snake gourd
ಜಿ.ಕೃಷ್ಣ ಪ್ರಸಾದ್
ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಮನೆಯ ಹಿತ್ತಲಿನ ಚಪ್ಪರದಲ್ಲಿ ಹಬ್ಬಿದ ಪಡುವಲ ಕಾಯಿ. ಎಳೆಯ ಕಾಯಿಗಳಿಗೆ ಬಟ್ಟೆಯ
ದಾರ ಕಟ್ಟಿ, ಅದರ ತುದಿಗೊಂದು ಸಣ್ಣ ಕಲ್ಲು ಕಟ್ಟುವ ಖುಷಿ. ಕಲ್ಲಿನ ಭಾರಕ್ಕೆ ಪಡುವಲ ಸಪೂರ ವಾಗಿ ಹಾವಿನಂತೆ ಇಳಿ ಬೀಳುತ್ತಿತ್ತು. ಮುಟ್ಟಿದರೆ ಕೈ ಎಲ್ಲ ‘ಘಂ’ ಎನ್ನುವ ಘಮಲು.
ಈಗ ಚಪ್ಪರವೂ ಇಲ್ಲ; ನಾಟಿ ಪಡುವಲ ಕಾಯಿಯ ಬೀಜವೂ ಇಲ್ಲ. ಈಗ ಏನಿದ್ದರೂ ಮಾರುಕಟ್ಟೆಯಲ್ಲಿ ಸಿಗುವ ತುಂಡು ಪಡುವಲವೇ ಗತಿ. ಇದಕ್ಕೆ ಘಮಲೂ ಇಲ್ಲ; ರುಚಿಯೂ ಇಲ್ಲ. ಮರಳಿ ಬಂತು ನಾಟಿ ಪಡುವಲ ಮೈಸೂರು ಮೂಲದ ದೇಸಿ ಸೀಡ್ಸ್ರೈ ತ ಉತ್ಪಾದಕರ ಕಂಪೆನಿ ಕಣ್ಮರೆಯಾಗುತ್ತಿರುವ ನಾಟಿ ತಳಿಗಳನ್ನು ಮತ್ತೆ ರೈತರ ಹೊಲಗಳಿಗೆ ತರುವ ಪ್ರಯತ್ನ ಮಾಡುತ್ತಿದೆ. ಮೈಸೂರಿನ ಆಸುಪಾಸಿನ ಜಿಲ್ಲೆಗಳ ಸಾವಯವ ಬೀಜೋತ್ಪಾದಕರು ಉತ್ಪಾದಿಸಿದ ಬೀಜಗಳು ‘ಸಹಜ ಸೀಡ್ಸ್’ ಹೆಸರಲ್ಲಿ ಮಾರುಕಟ್ಟೆಗೆ ಹೋಗುತ್ತವೆ.
ನಾಟಿ ಪಡುವಲ ಬೀಜ ಬೇಕು ಎಂಬುದು ರೈತರ ಒತ್ತಾಯವಾಗಿತ್ತು. ಸಹಜ ಸೀಡ್ಸ್ ದೇಶದ ವಿವಿಧ ಭಾಗಗಳ ಪಡುವಲ ತಳಿಗಳನ್ನು ಸಂಗ್ರಹಿಸಿ ಬೆಳೆಸಿ ನೋಡಿತು. ಮಧುಗಿರಿ ಭಾಗದಿಂದ ಬಂದ ‘ಉದ್ದ ಪಡುವಲ’ ರುಚಿ ಮತ್ತು ಇಳುವರಿ ದೃಷ್ಟಿಯಿಂದ ರೈತರಿಗೆ ಇಷ ವಾಯಿತು. ಹಸಿರು ಕಾಯಿಯ ಮೇಲೆ ಬಿಳಿ ಪಟ್ಟೆಗಳಿರುವ ಉದ್ದನಾಗಿ ಬೆಳೆಯುವ ಈ ತಳಿ ನೋಡಲು ಹಾವಿನಂತೆ ಇರುವುದರಿಂದ ‘ಹಾವು ಪಡುವಲ’ ಎಂದೂ ಕರೆಯುತ್ತಾರೆ.
ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯದ ಲಕ್ಷ್ಮೀ ಮತ್ತು ಕೃಷ್ಣ ದಂಪತಿ ಕಳೆದ ೨ ವರ್ಷಗಳಿಂದ ‘ಉದ ಪಡುವಲ’ ಬೀಜೋತ್ಪಾದನೆ ಮಾಡುತ್ತಿದ್ದಾರೆ. ಗುಣ ಮಟ್ಟದ ಪಡುವಲ ಬೀಜಗಳನ್ನು ಉತ್ಪಾದಿಸು ವುದರಲ್ಲಿ ಇವರು ಅನುಭವಿಗಳಾಗಿದ್ದಾರೆ.
ಬಿತ್ತನೆ ಹೇಗೆ?: ಯುಗಾದಿಯ ನಂತರ ಬೀಜ ಬಿತ್ತಲು ಸಕಾಲ. ಮಣ್ಣನ್ನು ಹದಗೊಳಿಸಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರ ಕೊಟ್ಟು, ಸಾಲಿನಲ್ಲಿ ೧.೫ ಅಡಿ ಆಳ ಮತ್ತು ೧ ಅಡಿ ಅಗಲದ ಗುಂಡಿ ತೆಗೆಯಬೇಕು. ಗುಂಡಿಯಿಂದ ಗುಂಡಿಗೆ ೬ ಅಡಿ ಅಂತರವಿರಲಿ. ಗುಂಡಿಗೆ ಸಾಕಷ್ಟು ಕುರಿ ಗೊಬ್ಬರ ಮತ್ತು ಮಣ್ಣು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಪ್ರತಿ ಗುಂಡಿಗೆ
ನಾಲ್ಕು ಬೀಜ ಬಿತ್ತಬೇಕು. ಚೆನ್ನಾಗಿ ನೆನೆಯುವಂತೆ ನೀರು ಹಾಕಿ. ಗಿಡ ದೊಡ್ಡದಾಗುವವರೆಗೆ ಬಿಂದಿಗೆ ನೀರೇ ಸೂಕ್ತ ಎಂಬುದು ಕೃಷ್ಣರ ಅನುಭವದ ಮಾತು. ವಾರಕ್ಕೊಮ್ಮೆ ನೀರು ಉಣಿಸಿದರೆ ಸಾಕು. ಗಿಡ ಬಂದ ಒಂದು ತಿಂಗಳ ನಂತರ ಚಪ್ಪರ ಹಾಕಿ ಬಳ್ಳಿ ಹಬ್ಬಿಸಬೇಕು. ೬೦ ದಿನಗಳ ನಂತರ ಕಾಯಿ ಬಿಡಲು ಶುರುವಾಗುತ್ತದೆ. ಮುಂದಿನ ನಾಲ್ಕು ತಿಂಗಳವರೆಗೂ ಕೊಯ್ಲಿಗೆ ಸಿಗುತ್ತದೆ.
ನಾಲ್ಕರಿಂದ ಐದು ಅಡಿ ಉದ್ದವಿರುವ ಹಾವು ಪಡುವಲದ ಒಂದು ಕಾಯಿ ಎರಡರಿಂದ ಮೂರು ಕೆಜಿ ತೂಗುತ್ತದೆ. ಒಂದು ಬಳ್ಳಿ ನಾಲ್ಕು ತಿಂಗಳಲ್ಲಿ ೪೦ ರಿಂದ ೫೦ ಕಾಯಿ ನೀಡುತ್ತದೆ. ವಾರಕ್ಕೊಮ್ಮೆ ಕಾಯಿಯನ್ನು ಕಟಾವು ಮಾಡಬೇಕು. ಬಲಿಯಲು ಬಿಡಬಾರದು. ಇದರ ಘಮಲು ಮತ್ತು ಗಾತ್ರಕ್ಕೆ ಮನಸೋಲುವ ಗ್ರಾಹಕರು ಕೇಳಿದ ಬೆಲೆ ಕೊಟ್ಟು ಖರೀದಿಸುತ್ತಾರೆ. ಕಾಯಿಯ ಗಾತ್ರ ಉದ್ದವಿರುವುದರಿಂದ, ಮುರಿಯದಂತೆ ಎಚ್ಚರಿಕೆ ವಹಿಸಿ ಮಾರುಕಟ್ಟೆಗೆ ಸಾಗಿಸಬೇಕು.
ಬೀಜೋತ್ಪಾದನೆ: ಸಹಜ ಸೀಡ್ಸ್ಗಾಗಿ ಹಾವು ಪಡುವಲದ ಬೀಜೋತ್ಪಾದನೆ ಮಾಡುವುದರಿಂದ, ಕೃಷ್ಣ ಕಾಯಿಗಳನ್ನು ಬಲಿಯಲು ಬಿಟ್ಟು, ಅವು ಹಣ್ಣಾಗುವ ಹಂತದಲ್ಲಿ ಕಟಾವು ಮಾಡಿ ಬೀಜ ಪ್ರತ್ಯೇಕಿಸುತ್ತಾರೆ. ಕಳೆದ ವರ್ಷ ೬೦ ಗುಳಿಯಿಂದ ೧೩ ಕೆಜಿ ಬೀಜ ಸಿಕ್ಕಿತ್ತು. ಪ್ರತಿ ಕೆಜಿಗೆ ಎರಡು ಸಾವಿರ ರೂ. ದರವಿದೆ. ಈ ವರ್ಷ ೧೫೦ ಗುಳಿಯಲ್ಲಿ ಹಾವು ಪಡುವಲ ನೆಟ್ಟಿದ್ದಾರೆ. ೩೫ ಕೆಜಿ ಬೀಜ ಸಿಗುವ ನಿರೀಕ್ಷೆಯಿದೆ. ಸಂತೆಯಲ್ಲಿ ಚಿಲ್ಲರೆಯಾಗಿ ಮಾರಿದರೆ ಬೀಜಕ್ಕೆ ೩- ೫ ರೂ. ಸಿಗುತ್ತದೆ. ಪಡುವಲಕ್ಕೆ ರಸ ಹೀರುವ ಕೀಟದ ಕಾಟವೇ ಪ್ರಮುಖವಾದದ್ದು. ಲಿಂಗಾಕರ್ಷಕ ಬಲೆ (ಫೆರಮೋನ್ ಟ್ರ್ಯಾಪ್) ಕಟ್ಟುವ ಮೂಲಕ, ಕಹಿ ಗುಣದ ಸೊಪ್ಪಿನ ಕಷಾಯ ಅಥವಾ ಗಂಜಲ ಸಿಂಪಡಿಸುವುದರಿಂದ ಇದರ ಕಾಟ ತಗ್ಗಿಸಬಹುದು. ಕಡಿಮೆ ಜಾಗ ಮತ್ತು ಸಮಯದಲ್ಲಿ ಅತ್ಯಂತ ಹೆಚ್ಚು ಲಾಭ ತಂದುಕೊಡುವ ಹಾವು ಪಡುವಲವನ್ನು ಬೆಳೆಸಲು ಆಸಕ್ತರಾದವರು ಸಹಜ ಸೀಡ್ಸ್ ಮೊ.ಸಂ. ೭೦೯೦೦ ೦೯೯೧೧ ಸಂಪರ್ಕಿಸಿ.
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…