಆಯ್ದ ೧೦೦ ಜನರಿಗೆ ವಿಶೇಷ ಬಹುಮಾನ ನೀಡುತ್ತೇವೆಂದು ಸ್ವತಃ ಸರ್ಕಾರವೇ ಘೋಷಣೆ ಮಾಡಿತ್ತಂತೆ’ ಎಂಬಿತ್ಯಾದಿ ಮಾತುಗಳು ಎಲ್ಲರ ಕಿವಿಗೂ ಬಿದ್ದೇ ಇರುತ್ತವೆ. ಇಂತಹ ಪ್ರಚಾರ ಯತ್ನಗಳ ಜೊತೆಗೆ ಸಿನಿಮಾ ಕಲಾವಿದರನ್ನು, ಕ್ರಿಕೆಟಿಗರನ್ನು ಸ್ತಬ್ಧಚಿತ್ರಗಳ ರೀತಿ ಮೆರವಣಿಗೆ ಮಾಡಿಸಿದ ಹೊಸ ಪ್ರಯತ್ನವೂ ನಡೆಯಿತು. ದಕ್ಷಿಣ ಭಾರತದ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಅವರಿಂದ ಹಾಗೂ ಮುಖ್ಯಮಂತ್ರಿಗಳ ಧರ್ಮಪತ್ನಿಯಿಂದ ಆನೆಗೆ, ಅಂಬಾರಿಗೆ ಪುಷ್ಪಾರ್ಚನೆ ಮಾಡಿಸಿದ್ದನ್ನೂ ನಾವು ಅನಿವಾರ್ಯವಾಗಿ ಕಣ್ತುಂಬಿಕೊಳ್ಳಬೇಕಾಯಿತು. ಇದು ದಸರಾದ ಇತಿಹಾಸದಲ್ಲಿ ಇದೇ ಮೊದಲು. ‘ಅಯ್ಯೋ.. ಅದರಲ್ಲಿ ತಪ್ಪೇನು? ಯಾರಾದರೂ ಬಂದು ಪುಷ್ಪಾರ್ಚನೆ ಮಾಡಲಿ ಬಿಡಿ. ಒಟ್ಟಿನಲ್ಲಿ ದಸರಾ ಪ್ರಚಾರವಾದರೆ ಸಾಕಷ್ಟೇ’ ಎನ್ನುತ್ತಾ ಜನರು ದಸರಾದಲ್ಲಿ ರಾಜಕೀಯ ಬೆರೆತುಹೋದ ಸಂಗತಿಯನ್ನು ತಳ್ಳಿಹಾಕಿಬಿಟ್ಟರು. ಪ್ರತಿವರ್ಷ ನಡೆಯುತ್ತಿದ್ದ ಸರ್ಕಾರಿ ದಸರಾ ಈ ಬಾರಿ ಸರ್ಕಾರಿ ಹಾಗೂ ಪ್ರಚಾರಭರಿತ ದಸರಾ ಆಗಿ ಶಕ್ತಿ ಪ್ರದರ್ಶನದ ವೇದಿಕೆಗಳಿಗೂ, ಹಬ್ಬಕ್ಕೂ ವ್ಯತ್ಯಾಸ ಇಲ್ಲದಾಯಿತು.

ಮೇಲೆ ಹೇಳಿದಂತೆ ದಸರಾಗೆ ಬಹಿರಂಗ ಶುದ್ಧಿಗಳು ನಡೆದರೂ ಅಂತರಂಗ ಶುದ್ಧಿ ನಡೆದಿಲ್ಲ, ನಡೆಯುವ ಮುನ್ಸೂಚನೆಯೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವವರಿಗೆ ಮಾತ್ರ ಆಸನದ ವ್ಯವಸ್ಥೆ. ಉಳಿದಂತೆ ವಿಐಪಿ ಪಾಸ್ ಇರಲಿ, ಗೋಲ್ಡ್ ಕಾರ್ಡ್ ಹೊಂದಿದ ಬಹುಪಾಲು ಜನರಿಗೂ ಅರಮನೆಯ ಒಳಗೆ ಪ್ರವೇಶ ಇರಲಿಲ್ಲ. ಈ ತಳ್ಳಾಟದಲ್ಲಿ ಓರ್ವ ಬಾಲಕಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ.

ದಸರಾ ಸುದ್ದಿ ಮಾಡಲು ಅರಮನೆಗೆ ಬಂದಿದ್ದ ಪತ್ರಕರ್ತರಿಗೂ ಪೊಲೀಸರಿಗೂ ತೀವ್ರ ಗಲಾಟೆ ನಡೆದು ಪತ್ರಕರ್ತರು ಅಲ್ಲೇ ಪ್ರತಿಭಟನೆ ಮಾಡುವಂತಾಯಿತು. ಇದಕ್ಕೆ ಹೊಣೆ ಯಾರು? ಇಷ್ಟೆಲ್ಲಾ ನಡೆಯುತ್ತಿದ್ದದ್ದು ಒಂದು ಕಡೆಯಾದರೆ ನಂದಿಧ್ವಜ ಪೂಜೆ ನಂತರ ಮಾನ್ಯ ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಓಪನ್ ಜೀಪ್‌ನಲ್ಲಿ ವಿರಾಜಮಾನರಾಗಿ ಅರಮನೆಯಲ್ಲೆಲ್ಲಾ ಮೆರವಣಿಗೆ ಮಾಡಿದ್ದು ಇನ್ನೊಂದು ಕಡೆ. ಜನರನ್ನು ಒಳಗೆ ಬಿಡುವುದು ಬದಿಗಿರಲಿ…ಸ್ವತಃ ಜಟ್ಟಿಕಾಳಗಕ್ಕೆ ಆಯ್ಕೆಯಾಗಿದ್ದ ಜಟ್ಟಿಗಳಿಗೇ ಈ ಬಾರಿ ಅರಮನೆಯೊಳಗೆ ಪ್ರವೇಶ ದೊರೆತಿಲ್ಲ! ಆಯ್ಕೆಯಾದ ನಾಲ್ವರ ಪೈಕಿ ಇಬ್ಬರು ಒಳಗಿದ್ದರೆ ಇನ್ನಿಬ್ಬರನ್ನು ಪೊಲೀಸರು ಸುತಾರಾಂ ಒಳಗೆ ಬಿಟ್ಟಿಲ್ಲ. ಜಟ್ಟಿಗಳು ತಮ್ಮ ನೆತ್ತರನ್ನು ಅರ್ಪಿಸಿದ ನಂತರವೇ ಹೊರಡುತ್ತಿದ್ದ ವಿಜಯಯಾತ್ರೆ ೪೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿಯಮ ಮುರಿದು ಮುಂದುವರಿಯಿತು. ಹಿಂದೆಯೂ ಒಮ್ಮೆ ಈ ರೀತಿ ಆಗಿತ್ತಾದರೂ ಅದರ ಕಾರಣ ಇಷ್ಟು ಹಾಸ್ಯಾಸ್ಪದವಾಗಿರಲಿಲ್ಲ. ಅರಮನೆಯ ಹೊರಗೆ ಜನರು ತಮ್ಮ ವಿಐಪಿ ಪಾಸ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಹರಿದು ಬಿಸಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಇನ್ನು ಆಹಾರಮೇಳದಲ್ಲಿ ಅದೇ ಪುಳಿಯೋಗರೆ, ಬಿರಿಯಾನಿ, ಜೋಳದ ರೊಟ್ಟಿಗಳೇ (ಒಂದೊಂದೇ ಆಹಾರದ) ಇದ್ದವು. ಯುವದಸರಾ, ವಸ್ತುಪ್ರದರ್ಶನಗಳ್ಯಾವುದರಲ್ಲೂ ಒಂದಿನಿತೂ ಹೊಸತನ ಕಾಣಿಸಲಿಲ್ಲ. ಈ ನಡುವೆ ಅದ್ಭುತ ಎನಿಸಿದ್ದು ದೀಪಾಲಂಕಾರ ಮಾತ್ರ. ದಸರಾದಂತಹ ವಿಶ್ವವಿಖ್ಯಾತ ಹಬ್ಬಕ್ಕೆ ಹೆಚ್ಚು ಪ್ರಚಾರ ಕೊಟ್ಟು, ಹತ್ತಾರು ಜನರ ಕೈಲಿ ವಿಡಿಯೋ ಮಾಡಿಸಿ, ನೆರೆಹೊರೆಯ ರಾಜ್ಯದವರನ್ನೆಲ್ಲಾ ಮೆಚ್ಚಿಸಿ, ಸ್ವಹಿತಾಸಕ್ತಿ ಮೆರೆದು, ಪ್ರಚಾರಕ್ಕಷ್ಟೇ ತಲೆ ಕೆಡಿಸಿಕೊಂಡುಬಿಟ್ಟರೆ ಸಾಕೇ? ದಸರಾದ ಅಂತರಂಗ ಶುದ್ಧಿಯಾಗುವುದು ಯಾವಾಗ? ಉತ್ತಮ ಟ್ರಾಫಿಕ್ ನಿರ್ವಹಣೆ, ಕಾರ್ಯಕ್ರಮಗಳಲ್ಲಿ ಹೊಸತನ, ನಿಯಮಿತ ಪಾಸ್ ಪೂರೈಕೆ, ಜನಸಾಗರದ ನಿರ್ವಹಣೆ, ಹಬ್ಬ ನೋಡಲು ಬರುವ ಸಾಮಾನ್ಯಜನರ ಹಿತಾಸಕ್ತಿಯ ಕಡೆ ಗಮನ ಕೊಡುವವರು ಯಾರು? ಪ್ರತಿ ವರ್ಷ ಇರುತ್ತಿದ್ದ ಸರ್ಕಾರಿ ದಸರಾ ಈ ಬಾರಿ ಪ್ರಚಾರದ ದಸರಾ ಆಗಿ ಬಹಿರಂಗದಲ್ಲಿ ಬದಲಾವಣೆಗಳು ಕಂಡಂತೆ ಅನಿಸಿದರೂ ಮೈಸೂರನ್ನು ದಿನವೂ ನೋಡುವ ನನ್ನಂತಹ ಲಕ್ಷಾಂತರ ಮೈಸೂರಿಗರ ನಿರೀಕ್ಷೆಗಳು ಮತ್ತೆ ಹುಸಿಯಾದವು.

ಆದರೂ ಛಲಬಿಡದೆ ಮುಂದಿನ ದಸರಾಗಾಗಿ ಎದುರು ನೋಡುತ್ತಿದ್ದೇವೆ. ಅಷ್ಟರಲ್ಲಿ ಮತ್ಯಾರು ಬಂದು ಹಬ್ಬದ ಆಚರಣೆಗೆ ಮತ್ತೇನು ಅರ್ಥ ಕೊಡುತ್ತಾರೋ ನೋಡಬೇಕಿದೆ. ಅಂದಹಾಗೆ, ಅಸಲಿಗೆ ಮಾಡಬೇಕಾದ ಬದಲಾವಣೆಗಳನ್ನು ದಿಟ್ಟವಾಗಿ ಮಾಡಿದರೆ ಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ತನ್ನಿಂತಾನೇ ಪ್ರಚಾರವೂ ಸಿಗುತ್ತದೆ.

” ಈ ವರ್ಷ ಮೈಸೂರು ದಸರಾದಲ್ಲಿ ಕೆಲವು ಬದಲಾವಣೆಗಳು ಕಂಡುಬಂದವು. ಆದರೆ ಅವು ದಸರಾ ಸಮಯದಲ್ಲಿ ಸಾಮಾನ್ಯವಾಗಿ ಆಗುವ ಅವ್ಯವಸ್ಥೆಗಳನ್ನು ಪ್ರಚಾರವೆಂಬ ಅಸ್ತ್ರದಿಂದ ಕಣ್ಮರೆಯಾಗಿಸುವ ಬಹಿರಂಗ ಶುದ್ಧಿಯಾಗಿತ್ತೇ ಹೊರತು ಅಂತರಂಗ ಶುದ್ಧಿ ಮಾಡಲು ಪ್ರಯತ್ನಗಳು ನಡೆಯಲಿಲ್ಲವೆಂಬುದು ಕಹಿಸತ್ಯ” 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದಡದಹಳ್ಳಿ -ಬ್ಯಾತಹಳ್ಳಿ ರಸ್ತೆ ದುರಸ್ತಿಪಡಿಸಿ

ಮೈಸೂರು ಜೆಪಿ ನಗರ ರಿಂಗ್ ರಸ್ತೆಯ ರೈಲ್ವೆ ಅಂಡರ್‌ಬ್ರಿಡ್ಜ್ ಬಳಿಯ ಶ್ರೀನಗರ ಬಡಾವಣೆಗೆ ಹೋಗುವ ರಸ್ತೆಯು ರೈಲ್ವೆ ಕ್ರಾಸಿಂಗ್ ದಾಟಿ…

51 mins ago

ಓದುಗರ ಪತ್ರ: ಇ- ಕೆವೈಸಿ: ಮತ್ತಷ್ಟು ಆಧಾರ್ ಕೇಂದ್ರಗಳನ್ನು ಆರಂಭಿಸಿ

ಪಡಿತರ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರು ಇ- ಕೆವೈಸಿ ಮಾಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಇದಕ್ಕೆ ಆಧಾರ್…

58 mins ago

ಓದುಗರ ಪತ್ರ: ಕೇಂದ್ರ ಸಚಿವರಿಗೆ ಇದು ಬೇಕಾಗಿತ್ತೇ?

ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡಿರುವ ಸ್ಟಿಂಗ್ ಆಪರೇಷನ್ ( ಮಾರುವೇಷದ ಕಾರ್ಯಾಚರಣೆ) ಬಗ್ಗೆ ಕೇಂದ್ರ ಸಚಿವ…

1 hour ago

ಓದುಗರ ಪತ್ರ: ದಸರಾ ಮುಗಿದರೂ ಹೆಚ್ಚುವರಿ ಬಸ್ ಟಿಕೆಟ್ ದರ ವಸೂಲಿ ನಿಂತಿಲ್ಲ!

ಕಾರ್ಯನಿಮಿತ್ತ ಅ.೨೩ರಂದು ಮುಂಜಾನೆ ೮ ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ತಡೆರಹಿತ ಬಸ್‌ನಲ್ಲಿ ತೆರಳಿದಾಗ ನಿರ್ವಾಹಕ…

1 hour ago

ಎರಡು ವಿಭಿನ್ನ ಧರ್ಮಗಳ ಮುಖಾಮುಖಿ ನಾಗ್ಪುರ ದಸರಾ

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ನಶಿಸಿ ಹೋಗುತ್ತಿದ್ದ ಬೌದ್ಧ ಧರ್ಮ ಮರುಹುಟ್ಟು ಪಡೆದ ಪುಣ್ಯಭೂಮಿ ವಿಜಯದಶಮಿ ಬಂತೆಂದರೆ ದೇಶದಾದ್ಯಂತ…

1 hour ago

ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಎಚ್ಚರ

ಎಸ್.ಎ.ಹುಸೇನ್ ಬಿಸಿಲು-ಮಳೆಯ ವಾತಾವರಣದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳ; ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆ ಮನವಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲು…

1 hour ago