ಚಿತ್ರ ಮಂಜರಿ

ಸಂಭಾವನೆ ದಾನ ಮಾಡುವಂತೆ ಆದಿಪುರುಷ್ ರೈಟರ್ ಗೆ ಆಗ್ರಹ

ಆದಿಪುರುಷ್ ಸಿನಿಮಾದ ಬರವಣಿಗೆ ವಿಚಾರದಲ್ಲಿ ತಮ್ಮಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಕೈ ಜೋಡಿಸಿ ಬೇಡಿಕೊಂಡಿದ್ದರು ಚಿತ್ರದ ಸಂಭಾಷಣಾಕಾರ ಮನೋಜ್ ಮುಂತಾಶಿರ್ ಅವರು ಕ್ಷಮೆ ಕೇಳಿದರೂ, ಟ್ರೋಲಿಗರು ಮಾತ್ರ ಕ್ಷಮಿಸಿದಂತೆ ಕಾಣುತ್ತಿಲ್ಲ. ಕ್ಷಮೆಗೆ ಅರ್ಹರಲ್ಲ ನೀವು, ಒಂದು ವೇಳೆ ಕ್ಷಮಿಸಬೇಕು ಎಂದರೆ ಚಿತ್ರಕ್ಕಾಗಿ ಪಡೆದುಕೊಂಡಿರುವ ಸಂಭಾವನೆಯನ್ನು ದಾನ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.

ಆದಿಪುರುಷ್ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೋರಾಟ ಮಾಡಿದರೂ ಚಿತ್ರತಂಡವಾಗಲಿ ಅಥವಾ ಸಿನಿಮಾದ ಸಂಭಾಷಣೆಯನ್ನು ಬರೆದ ಮನೋಜ್ ಮುಂತಾಶಿರ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಿನಿಮಾ ಬ್ಯಾನ್ ಮಾಡುವ ಮಟ್ಟಕ್ಕೆ ಬಂದರೂ ಮತ್ತೆ ತಮ್ಮ ಮೊಂಡುತನವನ್ನೇ ಮುಂದುವರೆಸಿಕೊಂಡು ಹೋಗಿತ್ತು ಚಿತ್ರತಂಡ. ಕೋರ್ಟ್ ಕಟಕಟೆ ಏರಿದ ನಂತರ ಇದೀಗ ತಣ್ಣಗಾಗಿದೆ.

ಈ ಹಿಂದೆ ಅಲಹಾಬಾದ್ ಹೈಕೋರ್ಟ್ ಚಿತ್ರತಂಡಕ್ಕೆ ಛೀಮಾರಿ ಹಾಕಿತ್ತು. ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದ್ದರ ಬಗ್ಗೆ ತೀವ್ರ ರೀತಿಯಲ್ಲೇ ಅಸಮಾಧಾನ ಹೊರಹಾಕಿತ್ತು. ಕೋರ್ಟಿಗೆ ಖುದ್ದಾಗಿ ಹಾಜರಾಗಬೇಕು ಎಂದು ಮನೋಜ್ ಮುಂತಾಶಿರ್ ಸೇರಿದಂತೆ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತ್ತು. ಕೋರ್ಟ್ ಬಿಸಿ ತಾಗುತ್ತಿದ್ದಂತೆಯೇ ಬರಹಗಾರ ಮನೋಜ್ ಟ್ವೀಟ್ ಮಾಡಿದ್ದಾರೆ.

ತಮ್ಮಿಂದ ಚಿತ್ರದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಮನೋಜ್, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಜನರಿಗೆ ನೋವು ಆಗಿದ್ದನ್ನು ಒಪ್ಪಿಕೊಳ್ಳುತ್ತೇನೆ. ನಾನು ಎರಡೂ ಕೈಗಳನ್ನು ಮುಗಿದು ಕ್ಷಮೆ ಕೇಳುತ್ತೇನೆ. ಪ್ರಭು ಬಜರಂಗ ಬಲಿ ನಮಗೆ ಮತ್ತಷ್ಟು ಶಕ್ತಿ ನೀಡಲಿ. ಪವಿತ್ರ ಸನಾತನ ಹಾಗೂ ನಮ್ಮ ರಾಷ್ಟ್ರ ಸೇವೆ ಮಾಡಲು ಮತ್ತಷ್ಟು ಶಕ್ತಿ ತುಂಬಲಿ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.

ಈ ಹಿಂದೆ ಆದಿಪುರುಷ್ ಸಿನಿಮಾವನ್ನು ನೇಪಾಳ ಸರ್ಕಾರ ಬ್ಯಾನ್ ಮಾಡಿತ್ತು. ಚಿತ್ರದಲ್ಲಿ ಸೀತೆ ಬಗ್ಗೆ ಹೇಳಲಾದ ಡೈಲಾಗ್ ಸರಿಯಾಗಿಲ್ಲ ಎಂದು ಕಠ್ಮಂಡು ಮೇಯರ್ ಕೋರ್ಟ್ ಮೆಟ್ಟಿಲು ಏರಿದ್ದರು. ಸಿನಿಮಾವನ್ನು ಬ್ಯಾನ್ ಮಾಡುವುದು ಸರಿಯಲ್ಲ ಎಂದು ಅಲ್ಲಿನ ಹೈಕೋರ್ಟ್ ಹೇಳಿದ್ದರೂ, ಇತಿಹಾಸಕ್ಕೆ ಅಪಚಾರ ಮಾಡಬಾರದು ಎನ್ನುವುದನ್ನು ಎತ್ತಿ ಹಿಡಿದಿತ್ತು. ನಂತರ ಅಲಹಾಬಾದ್ ಹೈಕೋರ್ಟ್ ಮೊನ್ನೆಯಷ್ಟೇ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದೆ.

ಆದಿಪುರುಷ್ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಕುರಿತಂತೆ ಸಲ್ಲಿಸಲಾದ ಅರ್ಜಿಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠವು ಚಿತ್ರತಂಡದ ಜೊತೆ ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿತ್ತು. ‘ಭಾರತೀಯರು ಸಹಿಷ್ಟುಗಳು ಎನ್ನುವ ಕಾರಣಕ್ಕೆ ಸಹನೆ ಪರೀಕ್ಷೆ ಮಾಡಲಾಗುತ್ತಿದೆಯೇ?’ ಎಂದು ಪ್ರಶ್ನೆ ಮಾಡಿತ್ತು.

ರಾಮಾಯಣವನ್ನು ಜನರು ಪವಿತ್ರ ಎಂದು ದಿನವೂ ಪಠಿಸುತ್ತಾರೆ. ರಾಮಚರಿತಮಾನಸವನ್ನು ಓದುತ್ತಾರೆ. ಇಂತಹ ರಾಮಾಯಣವನ್ನೇ ಸಿನಿಮಾ ಮಾಡಿ, ಆ ನಂತರ ಸಿನಿಮಾಗೂ ರಾಮಾಯಣಕ್ಕೂ ಸಂಬಂಧವಿಲ್ಲ ಎಂದರೆ ಮಾಡಿದ ತಪ್ಪು ಮುಚ್ಚಿದಂತೆ ಆಗುತ್ತದೆ? ಚಿತ್ರದಲ್ಲಿನ ಸಂಭಾಷಣೆಗಳು ಕೂಡ ಅಪಮಾನ ಮಾಡುವಂತಿವೆ. ಈ ಸಿನಿಮಾ ನೋಡಿದ ಮೇಲೂ ಜನರು ತಾಳ್ಮೆ ಕಳೆದುಕೊಂಡಿಲ್ಲ ಎನ್ನುವುದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿತ್ತು.

ದೇವರು ಎಂದು ಪೂಜಿಸುವ ಭಗವಾನ್ ಹನುಮಾನ್ ಮತ್ತು ಸೀತೆಯನ್ನು ಸಿನಿಮಾದಲ್ಲಿ ಏನೂ ಅಲ್ಲ ಎನ್ನುವಂತೆ ತೋರಿಸಿದ್ದೀರಿ. ಕೆಲವು ದೃಶ್ಯಗಳು ವಯಸ್ಕ ವರ್ಗಕ್ಕೆ ಸೇರುವಂತಹವು ಆಗಿವೆ. ನೀವು ಏನನ್ನು ತೋರಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲದೇ, ಸಂಭಾಷಣೆ ಬರೆದಿರುವ ಮನೋಜ್ ಅವರಿಗೂ ನೋಟಿಸ್ ನೀಡಿ, ಕಕ್ಷಿದಾರನನ್ನಾಗಿ ಮಾಡಿ ಎಂದು ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಹಿನ್ನೆಲೆಯಲ್ಲಿ ಬರಹಗಾರ ಮನೋಜ್ ಕ್ಷಮೆ ಕೇಳಿದ್ದಾರೆ.

lokesh

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

40 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

50 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

57 mins ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago