ಹಾಡು ಪಾಡು

ಶಿಳ್ಳೇಕ್ಯಾತರ ಈ ಕೇರಿಯಲ್ಲಿ ಪ್ರತಿ ಕಥೆಗಳೂ ಕರುಣಾಜನಕ

ಸ್ವಾಮಿ ಪೊನ್ನಾಚಿ

ಬೆಳ್ಳಂಬೆಳಿಗ್ಗೆ ಅವರನ್ನು ಭೇಟಿ ಮಾಡಲು ಹೋದಾಗ ಅಲ್ಲಲ್ಲಿ ಮರೆಯಾಗಿರುವ ಪೊದೆಗಳಿಂದ ಪುಟ್ಟದಾದ ಚೊಂಬು ಹಿಡಿದು ಈಚೆ ಎದ್ದು ಬರುತ್ತಿದ್ದರು. ದೂರದ ಪೊದೆಗಳಿಗೆ ಹೋಗಿದ್ದ ಹೆಂಗಸರು ಮತ್ತು ಮಕ್ಕಳು ನಮ್ಮನ್ನು ಕಂಡೊಡನೆ ನಾಚಿಕೆಯಿಂದ ನಮ್ಮ ಎದುರು ಬರದೆ, ಆಚೆ ದಾರಿಯಲ್ಲಿ ಬಂದು, ಮನೆ ಸೇರಿಕೊಂಡರು. ಅಲ್ಲಿದ್ದ ನೂರ ಅರವತ್ತು ಕುಟುಂಬಗಳಲ್ಲಿ ಒಂದು ಕುಟುಂಬಕ್ಕೂ ಶೌಚಾಲಯ ಇಲ್ಲ. ಪ್ರತಿಯೊಂದು ಕುಟುಂಬಕ್ಕೂ ಬಯಲು ಶೌಚಾಲಯವೇ ಗತಿ. ಆ ಕೇರಿಯ ಎಲ್ಲರೂ ಬಂದು ಸೇರುವಷ್ಟರಲ್ಲಿ ಎಂಟು ಗಂಟೆಯಾಗಿತ್ತು. ಒಬ್ಬೊಬ್ಬರಾಗಿ ಮಾತನಾಡಲು ಶುರು ಮಾಡಿದರು.

‘ನೋಡಿ ಸ್ವಾಮಿ, ನಾವು ಮೊದಲು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದೆವು. ಆಗ ಒಮ್ಮೆ ಬೆಂಕಿ ಬಿದ್ದು ಹತ್ತು ಗುಡಿಸಲುಗಳು ಸುಟ್ಟು ಭಸ್ಮವಾದವು. ಆದರೂ ಹೇಗೋ ಸಂಭಾಳಿಸಿಕೊಂಡು ಮತ್ತೆ ಗುಡಿಸಲು ಸಿದ್ಧ ಮಾಡಿಕೊಂಡು ಬದುಕಲು ಶುರು ಮಾಡಿದಾಗ ಮತ್ತೆ ಬೆಂಕಿ ಬಿತ್ತು. ಆಗಲೂ ಏಳು ಗುಡಿಸಲುಗಳು ಸುಟ್ಟು ಭಸ್ಮವಾದವು. ಅದೃಷ್ಟವಶಾತ್ ಪ್ರಾಣಾಪಾಯ ಆಗಲಿಲ್ಲ. ಆಮೇಲೆ ನಾವು ಮನೆಯೊಳಗೆ ಮಲಗಿದ್ದರೆ ಎಲ್ಲಿ ಬೆಂಕಿ ಬಿದ್ದು ನಿದ್ರೆಯಲ್ಲಿ ಮೈಮರೆತು ಸತ್ತು ಬಿಡುತ್ತೇವೋ ಎಂಬ ಭಯದಿಂದ ಕುಟುಂಬಸ್ಥರೆಲ್ಲರೂ ಮನೆಯ ಆಚೆ ಮಲಗಲು ಶುರು ಮಾಡಿದೆವು. ಆಮೇಲೆ ನೋಡಿದರೆ ಅದು ಆಕಸ್ಮಿಕವಾಗಿ ಬೆಂಕಿ ಬಿದ್ದುದಲ್ಲ! ನಮ್ಮನ್ನು ಇಲ್ಲಿಂದ ಓಡಿಸಬೇಕು ಎಂದು ಬೇಕು ಅಂತಲೇ ಹಾಕಿದಂತಹ ಬೆಂಕಿ ಅದು. ಮಟ್ಟಾಳೆ ನಾರಿನ ಗುಡಿಸಲು ಕಟ್ಟಿಕೊಂಡರೆ ಮತ್ತೊಮ್ಮೆ ಬೆಂಕಿ ಹಾಕಬಹುದೆಂಬ ಭಯದಿಂದ ನಮ್ಮ ಹೆಂಡತಿಯರ ಕೊರಳಲ್ಲಿದ್ದ ತಾಳಿಯನ್ನು ಮಾರಿ ಕಾಂಕ್ರೀಟ್ ಇಟ್ಟಿಗೆಯಿಂದ ನಾಲ್ಕು ಗೋಡೆ ಏರಿಸಿ ಮೇಲೆ ಶೀಟನ್ನು ಹಾಕಿಕೊಂಡಿದ್ದೇವೆ.

ಬೇಕಿದ್ರೆ ನೋಡಿ ಇಲ್ಲಿರುವ ಕಾಲೋನಿಯ ಹೆಂಗಸರ ಯಾರ ಕೊರಳಲ್ಲೂ ಚಿನ್ನದ ತಾಳಿ ಇಲ್ಲ ಎಂದು ಅವರೇ ತಮ್ಮ ಖಾಲಿಯಾದ ಕೊರಳನ್ನು ತೋರಿಸಿದರು. ಕರೀಮಣಿ ದಾರ ಬಿಟ್ಟರೆ ನಾನು ನೋಡಿದ ಯಾರ ಕೊರಳಲ್ಲೂ ಚಿನ್ನದ ತಾಳಿ ಇರಲಿಲ್ಲ. ಮನೆ ಕಟ್ಟಿಕೊಂಡ ಮೇಲೆ ಮತ್ತೆ ಇಲ್ಲಿಂದ ಓಡಿಸುವುದಕ್ಕೆ ಬೇರೆಯದೇ ಉಪಾಯ ಶುರು ಮಾಡಿದರು. ಈಗ ಒಂದು ವರ್ಷದಿಂದ ನೀರನ್ನು ಬಿಡುತ್ತಿಲ್ಲ. ಬೇರೆ ಊರುಗಳಿಗೆ ರೆಕಾರ್ಡ್ ಡ್ಯಾನ್ಸ್ ಹಾಡಲು ಹೋದಾಗ ಅಲ್ಲಿಂದಲೇ ಒಂದು ಡ್ರಮ್ ನೀರನ್ನು ಕೇಳಿ ಪಡೆದು ತಂದು ಉಪಯೋಗಿಸುತ್ತಾ ಇದ್ದೇವೆ. ನಮ್ಮಲ್ಲಿ ರೇಷನ್ ಕಾರ್ಡ್, ವೋಟ್ ಕಾರ್ಡು ಎಲ್ಲವೂ ಇದೆ. ಉಳಿದುಕೊಳ್ಳಲು ವಾಸಕ್ಕೆ ಮಾತ್ರ ಹಕ್ಕು ಪತ್ರ ಕೊಟ್ಟಿಲ್ಲ. ಪದೇಪದೇ ಇಲ್ಲಿಂದ ಎತ್ತಂಗಡಿ ಮಾಡಿಸಲು ಕಿರುಕುಳಗಳನ್ನು ನೀಡುತ್ತಲೇ ಇದ್ದಾರೆ.

ಪಂಚಾಯಿತಿಯವರನ್ನು ನೀರು ಕೇಳಿದರೆ ನೀವು ನಮ್ಮ ಪಂಚಾಯಿತಿಗೆ ಸೇರಿಲ್ಲ ಎನ್ನುತ್ತಾರೆ. ನಮ್ಮ ಮಾತುಕತೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಒಬ್ಬ ವ್ಯಕ್ತಿ ಅಲ್ಲಿಂದಲೇ ಕಿರುಚಾಡುತ್ತಾ ನಮ್ಮನ್ನು ತಾರಾಮಾರ ಬೈಯುವುದಕ್ಕೆ ಶುರುಮಾಡಿದ. ಇವರೆಲ್ಲಾ ಬಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಇದ್ದಾರೆ. ನಮ್ಮನ್ನೆಲ್ಲ ಯಾವೊನೂ ಉದ್ಧಾರ ಮಾಡಲ್ಲ. ಉದ್ಧಾರ ಮಾಡ್ತೀವಿ ಅಂತ ಬಂದವರನ್ನು ನನ್ ತಲೆ ಕೂದಲಷ್ಟು ನೋಡಿಬಿಟ್ಟಿವ್ನಿ. ಇವರನ್ನ ಈ ಕೇರಿಗೆ ಸೇರಿಸೋಕೆ ಯಾರು ಹೇಳಿದ್ದು? ಮೊದಲು ಇಲ್ಲಿಂದ ಆಚೆಗಟ್ಟಿ ಎಂದು ನಮ್ಮನ್ನು ನೂಕುವುದಕ್ಕೆ ಬಂದನಲ್ಲದೆ, ನಮ್ಮ ಕ್ಯಾಮೆರಾಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದನು. ಬಂದಂತಹ ವ್ಯಕ್ತಿಯನ್ನ ಸಮಾಧಾನ ಮಾಡಿ ಕೂರಿಸಿ ವಿಚಾರಿಸಿದಾಗ ‘ನಿಮ್ಮ ಪರ ಕೋರ್ಟಿನಲ್ಲಿ ಕೇಸು ಹಾಕಿ, ನ್ಯಾಯ ಕೊಡಿಸುತ್ತೇವೆ’ ಎಂದು ಬಹಳಷ್ಟು ಸಂಘ ಸಂಸ್ಥೆಗಳು ಇವರ ಬಳಿ ಸಾವಿರಾರು ರೂಪಾಯಿಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಷ್ಟೇ ಅಲ್ಲದೆ, ರಾಜಕೀಯ ವ್ಯಕ್ತಿಗಳಿಂದ ಇದನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಂಡರು ಎಂಬುದು. ಪದೇ ಪದೇ ನಿಮ್ಮನ್ನು ಉದ್ಧಾರ ಮಾಡುತ್ತೇವೆ ಎಂದು ಬಂದವರಿಂದ ಮೋಸಕ್ಕೆ ಒಳಗಾದ ಇವರು ಯಾರನ್ನೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನೋಡಿ ಸ್ವಾಮಿ, ಏಕಲವ್ಯನಗರದ ಇಂದಿರಾ ಬಡಾವಣೆಯಲ್ಲಿ ನಮಗೆ ಅಂತ ಅಪಾರ್ಟ್‌ಮೆಂಟ್ ಕಟ್ಟಿಸಿದರು. ನಾವು ದನಕರ, ಕುರಿಕೋಳಿ ಸಾಕಿಕೊಂಡು ಬದುಕೋರು ಸ್ವಾಮಿ, ನಾವ್ ಅಪಾರ್ಟ್‌ಮೆಂಟ್‌ಗಳಲ್ಲಿ ಹೇಗೆ ಇರುವುದಕ್ಕೆ ಸಾಧ್ಯ? ಅದೂ ಅಲ್ಲದೆ ಹೆಂಡತಿ, ಮಕ್ಕಳು, ಅಪ್ಪ, ಅಮ್ಮಂದಿರು ಕುಡಿದು ಜಗಳವಾಡಿದಾಗ ಆವೇಶಕ್ಕೆ ಬಲಿಯಾಗಿ ಅಪಾರ್ಟ್‌ಮೆಂಟ್ ಮೇಲಿಂದ ನೆಗೆದು ಪ್ರಾಣಬಿಟ್ಟರು.

ಕುಡಿದು ಜಗಳವಾಡಿ ಕೋಪ ಬಂದಾಗ ಎತ್ಲಾಗಾದ್ರೂ ಹೋದ್ರೆ ಕೋಪ ತಣ್ಣಗಾದಾಗ ಹಟ್ಟೀಗಾದ್ರು ಬತ್ತಿದ್ರೂ. ಈಗ ಒಂದೇ ಏಟಿಗೆ ಮಾಡಿ ಮೇಲಿಂದ ಕೆಳಗೆ ಬಿದ್ದು ಪ್ರಾಣ ಕಳ್ಕೊಳ್ಳಂಗೆ ಆಯ್ತು. ಎಲ್ರೂ ಕ್ವಾಪದಲ್ಲಿ ಜಗಳ ಆಡ್ಕೊಂಡು ಹಿಂಗೇ ಹೊಂಟೋಗ್ಬಿಟ್ರೆ ಉಳಿದವರ ಗತಿ ಏನು ಸ್ವಾಮಿ? ಇದು ನಮಗೆ ತಕ್ಕುದಲ್ಲದ ಜಾಗ ಎಂದು ಅಲ್ಲಿಂದ ಬಿಟ್ಟು ಇಲ್ಲಿಗೆ ಬಂದೆವು ಎಂದ. ನಮಗೆ ಮನೆ ಕಟ್ಟಿಕೊಡುವುದು ಬೇಡ ಈ ಜಾಗ ನಿಮ್ಮದು ಅಂತ ಹೇಳಿದರೆ ಸಾಕು! ನಾವು ಹೇಗೋ ಕೂಲಿನಾಲಿ ಮಾಡಿ ಒಂದು ಸೂರು ಅಂತ ಮಾಡಿಕೊಳ್ಳುತ್ತೇವೆ ಎಂದು ಅಂಗಲಾಚುತ್ತಿದ್ದ.

ಅಷ್ಟು ಹೊತ್ತಿಗೆ ಕೇರಿಯ ಮುಂದೆ ಮೇಣದ ಬತ್ತಿ ಹಿಡಿದು ಕೆಲವರು ಎತ್ತಲೋ ಹೋಗುತ್ತಿದ್ದರು. ವಿಚಾರಿಸಿದರೆ ಚರ್ಚಿಗೆ ಎಂದರು. ನೀವೆಲ್ಲ ಶಿಳ್ಳೆಕ್ಯಾತ ಜನಾಂಗದವರು. ಚರ್ಚಿಗೆ ಹೋಗುತ್ತೀರಲ್ಲ !? ಎಂದು ಕೇಳಿದ್ದಕ್ಕೆ ‘ಇವತ್ತು ಕ್ರಿಸ್ಮಸ್ ದಿನ ಸ್ವಾಮಿ, ನಾವು ಕ್ರಿಶ್ಚಿಯನ್ ಆಗಿ ಅಲ್ಲಿಗೆ ಹೋಗದಿದ್ದರೆ ಹೇಗೆ? ಎಂದರು. ಅಲ್ಲಿರುವ ಚರ್ಚಿನಿಂದ ಈ ಕುಟುಂಬಗಳಿಗೆ ತಿಂಗಳಿಗೆ ಇಷ್ಟು ಎಂದು ಕುಟುಂಬ ನಿರ್ವಹಣೆಗೆ ಹಣ ಕೊಡುತ್ತಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸಲು ಫೀಸು ಕಟ್ಟುತ್ತಿದ್ದರು. ಈ ಕಾರಣಕ್ಕೆ ನಾವು ಕ್ರಿಶ್ಚಿಯನ್‌ಗೆ ಸೇರಿಕೊಂಡ್ವು ಸ್ವಾಮಿ ಎಂದು ತಮ್ಮ ಅಳಲು ಹೇಳಿಕೊಂಡರು. ಎಲ್ಲರೂ “ಏಸಪ್ಪ ನಿನ್ನ ನಾಮದಲಿ… ಎಂದು ಹಾಡು ಹೇಳಿಕೊಳ್ಳುತ್ತಾ ಮೇಣದಬತ್ತಿ ನೀಡಲು ಚರ್ಚಿನ ಕಡೆ ಸಾಗಿದರು. ನಮ್ಮ ಜೊತೆ ಮಾತನಾಡುತ್ತಿದ್ದ ವ್ಯಕ್ತಿ ತಾನೂ ಟೈಮು ನೋಡಿಕೊಳ್ಳುತ್ತಾ ಆತುರಾತುರವಾಗಿ ಎದ್ದು ಹೊರಡಲನುವಾದ. ಸ್ವಾಮಿ, ಇವತ್ತು ಸುದೀಪನ ಪಿಚ್ಚರ್ ರಿಲೀಸ್ ಆಗ್ತಾ ಇದೆ. ಮೊದಲ ಶೋನಲ್ಲೇ ನೋಡಿ ಯಾವುದಾದರೂ ಒಂದು ಡಾನ್ಸನ್ನು ಕಲಿತುಕೊಂಡರೆ ನಾಳೆ ಬೀದಿಯಲ್ಲಿ ಹೋಗಿ ರೆಕಾರ್ಡ್ ಡಾನ್ಸ್ ಹಾಡಿ, ನಾಕು ಕಾಸು ಸಂಪಾದಿಸಬಹುದು. ಟಿಕೆಟ್ ಬುಕ್ ಮಾಡಿಸಿದ್ದೇನೆ. ಹೋಗಲೇಬೇಕು ಎಂದ.. ನೀನು ಸುದೀಪ್ ಅಭಿಮಾನಿಯ ಎಂದು ಕೇಳಿದೆ. ನಾನು ಯಾರ ಅಭಿಮಾನಿಯೂ ಅಲ್ಲ ಸ್ವಾಮಿ, ಹೊಸ ಪಿಚ್ಚರ್ ಯಾವುದೇ ಬಂದರೂ ಅದರ ರೆಕಾರ್ಡಿಗೆ ಡಾನ್ಸ್ ಕಲಿತು ಬೀದಿಯಲ್ಲಿ ಆಡಿ ಅಪ್ಡೇಟ್ ಆಗುತ್ತಿದ್ದೇವೆ ಎಂದ.

ಅಂದಹಾಗೆ ಇದು ಕರ್ನಾಟಕದ ಯಾವುದೋ ಮೂಲೆಯಲ್ಲಿ ಇರುವ ಕುಗ್ರಾಮದ ಚಿತ್ರಣವಲ್ಲ ಅಥವಾ ಅಲೆಮಾರಿಯಂತೆ ತಿರುಗುತ್ತಾ ಯಾವುದೋ ಊರಿನಲ್ಲಿ ಅಚಾನಕ್ಕಾಗಿ ಸಿಕ್ಕ ಶಿಳ್ಳೇಕ್ಯಾತರ ಗುಂಪೂ ಅಲ್ಲ. ಮೈಸೂರಿನ ಹೆಬ್ಬಾಳದ ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿರುವ ಏಕಲವ್ಯನಗರದ ದಿನನಿತ್ಯದ ಕಥೆ. ನಮ್ಮ ಮಹದೇಶ್ವರನ ಬೆಟ್ಟದ ಸುತ್ತಮುತ್ತ ಪೋಡುಗಳಲ್ಲಿರುವಂತಹ ಕಾಡುಜನರ ಮನೆಗಳು ಎಷ್ಟೋ ವಾಸಿ. ಗಿಡಗಂಟಿ ಬೆಳೆದುಕೊಂಡು ಗಲೀಜು ತುಂಬಿಕೊಂಡು ಇವರೆಲ್ಲ ಹೇಗೆ ವಾಸ ಮಾಡುತ್ತಿದ್ದಾರೆ? ಹೇಳಿಕೊಳ್ಳಲು ಇವರಿಗೆ ಯಾರಿದ್ದಾರೆ? ನೂರು ಮೀಟರ್ ದಾಟಿದರೆ ಅದ್ಭುತವಾದ ಹೈಟೆಕ್ ಸಿಟಿ. ಇಲ್ಲಿಗೆ ಕಾಲಿಟ್ಟರೆ ಇದು ಮೈಸೂರು ನಗರದಲ್ಲಿದಿಯಾ ಎಂದು ಆಶ್ಚರ್ಯವಾಗುತ್ತದೆ. ಮಬ್ಬುಗತ್ತಲ ಗುಡಿಸಲ ಮುಂದೆ ಕುಳಿತು ಎದುರು ಕಾಣುವ ದೊಡ್ಡ ಐಷಾರಾಮಿ ಅಪಾರ್ಟುಮೆಂಟುಗಳ ಜಗಜಗಿಸುವ ಬೆಳಕಿನಲ್ಲಿ ತಮ್ಮ ಕಳಾಹೀನ ಮುಖಗಳನ್ನು ನೋಡಿಕೊಳ್ಳುತ್ತಾ ಅದಾಗ ತಾನೆ ಏರುವ ಬೆಳದಿಂಗಳ ಚಂದ್ರನನ್ನು ಶಪಿಸುತ್ತಾರೆ.

ಬೆಳಗಾಗುತ್ತಲೇ ಎದ್ದು, ದೂರದ ಊರುಗಳಿಗೆ ಗಂಟುಮೂಟೆ ಕಟ್ಟಿಕೊಂಡು ಹೋಗಿ ರಿಕಾರ್ಡು ಹಾಕಿ, ಡಾನ್ಸ್ ಮಾಡಿಕೊಂಡು ಅವರು ಕೊಡುವ ಅಕ್ಕಿ ಬೇಳೆಯ ಜೊತೆ ನಾಲ್ಕು ಪುಡಿಕಾಸು ಸಂಪಾದನೆ ಮಾಡಿಕೊಂಡು ಸಂಜೆ ಆಯಾಸಕ್ಕೆ ಕಡಿಮೆ ಬೆಲೆಗೆ ಸಿಗುವ ಕಂಟ್ರಿ ಸಾರಾಯಿಯ ನೈಂಟಿ ಹೊಡೆದು ಮತ್ತಿನ ನಿದ್ದೆಗೆ ಜಾರಿದರೆ ಆವತ್ತಿನ ಬದುಕಿನ ಡೈರಿಯಾ ಹಾಳೆ ಮಗುಚಿದಂತೆ. ಇನ್ನು ಹಾಸ್ಟೆಲ್ಲಿನಲ್ಲಿ ಓದುವ ಇವರ ಮಕ್ಕಳು ಇಲ್ಲಿಗೆ ಬಂದರೆ ಬೇಜಾರು ಮಾಡಿಕೊಳ್ಳುತ್ತಾರೆ, ಸ್ನಾನದ ಮನೆ ಹಾಳಾಗಲಿ, ಕುಡಿಯುವ ನೀರೇ ಇಲ್ಲ. ದಿನ ಅನ್ನ, ಹುಣಸೇಹಣ್ಣು ಗೊಜ್ಜು. ಅದೇ ಹಾಸ್ಟೆಲ್ಲಿನಲ್ಲಿ ದಿನಾ ಒಳ್ಳೊಳ್ಳೇ ತಿಂಡಿ, ಸ್ನಾನಕ್ಕೆ ಬಿಸಿ ನೀರು, ಮಲಗೋಕೆ ಕಾಟು. ಹಬ್ಬಗಳಲ್ಲಿ ಹಾಸ್ಟೆಲ್ಲಿಗೆ ರಜೆ ಕೊಟ್ಟರೆ ನರಕಕ್ಕೆ ಬರುವವರಂತೆ ಈ ಮಕ್ಕಳು ಕೇರಿಗೆ ಬರುತ್ತಾರೆ.

ಇವತ್ತಿನವರೆಗೂ ಇವರ ಬದುಕು ಹಸನಾಗಿಲ್ಲ. ಈ ಪರಿ ಬಡಾಯಿ ಹೊಡೆಯುವ ಸಂಘಸಂಸ್ಥೆಗಳಿಂದ ಯಾವ ಸವಲತ್ತೂ ಕೊಡಿಸೋಕೆ ಆಗಲಿಲ್ಲ. ಸದ್ಯ ಪಡಿತರ ಇಲ್ಲದಿದ್ದರೆ ಸಾವೇ ಗತಿ ಎಂಬುದು ಇಲ್ಲಿನ ಹಿರಿಯ ಮಹಿಳೆಯ ಮನದ ಮಾತು. ಕಳೆದ ದಸರಾದಲ್ಲಿ ಇವರ ಜನಾಂಗ ಒಂದುಗೂಡಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಮಾಡಿ ಕರ್ನಾಟಕದಾದ್ಯಂತ ಗಮನ ಸೆಳೆದಿದ್ದರೂ ಕೂಡ ಇವರಿಗೆ ಹಕ್ಕುಪತ್ರ ವಿತರಿಸುವುದಿರಲಿ, ಕುಡಿಯಲು ನೀರು ಸಹ ಕೊಟ್ಟಿಲ್ಲ. ಹೇಳಿಕೊಳ್ಳುವುದಕ್ಕೆ ಅಂತ ಒಂದೇ ಒಂದು ಶೌಚಾಲಯವೂ ಇಲ್ಲ. ಬೀದಿಯಲ್ಲಿ ಮಲಗುವ ಇಲ್ಲಿನ ಹೆಣ್ಣುಮಕ್ಕಳನ್ನು ನಾಗರಿಕ ಸಮಾಜದ ನಾವು ಅತ್ಯಾಚಾರ ಮಾಡಿ ಕೊಲ್ಲುತ್ತೇವೆ. ನಾವು ಸ್ವಚ್ಛ ಭಾರತ್, ಗುಡಿಸಲು ಮುಕ್ತಭಾರತ, ಬಯಲು ಬಹಿರ್ದೆಸೆ ಭಾರತ, ಸ್ವಚ್ಛನಗರ ಎಂದು ದೇಶದ ದೊಡ್ಡ ನಗರಗಳಲ್ಲಿ ಹತ್ತಾರು ಅಡಿ ಫ್ಲೆಕ್ಸ್ ಹಾಕಿ ನಮ್ಮದು ಸಮೃದ್ಧ ಭಾರತ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಇಲ್ಲಿ ನೋಡಿದರೆ; ಬೆಳಕಾದರೆ ಯಾರಾದರೂ ಕಂಡು ಬಿಡುತ್ತಾರೋ ಎಂದು ಭಯದಿಂದ ಪೊದೆಗಳಿಗೆ ಹೋಗಿ ಬರುವ ಹೆಂಗಸರ ಚಿತ್ರವೇ!

” ಅಂದಹಾಗೆ ಇದು ಕರ್ನಾಟಕದ ಯಾವುದೋ ಮೂಲೆಯಲ್ಲಿ ಇರುವ ಕುಗ್ರಾಮದ ಚಿತ್ರಣವಲ್ಲ ಅಥವಾ ಅಲೆಮಾರಿಯಂತೆ ತಿರುಗುತ್ತಾ ಯಾವುದೋ ಊರಿನಲ್ಲಿ ಅಚಾನಕ್ಕಾಗಿ ಸಿಕ್ಕ ಶಿಳ್ಳೇಕ್ಯಾತರ ಗುಂಪೂ ಅಲ್ಲ. ಮೈಸೂರಿನ ಹೆಬ್ಬಾಳದ ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿರುವ ಏಕಲವ್ಯನಗರದ ದಿನನಿತ್ಯದ ಕಥೆ”

ಆಂದೋಲನ ಡೆಸ್ಕ್

Recent Posts

ಹಲವು ತಿಂಗಳುಗಳ ಬಳಿಕ ಕನ್ನಡ ಚಿತ್ರಕ್ಕೆ ಚಿಂದಿ ರೇಟಿಂಗ್ಸ್‌

ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…

10 hours ago

ಮಂಡ್ಯ: ಸಣ್ಣ, ಅತಿಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ: ಡಾ.ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…

10 hours ago

ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆ: ಶಾಸಕ ರವಿಕುಮಾರ್‌

ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್‌ ತಿಳಿಸಿದರು. ಮಂಡ್ಯ ತಾಲ್ಲೂಕಿನ…

11 hours ago

ನಾನು ಸಾಮಾಜಿಕ‌ ಬಹಿಷ್ಕಾರದ ಕ್ರೂರತೆ ನೋಡಿ ಬೆಳೆದವನು: ಪರಿಷತ್ ಸದಸ್ಯ ಕೆ ಶಿವಕುಮಾರ್

ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್‌ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…

11 hours ago

ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ: ಸಿಎಂ ಸಿದ್ದರಾಮಯ್ಯ ಬೇಸರ

ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…

12 hours ago

2028ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…

12 hours ago