ಅನ್ನದಾತರ ಅಂಗಳ

ಪಿರಿಯಾಪಟ್ಟಣ ಕಣಗಾಲಿನ ಬೀಜಮಾತೆ ಪದ್ಮಮ್ಮ

ಜಿ.ಕೃಷ್ಣ ಪ್ರಸಾದ್

ದಾವಣಗೆರೆಯಲ್ಲಿ ಬೀಜ ಮೇಳದ ಕಲರವ. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಬೀಜ ಸಂರಕ್ಷಕರು ಮಳಿಗೆಗಳನ್ನು ತೆರೆದಿದ್ದರು. ಆದರೆ, ಜನ ಗುಂಪುಗಟ್ಟಿ ನಿಂತದ್ದು, ನೆಲದ ಮೇಲೆ ಬೀಜ ಹರಡಿ ಕುಂತ ಪದ್ಮಮ್ಮನ ಮಳಿಗೆಯ ಬಳಿ. ‘ಇದಕ್ಕೆ ಎಷ್ಟು ಬೆಲೆ?’ ಯಾರೋ ಕೇಳಿದರು ‘ಕಾಸು ಆಮೇಲೆ ಕೊಡೀವಂತೆ. ಮೊದಲು ಬೀಜ ತಗೋ. ಕೈ ಹಿಡಿ’ ಎಂದು ಪದ್ಮಮ್ಮ ಜೋರು ಮಾಡಿದರು. ಆತ ಬೆಪ್ಪಗೆ ಬೀಜ ಪಡೆದು, ಪೇಪರ್ ಗಂಟು ಕಟ್ಟಿಕೊಂಡ. ಅಜ್ಜಿ ಮೊಮ್ಮಕ್ಕಳಿಗೆ ಕೈ ತುತ್ತು ಕೊಟ್ಟಂತೆ, ಪದ್ಮಮ್ಮ ಕೈ ಒಡ್ಡಿದವರಿಗೆಲ್ಲಾ ಬೀಜ ಹಂಚಿದರು.

ಇವರೇ ಬೀಜಮಾತೆ ಪದ್ಮಮ್ಮ. ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲಿನವರು. ‘ಪುಟ್ಟಣ್ಣ ಕಣಗಾಲ್ ನಮ್ಮೂರಿನವರು’ ಎಂದು ಪದ್ಮಮ್ಮ ಹೆಮ್ಮೆಯಿಂದ ಹೇಳುತ್ತಾರೆ. ೭೨ ವರ್ಷದ ಪದ್ಮಮ್ಮ ಈಗಲೂ ಮಣ್ಣು ಮುಟ್ಟಿ ಕೃಷಿ ಮಾಡುತ್ತಾರೆ.

ಎರಡು ಎಕರೆ ತೋಟ ಇದೆ. ತೆಂಗು, ಅಡಕೆ ಗಿಡಗಳ ನಡುವಿನ ಜಾಗದಲ್ಲಿ ಹತ್ತಾರು ಬಗೆಯ ತರಕಾರಿ ಬೆಳೆಗಳನ್ನು ಬೆಳೆಸುತ್ತಾರೆ. ಅವು ತಿನ್ನಲು ಅಲ್ಲ; ಬೀಜಕ್ಕೆ ಎಲ್ಲ. ತೋಟದ ನಡುವಿನ ವೀಳ್ಯೆದೆಲೆ ನಿರಂತರ ಆದಾಯ ತರುತ್ತಿದೆ. ತಮ್ಮದೇ ಕಿರಾಣಿ ಅಂಗಡಿ ಇರುವುದರಿಂದ ಮಾರುಕಟ್ಟೆ ಸಮಸ್ಯೆಯಿಲ್ಲ. ಎರೆಹುಳು ಗೊಬ್ಬರ ತಯಾರಿಕೆ ಮಾಡುವುದರಿಂದ ಹೊಲಕ್ಕಾಗುವಷ್ಟು ಗೊಬ್ಬರ ಸಿಗುತ್ತದೆ.

ಅರ್ಧ ಎಕರೆಯಲ್ಲಿ ಸಾಂಪ್ರದಾಯಿಕ ತಳಿ ರಾಜ ಮುಡಿ ಭತ್ತವನ್ನು ಮನೆಗಾಗುವಷ್ಟು ಬೆಳೆದುಕೊಳ್ಳುತ್ತಾರೆ. ಮನೆಯ ಹಿತ್ತಲಿನಲ್ಲೂ ದೇಸಿ ತಳಿಯ ತರಕಾರಿಗಳನ್ನು ಬೆಳೆಯುತ್ತಾರೆ. ಬೀಜಗಳನ್ನು ಸಂರಕ್ಷಿಸುತ್ತಾರೆ.ಇವರ ಸಂಗ್ರಹದಲ್ಲಿ ೧೫೦ ತಳಿಗಳಿವೆ. ಶಿಕ್ಷಕರಾಗಿನಿವೃತ್ತರಾಗಿರುವ ಪತಿ ಮರೀ ಗೌಡರ ಒತ್ತಾಸೆ, ಪದ್ಮಮ್ಮನ ಬೀಜ ಪ್ರೀತಿಯನ್ನು ಕಾಪಿಟ್ಟಿದೆ.

ಬೀಜದ ಪ್ರೀತಿ ಮೊಳೆತದ್ದು ೨೦೧೪ರಲ್ಲಿ ಕೃಷಿ ಇಲಾಖೆಯ ‘ಸಾವಯವ ಭಾಗ್ಯ ಯೋಜನೆ’ ಕಣಗಾಲಿಗೆ ಬಂತು. ಯೋಜನೆಯ ಅನುಷ್ಟಾನದ ಜವಾಬ್ದಾರಿ ಹೊತ್ತ ಸಹಜ ಸಮೃದ್ಧ, ಬೀಜ ಸಂರ ಕ್ಷಣೆಗೆ ಒತ್ತು ನೀಡಿತು. ಬೀಜ ಮೇಳಗಳಿಗೆ ರೈತರನ್ನು ಕರೆದೊಯ್ಯಿತು. ಸಾವಯವ ಗ್ರಾಮ ಯೋಜನಾಧಿಕಾರಿಯಾಗಿದ್ದ ಆಶಾ ಕುಮಾರಿ ಪದ್ಮಮ್ಮನವರ ಆಸಕ್ತಿ ಗಮನಿಸಿ, ಬೀಜ ಸಂರಕ್ಷಣೆ ಮಾಡಲು ಪ್ರೋತ್ಸಾಹಿಸಿದರು.

ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ‘ಬೀಜ ಮೇಳ’ದಲ್ಲಿ ಭಾಗವಹಿಸಿದ ಪದ್ಮಮ್ಮನವರಿಗೆ ವಿವಿಧ ರಾಜ್ಯಗಳ ಬೀಜ ಸಂರಕ್ಷಕರ ಪರಿಚಯವಾಯಿತು. ಅವರಿಂದ ವಿವಿಧ ಬಗೆಯ ಬೀಜಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿ ತಂದ ಬೀಜಗಳನ್ನು ಹಿತ್ತಲಿನಲ್ಲಿ ಬೆಳೆಸಿ ಹೆಚ್ಚು ಮಾಡಿದರು. ಊರಿನ ಬೀಜ ಬ್ಯಾಂಕಿಗೂ ದಾನ ಕೊಟ್ಟರು. ಅಲ್ಲಿಂದ ಎಲ್ಲೇ ಹೋಗಲಿ. ಬೀಜ ಕೊಡುವುದು, ತರುವುದು ಹವ್ಯಾಸವಾಯಿತು. ಮನೆ ಯಲ್ಲೇ ಬೀಜ ಬ್ಯಾಂಕ್ ಆರಂಭಿಸಿದರು. ಸುತ್ತಮುತ್ತಲಿನ ಊರುಗಳವರು ಬೀಜ ಹುಡುಕಿ ಇವರಲ್ಲಿಗೆ ಬರಲಾರಂಭಿಸಿದರು.

ಬೀಜ ತಾಯಿ ಇದ್ದಂತೆ: ಪದ್ಮಮ್ಮ ಸಭೆ ಸಮಾರಂಭಗಳಲ್ಲಿ ಬೀಜದ ಸ್ಟಾಲ್ ಹಾಕುತ್ತಾರೆ. ಬೀಜ ಪಡೆದ ವರಿಗೆ ‘ಸಾವಯವದಲ್ಲಿ ಬೆಳಿಯಬೇಕು. ಯೂರಿಯಾ ಗಿರಿಯಾ ಹಾಕಿಬಿಟ್ಟಿಯಾ’ ಎಂದು ಕಟ್ಟಪ್ಪಣೆ ಮಾಡುತ್ತಾರೆ. ತಳಿಯ ವೈಶಿಷ್ಯವನ್ನು ವಿವರಿಸಿ ಬೀಜ ಕೊಡುವುದು ಇವರ ಹೆಗ್ಗಳಿಕೆ. ಇಷ್ಟೇ ಹಣ ಕೊಡಬೇಕು ಎಂದು ಡಿಮ್ಯಾಂಡ್ ಮಾಡಲ್ಲ. ಕೊಟ್ಟಷ್ಟು ಪಡೆಯುತ್ತಾರೆ. ಉಚಿತವಾಗೂ ಸಾಕಷ್ಟು ಬೀಜಗಳನ್ನು ಹಂಚುತ್ತಾರೆ.

ಬೀಜ ಸಂರಕ್ಷಣೆಯ ಸಾಧನೆಗಾಗಿ ಶ್ರೀ ರವಿಶಂಕರ ಗುರೂಜಿ ಆಶ್ರಮದ ‘ಕೃಷಿ ಸಾಧಕಿ’ ಪ್ರಶಸ್ತಿಯನ್ನು ಪ್ರಧಾನ ಮಂತ್ರಿ ಮೋದಿಯವರಿಂದ ಸ್ವೀಕರಿಸಿದ ಹೆಮ್ಮೆ ಪದ್ಮಮ್ಮನವರದು.

ಮೈಸೂರು ಜಿಲ್ಲಾ ಸಾವಯವ ಕೃಷಿಕರ ಒಕ್ಕೂಟದ ಸದಸ್ಯರಾಗಿ ಪದ್ಮಮ್ಮ ಕಾರ್ಯನಿರ್ವಹಿಸಿದ್ದಾರೆ. ‘ಭಾರತ್ ಬೀಜ ಸ್ವರಾಜ್ ಮಂಚ್’ನ ಸಕ್ರಿಯ ಕಾರ್ಯಕರ್ತೆ. ಕಿಸಾನ್ ಸ್ವರಾಜ್ ಸಮ್ಮೇಳನಗಳಲ್ಲಿ ಇವರು ಆಕರ್ಷಣೆಯ ಕೇಂದ್ರ ಬಿಂದು. ಬೀಜ ಹುಡುಕಿ ಎಷ್ಟೋ ಜನ ಊರಿಗೇ ಬರ್ತಾರೆ.

‘ಬಂಗಾರ ಕಳೆಕೊಂಡ್ರೆ ಸಿಗ್ತದೆ, ಬೀಜ ಕಳಕೊಂಡರೆ ಸಿಗ್ತದಾ?’ ಎಂದು ಗಟ್ಟಿಸಿ ಕೇಳುವ ಪದ್ಮಮ್ಮ ‘ಬೀಜಕ್ಕೇ ಅಂತ ಒಂದೊಂದು ಕಾಯಿ ಬಿಟ್ರೆ ಸಾಕು. ಮನೆಗಾಗುವಷ್ಟು ಬೀಜ ಸಿಗ್ತದೆ. ಅದ್ಯಾಕೆ ದುಡ್ಡುಕೊಟ್ಟು ಅಂಗಡಿ ಯಿಂದ ಬೀಜ ತರಬೇಕು’ ಎಂದು ಕೇಳುತ್ತಾರೆ. ಊರಿಗೊಬ್ಬರು ಬೀಜದ ಪದ್ಮಮ್ಮ ಇದ್ದರೆ, ಬೀಜ ಸ್ವಾವಲಂಬನೆಯ ಕನಸು ಸಾಕಾರಗೊಳ್ಳುತ್ತದೆ.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

6 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

6 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

7 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

8 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

10 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

10 hours ago