• ಜಿ.ಕೃಷ್ಣ ಪ್ರಸಾದ್

ಇತ್ತೀಚಿನ ವರ್ಷಗಳಲ್ಲಿ ಒಂದು ವರ್ಷ ಬರಗಾಲವಿದ್ದರೆ ಮತ್ತೊಂದು ವರ್ಷ ಬಿಡದೇ ಸುರಿವ ಮಳೆ, ಈ ನಡುವೆ ಕಾಡು ಪ್ರಾಣಿ, ಕೂಲಿಕಾರರ ಸಮಸ್ಯೆಯಿಂದ ಕೃಷಿ ಮಾಡಲಾಗದ ಪರಿಸ್ಥಿತಿ.

ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಅರಣ್ಯ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಬಿದಿರು ರೈತರ ಆಶಾಕಿರಣವಾಗಿದೆ. ಒಮ್ಮೆ ನೆಟ್ಟು ಕಾಳಜಿ ಮಾಡಿದರೆ, ತನ್ನ ಪಾಡಿಗೆ ತಾನು ಬೆಳೆಯುತ್ತದೆ; ಆದಾಯ ತಂದು ಕೊಡುತ್ತದೆ.
ಸಾರವಿಲ್ಲದ ಮಣ್ಣಿನಲ್ಲೂ ಬಿದಿರು ಹುಲುಸಾಗಿ ಬೆಳೆಯುವುದರಿಂದ, ಪಾಳು ಬಿದ್ದ, ಕಲ್ಲು ಬಂಡೆ ಇರುವ ಜಾಗಗಳಲ್ಲೂ ಬಿದಿರನ್ನು ಸುಲಭವಾಗಿ ಬೆಳೆಯಬಹುದು. ನೆಟ್ಟ ಮೊದಲ ಮೂರು ವರ್ಷ ಆರೈಕೆ ಮಾಡಿದರೆ, ಮುಂದಿನ 30ರಿಂದ 100 ವರ್ಷಗಳವರೆಗೆ ನಮಗೆ ನಿರಂತರವಾಗಿ ಆದಾಯ ತರುತ್ತದೆ.

ಬಿದಿರಿನಲ್ಲಿ 1,500ಕ್ಕೂ ಹೆಚ್ಚು ತಳಿಗಳಿವೆ. ಬೇಲಿಗೆ ಬಳಕೆಯಾಗುವ ಸಣ್ಣ ಬಿದಿರಿನಿಂದ ಹಿಡಿದು ನೂರು ಅಡಿಮೀರಿ ಬೆಳೆಯುವ ಕೊಲಂಬಿಯಾ ಬಿದಿರಿನವರೆಗೆ ಇದರ ವೈವಿಧ್ಯ ಹಬ್ಬಿದೆ. ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಹೆಬ್ಬಿದಿರು, ಶಮೆ ಬಿದಿರು, ಕಪ್ಪು ಬಿದಿರು, ಬರ್ಮಾ ಬಿದಿರು, ಗೋಲ್ಡನ್ ಬಿದಿರು, ಕೊಳಲು ಬಿದಿರು, ಒಂಟಿ ಬಿದಿರು ಜನಪ್ರಿಯ ತಳಿಗಳಾಗಿವೆ. ಅಲಂಕಾರಿಕ ಬಿದಿರಿನ ತಳಿಗಳಾದ ಹಳದಿ ಬಿದಿರು ಮತ್ತು ಬುದ್ದ ಬಿದಿರುಗಳನ್ನು ನಗರವಾಸಿಗಳೂ ಬೆಳೆಸಬಹುದು.

ಮಣ್ಣಿನ ಸವಕಳಿ ತಡೆಯಲು ಬಿದಿರು ಸಹಕಾರಿ. ನದಿ, ಹಳ್ಳ ಮತ್ತು ಕಾಲುವೆಗಳ ದಡದಲ್ಲಿ ನೆಲ ಕೊರೆತ ತಪ್ಪಿಸಬಹುದು. ಬಿದಿರನ್ನು ಸುಟ್ಟು ಬಯೋಚಾರ್ ಮಾಡಬಹುದು. ಮಾರುಕಟ್ಟೆಯಲ್ಲಿ ಇದ್ದಿಲಿಗೆ ಬೇಡಿಕೆ ಇದೆ. ಬಿದಿರು ಬಿದಿರು ಇಂಗಾಲವನ್ನು ಹೀರಿಕೊಂಡು, ವಾತಾವರಣದ ತಾಪಮಾನವನ್ನು ತಗ್ಗಿಸುತ್ತದೆ.

ಪರಿಸರ ಸ್ನೇಹಿ ಬಿದಿರಿನ ಮನೆಗಳು ಜನಪ್ರಿಯವಾಗುತ್ತಿವೆ. ಸಿಮೆಂಟ್ ಬದಲು ಬಿದಿರು ಬಳಸುವ ಪ್ರಯತ್ನಗಳೂ ಯಶಸ್ವಿಯಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ನ್ನು ಬಿದಿರಿನಿಂದ ಶೃಂಗರಿಸಿರುವುದು ವಿಶೇಷ.

ಬಿದಿರು ಕಳಲೆ ಸೇವನೆಯಿಂದ ರಕ್ತದೊತ್ತಡ, ಮಲಬದ್ಧತೆ, ಅಜೀರ್ಣ ಮತ್ತು ಹೃದಯ ಸಂಬಂಧಿ ರೋಗಗಳನ್ನೂ ತಹಬದಿಗೆ ತರುತ್ತದೆ. ಇನ್ನು ಪೆನ್‌ಸ್ಟಾಂಡ್, ಕೀ ಬಂಚ್, ಲ್ಯಾಂಪ್ ಶೆಡ್, ಬೆಡ್‌ ಲ್ಯಾಂಪ್, ಹಣ್ಣಿನ ಬುಟ್ಟಿ, ಬೀಸಣಿಗೆ ಮೊದಲಾದ ಅಲಂಕಾರಿಕ ವಸ್ತುಗಳನ್ನು ಮಾಡಬಹುದು. ಪೀಠೋಪಕರಣಗಳಂತೂ ಬಲು ಜನಪ್ರಿಯ.

ಇಡೀ ಹೊಲಕ್ಕೆ ಬಿದಿರು ಹಬ್ಬಿಸಬೇಕಿಲ್ಲ. ಬೇಲಿಗೆ ಮತ್ತು ಪಾಳು ಬಿದ್ದ ಜಾಗಗಳಲ್ಲಿ ಐದತ್ತು ಹಿಂಡು ನೆಟ್ಟರೆ ಮನೆಬಳಕೆಗೆ ಮತ್ತು ಸ್ಥಳೀಯ ಮಾರುಕಟ್ಟೆಗೆ ಸಾಕು. ಬಿದಿರಿನ ಗಳವೊಂದಕ್ಕೆ ನೂರರ ಆಸುಪಾಸಿನ ಬೆಲೆ ಇದೆ. ಇಡೀ ದೇಶದಲ್ಲಿ ಬಿದಿರಿನ ತೋಟಗಳು ಹೆಚ್ಚು ಇರುವುದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ. ಅಲ್ಲಿ ಸಾವಿರಾರು ರೈತರು ಬಿದಿರಿನ ಕೃಷಿ ಮಾಡುತ್ತಿದ್ದಾರೆ. ಬಿದಿರು ಮೂಲದ ಉದ್ದಿಮೆಗಳು ಅಲ್ಲಿ ತಲೆ ಎತ್ತಿವೆ.
ಮೈಸೂರು, ಚಾಮರಾಜನಗರ, ಕೊಡಗಿನ ರೈತರ ಹೊಲಗಳಲ್ಲಿ ಬಿದಿರು ನೆಲೆಯೂರಿದರೆ ರೈತರಿಗೆ ಆದಾಯದ ಮೂಲ ತೆರೆದುಕೊಳ್ಳುತ್ತದೆ. ಕಾಡುಪ್ರಾಣಿಗಳಿಗೆ ಆಹಾರವೂ ಸಿಗುತ್ತದೆ. ಕನ್ನಂಬಾಡಿ ಕಾಲುವೆಗಳ ಅಂಚಿನಲ್ಲಿ ಬಿದಿರು ಬೆಳೆಯುವ ಅವಕಾಶ ವಿಪುಲವಾಗಿದೆ. ಅರಣ್ಯ ಇಲಾಖೆ ಕೃಷಿ ಅರಣ್ಯ ಯೋಜನೆಯಡಿ ಬಿದಿರು ಬೆಳೆಯುವವರಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ರಾಷ್ಟ್ರೀಯ ಬಿದಿರು ಮಿಷನ್ ಕೂಡ ವಾಣಿಜ್ಯದ ಉದ್ದೇಶಕ್ಕೆ ಬಿದಿರು ಬೆಳೆಸುವವರಿಗೆ ಸಹಾಯಧನ ನೀಡುತ್ತದೆ. ರೈತರು ಇದರ ಸದುಪಯೋಗ ಪಡೆಯಬೇಕಿದೆ. ಬಿದಿರಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಾಡಾಗಿದೆ. ಆಸಕ್ತರು ಕೋಮಲ್ ಮೊ.ಸಂ. 98809 08608 ಸಂಪರ್ಕಿಸಬಹುದು.

“ಉದ್ಯಮಗಳ ಅಗತ್ಯವಿರುವ ಬಿದಿರು ಹೆಚ್ಚು ಪ್ರಚಾರ ಪಡೆಯುತ್ತಿದೆ. ಆಯಾ ಕೃಷಿ ವಲಯ ಮತ್ತು ಮಣ್ಣಿಗೆ ಸೂಕ್ತವಾದ ಬಿದಿರಿನ ತಳಿಗಳನ್ನು ಹುಡುಕಿಕೊಳ್ಳುವ ಮತ್ತು ತಮ್ಮದೇ ಮಾರುಕಟ್ಟೆಯನ್ನು ಹುಟ್ಟಿಹಾಕುವ ಜಾಣೆಯನ್ನು ರೈತರು ಬೆಳೆಸಿಕೊಳ್ಳಬೇಕು’
-ಶ್ರೀ ಪಡ್ರೆ, ಸಂಪಾದಕರು, ಅಡಕೆ ಪತ್ರಿಕೆ.

ಬನ್ನಿ! ಬಿದಿರು ಬೆಳೆಸೋಣ…
ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಬಿದಿರಿನ ತಳಿಗಳ ಪರಿಚಯ ಮತ್ತು ಬಿದಿರಿನ ಕೃಷಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗವು ದಿನಾಂಕ 10ನೇ ಆಗಸ್ಟ್ 2024ರಂದು ‘ಬಿದಿರಿನ ಬೇಸಾಯ’ ಕಾರ್ಯಕ್ರಮ ಏರ್ಪಡಿಸಿದೆ. ಮೈಸೂರಿನ ಮುಡಾ ಕಚೇರಿ ಪಕ್ಕದ ‘ದಿ ಇನ್‌ಸ್ಟಿಟೂಷನ್ ಆಫ್ ಇಂಜಿನಿಯರ್ ಸಭಾಂಗಣ’ದಲ್ಲಿ ಆಯೋಜಿಸಿರುವ ಈ ತರಬೇತಿ ಕಾರ್ಯಕ್ರಮದಲ್ಲಿ ಬಿದಿರು ತಜ್ಞರಾದ ಎ.ಸಿ.ಲಕ್ಷಣ, ಡಾ.ಸೀತಾಲಕ್ಷ್ಮೀ, ಡಾ.ರಾಮಕೃಷ್ಣ ಹೆಗಡೆ, ಪಿ.ದಯಾನಂದ ಮತ್ತು ಜಬೀವುಲ್ಲಾ ಬಿದಿರಿನ ತಳಿಗಳು ಮತ್ತು ಕೃಷಿ ಮಾಹಿತಿ ನೀಡಲಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

4 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

5 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

6 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

6 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

6 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

6 hours ago