ಅನ್ನದಾತರ ಅಂಗಳ

ಅಡಕೆ ಸೋತಾಗ, ಹಲಸು ಕೈ ಹಿಡಿಯುತ್ತದೆ

ಜಿ.ಕೃಷ್ಣ ಪ್ರಸಾದ್
‘ನಮ್ಮ ತೋಟದಲ್ಲಿ 350 ಹಲಸಿನ ಗಿಡಗಳಿವೆ. ದಕ್ಷಿಣ ಭಾರತವನ್ನೆಲ್ಲಾ ಸುತ್ತಿ, ಉತ್ತಮ ತಳಿಯ ಹಲಸಿನ ಮರ ಹುಡುಕಿ, ಅದರ ಹಣ್ಣಿನ ರುಚಿ ನೋಡಿ, ಬೀಜ ಸಂಗ್ರಹಿಸಿ ತಂದು ಬೆಳೆಸಿದ ಗಿಡಗಳು, ನೋಡಬನ್ನಿ’ ಎಂದು ಕೈಲಾಸಮೂರ್ತಿಯವರು ಆಹ್ವಾನಿಸಿದಾಗ, ನನಗೆ ಅದು ಹೊಸದು ಅನಿಸಲಿಲ್ಲ. ಹಲಸು ಎಂದರೆ ಹಲಸಷ್ಟೇ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಕೊಳ್ಳೇಗಾಲ ಸಮೀಪದ ದೊಡ್ಡಿಂದುವಾಡಿಯ ಅವರ ತೋಟದ ಅಡಕೆ ಗಿಡಗಳ ನಡುವೆ ತಲೆ ಎತ್ತಿ ನಿಂತ ಹಲಸಿನ ಮರಗಳ ಸೊಬಗು ಕಂಡ ಮೇಲೆ ‘ಪ್ರತಿಯೊಬ್ಬ ಅಡಕೆ ಬೆಳೆಗಾರನೂ ಈ ತೋಟವನ್ನೊಮ್ಮೆ ನೋಡಬೇಕು’ ಎನಿಸಿತು. ಎಂ.ಕೆ.ಕೈಲಾಸಮೂರ್ತಿ ಹೆಸರಾಂತ ಸಹಜ ಕೃಷಿಕರು. ಕೊಳ್ಳೇಗಾಲ ಸಮೀಪದ ದೊಡ್ಡಿಂದುವಾಡಿಯ ತಮ್ಮ 11 ಎಕರೆ ತೋಟದಲ್ಲಿ ಸಹಜ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

2012ರಲ್ಲಿ ಕರ್ನಾಟಕವನ್ನು ಕಾಡಿದ ಬರಗಾಲಕ್ಕೆ ಕೈಲಾಸಮೂರ್ತಿ ಯವರ ಅಡಕೆ ತೋಟವೂ ತತ್ತರಿಸಿತು. ಎಂದೂ ತಳಕಾಣದ ಅವರ ತೋಟದ ತೆರೆದ ಬಾವಿ ಆ ವರ್ಷ ಬತ್ತಿತು. ಅಡಕೆ ಗಿಡಗಳನ್ನು ಉಳಿಸಿಕೊಳ್ಳಲು ಕೈಲಾಸ ಮೂರ್ತಿಯವರು ಇನ್ನಿಲ್ಲದ ಪ್ರಯತ್ನ ಮಾಡಬೇಕಾಯಿತು. ತಾವೇ ನೆಟ್ಟಿದ್ದ ಎರಡು ಬೃಹದಾಕಾರದ ಹಲಸಿನ ಗಿಡಗಳು ನೀರಿನ ಕೊರತೆಯ ಪರಿವೆ ಇಲ್ಲದೆ ನಳನಳಿಸುತ್ತಿದ್ದವು. ‘ದುಡ್ಡಿನ ಬೆಳೆ ಬದಲು ಅನ್ನದ ಬೆಳೆ ಹಾಕಬೇಕು ಎಂದು ಆಕ್ಷಣ ನನಗೆ ಅನಿಸಿತು. ಅಡಕೆಯ ನಡುವೆ ಹಲಸು ನೆಟ್ಟು ತೋಟವನ್ನು ಶಾಶ್ವತವಾಗಿ ಹಸಿರಾಗಿ ಇಡುವ ನಿರ್ಧಾರ ಮಾಡಿದೆ’ ಎಂದು ಕೈಲಾಸಮೂರ್ತಿ ಬದಲಾವಣೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.

ಹಲಸಿನ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು. ಸ್ಥಳೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಬಿಕರಿಯಾಗುವ ಹಲಸಿನ ತೊಳೆಯನ್ನು ನಿರ್ಜಲೀಕರಣ ಮಾಡಿ ಮಾರಾಟ ಮಾಡುವುದು ಹೆಚ್ಚು ಲಾಭಕರ ಎಂಬ ಅಭಿಪ್ರಾಯಕ್ಕೆ ಬಂದರು. ಇದಕ್ಕೆ ಸೂಕ್ತವಾಗಬಲ್ಲ ನೀಳ ತೊಳೆಯ ಹಲಸಿನ ತಳಿಗಳ ಹುಡುಕಾಟಕ್ಕೆ ಮುಂದಾದರು.

ಹಲಸಿನ ತಳಿಗಳಿಗಾಗಿ ಹುಡುಕಾಟ: ಆ ಕಾಲಕ್ಕೆ ಅಡಕೆ ಪತ್ರಿಕೆ, ಶ್ರೀಪಡ್ರೆಯವರು ನೇತೃತ್ವದಲ್ಲಿ ‘ಹಲಸಿನ ಪ್ರಚಾರ ಶುರುಮಾಡಿತ್ತು. ಅಪರೂಪದ ಹಲಸಿನ ತಳಿಗಳು ಬೆಳಕಿಗೆ ಬರುತ್ತಿದ್ದವು. ಆ ಮಾಹಿತಿಯ ಜಾಡು ಹಿಡಿದು ಹೊರಟ ಕೈಲಾಸಮೂರ್ತಿಯವರು ಜನಪ್ರಿಯ ತಳಿ ಗಳಿಗೆ ಮಾತ್ರ ಜೋತು ಬೀಳದೆ, ರಸ್ತೆ ಬದಿ ಕಂಡ ಗುಣಮಟ್ಟದ ಹಲಸಿನ ಹಣ್ಣು ಗಮನಿಸಲು ಆರಂಭಿಸಿದರು. ಅರಸೀಕೆರೆ, ಚಿಕ್ಕನಾಯಕನಹಳ್ಳಿ, ಚನ್ನರಾಯಪಟ್ಟಣ, ಮೇಲಕೋಟೆ, ಸಖರಾಯಪಟ್ಟಣ ಹೀಗೆ ಹಲಸಿಗೆ ಹೆಸರಾದ ಪ್ರದೇಶಗಳಿಗೆಲ್ಲಾ ಭೇಟಿ ಕೊಟ್ಟರು. ಹಲಸಿಗೆ ಹೆಸರಾದ ತಮಿಳುನಾಡಿನ ಪೊನ್ನರ್ತಿಗೂ ಹೋಗಿ ಬಂದರು.

ಮೈಸೂರು ವಿವಿ ಸಿಬ್ಬಂದಿ ವಸತಿ ಗೃಹದಲ್ಲಿ ಕುವೆಂಪುರವರು ನೆಡಿಸಿದ ಹಳೆಯ ಹಲಸಿನ ಮರಗಳಿವೆ ಎಂದು ಯಾರೋ ಹೇಳಿದರು. ಗುಂಡನೆಯ ಗಾತ್ರದ ಹೆಚ್ಚು ತೊಳೆಯ ಈ ಹಲಸಿನ ತಳಿಗಳ ಬೀಜಸಂಗ್ರಹಿಸಿಕೊಂಡರು. ‘ಉತ್ತಮ ತಳಿಯ ಹಲಸು ಸಿಗಬಹುದು ಎಂದು ಬಿಳಿಗಿರಿರಂಗನ ಬೆಟ್ಟದ ಪೋಡುಗಳನ್ನೆಲ್ಲಾ ಜಾಲಾಡಿದೆ. ನನಗೆ ಸಮಾಧಾನ ಅನಿಸುವ ಒಂದೂ ಹಲಸಿನ ತಳಿ ಸಿಗಲಿಲ್ಲ’ ಎಂದು ಕೈಲಾಸಮೂರ್ತಿ ಹೇಳುತ್ತಾರೆ.


ನೀಳವಾದ ದಪ್ಪನಾದ ತೊಳೆ, ತೆಳು ಸಿಪ್ಪೆಯ ಹಣ್ಣು, ಸಣ್ಣ ಬೀಜ, ಉತ್ತಮ ರುಚಿ… ಹೀಗೆ ಗುಣಮಟ್ಟದ ಹಲಸಿನ ತಳಿಗಳನ್ನು ಹುಡುಕತೊಡಗಿದರು. ಉತ್ತಮ ಅನಿಸಿದ ಹಲಸಿನ ಹಣ್ಣು ತಿನ್ನುವುದು; ಸಮಾಧಾನ ಅನಿಸಿದರೆ ಅದರ ಬೀಜ ಸಂಗ್ರಹಿಸಿಕೊಳ್ಳುವುದು. ಸಂಗ್ರಹಿಸಿದ ಬೀಜಗಳನ್ನು ನರ್ಸರಿ ಕವರ್‌ಗಳಲ್ಲಿ ಹಾಕಿ ಗಿಡ ಬೆಳೆಸುವುದೇ ಕೈಲಾಸಮೂರ್ತಿ ಅವರ ಕಾಯಕವಾಯಿತು.

ಇತ್ತೀಚಿನ ವರ್ಷಗಳಲ್ಲಿ ಶೀಘ್ರ ಕಟಾವಿಗೆ ಬರುವ ಹಲಸಿನ ಕಸಿ ಗಿಡಗಳನ್ನು ನೆಡುವುದು ವಾಡಿಕೆ. ಆದರೆ ಕೈಲಾಸಮೂರ್ತಿಯವರು ಬೀಜದಿಂದ ಗಿಡಗಳನ್ನು ಮಾಡಿ, ಬೆಳೆಸಿರುವುದು ವಿಶೇಷ. ‘ಕಸಿ ಮಾಡಿದ ಗಿಡಗಳು ತಾಯಿ ಗಿಡದ ಗುಣವನ್ನು ಉಳಿಸಿಕೊಳ್ಳುತ್ತವೆ ಎಂಬ ಮಾತನ್ನು ಒಪ್ಪುತ್ತೇನೆ. ಆದರೆ ಬೀಜದಿಂದ ಹುಟ್ಟಿದ ಗಿಡ ಆರೋಗ್ಯಕರವಾಗಿ, ಮತ್ತು ಮಳೆಗಾಳಿಯ ಹೊಡೆತಕ್ಕೆ ತಡೆದು ಬೆಳೆಯುವ ಶಕ್ತಿ ಹೊಂದಿರುತ್ತವೆ. ಹಾಗಾಗಿ ಬೀಜದಿಂದ ಗಿಡ ಬೆಳೆಸುವ ನಿರ್ಧಾರ ಕೈಗೊಂಡೆ’ ಎನ್ನುತ್ತಾರೆ. ಅಡಕೆಯ ನಡುವೆ ತಲೆ ಎತ್ತಿ ನಿಂತ ಹಲಸಿನ ಮರಗಳು ಕೈಲಾಸ ಮೂರ್ತಿಯವರ ತೋಟವನ್ನು ಹಸಿರಾಗಿಸಿವೆ. ಭವಿಷ್ಯದಲ್ಲಿ ಅಡಕೆ ಬರ, ಬೆಲೆ ಕುಸಿತಕ್ಕೆ ಸಿಕ್ಕಿ ಸೋತರೂ ಹಲಸು ಕೈ ಹಿಡಿಯುತ್ತದೆ ಎಂಬ ಆತ್ಮವಿಶ್ವಾಸ ಅವರದು. ತೋಟದ ಪಕ್ಕದ ಖಾಲಿ ಜಾಗದಲ್ಲೂ ಹಲಸು ನೆಟ್ಟು ತೋಟವನ್ನು ವಿಸ್ತರಿಸಿದ್ದಾರೆ. ಮಡದಿ ಭ್ರಮರಾಂಬ ಮತ್ತು ಮಗ ಶಿವಕೀರ್ತಿಯವರ ಬೆಂಬಲದಿಂದ ಹಲಸಿನ ತೋಟ ಕಟ್ಟುವ ಕನಸು ಸಾಕಾರವಾಗಿದೆ ಎನ್ನುತ್ತಾರೆ.

ಹಲಸಿನ ಗಿಡಗಳನ್ನು ಬೆಳೆಸುವುದರಲ್ಲೂ ಕೈಲಾಸಮೂರ್ತಿಯವರು ಜಾಣೆ ತೋರಿದ್ದಾರೆ. ಕೂಲಿಕಾರ್ಮಿಕರ ಕೊರತೆ ಇರುವುದರಿಂದ, ಮನೆಯವರೇ ಹಲಸು ಕಟಾವು ಮಾಡಲು ಅನುವಾಗುವಂತೆ, ಕಾಯಿಗಳು ಸುಲಭವಾಗಿ ಕೈಗೆ ಸಿಗುವಂತೆ ಹಲಸಿನ ಮರವನ್ನು ಅಡ್ಡವಾಗಿ ಬೆಳೆಸುವ ಪ್ರಯೋಗ ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಹಲಸಿನ ಕೊಯ್ದು ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಇಳುವರಿಯೂ ಹೆಚ್ಚುತ್ತಿದೆ. ಉತ್ತಮ ರುಚಿಯ ಈ ಹಲಸಿನ ಹಣ್ಣಿಗಳಿಗೆ ಗ್ರಾಹಕರು ತಾವಾಗೇ ಬೇಡಿಕೆ ಸಲ್ಲಿಸುತ್ತಿದ್ದಾರೆ.

andolana

Recent Posts

ಮೃಗಾಲಯದ ಆನೆ ಅಭಿ ಮತ್ತಿಗೋಡಿನಲ್ಲಿ ಕೊನೆಯುಸಿರು

ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.‌ ನಾಗರಹೊಳೆ ರಾಷ್ಟ್ರೀಯ…

9 mins ago

ರಾಜ್ಯದ ಹಲವೆಡೆ ತಾಪಮಾನ ಹೆಚ್ಚಳ: ಹೀಟ್‌ ಸ್ಟ್ರೋಕ್‌ ಭೀತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್‌ ಸ್ಟ್ರೋಕ್‌ ಭೀತಿ ಎದುರಾಗಿದೆ. ಹಲವೆಡೆ…

17 mins ago

ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ

ಚಾಮರಾಜನಗರ: ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ…

1 hour ago

ಓದುಗರ ಪತ್ರ: ಅನಿಲ ಸಿಲಿಂಡರ್ ಬೆಲೆ ಏರಿಕೆ ತರವಲ್ಲ

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ರೂ.೬೦…

1 hour ago

ಓದುಗರ ಪತ್ರ: ಮೈಸೂರು ಆಕಾಶವಾಣಿ ಪ್ರಸರಣ ಸಾಮರ್ಥ್ಯ ಹೆಚ್ಚಿಸಿ

ಭಾರತದಲ್ಲೇ ಮೊದಲ ಆಕಾಶವಾಣಿ ಕೇಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಆಕಾಶವಾಣಿ ಕೇಂದ್ರ ೯೦ ವಸಂತಗಳನ್ನು ಪೂರೈಸಿದ್ದು, ಪ್ರಭಾವಿ ಸಾರ್ವಜನಿಕ…

1 hour ago

ಓದುಗರ ಪತ್ರ: ಆಟ… ಕಿರೀಟ !

ಟಿ-೨೦ವಿಶ್ವಕಪ್‌ನಲ್ಲಿ ಕಿವೀಸ್ ಕಿವಿ ಹಿಂಡಿದ ಇಂಡಿಯಾ ಆಡಿದ್ದು ದಾಖಲೆಗಳ ಆಟ ! ಅದಕ್ಕೇ ಒಲಿಯಿತು ಭಾರತಕ್ಕೆ ವಿಶ್ವಕಪ್ ಕಿರೀಟ !…

1 hour ago