ಸಿ.ಎಂ.ನರಸಿಂಹಮೂರ್ತಿ
ಕೈಲಾಸಮೂರ್ತಿ ಗುಂಡು ಗುಂಡಾಗಿ, ಚೆಂದುಳ್ಳ ಚೆಲುವನಂತೆ ಕೆಂಪು ಕೆಂಪಾಗಿದ್ದವ. ಕೇವಲ ೩೮ ವರ್ಷ ವಯಸ್ಸು.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕುಸಿದ್ದಯ್ಯನಪುರ ಗ್ರಾಮದ ದಿವಂಗತ ಮಲ್ಲಿಕಾರ್ಜುನ ಮತ್ತು ಲಕ್ಷ್ಮೀ ದಂಪತಿಯ ೨ನೇ ಮಗ. ತಾತ, ಅಜ್ಜಿ, ಅಪ್ಪ ಎಲ್ಲರೂ ಗುರು ಬೋಧನೆಯವರು, ಗುರು ಮಕ್ಕಳ ಪರಂಪರೆಯವರು.
ಬಿಳಿ ಅಂಗಿ, ಬಿಳಿ ಪಂಚೆ, ಹೆಗಲಿಗೆ ಕೆಂಪು ಶಾಲನ್ನು ಹಿಂದಕ್ಕೂ ಮುಂದಕ್ಕೂ ಇಳಿಬಿಟ್ಟು, ಹಣೆಗೆ ವಿಭೂತಿ ಭಸ್ಮ ಬಳಿದು ಕಂಕುಳಲ್ಲಿ ಜೋಳಿಗೆ, ಕೈಯಲ್ಲಿ ದಮ್ಮಡಿ ಹಿಡಿದು ತಂಡದ ಸಹ ಸದಸ್ಯರ ಜೊತೆ ಒಂದೇ ಸಮನೆ ಉಘೇ ಮಾತ್ಮಲಯೋ… ಎಂದು ಉಘೇ ಹಾಡುತ್ತಾ, ತಂಬೂರಿ ಮೀಟುತ್ತಾ, ದಮ್ಮಡಿ ನುಡಿಸುತ್ತ, ಜೊತೆಗೆ ಹಾಡು ಹಾಡುತ್ತಾ, ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದ ತಂಡ ಇಡೀ ಭಾರತವನ್ನು ಜನಪದ ಗೀತೆಗಳನ್ನು ಹಾಡುವ ಮೂಲಕ ಸುತ್ತಿ ಬಂದದ್ದು ಈಗ ಇತಿಹಾಸವಾಗಿದೆ. ೮ನೇ ತರಗತಿ ಓದುತ್ತಿದ್ದಾಗಲೇ ಮನೆಯವರು ದೇವರಗುಡ್ಡನನ್ನಾಗಿ ಮಾಡಿದರು. ವಿದ್ಯೆ ಅರ್ಧಕ್ಕೆ ನಿಂತಿತು. ದೇವರ ಗುಡ್ಡನಾಗಿ ಮಂಟೇಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿ ರಂಗಸ್ವಾಮಿ ಕಾವ್ಯಗಳನ್ನು ಕಲಿಯಲು ಕುರುಬನಕಟ್ಟೆಯಲ್ಲಿ ಹಂಪಿ ವಿಶ್ವವಿದ್ಯಾನಿಲಯ ಆಗ ತಾನೆ ಆರಂಭಿಸಿದ್ದ ದೇಸೀ ಅಧ್ಯಯನ ಕೇಂದ್ರದ ನೀಲಗಾರರ ತರಬೇತಿ ಶಾಲೆಯಲ್ಲಿ ಸುವರ್ಣಾವಕಾಶ ಒದಗಿ ಬಂತು.
ಬೊಪ್ಪೇಗೌಡನಪುರ ಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀ ಪ್ರಭುದೇವರಾಜೇ ಅರಸರ ಕೃಪಾಶೀರ್ವಾದದಿಂದ ವಿದ್ಯೆ ಕಲಿತು ಪ್ರಸಿದ್ಧಿ ಪಡೆದುಕೊಂಡ. ದಮ್ಮಡಿ, ತಾಳ ನುಡಿಸುವುದರಲ್ಲಿ ಮಹಾನ್ ಪ್ರವೀಣನಾಗಿದ್ದ ಕೈಲಾಸಮೂರ್ತಿ ಜಾನಪದ ಹಾಡುಗಾರಿಕೆ ಮತ್ತು ಆಚರಣೆ ಪರಂಪರೆಗಳನ್ನು ಕಟ್ಟುವ, ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮಾದರಿಯಾಗಿದ್ದ. ಈತ ಮೈಸೂರು ಆಕಾಶವಾಣಿ, ಬೆಂಗಳೂರು ದೂರದರ್ಶನದಲ್ಲಿ ಹಾಡಿ ಜನಪ್ರಿಯನಾದವನು.
ಕೈಲಾಸಮೂರ್ತಿಗೆ ಚಾಮರಾಜನಗರ ಜಿಲ್ಲಾಡಳಿತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಅತ್ಯುತ್ತಮ ಯುವ ಗಾಯಕ ಪ್ರಶಸ್ತಿ, ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ, ಕರುನಾಡ ಸೇವಾ ಪ್ರಶಸ್ತಿ, ಅಂಕ ಪ್ರಶಸ್ತಿ, ಪ್ರಜಾಭೂಷಣ ರಾಷ್ಟ್ರ ಪ್ರಶಸ್ತಿಗಳಲ್ಲದೆ ಹಲವು ಬಿರುದು ಸನ್ಮಾನಗಳು ಸಂದಿದ್ದವು. ಪ್ರತಿ ವರ್ಷವೂ ಮಲೆ ಮಹದೇಶ್ವರ ಜಾತ್ರಾ ಮಹೋತ್ಸವ, ಬಿಳಿಗಿರಿರಂಗನ ಬೆಟ್ಟದ ಜಾತ್ರಾ ಮಹೋತ್ಸವ, ಚಿಕ್ಕಲ್ಲೂರು- ಕುರುಬನಕಟ್ಟೆ ಮಂಟೇಸ್ವಾಮಿ ಉತ್ಸವ, ಕಪ್ಪಡಿ, ಸಿದ್ದಪ್ಪಾಜಿ ಉತ್ಸವ… ಹೀಗೆ ಅನೇಕ ರಾಜ್ಯ ಮಟ್ಟದ ಉತ್ಸವಗಳಲ್ಲಿ ಅಹೋರಾತ್ರಿ ಹಾಡುತ್ತಿದ್ದುದು ಈಗ ನೆನಪು ಮಾತ್ರ. ಈ ಪರಂಪರೆಯ ಹಿರಿಯ ಗಾಯಕರಾದ ಮಳವಳ್ಳಿ ಮಹದೇವಸ್ವಾಮಿ, ಮೈಸೂರು ಗುರುರಾಜ್, ಮಳವಳ್ಳಿ ನಾಗೇಂದ್ರ, ಡಾ. ಪಿ.ಕೆ.ರಾಜಶೇಖರ, ಶ್ರೀನಿವಾಸ ಜಿ. ಕಪ್ಪಣ್ಣ, ಪಿಚ್ಚಳ್ಳಿ ಶ್ರೀನಿವಾಸ್, ಮಂಜಮ್ಮ ಜೋಗತಿ ಹೀಗೆ ನಾಡಿನ ಘಟಾನುಘಟಿಗಳ ಜೊತೆ ಹೊಸ ತಲೆಮಾರಿನ ಯುವ ಜನಪದ ಗಾಯಕನಾಗಿ ಗುರುತಿಸಿಕೊಂಡಿದ್ದ. ತಾನೇ ಸ್ವತಃ ಸ್ವಗ್ರಾಮವಾದ ಸಿದ್ದಯ್ಯನಪುರದಲ್ಲಿ ಜಾನಪದ ಕಲಿಕಾ ಕೇಂದ್ರವನ್ನು ಸ್ಥಾಪಿಸಿದ್ದು, ‘ಹಾಡುವ ಕಾಯಕವೇ ಕೈಲಾಸ’ ಎಂದು ನಂಬಿದ್ದ ಕೈಲಾಸಮೂರ್ತಿ ಹಾಡು ಕಥೆಗಳ ಸರದಾರನಾಗಿದ್ದ. ಈತನ ಆತ್ಮಚರಿತ್ರೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ಪ್ರಕಟಿಸಿರುವ ಹಿರಿಯ ಜಾನಪದ ವಿದ್ವಾಂಸಡಾ.ಹನೂರು ಕೃಷ್ಣಮೂರ್ತಿ ಸಂಪಾದಕತ್ವದ ‘ನಾವು ಕೂಗುವ ಕೂಗು’ ಎನ್ನುವ ಪುಸ್ತಕದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ ತ ಸಾಹಿತಿ ಮಹದೇವ ಶಂಕನಪುರ ಅವರು ದಾಖಲಿಸಿದ್ದಾರೆ.
ಕಳೆದ ತಿಂಗಳು ೧೨ನೇ ತಾರೀಖು ಕೈಲಾಸಮೂರ್ತಿ ಫೋನಿನಿಂದ ನನಗೆ ಕರೆ ಬರುತ್ತದೆ. ಪಕ್ಕದಲ್ಲೇ ಇಟ್ಟಿದ್ದ ಫೋನನ್ನು ಗಾಬರಿಯಿಂದ ನೋಡಿ ‘ಏನು ಕೈಲಾಸ ಮೂರ್ತಿ’ ಎನ್ನುತ್ತೇನೆ. ಅತ್ತಕಡೆಯಿಂದ ಕೈಲಾಸ ಮೂರ್ತಿಯ ಸಹೋದರನಂತಿದ್ದ ಸಹಪಾಠಿ ಕುಮಾರ್- ‘ಇನ್ನೆಲ್ಲಿ ಕೈಲಾಸಮೂರ್ತಿ ಅಣ್ಣ, ಕೈಲಾಸಮೂರ್ತಿ ಈವಾಗ ತೀರಿಹೋದ’ ಎಂದು ಅಳತೊಡಗಿದ. ನಾನು ಆ ಹೊತ್ತಿನಲ್ಲಿ ದಿಗ್ಭ್ರಾಂತನಾಗಿ ‘ಅಯ್ಯೋ ಏನಾಗಿತ್ತು?’ ಎಂದೆ. ಆತ ‘ಹಾರ್ಟ್ ಅಟ್ಯಾಕ್ ಅಣ್ಣ’ ಅಂದ, ಒಂದು ಕ್ಷಣ… ಏನು ಮಾತನಾಡದೆ ಮೌನವಾದೆ. ಚಿಕ್ಕ ವಯಸ್ಸಿನ ಹೆಂಡತಿ, ಎರಡು ಚಿಕ್ಕ ಮಕ್ಕಳು, ಆತನ ಕುಟುಂಬ ಮತ್ತು ತಂಡದ ಗೆಳೆಯರನ್ನು ಬಿಟ್ಟುಮಧ್ಯದಲ್ಲಿಯೇ ಇನ್ನಿಲ್ಲವಾಗಿದ್ದು ಅತೀವ ದುಃಖವನ್ನುಂಟು ಮಾಡಿದೆ.
ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಜಾನಪದ ಕಲಾವಿದನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವವರು ಕೈಲಾಸಮೂರ್ತಿ ಅವರ ಪತ್ನಿ ರೇಖಾ ಅವರ ಮೊಬೈಲ್ ನಂಬರ್ ೯೭೩೯೧ ೨೭೦೫೦ ಸಂಪರ್ಕಿಸಿ ಸಹಾಯ ಮಾಡಬಹುದು
” ಕಷ್ಟಕರ ಪರಿಸ್ಥಿತಿಯಲ್ಲಿರುವ ಈ ಜಾನಪದ ಕಲಾವಿದನ ಕುಟುಂಬಕ್ಕೆ ಆರ್ಥಿಕ ನೆರವು ಬೇಕಾಗಿದೆ. ”
ಮಹೇಶ್ ಕರೋಠಿ ಕಿಕ್ಕೇರಿ: ಇಲ್ಲಿಗೆ ಸಮೀಪದ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಕಳೆದ ೨-೩ ವರ್ಷಗಳಿಂದ ಹಲವು…
ನೆಂಟರಿಷ್ಟರು ಮನೆಗೆ ಬಂದರು ಎಂದರೆ... ಏನು ಎತ್ತ, ಹೇಗೆ ಅವರ ಆತಿಥ್ಯ? ಇಂಥ ಸಂಕಷ್ಟಗಳಿಗೆಲ್ಲಾ ಕಾರಣ,ಬಂದ್ ಆಗಿರುವ ಆ ಹಾರ್ಮುಜ್…
ಮೈಸೂರಿನಿಂದ ಎಚ್.ಡಿ.ಕೋಟೆ ಮಾರ್ಗದಲ್ಲಿ ಬರುವ ಮಾದಾಪುರ ಗ್ರಾಮದಿಂದ ಕೆ. ಬೆಳತ್ತೂರು ಹಾಗೂ ಲೆಂಕೆ ಗ್ರಾಮದವರೆಗೂ ರಸ್ತೆ ಡಾಂಬರೀಕರಣವಾಗಿದೆ. ಈ ರಸ್ತೆಯಲ್ಲಿ…
ಜಾತ್ರೆಗಳು ಹಾಗೂ ಹಬ್ಬಗಳು ಗ್ರಾಮದ ಎಲ್ಲಾ ಜನರು ಒಟ್ಟುಗೂಡಿ ಮಾಡುವ ಕಾರ್ಯಕ್ರಮವಾಗಿವೆ. ಇದರಲ್ಲಿ ಜನರ ಒಗ್ಗಟ್ಟು, ಪರಸ್ಪರ ಸಹಕಾರ ಕಾಣುತ್ತೇವೆ.…
ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ ಅಂಡರ್ ಗ್ರೌಂಡ್ ಕೇಬಲ್ ಅನ್ನು ಅಳಡಿಸುತ್ತಿದ್ದು, ಕಾಮಗಾರಿಯ…
ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ…