ಎನ್. ಕೇಶವಮೂರ್ತಿ
ನಾನು ಖಾಸಗಿ ಹೈಬ್ರಿಡ್ ಬಿತ್ತನೆ ಬೀಜೋತ್ಪಾದನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ದಪ್ಪ ಮೆಣಸಿನಕಾಯಿ ಬೆಳೆಸುವಾಗ ನಲವತ್ತೈದು ದಿನಗಳ ಎಳೇ ಸಸಿಯ ಕುಡಿ ಚಿವುಟಿ ನಾಟಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಗಿಡ ಬೆಳೆದು ಮೊದಲು ಬಿಟ್ಟ ಎರಡು ಸಣ್ಣ ಹೀಚುಕಾಯನ್ನೂ ಚಿವುಟಿ ಹಾಕುತ್ತಿದ್ದರು. ಆಗೆಲ್ಲ ನನ್ನಲ್ಲಿ ಮೂಡಿದ್ದ ಪ್ರಶ್ನೆ ಹೀಚು ಕಾಯಿಯನ್ನು ಚಿವುಟದೆ ಬಿಟ್ಟಿದ್ದರೆ ದಪ್ಪ ಕಾಯಿಯಾಗುತ್ತಿತ್ತಲ್ಲ? ಎಂಬುದು. ಆಗ ಹಿರಿಯ ವಿಜ್ಞಾನಿಯೊಬ್ಬರು ನನಗೆ ಕುಡಿ ಚಿವುಟಿ ಗಿಡ ಬೆಳೆಸುವುದರ ಮಹತ್ವವನ್ನು ವಿವರಿಸಿದರು.
ಯಾವುದೇ ಗಿಡ ಮೊದಲು ತನ್ನ ಸಸ್ಯ ಬೆಳವಣಿಗೆ ಪೂರ್ಣವಾಗಿ ಮುಗಿಸಬೇಕು ಅಂದರೆ ಅದರ ಕಾಂಡ ದಪ್ಪವಾಗಬೇಕು, ರೆಂಬೆ ಕೊಂಬೆಗಳು ವಿಸ್ತಾರವಾಗಿಯೂ ಎತ್ತರವಾಗಿಯೂ ಹರಡಿಕೊಳ್ಳಬೇಕು. ಗಿಡಕ್ಕೆ ಫಸಲಿನ ಭಾರ ಹೊರುವ ತಾಕತ್ತು ಬರಬೇಕು. ಅಲ್ಲಿಯವರೆಗೆ ಬರಿಯ ಗಿಡ ಬೆಳೆಸಬೇಕೇ ಹೊರತು, ಹೂವು ಬಂದು ಹೀಚಾಗಲು ಬಿಡಬಾರದು. ಒಂದು ಸಾರಿ ಹೂವಿನ ಬೆಳವಣಿಗೆಗೆ ಅವಕಾಶ ನೀಡಿದರೆ, ಮುಂದೆ ಆ ಸಸ್ಯ ತನ್ನ ಸಂತಾನ ಅಭಿವೃದ್ಧಿ ಮಾಡುವ ಸಲುವಾಗಿ ಹೂ ಅರಳಿಸಿ, ಕಾಯಿಕಟ್ಟುವ ಕಾಯಕ ಆರಂಭಿಸುತ್ತದೆ. ಆಗ ಮತ್ತೆ ಆ ಗಿಡದ ಬೆಳವಣಿಗೆ ಆಗುವುದಿಲ್ಲ ಎಂದರು. ಇದನ್ನು ನೀವೂ ಗಮನಿಸಿರಬಹುದು. ಎಷ್ಟೋ ಬಾರಿ ಸಣ್ಣ ಗಿಡದಲ್ಲೇ ನೂರಾರು ಕಾಯಿ ತುಂಬಿ, ಗಿಡ ಬಾಗಿ, ರೆಂಬೆ ಬಿದ್ದು ಹೋಗಿರುತ್ತೆ. ಆದರೆ ಗಿಡ ಸದೃಢವಾಗಿ ಬೆಳೆದಿದ್ದೇ ಆದಲ್ಲಿ ಈ ಸಮಸ್ಯೆ ಬರುವುದಿಲ್ಲ. ಹಾಗಾಗಿ ಗಿಡದ ಕುಡಿ ಚಿವುಟುವುದು ಒಂದು ಉತ್ತಮ ಬೇಸಾಯ ವಿಧಾನ.
ತೊಗರಿ ಕಣಜ ಎಂದೇ ಹೆಸರಾಗಿರುವ ಕಲಬುರಗಿಗೆ ಹೋಗಿದ್ದಾಗ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೊಗರಿ ಬೆಳೆಗಾರರೊಬ್ಬರು ಅಭಿವೃದ್ಧಿಪಡಿಸಿರುವ ತೊಗರಿ ಕುಡಿ ಕತ್ತರಿಸುವ ಒಂದು ಸರಳ ಸಾಧನ ತೋರಿಸಿದರು. ತೊಗರಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕಾದರೆ ಅದರ ಬೆಳೆಯುವ ಕುಡಿಗಳನ್ನು ಕತ್ತರಿಸಬೇಕು. ಒಂದೆರಡು ಗಿಡ ಆದ್ರೆ ಕೈಲಿ ಚಿವುಟಬಹುದು. ಅದೇ ನೂರಾರು ಎಕರೆ ಆದರೆ ಏನು ಮಾಡುವುದು? ಆದರೆ ಈ ರೈತರು ಒಂದು ಉಪಾಯ ಕಂಡುಕೊಂಡಿದ್ದರು. ಈ ರೈತ ಒಂದು ಕೋಲಿನ ಮುಂಭಾಗಕ್ಕೆ ತಿರುಗುವ ದುಂಡನೆಯ ಕತ್ತರಿ ಜೋಡಿಸಿ, ಅದಕ್ಕೆ ಬ್ಯಾಟರಿ ಅಳವಡಿಸಿ ಗರ್ರನೆ ತಿರುಗುವಂತೆ ಮಾಡಿದ್ದರು. ಕೈಲಿ ಈ ಕೋಲು ಹಿಡಿದು, ಬಹಳ ಸುಲಭವಾಗಿ ಎಕರೆಗಟ್ಟಲೆ ತೊಗರಿ ಹೊಲದ ಕುಡಿ ಕತ್ತರಿಸಬಹುದಿತ್ತು. ಸರಿಯಾದ ಸಮಯದಲ್ಲಿ ಕುಡಿ ಕತ್ತರಿಸಿದ ತೋಗರಿ ಗಿಡಗಳಲ್ಲಿ ಫಸಲು ಜೊಂಪೆಜೊಂಪೆಯಾಗಿ ತೂಗುತ್ತಿತ್ತು.
ನುಗ್ಗೇನೂ ಮುರಿದು ಬೆಳೆಸು ಅಂತಾ ಹಳ್ಳಿ ನಾಣ್ಣುಡಿ ಇದೆ. ಸುಮ್ಮನೆ ಹಾಗೇ ಬೆಳೆಯಲು ಬಿಟ್ಟರೆ ನುಗ್ಗೆ ಫಸಲು ಬಿಡುವುದಿಲ್ಲ. ಅದನ್ನು ಕತ್ತರಿಸಬೇಕು. ಕರಿಬೇವು, ಮಾವು, ಸೀಬೆ, ದಾಳಿಂಬೆ ಹೀಗೆ ಅನೇಕ ತೋಟಗಾರಿಕಾ ಬೆಳೆಗಳನ್ನೂ ಕತ್ತರಿಸಿ ಬೆಳೆಸಬೇಕು. ಕುಡಿ ಚಿವುಟಿದಷ್ಟೂ ಗಿಡ ಸೊಂಪಾಗಿ ಬೆಳೆಯುತ್ತದೆ. ಗಿಡ ಬೆಳೆದಷ್ಟೂ, ಹೂವಿನ ಬೆಳವಣಿಗೆ ಜಾಸ್ತಿ. ಹೆಚ್ಚಾಗಿ ಹೂ ಅರಳಿದರೆ, ಮೊಗ್ಗು, ಹೀಚೂ ಜಾಸ್ತಿ, ಇದರಿಂದ ಇಳುವರಿಯೂ ಹೆಚ್ಚಾಗಲಿದೆ. ಮಲೆನಾಡಿನ ಜನರ ಒಂದು ಅಭ್ಯಾಸ ಗಮನಿಸಿ. ಅವರು ಬಗೆಬಗೆಯ ಸಸ್ಯಗಳ ಕುಡಿ ಬಳಸಿ ಪಲ್ಯ, ಚಟ್ನಿ ಮಾಡಿ ದಿನನಿತ್ಯದ ಆಹಾರವಾಗಿ ಬಳಸುತ್ತಾರೆ. ಗಿಡದ ಕುಡಿಗಳಲ್ಲಿ ಬೆಳವಣಿಗೆ ಚೋದಕಗಳ ಪ್ರಮಾಣ ಜಾಸ್ತಿ. ಅದು ಮಾನವನ ಆರೋಗ್ಯಕ್ಕೂ ಸಹಕಾರಿ. ಹಾಗೇ ಗಿಡಗಳ ಬೆಳವಣಿಗೆಗೂ ಸಹಕಾರಿ.
ಕುಡಿ ಚಿವುಟುವುದು ಒಳ್ಳೆಯದು ಅಂತಾ, ಗಿಡ ಪೂರ್ತಿ ಚಿವುಟಬಾರದು. ಇಳುವರಿ ಇರಲಿ ಆಗ ಗಿಡವೇ ಇರುವುದಿಲ್ಲ. ತಜ್ಞರ ಸಲಹೆ ಪಡೆದು ಯಾವ ಮಟ್ಟದಲ್ಲಿ ಕುಡಿ ಚಿವುಟುವ ಕೆಲಸ ಮಾಡಬೇಕು. keshavamurty.n@gmail.com
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…