ಹಾಡು ಪಾಡು

ಇದ್ದದ್ದ ಇದ್ದಂತೆ ಬರೆದು, ಬರೆದಂತೆ ಬದುಕಿದ ಪತ್ರಕರ್ತ

ಕೋಟಿ ಎಂಬ ದಂತಕಥೆ ಮರೆಯಾದ ದಿನ ಇಂದು

ಅವರು ಕೇವಲ ಪತ್ರಕರ್ತರಲ್ಲ. ಬದುಕನ್ನು ಬದಲಾಯಿಸುವ ತುಡಿತಇದ್ದಂತಹವರು, ಹೋರಾಟದ ಹಾದಿ ಹಿಡಿದವರು, ಕನ್ನಡವನ್ನೇ ಉಸಿರಾಡುತ್ತಿದ್ದ ಶುದ್ಧ ಎಡಪಂಥೀಯ ಧೋರಣೆಯವರಾಗಿದ್ದವರು. ಸ್ವಚ್ಛ ಸಿದ್ಧಾಂತ ಹೊಂದಿದ ಬೆರಳೆಣಿಕೆ ಮಂದಿಯಲ್ಲಿ ಕೋಟಿಯವರೂ ಒಬ್ಬರು.

ರಾಜಶೇಖರ ಕೋಟಿ, ಪ್ರೊ.ಕೆ.ರಾಮದಾಸ್, ಪ್ರೊ.ಜಿ.ಹೆಚ್.ನಾಯಕ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಲಿಂಗದೇವರು ಹಳೆಮನೆ, ರೈತ ಸಂಘದವರು, ದಲಿತ ಸಂಘರ್ಷ ಸಮಿತಿಯವರು ಮುಂತಾದವರ ಸಹವಾಸದಲ್ಲಿ ನಮ್ಮ ಕಾಲೇಜು ಜೀವನ ಕಳೆಯಿತು. ಅದು ಸಾಂಸ್ಕ ತಿಕವಾಗಿ ಕಾಲ ಕಳೆಯುತ್ತಿದ್ದ ಬಿಡುವಿಲ್ಲದ ದಿನಗಳಾಗಿದ್ದವು. ಜನಮನ ಸಾಂಸ್ಕ ತಿಕ ವೇದಿಕೆಯಮೊದಲ ದಿನಗಳವು. ‘ಆಂದೋಲನ’ಕ್ಕೆ ಹಲವು ಲೇಖನಗಳನ್ನು ಬರೆಯುತ್ತಿದ್ದೆ. ‘ಆಂದೋಲನ’ದ ಮೂಲಕವೇ ಹೆಣ್ಣುಮಕ್ಕಳ ಸಮಸ್ಯೆಗಳು ಅರ್ಥವಾಗಿದ್ದು. ಬೀದಿ ಪಾಲಾದ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಕೋಟಿಯವರ ಎದೆಗೆ ತುಂಬಾ ಹತ್ತಿರವಾದ ವಿಷಯವೂ ಹೌದು. ಪುನರ್ವಸತಿಯಂತಹ ವಿಚಾರಗಳು ಅವರಿಗೂ ಹೊಸ ವಿಷಯವಾದ್ದರಿಂದ ನಮ್ಮ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಿದರು.

೧೯೯೦ರ ದಶಕದಲ್ಲಿ ಹೋರಾಟಗಳು ಪ್ರಖರವಾಗಿದ್ದವು. ‘ಒಡನಾಡಿ’ ಕಟ್ಟಿಕೊಂಡು ಸಾಂಸ್ಥಿಕ ಹೋರಾಟ ಆರಂಭಿಸಿದಾಗ ನಮ್ಮೊಡನೆ ನಿಂತವರಲ್ಲಿ ಕೋಟಿಯವರು ಪ್ರಮುಖರು. ಬದುಕು ಕಳೆದುಕೊಂಡ ಮಹಿಳೆಯರನ್ನು ಹುಡುಕಿ ಕುಟುಂಬ ವ್ಯವಸ್ಥೆಗೆ ಕರೆತರುವಂತಹ ನಮ್ಮ ಯೋಜನೆ ಅವರಿಗೆ ಬಹಳ ಇಷ್ಟವಾಗಿತ್ತು. ಕೋಟಿಯವರಲ್ಲಿ ಹಲವು ಸಲ ಇಂತಹ ಕಾರ್ಯಕ್ರಮಗಳಿಗಾಗಿ ಸಾಲ ಪಡೆದುಕೊಂಡಿದ್ದೆವು. ಬೀದಿ ಬದಿಯ ಮಹಿಳೆಯರ ಮದುವೆ ಅರಮನೆಯ ಮುಂದಿನ ಉದ್ಯಾನವನದಲ್ಲಿ ನಡೆಯುತ್ತಿತ್ತು. ಆ ಸರಳ ವಿವಾಹದ ಮಾದರಿಯನ್ನು ಕೋಟಿಯವರು ಬಹಳ ಮೆಚ್ಚಿಕೊಂಡಿದ್ದರು. ಸರಳ ಅಂತರ್ಜಾತೀಯ ವಿವಾಹವೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚಿನ ವಿಷಯ. ಸಂಸ್ಥೆಯಲ್ಲಿ ನಡೆಯುತ್ತಿದ್ದ ಎಲ್ಲ ಮದುವೆಗಳಿಗೂ ತಪ್ಪದೇ ಬಂದು ಹಿರಿಯಣ್ಣನ ಸ್ಥಾನದಲ್ಲಿ ನಿಲ್ಲುತ್ತಿದ್ದರು. ಅವರಿಗೂ ನಿರ್ಮಲಾರಿಗೂ ಸಂಸ್ಥೆಯ ಪ್ರತಿಯೊಬ್ಬ ಮಗುವಿನ ಹೆಸರೂ ಗೊತ್ತಿತ್ತು. ಅನಾರೋಗ್ಯದ ಸಮಯದಲ್ಲೂ ಒಡನಾಡಿಯ ಉಳಿವಿಗಾಗಿ ದೆಹಲಿಗೆ ಹೋಗಿದ್ದರು.

ಇದನ್ನು ಓದಿ: ‘ಸಾಂಪ್ರದಾಯಿಕ ಮಾಧ್ಯಮಕ್ಕೆ ಸಡ್ಡು ಹೊಡೆಯುತ್ತಿರುವ ಸಾಮಾಜಿಕ ಮಾಧ್ಯಮ’

ದುರುದ್ದೇಶದಿಂದ ಕೆಲವು ಗುಂಪುಗಳು ಸಂಸ್ಥೆಯನ್ನು ಕೆಡವಬೇಕೆಂದು ಜನ ಸೇರಿಸತೊಡಗಿದಾಗ ಅದರ ಸುಳಿವನ್ನು ನೀಡಿದವರು ಕೋಟಿಯವರು. ಈಗ ಅಂತಹ ಹೋರಾಟಗಳು ಮಕಾಡೆ ಮಲಗಿವೆ. ನಮಗಾಗಿ ನಾವೇ ಸದ್ದು ಮಾಡಿ ಒಂದು ಮಾದರಿಯನ್ನು ಹುಟ್ಟು ಹಾಕಬೇಕಿದೆ. ಕೋಟಿಯವರಂತಹವರು ಇಲ್ಲದೆ ಇಂದು ಪ್ರಗತಿಪರ ಸಂಘಟನೆಗಳು ಹಿಂದಿನ ಪ್ರಖರತೆಯನ್ನು ಕಳೆದುಕೊಂಡಿವೆ. ಆವಾಗ ಕಾರ್ಪೋರೇಟ್ ಪತ್ರಿಕೋದ್ಯಮದ ನುಸುಳುವಿಕೆ ಇರಲಿಲ್ಲ. ಆದರೆ ಈಗ ಪತ್ರಿಕೋದ್ಯಮ ವಾಣಿಜ್ಯೀಕರಣಗೊಂಡಿದೆ. ಇಂದಿನ ದಿನಕ್ಕೆ ಇದು ಅನಿವಾರ್ಯವಾದರೂ ಪತ್ರಿಕೋದ್ಯಮದ ಉಳಿವೇ ಪ್ರಶ್ನೆಯಾಗಿದೆ. ಓಲೈಕೆಗಳು ಹೆಚ್ಚಾಗಿವೆ.

ಆದರೆ, ಕೋಟಿಯವರು ನಿಷ್ಠುರವಾಗಿ ಇದ್ದದ್ದು ಇದ್ದಂತೆ ಬರೆಯುತ್ತಿದ್ದರು. ಅವರ ನಡೆ ನುಡಿ ಬರೆಹ ಒಂದೇ ಆಗಿತ್ತು. ಕೋಟಿ ಹೆಸರಿಗೆ ತಕ್ಕಂತೆ ಇದ್ದರೂ ಪತ್ರಿಕೆಯನ್ನು ಉಳಿಸಲು ಸಾಲ ಮಾಡಿಕೊಂಡಿದ್ದರು. ಒಡನಾಡಿಗೆ ಭದ್ರ ಬುನಾದಿ ಹಾಕಿಕೊಟ್ಟವರುಕೋಟಿಯವರು. ನಮ್ಮ ನೈತಿಕ ಶಕ್ತಿಗೆ ಅವರ ಬೆಂಬಲ ಎಲ್ಲ ಕಾಲಕ್ಕೂ ಇತ್ತು. ಇದೇ ಕಾರಣಕ್ಕೆ ನಾನು ಹಾಗೂ ಪರಶು ನಮ್ಮ ಸ್ವಂತ ಹಣದಲ್ಲಿ ಮಕ್ಕಳಿಗಾಗಿ ಕೋಟಿಯವರ ಪುತ್ತಳಿಯನ್ನು ಸ್ಥಾಪಿಸಿದ್ದೇವೆ. ನಾವು ಮನಃಪೂರ್ವಕವಾಗಿ ಸಂಸ್ಥೆಯಲ್ಲಿ ಭಾವಚಿತ್ರವನ್ನು ತೂಗುಹಾಕಿದ್ದೇವೆಯೆಂದರೆ ಅದು ಕೋಟಿಯವರದ್ದು ಮಾತ್ರ.

ಕೋಟಿಯವರಿಗೆ ಬಹಳ ಇಷ್ಟವಾಗಿದ್ದ ಸರಳ ವಿವಾಹವನ್ನು ನೆರವೇರಿಸುವುದಕ್ಕಾಗಿ ಒಡನಾಡಿಯಲ್ಲಿ ‘ರಾಜಶೇಖರ ಕೋಟಿ ಜೀವನ ಸಂಗಮ ಸಭಾಂಗಣ’ ಕಟ್ಟಿದ್ದು ಇದು ಅವರಿಗೆ ನಾವು ಪ್ರತಿನಿತ್ಯ ಕೊಡುವ ಗೌರವ. ಇದು ಅವರ ಸಂಸ್ಮರಣೆಗೆ ನಮ್ಮ ಸಣ್ಣ ಪ್ರಯತ್ನ.

– ಸ್ಟಾನ್ಲಿ

ಆಂದೋಲನ ಡೆಸ್ಕ್

Recent Posts

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

3 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

9 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

9 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

9 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

9 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

10 hours ago