ಹಾಡು ಪಾಡು

ಆಲಂಬಾಡಿ ಎಂಬ ಬೇಡಗಂಪಣ ರಾಜ್ಯ

ಸ್ವಾಮಿ ಪೊನ್ನಾಚಿ

ಮಹದೇಶ್ವರ ಬೆಟ್ಟದ ಕೆಳಗೆ ಪಾಲಾರ್ ಗೇಟಿನಿಂದ ಎಡಕ್ಕೆ ಗೋಪಿನಾಥಂ ಕಡೆಗೆ ತಿರುಗಿಕೊಂಡರೆ ದಾರಿಯ ಬಲಬದಿಯ ಉದ್ದಕ್ಕೂ ಮೆಟ್ಟೂರ್ ಡ್ಯಾಮ್‌ನ ಹಿನ್ನೀರು ನಿಮ್ಮ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಜೂನ್ ತಿಂಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದಂತೆ ಹಬ್ಬಿರುವ ಕಾಡಿನಲ್ಲಷ್ಟೇ ಬೆಳೆಯುವ ಸುಂಡ್ರೀ ಹೂ (ಜಾಲರಿ ಹೂ) ನಾಸಿಕವನ್ನು ಮತ್ತೆ ಮತ್ತೆ ಆ  ಸುವಾಸನೆಯನ್ನು ಆಘ್ರಾಣಿಸಿಕೊಳ್ಳುವಂತೆ ತನ್ನ ಪರಿಮಳವನ್ನು ಕಾಡಿನುದ್ದಕ್ಕೂ ಬೀರುತ್ತ, ಗಂಡುಬೀರಿ ಹುಡುಗಿಯ ಹಾಗೇ ಕ್ಯಾರೆ ಅನ್ನದೆ ನಿಮ್ಮನ್ನು ಸೆಳೆಯುತ್ತಲೇ ಇರುತ್ತದೆ. ಹಾಗೆ ಸಾಗುತ್ತಾ ಗೋಪಿನಾಥಂ ದಾಟಿ ಹೊಗೇನಕಲ್ ಮೂರು ನಾಲ್ಕು ಕಿಲೋಮೀಟರ್ ಇರುವಾಗ ರಸ್ತೆಯ ಎಡಕ್ಕೆ ಮಣ್ಣಿನ ದಾರಿ ಒಂದು ಕಾಣುತ್ತದೆ. ಅದೇ ಒಂದು ಕಾಲಕ್ಕೆ ಕೋಟೆ ಕಟ್ಟಿಸಿಕೊಂಡು ಮೆರೆದ ವಿಶಾಲ ಬೇಡಗಂಪಣ ರಾಜ್ಯದ ರಾಜಧಾನಿ ಆಲಂಬಾಡಿಯ ಹೆಬ್ಬಾಗಿಲು.

ಅಲ್ಲಲ್ಲಿ ಚದುರಿಕೊಂಡಂತೆ ಹತ್ತಾರು ಮನೆಗಳ ಎರಡು ಮೂರು ಗುಂಪುಗಳನ್ನು ಬಿಟ್ಟರೆ ಇಡೀ ಊರು ಥೇಟ್ ಹಾಳುಹಂಪೆಯಂತೆ. ಹೊಲಮಾಳದಲ್ಲಿ ಶಿಥಿಲಗೊಂಡು ಬಿದ್ದಿರುವ ರಂಗನಾಥಸ್ವಾಮಿಯ ದೇವಾಲಯ ಮತ್ತು ಪೂರ್ವಕ್ಕೆ ಕಾವೇರಿ ನದಿತೀರದಲ್ಲಿರುವ ಎದೆಯೊಳಗೆ ದೊಡ್ಡ ಆಲದಮರವನ್ನು ನಾಟಿಸಿಕೊಂಡಿಯೂ ಇನ್ನೂ ಮಣ್ಣು ಮುಕ್ಕದೆ ನಿಂತ ಮದ್ದಿನಮನೆ ಹಾಗೂ ಅದರ ಸುತ್ತಲಿನ ದೊಡ್ಡ ಬಂಡೆಗಲ್ಲುಗಳ ಕೋಟೆ ಮಾತ್ರ ಒಂದು ಕಾಲದ ಆಲಂಬಾಡಿಯ ವೈಭವವನ್ನು ಕಣ್ಣ ಮುಂದೆ ಹಾಯಿಸಿ ಬಿಕೋ ಎನ್ನುತ್ತವೆ.

ಆಲಂಬಾಡಿ ರಾಜಧಾನಿಗೆ ಹೊಂದಿಕೊಂಡಂತೆ ಕಾಡಮಧ್ಯದಲ್ಲಿರುವ ನಾಮದಳ್ಳಿ, ಪಂಚಲಾಣೆ, ಬೆಚ್ಚಲಾಣೆಯ ಊರುಗಳಲ್ಲಿ ಜನವಸತಿ ಇತ್ತು ಎಂಬ ಕುರುಹನ್ನೂ ಬಿಡದೆ ಕಾಡಿನಿಂದ ಆವೃತವಾಗಿ ಬಿಟ್ಟಿದೆ. ನಾಮದಳ್ಳಿಯಲ್ಲಿ ಮಾತ್ರ ಜನ ಬಳಸುತ್ತಿದ್ದ ಬಾವಿಯ ಕಟ್ಟಡವೊಂದು ನಾಗರಿಕರಾದ ನಮ್ಮನ್ನು ಕಂಡು ಕಿಸಕ್ಕನೆ ಕಣ್ಣೊಡೆದು ಮುಂದೆ ನಿಮ್ಮ ನಾಗರಿಕತೆಯ ಹಣೆಬರಹವು ಕೂಡ ನನ್ನಂತೆಯೇ ಎಂದು ಅಣಕಿಸುತ್ತದೆ. ಜನಪದ ಕಾವ್ಯದಲ್ಲಿ ಹಾಡಿ ಹೊಗಳಿಸಿಕೊಂಡ ಈ ಊರು, ಇಂದು ಕಾಲಿಟ್ಟ ಕಡೆಯೆಲ್ಲ ಒಡೆದ ಮಡಕೆಯ ಚೂರುಗಳನ್ನು ಕಾಲಿಗೆ ತಾಗಿಸುತ್ತಾ ತನ್ನ ವೈಭವದ ಕಥೆಯನ್ನು ಹೇಳಲು ಪ್ರಯತ್ನಿಸುತ್ತಲೇ ಇದೆ.

ರಾಜರಾಜಚೋಳ, ರಾಮಾನುಜಾಚಾರ್ಯರನ್ನು ಕರ್ನಾಟಕದ ಕಡೆ ಅಟ್ಟಿದಾಗ ಪೂರ್ವದಿಂದ ಪಶ್ಚಿಮದ ಕಡೆ ಹೊರಟ ರಾಮಾನುಜಾಚಾರ್ಯರು ಇದೇ ತಮಿಳುನಾಡಿನ ಅಂಚಟ್ಟಿ, ಹೊಗೇನಕಲ್, ಆಲಂಬಾಡಿ ಮಾರ್ಗದಲ್ಲಿ ಸಾಗುತ್ತಾ ಬಿಳಿಗಿರಿರಂಗನ ಬೆಟ್ಟ ದಾಟಿಕೊಂಡು ಮೇಲುಕೋಟೆಯ ಕಡೆ ಪ್ರಯಾಣ ಬೆಳೆಸಿದ್ದಿರಬಹುದು. ಹಾಗೆಪ್ರಯಾಣಿಸುವಾಗ ತಮ್ಮ ಯುದ್ಧ ದೇವತೆಯಾದ ಬೇಟೆರಾಯನ ಆರಾಧಕರಾದ ಈ ಬೇಡಜನರನ್ನು ತನ್ನ ವ್ಯಕ್ತಿತ್ವದಿಂದ ಸೆಳೆಯುತ್ತಾ ಬೇಟೆರಾಯನನ್ನೇ ರಂಗನಾಥನನ್ನಾಗಿ ರೂಪಾಂತರಿಸಿ ವೈಷ್ಣವ ಪಂಥದ ಪ್ರಭಾವ ಬೀರಿಬಿಟ್ಟರು. ಈ ಬೇಡರು ಇತ್ತ ರಂಗನನ್ನೂ ಬಿಡದೆ, ಅತ್ತ ಶಿವನನ್ನೂ ಬಿಡದೆ ಎರಡೂ ದೇವತೆಗಳನ್ನು ಇವತ್ತಿಗೂ ಕೂಡ ಪೂಜಿಸಿಕೊಂಡು ಬರುತಿದ್ದಾರೆ. (ಪೂರ್ತಿ ವೈಷ್ಣವರಾದ ಕಾಡುಜನರು ರಂಗಪ್ಪನನ್ನು ಆರಾಧಿಸುವ ಹಾಗೂ ಮಾದಪ್ಪನಿಂದ ಲಿಂಗದೀಕ್ಷೆ ಪಡೆದು ಶೈವರಾದ ಕಾಡುಜನರು ಬೇಡಗಂಪಣರಾಗಿ ಮಾದೇಶ್ವರನ್ನು ಆರಾಧಿಸುವ ತಂಬಡಿಗಳಾದರು)  ಬೆಟ್ಟದ ಪಕ್ಕದಲ್ಲಿರುವ ರಂಗನಾಥ ದೇವಾಲಯ, ಪೊನ್ನಾಚಿ ಪಕ್ಕದ ಗಾಂದಳ್ಳಿಯ ರಂಗಪ್ಪ… ಹೀಗೆ ದಾರಿಯುದ್ದಕ್ಕೂ ರಂಗಪ್ಪನ ದೇವಸ್ಥಾನಗಳನ್ನು ಕಾಣಬಹುದು ಮತ್ತು ಈ ಭಾಗದ ಎಲ್ಲಾ ರಂಗನಾಥನ ದೇವಾಲಯದ ಅರ್ಚಕರು ಬೇಡ ಜನರೇ ಆಗಿರುವುದು ವಿಶೇಷ. ಮಲೆಮಾದಪ್ಪ ನಡುಮಲೆಗೆ ಬರುವ ಹೊತ್ತಿಗೆ ಇದು ಪಾಳೇಗಾರರ ರಾಜಧಾನಿಯಾಗಿ ಉಮ್ಮತ್ತೂರು ಅರಸರ ಸಾಮಂತರು ಇಲ್ಲಿ ಕೋಟೆ ಕಟ್ಟಿಕೊಂಡು ರಾಜ್ಯವಾಳಲು ಶುರು ಮಾಡಿದ್ದರು.

ಉಮ್ಮತ್ತೂರಿನ ಪಾಳೇಗಾರರಾದ ನಂಜರಾಜ ಒಡೆಯ ಮತ್ತು ಇಮ್ಮಡಿ ಚಿಕ್ಕದೇವರಾಜ ಒಡೆಯರು ಕೊಯಂಬತ್ತೂರು ಜಿಲ್ಲೆಯ ಈ ಪ್ರದೇಶವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಮಾದಪ್ಪ ಬಂದಾಗ ಈ ಭಾಗವನ್ನು ಇಲ್ಲಿನ ಮಾಂಡಲೀಕ ರಾಯಣ್ಣ ಆಳುತ್ತಿದ್ದನು ಮತ್ತು ಸಾವಿರ ರಾಸುಗಳ ಒಡೆಯ ಜುಂಜೇಗೌಡ ಇಲ್ಲಿ ಪ್ರಭಾವೀ ವ್ಯಕಿಯಾಗಿದ್ದನು. ರಾಮಾನುಜಾಚಾರ್ಯರ ಪ್ರಭಾವಕ್ಕೆ ಸಿಕ್ಕಿ ವೈಷ್ಣವ ಪಂಥ ಸ್ವೀಕರಿಸಿದ್ದ ಬಹುತೇಕ ಬೇಡಜನಾಂಗ ಮತ್ತು ಮಾಂಡಲೀಕ ರಾಯಣ್ಣ ಕೂಡ ತನ್ನ ಪರಿವಾರ ಸಮೇತ ಮಹದೇಶ್ವರರ ಪ್ರಭಾವದಿಂದ ಬೆಟ್ಟದ ಸಾಲೂರು ಮಠದಲ್ಲಿ ಲಿಂಗದೀಕ್ಷೆಯನ್ನು ಪಡೆದುಕೊಂಡರು ಎಂದು ಜನಪದ ಹೇಳುತ್ತದೆ.

ಇದಕ್ಕೆ ಪುಷ್ಟಿಯಾಗಿ ೧೩೨೪ರ ವೀರಬಲ್ಲಾಳನ ಹರದನಹಳ್ಳಿಯ ತಾಮ್ರ ಶಾಸನ ಮಾದಪ್ಪನನ್ನು ಲಿಂಗದೀಕ್ಷೆ ಮಾಡಲು ಇತ್ತ ಕಳುಹಿಸಿದ್ದನ್ನು ಉಲ್ಲೇಖಿಸುತ್ತದೆ. ಆಲಂಬಾಡಿಯಲ್ಲಿ ಮಠವು ಕೂಡ ಸ್ಥಾಪಿಸಲ್ಪಟ್ಟು ಇಲ್ಲಿನ ಸ್ವಾಮೀಜಿಗಳು ಅಲ್ಲಿಯ ಜನರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದರು. ೧೫೦೦ರ ಆಸುಪಾಸಿನಲ್ಲಿ ಉಮ್ಮತೂರಿನ ಪಾಳೇಗಾರರು ರಂಗನಾಥಸ್ವಾಮಿ ದೇವಾಲಯವನ್ನು ಕಟ್ಟಿದರು. ಕೊಂಗದೊರೆಗಳಿಂದ ದಾಳಿ ಆಗದಿರಲೆಂದು ನದಿತಟದಲ್ಲಿ ದೊಡ್ಡದೊಡ್ಡ ಬಂಡೆಗಳಿಂದ ಕೋಟೆ ಕಟ್ಟಿ, ಮದ್ದುಗುಂಡುಗಳ ಸಂಗ್ರಹಕ್ಕೆ ಮದ್ದಿನ ಮನೆಗಳನ್ನು ನಿರ್ಮಿಸಿಕೊಂಡರು. ರಂಗನಾಥ ಸ್ವಾಮಿ ದೇವಾಲಯದಲ್ಲಿನ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳನ್ನು ಗಮನಿಸಿದ ಇತಿಹಾಸ ತಜ್ಞ ಮಂಜುನಾಥ್ ರೇವಂತ್ ಎರಡು ಅಥವಾ ಅದಕ್ಕೂ ಹೆಚ್ಚು ಬಾರಿ ಈ ದೇವಾಲಯ ಜೀರ್ಣೋದ್ಧಾರಕ್ಕೆ ಒಳಪಟ್ಟಿರಬಹುದು ಎಂದು ಮೂರ್ತಿಶಿಲ್ಪದ ಉದಾಹರಣೆ ಕೊಟ್ಟು ಅಂದಾಜಿಸಿದ್ದಾರೆ.

ಇಲ್ಲಿನ ದ್ರಾವಿಡ ಶೈಲಿಯ ಗೋಪುರ, ಕಂಬದ ಮೇಲೆ ಕೆತ್ತಿರುವ ಗಣೇಶನ ಪ್ರತಿಮೆ, ವಿದೂಷಕನ ಶಿಲ್ಪ, ಲಜ್ಜಾಗೌರಿ, ವೀಣಾವಾದಕನ ಶಿಲ್ಪ, ಕಾಳಿಂಗ ಮರ್ದನ ಕೃಷ್ಣನ ಶಿಲ್ಪ, ಮಯೂರ, ಎರಡು ವಿಧದ ಪಟ್ಟಿಕೆಗಳಿಂದ ಕೂಡಿದ ಬಾಗಿಲುವಾಡ, ದಶಾವತಾರದ ಕೆತ್ತನೆಗಳೆಲ್ಲವೂ ವಿಜಯನಗರದ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಒಳಗೊಂಡಿರುವುದನ್ನು ಗಮನಿಸಬಹುದು. ಕಾವೇರಿ ನದಿತಟದಲ್ಲಿರುವ ಮದ್ದಿನಮನೆಯನ್ನು ಕೂಡ ವಿಶೇಷವಾಗಿ ನಿರ್ಮಾಣ ಮಾಡಿದ್ದು, ನೆಲಮಟ್ಟದಿಂದ ಹದಿನೈದು ಅಡಿ ಕೆಳಗೆ ನೆಲಮಾಳಿಗೆಯಿಂದ ಕೂಡಿದೆ. ಬೇಡಗಂಪಣ ರಾಜ್ಯವಾಗಿದ್ದ ಆಲಂಬಾಡಿ ಅವಸಾನವಾದದ್ದಾದರೂ ಹೇಗೆ!? ಈ ಭಾಗದ ಇತಿಹಾಸ ತಿಳಿಯಲು ಯಾವ ಅಧಿಕೃತ ಮಾಹಿತಿಯೂ ಲಭ್ಯವಿಲ್ಲ. ಅದಾಗಿಯೂ ಜನಪದ ಸಾಹಿತ್ಯ ಮತ್ತು ಅಳಿದುಳಿದ ಅವಶೇಷಗಳಿಂದ ಒಂದಷ್ಟು ಕಾರಣವನ್ನು ಅಂದಾಜಾಗಿ ಊಹಿಸಬಹುದು. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ತಮಿಳುನಾಡಿನ ವೆಲ್ಲೂರಿನವರೆಗೂ ಅವರ ರಾಜ್ಯ ಹಬ್ಬಿದ್ದರಿಂದ ಅವರ ದಾಳಿಗೆ ಆಲಂಬಾಡಿ ಸಿಲುಕಿರಬಹುದು.

ದೇವಸ್ಥಾನದ ಕೋಟೆ ನಾಶವಾಗಿರುವುದಕ್ಕೆ ಅದೂ ಒಂದು ಕಾರಣ. ರಂಗನಾಥ ದೇವಾಲಯದ ಮೂಲ ವಿಗ್ರಹವನ್ನು ಅಲ್ಲಿನ ಅರ್ಚಕ ರಾತ್ರೋರಾತ್ರಿ ಬೇರೆ ಕಡೆ ಸಾಗಿಸಿ ಅಲ್ಲೊಂದು ರಂಗನಾಥ ದೇವಾಲಯ ನಿರ್ಮಿಸಿದ ಎಂದು ಜನ ಹೇಳುತ್ತಾರೆ ಮತ್ತು ಆ ದೇವಸ್ಥಾನ ಎದುರಿನ ಬೆಟ್ಟದಲ್ಲಿ ಈಗಲೂ ಕಾಣುತ್ತದೆ. ದನಕರುಗಳನ್ನು ಸಂಪತ್ತು ಎಂದು ಪರಿಗಣಿಸುವ ಕಾಲ ಅದಾಗಿದ್ದರಿಂದ ದಾಳಿ ಸರ್ವೆಸಾಮಾನ್ಯವಾಗಿತ್ತು. ಬಂಡಳ್ಳಿಯ ಆಚಾರಿಯೊಬ್ಬ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಾ ಆಲಂಬಾಡಿಯಲ್ಲಿ ಶಿಲ್ಪ ಕೆತ್ತನೆಯಲ್ಲಿ ತೊಡಗಿದ್ದ. ಅವನ ಚೆಲುವನ್ನು ಕಂಡ ಹೆಣ್ಣುಮಕ್ಕಳು ಅವನಂತೆ ಹೋಲುವ ಮಕ್ಕಳನ್ನು ಹೆತ್ತಾಗ ಜನರಿಗೆ ಅನುಮಾನ ಶುರುವಾಗಿ ಅವನ ವಿರುದ್ಧ ನ್ಯಾಯ ಮಾಡಿಸಿದರಂತೆ. ಇದರಿಂದ ಅವಮಾನಿತನಾದ ಆಚಾರಿ ಹೊಳೆಯಲ್ಲಿ ನಂದಿಯನ್ನು ಕೆತ್ತಿ, ಊರಜನರಿಗೆ ವಾಂತಿ, ಭೇದಿ ಮಾಡಿಸಿದನೆಂದು, ಅದರಿಂದ ಆಲಂಬಾಡಿ ನಾಶವಾಯಿತು ಎಂದು ಹಿರಿಯರು ಹೇಳುವುದುಂಟು.

ಆ ಕಾಲದಲ್ಲಿ ಕಾವೇರಿ ನದಿಗೆ ಎಲ್ಲಿಯೂ ಅಣೆಕಟ್ಟೆ ಇರಲಿಲ್ಲ. ಜೋರು ಪ್ರವಾಹಕ್ಕೆ ಸಿಕ್ಕಿ, ಜನ ಅಲ್ಲಿಂದ ಬೇರೆಡೆಗೆ ವಲಸೆ ಹೋಗಿರಬಹುದು. ಅಪಾರ ದನಕರು, ಆಡುಕುರಿಗಳಿಂದ ಕೂಡಿದ್ದ ಮಂದಿ ಅಲ್ಲಿಂದ ಸಮೃದ್ಧ ಕಾಡಿನಿಂದ ಕೂಡಿದ ಗುಳ್ಯದ ಕಡೆಗೆ, ಗುಳ್ಯದಿಂದ ಪೊನ್ನಾಚಿಯ ಕಡೆಗೆ ವಲಸೆ ಹೋದರೆ; ವ್ಯಾಪಾರ ಮಾಡುತ್ತಿದ್ದ ಮಂದಿ ತಮಿಳುನಾಡಿನ ವ್ಯಾಪಾರ ಕೇಂದ್ರ ಕಂಚಿಯ ಕಾರಣಕ್ಕೆ ಅಂಚೆಟ್ಟಿಯ ಕಡೆ ಪ್ರಯಾಣ ಬೆಳೆಸಿದರು. ಪೊನ್ನಾಚಿಯ ವೀರಪ್ಪಗೌಡರ ಮೂಲ ವಂಶ ಆಲಂಬಾಡಿಯ ಜುಂಜೇಗೌಡನದ್ದೇ ಮತ್ತು ಪೊನ್ನಾಚಿಯ ಗುರುಪರಂಪರೆ ಆಲಂಬಾಡಿ ಮಠದ್ದೇ ಆಗಿದೆ.

ಮತ್ತೊಂದು ವಿಶೇಷ ಎಂದರೆ ಇತ್ತೀಚೆಗೆ ಪುರಾತತ್ವ ಇಲಾಖೆಯವರು ಉತ್ಖನನ ನಡೆಸಿದಾಗ ಮೆಗಾಲಿತಿಕ್ ಯುಗದ ಶಿಲ್ಪಗಳು, ಸಮಾಧಿಗಳು ಲಭ್ಯವಾಗಿವೆ. ಗಂಗರ ಕಾಲದ ಮಡಕೆಯ ಚೂರು ಸಿಕ್ಕಿದೆ. ಮತ್ತಷ್ಟು ಅಧ್ಯಯನಗಳಾದರೆ ಇದರ ಇತಿಹಾಸವನ್ನು ಅಧಿಕೃತವಾಗಿ ತಿಳಿಯಬಹುದು. ಅಲ್ಲಿಯವರೆಗೂ ಅಂದಾಜಿಸಬಹುದಷ್ಟೇ!

” ಜನಪದ ಕಾವ್ಯದಲ್ಲಿ ಹಾಡಿ ಹೊಗಳಿಸಿಕೊಂಡ ಈ ಊರು, ಇಂದು ಕಾಲಿಟ್ಟ ಕಡೆಯೆಲ್ಲ ಒಡೆದ ಮಡಕೆಯ ಚೂರುಗಳನ್ನು ಕಾಲಿಗೆ ತಾಗಿಸುತ್ತಾ ತನ್ನ ವೈಭವದ ಕಥೆಯನ್ನು ಹೇಳಲು ಪ್ರಯತ್ನಿಸುತ್ತಲೇ ಇದೆ.”

ಆಂದೋಲನ ಡೆಸ್ಕ್

Recent Posts

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

10 mins ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

15 mins ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

57 mins ago

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

1 hour ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

1 hour ago

ಓದುಗರ ಪತ್ರ: ಅಮೃತ ಬೇಕರಿ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…

2 hours ago