ಜಿ.ಕೃಷ್ಣ ಪ್ರಸಾದ್
‘ಬಿತ್ತಿದಂತೆ ಬೀಜ; ನೂಲಿನಂತೆ ಸೀರೆ’ ಎಂಬುದು ನಾಣ್ಣುಡಿ. ಬಿತ್ತನೆಗೆ ಬಳಸುವ ಬೀಜ ಶುದ್ಧವಾಗಿದ್ದರೆ, ರೋಗ ಮುಕ್ತವಾಗಿದ್ದರೆ ಹುಟ್ಟುವ ಪೈರು ಕೂಡ ಆರೋಗ್ಯ ಪೂರ್ಣವಾಗಿರುತ್ತದೆ. ಸುಗ್ಗಿಯ ನಂತರ ಬಿತ್ತನೆಯವರೆಗೆ ಬೀಜಗಳನ್ನು ಜೋಪಾನವಾಗಿ ಸಂಗ್ರಹಿಸಿಡುವುದು ಬಹಳ ಮುಖ್ಯ.
ಬೀಜಗಳನ್ನು ಬಚ್ಚಿಡುವುದು ಒಂದು ಕಲೆ. ಅಜ್ಜಿಯಂದಿರಿಗೆ ಆ ಕಲೆ ಸಿದ್ಧಿಸಿತ್ತು. ಬೀಜಗಳನ್ನು ಒಣಗಿಸಿ ಬೇವು, ಲಕ್ಕಿ ಸೊಪ್ಪಿನ ಎಲೆಗಳನ್ನು ಸೇರಿಸಿ, ಮಣ್ಣಿನ ಮಡಕೆಗಳಲ್ಲಿ ಜೋಪಾನ ಮಾಡುತ್ತಿದ್ದರು. ಕಾಳುಗಳನ್ನು ಮೂಟೆ ಕಟ್ಟಿಸುತ್ತಿದ್ದರು. ರಾಸಾಯನಿಕಗಳ ಆಗಮನದಿಂದ, ಸಾಂಪ್ರದಾಯಿಕ ಬೀಜ ಸಂಗ್ರಹಣಾ ಪದ್ಧತಿಗಳು ಮರೆಯಾಗಿ ಕೆಮಿಕಲ್ಗುಳಿಗೆ ಮತ್ತು ಬೋರಿಕ್ ಪೌಡರ್‌ಗೆ ರೈತರು ಮೊರೆ ಹೋಗಿದ್ದಾರೆ. ಇದರಿಂದ ಆರೋಗ್ಯವೂ ಹಾಳು; ಬೀಜದ ಜೈವಿಕ ಗುಣವೂ ನಾಶವಾಗುತ್ತದೆ.
ಸಾಂಪ್ರದಾಯಿಕವಾಗಿ ಬೀಜಗಳನ್ನು ಬಚ್ಚಿಡುವ ಹಲವಾರು ಸುಲಭ ವಿಧಾನಗಳಿವೆ. ಬಿತ್ತನೆ ಬೀಜದ ಜೊತೆ ಲಕ್ಕಿ ಮತ್ತು ಬೇವಿನ ಎಲೆ ಅಥವಾ ಬಜೆ ಬೆರೆಸಿಟ್ಟರೆ ಹುಳು ಬೀಳುವುದಿಲ್ಲ. ಕಾಳುಗಳನ್ನು ಸಂಗ್ರಹಿಸಲು, ಮಡಕೆಯ ತಳದಲ್ಲಿ ಒಂದು ಪದರ ರಾಗಿ ಸುರಿದು, ಅದರ ಮೇಲೆ ಅವರೆ, ತೊಗರಿ, ಉದ್ದು, ಹೆಸರು ಮೊದಲಾದ ಕಾಳುಗಳನ್ನು ಸುರಿದು, ಮೇಲೆ ಮತ್ತೆ ರಾಗಿ ಹಾಕಿ ಮುಚ್ಚಳವನ್ನು ಮುಚ್ಚಿ ಸಗಣಿಯಿಂದ ಪ್ಯಾಕ್ ಮಾಡಿದರೆ ಹುಳು ಬೀಳದು. ರಾಗಿಯ ಬದಲು, ನುಣುಪಾದ ಮರಳನ್ನು ಕೂಡ ಬಳಸಬಹುದು. ಬೀಜ ಬೇಕಾದಾಗ ಜರಡಿ ಹಿಡಿದು, ರಾಗಿ ಮರಳನ್ನು ಪ್ರತ್ಯೇಕಿಸಿದರೆ ಆಯಿತು.
ಕಾಳುಗಳನ್ನು ಹುಳು ಬೀಳದಂತೆ ಸಂರಕ್ಷಿಸುವ ಆಸಕ್ತಿದಾಯಕ ವಿಧಾನವೊಂದು ಹೀಗಿದೆ: ಒಂದು ಬಟ್ಟೆ ಬ್ಯಾಗ್ ಅಥವಾ ಗೋಣಿ ಚೀಲ ತೆಗೆದುಕೊಂಡು, ಬಿತ್ತನೆಗೆ ಇಟ್ಟಿರುವ ಅವರೆ, ತೊಗರಿ ಬೀಜಗಳನ್ನು ಚೀಲದ ಅರ್ಧ ಭಾಗ ತುಂಬಿಸಿ. ಅದರ ತುದಿಗೆ ದಾರ ಕಟ್ಟಿ, ಮನೆಯಹೊಸ್ತಿಲ ಬಳಿ ಹಾಕಿ. ಓಡಾಡುವಾಗ ಚೀಲವನ್ನು ತುಳಿಯುತ್ತಿರಬೇಕು. ಇದರಿಂದ ಹುಳು ಬೀಳದು. ಇದರ ಹಿಂದಿನ ವೈಜ್ಞಾನಿಕ ಕಾರಣ ಕುತೂಹಲಕರವಾಗಿದೆ. ಕಾಳು ಕೊರೆಯುವ ಹುಳು, ಕಾಳನ್ನು ಒಂದೇ ಕೋನದಿಂದ ಕೊರೆಯುತ್ತಿರುತ್ತದೆ. ಚೀಲದ ಮೇಲೆ ಕಾಲಿಟ್ಟು, ಕಾಳು ಅಲುಗಾಡಿದಾಗ, ಸಂಗ್ರಹಣಾ ಕೀಟ ಸರಿದು, ಮತ್ತೆ ಕಾಳು ಕೊರೆಯುವ ಕೋನಕ್ಕೆ ಬರಲು ಕನಿಷ್ಠ ಮೂರು ಗಂಟೆ ಬೇಕು. ಅಷ್ಟರಲ್ಲಿ ಇನ್ನೊಬ್ಬರು ಬೀಜದ ಚೀಲ ತುಳಿದಿರುತ್ತಾರೆ. ಹುಳುಗಳ ಕಾಟವಿಲ್ಲದೆ ಬೀಜ ಸುರಕ್ಷಿತವಾಗಿರುತ್ತದೆ!
ಸೋರೆ, ಹೀರೆ, ಕುಂಬಳ, ತುಪ್ಪದ ಹೀರೆಯ ಒಣಗಿದ ಇಡೀ ಕಾಯಿಯನ್ನು ಎತ್ತಿಟ್ಟು, ಬೇಕಾದಾಗ ಒಡೆದು ಬೀಜ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಬೀಜಗಳನ್ನು ಸುಡು ಬಿಸಿಲಿಗೆ ಒಣಗಲು ಹಾಕಬಾರದು. ಮುಂಜಾನೆ ಅಥವಾ ಸಂಜೆಯ ಎಳೆ ಬಿಸಿಲು ಅಥವಾ ನೆರಳಲ್ಲಿ ಬೀಜವನ್ನು ಒಣಗಿಸಬೇಕು. ಸಣ್ಣ ಪ್ರಮಾಣದಲ್ಲಿ ಮನೆ ಬಳಕೆಗೆ ತರಕಾರಿ ಬೀಜಗಳನ್ನು ಸಂಗ್ರಹಿಸಿಡಲು ಮನೆಯಲ್ಲಿ ಬಳಸುವ ರೆಫ್ರಿಜರೇಟರ್‌ನ್ನು ಬಳಸಬಹುದು. ಟೊಮೊಟೋ, ಬದನೆ, ಬೀನ್ಸ್, ಬೆಂಡೆ ಮೊದಲಾದ ತರಕಾರಿ ಬೀಜಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ಪ್ಲಾಸ್ಟಿಕ್ ಡಬ್ಬಿಯೊಂದರಲ್ಲಿ ಇಟ್ಟು ಭದ್ರಪಡಿಸಿ. ಅದನ್ನು ರೆಫ್ರಿಜರೇಟರಿನ ಬಾಗಿಲ ಬಳಿಯ ಬಾಕ್ಸ್‌ನಲ್ಲಿ ಇಡಿ. ಎರಡು-ಮೂರು ವರ್ಷಗಳು ಬಿಟ್ಟರೂ ಬೀಜದ ಮೊಳಕೆ ಸಾಮರ್ಥ್ಯ ಕಡಿಮೆಯಾಗದು.
ಅವರೆ, ಹೆಸರು, ತೊಗರಿ ಮೊದಲಾದ ಕಾಳುಗಳನ್ನು ಬಚ್ಚಿಡಲು ಹರ್ಮೆಟಿಕ್ ಚೀಲಗಳನ್ನು ಬಳಸಬಹುದು. ಈ ಚೀಲದಲ್ಲಿ ಕಾಳುಗಳನ್ನು ಸುರಿದು, ಗಾಳಿಯಾಡದಂತೆ ಕಟ್ಟಿಟ್ಟರೆ ಹುಳುಗಳು ಬೀಳುವುದಿಲ್ಲ. ಹಸಿರು ಬಣ್ಣದ ಈ ಚೀಲಗಳು ಕೈ ಗೆಟುಕುವ ದರದಲ್ಲಿ ಸಿಗುತ್ತವೆ.
ದೊಡ್ಡ ಪ್ರಮಾಣದಲ್ಲಿ ಕಾಳುಗಳನ್ನು ಬಚ್ಚಿಡಲು ಕಕೂನ್ ಬ್ಯಾಗ್‌ಗಳನ್ನು ಬಳಸುವುದು ಹೊಸ ತಲೆಮಾರಿನ ಪದ್ಧತಿ. ದಪ್ಪನಾದ ಎರಡು ಪದರಗಳ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಾಳುಗಳ ಮೂಟೆಗಳನ್ನು ಇಟ್ಟು, ಒಳಗಿನ ಗಾಳಿ ತೆಗೆದು ಕಾರ್ಬನ್ ಡೈ ಆಕ್ಸೆ ಡನ್ನು ತುಂಬುತ್ತಾರೆ. ಇದರಿಂದ ಕಾಳು ಕೊರಕ ಕೀಟ ಮತ್ತು ಮೊಟ್ಟೆಗಳು ನಾಶವಾಗುತ್ತವೆ. ರಾಸಾಯನಿಕಗಳನ್ನು ಬಳಸದೆ ಬೀಜ ಎತ್ತಿಡುವ ಸುಲಭ ವಿಧಾನವಿದು.
ಹಳ್ಳಿ ಮಟ್ಟದಲ್ಲಿ ಸಮುದಾಯ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡರೆ ರೈತ-ರೈತರ ನಡುವೆ ಬೀಜ ವಿನಿಮಯ ಮಾಡಿಕೊಳ್ಳಬಹುದು. ಬಿತ್ತನೆಗೆ ಬೇಕಾದ ಬೀಜಗಳನ್ನು ಉಚಿತವಾಗಿ ಪಡೆದುಕೊಳ್ಳುವ ರೈತರು, ಕೊಯ್ಲಿನ ನಂತರ ತಾವು ಪಡೆದ ಬೀಜದ ಎರಡರಷ್ಟನ್ನು ಬೀಜಬ್ಯಾಂಕಿಗೆ ಹಿಂತಿರುಗಿಸಬೇಕು. ಹೆಗ್ಗಡದೇವನಕೋಟೆಯ ನೂರಲಕುಪ್ಪೆ ಗ್ರಾಮದಲ್ಲಿ ಸಮುದಾಯ ಬೀಜ ಬ್ಯಾಂಕ್ ಇದೆ.
ಬಿತ್ತನೆ ಬೀಜ ಸಮುದಾಯದ ಆಸ್ತಿ; ಒಮ್ಮೆ ಕಳೆದರೆ ಸಿಗಲಾರದ ಮುತ್ತು. ಅದನ್ನು ಜೋಪಾನ ಮಾಡಿ. ಬಿತ್ತಿ, ಬೆಳೆಸಿ
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…