ಆಂದೋಲನ ಪುರವಣಿ

ಹಿರಿಯ ವಯಸ್ಸಲ್ಲ ಸುವರ್ಣ ವರ್ಷಗಳು

ಡಾ.ಎಚ್.ಕೆ.ಮಂಜು

ವೃದ್ಧಾಪ್ಯದ ಬಗ್ಗೆ ಯೋಚಿಸಿದಾಗ ನಮ್ಮ ಮನಸ್ಸು ಹೆಚ್ಚಾಗಿ ನೋವು, ಕಾಯಿಲೆ, ಜೀವನದಲ್ಲಿ ಪೂರ್ಣಗೊಳಿಸದ ಕೆಲಸಗಳು, ಇಂತಹ ಹಲವು ವಿಷಾದಗಳ ಬಗ್ಗೆ, ಇತರರ ಮೇಲೆ ಅವಲಂಬನೆಗೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಚಿಂತಿಸುತ್ತದೆ. ಆದರೆ, ಇವು ಜೀವನದ ಅಪೂರ್ಣ ಚಿತ್ರಣದ ಸುತ್ತ ಗಿರಕಿ ಹೊಡೆಯುವ ಚಿಂತೆಗಳು. ಈ ಚಿಂತೆಗಳ ಸುಳಿಯಲ್ಲಿ ಸಿಲುಕಿದರೆ ಹಿರಿತನದೊಂದಿಗೆ ಬರುವ ಜ್ಞಾನ, ವಿವೇಚನೆ, ಮಾನಸಿಕ ಪ್ರಬುದ್ಧತೆಯನ್ನು ಗುರುತಿಸಲು ಸೋಲುತ್ತೇವೆ. ಹಿರಿವಯಸ್ಸು ಎಲ್ಲವನ್ನೂ ಬಿಟ್ಟುಬಿಡುವ ಪ್ರಕ್ರಿಯೆಯಲ್ಲ, ಇದು ಹೊಸ ವಿಕಸನಕ್ಕೆ, ಸಮೃದ್ಧಿತನಕ್ಕೆ ಆಹ್ವಾನಿಸುವ ಕಾಲ.

ವಾಸ್ತವವಾಗಿ, ಸಕಾರಾತ್ಮಕ ಮನಸ್ಥಿತಿಯಲ್ಲಿ ಮುನ್ನಡೆದಾಗ ಹಿರಿವಯಸ್ಸು ಹೊಸ ಸುವರ್ಣ ವರ್ಷಗಳು ಪ್ರಾರಂಭವಾಗುವ ಅತ್ಯಂತ ಸಮೃದ್ಧಿಯ ಕಾಲವಾಗಬಹುದು. ಹಿರಿತನವು ಜೀವನದ ಅತಿ ಮುಖ್ಯ ಅಂಶಗಳ ಮೇಲೆ ಗಮನಹರಿಸುವ, ದೀರ್ಘಕಾಲದ ಕನಸುಗಳನ್ನು ಬೆನ್ನಟ್ಟುವ, ತನ್ನೊಳಗಿನ ವ್ಯಕ್ತಿತ್ವದೊಂದಿಗೆ ಸಂವಹಿಸುವ ಪ್ರಬುದ್ಧತೆಯನ್ನು ಒದಗಿಸುತ್ತದೆ.ಇದು ಒಂದು ಅಪರೂಪದ ಮಾನಸಿಕ ಸಾಮರ್ಥ್ಯ.

ಹಿರಿವಯಸ್ಸು ನಿಷ್ಕ್ರಿಯ ಹಂತವಾಗದೆ, ಸಂಪೂರ್ಣ ಪರಿವರ್ತನೆಯ ಜೀವನವಾಗಬಹುದು. ಹಿರಿಯ ವಯಸ್ಸನ್ನು ಆಶಾವಾದದಿಂದ ಸ್ವೀಕರಿಸುವವರು ಇತರರಿಗಿಂತ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ಯೋಗಕ್ಷೇಮದಿಂದ ಇರುತ್ತಾರೆಂದು ಮನೋವಿಜ್ಞಾನದ ಸಂಶೋಧನೆಗಳು ದೃಢಪಡಿಸುತ್ತವೆ. ಹಿರಿಯ ವಯಸ್ಸಿನಲ್ಲಿ ಸಕಾರಾತ್ಮಕ ಆಲೋಚನೆ, ಆಶಾವಾದ ಹೊಂದಿರುವವರು ಖಿನ್ನತೆ ಅಥವಾ ಆತಂಕಗಳಿಂದ ಬಳಲುವ ಸಾಧ್ಯತೆ ತುಂಬಾ ಕಡಿಮೆ. ಇದು ಉತ್ತಮ ದೈಹಿಕ ಮತ್ತು ಸಂಜ್ಞಾತ್ಮಕ ಆರೋಗ್ಯಕ್ಕೆ ಕಾರಣವಾಗುತ್ತದೆ. ಆಶಾದಾಯಕ ಮನಸ್ಥಿತಿಯು ಮೆದುಳಿನ ಆರೋಗ್ಯ, ಸ್ಮರಣೆ, ನಿರ್ಧಾರ ಕೈಗೊಳ್ಳುವಿಕೆಗೆ ಸಹಕಾರಿ. ಇದಿಷ್ಟೇ ಅಲ್ಲ, ಆಶಾವಾದದ ಆಲೋಚನೆ ಹೊಸ ಗುರಿಗಳನ್ನು ಪ್ರೇರೇಪಿಸಿ ನಮ್ಮ ಜೀವನವನ್ನೇ ಬದಲಿಸಬಹುದು.

ಹಿರಿ ವಯಸ್ಸನ್ನು ಪ್ರತಿರೋಧಿಸದೆ ಸಂಭ್ರಮಿಸಿ:

ವೇಗವಾಗಿ ಬದಲಾಗುತ್ತಿರುವ ಪ್ರಪಂಚ ಹಲವು ವೇಳೆ ಯೌವನದಗೀಳಿಗೆ ಬಿದ್ದಂತೆ ಕಾಣಬಹುದು. ಆದರೆ ಹಿರಿಯ ವಯಸ್ಸು ಬದುಕಿನ ರೀತಿ, ಕಥೆಗಳು, ನಗು, ಬದಲಾವಣೆ, ಪ್ರೀತಿ, ವಾತ್ಸಲ್ಯ, ಅಗಾಧ ಅನುಭವ ಹೊಂದಿದ ಪಯಣ. ಇದನ್ನು ಸಂಭ್ರಮಿಸಬೇಕೆ ಹೊರತು ಪ್ರತಿರೋಧಿಸಬಾರದು. ಹೊಸ ಗುರಿಗಳು, ಉದ್ದೇಶಗಳು ಯುವ ಜನತೆಗೆ ಮಾತ್ರ ಸೀಮಿತವಲ್ಲ. ಅನೇಕ ಹಿರಿಯ ವಯಸ್ಕರು ಮಾರ್ಗದರ್ಶನ ನೀಡಲು, ಮುಂದೂಡಿದ ಕನಸುಗಳನ್ನು ಬೆನ್ನಟ್ಟಲು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಉತ್ಸಾಹಿತರಾಗಿ ಮುಂದೆ ಬರುತ್ತಾರೆ. ಹೊಸ ಗುರಿಗಳು, ಆರೋಗ್ಯ ಮತ್ತು ದೀರ್ಘಾಯುಷ್ಯದೊಂದಿಗೆ ನೇರ ಸಂಬಂಧವನ್ನು ಹೊಂದಿದೆ.

ಹಿರಿವಯಸ್ಸು ಅಪ್ರಸ್ತುತೆಯೆಡೆಗೆ ಜಾರುವುದಿಲ್ಲ ಬದಲಾಗಿ ಹೊಸ ಗುರಿ, ಉದ್ದೇಶ, ಉತ್ಸಾಹದೆಡೆಗೆ ಏರುವುದಾಗಿದೆ. ಸಕಾರಾತ್ಮಕತೆಯಿಂದ, ವಿಷಾದದ ಬದಲಾಗಿ ಸಂತೋಷವನ್ನೂ, ನಿರ್ಲಿಪ್ತತೆ ಮತ್ತು ಒಂಟಿತನಕ್ಕೆ ಬದಲಾಗಿ ಸಂಪರ್ಕವನ್ನೂ ಆಯ್ಕೆ ಮಾಡಿಕೊಳ್ಳುವುದಾಗಿದೆ. ಭರವಸೆಯ ಹೃದಯದಿಂದ ಜೀವನದ ಪ್ರತಿ ಹಂತವನ್ನು ಸಂಭ್ರಮವೆಂದು ಜೀವಿಸಿ. ಬದುಕಿಗೂ ಮೀರಿದ ಜೀವನೋತ್ಸಾಹ ಎಲ್ಲರದ್ದಾಗಲಿ.

(ಲೇಖಕರು: ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕ, ಶ್ರೀ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು)

ಸೊಗಸಾದ ಹಿರಿಯ ವಯಸ್ಸಿನ ಜೀವನ ಅದೃಷ್ಟದಿಂದ ಬರುವುದಿಲ್ಲ. ಇದೊಂದು ಪ್ರಜ್ಞಾಪೂರ್ವ ಆಯ್ಕೆ. ಕೇವಲ ಬದುಕುಳಿಯುವಿಕೆಗೆ ಮಾತ್ರ ಚಿಂತಿಸದೆ ಸಮೃದ್ಧವಾಗಿ ಜೀವಿಸುವ ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಹೀಗೆ ಮಾಡಿ.

೧)  ಪ್ರತಿ ದಿನ ಕೃತಜ್ಞತೆಯನ್ನು ಅಭ್ಯಾಸ ಮಾಡಿ ದಿನದಲ್ಲಿ ನೀವು ಕೃತಜ್ಞರಾಗಿರುವ ಕೇವಲ ಎರಡು ಅಥವಾ ಮೂರು ವಿಷಯಗಳನ್ನು ಬರೆಯುವ ಸರಳ ಕೆಲಸವು ನಿಮ್ಮ ಗಮನವನ್ನು ಕೊರತೆಗಳಿಂದ ಸಮೃದ್ಧಿಯೆಡೆಗೆ ಸೆಳೆಯುತ್ತದೆ. ಇದು ಸಣ್ಣ ಸಂತೋಷಗಳನ್ನು ನೆನಪಿಸಿ ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತದೆ.

೨) ಇತರರ ಸಂಪರ್ಕದಲ್ಲಿರಿ ಒಂಟಿತನವು ಹಿರಿಯ ವಯಸ್ಸಿನ ಒಂದು ಮೌನವಾದ ಹೊರೆ, ಆದರೆ ಅದು ಹಾಗೆಯೇ ಇರಬೇಕಾಗಿಲ್ಲ. ಕುಟುಂಬ, ಸ್ನೇಹಿತರು, ಗುಂಪುಗಳೊಂದಿಗೆ ಬೆರೆಯಿರಿ ಅಥವಾ ನೆಚ್ಚಿನ ವಿಷಯದ ಕೆಲಸಗಳಿಗೆ ಸ್ವಯಂಸೇವಕರಾಗಿ. ಇದು ಗಟ್ಟಿ ಸಂಬಂಧಗಳನ್ನು, ಭಾವನಾತ್ಮಕ ಬೆಂಬಲವನ್ನು ಒದಗಿಸುತ್ತದೆ.

೩) ನಿರಂತರ ಕಲಿಕೆ ತೋಟಗಾರಿಕೆ, ಹೊಸ ತಂತ್ರಜ್ಞಾನ, ಸಂಗೀತ ವಾದ್ಯ ನುಡಿಸಲು ಕಲಿಯುವುದು, ಹೊಸ ವಿಷಯಗಳ ಕಲಿಕೆ ಮೆದುಳನ್ನು ಚುರುಕಾಗಿಸುತ್ತದೆ. ನಿರಂತರ ಕಲಿಕೆ ಜೀವನವನ್ನು ಆಕರ್ಷಕವಾಗಿ ಇರಿಸುತ್ತದೆ.

೪) ದೈಹಿಕ ಚಲನೆ, ಮನಸ್ಸಿಗೂ ಗೆಲುಮೆ ದೈಹಿಕ ಚಟುವಟಿಕೆಯು ಕೇವಲ ವ್ಯಾಯಾಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಇದು ಮನಸ್ಸಿಗೂ ಸಂಬಂಧಿಸಿದೆ. ದೈನಂದಿನ ನಡಿಗೆ, ಸರಳ ವ್ಯಾಯಾಮ, ಪ್ರಾಣಾಯಾಮ, ನಿಮ್ಮ ಆರೋಗ್ಯ ಮತ್ತು ಸಂತೋಷ ಎರಡನ್ನೂ ಹೆಚ್ಚಿಸುತ್ತದೆ.

೫) ಇಂದಿನ ಕ್ಷಣವನ್ನು ಅನುಭವಿಸಿ ಕಳೆದು ಹೋದ ಜೀವನದ ಬಗ್ಗೆ ಚಿಂತೆಗಳು, ಮುಂದಿನ ದಿನಗಳ ಬಗೆಗಿನ ಆತಂಕವನ್ನು ಬಿಟ್ಟು ಧ್ಯಾನ, ಪ್ರಾರ್ಥನೆ, ಶಾಂತವಾದ ಕ್ಷಣಗಳನ್ನು ಆಸ್ವಾದಿಸಿ.

ಆಂದೋಲನ ಡೆಸ್ಕ್

Recent Posts

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.…

14 mins ago

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ವಾರ್‌: ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ವಾರ್‌ ಬಗ್ಗೆ ನಟ ಕಿಚ್ಚ ಸುದೀಪ್‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯುದ್ಧಕ್ಕೆ ಸಿದ್ಧ ಮಾತಿಗೆ…

37 mins ago

ಓದುಗರ ಪತ್ರ: ಮರಗಳ ಕೊಂಬೆಗಳನ್ನು ಕತ್ತರಿಸಿ

ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…

1 hour ago

ಓದುಗರ ಪತ್ರ:  ಕುಸ್ತಿಪಟುಗಳಿಗೆ ತರಬೇತಿ ಸ್ವಾಗತಾರ್ಹ

ರಾಜ್ಯದಲ್ಲಿ ೩೧೫ ಕುಸ್ತಿಪಟುಗಳಿಗೆ ಉಚಿತವಾಗಿ ನುರಿತ ಕುಸ್ತಿ ತರಬೇತುದಾರರಿಂದ ವೈಜ್ಞಾನಿಕ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಹಾಗೂ ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ…

1 hour ago

ಓದುಗರ ಪತ್ರ:  ರಾಜ್ಯ ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಒಳ್ಳೆಯ ಬೆಳವಣಿಗೆ

ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು…

1 hour ago

ಓದುಗರ ಪತ್ರ:  ವರುಣ ನಾಲೆಗೆ ತಡೆಗೋಡೆ ನಿರ್ಮಿಸಿ

ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ.…

1 hour ago