ಹಾಡು ಪಾಡು

ಕೀಟಲೆ, ಬೈಗುಳ ಮತ್ತು ಕೆಸರೆರಚಾಟದ ಬೋಡು ಹಬ್ಬ

ಡಾ. ತೀತೀರ ರೇಖಾ ವಸಂತ

ವೈವಿಧ್ಯಮಯ ವೇಷಧಾರಿಗಳು, ಭದ್ರಕಾಳಿಗೆ ಗೌರವದ ‘ಮೊಗ’, ಅಲಂಕೃತ ಬಿದಿರಿನ ಕುದುರೆ, ಸುಶ್ರಾವ್ಯವಾದ ವಾದ್ಯ, ಕುಣಿತ, ಹಾಡು-ಭಕ್ತಿ, ಹರಕೆ, ಸಂತೋಷವನ್ನು ಊರಿಗೆ ಊರೇ ಸಂಭ್ರಮಿಸುವ ಹಬ್ಬ ಕೊಡಗಿನ ವಿಶೇಷ ‘ಬೋಡ್‌ನಮ್ಮೆ’.

ಹರಕೆಗಾಗಿ ವೇಷ ಹಾಕಿದರೂ ಕುಣಿತ, ಹಾಡಿನೊಂದಿಗೆ ತಮಾಷೆಯ, ಕೆಲವೊಮ್ಮೆ ಅಶ್ಲೀಲ ಮಾತುಗಳ ಮೂಲಕ ನಕ್ಕುನಗಿಸುವ ರೀತಿಯೇ ಈ ಹಬ್ಬದ ಹೆಸರಿಗೂ ಕಾರಣವಿರಬಹುದು. ಕೊಡವ ಭಾಷೆಯಲ್ಲಿ ‘ಬೊಗ್‌ಡ್’ ಎಂದರೆ ತಮಾಷೆ, ಕೀಟಲೆ ಎಂದರ್ಥ. ಬೊಗ್‌ಡ್- ಬೋಡ್ ಆಗಿರಬಹುದು. ಒಂದಿಷ್ಟು ಆಧುನಿಕ ವೇಷಗಳೊಂದಿಗೆ ತನ್ನ ಪಾರಂಪರಿಕ ಗ್ರಾಮೀಣ ಸೊಗಡನ್ನು ಇಂದಿಗೂ ಹಸಿರಾಗಿಯೇ ಉಳಿಸಿಕೊಂಡಿರುವುದು ಬೋಡ್ ಹಬ್ಬದ ಶ್ರೇಷ್ಠತೆ, ಕುಂದತ್ ಬೊಟ್ಟಿಲ್ ನೇಂದ ಕುದ್‌ರೆ, ಪಾರಣ ಮಾನಿಲ್ ಅಳಂಜ ಕುದ್ರ’ ಎಂಬುದು ಬೋಡುಹಬ್ಬದ ಆರಂಭ ಮತ್ತು ಕೊನೆಯ ಕುರಿತು ಇರುವ ನುಡಿಗಟ್ಟು, ಅಂದರೆ – “ಕುಂದಬೆಟ್ಟದಲ್ಲಿ ಆರಂಭಗೊಂಡ ಕುದುರೆ, ಪಾರಣದ ಬಯಲಲ್ಲಿ ಕೊನೆಗೊಂಡ ಕುದುರೆ’. ಪ್ರತಿವರ್ಷ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಂದ ಬೆಟ್ಟದಲ್ಲಿ ಅಕ್ಟೋಬರ್‌ನಲ್ಲಿ ಕಾವೇರಿ ಸಂಕ್ರಮಣದ ಮರುದಿವಸ ಮೊದಲ ಬೋಡ್‌ನಮ್ಮೆ ನಡೆದು, ಅನಂತರದಲ್ಲಿ ಬೇರೆ ಬೇರೆ ಊರುಗಳಲ್ಲಿ ಆಚರಣೆ ಗೊಳ್ಳುತ್ತಾ ಬಂದು ವಿ.ಬಾಡಗದಲ್ಲಿರುವ ‘ಪಾರಣಮಾನಿ’ ಯಲ್ಲಿ ಮೇ ತಿಂಗಳ ಕೊನೆಯ ದಿವಸ ಹಾಗೂ ಜೂನ್ ಒಂದರಂದು ಕೊನೆಯ ಹಬ್ಬ ನಡೆಯುತ್ತದೆ. ಕುಂದಬೆಟ್ಟದ ಹಬ್ಬದಲ್ಲಿ ಬಳಸಿದ ಬಿದಿರಿನ ಕುದುರೆಯ ಆಕೃತಿಯನ್ನು ಮುಂದಿನ ವರ್ಷಕ್ಕೂ ಉಳಿಸಿಕೊಂಡರೆ, ‘ಪಾರಣಮಾನಿ’ಯಲ್ಲಿ ಬಳಸಿದ ಕುದುರೆಯ ಆಕೃತಿಯನ್ನು ಹಬ್ಬದ ಕೊನೆಯಲ್ಲಿ ಕತ್ತರಿಸಿ ನಾಶಪಡಿಸುತ್ತಾರೆ. ಹಬ್ಬದ ಸಮಯ ದೊಂದಿಗೆ ಸಾಂಕೇತಿಕವಾಗಿ ಈ ಆಚರಣೆಯ ವಿಚಾರವೂ ನುಡಿಗಟ್ಟಿನಲ್ಲಿದೆ.

ಮಳೆಗಾಲಕ್ಕಿಂತ ಮೊದಲು ನಡೆಯುವ ‘ಬೋಡ್’ ಹಬ್ಬವನ್ನು ಊರಿನ ಭದ್ರಕಾಳಿ, ಅಯ್ಯಪ್ಪ ದೇವರ ಉತ್ಸವದ ಭಾಗವಾಗಿ ಆಚರಿಸಲಾಗುತ್ತದೆ. ಮೇಲ್ನೋಟಕ್ಕೆ ಹಾಸ್ಯ ಪ್ರಧಾನವಾದ ಬೋಡ್ ಹಬ್ಬ, ವಾಸ್ತವವಾಗಿ ಅನಾದಿ ಕಾಲದಿಂದಲೂ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆಗಳ ಸಾಮರಸ್ಯದ ಸಂಗಮದ ಪ್ರತೀಕವಾಗಿರುವುದು ವಿಶೇಷ ಊರಿನ ಜನ ತಮಗೆ ಕಾಯಿಲೆ ಬಂದರೆ ಕಪ – ವಷಗಳಾದರೆ ದೇವರ ಹಬದಲಿ ವೇಷ ಹಾಕುವದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಇಂತಹ ಪ್ರಮುಖ ವೇಷಗಳೆಂದರೆ – ಹುಲಿವೇಷ ಕಾಪಾಳವೇಷ, ಸೂಳೆವೇಷ ಹುಲ್ಲಿನವೇಷ, ಕೋಡಂಗಿ ವೇಷ ಒಡ್ಡರ ವೇಷ ಸನ್ಯಾಸಿ ವೇಷ ಹಾಗೂ ಕೆಸರು ಮೆತ್ತಿಕೊಂಡ ವೇಷಗಳು ಪ್ರಧಾನವಾದವುಗಳು, ಹಬ್ಬದ ಹಿಂದಿನ ದಿನದ ರಾತ್ರಿ ಈ ಎಲ್ಲ ವೇಷಗಳು ದೇವಸ್ಥಾನದಿಂದ ಹೊರಟು ವಾದ್ಯ, ಹಾಡಿನೊಂದಿಗೆ ಊರಿನ ಎಲ್ಲ ಮನೆಮನೆಗಳಿಗೂ ಭೇಟಿ ನೀಡುತ್ತಾರೆ. ಇದನ್ನು ಕಳಿಯಾಡುವುದು’ (ಕಳಿ ಎಂದರೆ ವೇಷ) ಎನ್ನುತ್ತಾರೆ. ಮನೆಗಳಿಂದ ಪಡೆದ ಹಣದಲ್ಲಿ ದೇವರಿಗೆ ಭಂಡಾರ ಒಪ್ಪಿಸುತ್ತಾರೆ.

ಪ್ರತಿ ಮನೆಗೂ ವೇಷಧಾರಿಗಳ ಗುಂಪು ಭೇಟಿ ನೀಡುವಾಗ ಕೆಲವು ಶಿಸ್ತುಬದ್ಧ ಅಲಿಖಿತ ನಿಯಮಗಳನ್ನು ಪಾಲಿಸಲಾಗುತ್ತದೆ. ಹಾಡುಗಾರರು ದುಡಿ ಬಾರಿಸುತ್ತಾ ನಡುಮನೆಯಲ್ಲಿ ಕುಳಿತು ಹಾಡಿನೊಂದಿಗೆ ಹೊರಗಿರುವ ವೇಷವನ್ನು ಒಳಗೆ ಬರುವಂತೆ ಕರೆಯುತ್ತಾರೆ. ಆಯಾಯ ವೇಷಗಳು ಒಂದೊಂದಾಗಿ ನಡು ಮನೆಗೆ ಬಂದು ಕುಣಿದು ಹಿಂತಿರುಗುತ್ತವೆ. ಈ ಹಾಡನ್ನು ‘ತಾಲಿಪಾಟ್’ ಎನ್ನುತ್ತಾರೆ.
ಲೇಲುಳಿ ಲೇಲುಳಿ ಲೇಲುಳಿ ಲೆಲ್ಲೋ ತಾಲಿಲೆಲ್ಲೇಲಾ?..
ತಾಲಿಲೆಲ್ಲೇ ಲೆಲ್ಲೋ ತಾಲಿಲೆಲ್ಲೇಲಾ?..

ಹೀಗೆ ಎಲ್ಲಾ ವೇಷಗಳು ಸರತಿಯಲ್ಲಿ ಬಂದು ಹಾಡಿನ ಲಯಕ್ಕೆ ತಕ್ಕಂತೆ ಕುಣಿದು ಹಿಂತಿರುಗುವ ರಂಗಾಭಿನಯದ ರೀತಿ ಜನಪದ ರಂಗಭೂಮಿಯ ಮಾದರಿಯಾಗಿ ಕಾಣುತ್ತದೆ.

ಡಾ.ಎಂ.ಚಿದಾನಂದಮೂರ್ತಿಯವರು ಗುರುತಿಸುವ ‘ಪಗರಣ’ದ (ಜನಸಾಮಾನ್ಯರು ಮನರಂಜನೆಗಾಗಿ ಹಾಡುತ್ತಿದ್ದ ವೇಷಗಳು) ಹೋಲಿಕೆ ಇಲ್ಲಿದೆ. ಕುದುರೆ, ಮೊಗ (ಕಂಚಿನ ಮೊಗ ಹೂಮೊಗ)ದೊಂದಿಗೆ ವಾದ್ಯ ಸಮೇತವಾಗಿ ವೇಷಗಳೆಲ್ಲವೂ ಸಂಭ್ರಮದಿಂದ ಹಾಡುತ್ತಾ, ಕುಣಿಯುತ್ತಾ ಗುಂಪಿನಲ್ಲಿ ದೇವ ಸ್ಥಾನದ ಸಮೀಪಕ್ಕೆ ತಲುಪುತ್ತಾರೆ. ಅಲ್ಲಿ ಗದ್ದೆಯೊಂದನ್ನು ಕೆಸರು ಮಾಡಿ ಎಲ್ಲರೂ ಪರಸ್ಪರ ಕೆಸರೆರಚಿಕೊಳ್ಳುತ್ತಾರೆ. ಇಲ್ಲಿ ಯಾರು ಯಾರ ಮೇಲೆ ಬೇಕಾದರೂ ಕೆಸರು ಎರಚಬಹುದು. ಅದಕಾಗಿ ಯಾರು ಜಗಳಾಡುವಂತಿಲ್ಲ, ಸಿಟ್ಟಾಗುವಂತಿಲ್ಲ. ಇದನ್ನು ಬಳಸಿಕೊಂಡು ಎಷ್ಟೋ ಸಲ ಊರಿನಲ್ಲಿ ತನಗೆ ಬೇರೆ ಬೇರೆ ಸಂದರ್ಭಗಳಲ್ಲಿ ಅವಮಾನ ಮಾಡಿದವರನ್ನು, ನೋವು ಕೊಟ್ಟವರನ್ನು ಗುಂಪಿನಲ್ಲಿ ಹುಡುಕಿ ಹಬ್ಬದ ನೆಪದಲ್ಲಿ ಕೆಸರೆರಚುವುದರ ಮೂಲಕ ತನ್ನ ಕೋಪ ವನ್ನು ತೀರಿಸಿ ಕೊಳ್ಳುವುದೂ ಇದೆ. ಹಿಂದೆ ಊರೊಳಗೆ ಅಸಹಾಯಕರು, ದುರ್ಬ ಲರು ನೇರ ವಾಗಿ ತಮ್ಮ ವಿರೋಧವನ್ನು, ಸಿಟ್ಟನ್ನು ವ್ಯಕ್ತಪಡಿಸಲು ಸಾಧ್ಯವಾಗದಿ ದ್ದಾಗ ಅದನ್ನೆಲ್ಲ ಉತ್ಸವದಲ್ಲೇ ಆಚರಣೆಯ ಭಾಗವಾಗಿ ಮುಗಿಸಿಕೊಂಡು, ಮಾನಸಿಕ ಒತ್ತಡದಿಂದ ಬಿಡುಗಡೆ ಪಡೆಯುತ್ತಾ ಹಗುರಾಗಿ ಸಾಮಾಜಿಕ ಸಾಮರಸ್ಯ ಮೂಡಿ ಸುವ ಒಂದು ವಿಶೇಷ ಅವಕಾಶವಾಗಿಯೂ ಈ ಆಚರಣೆಯನ್ನು ಗಮನಿಸಬಹುದು.
ಬ್ರಾಹ್ಮಣೀಕರಣಕ್ಕೆ ಒಳಗಾಗದ ಎಲ್ಲಾ ಪೂಜೆ ಆಚರಣೆಯ ವಿಧಿ-ವಿಧಾನಗಳನ್ನು ಇಲ್ಲಿನ ಬ್ರಾಹ್ಮಣೇತರ ಸಮುದಾಯಗಳೇ ನಿರ್ವಹಿಸುವ ಬುಡಕಟ್ಟು ಸಂಸ್ಕೃತಿಯ ಮೂಲ ಲಕ್ಷಣಗಳು ಇಲ್ಲಿವೆ. ಬಾಲ್ಯದಿಂದಲೂ ಈ ಹಬ್ಬಗಳನ್ನು ಬಹುಹತ್ತಿರದಿಂದ, ವಿಸ್ಮಯದಿಂದ ನೋಡುತ್ತಾ, ಸಂತೋಷ ಪಡುತ್ತಾ ಬೆಳೆದವಳು ನಾನು. ಅನಂತರದಲ್ಲಿ ಆಸಕ್ತಿಯಿಂದ ಅವುಗಳ ಕುರಿತು ಅಧ್ಯಯನದಲ್ಲೂ ತೊಡಗಿಕೊಂಡವಳು. ಬದಲಾವಣೆಗಳು ಕಾಲದ ನಡಿಗೆಯಲ್ಲಿ ಸಹಜವಾದರೂ ನಾನು ಗಮನಿಸಿದಂತೆ ಬೋಡ್ ಹಬ್ಬದಲ್ಲಿ ಇತ್ತೀಚೆಗೆ ಇತರ ವೇಷಗಳು, ಅವುಗಳ ಸಾಂಸ್ಕೃತಿಕ, ಧಾರ್ಮಿಕ ಆಯಾಮಗಳಿಗಿಂತಲೂ ಪುರುಷರು ಹೆಣ್ಣಿನ ವೇಷದ ಕಡೆಗೆ ಹೆಚ್ಚು ಆಕರ್ಷಿತರಾಗಿರುವುದು ಕಂಡುಬರುತ್ತದೆ. ಅದರಲ್ಲೂ ಪುರುಷರು ಎತ್ತರಕ್ಕೆ ಎದೆಯುಬ್ಬಿಸಿಕೊಂಡು, ತುಂಡುಡುಗೆಗಳನ್ನುಟ್ಟು, ವಿಚಿತ್ರ ಕೇಶವಿನ್ಯಾಸದೊಂದಿಗೆ ‘ಮಾಡರ್ನ್’ ಹೆಣ್ಣಿನ ವೇಷವನ್ನು ಹಾಕುತ್ತಾ ಕುಣಿಯುವುದು, ಮಕ್ಕಳಿಂದಾದಿಯಾಗಿ ವಯಸ್ಕರವರೆಗೆ ಎಲ್ಲರೂ ಅದನ್ನೇ ನೋಡಿ ಸಂಭ್ರಮಿಸುವುದು ಹೆಚ್ಚಾಗಿದೆ.

ಬೋಡ್ ಹಬ್ಬ, ಕುಂಡೆ ಹಬ್ಬಗಳು ಸಹಜವಾಗಿ ಅಶ್ಲೀಲವೆನಿಸುವ ಭಾಷೆಯನ್ನೇ ಹೆಚ್ಚಾಗಿ ಬಳಸುವುದರ ಜೊತೆಗೆ ವೇಷಭೂಷಣಗಳೂ ಅಶ್ಲೀಲತೆಯ ಕಡೆಗೆ ಸಾಗುತ್ತಿರುವಂತೆ ಕಾಣುತ್ತದೆ. ಇದು ಗಂಡಸಿಗೆ ಸ್ತ್ರೀಯರನ್ನು ಅರ್ಥಮಾಡಿ ಕೊಳ್ಳುವ ಒಂದು ಅವಕಾಶವೇ? ಅಥವಾ ಆಧುನಿಕತೆಯ ಹೆಸರಿನಲ್ಲಿ ಹೆಣ್ಣಿನ ಮೈಪ್ರದರ್ಶನದ ಅಣಕು ಮಾದರಿಯೇ? ಇಲ್ಲಾ ಎಲ್ಲರನ್ನೂ ಸಂತೋಷಪಡಿಸಲು ಆರಿಸಿಕೊಂಡ ವೇಷವೋ ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತವೆ.
(ಆಚರಣೆಗಳ ಕುರಿತು ಕೆಲವು ವಿಶೇಷ ವಿಚಾರಗಳನ್ನು ತಿಳಿಸಿಕೊಟ್ಟ ಚಮ್ಮಟೀರ ಪ್ರವೀಣ್ ಅವರಿಗೆ ನನ್ನ ಕೃತಜ್ಞತೆಗಳು.)
(ಲೇಖಕಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕಿ) vasantharekha6@gmail.com

andolana

Recent Posts

ಕೊಲೆ | ಶವವನ್ನು ಪಾಳು ಮನೆ ಮುಂದೆ ಎಸೆದು ಹೋದ ದುಷ್ಕರ್ಮಿ

ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಆತನ ಪಾಳು ಮನೆ ಮುಂದೆ ಎಸೆದು ಹೋಗಿರುವ ದುಷ್ಕೃತ್ಯವೊಂದು ಮಳವಳ್ಳಿ…

2 hours ago

ಟಿ-20 ವಿಶ್ವಕಪ್‌ : ಇಟಲಿ ಮಣಿಸಿ ದಾಖಲೆ ಬರೆದ ಸ್ಕಾಟ್ಲೆಂಡ್‌

ಕೋಲ್ಕತ್ತಾ : ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ…

2 hours ago

ಈ ಊರಲ್ಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದೆ ಬೀಳುತ್ತೆ 30 ಸಾವಿರ ದಂಡ

ನಂಜನಗೂಡು : ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ವಿಧಿಸುವ…

2 hours ago

2027 ಸೆ.3ಕ್ಕೆ ಅಟ್ಲಾಂಟಾದಲ್ಲಿ 9ನೇ ನಾವಿಕ ವಿಶ್ವ ಸಮ್ಮೇಳನ

ಬೆಂಗಳೂರು : ದುಬೈನ ಕರ್ನಾಟಕ ಸಂಘದೊಂದಿಗೆ ನವೆಂಬರ್ 22 ರಂದು ನಾವಿಕ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಾವು…

2 hours ago

ಉಕ್ಕು ಉದ್ಯಮಕ್ಕೆ ಮತ್ತಷ್ಟು ಬಲ ; ₹11,887 ಕೋಟಿ ಹೂಡಿಕೆ

ಹೊಸದಿಲ್ಲಿ : ಭಾರತ ಸರ್ಕಾರವು ಸ್ಪೆಶಾಲಿಟಿ ಸ್ಟೀಲ್ (ವಿಶೇಷ ಉಕ್ಕು) ಉತ್ಪಾದನೆಗೆ ಸಂಬಂಧಿಸಿ ಹೊಸದಾಗಿ ಉತ್ತೇಜನಾ (ಪಿಎಲ್ಐ) ಯೋಜನೆ 1.2…

3 hours ago

ಬಂಡೀಪುರದಲ್ಲಿ ಅಂತರಾಷ್ಟ್ರೀಯ ಬಿಗ್‌ ಕ್ಯಾಟ್‌ ಶೃಂಗಸಭೆ : 23 ದೇಶದ ವಿಜ್ಞಾನಿಗಳು ಭಾಗಿ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ಅಂತರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಶೃಂಗಸಭೆಯಲ್ಲಿಂದು…

4 hours ago