ಸಿರಿ ಮೈಸೂರು
ಮೈಸೂರಿನ ಓಮರ್ ಹಕ್ ಮತ್ತು ಸಮಾನ ಮನಸ್ಸಿನ ಸ್ನೇಹಿತರು ಈ ರೀತಿಯ ವಿನೂತನ ಪ್ರಯತ್ನಗಳ ಮೂಲಕ ಪುಸ್ತಕ ಪ್ರಿಯರನ್ನು ಸೃಷ್ಟಿ ಮಾಡುತ್ತಿರುವುದು ಶ್ಲಾಘನೀಯ ಸಂಗತಿ
ಹೀಗೇ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಚೆಂದದ ಪುಟ್ಟದೊಂದು ಮರದ ಗೂಡು ಕಾಣಿಸಿತು. ಒಂದು ಮನೆಯ ಮುಂದಿದ್ದ ಆ ಮರದ ಗೂಡಿನ ಆಕಾರ ಪುಟ್ಟದೊಂದು ಮನೆಯಂತೆಯೇ ಇತ್ತು. ಪೇಂಟಿಂಗ್ ಮಾಡಿಸಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದ ಆ ಗೂಡು ತನ್ನ ಒಡಲಲ್ಲಿ ಇರಿಸಿಕೊಂಡಿದ್ದೆಲ್ಲಾ ಜ್ಞಾನಭಂಡಾರ. ಅರ್ಥಾತ್ ವಿವಿಧ ಪುಸ್ತಕಗಳು. ಆನಂತರ ಕಾಣಿಸಿದ್ದು ಅದರ ಮೇಲಿನ ಹೆಸರು. ಅದು ಫ್ರೀ ಲಿಟಲ್ ಲೈಬ್ರರಿ.
ಸಾಮಾನ್ಯವಾಗಿ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ವಸ್ತುಗಳನ್ನು ಇಡುವ, ಅದನ್ನು ಜನರಿಗೆ ಮುಕ್ತವಾಗಿ ಬಳಸಿಕೊಳ್ಳಲು ಅವಕಾಶ ನೀಡುವ ಪರಿಕಲ್ಪನೆ ಪಾಶ್ಚಾತ್ಯ ದೇಶಗಳಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ ಬಹಳವೇ ಕಡಿಮೆ. ಆದರೆ ನಮ್ಮ ಮೈಸೂರಿನಲ್ಲಿ ಈಗ ಒಂದು ತಿಂಗಳಿಗೂ ಕಡಿಮೆ ಸಮಯದಿಂದ ಒಂದಷ್ಟು ಯುವಜನರಿಂದ ಇಂತಹ ಅದ್ಭುತ ಪ್ರಯತ್ನ ಆರಂಭವಾಗಿದೆ. ಜ್ಞಾನವನ್ನು ಹಂಚುವ ಈ ಪರಿಕಲ್ಪನೆ ನೋಡಿದಾಕ್ಷಣ ಪುಸ್ತಕಪ್ರಿಯರಿಗೆ ತುಸು ಹೆಚ್ಚೇ ಆಪ್ತ ಎನಿಸುತ್ತದೆ. ಇದರ ಹಿಂದಿನ ರೂವಾರಿ ಬ್ರಿಟಿಷ್ ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ, ಮೈಸೂರಿನಲ್ಲೇ ಹುಟ್ಟಿ ಬೆಳೆದು ಹಲವು ಸಮಯ ಇಂಗ್ಲೆಂಡ್‌ನಲ್ಲಿ ನೆಲೆಸಿ ಈಗ ಮತ್ತೆ ಸದ್ಯಕ್ಕೆ ಮೈಸೂರಿನಲ್ಲಿರುವ ಓಮರ್ ಹಕ್ ಮತ್ತು ಆತನ ಸ್ನೇಹಿತರದ್ದು. ಇದಕ್ಕೆ ಆರ್ಥಿಕ ಸಹಕಾರ ನೀಡಿರುವುದು ಟಾಸ್ಕ್ ಟ್ರಸ್ಟ್ ಎಂಬ ಸಂಸ್ಥೆ.
ಅಂದ ಹಾಗೆ ಈ ಲಿಟಲ್ ಫ್ರೀ ಲೈಬ್ರರಿಯಲ್ಲಿ ಏನು ಮಾಡಬಹುದು ಅಂದರೆ, ನಿಮಗೆ ಬೇಕಾದ ಪುಸ್ತಕಗಳನ್ನು ಈ ಲೈಬ್ರರಿಯಿಂದ ತೆಗೆದುಕೊಂಡು ಓದಬಹುದು. ಅದನ್ನು ಬೇಕಿದ್ದರೆ ಓದಿದ ನಂತರ ಹಿಂದಿರುಗಿಸಬಹುದಾದರೂ ಕಡ್ಡಾಯವೇನಿಲ್ಲ. ನಿಮ್ಮಲ್ಲಿ ಪುಸ್ತಕಗಳಿದ್ದರೆ ಅದನ್ನು ಇಲ್ಲಿ ತಂದಿಡಬಹುದು. ಈ ಯಾವ ಕೆಲಸಗಳಿಗೂ ಯಾವುದೇ ಹಣ ಪಾವತಿಸಬೇಕಿಲ್ಲ, ಯಾವ ರೀತಿ-ರಿವಾಜುಗಳನ್ನೂ ಪಾಲಿಸಬೇಕಿಲ್ಲ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳು ಸಿಗುತ್ತವಾದರೂ ಕಟ್ಟುಪಾಡುಗಳು ಹೆಚ್ಚು. ಅದರ ಬದಲು ಈ ರೀತಿಯ ಪರಿಕಲ್ಪನೆ ಜನರಿಗೆ ಹೆಚ್ಚು ಸರಳವಾಗುತ್ತದೆ ಎಂಬ ಕಾರಣಕ್ಕೆ ಲಿಟಲ್ ಫ್ರೀ ಲೈಬ್ರರಿ ಆರಂಭವಾಗಿದೆ. ಇದನ್ನು ಆರಂಭಿಸಿರುವ ಹುರುಪಿನ ಹುಡುಗರ ಪ್ರಕಾರ ಇದೊಂದು ಸಾಮಾಜಿಕ ಕಳಕಳಿಯ ವಿಶಿಷ್ಟ ಹೆಜ್ಜೆ. ಇದರ ಪೂರ್ತಿ ಜವಾಬ್ದಾರಿ, ನಿರ್ವಹಣೆ, ಉಪಯೋಗ ಎಲ್ಲವೂ ಜನರಿಗೆಂದೇ ಹಾಗೂ ಜನರಿಂದಲೇ ಆರಂಭವಾದ ಇಪ್ಪತ್ತೇ ದಿನಗಳಲ್ಲಿ ಈ ಲಿಟಲ್ ಲೈಬ್ರರಿಯಲ್ಲಿ ೪೦೦ಕ್ಕೂ ಹೆಚ್ಚು ಪುಸ್ತಕಗಳು ಬಂದು ಹೋಗಿವೆ. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಪ್ರಸ್ತುತ ಕುವೆಂಪುನಗರದಲ್ಲಿ, ಬುಕ್ಸ್ ಅಂಡ್ ಬ್ರೂಸ್ ಹಾಗೂ ಟೀನಾ ಕೆಫೆಯ ಮುಂಭಾಗ ಈ ಲಿಟಲ್ ಫ್ರೀ ಲೈಬ್ರರಿ ಕಾಣಸಿಗುತ್ತದೆ. ಆಯಾ ಸ್ಥಳಗಳಲ್ಲಿ ಇರುವವರು ಇದರ ನಿರ್ವಹಣೆ ಮಾಡುತ್ತಿದ್ದಾರೆ. ಪುಸ್ತಕಗಳನ್ನು ಓದುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಈ ದಿನಗಳಲ್ಲಿ ಓದುವವರು ಸಿಗುವುದೇ ಕಷ್ಟ. ಇನ್ನು ಎಲ್ಲ ಕೆಲಸಗಳೂ ಆನ್‌ಲೈನ್‌ನಲ್ಲೇ ನಡೆಯುವ ಕಾರಣ ವೈಯಕ್ತಿಕವಾಗಿ ಹೋಗಿ ಪುಸ್ತಕ ಕೊಳ್ಳಲು ಜನರಿಗೆ ಸಮಯವೂ ಇಲ್ಲ. ಇಂತಹ ಒತ್ತಡದ ಜೀವನಶೈಲಿಯ ನಡುವೆ ಈ ರೀತಿಯ ಲೈಬ್ರರಿ ಪರಿಕಲ್ಪನೆ ಆರಂಭವಾಗಿರುವುದು ಸ್ವಾಗತಾರ್ಹ ಎನ್ನುವುದು ಪುಸ್ತಕ ಪ್ರಿಯರ ಅಭಿಪ್ರಾಯ.
ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಇನ್ನೂ ಸಾಕಷ್ಟು ಪಾಶ್ಚಾತ್ಯ ದೇಶಗಳಲ್ಲಿ ಲಿಟಲ್ ಫ್ರೀ ಲೈಬ್ರರಿ ಬಹಳವೇ ಪ್ರಸಿದ್ಧ. ಮೈಸೂರಿನಲ್ಲಿ ಈ ಪುಟ್ಟ ಗ್ರಂಥಾಲಯ ಆರಂಭವಾಗಿರುವುದರ ಪರಿಣಾಮ ಏನಾಗಬಹುದು ಎಂದು ಪ್ರಶ್ನಿಸಿದರೆ, ಪುಸ್ತಕಪ್ರಿಯರು ಒಬ್ಬರಿಗೊಬ್ಬರು ಪರಿಚಯ ಆಗುತ್ತಾರೆ. ನಾವು ಎಂದೂ ನೋಡಿರದ, ಕೇಳಿರದ ಪುಸ್ತಕಗಳು ಈ ಲಿಟಲ್ ಫ್ರೀ ಲೈಬ್ರರಿಯಲ್ಲಿ ಸಿಗಬಹುದು, ನಮ್ಮ ಬಳಿ ಇರುವ ಪುಸ್ತಕಗಳು ಇನ್ಯಾವುದೋ ಆಸಕ್ತರ ಕೈಸೇರಬಹುದು. ಹೀಗೆ ದಿನಕಳೆದಂತೆ ಬೇರೆ ಬೇರೆ ದೇಶಗಳು, ನಗರಗಳಂತೆ ನಮ್ಮ ನಗರದಲ್ಲೂ ಪುಸ್ತಕಪ್ರಿಯರ ಗುಂಪೊಂದು ಸೃಷ್ಟಿಯಾಗಬಹುದು. ಜನರು ಇಂತಹ ಪ್ರಯತ್ನಗಳನ್ನು ಸೂಕ್ತವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಿಕೊಂಡರೆ, ಬೆಳೆಸಿದರೆ ಇವೆಲ್ಲವೂ ಆಗುತ್ತವೆ.
ಓಮರ್ ಹಕ್ ಮತ್ತು ಆತನ ಸ್ನೇಹಿತರಂತಹ ಯುವಜನರು ಈ ರೀತಿ ವಿನೂತನ ಪ್ರಯತ್ನಗಳ ಮೂಲಕ ಪುಸ್ತಕ ಓದುವವರನ್ನು ಒಟ್ಟುಗೂಡಿಸಿಹೀಗೊಂದು ಜನರ ಗುಂಪು ಸೃಷ್ಟಿ ಮಾಡುತ್ತಿರು ವುದು ಶ್ಲಾಘನೀಯ ಸಂಗತಿ. ಅದರಲ್ಲೂ ಮೈಸೂರಿನಲ್ಲಿ ಇಂತಹ ಪ್ರಯತ್ನ ನಡೆದಿರುವುದು ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿ.
ನವದೆಹಲಿ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಿತಿನ್ ನಬಿನ್ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳತ್ತ ಗಮನಹರಿಸಿದ್ದಾರೆ.…
ಕೇಪ್ ಕೆನವೆರೆಲ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್ ನಿವೃತ್ತರಾಗಿದ್ದಾರೆ.…
ಮಹಾದೇಶ್ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ…
ಮಹಾದೇಶ್ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…