ಕಪ್ಪು ಎಂಬುದು ತಪ್ಪು ಎಂದು ನಂಬಿ ಕೆಟ್ಟವರು ಮನುಷ್ಯರು. ನಿಸರ್ಗಕ್ಕೆ ಕಪ್ಪು ಬಣ್ಣದ ಬಗ್ಗೆ ಅಪಾರ ಪ್ರೀತಿ. ಅದು ತನ್ನ ಔಷಧಿಯ ಗುಣಗಳನ್ನೆಲ್ಲಾ ಕಪ್ಪು ಭತ್ತದ ತಳಿಗಳಿಗೆ ತುಂಬಿ ಅವನ್ನು ಅನನ್ಯಗೊಳಿಸಿದೆ.
ಸಾಮಾನ್ಯವಾಗಿ ಭತ್ತದ ಪೈರು ಹಸಿರು ಮತ್ತು ತೆನೆಯ ಬಣ್ಣ ಹೊಂಬಣ್ಣ.ಕರಿ ಮುಂಡುಗ, ಕರಿನೆಲ್ಲು, ಕರಿ ಜೆಡ್ಡು, ನವರದಂತ ದಪ್ಪ ಕಾಳಿನ ಭತ್ತದ ತಳಿಗಳ ಕಾಳಿನ ಬಣ್ಣ ಕಪ್ಪು, ಅಕ್ಕಿ ಕೆಂಪು. ಕರಿ ಗಜವಲಿ , ಕಾಗಿಸಾಲೆ, ಕಾಲಜೀರಾದಂತಹ ಸುವಾಸನೆ ತಳಿಗಳ ಕಾಳು ಅಪ್ಪಟ ಕಪ್ಪು ,ಅಕ್ಕಿ ಬಿಳುಪು. ಡಂಬರ ಸಾಲಿಯಂಥ ತಳಿಗಳ ಪೈರೆಲ್ಲಾ ಕಪ್ಪಾದರೆ, ಬರ್ಮಾಬ್ಲಾಕ್‌ನಂಥ ತಳಿಗಳ ಅಕ್ಕಿಯೇ ಕಪ್ಪು. ಇಡೀ ಹೊಲವೇ ಬೆಂಕಿ ಹೊತ್ತಿಕೊಂಡಂತೆ ಕಾಣುವ ಕಪ್ಪು ಗರಿಗಳ ನಜರಾಬಾದ್, ಕೃಷ್ಣವೇಣಿ ಮತ್ತು ಡಂಬರ ಸಾಲಿ ಭತ್ತದ ತಳಿಗಳು ನೋಡುಗರ ಗಮನ ಸೆಳೆಯುತ್ತವೆ. ‘ಬರ್ಮಾ ಬ್ಲಾಕ್’ ವಿಶೇಷ ಕಪ್ಪು ಅಕ್ಕಿಯ ತಳಿ. ಜಿಗಟು ಗುಣದ ಕಪ್ಪಕ್ಕಿಯ ಪಾಯಸ ಬಲು ರುಚಿ.ಈ ಅಕ್ಕಿಗೆ ಸುವಾಸನೆ ಗುಣವಿದೆ.
ಕರಿಗಜಿವಿಲಿ ಔಷಧಿಯ ಕಪ್ಪು ಭತ್ತ: ಬೆಳಗಾವಿ ಮೂಲದ . ಇದರ ಅನ್ನವನ್ನು ಕೈಯಲ್ಲಿ ಹಿಡಿದರೆ ತುಪ್ಪದಂತೆ ಜಿಡ್ಡು ಜಿಡ್ಡು. ಹಾಲುಣಿಸುವ ತಾಯಂದಿರಿಗೆ ಇದು ಉತ್ತಮ ಆಹಾರ. ಕಪ್ಪು ಭತ್ತದ ತಳಿಗಳಿಂದ ಗದ್ದೆಯಲ್ಲಿ ಚಿತ್ರ ಬಿಡಿ ಸುವ ಕಲೆ ಜಪಾನ್‌ನಲ್ಲಿ ಜನಪ್ರಿಯ. ಮಂಡ್ಯದ ಶಿವಳ್ಳಿಯ ಬೋರೇಗೌಡರು ಈ ಕಲೆಯಲ್ಲಿ ಪರಿಣತರು.ಗದ್ದೆಯಲ್ಲಿ ಪಡಿ ಮೂಡುವ ಚಿತ್ರಗಳನ್ನು ನೋಡುವುದೇ ಸೊಗಸು.
ಔಷಧಿಯ ಖಜಾನೆ: ಕಪ್ಪು ಭತ್ತದ ತಳಿಗಳು (ಬ್ಲಾಕ್ ರೈಸ್)ಔಷಧಿಯ ಗುಣಗಳಿಂದ ಸಮೃದ್ಧ. ಅಂಥೊಸಿಯಾನಿನ್ ಎಂಬ ರಾಸಾಯನಿಕದಿಂದಾಗಿ ಅಕ್ಕಿಗೆ ಕಪ್ಪು ಬಣ್ಣ ಬಂದಿದೆ. ಕಪ್ಪಕ್ಕಿ ಪೋಷಕ ನಾರು, ಪ್ರೋಟಿನ್, ಕಬ್ಬಿಣ , ವಿಟಮಿನ್ ‘ಇ’ , ಕ್ಯಾಲ್ಸಿಯಂ ,ಮೆಗ್ನೇಷಿಯಂನಿಂದ ಸಮೃದ್ಧವಾಗಿದೆ. ಮೃದುತ್ವ ಮತ್ತು ಪರಿಮಳದ ಗುಣದಿಂದಾಗಿ ಇವು ಸಿಹಿ ಪದಾರ್ಥಕ್ಕೆ ಸೂಕ್ತ. ಕಪ್ಪಕ್ಕಿ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ಕ್ಯಾನ್ಸರ್ ನ್ನು ದೂರವಿಡಬಹುದು. ಬಾಲಕಿಯರು ಋತುಮತಿಯರಾದಾಗ ಕಪ್ಪಕ್ಕಿಯ ‘ಪುಟ್ಟು’ ಕೊಡುವ ಸಂಪ್ರದಾಯ ತಮಿಳುನಾಡಿನಲ್ಲಿದೆ. ರಕ್ತದಲ್ಲಿನ ಕಬ್ಬಿಣದ ಅಂಶ ಮತ್ತು ತೂಕ ಹೆಚ್ಚಿಸಲು ಕಪ್ಪಕ್ಕಿ ಸಹಕಾರಿ. ಚೀನಾದಲ್ಲಿ ರಾಜ ಮನೆತನದವರು ಮಾತ್ರ ಕಪ್ಪಕ್ಕಿ ಬಳಸ ಬೇಕೆಂಬ ಆದೇಶ ಇತ್ತು. ಜನಸಾಮಾನ್ಯರಿಗೆ ಇದರ ಬಳಕೆ ನಿಷಿದ್ಧವಾಗಿತ್ತು.
ಕಾವೇರಿ ಬಯಲಲ್ಲಿ ಕಪ್ಪು ಬಂಗಾರ: ಕಳೆದ ಒಂದು ದಶಕದಿಂದಲೂ ಕಾವೇರಿ ಅಚ್ಚುಕಟ್ಟು ಪ್ರದೇಶ ದಲ್ಲಿ ಕಪ್ಪು ಬಣ್ಣದ ಭತ್ತ ಗಳನ್ನು ಬೆಳೆಸುವ ಅನೇಕ ರೈತರಿದ್ದಾರೆ. ಕಿರು ಗಾವಲಿನ ಸೈಯದ್ ಘನಿಯವರ ಸಂಗ್ರಹದಲ್ಲಿ ಹತ್ತಕ್ಕೂ ಹೆಚ್ಚು ಕಪ್ಪು ಭತ್ತದ ತಳಿಗಳ ಸಂಗ್ರಹವಿದೆ. ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಗೋಪಾಲಕೃಷ್ಣ ಅವರು ಮೆಲ್ಲ ಹಳ್ಳಿಯ ತಮ್ಮ ಗದ್ದೆಯಲ್ಲಿ ಬರ್ಮಾ ಬ್ಲಾಕ್ ಭತ್ತ ಬೆಳೆ ದಿದ್ದರು. ೧೦ ಗುಂಟೆ ಪ್ರದೇಶಕ್ಕೆ ೬ ಕ್ವಿಂಟಾಲ್ ಭತ್ತ ಬಂದಿದೆ. ಈ ಬಾರಿ ಅರ್ಧ ಎಕರೆಗೆ ನಾಟಿ ಮಾಡಿಸಿದ್ದಾರೆ. ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಹುದೂರು ಗ್ರಾಮದ ಬಿ.ಪಿ. ರವಿಶಂಕರ್ ಕಾಲಾ ನಮಕ್, ಕೃಷ್ಣ ವೇಣಿ, ಮತ್ತು ಬರ್ಮಾ ಬ್ಲಾಕ್ ಸೇರಿದಂತೆ ಕಪ್ಪು ತಳಿಗಳ ೫೭ಕ್ಕೂ ಹೆಚ್ಚಿನ ದೇಸಿ ಭತ್ತವನ್ನು ಪ್ರತಿ ವರ್ಷ ಬೆಳೆಯು ತ್ತಿದ್ದಾರೆ. ಮದ್ದೂರಿನ ಗೂಳೂರು ದೊಡ್ಡಿಯ ಸಿ.ಪಿ.ಕೃಷ್ಣ ಬರ್ಮಾ ಬ್ಲಾಕ್ ಭತ್ತದ ಬೆಳೆದು, ಕಪ್ಪಕ್ಕಿ ಯನ್ನು ಕೆಜಿಗೆ ೧೫೦ ರಿಂದ ೨೦೦ ರೂ.ಗೆ ತಾವೇ ಮಾರಾಟ ಮಾಡುತ್ತಾರೆ. ಗ್ರಾಹಕರಿಗೆ ಆರೋಗ್ಯ ಕಾಳಜಿ ಮುಖ್ಯ ವಾಗುತ್ತಿರುವ ಇಂದಿನ ದಿನಗಳಲ್ಲಿ ಕಪ್ಪಕ್ಕಿಗೆ ಮಾರುಕಟ್ಟೆ ಸೃಷ್ಟಿಯಾಗಿದೆ. ಸಣ್ಣ ಪ್ರಮಾಣದಲ್ಲಿ ಕಪ್ಪಕ್ಕಿ ತಳಿಗಳ ಕೃಷಿ ಮಾಡಿ ಲಾಭಗಳಿಸ ಬಹುದು. ಕಪ್ಪು ಬಂಗಾರವನ್ನು ನಮ್ಮ ಹೊಲದಲ್ಲಿ ಬಿತ್ತೋಣ.
ಮೈಸೂರಿನಲ್ಲಿ ಆ.೯ ಮತ್ತು ೧೦ರಂದು ದೇಸಿ ಅಕ್ಕಿ ಮೇಳ: ನಮ್ಮ ಹಿರಿಯರ ಕಾಲದಲ್ಲಿ ಅನ್ನಕ್ಕೊಂದು, ಅವಲಕ್ಕಿಗೊಂದು, ಕಜ್ಜಾಯಕ್ಕೆ ಇನ್ನೊಂದು, ಬಿರಿಯಾನಿ ಮಾಡಲು ಮಗದೊಂದು, ಪಾಯಸಕ್ಕೊಂದು ಹೀಗೆ ದಿನನಿತ್ಯದ ಆಹಾರ ಪದ್ಧತಿಗೆ ಅನು ಗುಣವಾಗಿ ಬಗೆಬಗೆಯ ಅಕ್ಕಿ ಬಳಕೆಯಾಗುತ್ತಿತ್ತು. ಪಾಲಿಷ್ ಅಕ್ಕಿ ಬಂದ ಮೇಲೆ ಅಕ್ಕಿಯ ವೈವಿಧ್ಯವೇ ನಾಶವಾಗಿದೆ. ಗ್ರಾಹಕರು ಒಂದೆರೆಡು ತಳಿಗಳ ದಾಸರಾಗಿದ್ದಾರೆ.
ದೇಸಿ ಅಕ್ಕಿ ತಳಿಗಳ ವೈವಿಧ್ಯದ ಬಗ್ಗೆ ಗ್ರಾಹಕರು ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಹಜ ಸಮೃದ್ಧ ಮತ್ತು ಭತ್ತ ಉಳಿಸಿ ಆಂದೋಲನ ಆ. ೯ ಮತ್ತು ೧೦ರಂದು ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ‘ದೇಸಿ ಅಕ್ಕಿ ಮೇಳ’ವನ್ನು ಆಯೋಜಿಸಿದೆ. ‘ದೇಸಿ ಅಕ್ಕಿ ಮೇಳದಲ್ಲಿ’ ಕೆಂಪು, ಕಪ್ಪು ಅಕ್ಕಿ ಕೆನೆ ಬಣ್ಣದ, ಪರಿಮಳದ ಬಗೆಬಗೆಯ ಅಕ್ಕಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರುತ್ತಿವೆ. ಮುಂಗಾರಿಗೆ ಬಿತ್ತಲು ಗುಣಮಟ್ಟದ ಬಿತ್ತನೆ ಭತ್ತ ಸಿಗಲಿದೆ. ಸಾವಯವ ಪದಾರ್ಥಗಳು, ಹಣ್ಣು ಹಂಪಲು, ನಾಟಿ ಬೀಜ ಮತ್ತು ಮೌಲ್ಯವರ್ಧಿತ ಪದಾರ್ಥಗಳೂಸಿಗಲಿವೆ. ನಿಮ್ಮ ಮತ್ತು ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಸಿ ಅಕ್ಕಿ ಮೇಳಕ್ಕೆ ಬನ್ನಿ.
ಸಂಪರ್ಕ: ಮಂಜು – ಮೊ. ೭೦೯೦೦ ೦೯೯೪೪
-ಜಿ.ಕೃಷ್ಣ ಪ್ರಸಾದ್
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…