ಹಾಡು ಪಾಡು

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ

ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ. ಆದ್ರೆ ಕೆಲವು ಹೆಸರು, ಕಾರಣಿಕ ಪುರುಷರು ನೆಲದಲ್ಲಿ ತಮ್ಮಿರವನ್ನು ತೋರಿಸಿದ್ರೆ ಸತ್ಯ ಅಂತಾನೋ, ಪವಾಡ ಅಂತಾನೋ ಅಂತೇವೆ. ಹೀಗೆ ಅತ್ತ ಮಾಯದಲ್ಲೂ, ಇತ್ತ ಲೋಕದಲ್ಲೂ ಇರುವ ವ್ಯಕ್ತಿಯೊಬ್ಬರು ಸಿಕ್ಕರು.

ಅವತ್ತು ಹುಣಸೂರು ಬಳಿಯ ಮಾದಳ್ಳಿ ಮಠದ ಹತ್ತಿರದ ಮರುಳಯ್ಯನ ಕೊಪ್ಪಲಿನ ಕಡೆ ಹೋಗಿದ್ದೆ. ಪುಟ್ಟ ಗುಡಿಸಲಿನ ಎದುರು ಒಂದಷ್ಟು ಹುಡಿ ಮಕ್ಳು ಆಟವಾಡುತ್ತಿದ್ದರು. ನೋಡಲು ಪುಟ್ಟ ಗುಡಿಯಂತಿತ್ತು ಆ ಗುಡಿಸಲು. ಒಬ್ಬ ಹುಡುಗನಲ್ಲಿ ‘ಇದ್ಯಾರದ್ದು ಮನೆ?’ ಕೇಳಿದೆ. ‘ಬೇಡರ ಕಣ್ಣಪ್ಪಂದು’ ಅಂದ್ಬಿಟ್ಟ. ಮಾಮೂಲಾಗಿ ತೀರಾ ಪರಿಚಿತರನ್ನು ಅಡ್ಡ ಹೆಸರಿನಿಂದ ಕೂಗೋದು ವಾಡಿಕೆ ತಾನೇ! ಹಾಗೇ ಈ ಹುಡುಗನೂ ಹೇಳಿರ್ಬೇಕು ಅಂದ್ಕೊಂಡು ‘ಮನೇಲಿ ಯಾರಿದ್ದಾರೆ?’ ಕೇಳಿದೆ. ‘ಬೇಡರ ಕಣ್ಣಪ್ಪನಿದ್ದಾನೆ’ ಮತ್ತೆ ಹಾಗೆಯೇ ಹೇಳಿದಾಗ ಕುತೂಹಲ ಹುಟ್ಟಿತು. ‘ಹಂಗಿದ್ರೆ ತೋರ್ಸು ಬಾ ನಿನ್ನ ಕಣ್ಣಪ್ಪನನ್ನು’ ಹೇಳಿದೆ. ಪುಟ್ಟ ಹೈದ ಚುರುಕಿನಿಂದಲೇ ‘ಬನ್ನಿ ಸಾ…’ ಅಂತಂದು ಕರ್ಕೊಂಡು ಹೋದ. ಗುಡಿಸಲಿನ ಹೊರಗೆ ಚಪ್ಪಲಿ ಬಿಟ್ಟು ಒಳಹೋದರೆ ಹೂವಿನಿಂದ ಅಲಂಕೃತವಾದ ಶಿವನ ಪುಟ್ಟ ಮೂರ್ತಿ ಹಾಗೂ ಆ ಕಡೆ, ಈ ಕಡೆ ಹಲವು ಆಯುಧಗಳನ್ನು ಪೂಜಿಸಿ ಇಟ್ಟಿದ್ದರು. ಮೂಲೆಯಲ್ಲಿ ನವಿಲುಗರಿಗಳು. ಕೈ ಮುಗಿದೆ. ‘ನೋಡಿ ಸಾ…ಇವ್ನೇ ಬೇಡ್ರ ಕಣ್ಣಪ್ಪ’ ಅಲ್ಲೇ ಆ ಕಡೆ ಇದ್ದ ಮಂಚದತ್ತ ಬೆರಳು ತೋರಿಸಿದ.

ಮಂಚದಲ್ಲಿ ಎಪ್ಪತ್ತು ದಾಟಿದ ವೃದ್ಧರು ಮಲಗಿದ್ದರು. ಮೆಲ್ಲನೆ ಎದ್ದು ಕುಳಿತು ಧ್ವನಿ ಬಂದ ದಿಕ್ಕಿಗೆ ತಿರುಗಿ ಕೈ ಮುಗಿದರು. ‘ಯಾಕೆ ನಿಮ್ಮನ್ನು ಬೇಡರ ಕಣ್ಣಪ್ಪ ಅಂಥ ಕರಿಯೋದು?’ ಕೇಳಿದೆ. ‘ಮೈ ಮೇಲೆ ಬೇಡರ ಕಣ್ಣಪ್ಪ ಬರ್ತಿದ್ದ, ಹಂಗಾಗಿ ಕಣ್ಣಪ್ಪ ಅಂತಾರೆ’ ಎಂದಾಗ ಕುತೂಹಲ ಹುಟ್ಟಿತು. ‘ನಿಮ್ಮ ಮೈ ಮೇಲೆ ಮಾತ್ರ ಬರೋದ?’ ಕೇಳಿದೆ.

‘ಇಲ್ಲ ಸ್ವಾಮಿ. ನಮ್ಮ ತಾತಂಗೂ ಬರ್ತಿತ್ತು. ಚಿಕ್ಕಪ್ಪಯ್ಯ ಅಂಥ ಅವ್ರ ಹೆಸ್ರು. ಅವ್ರ ಕಾಲಕ್ಕೆ ಮರುಳಯ್ಯನ ಕೊಪ್ಲಿಗೆ ಬಂದ್ವಿ. ನಂತ್ರ ನನ್ನಪ್ಪ ಕೊಂತನಾಯ್ಕರ ಮೇಲೂ ಬರ್ತಿತ್ತು. ನನ್ಹೆಸ್ರೂ ಕೊಂತನಾಯ್ಕಾನೇ…ನನ್ಮೇಲೆ ಬತ್ತಿತ್ತಾ…ಈಗ ವಯಸ್ಸಾಯ್ತು ನೋಡಿ, ಕಣ್ಣೂ ಕಾಣ್ಸಲ್ಲ. ಹಂಗಾಗಿ ನನ್ ಮೊಮ್ಮಗ್ನ ಮೇಲೆ ಬತ್ತೈತೆ. ಊರ್ನವ್ರೆಲ್ಲ ಬಂದು ಕಷ್ಟ ಹೇಳ್ಕೋತಾರೆ, ಬೇಡರ ಕಣ್ಣಪ್ಪ ಪರಿಹಾರ ಕೊಡ್ತಾನೆ’ ಎಂದು ಹೇಳಿದರು.

ಬಡತನದ ಬದುಕೆಂಬುದನ್ನು ಬಿಡಿಸಿ ಹೇಳಬೇಕಾಗಿರಲಿಲ್ಲ. ‘ಎಲ್ರ ಕಷ್ಟಾನೂ ಕಣ್ಣಪ್ಪನ ಮುಂದೆ ಹೇಳ್ಕೋತೀರಿ…ನಿಮ್ಮ ಕಷ್ಟನಷ್ಟ ಪರಿಹಾರ ಮಾಡಿ, ಕಣ್ಣು ಕಾಣ್ಸೋ ತರ ಮಾಡು ಅಂಥ ಯಾವತ್ತೂ ಬೇಡರ ಕಣ್ಣಪ್ಪನ ಹತ್ರ ಕೇಳಿಲ್ವ?’ ಕೇಳಿದೆ. ‘ಸಾ… ನಾವೇ ನಮ್ದನ್ನು ದೇವ್ರ ಮುಂದೆ ಹೇಳೋದು ಎಷ್ಟು ಸರಿ ಹೇಳಿ. ನಮ್ಕಷ್ಟ ಕಣ್ಣಪ್ಪಂಗೆ ಗೊತ್ತಿರತ್ತೆ. ಟೈಮು ಬಂದಾಗ ಸರಿಯಾಗತ್ತೆ. ದೇವ್ರಲ್ಲಿ ಊರಿನವ್ರ ಕಷ್ಟ ಹೇಳೋದಷ್ಟೇ ನಮ್ಕೆಲ್ಸ. ನಮ್ದು ಯಾಕೇಳ್ಲಿ? ಮೂರು ತಲೆಮಾರಿಂದ ಕಣ್ಣಪ್ಪ ಬರ್ತಾವ್ನೆ. ಈಗ ಮೊಮ್ಮಗ್ನ ಮೇಲೆ ಬರ್ತಿದಾನೆ. ಬೇಡರ ಕಣ್ಣಪ್ಪನಿಗೊಂದು ದೇವಸ್ಥಾನ\ ಕಟ್ಬೇಕು ಅಂತನ್ನೋದು ನನ್ನಾಸೆ. ಮೊಮ್ಮಗ ಕಟ್ಟೋಕೆ ಹೊರ್ಟಿದಾನೆ. ಇದು ಕಣ್ಣಪ್ಪ ವರ ಕೊಡ್ದಿದ್ರೆ ಸಾಧ್ಯ ಆಗ್ತಿತ್ತಾ ಯೇಳಿ…’ ಸುಕ್ಕುಗಟ್ಟಿದ ಮುಖದಲ್ಲೂ ಸಂತೃಪ್ತ ನಗು!

‘ನಿಮ್ಮ ಕಷ್ಟಾನೂ ಹೇಳ್ನೋಡಿ ಶಿವಪ್ಪನಲ್ಲಿ’ ಅಂದೆ. ‘ತಪ್ಪು, ತಪ್ಪು ಸಾ…ಕಾಲ ಕೆಟ್ಟೋಗಿದೆ ಅಂತಾರೆ, ಆದ್ರೆ ಕೆಟ್ಟೋಗಿರೋದು ಜನಗಳು ಸಾ…ಎಲ್ರಿಗೂ ಒಳ್ಳೇ ಬುದ್ಧಿ ಕೊಡು ಅಂತ ಶಿವಪ್ಪನಲ್ಲಿ ಪೂಜಾರಿಯಾಗಿ ಬೇಡ್ಬೇಕೇ ಹೊರ್ತು ನಂಗೇ ಒಳ್ಳೇದು ಮಾಡು ಅಂತಂದ್ರೆ ಸ್ವಾರ್ಥ ಸಾ…ಸೋಮ್ವಾರ ಬನ್ನಿ, ಆದಿನ ಬೇಡರ ಕಣ್ಣಪ್ಪ ಬತ್ತಾನೆ, ನೋಡೋರಂತೆ’ ಎಂದಾಗ ಆ ಮಾತಿನ ಮುಂದೆ ದೊಡ್ಡ ದೊಡ್ಡ ವೇದಾಂತಗಳು ಕೂಡ ಅರೆಕ್ಷಣ ಜೊಳ್ಳೆನಿಸಿತು. ‘ಆಯ್ತು ಬರ್ತೀನಿ’ ಅಂತಂದು ಮತ್ತೊಮ್ಮೆ ಕೊಂತ ನಾಯ್ಕರೆಂಬ ಬೇಡರ ಕಣ್ಣಪ್ಪನಿಗೂ ಆತ ಮೆಚ್ಚಿದ ಶಿವಪ್ಪನಿಗೂ ನಮಸ್ಕರಿಸಿ ಹೊರಟೆ. ಹೊರಗೆ ಮಕ್ಳು ಆಡ್ತಿದ್ರು. ಹೌದಲ್ಲ ಕೊಂತನಾಯ್ಕರು ಹೇಳಿದ್ದು. ಕಾಲ ಹಾಗೇ ಇದೆ, ಜನ ಬದಲಾಗ್ತಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ ತಾನೇ! ಆವತ್ತಿನ ತರಹ ಇವತ್ತೂ ಮಕ್ಳು ಆಡ್ತಿದಾರೆ. ಕಾಲದ ಹಾಗೇ ಮಕ್ಳಾಟ ಯಾವತ್ತಿಗೂ ಬದಲಾಗದು. ಬದಲಾಗೋ ಜಾಯಮಾನ ಏನಿದ್ರೂ ‘ತಿಳ್ಕೊಂಡಿದೀವಿ’ ಎಂಬ ಭ್ರಮೆಯ ಬದುಕಿನದ್ದು ಎಂದುಕೊಂಡೆ. ಸೂರ್ಯ ವಿರಮಿಸುವ ಹೊತ್ತು, ಬಾನು ಬೇಡರ ಕಣ್ಣಪ್ಪನ ಜ್ಞಾನಭಕ್ತಿಗೆ ಪರವಶವಾದಂತೆ ಕಂಡಿತು. ಮತ್ತೊಮ್ಮೆ ತಿರುಗಿ ಬೇಡರ ಕಣ್ಣಪ್ಪನ ಗುಡಿಸಲು ನೋಡಿ ಕೈಮುಗಿದೆ.

” ಎಲ್ರಿಗೂ ಒಳ್ಳೇ ಬುದ್ಧಿ ಕೊಡು ಅಂತ ಶಿವಪ್ಪನಲ್ಲಿ ಪೂಜಾರಿಯಾಗಿ ಬೇಡ್ಬೇಕೇ ಹೊರ್ತು ನಂಗೇ ಒಳ್ಳೇದು ಮಾಡು ಅಂತಂದ್ರೆ ಸ್ವಾರ್ಥ ಸಾ…”

ಆಂದೋಲನ ಡೆಸ್ಕ್

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

2 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

2 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

3 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

3 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

3 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

4 hours ago