ಸಾಮಾನ್ಯವಾಗಿ ಎಲ್ಲರಿಗೂ ಬಿಳಿಗಿರಿರಂಗನ ಬೆಟ್ಟ ಮತ್ತು ಸೋಲಿಗರು ಗೊತ್ತು. ಆದರೆ ಈ ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ ಅನಭಿಷಕ್ತ ದೊರೆಯುತೆ ಮೆರೆದ ಈ ಕಾಮ್ರೋಸ್ ಮೋರೀಸನ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಪ್ರತೀ ದಿನದ ತನ್ನ ಅನುಭವಗಳನ್ನು ಟಿಪ್ಪಣಿ ಮುಖಾಂತರ ಮುಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿಗೆ ಈತ ಬರೆಯುತ್ತಿದ್ದ ಪತ್ರಗಳಲ್ಲಿ ಈ ಭಾಗದ ಸಸ್ಯ ಸಂಪತ್ತು, ಗಿಡಮೂಲಿಕೆ, ಪ್ರಾಣಿ ವೈವಿಧ್ಯತೆ, ಸೋಲಿಗರ ಜೀವನಕ್ರಮ ಕುರಿತಂತೆ ಅಧಿಕೃತ ಮಾಹಿತಿಗಳು ಇವೆ. ಈವತ್ತಿಗೂ ಕೆಲ ಸೋಲಿಗರು ಈತನ ಬಗ್ಗೆ ಹೇಳುವ ಕತೆಗಳನ್ನು ಬರೆದರೆ ಅದೊಂದು ರೋಚಕ ಸಂಗತಿಗಳ ಪುಸ್ತಕವಾದೀತು.
ಸ್ವಾಮಿ ಪೊನ್ನಾಚಿ
ನನ್ನ ತಾತ ಈರಪ್ಪಜ್ಜ ದಂಟಳ್ಳಿಯಿಂದ ವಲಸೆ ಬಂದು ಪೊನ್ನಾಚಿಯಲ್ಲಿ ನೆಲೆಸುವಷ್ಟರಲ್ಲಾಗಲೇ ಪೊನ್ನಾಚಿಯ ಆಯಕಟ್ಟಿನ ಜಾಗಗಳನ್ನು ಅದಾಗಲೇ ಜಮೀನು ಮಾಡಲು ಬೇರೆಯವರು ಹಿಡಿದುಕೊಂಡಿದ್ದರು. ದಟ್ಟಕಾಡಿನ ಹತ್ತಿರ ಇರುವ ಊರಕೊನೆಯ ಭಾಗವನ್ನು ತಾತ ಹಿಡಿದುಕೊಂಡು ಕಾಡು ತರಿದು ಜಮೀನು ಮಾಡಲು ವಿಧಿಯಿಲ್ಲದೆ ಶುರುವಚ್ಚಿಕೊಂಡ. ದಿನ ಬೆಳಗೆನ್ನದೆ ಕಾಡತರಿದು ಒಂದು ಹಂತಕ್ಕೆ ಬೆಳೆ ಬೆಳೆಯಲು ಹೊಲ ಸಿದ್ಧವಾಯಿತು. ಹೇಳಿ ಕೇಳಿ ಕಾಡಂಚಿನ ಹೊಲ. ಹಂದಿ, ಜಿಂಕೆ, ಆನೆಗಳು ಬೆಳೆ ಹಾಕಿದ್ದರ ಕುರುಹೂ ಇಲ್ಲದಂತೆ ಪೈರನ್ನ ತಿಂದು ಹೋಗಿ ಬಿಡುತಿದ್ದವು. ಅದನ್ನು ತಡೆಯಲು ಸಾಕಾಗಿ ಹೋಗಿದ್ದ ತಾತ ಅದೆಲ್ಲಿಂದಲೋ ಒಂದು ನಾಡ ಬಂದೂಕು ಹೊಂಚಿಕೊಂಡು ಗುಂಡು ಹೊಡೆಯುವುದನ್ನು ಕಲಿತ. ಹೊಡೆಯುತ್ತಾ ಹೊಡೆಯುತ್ತಾ ಯಾವ ಗುರಿಕಾರನಿಗೂ ಕಮ್ಮಿ ಇಲ್ಲದಂತೆ ಅಸಾಧ್ಯ ಬೇಟೆಗಾರನಾಗಿಬಿಟ್ಟ. ತಾತನ ಗುಂಡೇಟಿಗೆ ಮಿಕ ತಪ್ಪಿದ್ದೇ ಇಲ್ಲ. ಈಗಲೂ ಈತನ ಒಡನಾಡಿ ಸೋಲಿಗರು ತಾತನ ಬೇಟೆಯ ಪರಾಕ್ರಮವನ್ನು ಹಾಡಿ ಹೊಗಳುತ್ತಿರುತ್ತಾರೆ. ಆಗೆಲ್ಲ ಅರಣ್ಯ ಇಲಾಖೆ ನಿಯಮ ಇಷ್ಟೊಂದು ಬಿಗಿ ಬಂದೋಬಸ್ತು ಇರಲಿಲ್ಲ. ಜನ ಲೋಕಾಭಿರಾಮವಾಗಿ ಬಂದೂಕುಗಳನ್ನು ಇಟ್ಟುಕೊಂಡು ಬೇಟೆಯಾಡುತ್ತಿದ್ದರು. ಯಾವಾಗ ತಾತ ಬೇಟೆಯಲ್ಲಿ ಪಳಗಿಬಿಟ್ಟನೋ ನಮ್ಮೂರಿನ ಸೋಲಿಗರು ತಾತನಿಗೆ ದುಂಬಾಲು ಬಿದ್ದರು. ಹಂದಿ, ಜಿಂಕೆಗಳನ್ನು ಹೊಡೆದುಕೊಡು ಎಂದು. ಉರುಳು ಹಾಕಿ, ಬಲೆ ಬೀಸಿ ಮದ್ದುಇಟ್ಟು ಹಗಲೆಲ್ಲಾ ಕಾದರೂ ಸೋಲಿಗರಿಗೆ ಜಿಂಕೆ ಸಿಗುತಿದ್ದುದು ಅಪರೂಪ. ತಾತನ ದೆಸೆಯಿಂದಾಗಿ ಅವರಿಗೆ ಹಸೀ ಹಸೀ ಜಿಂಕೆ, ಮೊಲದ ಮಾಂಸಗಳು ಸಾಕುಬೇಕು ಅನ್ನುವಷ್ಟು ದೊರೆಯತೊಡಗಿ ತಾತನನ್ನು ಹೆಚ್ಚು ಕಡಿಮೆ ಅವರ ನಾಯಕನಂತೆೆಯೇ ನಡೆಸಿಕೊಳ್ಳುವುದಕ್ಕೆ ಶುರುಮಾಡಿದರು.
ನಾನು ಊರು ಅಲೆಯುವಾಗ ಹಳೇ ಕಾಲದವರನ್ನ ಮಾತಾಡಿಸುತ್ತಾ ಆ ಕಾಲದ ವಿಷಯಗಳನ್ನು ಕೆದುಕುತ್ತಿರುತ್ತೇನೆ. ನನ್ನ ತಾಯಿಯು ತವರೂರು ಅಸ್ತೂರಿನ ಸೋಲಿಗರ ಮಾದಯ್ಯ ಎಂಬ ಹಿರಿಜೀವ. ತುಂಬಾ ವಯಸ್ಸಾಗಿದ್ದರೂ ಚೆನ್ನಾಗಿ, ಮಾತನಾಡುತ್ತಾ ಅಸಾಧ್ಯ ಸ್ಮರಣ ಶಕ್ತಿಯನ್ನು ಹೊಂದಿದ್ದ. ಹಾಗೇ ಮಾತನಾಡುವಾಗ ಬೇಟೆ ಪ್ರಸ್ತಾಪ ಬಂತು. ನನ್ನ ತಾತ ಈರಪ್ಪಜ್ಜನಿಗೆ ನಾಡ ಬಂದೂಕು ನೀಡಿ ಬೇಟೆ ಕಲಿಸಿದ ಗುರು ಈತನೇ. ಬಹುಶಃ ೧೯೪೦ರ ಆಸುಪಾಸು. ಇದೇ ಅಸ್ತೂರಿನಲ್ಲಿ ನರಭಕ್ಷಕ ಹುಲಿಯೊಂದು ಸಿಕ್ಕಾಪಟ್ಟೆ ಹಾವಳಿ ಕೊಡುತಿತ್ತು. ಇಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಬಿಳಿಗಿರಿರಂಗನ ಬೆಟ್ಟದಲ್ಲಿದ್ದ ಬೇಟೆಗಾರನೊಬ್ಬನಿಗೆ ಹುಲಿ ಹೊಡೆಯಲು ಹೇಳಿ ಕಳಿಸಿದ್ದರು. ಆತ ಬರುವಷ್ಟರಲ್ಲಾಗಲೇ ಈ ಸೋಲಿಗ ಮಾದಯ್ಯ ಆ ಹುಲಿಯನ್ನು ಬೇಟೆಯಾಡಿ ಬಿಟ್ಟಿದ್ದ. ಜತೆಗೆ ಬೇಟೆಯಾಡಿದ್ದಕ್ಕೆ ಈ ಬ್ರಿಟೀಷರು ನನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಹೆದರಿ, ಕಾಡಿನಲ್ಲಿ ಅವಿತುಕೊಂಡಿದ್ದ. ಬಿಳಿಗಿರಿರಂಗನ ಬೆಟ್ಟದಿಂದ ಬಂದ ಆ ಬೇಟೆಗಾರ ಹುಲಿ ಬೇಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಈ ಪಾಪಿ ಹುಲಿಯನ್ನು ಕೊಂದ ಅವನಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ಏನೂ ಶಿಕ್ಷೆ ನೀಡುವುದಿಲ್ಲವೆಂದು ಮಾತುಕೊಟ್ಟು ಕರೆಸಿದುದಲ್ಲದೆ ಆ ಹುಲಿಯ ಜತೆಗೆ ಈತನನ್ನು ಕೂಡ ಊರಿನ ಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು ಬಂದು ಉಡುಗೊರೆಯಾಗಿ ಒಂದು ಬೆಳ್ಳಿಯ ಬಿಲ್ಲೆಯನ್ನು ಕೊಟ್ಟು ಹೋಗಿದ್ದನು . ಈ ಘಟನೆಯನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡ ಮಾದಯ್ಯ ಆ ಪುಣ್ಯಾತ್ಮ ಮೋರಿ ಸಾಹೇಬ ಬಂದಿಲ್ಲದಿದ್ದರೆ ನಾನು ಜೈಲಿನಲ್ಲಿರುತ್ತಿದ್ದೆ ಎಂದು ಮೋರಿ ಸಾಹೇಬರ ಹೆಸರೇಳಿ ತುಂಬಾ ನೆನೆಸಿಕೊಂಡರು. ಆ ಸೋಲಿಗ ಮಾದಯ್ಯ ಈಗ ಇಲ್ಲ. ನಾನು ಕೆಲಸಕ್ಕೆ ಸೇರಿದಾಗ ಒಂದು ಶಾಲು ತಂದ್ಕೊಡಪ್ಪ ಈ ಚಳಿಗೆ ಎಂದಿದ್ದ. ಕೊನೆಗೂ ಮಾದಯ್ಯನಿಗೆ ನಾನು ಶಾಲು ಕೊಡುವುದಕ್ಕೆ ಆಗಲಿಲ್ಲ. ಶಾಲು ತೆಗೆದುಕೊಂಡು ಹೊಗುವಷ್ಟರಲ್ಲಿ ಆತ ಈ ಲೋಕದಿಂದ ದೂರ ಹೋಗಿದ್ದ.
ಯಳಂದೂರಿನ ಕಛೇರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಮೇಲೆ, ಬಿಳಿಗಿರಿರಂಗನ ಬೆಟ್ಟದ ಪೋಡುಗಳ ಶಾಲೆಗಳಿಗೆ ಭೇಟಿಕೊಡುವುದು ಮಾಮೂಲಿಯಾಗಿತ್ತು. ಕೆರೆದಿಂಬ, ಗೊಂಬೆಗಲ್ಲು ಪೋಡುಗಳಲ್ಲಿ ಗಿರಿಜನರಿಗೆ ವಸತಿಸಹಿತ ಶಾಲೆಯಿದ್ದು, ಅದು ನಮ್ಮ ವ್ಯಾಪ್ತಿಯಲ್ಲೇ ಬರುತಿದ್ದರಿಂದ ಒಮ್ಮೆ ಅಲ್ಲಿಗೆ ಭೇಟಿ ನೀಡಿದ್ದೆ. ಬೆಟ್ಟದ ಗಿರಿಜನ ಕಲ್ಯಾಣ ಕೇಂದ್ರದ ಆಂಬುಲೆನ್ಸ್‌ನಲ್ಲಿ ಹೋಗಿದ್ದೆವು. ಗೊಂಬೆಗಲ್ಲು ಪೋಡಿನ ಕ್ರಾಸಿನಲ್ಲಿ ಒಬ್ಬ ಮುದುಕಪ್ಪ ಅಡ್ಡನಿಂತು ದೂರದಿಂದಲೇ ಆಂಬುಲೆನ್ಸ್‌ಗೆ ಕಾದಿದ್ದವನಂತೆ ಕೈ ಅಡ್ಡ ಹಾಕಿದನು. ಡ್ರೈವರ್ ನ ಜೊತೆ ಏನೋ ಹರಟುತ್ತಾ ಇದ್ದ ಅವನ ಕೈಯಲ್ಲಿ ಹಕ್ಕಿ ಹಿಡಿಯಲು ಬಳಸುವ ಬಲೆಯೊಂದಿತ್ತು.. ನನ್ನ ಜತೆಯಿದ್ದ ಕಲ್ಯಾಣ ಕೇಂದ್ರದ ನಾಗೇಶ್ ಅವರು ಸ್ವಾಮಿ, ಆತನಿಗೆ ತೊಂಭತ್ತು ವರುಷ ಎಷ್ಟು ಗಟ್ಟಿ ಮುಟ್ಟಾಗಿದ್ದಾನೆ. ಅವನ ಹೆಸರು ಶಿಖಾರಿ ಮಾದೇಗೌಡ ಎಂದರು. ಕುತೂಹಲ ಹೆಚ್ಚಾಗಿ ಆಂಬುಲೆನ್ಸ್‌ನಿಂದ ಇಳಿದು ಅವರೊಟ್ಟಿಗೆ ಮಾತಿಗೆ ನಿಂತೆ. ಯಾಕೆ ಶಿಖಾರಿ ಮಾದೇಗೌಡ ಅಂತಾರಲ್ಲ ಎಲ್ಲರೂ ನಿಮ್ಮನ್ನ ಎಂದೆ.ಮೇಲೆ ಕೆಳಗೆ ನನ್ನ ಒಮ್ಮೆ ನೋಡಿದ ಆತ ಜೀಪಿನೊಳಗೆ ಬಗ್ಗಿ ನೋಡಿದ.ಆತನ ಇಂಗಿತವನ್ನರಿತಂತೆ ನಾಗೇಶ್ ಅವರು ನಮ್ಮವರೆ ಕಣ್ ಹೇಳಿ ಎಂದರು. ಆತ ತನ್ನ ವಂಶದ ಕಥೆ ಹೇಳ ತೊಡಗಿದ. ಅವರಪ್ಪ ಬೋಳೇಗೌಡ. ಆವಾಗಾವಾಗ ಈ ಭಾಗಕ್ಕೆ ಭೇಟೆಗೆ ಬರುತಿದ್ದ ಮೋರಿ ಸಾಹೇಬನಿಗೆ ಯಾವಾಗಲೂ ಈತ ಸಹಾಯಕ. ಇವನಿಗೆ ಬಂದೂಕು ಹೊಡೆಯಲು ಬರುವುದಿಲ್ಲ. ಮೋರಿ ಸಾಹೇಬ ಬಂದೂಕು ಲೋಡು ಮಾಡಿ, ಗುರಿಇಟ್ಟು ಹೊಡೆಯುವುದನ್ನು ಕುತೂಹಲದಿಂದ ಗಮನಿಸುತಿದ್ದ. ಒಮ್ಮೆ ಒಂದು ಹುಲಿ ಬೇಟೆಯಾಡುವಾಗ ಗಾಯಗೊಂಡು ತಪ್ಪಿಸಿಕೊಂಡಿತು. ಮೋರಿ ಸಾಹೇಬ ಮತ್ತು ಈ ಬೋಳೇಗೌಡ ಏನು ಮಾಡುವುದೆಂದು ತೋಚದೆ ಮಾತನಾಡುತ್ತಾ ಕುಳಿತರು. ಅದೆಲ್ಲಿ ಅಡಗಿತ್ತೋ ಗಾಯಗೊಂಡ ಹುಲಿ, ಒಂದೇ ನೆಗೆತಕ್ಕೆ ಮೋರಿ ಸಾಹೇಬರ ಮೇಲೆ ಎರಗಿತು. ಕೈಲಿದ್ದ ಬಂದೂಕು ಪಕ್ಕಕ್ಕೆ ಬಿದ್ದಿತು. ಬೋಳೇಗೌಡನಿಗೆ ಆ ಕ್ಷಣಕ್ಕೆ ದಿಕ್ಕುತಪ್ಪಿದಂತಾಗಿ, ಕೆಳಕ್ಕೆ ಬಿದ್ದಿದ್ದ ಬಂದೂಕು ತೆಗೆದು ಹುಲಿಯ ಕಡೆಗೆ ಗುರಿ ಇಟ್ಟು ಟ್ರಿಗರ್ ಒತ್ತಿದ ನೋಡಿ, ಅದೃಷ್ಟಕ್ಕೆ ಲೋಡ್ ಆಗಿದ್ದ ಅದರಿಂದ ಗುಂಡು ನೇರವಾಗಿ ಹುಲಿಯ ತಲೆಗೇ ಬಿದ್ದು ಮೋರಿ ಸಾಹೇಬರು ಬಚಾವಾದರು. ತನ್ನ ಪ್ರಾಣ ಉಳಿಸಿದ ಖುಷಿಗೆ ಶಿಖಾರಿ ಬೋಳೇಗೌಡ ಎಂಬ ಬಿರುದು ಕೊಟ್ಟು ಬೆಳ್ಳಿಯ ಬಿಲ್ಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈತ ಎಲ್ಲೋ ಬುರುಡೆ ಬಿಡುತಿದ್ದಾನೆ ಎನ್ನಿಸಿತಾದರೂ ಹಾಗೇ ಕೇಳುತ್ತಾ ನಿಂತೆ. ಅಷ್ಟರಲ್ಲಿ ಅವನ ಮೊಮ್ಮಗ ಕೆರೆದಿಂಬ ಶಾಲೆಯಿಂದ ನಡೆದು ಬರುತಿದ್ದ. ರೇಚ ರೇಚ ಬಾ ಇಲ್ಲಿ ಎಂದು ಕೂಗಿ ಕರೆದ. ಆ ಹುಡುಗ ತಾತನ ಕೂಗಿಗೆ ಹತ್ತಿರ ಬಂದ. ಆತನ ಉಡುದಾರಕ್ಕೆ ಕಟ್ಟಿದ್ದ ಬೆಳ್ಳಿ ಬಿಲ್ಲೆಯನ್ನು ತೋರಿಸುತ್ತಾ ಈ ಬಿಲ್ಲೆಯನ್ನೇ ಮೋರಿ ಸಾಹೇಬರು ಕೊಟ್ಟಿದ್ದು. ನನ್ನ ಅಪ್ಪ ನನಗೆ ಕೊಟ್ಟ. ನಾನು ನನ್ನ ಮಗನಿಗೆ ಕೊಟ್ಟೆ. ಈಗ ಮೊಮ್ಮಗ ಕಟ್ಟಿಕೊಂಡಿದ್ದಾನೆ ಎಂದ. ಅದರಲ್ಲಿರುವ ಹೆಸರು ನೋಡಿ ಪೋಟೋ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಹುಡುಗ ಓಡಿ ಹೋದ ಈಗಲೂ ಶಿಖಾರಿ ಮಾದೇಗೌಡ ಗೊಂಬೆಗಲ್ಲು ಪೋಡಿನಲ್ಲಿ ಗಟ್ಟಿಮುಟ್ಟಾಗಿ ಓಡಾಡಿಕೊಂಡಿದ್ದಾರೆ.
ಅಂದಹಾಗೆ ಈ ಮೋರಿ ಸಾಹೇಬ ಯಾರು ಅಂತ ನನಗೆ ಗೊತ್ತಾಗಿದ್ದು ಈಗ್ಗೆ ಒಂದ18ವರ್ಷದ ಹಿಂದೆ, ಹೊನ್ನಮೇಟಿ ಎಸ್ಟೇಟಿಗೆ ಭೇಟಿ ನೀಡಬೇಕೆಂದು ಮಾಹಿತಿ ಹುಡುಕಿದಾಗ . ಕುತೂಹಲ ಹೆಚ್ಚಾಗಿ ಅವರ ಕುರಿತು ಮತ್ತಷ್ಟು ತಿಳಿದುಕೊಳ್ಳಲು ವಿಚಾರಿಸತೊಡಗಿದಾಗ ಅವರು ಮುಂಬೈ ನ್ಯಾಚುರಲ್ ಹಿಸ್ಟರಿಗೆ ಬರೆದ ಟಿಪ್ಪಣಿಗಳನ್ನು ಅದೆಲ್ಲಿಂದೆಲ್ಲೋ ಹುಡುಕಿ ಬೆಂಗಳೂರಿನಲ್ಲಿರುವ ಇನ್ಸ್‌ಪೆಕ್ಟರ್ ಜನಾರ್ಧನ್‌ರವರು ಜೆರಾಕ್ಸ್ ಪ್ರತಿಯೊಂದನ್ನು ಕಳಿಸಿದರು. ಅವುಗಳನ್ನು ಗಮನಿಸಿದ ಮೇಲೆೆಯೇ ಇದರ ಕುರಿತು ನಾನೊಂದು ಕಾದಂಬರಿ ಬರೆಯಬೇಕು ಎನಿಸಿದ್ದು. ಈ ಭಾಗದ ಸೋಲಿಗರೊಂದಿಗೆ ಆತ ಬೆರೆತ ರೀತಿ ಮತ್ತು ಸೋಲಿಗರು ಒಂದುಕಡೆ ನೆಲೆ ನಿಂತು ಬದುಕು ಕಟ್ಟಿಕೊಳ್ಳಲು ಆತ ಮಾಡಿದ ಸಹಾಯ ಯಾವತ್ತಿಗೂ ನೆನೆಸಿಕೊಳ್ಳುವಂತಹದ್ದು.
ಸ್ಕಾಟ್‌ಲ್ಯಾಂಡಿನ ಪರ್ಥ್‌ಶೈರ್‌ನಲ್ಲಿ ನಿರಾಶ್ರಿತನಾಗಿದ್ದ ರಾಡಾಲ್ಪ್ ವಾರೀಸ್ ತನ್ನ ೧೮ ನೇ ವಯಸ್ಸಿನಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹಡಗಿನಲ್ಲಿ ಭಾರತಕ್ಕೆ 1877 ರಲ್ಲಿ ಬಂದಿಳಿದುದಲ್ಲದೆ, ಹಲವಾರು ಕಾಫೀ ಎಸ್ಟೇಟುಗಳಲ್ಲಿ ಕೆಲಸ ಮಾಡುತ್ತಾ ಕೊಡಗಿನಲ್ಲಿ ಕಾಫೀ ಬೆಳೆಗಾರನಾಗಿ ಕೆಲ ವರ್ಷ ಇದ್ದ. ವಿಪರೀತ ಅಲೆದಾಟದ ಹುಚ್ಚು ಹಿಡಿದಿದ್ದ ಈತ ನೀಲಗಿರಿ ಶ್ರೇಣಿಯಲ್ಲಿ ಓಡಾಡುವಾಗ ಬಿಳಿಗಿರಿರಂಗನ ಬೆಟ್ಟವನ್ನು ನೋಡಿ ಆಕರ್ಷಿತನಾದ. ದಡ್ಡಕಾಡು, ಅತೀ ಎನ್ನಿಸುವಷ್ಟು ಆನೆ ಮತ್ತು ಹುಲಿಗಳಿಂದ ಸಮೃದ್ಧಿಯಾಗಿದ್ದ ಈ ಭಾಗ ೧೮೮೭ರವರೆಗೂ ಹೊರಜಗತ್ತಿಗೆ ಅಷ್ಟೇನು ತಿಳಿದಿರಲಿಲ್ಲ. ಇದೇ ಸೂಕ್ತ ಜಾಗವೆಂದು ತೀರ್ಮಾನಿಸಿದ ರಾಡಾಲ್ಪ್ ಮೋರೀಸ್ ೧೮೮೭ ರಲ್ಲಿ ಅರಣ್ಯ ಇಲಾಖೆಯಿಂದ ವಿಸ್ತಾರವಾದ ಈ ಜಾಗವನ್ನು ಪಡೆದು ಅತ್ತೀಖಾನಯಲ್ಲಿ ಎಸ್ಟೇಟ್ ಅನ್ನು ಪ್ರಾರಂಭಿಸಿದ. ಅದುವರೆವಿಗೂ ಹೊರಜಗತ್ತಿಗೆ ಬರದೆ ಅಂಜುತ್ತಾ ಕಾಡಿನಲ್ಲಿ ಓಡಾಡಿಕೊಂಡಿದ್ದ ಸೋಲಿಗರನ್ನು ತನ್ನ ಕಾಫೀ ಎಸ್ಟೇಟಿಗೆ ಬಳಸಿಕೊಂಡ (ಈ ತೋಟದಲ್ಲಿ ಕೆಲಸ ಮಾಡಿದ್ದರ ಫಲವೇ ಈವತ್ತು ಬಿಳಿಗಿರಿರಂಗನ ಬೆಟ್ಟದ ಸೋಲಿಗರುಕಾಫಿ ಪ್ಲಾಂಟರುಗಳಾಗಿ ಅತ್ಯುತ್ತಮವಾದ ಕಾಫಿಯನ್ನು ಬೆಳೆಯುತ್ತಿದ್ದಾರೆ)ಎಸ್ಟೇಟ್ ಮಾಡಿ ಕಾಫೀ ಬೆಳೆಸುವಲ್ಲಿ ತಲ್ಲೀನನಾಗಿದ್ದ ಈತ ಈ ಭಾಗದ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತಿನ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಭೇಟೆಯಾಡುವ ರಣ ಹುಚ್ಚು ಇತ್ತು. ೧೮೯೫ ರಲ್ಲಿ ಜನಿಸಿದ ಇವನ ಮಗ ಕಾಮ್ರೋಸ್ ಮಾರೀಸ್ ಇಂಗ್ಲೆಂಡಿನಲ್ಲಿ ಪ್ರಾಣಿ ಶಾಸ್ತ್ರದ ಅಧ್ಯಯನ ಮಾಡಿಕೊಂಡು ೧೯೧೨ ರಲ್ಲಿ ವಾಪಸ್ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದು ಬೇಟೆ, ಅಧ್ಯಯನಗಳಲ್ಲಿ ತೊಡಗಿಕೊಂಡ ಮೇಲೆೆಯೇ ಬಿಳಿಗಿರಿರಂಗನ ಬೆಟ್ಟದ ನೈಜ ಸಂಗತಿಗಳು ಹೊರಜಗತ್ತಿಗೆ ತಿಳಿಯ ತೊಡಗಿದವು. ಮುಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯನಾಗಿದ್ದ ಈತ ಇಲ್ಲಿಂದಲೇ ಟಿಪ್ಪಣಿಗಳನ್ನು ಬರೆದು ಹೊರಜಗತ್ತಿಗೆ ಇಲ್ಲಿನ ಸಂಗತಿಗಳನ್ನು ತಿಳಿಸುತಿದ್ದನು. ಪ್ರಸ್ತುತ ಮೇಲೆ ಹೇಳಿದ ಎರಡು ಬೇಟೆ ಪ್ರಸಂಗಗಳು ಕೂಡ ಈ ಕಾಮ್ರೋಸ್ ಮೋರೀಸ್‌ಗೇ ಸಂಬಂಧಪಟ್ಟಿದ್ದು.
ಸೋಲಿಗರಿಗೆ ಒಂದು ಕ್ರಮಬದ್ಧ ಜೀವನ ಶೈಲಿಯನ್ನು ಕಲಿಸಿಕೊಡುವಲ್ಲಿ ಅಪಾರವಾಗಿ ಶ್ರಮಿಸಿದ ಮೋರೀಸ್, ಸೋಲಿಗರೊಟ್ಟಿಗೆ ಕಾಡುತಿರುಗುತ್ತಾ, ಬೇಟೆಯಾಡುತ್ತಾ ವಿವಿಧ ಪ್ರಾಣಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಸಾಗಿದನಲ್ಲದೆ ಸದಾ ದೊಡ್ಡ ನಾಯಿಗಳಿಂದ(ಹುಲಿ) ತೊಂದರೆ ಅನುಭವಿಸುತಿದ್ದ ಈ ಭಾಗದ ಸೋಲಿಗರನ್ನು ಅದರಿಂದ ಕಾಪಾಡುತಿದ್ದನು. ಎಲ್ಲಿ ಯಾವುದೇ ತೊಂದರೆ ಅನಾಹುತಗಳಾದರೂ ಮೊರೀಸ್‌ಗೆ ಕರೆ ಹೋಗುತಿತ್ತು.
ತಂದೆ ಮಾಡಿದ್ದ ತೋಟವನ್ನು ವಿಸ್ತರಿಸಿದ ಈತ ಹೊನ್ನಮೇಟಿ, ಬೇಡಗುಳಿ,ಕಾಟಿಗೆರೆಗಳಲ್ಲಿ ಎಸ್ಟೇಟು ತೆರೆದನು. ಈತನ ಟಿಪ್ಪಣಿಗಳಿಂದ ಆಕರ್ಷಿತರಾದ ಸಲೀಂ ಅಲಿಯವರೂ ಈತನನ್ನು ಭೇಟಿಯಾಗಲು ಬಿಳಿಗಿರಿರಂಗನ ಬೆಟ್ಟಕ್ಕೆ ಬಂದರಲ್ಲದೆ ಮೋರೀಸ್ ಜತೆಗೆ ಕೊನೆಯವರೆಗೂ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿದರು. ಇವರ ಜತೆಗೆ ಸೇರಿಕೊಂಡ ಮತ್ತೊಬ್ಬ ಪ್ರಸಿದ್ಧ ಬೇಟೆಗಾರರೆಂದರೆ ಜಿಮ್‌ಕಾರ್ಬೆಟ್. ಮೋರೀಸ್, ಸಲೀಂಅಲಿ, ಮತ್ತು ಜಿಮ್‌ಕಾರ್ಬೆಟ್ ಈ ಮೂವರು ಆಗಿಂದಾಗ್ಗೆ ಬಿಳಿಗಿರಿರಂಗನ ಬೆಟ್ಟದ ಬಂಗ್ಲೆ ಪೋಡಿನಲ್ಲಿ ಸಂಧಿಸುತ್ತಾ, ಬೇಟೆಯಾಡಿ ಅಡುಗೆ ಮಾಡಿಕೊಂಡು ತಿನ್ನುತಿದ್ದುದನ್ನು ಬಿಳಿಗಿರಿರಂಗನ ಬೆಟ್ಟದ ಹಿರೀ ತಲೆಗಳು ನೆನೆಸಿಕೊಳ್ಳುತಿದ್ದುದನ್ನು ಈಗಲೂ ಹೇಳುತ್ತಾರೆ. ಸಲಿಮ್ ಅಲಿಯವರು ತಮ್ಮ ಆತ್ಮಚರಿತ್ರೆಯಲ್ಲೂ ಕೂಡ ಮೊರಿಸ್ ಜತೆ ಕಾಲ ಕಳೆದುದನ್ನು ಹೇಳಿಕೊಳ್ಳುತ್ತಾರೆ. ಮೊರೀಸ್‌ನ ಬೇಟೆಯ ಕ್ರಮವನ್ನು ಇವನ ಸ್ನೇಹಿತ ಹ್ಯಾಂಡ್ಲಿ ದ ಹಂಟರ್ಸ್ ಮೂನ್ ಕೃತಿಯನ್ನು ಬರೆದು ಗಮನ ಸೆಳೆದಿದ್ದ. ಇಡೀ ಭಾರತದಲ್ಲೇ ಆನೆ ಮತ್ತು ಇತರೆ ಪ್ರಾಣಿಗಳಿಂದ ಬೆಳೆ ರಕ್ಷಿಸಲು ವಿದ್ಯುತ್ ಬೇಲಿ ಹಾಕಿದವರಲ್ಲಿ ಮೊರೀಸ್ ಮೊದಲಿಗನು. ಸಸ್ಯ ಮತ್ತು ಪ್ರಾಣಿ ಸಂಪತ್ತುಗಳ ಬಗ್ಗೆ ಅಪಾರ ಪ್ರೀತಿ ಮತ್ತು ಆಸಕ್ತಿ ಇದ್ದ ಮೊರೀಸ್ ಸ್ವಾತಂತ್ರ್ಯದ ನಂತರ ವನ್ಯಜೀವಿ ಸಂರಕ್ಷಣೆ ಕುರಿತು ಕಾನೂನು ರೂಪಿಸುವ ವನ್ಯಜೀವಿ ಮಂಡಳಿಯ ಸದಸ್ಯರಾಗಿ ಸಲಹೆ ನೀಡಿದ್ದರು. ಅಲ್ಲದೆ ಸ್ವಾತಂತ್ರ್ಯಾನಂತರ ಭಾರತದ ಸಂಸತ್ತಿನಲ್ಲಿ ಭಾರತೀುಂ ಯುರೋಪಿಯನ್ನರ ಪ್ರತಿನಿಧಿಯಾಗಿಯೂ ಭಾಗವಹಿಸಿದ್ದರು. ಎರಡನೇ ಮಹಾಯುದ್ಧದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ ಮೊರೀಸ್ ಮತ್ತೆ ಭಾರತಕ್ಕೆ ಬಂದು ೧೯೫೫ ರಲ್ಲಿ ತನ್ನ ಸಂಪೂರ್ಣ ಆಸ್ತಿಯನ್ನು ಬಿರ್ಲಾ ಕುಟುಂಬಕ್ಕೆ ಮಾರಾಟ ಮಾಡಿ, ಇಂಗ್ಲೆಂಡಿಗೆ ಹೋಗಿ ನೆಲೆಸುತ್ತಾನೆ. ಮೈಸೂರು ಮಹಾರಾಜರೂ ಸೇರಿದಂತೆ ಕೆನತ್‌ಅಂಡರ್‌ಸನ್ ಮುಂತಾದವರು ಇವನ ಎಸ್ಟೇಟಿಗೆ ಭೇಟಿಕೊಟ್ಟಿದ್ದರಲ್ಲದೆ ಮಹಾರಾಜರು ಇಲ್ಲಿಗೆ ಬಂದಾಗ ಯಾವಾಗಲೂ ಈತನ ಬಂಗಲೆಯಲ್ಲಿಯೇ ಉಳಿದುಕೊಳ್ಳುತಿದ್ದರು.
ಇದಾಗಿ ಬಹಳ ವರ್ಷಗಳ ನಂತರ ಇದೇ ಮೋರೀಸ್‌ನ ಮಗಳು ಮೋನಿಕಾ ಜಾಕ್‌ಸನ್ ತನ್ನ ಬಾಲ್ಯಕಾಲದಲ್ಲಿ ಬೆಳೆದ ಈ ಪ್ರದೇಶಗಳನ್ನು, ಇಲ್ಲಿನ ಸೋಲಿಗರ ಒಡನಾಟವನ್ನು ಮರೆಯಲಾಗದೆ ಮತ್ತೆ ಚಾಮರಾಜನಗರಕ್ಕೆ ಬಂದು ಸೋಮವಾರ ಪೇಟೆಯಲ್ಲಿ ಕೆಲ ಕಾಲದವರೆಗೆ ವಾಸವಿದ್ದು ಮನಸೋ ಇಚ್ಛೆ ಬಿಳಿಗಿರಿರಂಗನ ಬೆಟ್ಟದ ಕಾಡುಗಳಲ್ಲಿ ಓಡಾಡಿ, ಸೋಲಿಗ ಮಕ್ಕಳೊಂದಿಗೆ ಬೆರೆತು ತನ್ನ ಅನುಭವಗಳನ್ನು ಮತ್ತು ತನ್ನ ತಂದೆೊಂಂದಿಗೆ ಆ ದಿನಗಳಲ್ಲಿ ಇಲ್ಲಿ ಕಳೆದ ಕ್ಷಣಗಳನ್ನು ೧೯೯೪ ರಲ್ಲಿ ಪ್ರಕಟವಾದ ದ ಗೋಯಿಂಗ್ ಬ್ಯಾಕ್ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾಳೆ.(ಈಕೆ ಸ್ಕಾಟ್ಲ್ಯಾಂಡ್ ನ ಪ್ರಸಿದ್ದ ಲೇಖಕಿಯೂ ಹೌದು.ಹಲವಾರು ಪುಸ್ತಕಗಳನ್ನು ರಚಿಸಿದ್ದಾಳೆ) ಅಲ್ಲದೆ ಇದು ಈ ಭಾಗದ ಜನರ ಜೀವನ, ಕೃಷಿ, ಭೌಗೋಳಿಕ ಹಿನ್ನಲೆಗಳನ್ನು ಕುರಿತ ಅಧಿಕೃತ ಅಧ್ಯಯನದ ಪುಸ್ತಕವೂ ಕೂಡ ಹೌದು.
ಇದನ್ನು ಬರೆಯಲು ಕಾರಣವಿಷ್ಟೇ. ಸಾಮಾನ್ಯವಾಗಿ ಎಲ್ಲರಿಗೂ ಬಿಳಿಗಿರಿರಂಗನ ಬೆಟ್ಟ ಮತ್ತು ಸೋಲಿಗರು ಗೊತ್ತು. ಆದರೆ ಈ ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ ಅನಭಿಷಕ್ತ ದೊರೆಯುವಂತೆ ಮೆರೆದ ಈ ಕಾಮ್ರೋಸ್ ಮೊರೀಸನ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಪ್ರತೀ ದಿನದ ತನ್ನ ಅನುಭವಗಳನ್ನು ಟಿಪ್ಪಣಿ ಮುಖಾಂತರ ಮುಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿಗೆ ಈತ ಬರೆಯುತ್ತಿದ್ದ ಪತ್ರಗಳಲ್ಲಿ ಈ ಭಾಗದ ಸಸ್ಯ ಸಂಪತ್ತು, ಗಿಡಮೂಲಿಕೆ, ಪ್ರಾಣಿ ವೈವಿಧ್ಯತೆ, ಸೋಲಿಗರ ಜೀವನಕ್ರಮ ಕುರಿತಂತೆ ಅಧಿಕೃತ ಮಾಹಿತಿಗಳು ಇವೆ. ಅಲ್ಲದೆ ಬಿಳಿಗಿರಿರಂಗನ ಬೆಟ್ಟದ ಪ್ರದೇಶದ ಬಗ್ಗೆ ಹೊರಜಗತ್ತಿಗೆ ಅಷ್ಟೂ ಸಂಗತಿಗಳನ್ನು ತಿಳಿಸಿದ ಕೀರ್ತಿ ಮೊರೀಸ್‌ಗೇ ಸಲ್ಲಬೇಕು. ಈವತ್ತಿಗೂ ಕೆಲ ಸೋಲಿಗರು ಈತನ ಬಗ್ಗೆ ಹೇಳುವ ದಂತ ಕತೆಗಳನ್ನು ಬರೆದರೆ ಅದೊಂದು ರೋಚಕ ಸಂಗತಿಗಳ ಪುಸ್ತಕವಾದೀತು.
ಮೋರಿಸ್ ಮಗಳು ಮೋನಿಕಾ ಜಾಕ್ಸನ್ ಕುರಿತ ಸಂಗತಿಗಳನ್ನು ಹುಡುಕಾಡುತ್ತಿರುವಾಗಲೇ ಕವಿಮಿತ್ರ ಶ್ರೀಧರ್ ಅಚಾನಕ್ ಸಿಕ್ಕಿ ನಮ್ಮ ಭಾಗದ ಸ್ವಾತಂತ್ರ್ಯ ಹೋರಾಟಗಾರರಾದ ಹುಚ್ಚೆಗೌಡರನ್ನು ಭೇಟಿ ಮಾಡಿಸಿದರು.ಸುಮ್ಮನೆ ಮಾತಿಗೆ ನಿಮಗೆ ಮೋರಿಸ್ ಗೊತ್ತಾ ಎಂದೆ.ಯಾವ ಆಶ್ಚರ್ಯವನ್ನು ವ್ಯಕ್ತ ಪಡಿಸದ ಅವರು ತಮ್ಮ ಸಂಗ್ರಹದಲ್ಲಿದ್ದ ಒಂದು ಕಟ್ಟು ಪತ್ರವನ್ನು ಎದುರು ಇಟ್ಟರು. ನೋಡಿದರೆ ಮೊನಿಕಾ ಇವರಿಗೆ ಸ್ಕಾಟ್ಲ್ಯಾಂಡ್ನಿಂದ ಬರೆದ ಪತ್ರಗಳು. ಮೋರಿಸ್‌ನ ಎಸ್ಟೇಟಿನಲ್ಲಿ ಟಿಂಬೆರ್ ಏಜೆನ್ಸಿಯಲ್ಲಿ ಕೆಲಸ ಮಾಡಿದ್ದ ಇವರು ಮೋರಿಸ್ ಜೊತೆಗಿನ ಒಡನಾಟ ಮತ್ತು ಮೋನಿಕಾ ಜಾಕ್ಸನ್ ಮತ್ತೆ ನಗರಕ್ಕೆ ಬಂದಾಗ ಇಲ್ಲಿ ಅವರು ಅನಿಭವಿಸಿದ ಪಾಡುಗಳ ರೋಚಕ ಕತೆಯನ್ನು ಹೇಳಿದರು. ಇದರ ಕುರಿತು ಮುಂದೆ ಯಾವತ್ತಾದರೂ ವಿಸ್ತಾರವಾಗಿ ಬರೆಯುವೆ.
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…
• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…
ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…
• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…
ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…