ಹಾಡು ಪಾಡು

ದಸರಾ ಮತ್ತು ಶುದ್ಧ ಸಂತೋಷ

ಅದೊಂದು ಸರ್ವ ಧರ್ಮ ಸಮನ್ವಯದ ಯೂನಿವರ್ಸಲ್ ಆಶ್ರಮ ಹಬ್ಬದ ನೆಪದಲ್ಲಿ ಹೇಳಿದ್ದೆಲ್ಲವನ್ನೂ ತೆಗೆದುಕೊಂಡು ಹೋಗಿ ಎಂದಿನಂತೆ ಬಿಲ್ಲನ್ನೂ ಕೊಡದಿದ್ದಾಗ ನಾನೊಬ್ಬ ಕುರುಡು ಭಕ್ತೆ ಎಂದು ಖಾತರಿಯಾಯಿತೋ ಏನೋ, ಲೋಕಾಭಿರಾಮ ಬೇರೆ ರೀತಿಯಲ್ಲಿ ಪ್ರಾರಂಭವಾಯಿತು.

‘ಈ ಸಿದ್ರಾಮಯ್ಯ ಮುಸ್ಲಿಮರನ್ನ ಓಲೈಸೋದು ಸ್ವಲ್ಪ ಜಾಸ್ತಿ ಆಯ್ತು ಬಿಡಿ.’ ತಿನ್ನುತ್ತಿದ್ದ ಉಪ್ಪಿಟ್ಟಿನ ತುತ್ತು ನನ್ನ ಗಂಟಲಲ್ಲಿ ಸಿಕ್ಕಿಕೊಂಡಿತ್ತು. ‘ಯಾಕೆ ಹೀಗೆ ಹೇಳ್ತೀರಿ?’ ‘ಮತ್ತೆ ಇನ್ನೇನು? ದಸರಾ ಉದ್ಘಾಟನೆ ಬಾನುಮುಷ್ತಾಕ್ ಯಾಕೆ ಮಾಡಬೇಕು?’ ಒಂದು ನಿಮಿಷ ಸುಮ್ಮನಿದ್ದೆ.

‘ಯಾಕೆ ಮಾಡಬಾರದು? ಆಕೆ ಈ ನಾಡಿನ ತೆರಿಗೆ ಕಟ್ಟುವ ಒಬ್ಬ ಪ್ರಜೆ ಅಲ್ಲವೇ? ಜೊತೆಗೆ ಬುಕರ್ ಪ್ರಶಸ್ತಿಯಿಂದ ಕೀರ್ತಿ ತಂದುಕೊಟ್ಟಿದ್ದು ಅಷ್ಟೇ ಅಲ್ಲ, ಬಂದ ಕೋಟಿಗೂ ಮೀರಿದ ಹಣಕ್ಕೆ ತೆರಿಗೆ ಕಟ್ಟಿಲ್ಲವೇ? ದಸರಾ ಹಬ್ಬವನ್ನು ಸರ್ಕಾರ ನಡೆಸುವುದು ಪ್ರಜೆಗಳ ತೆರಿಗೆ ಹಣದಲಿ ತಾನೆ? ದಸರಾ ಹಬ್ಬದ ಪೂಜೆ ಗೀಜೆ ಎಲ್ಲ ರಾಜಮನೆತನ ಮಾಡಿಕೊಳ್ಳಲಿ. ಏನೀಗ?’ ಅತ್ತಲಿಂದ ಅರೆ ಗಳಿಗೆಯ ಮೌನ. ‘ಆದರೂ… ’ ಈಗ ಮಾತನಾಡಲೇ ಬೇಕಾಯಿತು.

ಯಾಕೆ ಸ್ವಾಮೀಜಿ? ವಿವಾದವೇ ಇಲ್ಲದ ಕಡೆ ಹಗರಣವನ್ನು ಸೃಷ್ಟಿಸುವ ಪ್ರಯತ್ನ ಯಾಕೆ?’ ಸರ್ವಧರ್ಮ ಸ್ವರೂಪಿಣೆ ಎಂದು ರಾಮಕೃಷ್ಣನನ್ನು ಸ್ತುತಿಸುವವರ ಪಾಡೂ ಇದೆಯೇ? ನಗರದಲ್ಲಿ, ಪೇಟೆಯಲ್ಲಿ, … ಎಲ್ಲ ಕಡೆ? ಆದರೂ ಮುಂದುವರಿಸಿದೆ. ‘ನಾನು ಬಾನು ಅವರ ವಿಸ್ತ ತ ಸಂದರ್ಶನವನ್ನು ಹಾಸನದ ಅವರ ಮನೆಗೇ ಹೋಗಿ ಮಾಡಿದ್ದೆ. ಅಲ್ಲಿಯ ಮುಲ್ಲಾ ಆಕೆ ಕಥೆ ಬರೆಯುತ್ತಾರೆ ಅಂತ ಮಸೀದಿಯಿಂದ ಜೋರು ದನಿಯಲ್ಲಿ ಬಹಿಷ್ಕಾರ ಹಾಕಿದ್ದರ ಬಗ್ಗೆ ಕಿಟಕಿಯಿಂದ ಕಾಣುತ್ತಿದ್ದ ಮಸೀದಿಯ ಗೋಪುರವನ್ನು ತೋರಿಸಿ ಹೇಳಿದ್ದರು. ಆಕೆಯ ದನಿಯಲ್ಲಿ ನೋವಿತ್ತು. ಬುಕರ್ ಬಂದಾಗ ಈ ದೇಶದ ಪ್ರಧಾನಿ ಆಕೆಯನ್ನು ಅಭಿನಂದಿಸುವ ಸೌಜನ್ಯವನ್ನೂ ತೋರಿಸಲಿಲ್ಲ.

ಎರಡೆರಡು ಮುಲ್ಲಾಗಳ ನಡುವೆ ಬರಹಗಾರ್ತಿಯೊಬ್ಬರು ಅನುಭವಿಸುವ ನೋವು ನಮಗೆ ಅರ್ಥವಾಗುತ್ತದೆಯೇ?’ ಯಾಕೋ ಏನೋ ಸರಿಯಿಲ್ಲ ಅಂತನ್ನಿಸಿತೋ ಏನೋ, ಮಾತನ್ನೇ ಬದಲಾಯಿಸಲಾಯಿತು. ಯಾಕೆ ನಾನು ಇಂತಹ ಸ್ಥಳಗಳಿಗೆ ಹೋಗುತ್ತಿದ್ದೇನೆ ಎಂದು ಮನಸ್ಸು ಬಾಡಿ ಹೋಗಿತ್ತು. ಕುರುಡು ಭಕ್ತೆಯಂತೆ ನಟಿಸಬೇಕಾದ ನೋವಿನ ಜೊತೆಗೆ ಮನಸ್ಸು ಇನ್ನಷ್ಟು ಕಹಿಯಾಗಿತ್ತು. ಒಂದು ರಾಜಕೀಯ ಜಂತು ಅತ್ತ ಚುನಾವಣೆಗೆ ಟಿಕೆಟ್ಟೂ ಸಿಗದೆ ಬಾಲ ಮುದುರಿಕೊಂಡಿರುವಾಗ ಇಂಥ ಅವಕಾಶವನ್ನು ಬಿಡುತ್ತದೆಯೇ? ಹೇಗಾದರೂ ತಾನು ಬದುಕಿದ್ದೇನೆ ಎಂದು ತೋರಿಸಿಕೊಳ್ಳಬೇಕಲ್ಲ? ಬಾನು ಮುಷ್ತಾಕ್ ಯಾಕೆ ದಸರಾ ಉದ್ಘಾಟನೆ ಮಾಡಬೇಕು ಎಂಬ ನೆಪದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳಲು ಹೈಕೋರ್ಟು ಮೆಟ್ಟಲು ಹತ್ತಿತ್ತು. ಅಪೀಲು ನೆಗೆದು ಬಿದ್ದು ತೆಪ್ಪಗಾಯಿತು. ಪೇಪರಲ್ಲಿ ಹೆಸರು ಬಂತಲ್ಲ, ಸದ್ಯಕ್ಕೆ ಅಷ್ಟು ಸಾಕು!  ಬೇಸರದ ವಿಷಯವೆಂದರೆ ಈ ಜಂತುವಿನ ಮತ್ತು ಆತನ ಚೇಲಾಗಳ ಹೆಸರುಗಳು ಈ ಯೂನಿವರ್ಸಲ್ ಆಶ್ರಮದಲ್ಲಿ ಸಹ ಆಗಾಗ್ಗೆ ಕೇಳಿಬರುತ್ತಿರುತ್ತವೆ.

ಸುತ್ತಮುತ್ತ ಇರುವ ಮಂದಿ ಕೂಡ ಬಾಯಿ ಬಿಟ್ಟರೆ ಇಂಥದ್ದೇ ವಿಷ ಎನ್ನುವುದು ಸಾಕಷ್ಟು ಸಲ ಅನುಭವಕ್ಕೆ ಬಂದ ಮೇಲೆ ಅಪಾರ್ಟ್ ಮೆಂಟಿನ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುವುದು ಬಿಟ್ಟಿದ್ದೇನೆ. ನನ್ನ ಮನೆಯ ಮಂದಿಗೂ ಇದನ್ನೇ ಹೇಳಿದ್ದೆ; ‘ನೀವು ಕುಮ್ಮಕ್ಕು ಕೊಡುತ್ತಿರುವ ಈ ವಿಷ ನಿಮ್ಮ ಮಕ್ಕಳನ್ನೇ ಬಲಿ ತೆಗೆದುಕೊಳ್ಳುತ್ತದೆ, ನೆನಪಿರಲಿ!’ ಕಣ್ಣಿಗೆ ಕಣ್ಣು ಕಿತ್ತುಕೊಂಡು ಎಲ್ಲರೂ ಕುರುಡಾಗಿ ಹೋಗಲಿ, ಏನಂತೆ ಅಂತನ್ನಿಸುವ ಸ್ಥಿತಿಗೆ ಬಂದಿದ್ದೇನೆ.

ಈದ್ ಹಬ್ಬದ ದಿನ ನನ್ನ ಸ್ನೇಹಿತರ ತೋಟಕ್ಕೆ ಬೆಳಗಿನ ಉಪಾಹಾರವನ್ನು ಕಟ್ಟಿಸಿಕೊಂಡು ಹೋಗಿದ್ದೆ. ‘ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಶುಭಾಶಯಗಳು’ ಎಂದು ಬಂದಿದ್ದ ಹಲವಾರು ಮೆಸೇಜುಗಳನ್ನು ತೋರಿಸಿದರು. ‘ಹಿಂದೂ ಬಾಂಧವರಿಗೆ ಧನ್ಯವಾದಗಳು,’ ಎಂದು ಪ್ರತ್ಯುತ್ತರ ಕಳುಹಿಸಿದೆ, ಅವರಿಗೆ ಇಷ್ಟವಾಗಲಿಲ್ಲ ಎಂದರು. ‘ಭೇಷ್ ಉತ್ತರ!’ ಎಂದೆ. ಇದೊಂದು ಮಾಧ್ಯಮಗಳು, ರಾಜಕಾರಣಿಗಳು ಹುಟ್ಟುಹಾಕಿರುವ ಕಾಯಿಲೆ. ಉಳಿದಂತೆ, ‘ನಾಡಿನ ಸಮಸ್ತ ಜನತೆಗೆ ಗಣೇಶನ ಹಬ್ಬದ, ಯುಗಾದಿ ಹಬ್ಬದ ಶುಭಾಶಯಗಳು’ ಎಂದೆಲ್ಲಾ ಹೇಳುವ ಈ ಪುಢಾರಿಗಳು ‘ಮುಸ್ಲಿಂ ಬಾಂಧವರಿಗೆ’ ಎಂದು ಧರ್ಮ ಮಾಡುವ ಧ್ವನಿಯಲ್ಲಿ ಹೇಳುತ್ತಾರೆ. ಸಮಸ್ತ ಜನತೆ ಗಣೇಶ , ಯುಗಾದಿ ಹಬ್ಬಗಳನ್ನು ಮಾಡುತ್ತಾರೆಯೇ?

ಸಮುದ್ರದ ತೀರದಲ್ಲಿ ದೂರಕ್ಕೆ ಚೆಂಡನ್ನು ಎಸೆದು ನಮ್ಮ ನಾಯಿಯನ್ನು ಆಟವಾಡಿಸುತ್ತಿದ್ದ ಗಳಿಗೆಗಳು ತುಂಬ ನೆನಪಿಗೆ ಬರುತ್ತವೆ. ಬೆಳಗಿನ ಬಿಸಿಲಲ್ಲಿ ಕಂದುಬಣ್ಣದ ಮೊಜೊ ನೆಗೆನೆಗೆದು ಅದನ್ನು ತರುತ್ತಿದ್ದಾಗ ಶುದ್ಧ ಸಂತೋಷವೆಂದರೆ ಇದೇ ಅಂತನ್ನಿಸುತ್ತಿತ್ತು. ಸಹಜದಂತೆ ಕಾಣುವ ಇಂತಹ ಕಿರಿಕಿರಿ ಮನಸ್ಥಿತಿಯಲ್ಲಿ ‘ಚಾರಿತ್ರಿಕ ನೆಲೆಯಲ್ಲಿ ದಸರಾ’ ಎನ್ನುವ ಬಗ್ಗೆ ಈ ಭಾನುವಾರಕ್ಕೆ ಲೇಖನ ಬರೆದುಕೊಡಿ ಎಂದು ಆಂದೋಲನ ಹೇಳಿದಾಗ ಖುಷಿಯಾಗಿತ್ತು. ಶುದ್ಧ ಸಂತೋಷದ ಗಳಿಗೆಗಳು ಬೆರಳಿನ ಮೇಲೆ ಲೆಕ್ಕ ಹಾಕಬಹುದಾದ ಸ್ಥಿತಿಗೆ ಬಂದು ನಿಂತಿದೆ ಬದುಕು!

” ಎರಡೆರಡು ಮುಲ್ಲಾಗಳ ನಡುವೆ ಬರಹಗಾರ್ತಿಯೊಬ್ಬರು ಅನುಭವಿಸುವ ನೋವು ನಮಗೆ ಅರ್ಥವಾಗುತ್ತದೆಯೇ?’”

-ಭಾರತಿ ಹರಿಶಂಕರ್

ಆಂದೋಲನ ಡೆಸ್ಕ್

Recent Posts

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

10 mins ago

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…

35 mins ago

ಸಮಾನತೆ ತರಲೆಂದೇ ಗ್ಯಾರಂಟಿ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಿ ಮಾಡ್ತಿರೋದು: ಸಿಎಂ ಸಿದ್ದರಾಮಯ್ಯ

ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…

1 hour ago

ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ

ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್‌ ಮುಂದೆ…

2 hours ago

ಮೈಸೂರು| ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…

2 hours ago

ಪುರಾವೆ ಇಲ್ಲದೇ ಯಾರ ಮೇಲೂ ತನಿಖೆ ಮಾಡಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…

2 hours ago