ಮೊನ್ನೆ ಬುಧವಾರ ಮೈಸೂರಿನಲ್ಲಿ ಒಂದು ಪತ್ರಿಕಾಗೋಷ್ಠಿ. ಮುಂದಿನ ವಾರ ತೆರೆಗೆ ಬರಲಿರುವ ಎರಡು ಚಿತ್ರಗಳ ತಂಡಗಳು ಜೊತೆಯಾಗಿ ನಡೆಸಿದ ಗೋಷ್ಠಿ, ಇದು ಹೊಸದು. ಹೊಸ ಪ್ರಯೋಗ, ದೇಶವಿದೇಶಗಳಲ್ಲಿ ನಡೆದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳ ಬಿಡುಗಡೆಯ ಕುರಿತ ಪತ್ರಿಕಾಗೋಷ್ಠಿ, ಚಂಪಾ ಶೆಟ್ಟಿ ಅವರ ‘ಕೋಳಿ ಎಸ್ರು’ ಮತ್ತು ಪೃಥ್ವಿ ಕೊಣನೂರು ಅವರ ‘ಹದಿನೇಳೆಂಟು’ ಈ ಎರಡು ಚಿತ್ರಗಳು. ಇದರ ಬಿಡುಗಡೆ ಮಾಡಲು ಅವರು ಕಂಡುಕೊಂಡ ಪರ್ಯಾಯ ಮಾರ್ಗ ‘ಪರಸ್ಪರ’. ಈ ಎರಡೂ ಚಿತ್ರಗಳನ್ನು ‘ಪರಸ್ಪರ’ ಜಾಲತಾಣದ ಮೂಲಕ ಟಿಕೆಟುಗಳನ್ನು ಪಡೆದು ನೋಡಬಹುದು. ಇದನ್ನು ಪ್ರಚಾರ ಮಾಡಲು, ಎರಡೂ ಚಿತ್ರಗಳ ತಂಡ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿ ಆಯೋಜಿಸುತ್ತಿದೆ.
ಚಲನಚಿತ್ರಗಳ ನಿರ್ಮಾಣಕ್ಕಿಂತ ಅವುಗಳ ಬಿಡುಗಡೆಯದೇ ಬಹುದೊಡ್ಡ ಸಮಸ್ಯೆ. ಇದು ಅದ್ದೂರಿ ಚಿತ್ರಗಳ, ಜನಪ್ರಿಯ ನಟರ ಚಿತ್ರಗಳ ಹೊರತಾದ ನಿರ್ಮಾಪಕರ ಅನುಭವ. ಜನಪ್ರಿಯ ನಟರ ಚಿತ್ರಗಳು ಹಿಂದಿನಂತೆ ವರ್ಷಕ್ಕೆ ಮೂರೋ ನಾಲ್ಕೂ ತಯಾರಾಗುತ್ತಿಲ್ಲ. ಜನಪ್ರಿಯ ನಟರ ಕಾಲ್ ಶೀಟ್ ಮತ್ತಿತರ ಬೇಡಿಕೆಗಳ ವೆಚ್ಚ ಗಗನಕ್ಕೇರಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ ವರ್ಷ ತೆರೆಕಂಡ ಹೊಸಬರ ಚಿತ್ರಗಳಲ್ಲಿ ಅಲ್ಲೊಂದು, ಇಲ್ಲೊಂದು ಹಾಕಿದ ಬಂಡವಾಳವನ್ನು ಮರಳಿಸಿದವೇ ಹೊರತು ಉಳಿದ ಬಹುತೇಕ ಚಿತ್ರಗಳು ನಷ್ಟವನ್ನು ಹೊದ್ದುಕೊಂಡು ಮಲಗಿದವು. ತೆರೆ ಕಂಡ ಮಾರನೇ ದಿನವೇ ಚಿತ್ರಮಂದಿರಗಳಿಂದ ಎತ್ತಂಗಡಿಯಾದ ಉದಾಹರಣೆಗಳೂ ಸಾಕಷ್ಟಿದ್ದವು. ಪ್ರತಿ ವರ್ಷ ತಯಾರಾಗುತ್ತಿರುವ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗುವ ಚಿತ್ರಗಳ ಸಂಖ್ಯೆ ಅದರ ಶೇ.5ಕ್ಕಿಂತಲೂ ಕಡಿಮೆ. ಹತ್ತು ಹನ್ನೆರಡು ಚಿತ್ರಗಳಾದರೆ ಅದೇ ಹೆಚ್ಚು. ಜನಪ್ರಿಯ ನಟರ ಚಿತ್ರಗಳು ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ನಿರ್ಮಿಸುವ ಚಿತ್ರಗಳು ಆಯಾ ನಟರ ಮತ್ತು ನಿರ್ಮಾಣ ಸಂಸ್ಥೆಗಳ ‘ಬ್ರಾಂಡ್’ ಜನಪ್ರಿಯತೆಯನ್ನು ಹಿಗ್ಗಿಸಲು ನೆರವಾಗುವ ರೀತಿಯವು. ಹೊಸಬರ ಚಿತ್ರಗಳಲ್ಲಿ ಕಥಾವಸ್ತು, ನಿರೂಪಣಾ ವಿಧಾನಗಳಲ್ಲಿ ಹೊಸತನ ಕಾಣುವುದು ಅಪರೂಪ; ಅಂತಹ ಚಿತ್ರಗಳು ಇದ್ದರೆ ಅವು ಗಮನ ಸೆಳೆದದ್ದೂ ಇದೆ. ಕಳೆದ ವರ್ಷ 223 ಚಿತ್ರಗಳು ತೆರೆಕಂಡವು. ಈ ಸಂಖ್ಯೆ ಹಿಂದಿನ ವರ್ಷ 2022ಕ್ಕಿಂತ ಕಡಿಮೆ ಎನ್ನಿ. ಈ ಬಾರಿ ಸಿದ್ಧವಾಗಿ ತೆರೆಗೆ ಕಾದಿರುವ, ತೆರೆಗೆ ಬರುತ್ತಿರುವುದಾಗಿ ಪ್ರಕಟವಾಗುತ್ತಿರುವ ಚಿತ್ರಗಳ ಸಂಖ್ಯೆಯನ್ನು ನೋಡಿದರೆ ಹಿಂದಿನ ವರ್ಷಗಳಿಗಿಂತ ಹೆಚ್ಚು ಚಿತ್ರಗಳು ತೆರೆಗೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ಕಳೆದ ವರ್ಷಾಂತ್ಯ ವಾರ ತೆರೆ ಕಂಡ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಂತೂ ಹೌದು. ‘ನಮ್ಮ ನೆಲದಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡಲು ನಾವೇಕೆ ಅಂಜಬೇಕು?’ ಎಂದು ತಮ್ಮ ಅಭಿನಯದ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ದರ್ಶನ್ ಪ್ರಶ್ನಿಸಿದ್ದರು.
ಅದು ಪ್ರಶ್ನೆಯಾಗಿಯೇ ಉಳಿಯಿತೇ ಹೊರತು ಉಳಿದವರು ಅದನ್ನು ಸವಾಲಾಗಿ ಸ್ವೀಕರಿಸಲೇ ಇಲ್ಲ. ಕಳೆದ ವಾರ ಹೊಸ ಚಿತ್ರಗಳು ತೆರೆಗೆ ಬರದೆ ಇರುವುದು ಇದಕ್ಕೆ ಸಾಕ್ಷಿ. ಬಿಡುಗಡೆಗೆ ಸಿದ್ಧವಾದ ಹಲವು ಚಿತ್ರಗಳಿದ್ದವು. ತೆರೆಗೆ ಬರುವುದಾಗಿ ಜಾಹೀರಾತು ನೀಡಿದ್ದ ಚಿತ್ರಗಳಿದ್ದವು. ಪರಭಾಷೆಗಳ ಎಂಟು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಕಳೆದ ವಾರ, ಸಂಕ್ರಾಂತಿ ವೇಳೆಗೆ ಯಾವುದೇ ಹೊಸ ಕನ್ನಡ ಚಿತ್ರ ಬಿಡುಗಡೆ ಆಗಿರಲಿಲ್ಲ. ಕ್ಯಾಲೆಂಡರ್ ವರ್ಷದ ಮೊದಲ ಮೂರು ಚಿತ್ರಗಳು ತೆರೆ ಕಂಡವಾದರೂ, ಅವು ಸದ್ದು ಮಾಡಲಿಲ್ಲ. ಇದೀಗ ಮತ್ತೆ ಸಾಲುಸಾಲಾಗಿ ಚಿತ್ರಗಳು ಬಿಡುಗಡೆ ಆಗಲು ಸಿದ್ಧವಾಗಿವೆ. ಈವಾರ ಆರು ಚಿತ್ರಗಳಿವೆ. ‘ರಂಗಸಮುದ್ರ’ ‘ಕಾಂತ’, :ಬರ್ಬರಿಕ’, ‘ಕಡಲ್’, ‘ಮತ್ತೆ ಮತ್ತೆ’ ಮತ್ತು ‘ಕರುನಾಡ ಕಣ್ಮಣಿ’ ಈ ಚಿತ್ರಗಳು. ‘ರಂಗಸಮುದ್ರ’ ಕಳೆದ ವಾರ ತೆರೆ ಕಾಣಬೇಕಾಗಿದ್ದು, ತಾಂತ್ರಿಕ ಕಾರಣದ ಹೆಸರಲ್ಲಿ ಈ ವಾರಕ್ಕೆ ನಿರ್ಮಾಪಕರು ಮುಂದೂಡಿದ್ದರು. ಪುನೀತ್ ರಾಜಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಲು ಒಪ್ಪಿದ್ದರು ಎನ್ನುವ ನಿರ್ಮಾಪಕರು ಆ ಪಾತ್ರವನ್ನು ರಾಘವೇಂದ್ರ ರಾಜಕುಮಾರ್ ಅವರಿಂದ ಮಾಡಿಸಿದ್ದಾರೆ. ಎಂ.ಎಂ.ಕೀರವಾಣಿ ಹಾಡಿರುವುದು ಆ ಚಿತ್ರದ ಇನ್ನೊಂದು ಹೆಗ್ಗಳಿಕೆ. ‘ಕಾಂತ’ ಚಿತ್ರದಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರಚಲಿತವಿರುವ ಕೊರಗಜ್ಜನ ಪ್ರಸ್ತಾಪ ಇದೆ ಎನ್ನಲಾಗಿದೆ.
ವೈಭವ್ ಪ್ರಶಾಂತ್ ನಿರ್ದೇಶನದ ಈ ಚಿತ್ರದಲ್ಲಿ ವಿಶ್ಲೇಶ್ ಮತ್ತು ಸಂಗೀತ ಭಟ್ ಜೋಡಿ ಇದೆ. ರವಿ ಬಸ್ರೂರು ನಿರ್ಮಾಣದ ‘ಕಡಲ್’, ಹೊಸಬರ ‘ಬರ್ಬರಿಕ’ ಚಿತ್ರಗಳಲ್ಲದೆ ‘ಕರುನಾಡ ಕಣ್ಮಣಿ’ ಮತ್ತು ‘ಮತ್ತೆ ಮತ್ತೆ’ ಚಿತ್ರಗಳು. ‘ಮತ್ತೆ ಮತ್ತೆ’ ಚಿತ್ರದಲ್ಲಿ ಹಿರಿಯ ನಟರಾದ ಉಮೇಶ್, ಡಿಂಗ್ರಿ ನಾಗರಾಜ್, ಕೋಟೆ ಪ್ರಭಾಕರ್ ಮುಂತಾದವರು ನಟಿಸಿದ್ದಾರೆ. ಇದರಲ್ಲಿ ಏನಾದರೂ ಲಾಭ ಬಂದರೆ, ಅದರಲ್ಲಿ ಶೇ.25 ಬಡ ಕಲಾವಿದರಿಗೆ ನೀಡಲಿದ್ದಾರಂತೆ ನಿರ್ಮಾಪಕರು. ‘ಕರುನಾಡ ಕಣ್ಮಣಿ’ ಚಿತ್ರ ಜನಪ್ರಿಯ ನಟರ ಅಭಿಮಾನಿಯ ಕಥೆಯಂತೆ. ಪ್ರಚಾರದಲ್ಲಿ ಡಾ.ರಾಜಕುಮಾರ್ ಅವರ ಚಿತ್ರಗಳ ಸ್ಥಿರಚಿತ್ರಗಳಿವೆ. ಮುಂದಿನ ಶುಕ್ರವಾರ ಗಣರಾಜ್ಯ ದಿನ. ಅಂದೂ ಆರು ಚಿತ್ರಗಳು ತೆರೆಗೆ ಬರುವುದಾಗಿ ಈಗಾಗಲೇ ಪ್ರಕಟಿಸಿವೆ. ಅದಕ್ಕೆ ಇನ್ನೂ ಕೆಲವು ಸೇರಿಕೊಂಡರೆ ಆಶ್ಚರ್ಯ ಇಲ್ಲ. ಮೊನ್ನೆ ಪತ್ರಿಕಾಗೋಷ್ಠಿ ಕರೆದು ಪ್ರಕಟಿಸಿದ ‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಚಿತ್ರಗಳಲ್ಲದೆ ‘ಬ್ಯಾಚಲರ್ ಪಾರ್ಟಿ’, ‘ಉಪಾಧ್ಯಕ್ಷ’, ‘ಕೇಸ್ ಆಫ್ ಕೊಂಡಾಣ’ ಮತ್ತು ‘ಅಲೆಕ್ಸಾ’ ಚಿತ್ರಗಳು ಮುಂದಿನ ವಾರದವು. ಪರಂವಃ ಸ್ಟುಡಿಯೋದ ‘ಬ್ಯಾಚಲರ್ ಪಾರ್ಟಿ’ ಮತ್ತು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಗಳು ಒಂದೇ ದಿನ, ‘ಕಾಂತಾರ’ ಚಿತ್ರದ ಬಿಡುಗಡೆಗೂ ಮುನ್ನ ಸೆಟ್ಟೇರಿದ್ದವು. ‘ಕಿರಿಕ್ ಪಾರ್ಟಿ’ ಚಿತ್ರದ ಬೇರೊಂದು ರೀತಿಯ ಮುಂದುವರಿದ ಭಾಗ ಎನ್ನಲಾಗುತ್ತಿದ್ದ ‘ಬ್ಯಾಚಲರ್ ಪಾರ್ಟಿ’ ಚಿತ್ರವನ್ನು ಅಭಿಜಿತ್ ಮಹೇಶ್ ನಿರ್ದೇಶಿಸಿದ್ದು, ರಿಶಬ್ ಶೆಟ್ಟಿ ಇದರಲ್ಲಿ ನಟಿಸಬೇಕಾಗಿತ್ತು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…