ಹಾಡು ಪಾಡು

ಬಿಕೋ ಎನ್ನುತ್ತಿರುವ ದುಬಾಯಿ ಬೀದಿಗಳು, ಭವಿಷ್ಯದ ಕಳವಳದಲ್ಲಿ ಅನಿವಾಸಿ ಭಾರತೀಯರು

ತಾಜ್ ಗಡಿನಾಡು

ಇರಾನ್ ಮೇಲೆ ಫೆಬ್ರವರಿ ಅಂತ್ಯಕ್ಕೆ ಆರಂಭಗೊಂಡ ಅಮೆರಿಕ-ಇಸ್ರೇಲ್ ದೇಶಗಳ ಜಂಟಿ ಯುದ್ಧ ತಿಂಗಳು ಕಳೆದರೂ ಇನ್ನೂ ಅಂತ್ಯಗೊಂಡಿಲ್ಲ. ಎರಡು ಪ್ರಬಲ ಶಸ್ತ್ರಾಸ್ತ್ರ ಶಕ್ತಿಗಳಾದ ಅಮೆರಿಕ – ಇಸ್ರೇಲ್ ಸೇರಿ ಮೊದಲ ದಿನವೇ ಇರಾನಿನ ಪರಮೋಚ್ಚ ನಾಯಕನ ಹತ್ಯೆ ನಡೆಸಿದಾಗ ಇನ್ನೇನು ಒಂದೇ ವಾರದಲ್ಲಿ ಇರಾನ್ ಎಂಬ ಜಗತ್ತಿನ ತೈಲ ಸಂಪದ್ಭರಿತ ದೇಶವು ಶರಣಾಗಿ ಅಲ್ಲಿ ಅಮೆರಿಕ ಬೆಂಬಲಿತ ಹೊಸ ಆಡಳಿತ ಆರಂಭವಾಗುತ್ತದೆಯೆಂದೇ ಬಹುತೇಕ ಎಲ್ಲರೂ ಅಂದುಕೊಂಡಿದ್ದರು.

ಆದರೆ ಎಲ್ಲರ ಊಹೆಗೂ ಮೀರಿ ಇರಾನ್ ಒಂಟಿಯಾಗಿ ಪ್ರಬಲ ಪ್ರತಿ ಹೋರಾಟ ನಡೆಸಿ, ಎದುರಾಳಿಗಳ ಎಲ್ಲ ಲೆಕ್ಕಾಚಾರಗಳನ್ನೂ ಅಡಿಮೇಲುಗೊಳಿಸಿ ಇಡೀ ಜಗತ್ತೇ ಕುತೂಹಲದಿಂದ ತನ್ನತ್ತ ನೋಡುವಂತೆ ಮಾಡು ತ್ತಿದೆ. ದಶಕಗಳಿಂದ ಅಮೆರಿಕ ತನ್ನ ಮೇಲೆ ಹೇರಿದ್ದ ಆರ್ಥಿಕ ದಿಗ್ಬಂಧನಗಳ ನಡುವೆಯೂ ಆ ದೇಶ ಅಲುಗಾಡದೆ ನಿಂತದ್ದೇ ಒಂದು ಇತಿಹಾಸ. ಯುದ್ಧವು ಅದೆಷ್ಟೋ ಮನುಷ್ಯ ಜೀವಗಳನ್ನೂ, ಜೀವನಗಳನ್ನೂ ಬಲಿ ತೆಗೆದುಕೊಳ್ಳುತ್ತಿರುವುದರ ಜತೆಗೆ ಇಡೀ ಜಗತ್ತಿನ ಆರ್ಥಿಕತೆಯನ್ನೇ ಅಲ್ಲೋಲ ಕಲ್ಲೋಲಗೊಳಿಸುತ್ತಿರುವುದು ಮಾತ್ರ ಜಗತ್ತಿನ ಮೂಲೆಮೂಲೆಯಲ್ಲಿರುವ ಪ್ರತಿಯೊಬ್ಬನಲ್ಲೂ ‘ಮುಂದೇನು?’ ಎಂಬ ಆತಂಕವನ್ನುಂಟುಮಾಡಿದೆ.

ಮೂರು ದೇಶಗಳ ಯುದ್ಧದ ಪರಿಣಾಮವು ಜಗತ್ತಿನ ಮೇಲೆ ಆಗುತ್ತಿರೋದು ಪರೋಕ್ಷವಾಗಿಯಾದರೆ, ವಿಚಿತ್ರ ಎಂಬಂತೆ ಮಧ್ಯಪ್ರಾಚ್ಯದಲ್ಲಿರುವ ಸಣ್ಣ ಸಣ್ಣ ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ದೇಶಗಳಿಗೆ ಯುದ್ಧ ಬೇಡವಾದರೂ ಅದರ ವರ್ತುಲದೊಳಗೆ ಸಿಲುಕಿ ಬಲೆಯೊಳಗಿನ ಜೇಡನಂತೆ ಚಡಪಡಿಸುವಂತಾಗಿದೆ. ಅಮೆರಿಕವು ಇರಾನ್‌ನ್ನು ಬಗ್ಗು ಬಡಿಯಲು ಅಮೆರಿಕದಿಂದ ದಾಳಿ ಮಾಡದೆ ಈ ಗಲ್ಛ್ ರಾಷ್ಟ್ರಗಳಲ್ಲಿರುವ ತನ್ನ ಸೇನಾನೆಲೆಗಳಿಂದ ಪಕ್ಕದ ಇರಾನಿನ ಮೇಲೆ ಸುಲಭವಾಗಿ ಎರಗಿತು. ಉತ್ತರ ನೀಡಲಾರಂಭಿಸಿದ ಇರಾನ್ ಕೂಡ ಈ ಪುಟ್ಟ ಪುಟ್ಟ ದೇಶಗಳಲ್ಲಿರುವ ಅಮೆರಿಕದ ನೆಲೆಗಳನ್ನು ಟಾರ್ಗೆಟ್ ಮಾಡಿ ಮಿಸೈಲ್, ಡ್ರೋನ್‌ಗಳ ಮೂಲಕ ನಿರಂತರ ದಾಳಿ ಮಾಡಲಾರಂಭಿಸಿತು. ನಿಜವಾಗಿ ಈ ಯುದ್ಧದಿಂದ ಅಮೆರಿಕಕ್ಕೆ ಆಗುವ ನಷ್ಟಕ್ಕಿಂತಲೂ ಅರಬ್ ರಾಷ್ಟ್ರಗಳು ನಷ್ಟ ಅನುಭವಿಸಬೇಕಾಯಿತು. ಮತ್ತೂ ವಿಶೇಷ ಏನೆಂದರೆ ಈ ರಾಷ್ಟ್ರಗಳ ಮೇಲಿನ ದಾಳಿಯ ನೇರ ಪರಿಣಾಮ ತಾಗುವುದು ಮಾತ್ರ ದೂರದಲ್ಲಿರುವ ಭಾರತದ ಮೇಲೆ!

ಎಲ್ಲಾ ಅರಬ್ ದೇಶಗಳ ಜನಸಂಖ್ಯೆಯ ಒಂದು ದೊಡ್ಡ ಪಾಲು ಭಾರತೀಯರದ್ದಾಗಿದೆ. ಯುಎಇಯಲ್ಲಿ ಬರೋಬ್ಬರಿ ನಾಲ್ಕು ಮಿಲಿಯನ್ಗಿಂತಲೂ ಅಧಿಕ ಭಾರತೀಯರಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯ ಶೇ.೩೬ ಪಾಲು ಭಾರತೀಯರದ್ದು. ಇಲ್ಲಿ ನಿಕೃಷ್ಟ ಸಂಬಳ ಪಡೆಯುವ ಭಾರತೀಯ ಕೂಲಿ ಕಾರ್ಮಿಕರಿದ್ದಾರೆ. ಬಹಳ ದೊಡ್ಡ ಶ್ರೀಮಂತರೂ, ಇಡೀ ದೇಶದ ಆರ್ಥಿಕತೆಯಲ್ಲಿ ಹಿಡಿತ ಇರುವ ದೊಡ್ಡ ಉದ್ಯಮಿಗಳೂ ಆದ ಭಾರತೀಯರೂ ಇದ್ದಾರೆ.

ಆಸ್ಪತ್ರೆಗಳು, ವೈದ್ಯರು, ನರ್ಸುಗಳು, ಕೈಗಾರಿಕೆಗಳು, ಇಂಜಿನಿಯರ್‌ಗಳು, ಶಿಕ್ಷಣ ಸಂಸ್ಥೆಗಳು, ಪ್ರೊಫೆಸರ್‌ಗಳು, ಹೋಟೆಲ್‌ಗಳು, ರಿಯಲ್ ಎಸ್ಟೇಟ್ ಉದ್ಯಮ… ಹೀಗೆ ಎಲ್ಲೆಂದರಲ್ಲಿ ಬಂಡವಾಳ ಹೂಡಿಕೆ ಮತ್ತು ಮಾನವ ಸಂಪನ್ಮೂಲಗಳಿರುವುದರಿಂದ ಭಾರತೀಯರಿಗೆ ಇಲ್ಲಿ ವಿಶೇಷ ಹಿಡಿತವಿದೆ, ಅಷ್ಟೇ ಗೌರವವೂ ಇದೆ.

ಭಾರತದ ಸೆಲೆಬ್ರಿಟಿಗಳು, ಶ್ರೀಮಂತರು ಅಲ್ಲಿ Tax, GSTಅದೂ ಇದೂ ಅಂತ ಕಟ್ಟುವುದನ್ನು ತಪ್ಪಿಸಲು ತಮ್ಮ ಸಂಪತ್ತನ್ನು ನೇರವಾಗಿ ಎತ್ತಿಕೊಂಡು ಬಂದು ಯುಎಇಯಲ್ಲಿ ಸುರಿಯುತ್ತಾರೆ. ಇಲ್ಲಿ ಐಷಾರಾಮಿ ಮನೆ ಕೊಳ್ಳುತ್ತಾರೆ. ಅತ್ಯಂತ ಕಡಿಮೆ ದರದ ಟ್ಯಾಕ್ಸ್, ಸುಲಭವಾದ ವ್ಯವಹಾರ ಸ್ನೇಹಿ ಡಾಕ್ಯುಮೆಂಟೇಶನ್ ಪ್ರೊಸೀಜರುಗಳು, ಭ್ರಷ್ಟಾಚಾರ ರಹಿತ ದಕ್ಷ ವ್ಯವಸ್ಥೆ, ಜಗತ್ತಿನ ದಕ್ಷರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಪೊಲೀಸ್ ವ್ಯವಸ್ಥೆ, ಜಾತಿ-ಧರ್ಮಗಳ ನಡುವಿನ ಗಲಭೆ, ಕೊಲೆ, ಅತ್ಯಾಚಾರ ಯಾವುದರ ಭಯವೂ ಇಲ್ಲದೆ ನಿಶ್ಚಿಂತೆ ಯಿಂದ ಇರಬಹುದಾದ ಸೋಶಿಯಲೀ ಸೊಫೆಸ್ಟಿಕೇ ಟೆಡ್ ಜೀವನ ಶೈಲಿ, ಹಾಕಿದ ದುಡ್ಡು ವೇಗವಾಗಿ ದುಪ್ಪಟ್ಟಾಗಬಲ್ಲ ಬ್ಯುಸಿನೆಸ್ ಅವಕಾಶಗಳು ಮುಂತಾದವೆಲ್ಲ ಭಾರತೀಯರೂ ಸೇರಿದಂತೆ ವಿದೇಶಿಗರು ಇಲ್ಲಿ ಹೇರಳವಾಗಿ ಬಂಡವಾಳ ಹೂಡಿಕೆ ಮಾಡಲು, ಇಲ್ಲಿ ಬಂದು ನೆಲೆಸಲು ಪ್ರಮುಖ ಕಾರಣ.

ಆದರೆ ಅದೆಲ್ಲಕ್ಕಿಂತಲೂ ದೊಡ್ಡ ಕಾರಣ ಇದ್ದದ್ದು ಜಗತ್ತಿನ ಶ್ರೀಮಂತರೆಲ್ಲ ತಮ್ಮ ದುಡ್ಡನ್ನು ಸುರಿದು ನಿಶ್ಚಿಂತೆಯಿಂದ ಮಲಗಬಲ್ಲ ‘ಸೇಫೆಸ್ಟ್ ಕಂಟ್ರಿ’ ಎಂಬ ಇಲ್ಲಿನ ಹೆಗ್ಗಳಿಕೆ. ಆದರೆ ಈಗ ಉರುಳು ನೇರವಾಗಿ ಬಂದು ಬಿದ್ದದ್ದೂ ಇಲ್ಲಿನ ಈ ಸೇಫೆಸ್ಟ್ ಕಂಟ್ರಿ ಎಂಬ ಪಟ್ಟಕ್ಕೇ?! ತನ್ನದಲ್ಲದ ತಪ್ಪಿಗೆ ‘ಇಬ್ಬರ ಜಗಳದಲ್ಲಿ ಮೂರನೆಯವನಿಗೆ ನಷ್ಟ’ ಎಂಬಂತಾಗಿಬಿಟ್ಟಿದೆ ಈಗ ಇಲ್ಲಿನ ಪರಿಸ್ಥಿತಿ! ಆರ್ಥಿಕ ವಲಯ ದೊಡ್ಡ ನಷ್ಟದ ಆತಂಕ ಎದುರಿಸುತ್ತಿದೆ. ಇದರ ನೇರ ಪರಿಣಾಮರಿಂಗಣಿಸುವುದು ಮಾತ್ರ ನಮ್ಮ ಭಾರತದಲ್ಲಿ! ಭಾರತಕ್ಕೆ ವರ್ಷವೊಂದರಲ್ಲಿ Foreign Remittance ಮೂಲಕ ಹರಿದು ಬರುವ ಒಟ್ಟು ಹಣದಲ್ಲಿ ದೊಡ್ಡ ಪಾಲು ಯುಎಇಗೆ ಇದೆ.

ನಾನು ಕಂಡಂತೆ ಯುದ್ಧ ಆರಂಭವಾಗಿ ಇಲ್ಲಿಯ ತನಕವೂ ಜೀವಹಾನಿಯ ಭಯ ಇಲ್ಲಿನ ಅನಿವಾಸಿ ಭಾರತೀಯರಿಗಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿನ ಜನರ ಮೇಲೆ ನೇರ ದಾಳಿ ಮಾಡಲ್ಲ ಎಂದು ಇರಾನ್ ಕೂಡ ಹೇಳಿದೆ. ಅದು ಜನರನ್ನು ಟಾರ್ಗೆಟ್ ಮಾಡಿ ಒಂದು ಕ್ಷಿಪಣಿಯನ್ನೂ ಬಿಟ್ಟಿಲ್ಲ. ಇರಾನ್‌ನ ಗುರಿ ಹೊರವಲಯದಲ್ಲಿರುವ ಅಮೆರಿಕದ ಸೇನಾನೆಲೆಗಳು, ಅಮೆರಿಕದ ಬಂಡವಾಳ ಇರುವ ವಹಿವಾಟುಗಳು, ಅವರ ತೈಲ ಶುದ್ಧೀಕರಣ ಘಟಕಗಳು ಮುಂತಾದವು. ಹಾಗೆ ಟಾರ್ಗೆಟ್ ಮಾಡಿ ಬರುವ ಕ್ಷಿಪಣಿಗಳನ್ನೂ ಆಗಸದಲ್ಲೇ ಸಶಕ್ತವಾಗಿ intercept ಮಾಡಲಾಗುತ್ತದೆ. ಅದನ್ನು ಬಾಲ್ಕನಿಯಲ್ಲಿ ಕುಳಿತು ಆರಾಮವಾಗಿ ನೋಡಬಹುದು. ಈ ಪ್ರಕ್ರಿಯೆಯಲ್ಲಿ ಉಂಟಾಗುವ ಘರ್ಷಣೆಗೆ ಕೆಲವೊಂದು ಕ್ಷಿಪಣಿಗಳ ಬಿಡಿಭಾಗಗಳು ಚಿಮ್ಮಿ ಎಲ್ಲೆಲ್ಲೋ ಬಿದ್ದು ಅದರಿಂದ Airport ಸಮೇತ ಕೆಲವು ಬೆರಳೆಣಿಕೆಯ ಕಟ್ಟಡಗಳ ಮೇಲೆ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ವೇಗದಲ್ಲಿ ಹೆಚ್ಚಿನ ನಾಶಗಳಿಲ್ಲದೆ ಬೆಂಕಿಯನ್ನು ನಂದಿಸಲಾಗುತ್ತಿದೆ. ಇಂತಹ ಅವಘಡಗಳಿಂದ ಇಲ್ಲಿಯ ತನಕ ಸುಮಾರು ಹತ್ತಕ್ಕೂ ಮೇಲ್ಪಟ್ಟು ಭಾರತೀಯರ ಜೀವ ಹೋಗಿದೆ.

ಭಾರತೀಯ ದೃಶ್ಯ ಮಾಧ್ಯಮಗಳು ದೊಡ್ಡ ಟೈಟಲುಗಳಲ್ಲಿ ಇಡೀ ದುಬಾಯಿ ಬೆಂಕಿಯಿಂದ ಧಗಧಗ ಹೊತ್ತುತ್ತಿದೆ ಎಂದು ತೋರಿಸುತ್ತಿರುವುದನ್ನು ನಾವಿಲ್ಲಿ ಕುಳಿತು ಮುಗುಳ್ನಗೆಯೊಂದಿಗೆ ನೋಡುತ್ತಿರುತ್ತೇವೆ. ನಿಜವಾಗಿ ಇಲ್ಲಿ ಜೀವಹಾನಿಯ ಭಯಕ್ಕಿಂತಲೂ ನಮ್ಮೆಲ್ಲರಿಗೆ ಇರುವ ಆತಂಕವೇ ಬೇರೆ. ಆದರೆ ಆ ಕುರಿತು ನಮ್ಮ ಮಾಧ್ಯಮಗಳು ಅಷ್ಟೊಂದು ಮುತುವರ್ಜಿ ವಹಿಸಿದಂತಿಲ್ಲ!

ಈಗಾಗಲೇ ಯುದ್ಧದ ಕಾರಣಕ್ಕೆ ಸಾವಿರಗಟ್ಟಲೆ ಭಾರತೀಯರು ಕೆಲಸ ಕಳೆದುಕೊಂಡಾಗಿದೆ. ಅದೆಷ್ಟೋ ಜನರು ಕೆಲಸ ಇಲ್ಲದೆ ರೂಮಲ್ಲಿ ಕುಳಿತು ತಮ್ಮ ಹಾಗೂ ಕುಟುಂಬದ ಭವಿಷ್ಯದ ಕುರಿತು ಮಂಥನ ನಡೆಸುತ್ತಿದ್ದಾರೆ. ಟೂರಿಸಂ ಅನ್ನೇ ನೆಚ್ಚಿಕೊಂಡಿರುವ, ಸದಾ ಪಾಶ್ಚಿಮಾತ್ಯ ಟೂರಿಸ್ಟ್‌ಗಳಿಂದ, ಹೂಡಿಕೆದಾರರಿಂದ ತುಂಬಿ ತುಳುಕುತ್ತಿದ್ದ ದುಬಾಯಿಯ ಅದೆಷ್ಟೋ ಐಷಾರಾಮಿ ಹೋಟೆಲ್‌ಗಳು ಬಿಕೋ ಎನ್ನುತ್ತಿವೆ.

ಲಕ್ಷಗಟ್ಟಲೆ ಭಾರತೀಯರು ಇಂತಹ ಸ್ಟಾರ್ ಹೋಟೆಲ್‌ಗಳಲ್ಲಿ, ಬೀಚ್ ಕ್ಲಬ್ ಮುಂತಾದೆಡೆ ಉದ್ಯೋಗದಲ್ಲಿದ್ದು ಬಹಳಷ್ಟು ಜನ ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಭರ್ಜರಿಯಾಗಿ ಸಾಗುತ್ತಿದ್ದ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಈ ಯುದ್ಧದ ಕಾಲ ಹೊಸ ಸವಾಲು. ಅನಿಶ್ಚಿತತೆಯ ಕಾರಣ ವಿದೇಶಿಗರು ಮುಂದಿನ ಕೆಲವು ಸಮಯ ಹೂಡಿಕೆ ಮಾಡಲು ಹಿಂಜರಿಯುವ ಆತಂಕ ಎದುರಾಗಿದೆ. ಬಹಳ ಜನ ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ.  ಆಮದು – ರಫ್ತಿನಲ್ಲುಂಟಾದ ತಲ್ಲಣಗಳಿಂದ ಕಾರ್ಗೋ ಕ್ಷೇತ್ರದಲ್ಲಿ ದುಡಿಯುತ್ತಿದ್ದ ಸುಮಾರು ಭಾರತೀಯರಿಗೆ ಕೆಲಸವಿಲ್ಲದಾಗಿದೆ. ದೊಡ್ಡ ಸಂಖ್ಯೆಯ ಕಾರ್ಮಿಕರಿರುವ ಕಾರ್ಖಾನೆಗಳಲ್ಲಿ ಉತ್ಪಾದನೆ ಕಡಿಮೆಯಾಗಿ ಕೆಲಸ ಕಳೆದುಕೊಂಡವರಿದ್ದಾರೆ.

ಈ ಸಂದರ್ಭದ ಲಾಭವನ್ನು ಬಾಚಿಕೊಳ್ಳಲು ನಮ್ಮ ವಿಮಾನಯಾನ ಸಂಸ್ಥೆಗಳು ಟಿಕೆಟ್‌ಗೆ ಮೂರು ಪಾಲು ಸೇರಿಸಿ ಸುಲಿಗೆ ಮಾಡುತ್ತಿರುವುದರಿಂದ ಊರಿಗೆ ತೆರಳದೇ ರೂಮಲ್ಲಿ ಕುಳಿತವರಿದ್ದಾರೆ. ಇದೆಲ್ಲದರ ಮಧ್ಯೆ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಶಾರ್ಜಾ, ಅಜ್ಮಾನ್‌ನಂತಹ ನಗರಗಳ ಪ್ರಮುಖ ರಸ್ತೆಗಳೆಲ್ಲಾ ಸಂಪೂರ್ಣ ಮುಳುಗಿ ಹೋಗಿ, ಕೆಲಸ ಇದ್ದವರೂ ಮೂರ್ನಾಲ್ಕು ದಿನಗಳು ಕೆಲಸಕ್ಕೆ ಹೋಗಲಾಗದೆ ಚಡಪಡಿಸಿದವರಿದ್ದಾರೆ. ಇರಾನ್‌ನಿಂದ ಹೇರಳವಾಗಿ ಬರುತ್ತಿದ್ದ ಹಣ್ಣು ಹಂಪಲು, ದಿನ ನಿತ್ಯದ ತರಕಾರಿಗಳಲ್ಲಿ ಕೊರತೆ ಆಗಿರುವುದರಿಂದ ಬೆಲೆಯೂ ತೀವ್ರಗತಿಯಲ್ಲಿ ಏರುತ್ತಿದೆ. ಕೆಜಿಗೆ ನಾಲ್ಕು ದಿರ್ಹಂಗೆ ಸಿಗುತ್ತಿದ್ದ ಬಾಳೇ ಹಣ್ಣನ್ನು ಹದಿನೆಂಟು ದಿರ್ಹಂ ಕೊಟ್ಟು ಕೊಳ್ಳುವಂತಾಗಿದೆ. ಯುದ್ಧದ ಪರಿಣಾಮವಾಗಿ ಮೊನ್ನೆ ಮಾರ್ಚ್ ಒಂದರಿಂದ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆಯೂ ಉಂಟಾಯಿತು. ಇದರಿಂದಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿ ಪ್ರತಿಯೊಬ್ಬನ ಕಿಸೆಯನ್ನೂ ಬಿಸಿ ಮಾಡಲಿದೆ.

ಯುದ್ಧ ಬೇಗನೆ ಅಂತ್ಯಗೊಳ್ಳದಿದ್ದರೆ ಮುಂದಿನ ಒಂದೊಂದು ದಿನವೂ ದುಸ್ತರವಾಗಲಿದೆ. ಇದೆಲ್ಲದರ ನೇರ ಪ್ರಭಾವ ಭಾರತದ ಆರ್ಥಿಕತೆಯನ್ನು ಬಹುವಾಗಿ ತಟ್ಟಲಿದೆ. ಇಲ್ಲಿನ ಉದ್ಯೋಗ ನಷ್ಟಗಳು ಭಾರತದ ವಿದೇಶಿ ರೆಮಿಟೆನ್ಸ್ ಮೇಲೆ ಮಾರ್ದನಿಸಲಿದೆ. ಉದ್ಯೋಗವೇ ಆಧಾರವಾಗಿರುವ ಅದೆಷ್ಟೋ ಕುಟುಂಬಗಳು ಭಾರತದಲ್ಲಿವೆ. ಹಾಗಾಗಿ ಊರಲ್ಲಿ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುವ ಭಯವಿದೆ. ಇಲ್ಲಿ ಬೀಳುವ ಒಂದೊಂದು ಕ್ಷಿಪಣಿಗಳ ಸದ್ದುಗಳೂ, ಭಾರತದಲ್ಲಿರುವ ಅನಿವಾಸಿ ಉದ್ಯೋಗಿಯ ಮನೆಯ ಬಾಗಿಲನ್ನೇ ಬಡಿದಂತಾಗಿ ಅವರೂ ಆತಂಕದಲ್ಲೇ ದಿನದೂಡುವಂತಾಗಿದೆ. ಉದ್ಯೋಗ ನಷ್ಟ ಮಾತ್ರವಲ್ಲದೆ ಭಾರತೀಯರು ಇಲ್ಲಿ ಹೂಡಿಕೆ ಮಾಡಿದ ಬಂಡವಾಳಗಳಿಗೂ ನಷ್ಟದ ಭಯ ಆವರಿಸಿದೆ. ಹಾಗಾಗಿ ಯುದ್ಧ ಬೇಗನೆ ಕೊನೆಗೊಳ್ಳಲಿ ಎಂದೇ ಇಲ್ಲಿರುವ ಪ್ರತಿಯೊಬ್ಬ ಭಾರತೀಯ ಮತ್ತು ಅವನ ಕುಟುಂಬದವರು ಪ್ರಾರ್ಥಿಸುತ್ತಾರೆ. ಯಾವುದೋ ದೇಶಗಳ ನಡುವಿನ ಅಧಿಕಾರದ ಮತ್ತು ದರ್ಪದ ಜಗಳದ ಪರಿಣಾಮವನ್ನು ಇನ್ಯಾವುದೋ ದೇಶಗಳು, ಅಲ್ಲಿ ನೆಲೆ ನಿಂತವರು ಅನುಭವಿಸಬೇಕಾಗಿರುವುದು ಆಧುನಿಕ ಜಗತ್ತಿನ ರಾಜಕೀಯ ಸಮೀಕರಣದ ವೈಚಿತ್ರ್ಯವಾಗಿದೆ. ಆದರೆ ಇವೆಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಬಲಿಷ್ಠವಾಗಿ ಮೇಲೆದ್ದು ಬರುವ ಛಾತಿ ಯುಎಇಗಿದೆ.

೨೦೦೮-೨೦೧೦ರ ಅವಧಿಯಲ್ಲಿ ಇಡೀ ಜಗತ್ತಿಗೆ ಬಾಧಿಸಿದ್ದ ಆರ್ಥಿಕ ಮುಗ್ಗಟ್ಚಿನಲ್ಲಿ ಬಸವಳಿದಿದ್ದ ಯುಎಇ ಸಂಪೂರ್ಣ ಕುಗ್ಗಿ ಹೋಗಲಿದೆ ಎಂದವರೆಲ್ಲಾ ಮೂಗಿನ ಮೇಲೆ ಬೆರಳಿಡುವಂತೆ ಬಲಿಷ್ಠ ಶಕ್ತಿಯಾಗಿ ಮೇಲೆ ಬಂದಿತ್ತು. ಆ ನಂತರದ ಕೊರೊನಾ ಕಾಲ, ಅದರ ನಂತರ ಇಡೀ ಯುಎಇಯನ್ನೇ ತಿಂಗಳುಗಳ ಕಾಲ ಕದಲದಂತೆ ಸ್ತಬ್ಧವಾಗಿಸಿದ್ದ ಭಯಂಕರ ಮಳೆ ಮತ್ತು ನೆರೆ ಮುಂತಾದ ಸವಾಲುಗಳನ್ನೆಲ್ಲಾ ಕ್ಷಿಪ್ರಗತಿಯಲ್ಲಿ ಮೆಟ್ಚಿ ನಿಂತು ಬಲಾಢ್ಯ ಶಕ್ತಿಯಾಗಿ ಮೇಲೆ ಬಂದ ಜ್ವಲಂತ ಇತಿಹಾಸವನ್ನು ನೋಡಿದ ನಾವು ಇಲ್ಲಿನ ಕುರಿತು ಈಗಲೂ ಅದೇ ವಿಶ್ವಾಸ ಇರಿಸಿಕೊಂಡಿದ್ದೇವೆ. ಅದಕ್ಕೆ ಪೂರಕ ಎಂಬಂತೆ ಇಲ್ಲಿನ ಸರ್ಕಾರವು ಈಗಾಗಲೇ ಹೂಡಿಕೆದಾರರಿಗೆ ನೆರವಾಗುವಂತೆ ಅದೆಷ್ಟೋ ಬಿಲಿಯನ್‌ಗಳ ಹೊಸ ಪ್ಯಾಕೇಜೊಂದನ್ನು ಘೋಷಿಸಿದೆ.

” ಅನಿವಾಸಿಗರಾದ ನಮಗೆ ಇದು ಕರ್ಮ ಭೂಮಿ. ಜನ್ಮ ಕೊಟ್ಟ ಭೂಮಿಯಂತೆಯೇ ಅನ್ನ ಕೊಟ್ಟ ದೇಶವನ್ನೂ ಪ್ರೀತಿಸುವುದು ಭಾರತೀಯರ ಸಂಪ್ರದಾಯದ ಭಾಗವಾಗಿದೆ. ಈ ದೇಶ ಸವಾಲುಗಳನ್ನು ಮೆಟ್ಟಿ ಮೇಲೆದ್ದು ಬಂದರೆ ಅದು ಭಾರತದ ಆರ್ಥಿಕತೆಯನ್ನೂ ಗಟ್ಟಿಗೊಳಿಸುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಟಿ.ನರಸೀಪುರ: ಜೂಜಾಟದಲ್ಲಿ ಭಾಗಿಯಾಗಿದ್ದ ಐವರ ಬಂಧನ

ಟಿ.ನರಸೀಪುರ: ಜೂಜಾಟದಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸುವಲ್ಲಿ ಟಿ.ನರಸೀಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮದಲ್ಲಿ ಘಟನೆ ನಡೆದಿದ್ದು,…

13 mins ago

ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ

ವಾಷಿಂಗ್ಟನ್:‌ ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀಕರತೆ 37ನೇ ದಿನವೂ ಮುಂದುವರಿದಿದೆ. ಯುದ್ಧದ ಮಧ್ಯೆಯೂ ಅಮೇರಿಕಾ ಸೇನೆಯಿಂದ ಸುದ್ದಿಯೊಂದು ಹೊರಬಿದ್ದಿದ್ದು, ಇರಾನ್‌ನಲ್ಲಿ ಕಾಣೆಯಾಗಿದ್ದ…

40 mins ago

ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯ: ಸಾರಿಗೆ ಇಲಾಖೆ ಸ್ಪಷ್ಟನೆ

ಬೆಂಗಳೂರು: ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ…

1 hour ago

ಗ್ಯಾರಂಟಿ ಬಿಟ್ಟರೆ ಬೇರೆ ಬಂಡವಾಳ ಇವರಿಗಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಏಕೈಕ ಬಂಡವಾಳ ಎಂದರೆ ಐದು ಗ್ಯಾರಂಟಿಗಳು ಮಾತ್ರ. ಅವುಗಳನ್ನು ಕೂಡ ಮನಸ್ಸು ಇಚ್ಛೆ,…

2 hours ago

ಅಹಿಂದ ಹತ್ತಿಕ್ಕಲು ಸಿದ್ದರಾಮಯ್ಯ ಯತ್ನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ ಹತ್ತಿಕ್ಕಲು…

2 hours ago

ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಮಳೆಯ ಆರ್ಭಟ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ…

2 hours ago