• ಅಭಿನವ್
ಕಣ್ಣಿಟ್ಟ ಕಡೆಯೆಲ್ಲ ಹಸಿರು, ಮೂಗಿಗಡರುವ ಹೂಗಳ ತಂಪು ಪರಿಮಳ, ಆಗ ತಾನೆ ಗೊನೆಬಿಟ್ಟ ಹಣ್ಣಿನ ರಾಶಿಗಳ ನಡುವೆ ಬೆಳಗಾಯಿತೆಂದರೆ ಪ್ರಾಣಿ-ಪಕ್ಷಿಗಳು ಕೂಗುತ್ತಾ, ತಮ್ಮ ಇರುವಿಕೆಯನ್ನು ನಳಿನಿ ಅವರಿಗೆ ಮನದಟ್ಟು ಮಾಡುತ್ತಲಿರುತ್ತವೆ. ನಳಿನಿ ಅವರು ಕೃಷಿ ಬದುಕನ್ನು ಪ್ರೀತಿಸುತ್ತಲೇ ಹೊಸ ಪ್ರಯೋಗಕ್ಕೆ ಸದಾ ಹಾತೊರೆಯುತ್ತಾ, ಯಶಸ್ವಿಯಾಗಿದ್ದಾರೆ. ಯಾರೇ ಕೊಟ್ಟ ಬೀಜವಿರಲಿ, ಅದನ್ನು ಬಿತ್ತಿ, ಬೆಳೆಯನ್ನು ತೆಗೆದ ಮೇಲಷ್ಟೇ ಇವರಿಗೆ ನೆಮ್ಮದಿ, ಬೀಜ ಮೊಳಕೆಯೊಡೆದಿಲ್ಲ ಎಂದರೆ ಅದರ ಹಿಂದಿನ ಕಾರಣಗಳಿಗಾಗಿ ತಡಕಾಡುವ ನಳಿನಿಯವರ ಗುಣವೇ ಕೃಷಿ ಬದುಕಿನ ಗುಟ್ಟು.
ಕೃಷಿ ಪರಂಪರೆಯ ಕುಟುಂಬದವರಾದ ನಳಿನಿ ಅವರ ಅಜ್ಜಂದಿರಿಬ್ಬರೂ ಕೃಷಿಯನ್ನು ಮಾಡುತ್ತಿದ್ದವರೇ. ಇವರ ತಂದೆ ವೃತ್ತಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದರೂ, ಪ್ರವೃತ್ತಿ ಮಾತ್ರ ವಿವಿಧ ಸಸಿಗಳನ್ನು ಬೆಳೆಯುವತ್ತ ಹರಿದಿತ್ತು. ಅಪ್ಪ, ಅಮ್ಮ, ಅಜ್ಜಂದಿರ ಒಡನಾಟದಲ್ಲಿ ಬೆಳೆದ ನಳಿನಿ ಅವರಿಗೆ ಕೃಷಿ ಪ್ರೀತಿ ಆಗದಿದ್ದೀತೆ ಹೇಳಿ! ತೆಂಗು, ಅಡಕೆ, ಹಣ್ಣುಗಳು ಬೆಳೆಯು ವುದನ್ನು ಕಾಣುವಾಗೆಲ್ಲ ನಾನೂ ಬೆಳೆಯಬೇಕು ಎಂದು ಅನಿಸುತ್ತಿತ್ತು.
ಮೈಸೂರಿನ ಬೆಳವಾಡಿಯಲ್ಲಿ ರುವ ಇನ್‌ಫೋಸಿಸ್ ಬಳಿಯ ಜಮೀನಿನಲ್ಲಿ ಇವರು ಕೃಷಿ ಮಾಡಬೇಕು ಎಂದುಕೊಂಡಾಗ ಮೊದಲು ನೆಟ್ಟಿದ್ದೇ, ತೆಂಗಿನ ಗಿಡಗಳನ್ನು. ನಂತರ ಒಂದೊಂದೇ ಗಿಡ ಪಟ್ಟಿಯಲ್ಲಿ ಸೇರುತ್ತಾ ಹೋಯಿತು. ಬಿಎಸ್ಸಿ ಪದವೀಧರರಾದ ನಳಿನಿ ಅವರಿಗೆ ಕೃಷಿ ತನ್ನ ಕೈಹಿಡಿಯಬಲ್ಲದು ಎಂಬ ನಂಬಿಕೆಯಿತ್ತು. ಅಡಕೆ ಬೆಳೆಯುವಾಗ ಗಿಡವನ್ನು ಹೇಗೆ ನೆಡಬೇಕೆಂದು ತಿಳಿದೇ ಇರಲಿಲ್ಲ. ಅದರ ಮೊಳಕೆ ಮೇಲೆ ಕಾಣಿಸುವಂತೆ ನೆಟ್ಟರೆ ಮಾತ್ರ ಗಿಡ ಹುಟ್ಟುವುದೆಂಬ ದೂರದೃಷ್ಟಿ! ನೆಡುವುದಕ್ಕೆ ಪಟ್ಟ ಹೆಣಗಾಟ ಅಷ್ಟಿಷ್ಟಲ್ಲ ಬಿಡಿ. ಬೀಜ ಹೇಗೆ ಬಿತ್ತಿದರೂ ಬೆಳೆಯುತ್ತದೆ ಎಂಬ ಪ್ರಕೃತಿಯ ಪಾಠವನ್ನು ಕಲಿಯುವುದಕ್ಕೆ ಈ ಘಟನೆಯೇ ನೆರವಾಯಿತು. ಅಷ್ಟು ಅಡಕೆ ನೆಡುವುದಕ್ಕೆ ವಾರ ಕಳೆದಿರಬಹುದು ಎಂದು ಈಗಲೂ ನೆನೆದು ನಗುತ್ತಾರೆ.
ನಳಿನಿ ಅವರ ಇನ್ನೊಂದು ವಿಶೇಷತೆಯನ್ನು ಹೇಳಲೇಬೇಕು. ಹಂದಿ, ಕೋಳಿ, ಬಾತುಕೋಳಿ, ಹಸು ಸಾಕಾಣಿಕೆಯನ್ನೂ ಮಾಡುತ್ತಿರುವುದು. ಹಸುಗಳ ಜೊತೆಗೆ ಆಡಿ ಬೆಳೆದ ನಳಿನಿ ಅವರಿಗೆ ಅವುಗಳನ್ನು ಸಾಕುವುದು ದೊಡ್ಡ ಸವಾಲೇ ಆಗಿತ್ತು. ಕೆಲಸಗಾರರು ಸಿಗದೇ ಇರುವುದು ಒಂದು ಸಮಸ್ಯೆಯಾದರೆ, ಬಂದ ಕೆಲಸಗಾರರು ಹಸುಗಳನ್ನು ಬೇಕಾಬಿಟ್ಟಿ ನೋಡಿಕೊಳ್ಳತೊಡಗಿದರು. ಪ್ರಾಣಿಗಳನ್ನು ನಮ್ಮಂತೆಯೇ ನೋಡಿಕೊಳ್ಳಬೇಕು, ಮನುಷ್ಯರಂತೆ ಅವುಗಳನ್ನು ಸ್ವಚ್ಛವಾಗಿರಿಸಬೇಕು ಎಂಬ ಅರಿವನ್ನು ಸಿದ್ಧಿಸಿಕೊಂಡಿದ್ದ ನಳಿನಿ ಅವರಿಗೆ ಇರುಸು ಮುರು ಸಾಗತೊಡಗಿತು. ಆರ್ಥಿಕ ಸ್ವಾವಲಂಬನೆಯ ದೃಷ್ಟಿ ಯಿಂದ ಹಸುಗಳನ್ನು ಸಾಕುವುದು ಅನಿವಾರ್ಯ ವಾಗಿತ್ತು. ಹಾಗಾಗಿ ರುಡ್ ಸೆಟ್ ಸಂಸ್ಥೆಗೆ ತೆರಳಿ, ಕೋರ್ಸನ್ನು ಪೂರ್ಣಗೊಳಿಸಿದರು. ಹಸು ಸಾಕುವ ಪೂರ್ಣ ಕಲೆಯ ಬಗ್ಗೆ ತಜ್ಞರಿಂದ ಬೇಕಾದ ಅಗತ್ಯ ಮಾಹಿತಿಗಳೆಲ್ಲವೂ ದೊರಕಿತು.
ನಳಿನಿ ಅವರ ಆದಾಯದ ಬಹುಪಾಲು ಅಂಶ ಹಂದಿ ಸಾಕಾಣಿಕೆಯನ್ನೇ ಅವಲಂಬಿಸಿದೆ. ಹಂದಿ ಸಾಕುವುದು ಎಂದರೆ ಅಷ್ಟು ಸುಲಭವೇ ಅಲ್ಲ. ಮಗ ಹಠ ಹಿಡಿದು, ಹಂದಿಗಳನ್ನು ಸಾಕೋಣವೆಂದು ಒತ್ತಾಯ ಮಾಡಿದ್ದೇ ಎಷ್ಟು ಒಳಿತಾಯಿತು ಎನ್ನುತ್ತಾ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಮೊದಮೊದಲು ಮೂಗಿಗೆ ಬಡಿಯುವ ವಾಸನೆ ಸಾಕೆನಿಸಿಬಿಡುತ್ತದೆ. ಒಂದೆರಡು ದಿನಗಳವರೆಗೆ ಕಷ್ಟವೆನಿಸಿದ್ದರೂ ಮಾಡಲೇಬೇಕಾದ ಅನಿವಾರ್ಯತೆ. ನಳಿನಿ ಅವರ ದಿಟ್ಟತೆಗೆ ಇದೇ ಸಾಕ್ಷಿ.
ಹಂದಿಗಳೊಂದಿಗೆ ಭಾವಭಾಷೆಯಲ್ಲಿ ಮಾತಾಡುತ್ತಾ, ಕನ್ನಡವನ್ನೂ ಕಲಿಸಿಕೊಡುತ್ತಾರೆ. ಸಿಟ್ಟುಬಂದಾಗ ಕೋಲು ಹಿಡಿದರೆ ಸಾಕು, ಕೂಗಾಡುತ್ತಿರುವ ಹಂದಿಗಳೆಲ್ಲ ಸುಮ್ಮನೆ ನಡೆಯುತ್ತವೆ. ನಳಿನಿ ಅವರು ಗಮನಿಸಿದಂತೆ ಹಂದಿಗಳಲ್ಲೇ ಎಷ್ಟು ಭಿನ್ನತೆಗಳಿವೆ ಎಂದರೆ ಒಂದು ಹಂದಿಯ ಎಂಜಲು ತಟ್ಟೆಯನ್ನು ಅದಕ್ಕಾಗದ ಇನ್ನೊಂದು ಹಂದಿ ಮುಟ್ಟುವುದೇ ಇಲ್ಲ. ತನ್ನ ಮರಿಯನ್ನೇ ತಿಂದು ಹಾಕುವ ಕೆಲ ಹಂದಿಗಳಿವೆ. ಇನ್ನೂ ಕೇಳಿದರೆ, ಅಮ್ಮನನ್ನೇ ಬಿಟ್ಟರೆ ತನಗ್ಯಾರೂ ಇಲ್ಲ ಎಂಬ ಮಗು ಪ್ರೀತಿಯ ಹಂದಿಗಳ ಬಗ್ಗೆ ಕೇಳುವಾಗ ಬೆರಗಾಗಲೇಬೇಕು. ಬೆಳಗಾಯಿ ತೆಂದರೆ ಆಹಾರ ಕೊಡು ಎನ್ನುತ್ತಾ ಬಾಯಿಬಾಯಿ ಬಿಡುತ್ತಾ ನಳಿನಿ ಅವರ ದಾರಿ ಕಾಯುತ್ತಲಿರುತ್ತವೆ.
ಇವರ ತೋಟದಲ್ಲಿ ಅರವತ್ತಕ್ಕೂ ಹೆಚ್ಚು ಗಿಡಗಳು, ಮರಗಳಿವೆ. ಚಪ್ಪರದಂತೆ ಹರಡಿಕೊಂಡ ಬಳ್ಳಿಗಳಿವೆ. ನೂರಕ್ಕೂ ಹೆಚ್ಚು ಹಂದಿಗಳು, ಕೋಳಿ, ಬಾತುಕೋಳಿ, ನಾಲೈದು ಹಸು, ಎರಡು ನಾಯಿ ಇವರ ಸದ್ಯದ ಪ್ರಪಂಚ. ಈ ವರ್ಷ ಹರಿದ ವರ್ಷಧಾರೆ ನಳಿನಿ ಅವರ ಸುತ್ತಲ ಹಸಿರನ್ನು ರಂಗಾಗಿಸಿರುವುದಷ್ಟೇ ಅಲ್ಲ, ಮುಖದ ಮಂದಹಾಸವನ್ನೂ ಕಾಪಿಟ್ಟಿದೆ. ಕೃಷಿಯಲ್ಲಿ ನಷ್ಟವೇ ಹೊರತು ಆರ್ಥಿಕ ಲಾಭ ಸಾಧ್ಯವಿಲ್ಲ ಎಂದು ನಿರಾಸೆ ಹೊಂದಿದವರಿಗೆ ಇವರ ಬದುಕು ಕೃಷಿಯತ್ತ ಮುಖ ಮಾಡುವುದಕ್ಕೆ
ಪ್ರೇರಣೆ.
ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಹಣಗಳಿಕೆಗಾಗಿ ಸುಳ್ಳು, ಮೋಸ, ಕೊಲೆ ಸುಲಿಗೆ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿವೆ. ನಿಧಿಗಾಗಿ ವಾಮಾಚಾರ…
ಪ್ರಸ್ತುತ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಅಕಾಲಿಕ ತುಂತುರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು,…
ಪ್ರತಿಯೊಬ್ಬರೂ ಇಷ್ಟಪಡುವ ವಸ್ತುಗಳಲ್ಲಿ ಚಿನ್ನ ಪ್ರಮುಖವಾಗಿದೆ. ಮಧ್ಯಮ ವರ್ಗದ ಜನರು ಪೈಸೆ ಪೈಸೆ ಕೂಡಿಟ್ಟು ಚಿನ್ನ ಖರೀದಿಸುತ್ತಿದ್ದು, ಮದುವೆ ಮೊದಲಾದ…
ಪಂಜುಗಂಗೊಳ್ಳಿ ೭,೫೦೦ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಆಸರೆಯಾದ ಆನಂದ ಶಿಕ್ಷಾ ನಿಕೇತನ ಪಶ್ಚಿಮ ಬಂಗಾಳದ ಮುರ್ಷಿದಾಬಾದಿನ ಶಂಕರಪಾದ ಗ್ರಾಮದ ಒಂಬತ್ತು…
ನವೀನ್ ಡಿಸೋಜ ೪೩ ಕೋಟಿ ರೂ. ವೆಚ್ಚದ ಕಾಮಗಾರಿ; ಅಂತಿಮ ಹಂತದಲ್ಲಿ ಕೆಲಸ ಮಡಿಕೇರಿ: ಮಾರ್ಚ್ ವೇಳೆಗೆ ಮಡಿಕೇರಿಯ ವೈದ್ಯಕೀಯ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಮಕರ ಸಂಕ್ರಾಂತಿಯಂದು ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು…