ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ದೊಡ್ಡ ಅಕ್ಕ ಕಲ್ಕತ್ತದಿಂದ ಬೆಂಗಳೂರಿಗೆ ಬಂದು ಎರಡು ದಿವಸಕ್ಕೇ,ಮೈಸೂರಿನಲ್ಲಿ ಒಂದು ವಾರಕ್ಕೆ ದಸರಾ ಶುರುವಾಗುತ್ತೆ. ನಾವು ಬೆಂಗಳೂರಿನಲ್ಲಿ ಕೂತು ಏನು ಮಾಡ್ತಿದೀವಿ? ಅದೇ ಗಾಂಧಿ ಬಜಾರು, ಶಂಕರಯ್ಯ ಹಾಲ್, ಲಾಲ್ ಭಾಗ್… ವಿದ್ಯಾರ್ಥಿ ಭವನ, ಎಂಟಿಆರ್. ಮೈಸೂರಿಗೆ ಹೋಗೋಣ. ಊರಿಗೆ ಊರೇ ತಳಿರು ತೋರಣಗಳಿಂದ ಹೊಳೀತಾ ಇರುತ್ತೆ, ನಡಿರೋ! ಅಂತ ಎಲ್ಲಾರನ್ನೂ ಎಬ್ಬಿಸಿ ಹೊರಟುಬಿಟ್ಟಳು.
ನಮ್ಮ ಅಕ್ಕ ಅವಳ ಗಂಡ ಮತ್ತು ಇಬ್ಬರು ಮಕ್ಕಳು ಕಲ್ಕತ್ತದಲ್ಲೇ ಬಹಳ ವರ್ಷದಿಂದ ವಾಸ. ಅವರು ಮಿಲ್ ಅಂಗಡಿಗೆ ಬೇಕಾದ ಮಷೀನುಗಳ ಸ್ವಂತ ವ್ಯಾಪಾರ ಮಾಡುತ್ತಿದ್ದರು. ಬಹಳ ವರ್ಷ ಅಲ್ಲೇ ಇದ್ದ ಕಾರಣ ಬೆಂಗಾಲಿ ಅರುಳು ಹುರಿದಂತೆ ಮಾತಾಡ್ತಿದ್ರು. ಜೊತೆಗೆ ನಾವು ಹುರುಗಾಳು, ಮದ್ದೂರು ವಡೆ ತಿನ್ನುವ ಹಾಗೆ ಅವ್ರಿಗೆ ರಸಗುಲ್ಲ, ಸಂದೇಶ್ ಅಂದ್ರೆ ಬಾಯಲ್ಲಿ ನೀರೂರೋದು.
ನಾನು, ನನ್ನ ಅಣ್ಣಂದಿರು, ಅಕ್ಕಂದಿರು, ಅಕ್ಕನ ಮಕ್ಕಳು ಸೇರಿ 9 ಜನ ಒಂದು ದಿನ ಬೆಳಗಿನ ಟ್ರೈನ್ ಹಿಡಿದು ಮಧ್ಯಾಹ್ನ ಮೈಸೂರನ್ನು ತಲುಪಿದೆವು. ಆಗ ಪ್ರಯಣ ಕನಿಷ್ಠ 6 ಗಂಟೆ ಆಗುತ್ತಿತ್ತು. ಮೈಸೂರಲ್ಲಿ ಇಳಿದಾಗ ನಾವೇ ಟ್ರೈನ್ ಓಡಿಸಿದವರಂತೆ, ಎಂಜಿನ್ ಡ್ರೈವರ್ ತರಹ ಕಲ್ಲಿದ್ದಲು ಹಾಕಿ ಮೈ ಉಜ್ಜಿಕೊಂಡಂತೆ ಕಾಣಿಸುತ್ತಿದ್ದೆವು.
ಮೈಸೂರಿನಲ್ಲಿ ಇಳಿಯುತ್ತಿದಂತೆಯೇ ನನ್ನ ದೊಡ್ಡಕ್ಕ ನನ್ನ ಆಣ್ಣಂದಿರ ಹತ್ತಿರ ಗುಸ ಗುಸ ಮಾತಾಡ್ತಿದ್ಳು. ಆವಾಗ ನಮಗೆ ಯಾಕೆ, ಏನು ಎಂದು ಗೊತ್ತಾಗಲಿಲ್ಲ. ಮೈಸೂರಿನ ಷಹ ಪಸಂದ್ ಗಾಡೀಲಿ ಹೋಗೋಣ ನಮ್ಮ ಜಟಕಾಗಿಂತ ಎಷ್ಟು ಚೆನ್ನಾಗಿದೆ ಅಂದ್ರೆ ಬೇಡ; ಬಸ್ಸಲ್ಲಿ ಹೋಗೋಣ ಅಂದ್ರೆ ಬೇಡ… ಇಲ್ಲೇ ಹತ್ರ ಇದೆಯಂತಲ್ಲಾ.. ನಡಿಯೋಣ… ಅಗೋ ಬಂದೇ ಬಿಡ್ತು ನೋಡು… ಇದೇ ರಾಗ.
ನಾವು ಗಾಯತ್ರಿ ಭವನದಲ್ಲಿ ಇಳಿದುಕೊಂಡಿದ್ವಿ. ಅಲ್ಲಿ ಅಷ್ಟು ಜನಕ್ಕೆ ಸೇರಿ ಬಹಳ ಕಡಿಮೆ ಊಟ ತರಿಸೋವ್ರು.. ನನಗಿಂತ ಎರಡು ವರ್ಷದ ದೊಡ್ಡ ನನ್ನ ಅಣ್ಣ ಅಷ್ಟು ಹೊತ್ತಿಗೆ ಪರಿಸ್ಥಿತಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ಒಂದು ಇಡ್ಲಿ ತರಿಸಿ ಕೊಟ್ಟರೆ ಅದಕ್ಕೆ ನಾಲ್ಕು ಬಾರಿ ಚಟ್ನಿ ತರಿಸುತ್ತಿದ್ದ!
ಆಗ ಗೊತ್ತಾಯಿತು ವಿಷಯ. ನಮ್ಮ ಮೈಸೂರಿನ ದಸರಾ ಬಜೆಟ್ ಕೇಂದ್ರದ ಬಜೆಟ್ ತರಹ ಖೋತಾ ಬಜೆಟ್ ಆಗಿತ್ತು. ಅಂದರೆ ಜನ ಜಾಸ್ತಿ, ದುಡ್ಡು ಕಡಿಮೆ!
ಆದರೆ ಒಂದೆರಡು ಜಾಗಗಳು ಆಗ ನೋಡಿದ್ದು, ಈಗಲೂ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದೆ.
ಮಹಾರಾಜರು ಸಂಜೆ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದು ಕೂತಾಗ ಎಲ್ಲೆಡೆ ಒಮ್ಮೆಲೇ ಎಲ್ಲಾ ದೀಪಗಳು ಹತ್ತಿಕೊಳ್ಳುತ್ತಿದ್ದವು. ಅದು ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಮಹಾರಾಜರ ಕಾರುಗಳ ವಸ್ತು ಪ್ರದರ್ಶನ, ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನ, ನಾವು ದೇವ ಲೋಕಕ್ಕೆ ಬಂದಿದ್ದೇವೋ ಅನ್ನುವ ಹಾಗಿದ್ದ ಬೃಂದಾವನ ತೋಟ, ಮಳೆಗಾಲದಲ್ಲಿ ಚೆನ್ನಾಗಿ ಮಳೆಯಾಗಿ ಮೈದುಂಬಿ ಹರಿಯುವ ಕಾವೇರಿ ನದಿಯನ್ನಂತೂ ಮರೆಯುವ ಹಾಗೇ ಇಲ್ಲ.
ವಾಪಸ್ಸು ಬೆಂಗಳೂರಿಗೆ ಹೋದ ಮೇಲೆಯೇ ನಾನು ಹೊಟ್ಟೆ ತುಂಬ ಊಟ ಮಾಡಿದ್ದು. ಆದರೆ ಚಿಕ್ಕ ವಯಸ್ಸಿನಲ್ಲಿ ನೋಡಿದ ದೀಪದಿಂದ ಬೆಳಗುತ್ತಿದ್ದ ಅರಮನೆ, ಬಣ್ಣದ ದೀಪದ ಮಧ್ಯೆ ಹರಿಯುತ್ತಿದ್ದ ಕಾವೇರಿ ಕಣ್ಣಲ್ಲಿ, ಮನಸ್ಸಿನಲ್ಲಿ ಅಚ್ಚಳಿಯದೆ ಇನ್ನೂ ಹಾಗೇ ಇದೆ.
ಮನೆಗೆ ಹೋದ ಮೇಲೆ ಗೊತ್ತಾಯಿತು ಸಮಾಚಾರ. ಮೈಸೂರಿಗೆ ತೆಗೆದುಕೊಂಡು ಹೋಗಲು ನನ್ನ ಅಕ್ಕ ದುಡ್ಡನ್ನು ಜೋಪಾನವಾಗಿಡಲು ಅದನ್ನು ಅರ್ಧ ಮಾಡಿ ಎರಡು ಪರ್ಸಲ್ಲಿ ಹಾಕಿಟ್ಟಿದ್ದಳು. ನಾವು ವಾಪಸ್ಸು ಹೋದಾಗ ಟೇಬಲ್ ಮೇಲೆ ಇಟ್ಟಿದ್ದ ಎರಡನೇ ಪರ್ಸ್ ನಮ್ಮನ್ನು ನೋಡಿ ಅಪಹಾಸ್ಯ ಮಾಡಿದ ಹಾಗೆ ಆಯಿತು.
ನಾನು ಕಾಲೇಜು ಸೇರಿದಾಗ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಯಾಮ ಡ್ರಿಲ್ ಕಡ್ಡಾಯವಾಗಿತ್ತು. ಡ್ರಿಲ್‌ಗೆ ನೀಲಿ ಚೆಡ್ಡಿ, ಬಿಳಿ ಷರ್ಟು, ಗಾಂಧಿ ಟೋಪಿ ಮತ್ತು ಬಿಳಿ ಕ್ಯಾನ್ವಾಸ್ ಷೂ ಹಾಕಿಕೊಂಡು ಹೋಗಬೇಕಾಗಿತ್ತು. ಬರೀ ಚಪ್ಪಲಿಯಲ್ಲಿ ಓಡಾಡುತ್ತಾ ಕಾಲ ಕಳೆಯುತ್ತಿದ್ದವನಿಗೆ ಮನೆಯಲ್ಲಿ ಷೂ ಬೇಕೆಂದು ಕೇಳಲು ಮನಸ್ಸಾಗಲಿಲ್ಲ. ಕೇಳಿದ್ರೂ ಸಿಗುತ್ತಿರಲಿಲ್ಲ! ಆಗ ದೇವರೇ ನನ್ನ ಸಹಾಯಕ್ಕೆ ಬಂದ. ಕಾಲೇಜಿನಲ್ಲಿ ಒಂದು ಬ್ಯಾಂಡ್ ಸೆಟ್ ಇತ್ತು. ಹೊಸ ವರ್ಷದಲ್ಲಿ ಯಾರು ಬ್ಯಾಂಡ್ ಸೇರಿ ಅಲ್ಲಿ ಕಲಿಯಲು ಇಷ್ಟಪಡುತ್ತಾರೋ ಬನ್ನಿ ಎಂದು ಆಹ್ವಾನ ಬಂತು. ಬ್ಯಾಂಡ್ ಸೆಟ್ ಸೇರಿದರೆ ಷೂ ಅಗತ್ಯವಿಲ್ಲ. ಬಿಳಿ ಪೈಜಾಮ, ಬಿಳಿ ಷರ್ಟು, ಚಪ್ಪಲಿ ಮತ್ತು ಗಾಂಧಿ ಟೋಪಿ. ನನಗೆ ಹೇಳಿ ಮಾಡಿಸಿದ ಉಡುಪು! ತಕ್ಷಣ ಓಡಿ ಹೋಗಿ ಸೇರಿಕೊಂಡೆ.
ನಾನು ಸೈಡ್ ಡ್ರಮ್ಮರ್ ಆಗಿ ಕಲಿತೆ. ಕ್ರಮೇಣ ಚೆನ್ನಾಗಿ ಕಲಿತು ಸ್ವಾತಂತ್ರ್ಯ್ಯ ದಿನಾಚರಣೆ, ರಿಪಬ್ಲಿಕ್ ಡೆ ದಿನ ಬ್ಯಾಂಡ್ ಬಾರಿಸುತ್ತಾ ಹಿಂದೆ ಡ್ರಿಲ್ ಮಾಡಿಕೊಂಡು ಬಂದ ಹುಡುಗರ ಜೊತೆ ಮಾರ್ಚ್ ಫಾಸ್ಟ್ ನಡೆಸುತ್ತಿದ್ದೆವು. ಒಮ್ಮೆ ನಮಗೆ ಮೈಸೂರಿಗೆ ಹೋಗಿ ಅಲ್ಲಿ ಜಂಬೂಸವಾರಿಗೆ ಬ್ಯಾಂಡ್ ಬಾರಿಸಬೇಕೆಂದು ಅಮಂತ್ರಣ ಬಂತು. ಅಂದು ನಮ್ಮ ಖುಷಿಗೆ ಮಿತಿಯೇ ಇರಲಿಲ್ಲ.
ಜಂಬೂಸವಾರಿಗೆ ಮುಂಚೆ ಎರಡು ದಿವಸ ರಿಹರ್ಸಲ್ ಇತ್ತು. ಅರಮನೆಯಿಂದ ಬನ್ನಿ ಮಂಟಪದವರೆಗೆ ಬ್ಯಾಂಡ್ ಬಾರಿಸಿಕೊಂಡು ಹೋಗಬೇಕಾಗಿತ್ತು. ಮೊದಲನೇ ರಿಹರ್ಸಲ್ ಯಾವ ಡ್ರೆಸ್ಸಾದರೂ ಪರವಾಗಿಲ್ಲ. ಎರಡನೇ ರಿಹರ್ಸಲ್ ದಿವಸ ಪೂರ್ತಿ ಸಜ್ಜಾಗಿ ವಿಜಯದಶಮಿುಂಲ್ಲಿ ನಡೆಯುವ ಹಾಗೆ ಆಗಬೇಕಾಗಿತ್ತು. ಮಹಾರಾಜರಿರುವ ಆನೆಯೋ ಅವರಿಲ್ಲದೆ ನಡೆಯಕಾಗಿತ್ತು. ವಿಜಯಶಮಿಯ ದಿವಸ ನಾವು ನಮ್ಮ ಹೊಸ ಪೋಷಾಕನ್ನು ಧರಿಸಿ ಬ್ಯಾಂಡ್ ಬಾರಿಸಿಕೊಂಡು ಹೋದೆವು. ಆ ದಿವಸದ ಬಣ್ಣ, ತಳಿರು ತೋರಣ ನನಗೆ ಇಂದೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ನಮ್ಮ ಮಹಾರಾಜ ಜಯ ಚಾಮರಾಜ ಒಡೆಯರ್ ಅಂಬಾರಿಯನ್ನು ಹೊತ್ತ ಅಲಂಕೃತ ಆನೆಯ ಮೇಲೆ ಕೂತರು. ಮೆರವಣಿಗೆ ಅರಮನೆಯಿಂದ ಬನ್ನಿ ಮಂಟಪಕ್ಕೆ ಹೊರಟಿತು. ಮೆರವಣಿಗೆಯ ಫೋಟೊ ಹಿಡಿಯಲು ಲೈಫ್, ಟೈಮ್ ಮ್ಯಾಗಝಿನ್ ಅವರ ಫೊಟೋಗ್ರಾಫರ್ಸ್ ಅಲ್ಲಲ್ಲಿ ನಿಂತು ಫೋಟೋ ತೆಗೆಯುತ್ತಿದ್ದರು.
ಅರ್ಧ ದಾರಿಯಷ್ಟು ಹೋದಾಗ, ಮಳೆ ಶುರುವಾಯಿತು. ತುಂತುರು ಮಳೆಯಿಂದ ಶುರುವಾದ ಮಳೆ, ಜೋರಾಯಿತು. ಆನೆ, ಕುದುರೆಗಳಿಗೆ ತೊಂದರೆ ಆಗುತ್ತೆಂದು ಅವುಗಳನ್ನು ಅಲ್ಲೇ ನಿಲ್ಲಿಸಿಕೊಂಡರು. ಮಳೆ ವಿಪರೀತ ಜೋರಾಗಿ ಬಂದು ಜನಗಳು ಭದ್ರವಾದ ತಾಣ ಹಿಡಿುಂಲು ಓಡಿ ಎಲ್ಲಾ ಚೆಲ್ಲಾಪಿಲ್ಲಿಾಂಯಿತು. ಅರ್ಧಕ್ಕೆ ಎಲ್ಲಾ ನಿಂತುಹೋದವು.
ಮಹಾರಾಜರ ಕುಟುಂಬದರೆಲ್ಲರೂ ಅವರ ಕಾರಿನಲ್ಲಿ ಹೋಗಿ ಅಲ್ಲಿ ಪೂಜೆ ಸಲ್ಲಿಸಿ ಬಂದರು.
ನಮ್ಮನ್ನು ನಮ್ಮ ವಾಸ್ತರ್ ಒಂದು ಕಡೆ ಕೂಡಿಸಿ ರಾತ್ರಿ ಎಲ್ಲಿಂದಲೋ ಉಪ್ಪಿಟ್ಟು ತರಿಸಿ ಕೊಟ್ಟರು. ಹಬ್ಬದ ಊಟದ ಬದಲಾಗಿ ಅದೇ ಅವತ್ತಿನ ರಾತ್ರಿ ಊಟ. ರಾತ್ರಿ ನಮ್ಮನ್ನು ಬಸ್ಸಿನಲ್ಲಿ ತಂದು ನಾವಿಳಿದುಕೊಂಡ ಸ್ಕೂಲಿನಲ್ಲಿ ಬಿಟ್ಟರು. ಮರುದಿವಸ ನಮ್ಮ ತಂಡ ಸಾಮಾನು ಸರಂಜಾಮು ಹೊತ್ಕೊಂಡು ಬಸ್ ಬೆಂಗಳೂರಿನ ಕಡೆ ಹೊರಟಿತು.
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…