ಈ ಮನೆಯ ಒಂದೊಂದು ಗೋಡೆ, ಕಂಬ, ಕಿಟಿಕಿಗಳೂ ಒಂದೊಂದು ಕಥೆ ಹೇಳುತ್ತವೆ. ಬರೋಬ್ಬರಿ ನೂರು ವರ್ಷಗಳಿಂದ ಅಲ್ಲೇ ನಿಂತು ಬೆಳೆಯುತ್ತಿರುವ ಊರನ್ನು, ಉರುಳುತ್ತಿರುವ ಕಾಲವನ್ನು, ಬದಲಾಗುತ್ತಿರುವ ಪೀಳಿಗೆಯನ್ನು ನೋಡುತ್ತಾ ಬಂದಿರುವ ಈ ಮನೆಗೆ ತನ್ನದೇ ಆದ ವೈಶಿಷ್ಟ್ಯ, ಐತಿಹ್ಯ ಎರಡೂ ಇವೆ. ರೆಡ್ ಆಕ್ಸೈಡ್ ನೆಲದ ಮೇಲೆ ಒಂದು ಆರಾಮ ಕುರ್ಚಿಯಲ್ಲಿ, ಮರದ ಕಂಬದ ಬದಿಯಲ್ಲಿ ಕುಳಿತು ಲೋಟವೊಂದರಲ್ಲಿ ಫಿಲ್ಟರ್ ಕಾಫಿ ಸವಿಯುತ್ತಾ ಹಿರಿಯ ವಕೀಲರಾದ ಎನ್.ವಿ.ಕೃಷ್ಣಸ್ವಾಮಿ ಅವರು ಹೇಳಿದ ಕಥೆಯನ್ನು ಸಿರಿ ಮೈಸೂರು ಬರಹಕ್ಕೆ ಇಳಿಸಿದ್ದಾರೆ.
ಅಗ್ರಹಾರದ ಹಳೆಯ ಮನೆಯೊಂದರ ಕುರಿತು
ಅಗ್ರಹಾರ ಹಳೆ ಮೈಸೂರಿನ ಅತಿ ಪ್ರಮುಖ ಭಾಗ. ಅರಮನೆಯ ಬದಿಯಲ್ಲೇ ಇರುವ ಕಾರಣಕ್ಕೋ ಏನೋ, ಇಲ್ಲಿ ದಂಡಿಯಾಗಿ ಹಳೆಯ ಮನೆಗಳು ಕಾಣಸಿಗುತ್ತವೆ. ಬಾವಿ, ವಿಶಾಲವಾದ ಅಂಗಳ, ಹಸಿರು ತುಂಬಿದ ಹಿತ್ತಲು, ಹಂಡೆ ಒಲೆ, ಮರದ ಅದ್ಭುತ ಕೆತ್ತನೆಯುಳ್ಳ ಕಂಬಗಳು, ಬೆಳಕಿನ ತಾರಸಿ, ಮರದ ಮೆಟ್ಟಿಲುಗಳು, ಸುಣ್ಣಗಾರೆಯ ಗೋಡೆಗಳು, ಒಂದು ಪುಟ್ಟ ತುಳಸಿ ಕಟ್ಟೆ. ಇನ್ನೂ ಹೇಳುತ್ತಾ ಹೋದರೆ ಈ ಹಳೆಯ ಮನೆಗಳ ಚಂದದ ಕುರುಹುಗಳಿಗೆ ಕೊನೆಯೇ ಇಲ್ಲ. ಮೈಸೂರು ಬೆಳೆಯುತ್ತಿದೆ. ಆಧುನೀಕರಣಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಿದೆ. ಹಲವಾರು ಹಳೆಯ ಮನೆಗಳು ನೆಲಕ್ಕುರುಳಿ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿವೆ. ಆಗೆಲ್ಲಾ ಒಂದು ದೊಡ್ಡ ವಠಾರದಂತಿದ್ದು ಕೇವಲ ಮನೆಗಳಿಂದ ತುಂಬಿದ್ದ ಅಗ್ರಹಾರ ಈಗ ನಗರದ ಪ್ರಮುಖ ವಾಣಿಜ್ಯ ಸ್ಥಳವಾಗಿದೆ. ಅದಾಗ್ಯೂ ಇನ್ನೂ ಅಗ್ರಹಾರದಲ್ಲಿ ನೂರು ವರ್ಷ ತುಂಬಿದ ಸಾಕಷ್ಟು ಮನೆಗಳಿವೆ. ಅವುಗಳಲ್ಲಿ ಒಂದು ಶ್ರೀ ಲಕ್ಷ್ಮೀ ನಿಲಯ.
ಅಗ್ರಹಾರ ಮುಖ್ಯ ರಸ್ತೆಯಲ್ಲಿ ಗಿಜಿಗುಡುವ ವಾಹನಗಳು, ಧೂಳು, ಜಂಜಾಟದ ನಡುವೆ ಇನ್ನೂ ಎದೆಯುಬ್ಬಿಸಿಕೊಂಡು ನಿಂತಿರುವ ನೂರು ವರ್ಷ ಹಳೆಯ ಚೆಂದದ ಮನೆ ಶ್ರೀ ಲಕ್ಷ್ಮೀ ನಿಲಯ. ೧೯೨೦ರ ಆಸುಪಾಸಿನಲ್ಲಿ ನಾರಾಯಣಸ್ವಾಮಿ ಅವರಿಂದ ನಿರ್ಮಾಣವಾದ ಈ ಮನೆ ಅಲ್ಪಸ್ವಲ್ಪ ಅನಿವಾರ್ಯ ಬದಲಾವಣೆಗಳನ್ನು ಹೊರತುಪಡಿಸಿ ಈಗಲೂ ಹಳೆ ಮೈಸೂರಿನ ವೈಭವವನ್ನು ನೆನಪಿಸುವಂತೆಯೇ ಇದೆ. ನಾರಾಯಣಸ್ವಾಮಿ ಅವರ ಮಗ, ೮೨ ವರ್ಷದ ವಕೀಲರಾದ ಕೃಷ್ಣಸ್ವಾಮಿ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಸದ್ಯ ಈ ಅಂದದ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕಾಫಿ ಹಿಡಿದು ಮರದ ಕುರ್ಚಿಯ ಮೇಲೆ ಕುಳಿತು ಕನ್ನಡಕ ಸರಿಪಡಿಸಿಕೊಳ್ಳುತ್ತಾ ತಮ್ಮ ಮನೆಯ ಹಿಂದಿನ ಕಥೆಯನ್ನು ಹೇಳಹೊರಡುವ ಇವರು ತಮ್ಮ ಅನುಭವಗಳನ್ನು ನಿರೂಪಿಸುತ್ತಲೇ ಹಳೆ ಮೈಸೂರನ್ನು ಒಂದು ಸುತ್ತು ಹಾಕಿಸಿ ಬರುತ್ತಾರೆ.
‘ಆಗೆಲ್ಲಾ ಅಗ್ರಹಾರ ಅಂದ್ರೆ ನಗರದ ಏಕೈಕ ಪ್ರತಿಷ್ಟಿತ ಸ್ಥಳ. ನಮ್ಮ ಮನೆ ಮುಂದೆ ರಸ್ತೆಯೇ ಆಗಿರ್ಲಿಲ್ಲ. ಈ ಮನೆ ಯಾವಾಗ ಕಟ್ಟಿಸಿದ್ದು ಅಂತ ನನಗೂ ನೆನಪಿಲ್ಲ. ಆದರೆ ನಾ ಹುಟ್ಟಿದ್ದು ಇದೇ ಮನೆಯಲ್ಲಿ. ಆದ್ರಿಂದ ಇದಕ್ಕೆ ನೂರು ವರ್ಷಗಳಾಗಿವೆ. ಆಗೆಲ್ಲ ನಮ್ಮ ತಂದೆ ನಾರಾಯಣಸ್ವಾಮಿಯವರೇ ಕೂತು ಒಂದೊಳ್ಳೆ ಡಿಸೈನ್ ಮಾಡಿ ಈ ಮನೆ ಕಟ್ಟಿಸಿದ್ರಂತೆ. ಕೆಳಗೆ ಏಳು, ಮೇಲೆ ಮೂರು ರೂಂಗಳಿವೆ. ಈ ಕಂಬಗಳೆಲ್ಲವೂ ಆಗಿನ ಕಾಲದ್ದೇ. ನಾನು ಹುಟ್ಟಿ ಬೆಳೆದದ್ದು, ಓದಿದ್ದು ಎಲ್ಲಾ ಇಲ್ಲೇ. ಕಳೆದ ಎಂಟು ದಶಕಗಳಿಂದ ಸತತವಾಗಿ ಈ ಮನೆಯ ಮಡಿಲಲ್ಲೇ ಇದ್ದೀನಿ? ಎನ್ನುತ್ತಾ ಸಣ್ಣಗೆ ನಗುತ್ತಾರೆ ಕೃಷ್ಣಸ್ವಾಮಿ.
ಆಗಲೇ ಹೇಳಿದಂತೆ ಈ ಮನೆಯಲ್ಲಿ ಅನಿವಾರ್ಯವಾದದ್ದನ್ನು ಬಿಟ್ಟು ಮತ್ಯಾವ ಬದಲಾವಣೆಗಳನ್ನೂ ಮಾಡಿಲ್ಲ. ಮನೆಯ ಮೂಲರೂಪವನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಕೃಷ್ಣಸ್ವಾಮಿಯವರಿಗೆ, ಈಗಿನ ಪೀಳಿಗೆಯ ಅವರ ಮಗ ಸಪ್ತ ಗಿರೀಶ್ ಅವರಿಗೆ ಹಾಗೂ ಅವರ ಮಕ್ಕಳಿಗೂ ತಮ್ಮ ಮನೆಯ ಮೇಲೆ ಅಪಾರ ಪ್ರೀತಿ, ವಾಂಛಲ್ಯ ಇದ್ದೇ ಇದೆ. ಅಡಿಕೆ ಕುದಿಸಿದ ನೀರು, ಗೋಂದು, ಕೋಳಿಮೊಟ್ಟೆ, ಚರ್ಕಿ, ಸುಣ್ಣ ಇತ್ಯಾದಿ ಪದಾರ್ಥಗಳನ್ನು ಬಳಸಿ ಕಟ್ಟಿದ್ದಾರೆ ಎನ್ನಲಾದ ಈ ಮನೆಯ ಗೋಡೆಗಳಿಗೆ ಈವರೆಗೂ ಅಲ್ಪಸ್ವಲ್ಪ ವಸ್ತಿ ಬಂದಿದ್ದು ಬಿಟ್ಟರೆ ಇನ್ಯಾವ ತೊಂದರೆಯೂ ಆಗಿಲ್ಲ.
ಈ ಮನೆಯ ತಾರಸಿಯನ್ನು ವಿವಿಧ ಸಾಮಗ್ರಿಗಳನ್ನು ಬಳಸಿ ಸುಮಾರು ೧.೩ ಅಡಿಯಷ್ಟು ದಪ್ಪನಾಗಿ ಮಾಡಲಾಗಿದೆ. ಈ ಕಾರಣದಿಂದಲೇ ಬೇಸಿಗೆ ಕಾಲದಲ್ಲಿಯೂ ಮನೆಯೊಳಗೆ ಮಾತ್ರ ಒಂದಿನಿತೂ ಸೆಖೆಯಾಗುವುದಿಲ್ಲ. ಬಾಗಿಲು ಹಾಕಿ ಒಳಗೆ ಕೂತುಬಿಟ್ಟರೆ ಹಸಿರಾವೃತ ಸ್ಥಳದಲ್ಲಿ, ಮರಗಳ ನೆರಳಲ್ಲಿ ನಿರಾಳವಾಗಿ ಕೂತಂತೆ ಭಾಸವಾಗುತ್ತದೆ.
ಒಳಗೆ ಹೋಗುತ್ತಿದ್ದಂತೆ ದೊಡ್ಡ ಹಜಾರ, ಎರಡೂ ಬದಿಯಲ್ಲಿ ಎರಡೆರಡು ಕೋಣೆಗಳು. ಮುಂದೆ ಮತ್ತೊಂದು ಬಾಗಿಲು. ಆ ಬಾಗಿಲು ದಾಟಿ ಹೋದರೆ ಅದ್ಭುತವಾದ ಕೆತ್ತನೆಗಳುಳ್ಳ ನಾಲ್ಕು ಕಂಬಗಳು. ಆ ಕಂಬಗಳ ಮೇಲೆ ನಿಂತಿರುವುದೊಂದು ಬೆಳಕಿನ ತಾರಸಿ. ನಾಲ್ಕು ಕಂಬಗಳ ಮಧ್ಯದಿಂದ ಬರುವ ಸೂರ್ಯನ ಬೆಳಕು ಮನೆಯಲ್ಲೆಲ್ಲಾ ಹಾಲು ಚೆಲ್ಲಿದಂತೆ ಹರಡುತ್ತದೆ. ಗಾಳಿ, ಬೆಳಕಿನ ಬಗ್ಗೆಯಂತೂ ಚಕಾರ ಎತ್ತುವಂತೆಯೇ ಇಲ್ಲ. ಈಗಿನ ಆಧುನಿಕ ವಾಸ್ತುಶಿಲ್ಪಕ್ಕೆ ಎಲ್ಲ ರೀತಿಯಲ್ಲೂ ಸೆಡ್ಡು ಹೊಡೆಯುವಂತಿರುವ ಈ ವಿನ್ಯಾಸ ನೋಡುಗರನ್ನು ಚಕ್ಕನೆ ನೂರು ವರ್ಷ ಹಿಂದಕ್ಕೆ ಕರೆದೊಯ್ದುಬಿಡುತ್ತದೆ.
‘ನನ್ನ ಅಪ್ಪನಿಗೆ ಬೆಳಿಗ್ಗೆ ಎದ್ದ ತಕ್ಷಣ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದುಬಿಡುವ ಅಭ್ಯಾಸ. ಬೆಳಿಗ್ಗೆ ಏಳುಗಂಟೆಗೆಲ್ಲಾ ಕಿಟಕಿ, ಬಾಗಿಲುಗಳು ತೆರೆದು ಸೂರ್ಯನ ಬೆಳಕು ಹೇರಳವಾಗಿ ಮನೆಯೊಳಗೆ ಬರುತ್ತಿತ್ತು. ನಾವು ಮಕ್ಕಳು ಹಜಾರದ ತುಂಬೆಲ್ಲಾ ಆಟವಾಡಿಕೊಂಡು ಓಡಾಡುತ್ತಿದ್ದೆವು. ಆಗೆಲ್ಲಾ ಮನೆಯಲ್ಲೇ ಮದುವೆ ಮಾಡೋ ಅಭ್ಯಾಸ ಇತ್ತು. ಛತ್ರಗಳು ತುಂಬಾ ಅನುಕೂಲಸ್ಥರಿಗೆ ಮಾತ್ರ. ನನಗೆ ನೆನಪಿರುವಂತೆ ಆಗ ಇದ್ದದ್ದು ಪೂರ್ಣಯ್ಯ ಚೌಲ್ಟ್ರಿ, ಬನುಮಯ್ಯ ಚೌಲ್ಟ್ರಿ ಹಾಗೂ ನಂಜರಾಜ ಬಹದ್ದೂರ್ ಚೌಲ್ಟ್ರಿ. ಆದರೆ ನಾವು ನಮ್ಮ ಮನೆಯಲ್ಲೇ ನನ್ನ ನಾಲ್ಕು ಸಹೋದರಿಯರ ಮದುವೆ ಮಾಡಿದ್ದೇವೆ. ಜನರು ಬಂದು ಸಾವಕಾಶದಿಂದ ಉಳಿದುಕೊಳ್ಳುವಷ್ಟು ಹಾಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡುವಷ್ಟು ದೊಡ್ಡದು ನಮ್ಮ ಮನೆ. ನನ್ನ ರಿಸೆಪ್ಶನ್ ಸಹ ಇದೇ ಹಜಾರದಲ್ಲಿ ಆದದ್ದು’ ಎನ್ನುತ್ತಾ? ಇಡೀ ಹಜಾರದಲ್ಲೊಮ್ಮೆ ಕಣ್ಣಾಡಿಸಿ ಕಳೆದ ಕಾಲದ ನೆನಪಿನೂರನ್ನು ನೋಡಿ ಬರುತ್ತಾರೆ ಕೃಷ್ಣಸ್ವಾಮಿ.
‘ಈ ಮನೆಯನ್ನು ರಿನೋವೇಟ್ ಮಾಡಿಬಿಡು. ಮೇಲಿನ ಅಂತಸ್ತನ್ನ ಸ್ವಲ್ಪ ಬದಲಾಯಿಸು. ಹಾಗೆ ಮಾಡು, ಹೀಗೆ ಮಾಡು, ಸ್ವಲ್ಪ ಮಾಡರ್ನೈಸ್ ಮಾಡು ಎಂದು ಎಷ್ಟೋ ಜನರು ಸಲಹೆ ಕೊಟ್ಟರು. ಆದರೆ ನನಗೆ ಮನೆಯ ಮೂಲ ಸ್ವರೂಪ ಮಾತ್ರವೇ ಪ್ರಿಯ. ನಮ್ಮಲ್ಲಿ ಇಂದಿಗೂ ಹಂಡೆ ಒಲೆ ಇದೆ. ಆಗಾಗ ಬಾವಿಯನ್ನೂ ಬಳಸ್ತೇವೆ. ಅಡುಗೆಮನೆಯಲ್ಲಿ ಹೆಂಚಿನ ತಾರಸಿ ಇದೆ. ಗೋಡೆಗಳೆಲ್ಲಾ ಗಟ್ಟಿ ಇವೆ. ಇಷ್ಟೆಲ್ಲಾ ಇದ್ದ ಮೇಲೂ ಸಖಾಸುಮ್ಮನೆ ಬದಲಾವಣೆ ಏಕೆ ಬೇಕು? ನಾನು ಹುಟ್ಟಿದ್ದು ಇದೇ ಮನೆಯಲ್ಲಿ. ಇದು ನನ್ನ ಬಾಲ್ಯವನ್ನು ಇನ್ನೂ ಜೀವಂತವಾಗಿರಿಸಿರುವ ಸ್ಥಳ. ಈ ಬಗ್ಗೆ ನನ್ನ ಹೆಂಡತಿ, ಮಕ್ಕಳಿಗೂ ಖುಷಿಯಿದೆ. ಆದ್ದರಿಂದ ಎಂದಿಗೂ ಈ ಮನೆಯನ್ನು ಆಧುನೀಕರಿಸಬೇಕೆಂದು ನಮಗ್ಯಾರಿಗೂ ಅನಿಸಿಲ್ಲ? ಎನ್ನುತ್ತಾ ತಮ್ಮ ಮನೆ ಬಗ್ಗೆ ತಮಗಿರುವ ವಾತ್ಸಲ್ಯವನ್ನು ಬಿಚ್ಚಿಡುತ್ತಾರೆ ಸಪ್ತ ಗಿರೀಶ್.
?ಈ ಮನೆಯ ಕಂಬಗಳನ್ನು ಸುತ್ತುತ್ತಾ, ಆಟವಾಡುತ್ತಾ ನಾವೆಲ್ಲರೂ ಬಾಲ್ಯ ಕಳೆದಿದ್ದೇವೆ. ಅಡುಗೆಮನೆಯಲ್ಲಿ ನಾವು ನೋಡಿದಂತೆ ಸೌದೆ ಒಲೆಯನ್ನೇ ಬಳಸುತ್ತಿದ್ದರು. ಸೌದೆ ಒಲೆ ಬಳಸುತ್ತಿದ್ದುದರಿಂದಲೇ ಛಾವಣಿಯನ್ನು ಅಷ್ಟು ಎತ್ತರಕ್ಕೆ ಇಟ್ಟಿದ್ದರು. ನಾನು ಅಥವಾ ಅಪ್ಪ ಹಂಡೆ ಒಲೆಯಲ್ಲಿ ನೀರು ಕಾಯಿಸುತ್ತಿದ್ದೆವು. ಬೆಳಕಿನ ಛಾವಣಿಯ ಕೆಳಗೆಲ್ಲಾ ಓಡಾಡುತ್ತಾ ದಿನ ಕಳೆಯುತ್ತಿದ್ದೆವು. ನಾವು ಚಿಕ್ಕವರಿದ್ದಾಗಲೂ ಈ ರಸ್ತೆಯೆಲ್ಲಾ ಖಾಲಿ-ಖಾಲಿ ಇರುತ್ತಿತ್ತು. ಅವೆಲ್ಲಾ ಎಂದಿಗೂ ಮಾಸದ ನೆನಪುಗಳು. ನನ್ನ ಹೆಂಡತಿ ಹಾಗೂ ಮಕ್ಕಳಿಗೂ ಈ ಮನೆಯೇ ಅಚ್ಚುಮೆಚ್ಚು. ಆದ್ದರಿಂದ ನಾನೂ ಖುಷಿಯಿಂದಿದ್ದೇನೆ. ಮೇಲಿನ ಮನೆಯಲ್ಲಿ ನನ್ನ ಅಕ್ಕ ವಾಸಿಸುತ್ತಿದ್ದಾಳೆ? ಎಂದು ಹಳೆಯ ನೆನಪುಗಳನ್ನು ತೆರೆದಿಡುತ್ತಾರೆ ಕೃಷ್ಣಸ್ವಾಮಿಯವರ ಮಗ ಸಪ್ತ.
ಈಗ ಈ ಮನೆಯಲ್ಲಿ ಕೃಷ್ಣಸ್ವಾಮಿಯವರು, ಅವರ ಮಗ ಸಪ್ತ ಗಿರೀಶ್ ಅವರ ತುಂಬು ಕುಟುಂಬ ವಾಸಿಸುತ್ತದೆ. ಸಪ್ತ ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರು, ಪರಿಸರಪ್ರಿಯರು. ಮುಂದೆ ಎಂದಾದರೂ ಮನೆಯನ್ನು ಮಾಡರ್ನೈಸ್ ಮಾಡಬಹುದಾ ಎಂಬ ಪ್ರಶ್ನೆಗೆ ನಗುತ್ತಲೇ, ?ಹಾಹಾ..ಇಲ್ಲ. ನನಗೆ ಎಂದಿಗೂ ಆ ಯೋಚನೆ ಇಲ್ಲ. ಎಷ್ಟೋ ಮಂದಿ ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ನಮ್ಮ ಮನೆಗೆ ಬಂದು ಮನೆಯನ್ನು ನೋಡಿಕೊಂಡು ಹೋಗುತ್ತಾರೆ. ಈ ಸಾಲಿನಲ್ಲಿರುವ, ಕಣ್ಮನಸೆಳೆಯುವ ಬಹಳಷ್ಟು ಪುರಾತನ ಮನೆಗಳಲ್ಲಿ ನಮ್ಮದೂ ಒಂದು. ಇಲ್ಲಿ ನನ್ನಪ್ಪನ ಪೀಳಿಗೆಯ ಹಾಗೂ ನನ್ನ ಪೀಳಿಗೆಯ ಬಾಲ್ಯದ ನೆನಪುಗಳಿವೆ. ಈ ಮನೆ ನೂರು ವರ್ಷಗಳಿಂದ ನಾಲ್ಕು ತಲೆಮಾರಿನ ಕಥೆಗೆ ಸಾಕ್ಷಿಯಾಗಿದೆ. ಇಷ್ಟೆಲ್ಲಾ ಅಮೂಲ್ಯ ಭಾವಗಳನ್ನು ಹೊತ್ತಿರುವ ಈ ಮನೆ ಕೇವಲ ಒಂದು ನಿರ್ಜೀವ ಮನೆ ಎಂದು ನನಗೆ ಎಂದೂ ಅನಿಸಿಲ್ಲ. ಈ ಮನೆಯೂ ನಮ್ಮ ಮನೆಯ ಒಂದು ಸದಸ್ಯ. ಇದನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ? ಎನ್ನುತ್ತಾ ತಾವು ಒರಗಿ ನಿಂತಿದ್ದ ಕಂಬವನ್ನೊಮ್ಮೆ ಮುಟ್ಟಿ, ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕಿ ಮಾತು ಮುಗಿಸಿದರು ಸಪ್ತ.
ಕೃಷ್ಣಸ್ವಾಮಿಯವರ ಕಣ್ಣಲ್ಲಿ ಹಳೆ ಮೈಸೂರು:
?ನಾನು ಮಹಾರಾಜ, ಯುವರಾಜ ಕಾಲೇಜುಗಳಲ್ಲಿ ಓದಿದ್ದೇನೆ. ಆಮೇಲೆ ಶಾರದಾ ವಿಲಾಸ ಕಾಲೇಜಲ್ಲಿ ಕಾನೂನು ವ್ಯಾಸಂಗ ಮಾಡಿದೆ. ಆಗೆಲ್ಲಾ ನನ್ನ ಬಳಿ ಇಂಗ್ಲೆಂಡ್ ಸೈಕಲ್ ಇತ್ತು. ಅದನ್ನು ತುಳಿದುಕೊಂಡೇ ಮಾಧವ ರಾವ್ ಸರ್ಕಲ್ ನಿಂದ (ಈಗಿನ ಅಗ್ರಹಾರ ವೃತ್ತ) ಕೋರ್ಟ್‌ವರೆಗೂ ಹೋಗುತ್ತಿದ್ದೆ. ಸ್ವಲ್ಪ ದಿನಗಳಾದ ಮೇಲೆ ಸೈಕಲ್ ನಡೆದುಕೊಂಡೇ ಹೋಗುತ್ತಿದೆ. ಆಗೆಲ್ಲಾ ರಸ್ತೆಗಳೇ ಇರಲಿಲ್ಲ. ಎಲ್ಲ ಖಾಲಿ ಖಾಲಿ. ಎಲ್ಲರೂ ನಡೆದುಕೊಂಡೇ ಓಡಾಡ್ತಿದ್ರು. ಎಲ್ಲೋ ಒಂದೆರಡು ಸೈಕಲ್‌ಗಳು ರಸ್ತೆಯಲ್ಲಿ ಕಂಡರೆ ಹೆಚ್ಚು. ವಾಣಿವಿಲಾಸ ರಸ್ತೆಯಂತೂ ಸಂಪೂರ್ಣವಾಗಿ ಮರಗಳಿಂದ ತುಂಬಿತ್ತು. ಈಗಲ್ಲೇ ಆ ವೈಭವ ಬರಲ್ಲ ಬಿಡಿ? ಎನ್ನುತ್ತಾ ಕೃಷ್ಣಸ್ವಾಮಿಯವರು ತಾವು ಕಂಡ ಹಳೆ ಮೈಸೂರಿನ ಚಿತ್ರಣವನ್ನ ರಸವತ್ತಾಗಿ ಬಿಚ್ಚಿಟ್ಟರು.
ಮನೆ ಮಾತ್ರವಲ್ಲ, ಮನೆಯೊಳಗಿನ ವಸ್ತುಗಳೂ ಗತಕಾಲದ್ದೇ!:
ಈ ಮನೆಯಲ್ಲಿರುವ ಬಹುಪಾಲು ಚೇರ್, ಟೇಬಲ್, ಕಪಾಟುಗಳೆಲ್ಲವೂ ಆಗಿನ ಕಾಲದ್ದೇ. ಎಲ್ಲವೂ ಆಕರ್ಷಕ ವಿನ್ಯಾಸಗಳನ್ನು ಹೊಂದಿವೆ. ನಾಲ್ಕು ಬಾಗಿಲುಗಳಿರುವ ಕಪಾಟೊಂದನ್ನು ತೋರಿಸುತ್ತಾ, ?ನಾವು ನಾಲ್ಕು ಜನ ಒಡಹುಟ್ಟಿದವರು ಒಬ್ಬೊಬ್ಬರು ಒಂದೊಂದು ಕಪಾಟಿನಲ್ಲಿ ನಮ್ಮ ಬುಕ್ಸ್ ಇಟ್ಟುಕೊಳ್ಳುತ್ತಿದ್ದೆವು. ಈ ಟೇಬಲ್ ಅನ್ನ ನಮ್ಮ ಅಪ್ಪ, ತಾತ ಕೆಲಸ ಮಾಡುವಾಗ ಉಪಯೋಗಿಸ್ತಿದ್ರಂತೆ. ಹೀಗೆ ಈ ಮನೆಯಲ್ಲಿರೋ ಒಂದೊಂದು ವಸ್ತುಗೂ ಅದರದ್ದೇ ಆದ ಕಥೆ, ಇತಿಹಾಸ ಇದೆ. ಆದ್ದರಿಂದ ಇನ್ನೂ ಎಲ್ಲವನ್ನೂ ಹಾಗೇ ಉಳಿಸಿಕೊಂಡಿದ್ದೇವೆ? ಎನ್ನುತ್ತಾರೆ ಸಪ್ತ.
ಮಂಡ್ಯ: ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವಂತೆ ಎಂದು ನಗರಸಭೆ ಅಧ್ಯಕ್ಷ ಎಂ ವಿ…
ವೆಲ್ಲಿಂಗ್ಟನ್: ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಪಿ ಏಕದಿನ ಕ್ರಿಕೆಟ್ ಟೂರ್ನಿಗೆ ನ್ಯೂಜಿಲೆಂಡ್‌ನ 15 ಸದಸ್ಯರ ತಂಡ ಪ್ರಕಟವಾಗಿದ್ದು,…
ಮಂಡ್ಯ : ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗಿಕರಣ ಮಾಡಲಾಗುತ್ತಿದೆ ಎಂಬ ಸುದ್ದಿಯು ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ಮಂಡ್ಯ ಹಾಗೂ ಕೃಷಿ ಸಚಿವ ಎನ್.…
ರಾಯಚೂರು: ಸಿಎಂ ಸಿದ್ದರಾಮಯ್ಯ ಅವರು, ಸಂವಿಧಾನವನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಸಚಿವ ಬೈರತಿ ಸುರೇಶ್…
ವಿಜಯನಗರ: ಹಸುಗಳ ಕೆಚ್ಚಲು ಕೊಯ್ದಿರುವ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಇಂದು…
ನವದೆಹಲಿ/ಮಧ್ಯ ಪ್ರದೇಶ: ಶೀಘ್ರದಲ್ಲಿಯೇ ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ನೂತನವಾಗಿ ಪಾಸ್‌ಪೋರ್ಟ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ…