• ಸ್ವಾಮಿ ಪೊನ್ನಾಚಿ
ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಕವನ, ಕಥೆ ಪ್ರಕಟವಾಗಿ ನಾನು ಕೂಡ ಕನ್ನಡದ ಪ್ರಮುಖ ಸಾಹಿತಿ ಈಗ ಎಂದು ಆಗಾಗ್ಗೆ ಅನಿಸುತ್ತಿತ್ತು. ಅಷ್ಟೊತ್ತಿಗಾಗಲೇ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದುಕೊಂಡು ಕವನ ಸಂಕಲನದ ಪುಸ್ತಕವು ಕೂಡ ಹೊರ ಬಂದಿತ್ತು. ಆಗಂತೂ ನನ್ನ ಪುಸ್ತಕವನ್ನು ಕನ್ನಡದ ಖ್ಯಾತ ಲೇಖಕರು ಓದುತ್ತಾರೆ, ಅಲ್ಲಿ ಇಲ್ಲಿ ನನ್ನ ಪುಸ್ತಕದ ಕುರಿತು ಮಾತನಾಡುತ್ತಾರೆ ಎಂದುಕೊಂಡು ಕೆಲ ಹಿರಿಯ ಸಾಹಿತಿಗಳ ವಿಳಾಸವನ್ನು ಹುಡುಕಿ ಪುಸ್ತಕವನ್ನು ಪೋಸ್ಟ್ ಮಾಡಿದ್ದಾಯಿತು. ಪತ್ರಿಕೆಗಳಿಗೆ ಪುಸ್ತಕ ಕಳಿಸಿದರೆ ವಿಮರ್ಶೆ ಪ್ರಕಟಿಸುತ್ತಾರೆ ಎಂದು ಯಾರೋ ಹೇಳಲಾಗಿ ಎಲ್ಲಾ ಪ್ರಮುಖ ಪತ್ರಿಕೆಗಳ ವಿಳಾಸಕ್ಕೆ ಎರಡೆರಡು ಕಾಪಿ ಪುಸ್ತಕಗಳನ್ನು ಕಳಿಸಿ ಆಯಿತು. ಪುಸ್ತಕ ಕಳಿಸಿದ ಮೇಲೆ ಎಲ್ಲಾ ಪತ್ರಿಕೆಗಳ ಭಾನುವಾರದ ಪುರವಣಿಗಳನ್ನು ದಬ್ಬಾಕುವುದೇ ಆಯಿತು. ಈ ವಾರ ಬರದಿದ್ದರೆ ಮುಂದಿನ ವಾರ ಬಂದೇ ಬರುತ್ತದೆ ಎಂದು, ಆ ವಾರವು ಇಲ್ಲದಿದ್ದರೆ ಮುಂದಿನ ವಾರ, ಹೀಗೆ ಕಾದು ಕಾದು ಆರು ತಿಂಗಳು, ವರ್ಷವಾದರೂ ಪುಸ್ತಕದ ವಿಮರ್ಶೆ ಮನೆ ಹಾಳಾಗಲಿ, ಆ ಪುಸ್ತಕದ ಕುರಿತು ಒಂದೇ ಒಂದು ಪರಿಚಯವು ಕೂಡ ಬರಲಿಲ್ಲ.
ಹೋಗಲಿ ಬಿಡು ಅತ್ತಾಗೆ, ನಮ್ಮ ಹಿರಿಯ ಸಾಹಿತಿಗಳಾದರೂ ಓದಿ ವಿಮರ್ಶೆ ಮಾಡುತ್ತಾರೆಂದು ಖುಷಿಯಾಗಿ ಕಾಲ ದೂಡುತ್ತಾ ಇರುವಾಗ; ನಾನು ಕಂಡು ಕೇಳಿರದ ಹಿರಿಯ ಸಾಹಿತಿಯೊಬ್ಬರು ಫೋನ್ಹಾಯಿಸಿ ನಿಮ್ಮ ಕವಿತೆಗಳನ್ನು ಓದಿದೆ ಅದ್ಭುತವಾಗಿವೆ. ನಿಮ್ಮಂಥ ಯುವಕರು ನಾಲ್ಕು ಜನಕ್ಕೆ ಗೊತ್ತಾಗಬೇಕು. ಒಂದು ಸಲ ಬೆಂಗಳೂರಿಗೆ ನಮ್ಮ ಸಂಘಕ್ಕೆ ಬನ್ನಿ ಮಾತನಾಡುವ ಎಂದು ಆಹ್ವಾನ ಇತ್ತರು. ನನ್ನನ್ನು ತಮ್ಮ ಸಂಘಕ್ಕೆ ಕರೆಯುತ್ತಿದ್ದಾರಲ್ಲ, ಒಮ್ಮೆ ಹೋಗಿ ಮಾತಾಡಿಸಿಕೊಂಡು ಬರಬೇಕು ಎಂದುಕೊಳ್ಳುತ್ತಿರುವಾಗಲೇ ಅದೇ ವ್ಯಕ್ತಿ ಮತ್ತೊಮ್ಮೆ ಫೋನಾಯಿಸಿ, ಈ ನವೆಂಬರ್‌ನಲ್ಲಿ ನಾವು ಒಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ನಿಮಗೆ ‘ಕವಿರತ್ನ’ ಎನ್ನುವ ಬಿರುದು ನೀಡಿ ಪ್ರಶಸ್ತಿ ನೀಡಬೇಕೆಂದಿದ್ದೇವೆ ಎಂದಾಗ ನಾನು ಖುಷಿಯಾಗಿ ಹೌದಾ! ಧನ್ಯವಾದಗಳು ಸರ್, ಬರುವೆ ಎಂದು ಹೇಳಿ ನನ್ನದೊಂದು ಫೋಟೋ, ವಿವರ ಎಲ್ಲವನ್ನು ಕಳುಹಿಸಿ
ಖುಷಿಯಾದೆ.
ವಿವರ ಕಳುಹಿಸಿದ ಮೂರು ದಿನಕ್ಕೆ ಮತ್ತೊಮ್ಮೆ ಕರೆ ಬಂದಿತು. ಏನಿಲ್ಲ ಕಾರ್ಯಕ್ರಮದ ಸಿದ್ಧತೆ ಮಾಡಿಕೊಳ್ಳಬೇಕಲ್ಲ, ಸದ್ಯಕ್ಕೆ ಐದು ಸಾವಿರ ಹಣ ಹಾಕಿಬಿಡಿ, ಉಳಿದದ್ದು ಆಮೇಲೆ ನೋಡಿಕೊಳ್ಳುವ’ ಎಂದು ತಮ್ಮ ಅಕೌಂಟ್ ಡೀಟೇಲ್ ಕಳಿಸಿದ್ದರು. ಅದಾಗಲೇ ಪುಸ್ತಕ ಮಾಡಿಸುವುದಕ್ಕಾಗಿ ಅಡ್ಡಕಸುಬಿ ಪ್ರಕಾಶಕನ ಬಳಿ ಸಿಕ್ಕಿಹಾಕಿಕೊಂಡು ದಿಕ್ಕಾಪಾಲಾಗಿ ಖರ್ಚು ಮಾಡಿದ್ದ ನನಗೆ ಈ ಪುಣ್ಯಾತ್ಮನಿಗೆ ಐದು ಸಾವಿರ ಕೊಡುವುದಕ್ಕೆ ಆ ಸಮಯದಲ್ಲಿ ಹಣ ಎಲ್ಲಿಂದ ಬರಬೇಕು!? ‘ಸದ್ಯಕ್ಕೆ ನನ್ನ ಬಳಿ ಹಣ ಇಲ್ಲ, ಈಗ ನೀವು ಕಾರ್ಯಕ್ರಮ ಮಾಡಿ, ಕಾರ್ಯಕ್ರಮ ಮುಗಿದ ಮೇಲೆ ಸಂಬಳ ಆದಾಗ ನೀಡುತ್ತೇನೆ ಎಂದು ನೆಪ ಹೇಳಿ ತಪ್ಪಿಸಿಕೊಂಡೆ. ಅವರೂ ಅಷ್ಟೇ ಸಂತೋಷದಿಂದ ಆಗಲಿ, ಪರವಾಗಿಲ್ಲ. ನಿಧಾನಕ್ಕೆ ಕೊಡುವಿರಂತೆ, ಆದರೆ ತಾವು ಮಾತ್ರ ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಬರಬೇಕು. ನಮ್ಮ ಪ್ರಶಸ್ತಿಯನ್ನು ಸ್ವೀಕರಿಸಬೇಕು. ನಮ್ಮ ಸಾಹಿತ್ಯ ಲೋಕದ ಹೆಮ್ಮೆ ನೀವು ಎನ್ನುತ್ತಾ, ಕಾರ್ಯಕ್ರಮಕ್ಕೆ ಬರಬೇಕು ಎಂದು ಪದೇಪದೇ ಒತ್ತಾಯಿಸುತ್ತಾ ಫೋನ್ ಇಟ್ಟರು.
ನವೆಂಬರ್ ತಿಂಗಳಿನಲ್ಲಿ ನನಗೊಂದು ‘ಕವಿರತ್ನ ಪ್ರಶಸ್ತಿ ಕೊಡುತ್ತಾರೆ ಜೊತೆಯಲ್ಲಿ ನೀವು ಬರಬೇಕು ಎಂದು ಆತ್ಮೀಯ ಸ್ನೇಹಿತರಿಗೆಲ್ಲ ಜಂಭದಿಂದ ಹೇಳಿಕೊಂಡು ಕಾರ್ಯಕ್ರಮದ ದಿನಕ್ಕಾಗಿ ಕಾಯುತ್ತಲೇ ಇದ್ದೆ. ಒಂದು ದಿನ ಪೋಸ್ಟಿನಲ್ಲಿ ಬೆಂಗಳೂರಿನ ಸಾಂಸ್ಕೃತಿಕ ಕಲಾ ಸಂಘದಿಂದ ಆಹ್ವಾನ ಪತ್ರಿಕೆ ಬಂದಿತು. ಸಂತೋಷಗೊಂಡ ನಾನು ಅದರಲ್ಲಿ ನನ್ನ ಹೆಸರು ನೋಡುವ ಎಂದು ಅವಸರವಸರವಾಗಿ ತೆಗೆದು ನೋಡಿದರೆ ‘ಕವಿರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಎಂದು ಹತ್ತು ಜನ ಕವಿಗಳ ಹೆಸರನ್ನು ದಪ್ಪ ಅಕ್ಷರದಲ್ಲಿ ಅವರ ಫೋಟೋ ಕೆಳಗೆ ಹಾಕಿದ್ದರು. ಅದರಲ್ಲಿ ನನಗೆ ಗೊತ್ತಿರುವ ಬಹುತೇಕ ಕವಿ ಮಿತ್ರರೇ ಇದ್ದರು. ನನ್ನದು ಮಾತ್ರ ಇರಲಿಲ್ಲ!
ನಾನು ದುಡ್ಡು ಕೊಡದಿದ್ದುದಕ್ಕೆ ನನಗೆ ಪ್ರಶಸ್ತಿ ಬರಲಿಲ್ಲ ಎಂದು ಸುಮ್ಮನಾದೆ. ಅದೇ ಪುಸ್ತಕಕ್ಕೆ ಬೇಂದ್ರೆ ಗ್ರಂಥ ಬಹುಮಾನ ಬಂದು, ಅಲ್ಲಿಂದ ಕರೆ ಬಂದಾಗ ನಾನು ಎಷ್ಟು ದುಡ್ಡು ಕೊಡಬೇಕು ಇದಕ್ಕೆ ಹೇಳಿ’ ಎಂದಿದ್ದೆ. ಅವರು ನಗುತ್ತಾ, ‘ನೀವೇನು ಕೊಡುವುದು ಬೇಡ, ನಾವೇ ಕೊಡುತ್ತೇವೆ ಬನ್ನಿ’ ಎಂದಿದ್ದರು!.
swamyponnachi123@gmail.
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…