ಅನಿಲ್ ಅಂತರಸಂತೆ
ಕೃಷಿ, ಹೈನುಗಾರಿಕೆ, ಮೀನು ಸಾಕಾಣಿಕೆಗಳಿಂದ ನಷ್ಟವೇ ಹೆಚ್ಚು, ಇವುಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಯುವ ಸಮುದಾಯ ನಗರ ಭಾಗಗಳಲ್ಲಿ ಉದ್ಯೋಗವನ್ನು ಅರಸುತ್ತಾ ತಮ್ಮ ಕೃಷಿ ಭೂಮಿ, ಸ್ವಂತ ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವ ಕೃಷಿಕ ಹಳ್ಳಿಯಲ್ಲೇ ಹೈನುಗಾರಿಕೆ, ಮೀನುಗಾರಿಕೆಯಲ್ಲಿಯೂ ಲಾಭ ಗಳಿಸಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರೇ ಎಚ್. ಡಿ. ಕೋಟೆ ತಾಲ್ಲೂಕಿನ ರಾಮೇನಹಳ್ಳಿಯ ವಿದ್ಯಾವಂತ ಯುವ ರೈತ ವಿ. ಮಹೇಶ್.
ಎಚ್. ಡಿ. ಕೋಟೆ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ವೀರಭದ್ರ ಮತ್ತು ಪಾರ್ವತಮ್ಮ ದಂಪತಿಯ ಎರಡನೇ ಪುತ್ರನಾಗಿ ಜನಿಸಿದ ಮಹೇಶ್, ಬಿಇ ಪದವಿ ವ್ಯಾಸಂಗದ ವೇಳೆ ತಮ್ಮ ತಂದೆ ಮರಣ ಹೊಂದಿದ್ದರಿಂದ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಮುಖ ಮಾಡಿದರು. ವಿದ್ಯಾಭ್ಯಾಸ ಮುಗಿದ ಮೇಲೂ ಸ್ವಯಂ ಉದ್ಯೋಗವನ್ನು ಮಾಡಬೇಕು, ಅದರಲ್ಲಿಯೂ ಕೃಷಿಯನ್ನೇ ಮಾಡಬೇಕು ಅಂದುಕೊಂಡಿದ್ದ ಮಹೇಶ್, ತಮ್ಮ ತಂದೆಯ ಸಾವಿನ ನಂತರ ಕೃಷಿ ಕಾರ್ಯ ಕೈಗೊಂಡರು.
೨೦೦೬ರಲ್ಲಿ ಕೃಷಿ ಬದುಕು ಆರಂಭಿಸಿದ ಮಹೇಶ್, ರೇಷ್ಮೆ, ಅಡಕೆ, ತೆಂಗು ಜತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದು, ಉತ್ತಮ ಲಾಭ ಗಳಿಸುತ್ತಿದ್ದಾರೆ. ತಮಗೆ ಬಂದ ೯ ಎಕರೆ ಕೃಷಿ ಭೂಮಿಯ ಪೈಕಿ ೬ ಎಕರೆ ವಸ್ತಿ ನೆಲವಾದ್ದರಿಂದ ನೀರು ಜಿನುಗಿ ಕೃಷಿ ಮಾಡಲು ಕಷ್ಟವಾಗುತ್ತಿತ್ತು. ಆರಂಭದ ದಿನಗಳಲ್ಲಿ ನಷ್ಟವೇ ಹೆಚ್ಚಾಗಿತ್ತು. ಈ ವಸ್ತಿ ನೆಲದಲ್ಲಿ ಏನು ಮಾಡಬೇಕು ಎಂದುಕೊಳ್ಳುತ್ತಿರುವಾಗಲೇ ಅಲ್ಲಿ ಮೀನು ಸಾಕಾಣಿಕೆ ಸೂಕ್ತ ಎಂದು ೨೦೧೪-೧೫ರಲ್ಲಿ ಕಬಿನಿ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ತರಬೇತಿ ಪಡೆದು ‘ಹೊನ್ನೇರು ಮೀನುಮರಿ ಪಾಲನಾ ಕೇಂದ್ರ’ವನ್ನು ತಮ್ಮ ಜಮೀನಿನಲ್ಲಿ ಆರಂಭಿಸಿದರು. ಆರಂಭದಲ್ಲಿ ೧೦ ಗುಂಟೆಯಲ್ಲಿ ಸಣ್ಣ ಕೆರೆಯೊಂದನ್ನು ನಿರ್ಮಿಸಿ ಆರಂಭಿಸಿದ ಮೀನು ಪಾಲನಾ ಕೇಂದ್ರವನ್ನು ಈಗ ೬ ಎಕರೆಗೆ ವಿಸ್ತರಿಸಿಕೊಂಡಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದರೂ ಕಳೆದ ೨-೩ ವರ್ಷಗಳಿಂದ ಮೀನುಗಾರಿಕೆಯಲ್ಲಿ ಲಾಭ ಕಂಡುಕೊಂಡಿದ್ದಾರೆ. ‘೧ ಎಕರೆಯಲ್ಲಿ ೪ ಟನ್ ಮೀನು ಉತ್ಪಾದನೆಯಾಗುತ್ತಿದ್ದು, ಹಂತ ಹಂತವಾಗಿ ಪ್ರಗತಿ ಸಾಽಸುತ್ತಿದ್ದೇನೆ. ಸದ್ಯಕ್ಕೆ ಮೀನು ಸಾಕಾಣಿಕೆಯಿಂದ ೮ ಲಕ್ಷ ರೂ. ಗಳಷ್ಟು ವಾರ್ಷಿಕ ಆದಾಯ ಗಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ೧೨ ಲಕ್ಷ ರೂ. ಗಳಿಸಬೇಕು ಎಂಬ ಗುರಿ ಹೊಂದಿದ್ದೇನೆ’ ಎಂಬುದು ಮಹೇಶ್ ರವರ ಅಭಿಪ್ರಾಯ.
ಒಂದೆರಡು ವರ್ಷ ಮಳೆ ಹಾಗೂ ಮಳೆಯ ನೀರು ಹರಿದು ಬರುವ ಪ್ರಮಾಣವನ್ನು ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ಕೆರೆಗಳನ್ನು ನಿರ್ಮಿಸಿ ಮೀನು ಸಾಕಾಣಿಕೆಯನ್ನು ಆರಂಭಿಸಿದ್ದು, ಇವರ ಕೇಂದ್ರದಲ್ಲಿ ಕಾಟ್ಲಾ, ರುಕು, ಕಾಮನ್ ಕ್ರಾಪ್, ಗ್ರಾಸ್ ಕ್ರಾಪ್ ಮೀನಿನ ತಳಿಗಳು ಸಿಗಲಿವೆ.
ಸಂಪೂರ್ಣ ಸಾವಯವ ಕೃಷಿ ಮಾಡುತ್ತಿರುವ ಮಹೇಶ್, ಮೀನು ಸಾಕಾಣಿಕೆಯ ಜತೆಗೆ ರೇಷ್ಮೆ ಉತ್ಪಾದನೆ ಹಾಗೂ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಆ ಮೂಲಕ ಸಮಗ್ರ ಕೃಷಿಯಲ್ಲಿ ಲಾಭ ಕಂಡಿದ್ದಾರೆ. ಸದ್ಯ ಕಳೆದ ೮ ವರ್ಷಗಳಿಂದ ಇತರ ಕೃಷಿಕರಿಗೆ ಮೀನು ಸಾಕಾಣಿಕೆಯ ತರಬೇತಿ ನೀಡುತ್ತಿದ್ದು, ವಿವೇಕಾನಂದ ಕೃಷಿ ಕೇಂದ್ರ ಸೇರಿದಂತೆ ವಿವಿಧ ಕೃಷಿ ಕೇಂದ್ರಗಳೂ ಇವರ ಕೃಷಿ ಭೂಮಿಯಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿವೆ.
ಸದ್ಯ ಜಿಲ್ಲೆಯಲ್ಲಿ ಇಷ್ಟು ವಿಸ್ತೀರ್ಣದಲ್ಲಿ ಹೆಚ್ಚು ಕಾಲ ಮೀನು ಸಾಕಾಣಿಕೆ ಮಾಡಿ, ಲಾಭ ಕಂಡುಕೊಳ್ಳುತ್ತಿರುವ ಕೆಲವೇ ಕೆಲವು ಕೃಷಿಕರಲ್ಲಿ ಮಹೇಶ್‌ರವರೂ ಒಬ್ಬರು. ಇವರ ಈ ಸಾಧನೆಗೆ ಎರಡು ಬಾರಿ ದಸರಾ ಮಹೋತ್ಸವವದಲ್ಲಿ ‘ಪ್ರಗತಿಪರ ಮೀನು ಕೃಷಿಕ’, ವಿವೇಕಾನಂದ ಸಂಸ್ಥೆಯಿಂದ ‘ಯುವ ಉತ್ಸಾಹಿ ಸಾವಯವ ಕೃಷಿಕ’ ಪ್ರಶಸ್ತಿ ಸೇರಿದಂತೆ ಅನೇಕ ಸಂಘಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ.
ಭೂಮಿ ಎಂಬುದು ಒಂದು ಯುದ್ಧ ಭೂಮಿ ಇದ್ದಂತೆ. ಇದರಲ್ಲಿ ಹೆಚ್ಚು ಕಾಲ ಉಳಿಯಲು ಹಣ ಇದ್ದರೆ ಸಾಲದು, ಸ್ಥಳೀಯ ಜ್ಞಾನದ ಜತೆಗೆ ತಲೆಮಾರಿನ ಕೃಷಿ ಜ್ಞಾನವೂ ಅಗತ್ಯ. ನಮ್ಮ ಪರಂಪರೆಯ ಕೃಷಿಯನ್ನು ನಮ್ಮ ಪೀಳಿಗೆಯವರು ಸ್ಪಲ್ಪ ಆಧುನಿಕತೆ ಅಳವಡಿಸಿಕೊಂಡು ಮುಂದುವರಿಸಬೇಕು. ಸಮಗ್ರ ಕೃಷಿ ಮಾಡಿದರೆ ಯಾವುದಾದರೂ ಒಂದು ರೈತರ ಕೈ ಹಿಡಿಯುತ್ತದೆ. ಕೃಷಿಯಲ್ಲಿ ಆದಾಯವೂ ಇದೆ, ಅಪಾಯವೂ ಇದೆ. ಅದರ ಬಗ್ಗೆ ಜ್ಞಾನವಿರಬೇಕು. -ವಿ. ಮಹೇಶ್, ಯುವ ಕೃಷಿಕ, ರಾಮೇನಹಳ್ಳಿ.
anil64936@gmail.com
ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…
ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…
ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…
ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…
ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…