ಹಾಡು ಪಾಡು

ಗ್ರಾಮ ಸ್ವರಾಜ್ಯದ ಮರುಹುಟ್ಟಿನ ನಿರೀಕ್ಷೆಯಲ್ಲಿ ಬದನವಾಳು

ರಶ್ಮಿ ಕೋಟಿ

ಇದು ಕೇವಲ ಒಂದು ಊರಿನ ಕನಸಲ್ಲ. ಇಲ್ಲಿನ ಜನರ ಆತ್ಮಸಮ್ಮಾನದ ಪ್ರಶ್ನೆ. ಒಂದು ಕಾಲದಲ್ಲಿ ಚರಕದ ಶಬ್ದವೇ ದಿನದ ಘಂಟೆಯಾಗಿದ್ದ ಈ ಊರಲ್ಲಿ, ಇಂದು ಮೌನ ಆವರಿಸಿದೆ.

ಅದು ೧೯೨೦ರ ದಶಕ. ಸ್ವಾತಂತ್ರ್ಯ ಹೋರಾಟದ ಕಾವು ಎಲ್ಲೆಡೆ ಹರಡುತ್ತಿದ್ದ ಸಮಯ. ಮಹಾತ್ಮ ಗಾಂಧೀಜಿ ದೇಶಾದ್ಯಂತ ಸಂಚರಿಸಿ ಜನರನ್ನು ಸ್ವಾವಲಂಬಿಗಳಾಗಲು, ಗ್ರಾಮ ಸ್ವರಾಜ್ಯ ಸಾಧಿಸಲು ಪ್ರೇರೇಪಿಸುತ್ತಿದ್ದರು. ಖಾದಿಯನ್ನು ಪ್ರಚುರಪಡಿಸಲು ಹಾಗೂ ಹರಿಜನ ಉನ್ನತಿಗಾಗಿ ಅನೇಕ ಪ್ರವಾಸಗಳನ್ನು ಕೈಗೊಂಡರು. ಅದೇ ಸಂದರ್ಭದಲ್ಲಿ ಗಾಂಧಿಜಿ ಮೈಸೂರಿಗೂ ೧೯೨೭ ಹಾಗೂ ೧೯೩೪ರಲ್ಲಿ ನೀಡಿದ ಭೇಟಿ ಐತಿಹಾಸಿಕವಾದದ್ದು. ಬ್ರಿಟಿಷರ ಆಕ್ಷೇಪಗಳ ನಡುವೆಯೂ ಇಂತಹ ಭೇಟಿಗಳು ನಡೆಯುತ್ತಿದ್ದು, ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೆಂಬಲವೂ ಇತ್ತು. ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮಾರ್ಗದರ್ಶನದಲ್ಲಿ ಗಾಂಧಿಜಿಯ ಭೇಟಿ ಗ್ರಾಮಸ್ಥರ ಸ್ವಾವಲಂಬನೆಗೆ ಮಹತ್ವ ನೀಡುವ ಯೋಜನೆಗಳಿಗೆ ಪ್ರೇರಣೆಯಾದವು.

ಗಾಂಧಿಜಿ ಖಾದಿ ಚಟುವಟಿಕೆ, ಕೈಮಗ್ಗ ಮತ್ತು ಗ್ರಾಮೋದ್ಯೋಗಗಳ ಮಹತ್ವವನ್ನು ಪ್ರಚಾರ ಮಾಡಲು ಅನೇಕ ಯೋಜನೆಗಳನ್ನು ರೂಪಿಸಿದರು. ಅವರು ನಾಲ್ವಡಿ ಅವರನ್ನು “ಮೈಸೂರು ಸುತ್ತಲಿನ ಯಾವ ಹಳ್ಳಿ ಅತ್ಯಂತ ಹಿಂದುಳಿದಿದೆ? ಅಲ್ಲಿ ಗ್ರಾಮ ಸ್ವರಾಜ್ಯ ಸಾಧಿಸೋಣ” ಎಂದು ಕೇಳಿದಾಗ, ಅವರ ಗಮನ ಸೆಳೆದ ಹಳ್ಳಿ ಬದನವಾಳು. ಅಷ್ಟರಲ್ಲಾಗಲೇ ಬದನವಾಳುವಿನಲ್ಲಿ ಚರಕ ಚಳವಳಿ ಆರಂಭವಾಗಿತ್ತು. ಆದರೆ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಗಾಂಧಿಜಿ ಮತ್ತು ನಾಲ್ವಡಿ ಅವರ ಸಹಾಯದಿಂದ ಬದನವಾಳು ಖಾದಿ ಕೇಂದ್ರ ಪುನರುಜ್ಜೀವನ ಕಂಡಿತು.

೧೯೨೭ರಲ್ಲಿ ಮಹಾತ್ಮ ಗಾಂಧಿಜಿ ಈ ಹಳ್ಳಿಗೆ ಬಂದಾಗ, ಅವರು ಕಂಡದ್ದು ಕೇವಲ ಕೈಮಗ್ಗ ಕೇಂದ್ರವಲ್ಲ, ಅವರ ಕನಸಿನ ಗ್ರಾಮ ಸ್ವರಾಜ್ಯ. ಸ್ವತಂತ್ರ, ಶ್ರಮಜೀವನ, ಸ್ವದೇಶಿ ಚಳವಳಿಯಲ್ಲಿ ಜೀವಿಸಬಹುದಾದ ಗ್ರಾಮವನ್ನು. “ಪ್ರತಿ ಹಳ್ಳಿ ಆತ್ಮನಿರ್ಭರ ಶಕ್ತಿಯೊಂದಿಗೆ ಬೆಳೆದು, ಅದರ ಶ್ರಮದಿಂದಲೇ ಅಭಿವೃದ್ಧಿಯನ್ನು ತಲುಪಬೇಕು” ಎಂದು ಆಶಿಸಿದ್ದ ಗಾಂಧಿಜಿಗೆ ಬದನವಾಳಿನ ನೂಲುವ, ನೇಯುವ ಕೈಗಳು, ತಿರುಗುತ್ತಿದ್ದ ಚರಕಗಳೆಲ್ಲವೂ ಸ್ವರಾಜ್ಯದ ಪ್ರತೀಕವಾಗಿ ಕಂಡಿದ್ದವು.

ಗಾಂಧಿಜಿ ಬದನವಾಳಿಗೆ ಬರುವುದಕ್ಕೂ ಮೊದಲೇ ಗಾಂಧಿವಾದಿ ತಗಡೂರು ರಾಮಚಂದ್ರರಾಯರ ನೇತೃತ್ವದಲ್ಲಿ ಬದನವಾಳು ಸುತ್ತಲಿನ ಹಳ್ಳಿಗಳಲ್ಲಿ ನೂಲುವ, ನೇಯುವ ಕೈಮಗ್ಗಗಳ ಮೂಲಕ ಗ್ರಾಮಸ್ಥರ ಜೀವನೋಪಾಯ ಸ್ಥಾಪನೆಗೊಂಡಿತ್ತು. ಗ್ರಾಮದ ಮಹಿಳೆಯರು ನೂಲುವ, ನೇಯುವ ಕಾಯಕದ ಮೂಲಕ ತಮ್ಮ ಕುಟುಂಬಗಳನ್ನು ನಿರ್ವಹಿಸುತ್ತಿದ್ದರು. ಗಾಂಧಿಜಿ ಬದನವಾಳನ್ನು ಆಯ್ಕೆ ಮಾಡಿಕೊಂಡಿದ್ದು ಕೇವಲ ಭೌಗೋಳಿಕ ಕಾರಣಕ್ಕಲ್ಲ. ಅದು ಅವರ ಗ್ರಾಮ ಸ್ವರಾಜ್ಯದ ಪ್ರಯೋಗಶಾಲೆ ಆಗಿತ್ತು. “ಗ್ರಾಮವೇ ರಾಷ್ಟ್ರದ ಆತ್ಮ. ಗ್ರಾಮ ದುರ್ಬಲವಾದರೆ ದೇಶಬಲವಾಗುವುದಿಲ್ಲ” ಎಂಬ ನಂಬಿಕೆಯನ್ನು ಅವರು ಇಲ್ಲಿ ನೆಲೆಗೆ ತಂದರು. ಗಾಂಧಿಜಿಯ ಪ್ರೇರಣೆಯಿಂದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶ್ರಯದಲ್ಲಿ, ಬದನವಾಳು ಖಾದಿ ಕೇಂದ್ರವು ನಿಧಾನವಾಗಿ ಮತ್ತೆ ಜೀವ ಪಡೆಯಿತು. ಅನೇಕ ಚರಕಗಳು ತಿರುಗಲಾರಂಭಿಸಿದವು. ನೂಲು ಹುಟ್ಟಿತು. ಮಗ್ಗಗಳು ಶಬ್ದ ಮಾಡತೊಡಗಿದವು. ೧೯೩೦ರ ದಶಕದ ವೇಳೆಗೆ ಬದನವಾಳು ಮತ್ತು ಅದರ ಸುತ್ತಮುತ್ತಲ ಅನೇಕ ಹಳ್ಳಿಗಳಲ್ಲಿ ಚರಕ ಸಂಸ್ಕ ತಿ ನೆಲೆಸಿತು.

ನೂರಾರು ಮಹಿಳೆಯರು ಖಾದಿ ನೇಯ್ಗೆಯ ಕಲೆಯ ಸುತ್ತ ತಮ್ಮ ಜೀವನವನ್ನು ರೂಪಿಸಿಕೊಂಡು ಸಬಲೀಕರಣವನ್ನು ಕಂಡುಕೊಂಡರು. ನೂರಾರು ಕೈಮಗ್ಗಗಳು ಕಾರ್ಯನಿರತವಾದವು. ಟವಲ್‌ಗಳಿಂದ ಆರಂಭ ವಾದ ಬಟ್ಟೆ ಉತ್ಪಾದನೆ ನಿಧಾನವಾಗಿ ಉಡುಪುಗಳವರೆಗೆ ವಿಸ್ತರಿಸಿತು. ಅದು ಕೇವಲ ಉದ್ಯೋಗವಾಗಲಿಲ್ಲ ಬದುಕಿನ ರೀತಿಯಾಯಿತು. ದುಡಿಮೆ, ಉಳಿತಾಯ, ಸರಳ ಜೀವನದೊಂದಿಗೆ “ದುಶ್ಚಟಗಳನ್ನು ಕಡಿಮೆ ಮಾಡಿ, ಶ್ರಮದ ಆದಾಯವನ್ನು ಗೌರವದಿಂದ ಉಳಿಸಿ” ಎಂಬ ಗಾಂಧಿಜಿಯ ಕರೆಯನ್ನು ಬದನವಾಳಿನ ನೂಲುವವರು ಅಕ್ಷರಶಃ ಪಾಲಿಸಿದರು. ಬದನವಾಳು ಖಾದಿ ಕೇಂದ್ರ ಕೇವಲ ಕೈಮಗ್ಗಕ್ಕೆ ಸೀಮಿತವಾಗದೆ ಸೋಪು ತಯಾರಿಕೆ, ರೇಷ್ಮೆ ನೇಯ್ಗೆ, ಎಣ್ಣೆ ಗಾಣ, ಬೆಂಕಿ ಪೊಟ್ಟಣ ತಯಾರಿಕೆ, ಕಾಗದ ಉತ್ಪಾದನೆ ಹೀಗೆ ಸ್ಥಳೀಯ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾದ ಗುಡಿ ಕೈಗಾರಿಕಾ ಸಂಕೀರ್ಣವೇ ಅಲ್ಲಿ ನಿರ್ಮಾಣವಾಯಿತು.

ಗಾಂಧಿಜಿ ತಮ್ಮ “ಯಂಗ್ ಇಂಡಿಯಾ” ಪತ್ರಿಕೆಯಲ್ಲಿ ಮೈಸೂರು ರಾಜ್ಯದ ಪುಟ್ಟ ಗ್ರಾಮವಾದ ಬದನವಾಳುವಿನ ಈ ಪ್ರಯತ್ನವನ್ನು ಶ್ಲಾಸಿದರು. ಆದರೆ ಅವರು ಒಂದು ಎಚ್ಚರಿಕೆಯ ಮಾತನ್ನೂ ಹೇಳಿದರು- “ಶ್ರಿಮಂತರು ಖಾದಿ ಧರಿಸದಿದ್ದರೆ, ಖಾದಿ ಮನೆಮಾತಾಗಲಾರದು.” ಆ ಮಾತು ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ.  ಸ್ವಾತಂತ್ರ್ಯಾ ನಂತರ ಈ ಕೇಂದ್ರವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ತನ್ನ ಸುಪರ್ದಿಗೆ ತೆಗೆದುಕೊಂಡಿತು. ನಂತರ ಖಾದಿ ಮಂಡಳಿ ವಹಿಸಿಕೊಂಡಿತು. ಅಲ್ಲಿನ ಅವ್ಯವಸ್ಥೆಯಿಂದಾಗಿ ಈ ಗುಡಿ ಕೈಗಾರಿಕೆಗಳ ಅವನತಿಗೆ ದಾರಿಯಾಯಿತು. ಪ್ರಸ್ತುತ ಈ ಕೇಂದ್ರವನ್ನು ಹೊಳೆನರಸೀಪುರ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘವು ವಹಿಸಿಕೊಂಡಿದೆ. ಇವೆಲ್ಲ ವಿದ್ಯಮಾನಗಳೊಂದಿಗೆ ಕಾಲ ಬದಲಾಯಿತು… ಯಂತ್ರಗಳು ಬಂದವು… ನಗರಗಳು ವಿಸ್ತರಿಸಿದವು… ಯುವಕರು ಹಳ್ಳಿಗಳನ್ನು ತೊರೆದರು… ಬದನವಾಳಿನ ಕೈಮಗ್ಗಗಳು ನಿಧಾನವಾಗಿ ಮೌನವಾದವು. ಒಮ್ಮೆ ಗಿರಾಕಿಗಳಿಂದ ತುಂಬಿದ್ದ ಗೋದಾಮುಗಳು ಸ್ಮಾರಕಗಳಾಗಿ ಉಳಿದವು. ಇಂದಿಗೂ ಈ ನೆಲದಲ್ಲಿ ಮಗ್ಗಗಳಿವೆ. ಆದರೆ ಅವುಗಳ ಶಬ್ದ ಕ್ಷೀಣವಾಗಿದೆ. ಆದರೆ ಮಗ್ಗದ ಮುಂದೆ ಕುಳಿತಿರುವ ಹಿರಿಯ ಮಹಿಳೆಯ ಕಣ್ಣುಗಳಲ್ಲಿ ಇನ್ನೂ ಒಂದು ಆಸೆ ಇದೆ… ಕೈಮಗ್ಗಗಳ ಶಬ್ದ ಮತ್ತೆ ಅನುರಣಿಸಬೇಕು, ಗ್ರಾಮದ ಜನರು ನಗರಗಳಿಗೆ ಗುಳೆ ಹೋಗುವ ಬದಲು, ಶ್ರಮಜೀವನವನ್ನು ನಡೆಸುತ್ತಾ ತಮ್ಮ ಗ್ರಾಮದಲ್ಲೇ ಗೌರವದಿಂದ ಬದುಕಬೇಕು ಎಂಬ ಆಸೆ.

ಇದು ಕೇವಲ ಕನಸಲ್ಲ. ಇಲ್ಲಿನ ಜನರ ಆತ್ಮಸಮ್ಮಾನದ ಪ್ರಶ್ನೆ. ಒಂದು ಕಾಲದಲ್ಲಿ ಚರಕದ ಶಬ್ದವೇ ದಿನದ ಘಂಟೆಯಾಗಿದ್ದ ಈ ಊರಲ್ಲಿ, ಇಂದು ಮೌನ ಆವರಿಸಿದೆ. ಮಗ್ಗಗಳು ಇನ್ನೂ ತಿರುಗುತ್ತಿದ್ದರೂ ಕೈಗಳು ಕಡಿಮೆಯಾಗಿವೆ. ತಂತ್ರಜ್ಞಾನ, ನಗರದ ಆಕರ್ಷಣೆಯಿಂದ ಗ್ರಾಮ ನಿಧಾನವಾಗಿ ಖಾಲಿಯಾಗಿದೆ. ಇಂದಿಗೂ ಇಲ್ಲಿ ಖಾದಿ ಕೇಂದ್ರವೇನೂ ಇದೆ… ಗಾಂಧಿಜಿಯ ಹೆಸರು ಫಲಕದಲ್ಲಿದೆ… ಗೋಡೆಗಳಲ್ಲಿ ಇತಿಹಾಸ ಉಸಿರಾಡುತ್ತಿದೆ… ಆದರೆ ಬದುಕಿನ ಚಟುವಟಿಕೆ ಮಾತ್ರ ಕ್ಷೀಣಿಸಿದೆ. ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮತ್ತೊಮ್ಮೆ ಅರ್ಥ ತುಂಬಬೇಕಿದೆ. ಹಳೆಯ ಮಗ್ಗಗಳಿಗೆ ಹೊಸ ಉಸಿರು, ಹಳೆಯ ಕನಸಿಗೆ ಇಂದಿನ ಭಾಷೆಯನ್ನು ನೀಡಬೇಕಿದೆ. ಬದನವಾಳು ಇಂದಿಗೂ ಸಾಧ್ಯತೆಯ ಊರು. ಅದು ನಮ್ಮ ಒಳಗೊಳ್ಳುವಿಕೆಯನ್ನು ಕಾಯುತ್ತಿದೆ… ನಾವು ಅದನ್ನು ಸ್ಮಾರಕವಾಗಿಯೇ ಉಳಿಸುತ್ತೇವೋ, ಅಥವಾ ಬದುಕಿನ ಕೇಂದ್ರವಾಗಿ ಮರುಹುಟ್ಟು ಕೊಡುತ್ತೇವೋ ಎಂಬುದು ನಮ್ಮ ನಿಮ್ಮೆಲ್ಲರ ಮೇಲೆ ನಿರ್ಭರಗೊಂಡಿದೆ. ಗಾಂಧಿಜಿ ಕಂಡ ಗ್ರಾಮ ಸ್ವರಾಜ್ಯ ಭಾಷಣಗಳಿಗೆ ಅಥವಾ ಕೇವಲ ಹಬ್ಬಗಳಲ್ಲಿ ತೊಡುವ ಖಾದಿಗೆ ಸೀಮಿತವಾಗದೆ ಗ್ರಾಮಕ್ಕೆ ತನ್ನ ಶ್ರಮದ ಮೇಲೆ ಬದುಕುವ ಹಕ್ಕನ್ನು ಕಲ್ಪಿಸಬೇಕು. ಬದನವಾಳಿನ ಮಗ್ಗಗಳು ಮೌನವಾದರೆ, ಅದು ಕೇವಲ ಒಂದು ಕೈಮಗ್ಗ ಕೇಂದ್ರದ ಅಂತ್ಯವಲ್ಲ… ಅದು ಗಾಂಧಿಜಿಯ ಕನಸಿನ ಅಂತ್ಯ.

” ಸ್ವಾತಂತ್ರ್ಯ ಪೂರ್ವದಲ್ಲಿಯೇ ಬದನವಾಳಿನ ಕೈಮಗ್ಗ ಕೇಂದ್ರದಲ್ಲಿ ನೂರಾರು ಮಹಿಳೆಯರು ಖಾದಿ ನೇಯ್ಗೆಯ ಕಲೆಯ ಸುತ್ತ ತಮ್ಮ ಜೀವನವನ್ನು ರೂಪಿಸಿಕೊಂಡು ಸಬಲೀಕರಣವನ್ನು ಕಂಡುಕೊಂಡಿದ್ದರು. ಇಲ್ಲಿ ತಯಾರಾಗುತ್ತಿದ್ದ ಖಾದಿ ಬಟ್ಟೆಗಳು ದೇಶದ ಮೂಲೆಮೂಲೆಗಳಿಗೆ ಹೋಗುತ್ತಿದ್ದವು. ವಿದೇಶಗಳಿಗೂ ರಫ್ತಾಗುತ್ತಿತ್ತು. ಗಾಂಧಿಜಿಯ ‘ಗ್ರಾಮ ಸ್ವರಾಜ್ಯ’ದ ಕನಸನ್ನು ಎಲ್ಲ ರೀತಿಯಲ್ಲೂ ಸಾಕಾರಗೊಳಿಸಿದ್ದ ಮಾದರಿ ಗ್ರಾಮ ಬದನವಾಳಾಗಿತ್ತು.ಆದರೆ ಇಂದು ಈ ಖಾದಿ ಕೇಂದ್ರ ಪುನರುಜ್ಜೀವನಕ್ಕಾಗಿ ಪರಿತಪಿಸುತ್ತಿದೆ. ಸದ್ಯ ೪೮ ಮಹಿಳೆಯರು ಮೂರು ಕಟ್ಟಡಗಳಲ್ಲಿ ನೇಯ್ಗೆ ಕೆಲಸ ಮಾಡುತ್ತಿದ್ದಾರೆ. ಉಳಿದ ಎಲ್ಲಾ ಕಟ್ಟಡಗಳು ಕುಸಿದುಬಿದ್ದಿವೆ. ಸ್ಥಳೀಯ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾದ ವಸ್ತುಗಳನ್ನು ತಯಾರಿಸುತ್ತಿದ್ದ ಗುಡಿ ಕೈಗಾರಿಕಾ ಸಂಕೀರ್ಣ ಇಂದು ಪಾಳು ಬಿದ್ದ ಪ್ರದೇಶದಂತಿದೆ.”

” ಹಿಂದೆ ಅಕ್ಕಪಕ್ಕದ ಊರುಗಳಿಂದಲೂ ಮಹಿಳೆಯರು ಇಲ್ಲಿ ಕೆಲಸಕ್ಕೆ ಬರುತ್ತಿದ್ದರು. ಈಗ ನಮ್ಮ ಊರಿನಲ್ಲೇ ಇರುವ ನಾವು ಕೆಲವೇ ಜನ ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಖಾದಿ ಬಟ್ಟೆಗೆ ಬೇಡಿಕೆ ಇಲ್ಲದ ಕಾರಣ ಬಟ್ಟೆ ಮಾರಾಟವಾಗುತ್ತಿಲ್ಲ. ಹಾಗಾಗಿ ಕಳೆದ ಮೂರು ತಿಂಗಳುಗಳಿಂದ ನಮಗೆ ಸಂಬಳವೇ ದೊರೆತಿಲ್ಲ.ಈ ಕೆಲಸಕ್ಕೆ ಬೇಕಾದ ಹತ್ತಿ ಚಿತ್ರದುರ್ಗದಿಂದ ಬರುತ್ತದೆ. ಈಗ ಆ ಹತ್ತಿಯೂ ಮುಗಿದುಹೋಗಿದೆ. ಇನ್ನೂ ಹೊಸ ಆರ್ಡರ್ ಹಾಕಿಲ್ಲ. ಆರ್ಡರ್ ಹಾಕಿದರೂ ಹತ್ತಿ ಬರಲು ಕನಿಷ್ಠ ಒಂದು ತಿಂಗಳು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ನಮಗೆ ಕೆಲಸವೇ ಇಲ್ಲ. ಈಗ ನಮಗೆ ಒಂದು ‘ಲಡಿ’ಗೆ ಕೇವಲ ೧೦ ರೂ. ಮಾತ್ರ ಕೊಡುತ್ತಿದ್ದಾರೆ. ಸರ್ಕಾರದಿಂದ ಕನಿಷ್ಠ ೧೨.೩೦ ರೂ. ಆದರೂ ಸಿಕ್ಕರೆ, ನಾವು ಮಾಡುವ ಕಷ್ಟದ ಕೆಲಸಕ್ಕೆ ಸ್ವಲ್ಪವಾದರೂ ನ್ಯಾಯ ಸಿಗುತ್ತದೆ.”

-ರಾಜಮ್ಮ, ನೇಯ್ಗೆ ಕಾರ್ಮಿಕರು, ಬದನವಾಳ

ಆಂದೋಲನ ಡೆಸ್ಕ್

Recent Posts

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ

ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…

8 hours ago

ಮೈಸೂರಿನಲ್ಲಿ ನಾಳೆ ಇಂದ ಮೂರು ದಿನ ದೇಸಿ ಎಣ್ಣೆ ಮೇಳ : ಮೇಳೈಸಲಿದೆ ಸಾಂಪ್ರದಾಯಿಕ ಎಣ್ಣೆ

ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…

10 hours ago

ಬಿ-ಖಾತಾಗಳಿಗೂ ʼಎ-ಖಾತಾʼ ಭಾಗ್ಯ ; ಸಂಪುಟ ಸಭೆಯಲ್ಲಿ ನಿರ್ಣಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…

11 hours ago

ಮಂಡ್ಯದಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ : ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಕೆತ್ತನೆ ಜವಾಬ್ದಾರಿ

ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…

12 hours ago

ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಚಿಂತನೆ : ಸಂಸದ ಯದುವೀರ್‌

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…

12 hours ago

ಗೃಹಲಕ್ಷ್ಮಿ ಹಣ ಶೀಘ್ರ ಸಂದಾಯ : ಸಚಿವೆ ಹೆಬ್ಬಾಳಕರ್‌

ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…

13 hours ago