ಸಿರಿ ಮೈಸೂರು
ಸುತ್ತಲೂ ಹಸಿರು, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಬೆಟ್ಟ-ಗುಡ್ಡಗಳು, ಕಿವಿಗೆ ಬೀಳುವುದು ಕೇವಲ ನಿಶ್ಶಬ್ದತೆ, ನಿರ್ಲಿಪ್ತತೆ, ಸುತ್ತಲೂ ಹತ್ತಾರು ಕಲ್ಯಾಣಿಗಳು, ಇವೆಲ್ಲದರ ಮಧ್ಯೆ ಗತವೈಭವದ ಕುರುಹಾಗಿ ನಿಂತ ಪುರಾತನ ಗುಹಾಲಯಗಳು. ಈ ಚಿತ್ರಣವನ್ನು ವಿವರಿಸುತ್ತಿರುವಂತೆ ಮನಸ್ಸು ಬಾಗಲಕೋಟೆಯ ಬಾದಾಮಿ ಹಾಗೂ ಪಟ್ಟದಕಲ್ಲಿನ ತನಕ ಪ್ರಯಾಣಿಸಿಬಿಟ್ಟಿರುತ್ತದೆ.
ಏಕೆಂದರೆ ಅವು ಗುಹಾಲಯಗಳ ತವರೂರುಗಳು. ಆದರೆ ಇದೇ ರೀತಿಯ ಅಪರೂಪದ ಗುಹಾಂ ತರ ದೇವಾಲಯಗಳು ನಮ್ಮ ಹಳೇ ಮೈಸೂರು ಭಾಗದಲ್ಲೂ ಇವೆ ಎಂಬುದು ಎಷ್ಟು ಜನರಿಗೆ ಗೊತ್ತು? ಹೌದು… ನಮ್ಮ ಹಳೇ ಮೈಸೂರು ಭಾಗದಲ್ಲಿ ಕೂಡ ಇಂತಹ ಒಂದು ಗುಹಾಂತರ ದೇವಾಲಯ ಇದೆ. ಹೊಯ್ಸಳರ ಅದ್ಭುತ ವಾಸ್ತುಶಿಲ್ಪ ಹೊಂದಿರುವ ದೇವಾಲಯಗಳು ಮಾತ್ರವಲ್ಲದೆ ಚಾಲುಕ್ಯರ ಕಾಲದ್ದು ಎನ್ನಲಾದ ಗುಹೆಗಳನ್ನೂ ನಾವು ಇಲ್ಲಿ ನೋಡಬಹುದು. ಈ ದೇವಾಲಯಗಳು ಕಾಣಸಿಗುವ ಸ್ಥಳ ಮತ್ಯಾವುದೂ ಅಲ್ಲ. ಐತಿಹಾಸಿಕ ಪ್ರವಾಸಿ ಪಟ್ಟಣ ಮೇಲುಕೋಟೆ.
ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಯೋಗಾನರಸಿಂಹ ಸ್ವಾಮಿ ದೇವಸ್ಥಾನ, ಪಂಚಕಲ್ಯಾಣಿ, ಅಕ್ಕತಂಗಿ ಕೊಳ, ರಾಯಗೋಪುರ, ಧನುಷ್ಕೋಟಿ ಮುಂತಾದ ಇನ್ನೂ ಹತ್ತು ಹಲವು ಸ್ಮಾರಕಗಳಿವೆ. ಯೋಗಾನರಸಿಂಹಸ್ವಾಮಿ ದೇವಸ್ಥಾನದ ಉತ್ತರ ಭಾಗಕ್ಕೆ ಸ್ವಲ್ಪ ದೂರ ಹೋದರೆ ನಮಗೆ ಇಲ್ಲಿನ ಅಪರೂಪದ ಗುಹಾಂತರ ದೇವಾಲಯಗಳು ಕಾಣಸಿಗುತ್ತವೆ. ವಾಹನವನ್ನು ಸುಮಾರು ಒಂದು ಕಿಲೋಮೀಟರ್ ಹಿಂದೆಯೇ ನಿಲ್ಲಿಸಿ ನಡೆದೇ ಹೋಗಬೇಕು. ದಾರಿಯಲ್ಲಿ ನಮಗೆ ಹಲವು ಕಲ್ಯಾಣಿಗಳು ಕಾಣಿಸುತ್ತವೆ. ಇಲ್ಲಿ ಯಾರೂ ಅಷ್ಟೇನೂ ಸಂಚರಿಸದ ಕಾರಣ ಹೋಗುವ ದಾರಿ ಸ್ವಲ್ಪ ಕಡಿದಾಗಿಯೇ ಇದೆ. ಇಲ್ಲಿ ಒಂದೇ ಸ್ಥಳದಲ್ಲಿ ಕೆಳಗೆ ಒಂದು ಗುಹೆ ಕಂಡರೆ ಮೇಲೆ ಮತ್ತೊಂದು ಗುಹೆ ಕಾಣುತ್ತದೆ. ಒಂದೇ ಬಂಡೆಕಲ್ಲಿನಲ್ಲಿ ಈ ಎರಡೂ ಗುಹಾಂತರ ದೇವಾಲಯಗಳನ್ನು ಕೊರೆಯಲಾಗಿದೆ.
ಕೆಳಗಿನ ಗುಹೆ ಬಹುಪಾಲು ಅಪೂರ್ಣವಾಗಿರುವುದು ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ಗುಹೆ ಹೊರತುಪಡಿಸಿ ಯಾವ ವಿಗ್ರಹಗಳನ್ನೂ ನೋಡಲು ಸಾಧ್ಯವಿಲ್ಲ. ಇಲ್ಲೇ ಬದಿಯಲ್ಲಿ ಕಲ್ಯಾಣಿ ಕಾಣಸಿಗುತ್ತದೆ. ಇಲ್ಲಿ ತಗ್ಗು ಪ್ರದೇಶಗಳೇ ಹೆಚ್ಚಾಗಿರುವ ಕಾರಣ ಸುಮಾರು ಕಲ್ಯಾಣಿಗಳು ಕಣ್ಮರೆಯಾಗಿವೆ. ಈ ಸ್ಥಳದಲ್ಲಿ ಒಂದು ಮಂಟಪವನ್ನು ನಾವು ನೋಡಬಹುದು. ಆ ಮಂಟಪ ದೊಳಗೆ ಒಂದು ಪೀಠ ಇದೆಯಾದರೂ ಅದರ ಮೇಲೆ ಯಾವ ವಿಗ್ರಹವೂ ಇಲ್ಲ. ಇದರೊಂದಿಗೆ ಈ ಸ್ಥಳದ ತುಂಬೆಲ್ಲಾ ನಾವು ಅಪೂರ್ಣ ಕೆತ್ತನೆಗಳು ಹಾಗೂ ಕಂಬಗಳನ್ನು ನೋಡಬಹುದು. ಸಾಮಾನ್ಯವಾಗಿ ಜೈನರು ತಪಸ್ಸು ಮಾಡುವಾಗ ಗುಹೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಈ ಗುಹೆಯೂ ಅದೇ ಕಾರಣಕ್ಕೆ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅಂದಾಜು.
ಈ ಗುಹೆಗಳ ಇನ್ನೊಂದು ವಿಶೇಷತೆ ಎಂದರೆ, ಇದರ ಎತ್ತರ ಬಹಳ ಚಿಕ್ಕದು. ಕಂಬಗಳನ್ನು ಕೆತ್ತನೆ ಮಾಡಿ, ಅದರ ಮೇಲೆ ಸೂರುಗಳನ್ನು ಕೊರೆಯಲಾಗಿದೆ. ಆದರೆ ಮಂಟಪಗಳು ಮಾತ್ರ ಕೇವಲ ಐದಾರು ಅಡಿ ಎತ್ತರ ಇವೆ. ಬಹುಶಃ ಈ ರೀತಿಯ ರಚನೆ ಮಾಡಿ ಆನಂತರ ಭೂಮಿಯನ್ನು ಕೊರೆದು ಭೂಮಟ್ಟವನ್ನು ಇನ್ನೂ ಕೆಳಗೇ ಆದಂತೆ ಮಾಡುವ ಯೋಚನೆ ಇವರಿಗಿತ್ತು ಅನಿಸುತ್ತದೆ. ಆದರೆ ಆ ಕೆಲಸ ಮಾತ್ರ ನಡೆದಿಲ್ಲ. ಆದ್ದರಿಂದ ಈ ಮಂಟಪಗಳು ಎತ್ತರವಾಗಿಲ್ಲ. ಸಾಮಾನ್ಯವಾಗಿ ಇಂತಹ ಗುಹೆಗಳು ಬಾದಾಮಿಯಲ್ಲಿ ಮಾತ್ರ ಕಾಣಸಿಗುತ್ತವೆ. ಹಳೇ ಮೈಸೂರು ಭಾಗದಲ್ಲಿ ಇಷ್ಟು ಚಿಕ್ಕ ಗುಹೆಗಳು ಕಾಣಸಿಗುವುದಿಲ್ಲ.
ಗುಹಾಲಯಗಳು ಅಥವಾ ಯಾವುದೇ ಪುರಾತನ ದೇವಸ್ಥಾನಗಳಲ್ಲಿ ಉಬ್ಬು ಶಿಲ್ಪಗಳ ಕೆತ್ತನೆ ಮಾಡುವ ಮುನ್ನ ಮೊದಲನೆಯ ಹಂತದಲ್ಲಿ ಕಂಬ ಹಾಗೂ ಗೋಡೆಗಳ ಮೇಲೆಲ್ಲಾ ತಮಗೆ ಬೇಕಾದಂತೆ ಸ್ಥೂಲ ರೂಪರೇಷೆಯನ್ನು ರೇಖೆಗಳ ಮೂಲಕ ಹಾಕಿಕೊಂಡಿರುತ್ತಾರೆ. ಇಲ್ಲಿನ ಗುಹೆಗಳಲ್ಲಿ ಮೊದಲ ಹಂತದ ರೂಪರೇಷೆಗಳನ್ನು ಮಾತ್ರ ಕಾಣಬಹುದಾಗಿದೆ. ಮಳೆಯ ನೀರು ಮಂಟಪದ ಒಳಗೆ ಬರದಂತೆ ಸುಸಜ್ಜಿತ ಸಜ್ಜೆ ನಿರ್ಮಿಸಲಾಗಿದೆ. ಇಲ್ಲಿ ಕಂಬಗಳು ದೇವಸ್ಥಾನದ ಮಾದರಿಯಲ್ಲೇ ಇದ್ದು, ಅವುಗಳ ಅಂಚಿನಲ್ಲಿ ದೀಪ ಇಡಲು ಜಾಗ ಮಾಡಲಾಗಿದೆ. ನೆಲದಲ್ಲಿ ಕೆಲವೆಡೆ ಉಳಿ ಏಟುಗಳು ಕಾಣುತ್ತವೆ. ಬಹುಶಃ ಇವುಗಳು ಅಪೂರ್ಣ ಮೆಟ್ಟಿಲುಗಳು. ಇದು ಕೆಳಗಿನ ಕಿರು ಗುಹಾಲಯದ ಚಿತ್ರಣ. ಇನ್ನು ಮೇಲಿನ ಗುಹಾಲಯ ತಲುಪಬೇಕಾದರೆ ಸ್ವಲ್ಪ ಕಷ್ಟಪಡಬೇಕು. ಮೇಲೆ ಹೋಗುವಾಗ ಕೆಲ ಸಮಯ ಹತ್ತಿದ ನಂತರ ಹಾಗೂ ನಡೆದ ನಂತರ ಸಣ್ಣ ಮೆಟ್ಟಿಲುಗಳು ಸಿಗುತ್ತವೆ. ಕೆಳಗೆ ಸುಮಾರು ಐವತ್ತು ಅಡಿಯಷ್ಟು ಪ್ರಪಾತ ಇದೆ. ಮೇಲಿನ ಗುಹಾಲಯ ಕೆಳಗಿನದ್ದಕ್ಕಿಂತ ಬಹಳ ಸ್ಪಷ್ಟವಾಗಿ ರೂಪುಗೊಂಡಿದೆ.
ಇಲ್ಲಿನ ಕಂಬಗಳು ಪೂರ್ಣವಾಗಿ ನಿರ್ಮಾಣವಾಗಿವೆ; ಸುಸಜ್ಜಿತವಾಗಿವೆ. ಕಂಬಗಳು ಎತ್ತರವಾಗಿದ್ದು, ಜನರು ಆರಾಮಾಗಿ ನಿಲ್ಲುವಷ್ಟು ಸ್ಥಳ ಇದೆ. ಅಲ್ಲದೆ ಇಲ್ಲಿ ಗರ್ಭಗುಡಿಯನ್ನೂ ನಾವು ನೋಡಬಹುದು. ಈ ಗರ್ಭಗುಡಿಯಲ್ಲಿ ಕೆಳಗೆ ಒಂದು ಗರುಡ ಹಾಗೂ ಅದರ ಮೇಲೆ ಮೇಲೆ ಕೇಶವನ ವಿಗ್ರಹ ಕಾಣಸಿಗುತ್ತದೆ. ಇದಕ್ಕೆ ಒಂದು ಕಾಲದಲ್ಲಿ ಪೂಜೆಯೂ ನಡೆಯುತ್ತಿತ್ತು ಎಂದು ಭಾಸವಾಗುತ್ತದೆ. ಆದರೆ ಗರ್ಭಗುಡಿಗೆ ಬಾಗಿಲು ಇಲ್ಲ. ಇದಲ್ಲದೆ ಇಲ್ಲಿ ಬಂಡೆಕಲ್ಲಿನಲ್ಲಿ ಮಾಡಿರುವ ಕಂಬಗಳಿವೆ. ಕಂಬ ಹಾಕಲೆಂದೋ ಏನೋ ಕೊರೆದ ಕೆಲವು ಹಳ್ಳಗಳು ಹಾಗೆಯೇ ಖಾಲಿ ಇವೆ. ನೆಲದ ಮೇಲೆ ಕೆಲವು ಒರಳುಕಲ್ಲಿನ ರೀತಿಯ ರಚನೆಗಳು ಕಾಣಿಸುತ್ತವೆ. ಈ ಸ್ಥಳವನ್ನು ನಿರ್ಮಾಣ ಮಾಡಲು ಚಪ್ಪಡಿಕಲ್ಲುಗಳ ಸಹಾಯ ವನ್ನೂ ಪಡೆಯಲಾಗಿದೆ. ಇಲ್ಲಿನ ಕೆಲವು ಸ್ಥಳಗಳು ಕಪ್ಪುಬಣ್ಣಕ್ಕೆ ತಿರುಗಿದ್ದು, ಇದನ್ನು ನೋಡಿದರೆ ಇಲ್ಲಿ ಹೋಮ-ಹವನಗಳು ನಡೆದಿರುವುದು ಖಾತ್ರಿಯಾಗುತ್ತದೆ. ಇದು ಕೆಳಗಿನ ಗುಹೆಗಿಂತ ಅಗಲ, ಉದ್ದ ಇದ್ದು, ಸುಮಾರು ೭೦ ಜನರು ಕೂರುವಷ್ಟು ಸ್ಥಳ ಇದೆ. ಇಲ್ಲಿರುವ ಜಗುಲಿಯ ಬಳಿಯಲ್ಲೂ ೫೦-೬೦ ಜನಕೂರಬಹುದು. ವಿಶೇಷವೆಂದರೆ ಇವೆಲ್ಲವೂ ಬಂಡೆಕಲ್ಲಿನಲ್ಲೇ ರಚಿಸಲ್ಪಟ್ಟಿವೆ. ಮೇಲುಕೋಟೆಯ ಬೇರೆಲ್ಲಾ ಸ್ಥಳಗಳಂತೆ ಇಲ್ಲೂ ಕೂಡ ಕಲ್ಯಾಣಿಗಳನ್ನು ನಾವು ಕಾಣಬಹುದು.
ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್ ಬಳಿಯ ಅರ್ಪೊರಾದ ನೈಟ್‌ಕ್ಲಬ್ ಬೀರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…
ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…
ಗೋವಾ: ಇಲ್ಲಿನ ನೈಟ್ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್…
ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…
ನಿಕೋಟಿನ್, ಪಾನ್ ಮಸಾಲಾ ಮತ್ತು ಇತರೆ ಹೊಗೆ ರಹಿತ ತಂಬಾಕು ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಆರೋಗ್ಯ ಮತ್ತು…
ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…