ಎನ್. ಕೇಶವಮೂರ್ತಿ
ರೇಷ್ಮೆಗೆ ಉತ್ತಮ ಧಾರಣೆ ಇದ್ದ ಕಾಲ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಒಂದು ಘಟನೆ ನಡೀತು. ಒಬ್ಬ ರೈತ ತನ್ನ ಹಳೆಯ ತೆಂಗಿನ ತೋಟದಲ್ಲಿನ ತೆಂಗಿನ ಮರಗಳನ್ನು ತೆಗೆದು ರೇಷ್ಮೆ ಗಿಡಗಳನ್ನು (ಹಿಪ್ಪುನೇರಳೆ) ನಾಟಿ ಮಾಡಲು ತೀರ್ಮಾನಿಸಿದ್ದ. ಆ ದಿನ ನಾನೂ ಅಲ್ಲಿಗೆ ಹೋಗಿದ್ದೆ. ದೊಡ್ಡ ದೊಡ್ಡ ಯಂತ್ರಗಳು ಬಂದು ಬುಡಸಮೇತ ಅಲ್ಲಿದ್ದ ತೆಂಗಿನಮರಗಳನ್ನು ತೆಗೀತಾ ಇದ್ದಾಗ ನಾನು ತಡೆಯಲಾರದೆ ಆ ರೈತನನ್ನು ಕೇಳಿದೆ, ಯಜಮಾನರೆ ಯಾಕೆ ಈ ತೀರ್ಮಾನ? ಅವರು ಹೇಳಿದ್ರು, ಅಯ್ಯೋ ಹೋಗಲಿ ಬಿಡಿ ಸಾರ್. ತೆಂಗು ಹಳೇದಾಯ್ತು. ರೇಷ್ಮೆಗೆ ಬೇಡಿಕೆ ಐತೆ. ತೆಂಗಿನಕಾಯಿ ಕೇಳೋರಿಲ್ಲ. ಎಳನೀರಿಗೆ ಡಿಮ್ಯಾಂಡ್ ಇಲ್ಲ. ಕೊಬ್ಬರಿಗೆ ಧಾರಣೆ ಬರೋಲ್ಲ. ಯಾರನ್ನು ಉದ್ಧಾರ ಮಾಡೋಕೆ ತೆಂಗು ಬೆಳೀಬೇಕು ಅಂದ್ರು. ನಾನು ಅಲ್ಲಾ ಸ್ವಾಮಿ ಮುಂದಿನದನ್ನು ಕಂಡೊರು ಯಾರು? ಇವತ್ತು ರೇಷ್ಮೆಗೆ ಬೇಡಿಕೆ ಇದೆ. ತೆಂಗು ತೆಗೆದು ರೇಷ್ಮೆ ಹಾಕ್ತಿದೀರಿ. ನಾಳೆ ರೇಷ್ಮೆಗೆ ಬೆಲೆ ಬಿದ್ದೋದ್ರೆ ಆಗ ರೇಷ್ಮೆನೂ ತೆಗೆದು ಬೇಡಿಕೆ ಇರೋ ಮತ್ತೊಂದು ಬೆಳೆ ಹಾಕ್ತೀರಾ? ಎಂದು ಕೇಳಿದೆ ಅವರು ಉತ್ತರವನ್ನೇನೂ ಹೇಳಲಿಲ್ಲ. ಆದರೆ ನಾನೇ ಹೇಳಿದೆ. ನೋಡಿ, ಈಗ ತೆಂಗಿನತೋಟದಲ್ಲಿ ಬೆಳೆಯಬಹುದಾದ ಹಿಪ್ಪುನೇರಳೆ ತಳಿಗಳು ಇದಾವೆ. ನಿಮ್ಮ ಹಳೆಯ ತೆಂಗಿನ ತೋಟದಲ್ಲಿ, ಎರಡು ಸಾಲು ತೆಂಗಿನ ನಡುವೆ ಹಿಪ್ಪುನೇರಳೆ ಬೆಳೆದಿದ್ರೆ ತೆಂಗೂ ಉಳಿದಿರೋದು, ಹಾಗೇ ರೇಷ್ಮೇನೂ ಬೆಳೀಬಹುದಿತ್ತು. ಯಾಕೆ ಅನ್ಯಾಯವಾಗಿ ಬೆಳೆದ ತೆಂಗಿನಮರಗಳನ್ನು ತೆಗೀತೀರಾ ಅಂದೆ. ಬಿಡೀ ಸಾರ್, ತೆಂಗಿನ ನುಸಿ ಬಂದು ಸಾವಿರಾರು ತೆಂಗಿನ ತೋಟಗಳೇ ನಾಶವಾಗಿದ್ದಾವೆ. ಅದರಲ್ಲಿ ನಂದೂ ಒಂದು ತೋಟ ಅಂದ್ಕತೀನಿ ಅಂದ್ರು. ನಾನು ಸುಮ್ಮನಾದೆ.
ಈ ಘಟನೆ ಈಗ್ಯಾಕೆ ನೆನಪಾಯ್ತು ಗೊತ್ತಾ. ಸೆಪ್ಟೆಂಬರ್ ಎರಡನೆಯ ತಾರೀಖು ವಿಶ್ವ ತೆಂಗಿನ ದಿನ. ತೆಂಗು ತೆಗೆದು ರೇಷ್ಮೆ ಹಾಕಿದ ರೈತ ತುಂಬಾ ನೆನಪಾದ.ಯಾಕೆ ಅಂದ್ರೆ ಇವತ್ತು ತೆಂಗಿನ ಕಾಯಿ, ಎಳನೀರು, ಕೊಬ್ಬರಿ ಬೆಲೆ ಗಗನಕ್ಕೇರಿದೆ. ತೆಂಗಿನ ಕರಟಕ್ಕೆ ಟನ್‌ಗೆ ಎರಡರಿಂದ ಮೂರು ಸಾವಿರ ರೂ.ಧಾರಣೆ ಇದೆ. ತೆಂಗು ತಲೆ ಕಾಯುತ್ತೆ ಅಂದ ಹಿರಿಯರ ಮಾತು ನಿಜವಾಗಿದೆ. ತೆಂಗು ನಿಜವಾದ ಅರ್ಥದಲ್ಲಿ ಕಲ್ಪವೃಕ್ಷವಾಗಿದೆ.
ಹಾಗಾದ್ರೆ ಹಿಂದೆ ಆಗಿರಲಿಲ್ವಾ? ತೆಂಗು ಎಂದೆಂದಿಗೂ ಕಲ್ಪವೃಕ್ಷವೇ. ಸಮಸ್ಯೆ ಇರೋದು ನಮ್ಮ ಆಲೋಚನಾ ವಿಧಾನದಲ್ಲಿ. ಹಿಂದಿನ ತಲೆಮಾರಿನ ಹಿರಿಯರು ತೋಟದ ಕಲ್ಪನೆ ತಂದಿದ್ದೇ ಈ ಕಾರಣಕ್ಕಾಗಿ. ಅಲ್ಲಿ ತೆಂಗು, ಅಡಕೆ, ಬಾಳೆ, ವೀಳ್ಯದೆಲೆ, ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ, ನಿಂಬೆ, ಕಿತ್ತಳೆ, ಕೋಕೋ, ಅನಾನಸ್ ಮನೆಗೆ ಬೇಕಾದ ಹಲವು ಜಾತಿಯ ಹಣ್ಣಿನ ಗಿಡಗಳು ಒಂದೊಂದಾದರೂ ಇರೋದು. ತೋಟ ಕುಟುಂಬದ ಕಣ್ಣಾಗಿರೋದು. ತೋಟದ ಈ ಜೋಡಣೆ ಬಹುಮಹಡಿ ಕಟ್ಟಡಗಳ ವಿನ್ಯಾಸಕ್ಕೆ ಕಾರಣ ಆಗಿರಬಹುದು. ಒಂದು ಬೆಳೆ ತೆಗೆದು ಮತ್ತೊಂದನ್ನು ಹಾಕುವ ಗೋಜಲು ಇರಲಿಲ್ಲ. ಬೆಲೆಗಳ ಏರುಪೇರಿನಲ್ಲಿ ಯಾವುದಾದರೂ ಒಂದು ಬೆಳೆಗೆ ಧಾರಣೆ ಸಿಗೋದು. ಕುಟುಂಬದ ನಿರ್ವಹಣೆ ಸುಲಭವಾಗಿ ಆಗೋದು.
ಹುಚ್ಚು ಹುರುವ ಹುರಳಿ ಬಿತ್ತು ಬಿತ್ತು ಕಿತ್ತ ಎನ್ನುವ ಹಿರಿಯರ ಮಾತಿದೆ. ಮಾರುಕಟ್ಟೆ ಬೆಲೆ ಹಾಗೂ ಅದರ ಏರುಪೇರು ದೀರ್ಘಕಾಲದವರೆಗೆ ಜಮೀನಿನಲ್ಲಿ ನಿಲ್ಲುವ ಬೆಳೆ ಬೆಳೆಯಲು ಮಾನದಂಡ ಆಗಬಾರದು. ಯಾಕೇಂದ್ರೆ ತೆಂಗು ನೂರು ವರುಷಗಳ ಕಾಲ ರೈತಾಪಿ ಕುಟುಂಬದ ತಲೆಮಾರುಗಳಿಗೆ ಆಧಾರವಾಗಿರುತ್ತೆ. ಹಾಗಂತ ರೇಷ್ಮೆ ಬೇಡಂತ ಅಲ್ಲ. ರೇಷ್ಮೆ ಸಹ ಒಳ್ಳೆಯ ಬೆಳೇನೇ. ಸರ್ಕಾರಿ ನೌಕರನ ರೀತಿ ಪ್ರತೀ ತಿಂಗಳೂ ಆದಾಯ ಪಡೀಬಹುದು. ಆದರೆ ತೆಂಗು, ರೇಷ್ಮೆ, ಅಡಕೇನ ಹುರುಳಿ ಬೆಳೆದು ಕಿತ್ತಂತೆ ಬೆಳೆಯಲು ಸಾಧ್ಯವೇ? ಹಲವಾರು ವರುಷಗಳ ತಪಸ್ಸನ್ನು ಮಾಡಿ ತೆಂಗಿನ ತೋಟ ಸ್ಥಾಪಿಸಬೇಕು. ನುಸಿ ಕಾಟ ಬಂತು ಅಂತಾನೋ, ಧಾರಣೆ ಇಲ್ಲ ಅನ್ನುವ ಕಾರಣಕ್ಕೋ ಅಥವಾ ಶುಂಠಿಗೆ ಬೇಡಿಕೆ ಬಂತು ಅನ್ನೋ ಕಾರಣಕ್ಕೋ ತೆಂಗನ್ನು ತೆಗೆಯೋದು ಉಚಿತವೇ? ಆಲೋಚನೆ ಮಾಡಿ. ಜಮೀನು ನಿಮ್ಮದು, ಬೆಳೆ ನಿಮ್ಮದು ಹಾಗೇ ಬದುಕು ಸಹ ನಿಮ್ಮದೇ…
(ಲೇಖಕರು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರು)
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…